ಡಾ.ಸುಪರ್ಣಾ ನೃತ್ಯಕ್ಷೇತ್ರದಲ್ಲಿ ಮನೆಮಾತು. ಆಕೆಯ ವೈಶಿಷ್ಟ್ಯ ಹಲವಾರು ಬಗೆ. ಭರತನಾಟ್ಯ ಹಾಗೂ ಕಥಕ್ ಶೈಲಿಯ ಉತ್ತಮ ಕಲಾವಿದೆ, ನೃತ್ಯಸಂಯೋಜಕಿ ಹಾಗೂ ನಾಟ್ಯಗುರು. ಮೂರು ದಶಕಗಳ ವಿಪುಲ ಅನುಭವ. ಸಾವಿರಾರು ಮಕ್ಕಳಿಗೆ ತರಬೇತಿ ನೀಡಿ ಉತ್ತಮ ನಾಟ್ಯಕಲಾವಿದರನ್ನಾಗಿ, ನೃತ್ಯಗುರುಗಳನ್ನಾಗಿ ತಯಾರು ಮಾಡಿದ ಖ್ಯಾತಿ. ಎಲ್ಲಕ್ಕಿಂತ ಹೆಚ್ಚಾಗಿ ಅಂಧರಿಗೆ, ಅವರಿಗೆ ಮನದಟ್ಟಾಗುವಂತೆ, ಭರತನಾಟ್ಯದ ಸಂಕೀರ್ಣ ಹಾಗೂ ಶಾಸ್ತ್ರೀಯವಾದ ಅಡವುಗಳು, ಹಸ್ತಚಲನೆ ,ಮುದ್ರೆಗಳು ಹಾಗೂ ಅಭಿನಯಗಳನ್ನು ಹೇಳಿಕೊಡುವುದು ಸಣ್ಣ ಮಾತೇನಲ್ಲ. ಇದೊಂದು ವಿನೂತನ ಪ್ರಯತ್ನ. ನಮ್ಮ ನಾಡಿನಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಕೂಡ ಅವರ ಪ್ರತಿಭಾ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿ, ಕಲಾರಸಿಕರ ಮೆಚ್ಚುಗೆ ಪಡೆದ ಅಗ್ಗಳಿಕೆ ಅವರದು.

ಚಿಕ್ಕಂದಿನಿಂದ ನಾಟ್ಯದ ಬಗ್ಗೆ ಒಲವುಳ್ಳ ಸುಪರ್ಣಾ ಆರರ ಎಳವೆಯಲ್ಲೇ ನೃತ್ಯ ಕಲಿಯಲು ಆರಂಭಿಸಿದರು. ಮಂಗಳೂರಿನಲ್ಲಿ ಪ್ರಸಿದ್ಧ ನಾಟ್ಯಗುರುಗಳಾಗಿದ್ದ ಜಯಲಕ್ಷ್ಮಿ ಆಳ್ವ ಮತ್ತು ರಾಮಕೃಷ್ಣ ಆಳ್ವ ಅವರಲ್ಲಿ ನೃತ್ಯಾಭ್ಯಾಸದ ಪ್ರಥಮಾರಂಭ. ಬಹುಶ್ರದ್ಧೆಯಿಂದ ಪರಿಶ್ರಮದಿಂದ ಸಾಧಿಸಿದ ವಿದ್ಯೆಯ ಫಲ ರಸಿಕರ ಮುಂದೆ ಅಭಿವ್ಯಕ್ತವಾದದ್ದು, `ರಂಗಪ್ರವೇಶ’ದ (೧೯೮೧) ಸಂದರ್ಭದಲ್ಲಿ. ಅಲ್ಲಿಂದ ನಿರಂತರ ಕಲಿಕೆಯ ಮುಂದುವರಿಕೆ. ಅನಂತರ ಬೆಂಗಳೂರಿಗೆ ಬಂದನಂತರ ಖ್ಯಾತ ನೃತ್ಯಗುರು ನರ್ಮದಾ ಅವರಲ್ಲಿ ಭರತನಾಟ್ಯದಲ್ಲಿ ಹೆಚ್ಚಿನ ನೃತ್ಯಾಭ್ಯಾಸ ಮತ್ತು ಕಥಕ್ ನೃತ್ಯಶೈಲಿಯ ದಿಗ್ಗಜರಾದ ಡಾ.ಮಾಯಾ ರಾವ್ ಮತ್ತು ಚಿತ್ರ ವೇಣುಗೋಪಾಲ್ ಬಳಿ `ಕಥಕ್’ ನೃತ್ಯ ಕಲಿಯಲು ತೊಡಗಿದರು. ಓದು ಮತ್ತು ನಾಟ್ಯಾಭ್ಯಾಸ ಜೊತೆಜೊತೆಯಲ್ಲಿ ಮುಂದುವರಿಯಿತು. ಎರಡರಲ್ಲೂ ಸಮಾನ ಆಸಕ್ತಿ. ವಾಣಿಜ್ಯ ವಿಷಯದಲ್ಲಿ ಪದವೀಧರೆ ಎನಿಸಿಕೊಂಡ ತರುವಾಯ ಬೆಂಗಳೂರಿನ `ನಾಟ್ಯ ಇನ್ಸ್ ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿ’ ಯಲ್ಲಿ ನೃತ್ಯಸಂಯೋಜನೆಯ ಬಗ್ಗೆ `ಡಿಪ್ಲೊಮಾ; ಪಡೆದುಕೊಂಡರು. ಇಷ್ಟಕ್ಕೇ ಸುಪರ್ಣಾ ತೃಪ್ತಿಪಟ್ಟುಕೊಳ್ಳಲಿಲ್ಲ ನೃತ್ಯದ ವಿಷಯದಲ್ಲಿ ಆಸಕ್ತಿ ಹೆಚ್ಚುತ್ತಲೇ ಹೋಯಿತು. ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಭರತನಾಟ್ಯದ ವಿಷಯದಲ್ಲಿ ಎಂ.ಎ. ಮತ್ತು ಎಂ.ಫಿಲ್ ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡರು. ಅನಂತರ ` `ಕರ್ನಾಟಕದ ನೃತ್ಯಕ್ಷೇತ್ರಕ್ಕೆ ದೇವದಾಸಿಯರ ಸಾಂಸ್ಕೃತಿಕ ಕೊಡುಗೆ’ ಎಂಬ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪಡೆದುಕೊಂಡ ಹೆಮ್ಮೆ ಅವರದು.
ಡಾ.ಸುಪರ್ಣಾ ಮುಂದೆ ನೃತ್ಯತಜ್ಞರಾದ ಹಿರಿಯ ಕಲಾವಿದೆ, ಗುರು ಡಾ.ಪದ್ಮಾ ಸುಬ್ರಹ್ಮಣ್ಯಂ, ಟಿ.ಕೆ.ಮಹಾಲಿಂಗಂ ಪಿಳ್ಳೈ. ಸೋನಾರ್ ಚಂದ್ ಮತ್ತು ಶಶಿಧರ ಆಚಾರ್ಯ ಅವರಲ್ಲಿ ನೃತ್ಯ ಕೌಶಲ್ಯಗಳ ಬಗ್ಗೆ ತರಬೇತಿ ಪಡೆದುಕೊಂಡರಲ್ಲದೆ, ಹಲವಾರು ಜಾನಪದ ಸಾಂಪ್ರದಾಯಕ ನೃತ್ಯಗಳು ಮತ್ತು ಮಾರ್ಷಿಯಲ್ ಆರ್ಟ್ಸ್ ನ ಬಗ್ಗೆಯೂ ವಿಶೇಷ ತರಪೇತು ಪಡೆದದ್ದು ಇವರ ಹೆಗ್ಗಳಿಕೆ. ಬೆಂಗಳೂರು ವಿ.ವಿ. ಮತ್ತು ನಾಟ್ಯಾ ಕಾಲೇಜ್ ಆಫ್ ಕಥಕ್ ಮತ್ತು ಕೊರಿಯಾಗ್ರಫಿ ಶಿಕ್ಷಣಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸುಪರ್ಣಾ ಅವರೆಲ್ಲ ಸಾಧನೆಗಳಿಗೆ ಬೆಂಬಲವಾಗಿ ನಿಂತವರು ಅವರ ಪತಿ ನೃತ್ಯ ಕಲಾವಿದ, ಪ್ರಸಿದ್ಧ ಬೆಳಕು-ರಂಗತಜ್ಞ, ಉತ್ತಮ ಸಂಘಟಕರೆಂದೇ ಹೆಸರು ಪಡೆದಿರುವ ಸಾಯಿ ವೆಂಕಟೇಶ್. ಅವರದೇ ಆದ `ಸಾಯಿ ಆರ್ಟ್ ಇಂಟರ್ನ್ಯಾಷನಲ್’ ನೃತ್ಯಸಂಸ್ಥೆಯ ಮೂಲಕ ಸುಪರ್ಣಾ, ಅಸಂಖ್ಯಾತ ಮಕ್ಕಳಿಗೆ ಕಳೆದ ಮೂರು ದಶಕಗಳಿಗೂ ಮೀರಿದ ಅವಧಿಯಿಂದ ನಾಟ್ಯಶಿಕ್ಷಣ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಭಾರತ ಹಾಗೂ ವಿದೇಶಗಳಲ್ಲಿ ಅನೇಕ ನೃತ್ಯ ಕಾರ್ಯಾಗಾರಗಳನ್ನು,ಕಲಿಕಾ ಕೌಶಲದ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನಡೆಸಿದ್ದಾರೆ.
ಡಾ.ಸುಪರ್ಣಾ, ಪ್ರಸ್ತುತ, ಕರ್ನಾಟಕ ಸೆಕೆಂಡರಿ ಎಜುಕೇಶನ್ ಬೋರ್ಡಿನ ಕಥಕ್ ನೃತ್ಯ ಟೆಕ್ಸ್ಟ್ ಬುಕ್ ರಚನಾ ಸಮಿತಿಯ ಸದಸ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಪತಿಯೊಡನೆ ಸೇರಿ ಕಳೆದ ಏಳುವರ್ಷಗಳಿಂದ ಸತತವಾಗಿ ಪ್ರತಿತಿಂಗಳ ಮೊದಲದಿನದಂದು `ಸಾಯಿ ನೃತ್ಯೋತ್ಸವ’ ಆಚರಿಸಿಕೊಂಡು ಬರುತ್ತಿದ್ದು ಇದೀಗ “ಶತಮಾನೋತ್ಸವ’’ವನ್ನು ಆಚರಿಸುತ್ತಿರುವುದು ಸ್ತುತ್ಯಾರ್ಹ ವಿಷಯ. ವಿಶ್ವಾದ್ಯಂತ ಎಲ್ಲ ಕಲಾವಿದರಿಗೂ ಈ ವೇದಿಕೆಗೆ ಸ್ವಾಗತ. ಪ್ರತಿತಿಂಗಳೂ ತಪ್ಪದೆ ನಡೆಸಿಕೊಂಡು ಬರುತ್ತಿರುವ ಈ ಉತ್ಸವದಲ್ಲಿ ಸಾವಿರಾರು ನೃತ್ಯಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುತ್ತ, ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ `ಸಾಯಿ ನೃತ್ಯೋತ್ಸವ’ ದ ಮೂಲಕ ಗಣನೀಯ ಕೊಡುಗೆ ನೀಡುತ್ತ ಬಂದಿರುವುದು ಅನುಕರಣೀಯ.
ಇದರೊಡನೆ ಸುಪರ್ಣಾ, ಅನೇಕ ಬಾರಿ ನೇಪಾಳ ,ಅಮೇರಿಕಾ, ಇಂಗ್ಲೆಂಡ್, ಮುಂತಾದ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ದಶಾವತಾರ,ವಿವೇಕ, ಮಹಾಶಕ್ತಿ, ಅಷ್ಟರತ್ನ,ಸಪ್ತ ತಾಂಡವ ಮುಂತಾದ ಪ್ರಸಿದ್ಧ ನಾಟ್ಯರೂಪಕಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ತಾಂತ್ರಿಕ ನೈಪುಣ್ಯತೆ ಮತ್ತು ಸುಂದರ ಅಭಿನಯಕ್ಕೆ ಹೆಸರಾಗಿರುವ ಇವರು, ನೂರಾರು ಪ್ರಶಸ್ತಿ, ಗೌರವಗಳನ್ನು ಪಡೆದಿದ್ದರೂ ಇನ್ನೂ ತಾವು ಕಲಿಯುವುದು, ಸಾಧಿಸುವುದು ಬಹಳವಿದೆ ಎನ್ನುವ ವಿನೀತಭಾವವನ್ನು ವ್ಯಕ್ತಪಡಿಸುತ್ತಾರೆ.
*************************