Image default
Dance Reviews

ನಾಟಕೀಯ ಸೆಳೆಮಿಂಚಿನ ತೆನಾಲಿಯ ರಮ್ಯಚಿತ್ರಣ

ಸೃಜನಾತ್ಮಕ ದೃಷ್ಟಿಯುಳ್ಳವರಿಗೆ ಸದಾ ಏನಾದರೊಂದು ಹೊಸಚಿಂತನೆ ಹೊಳೆಯುತ್ತಲೇ ಇರುತ್ತದೆ. ಆ ದಿಸೆಯ ಆಲೋಚನೆ  ಹೊಸಪ್ರಯೋಗಕ್ಕೆ ದಾರಿಮಾಡಿಕೊಡುತ್ತದೆ. ಅದು ಆಗಿದ್ದು ಹಾಗೆಯೇ. ಖ್ಯಾತ ‘’ಸಾಧನ ಸಂಗಮ’’ ನೃತ್ಯಶಾಲೆಯ ಸಾರಥ್ಯ ವಹಿಸಿಕೊಂಡಿರುವ ಹಿರಿಯ ನಾಟ್ಯಗುರು ಜ್ಯೋತಿ ಪಟ್ಟಾಭಿರಾಮ್ ಅವರದು ಸದಾ ಹೊಸಪ್ರಯೋಗಗಳಿಗೆ ತುಡಿಯುವ ಮನಸ್ಸು. ಹೀಗೆ ಸುಂದರವಾಗಿ ರೂಹುತಳೆದದ್ದು ತೆನಾಲಿ ರಾಮಕೃಷ್ಣನ ಜೀವನದ ಹಲವು ನಗೆಪ್ರಸಂಗಗಳನ್ನು ಆಧರಿಸಿ ತಯಾರಾದ ‘’ ತೆನಾಲಿ’’ ಏಕವ್ಯಕ್ತಿ ನೃತ್ಯಪ್ರದರ್ಶನ. ಕಥಾಪ್ರಧಾನವಾದ ವಸ್ತುವನ್ನು ನೃತ್ಯಮಾಧ್ಯಮಕ್ಕೆ ಅಳವಡಿಸುವುದು ನಿಜಕ್ಕೂ ಕಷ್ಟಸಾಧ್ಯವೇ.

ಇತ್ತೀಚಿಗೆ ಭಾರತೀಯ ವಿದ್ಯಾಭವನದಲ್ಲಿ ಪ್ರಸ್ತುತವಾದ ‘ತೆನಾಲಿ’, ಜ್ಯೋತಿಯವರ ಹಿರಿಯಶಿಷ್ಯೆ ರಂಜನಾ ರಘು ಒಡೆಯರ್ ಅವರ ಪರಿಣಾಮಕಾರಿ ಅಭಿನಯದಿಂದ ಯಶಸ್ವಿಯಾಗಿ ಸಾಕ್ಷಾತ್ಕಾರಗೊಂಡು, ನೋಡುಗರ ಮೆಚ್ಚುಗೆ ಗಳಿಸಿತು. ನೃತ್ಯನಾಟಕವನ್ನು ರಚಿಸಿದ ಎಸ್. ಷಡಕ್ಷರಿ, ಸ್ವಾರಸ್ಯಕರವಾಗಿ ಸಾಗಿದ ಕಥಾ ಚಿತ್ರಣದೊಂದಿಗೆ ಆಸಕ್ತಿ ಕೆರಳಿಸುವಂತೆ ಪ್ರಮುಖ ಸನ್ನಿವೇಶಗಳನ್ನು ಹೆಣೆದು ತೆನಾಲಿಯ ಸಮಗ್ರ ವ್ಯಕ್ತಿತ್ವವನ್ನು ಚೆನ್ನಾಗಿ ಕಟ್ಟಿಕೊಟ್ಟರು.

ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಅಷ್ಟದಿಗ್ಗಜರಲ್ಲಿ ಒಬ್ಬನಾಗಿದ್ದ ಮಹಾ ಬುದ್ಧಿವಂತ ಕವಿ-ಚಿಂತಕ ತೆನಾಲಿರಾಮ. ಬುದ್ಧಿಮತ್ತೆಗೆ ಇನ್ನೊಂದು ಹೆಸರಾದ ಇವನ ಸಮಸ್ಯಾಪೂರ್ಣ ಪ್ರಸಂಗಗಳು ಸ್ವಾರಸ್ಯಕರ ಅಷ್ಟೇ ಹಾಸ್ಯಪೂರ್ಣವೂ ಹೌದು. ಪ್ರಸ್ತುತಿಗೆ ಪೂರಕವಾದ ಪರಿಕರಗಳು, ರಂಗಸಜ್ಜಿಕೆ ಗಮನ ಸೆಳೆದಿದ್ದವು. ಹಿನ್ನಲೆಯ ಧ್ವನಿ ಪರಿಣಾಮಗಳನ್ನು ತಮ್ಮ ವಾದನಗಳಿಂದ ಉತ್ತಮಿಕೆಯಲ್ಲಿ ನೀಡಿ ಹೆಚ್ಚಿನ ಅನುಭವಗಮ್ಯವಾಗಿಸಿದ ಮಹೇಶಸ್ವಾಮಿ (ಕೊಳಲು), ಡಿ.ವಿ.ಪ್ರಸನ್ನಕುಮಾರ್ ( ರಿದಂ ಪ್ಯಾಡ್, ಜತಿಗಳ ನಿರೂಪಣೆ), ಗಾಯನ -ರೋಹಿತ್ ಭಟ್ ಉಪ್ಪೂರ್, ಜನಾರ್ಧನ ರಾವ್ ( ಮೃದಂಗ) ಮತ್ತು ನಟುವಾಂಗ-ಸಾಧನಶ್ರೀ ಕೂಡಿದ ಹಿಮ್ಮೇಳ ಸೊಗಸಾಗಿತ್ತು. ಸಂಗೀತ ಸಂಯೋಜನೆ- ಬಾಲಸುಬ್ರಹ್ಮಣ್ಯ ಶರ್ಮ.

ತೆನಾಲಿಯ ಪಾತ್ರದಲ್ಲಿ ರಂಜನಾ ಪರಕಾಯ ಪ್ರವೇಶ ಮಾಡಿ ಹದವರಿತು ಅಭಿನಯಿಸಿದಳು. ಭರತವರ್ಷದ ದಕ್ಷಿಣಭಾಗದಲ್ಲಿ ಸುಭಿಕ್ಷೆಯಿಂದ ರಾಜ್ಯಭಾರ ಮಾಡುತ್ತಿದ್ದ ಶ್ರೀ ಕೃಷ್ಣದೇವರಾಯನ ಚರಿತೆಯನ್ನು ರಂಜನಾ ತನ್ನ ನೃತ್ಯನೈಪುಣ್ಯದಿಂದ ಚಿತ್ರವತ್ತಾಗಿ ನಿರೂಪಿಸಿದಳು.

ಇಂಥ ಸಕಲಕಲಾವಲ್ಲಭನಿಗೆ ಪರಾಕು ಹೇಳುತ್ತ ಉಲ್ಲಾಸದಿಂದ ಕಥಾರಂಭ ಮಾಡಿದ ಕಲಾವಿದೆ, ತೆನಾಲಿಯಲ್ಲಿ ರಾಮಕೃಷ್ಣನ ಜನನ, ಬಾಲ್ಯವನ್ನು ತನ್ನ ವಿಶಿಷ್ಟ ಅಭಿನಯ, ಕುಣಿತ, ಆಂಗಿಕಾಭಿನಯದಿಂದ ಮನನೀಯವಾಗಿ ಕಟ್ಟಿಕೊಟ್ಟಳು.

ಅಭಿನಯಕ್ಕೆ ಕಳೆಗಟ್ಟುವ ಆಕೆಯ ಕಿಲಾಡಿ ನಗೆ, ತುಂಟ ನೋಟ, ಹಾರು ಹೆಜ್ಜೆಗಳ ಉಲ್ಲಸಿತ ಭಂಗಿಗಳು ಮನಸೆಳೆದವು. ಪ್ರತಿ ಹೆಜ್ಜೆಗೂ ಹಾರುವ ತೆನಾಲಿಯ ಪಿಳ್ಳುಜುಟ್ಟು, ಹಣೆಯಲ್ಲಿನ ಉದ್ದನೆಯ ನಾಮ, ಕಸೆಯ ಅಂಗಿ ಉಡುಪು-ವೇಷಭೂಷಣಗಳು ಪಾತ್ರವನ್ನು ಕಳೆಗಟ್ಟಿಸಿದವು.

ಹಾಸ್ಯಪ್ರಜ್ಞೆಯ ಬುದ್ಧಿವಂತ, ಚತುರಕವಿಯ ಪ್ರತಿಭಾ ಕೌಶಲ್ಯವನ್ನು ಮೆಚ್ಚಿ ರಾಯ ಅವನನ್ನು ಆಸ್ಥಾನಕವಿಯಾಗಿ ನೇಮಕ ಮಾಡಿಕೊಂಡ ಸನ್ನಿವೇಶ ಹಾಗೂ ಅವನ ಸಮಯಸ್ಫೂರ್ತಿಯ ಕೆಲ ನಿದರ್ಶನಗಳನ್ನು ರಂಜನಾ ಅಚ್ಚುಕಟ್ಟಾಗಿ ಕಣ್ಮುಂದೆ ನಿರ್ಮಿಸಿದಳು.

ಪಾದಭೇದಗಳ ವಿವಿಧ ವಿನ್ಯಾಸದ ಹೆಜ್ಜೆಗಳು, ಮೋಜಿನ ಲಯದ ಜತಿಗಳು, ನರ್ತನ, ಬಾಗು-ಬಳುಕುಗಳು, ಹಸನ್ಮುಖ ಒಟ್ಟಾರೆ ಪರಿಣಾಮವನ್ನು ಹೆಚ್ಚಿಸಿದವು. ಜನಿವಾರ ನೀವಿಕೊಂಡು, ಚೇಷ್ಟೆಯ ನಗು ಚೆಲ್ಲುತ್ತ ಪಲ್ಲವಿಯಂತೆ ವೇದಿಕೆಯ ತುಂಬಾ ಪುನರಾವರ್ತಿಸುವ ವಿದೂಷಕ ಕುಣಿತ, ನಗೆಯ ಹೊನಲನ್ನೇ ಹರಿಸಿದವು.

ಮುಗ್ಧಮುಖದ ಉಂಡಾಂಡಿ ಗುಂಡ, ಗೋಲಿಯಾಟವಾಡುತ್ತಾ ನಿರಾಳವಾಗಿದ್ದವನ ಬಾಳಲ್ಲಿ ಎದುರಾದ ಕಾಳಿಯ ವರಪ್ರಸಾದದ ಘಟನೆ ಸೊಗಸಾಗಿ ಮೂಡಿಬಂತು. ಗಂಭೀರವಾಗಿ ಅವನಿಗೆ ವರಕೊಡಲು ಬಂದ ಕಾಳಿಯನ್ನು ಛೇಡಿಸುವ, ವಿನೋದದ ಲಹರಿ ಹರಿಸುವ ಘಟನೆಯನ್ನು ಕಲಾವಿದೆ ಸಮರ್ಥವಾಗಿ ಅಭಿವ್ಯಕ್ತಿಸಿದಳು. ಕಳ್ಳತನ ಮಾಡಲು ಬಂದ ಅವನ ಮನೆಗೆ ಬಂದ ಕಳ್ಳರನ್ನು ದಾರಿತಪ್ಪಿಸಿದ ಉಪಾಯ, ಬಾವಿಗೆ ಒಡವೆಗಳ ಪೆಟ್ಟಿಗೆಯನ್ನು ಹಾಕಿದಂತೆ ಯಾಮಾರಿಸಿ, ಅವರಿಂದ ತೋಟಕ್ಕೆ ನೀರು ಹಾಯಿಸಿಕೊಂಡು ಗೆಲುವಿನ ನಗೆ ನಕ್ಕ ತೆನಾಲಿಯ ಮೇಧಾಶಕ್ತಿಯ ಚಿತ್ರಣಗಳು ಆಕರ್ಷಕವಾಗಿ ನಿರೂಪಿತವಾಯಿತು. ಒಟ್ಟಾರೆ ಮನರಂಜನಾತ್ಮಕವಾಗಿ ಮೂಡಿಬಂದ ತೆನಾಲಿಯ ಏಕವ್ಯಕ್ತಿ ನೃತ್ಯನಾಟಕ ಎಲ್ಲೂ ಯಾಂತ್ರಿಕತೆಯನ್ನು ಜಿನುಗಿಸದೆ ಸ್ವಾರಸ್ಯಕರವಾಗಿ  ಆನಂದವನ್ನು ನೀಡುವಲ್ಲಿ ಯಶಸ್ವಿಯಾಯಿತು.

Related posts

ಶಾಸ್ತ್ರೀಯ ಚೌಕಟ್ಟಿನ ಅಚ್ಚುಕಟ್ಟಾದ ಲೋಹಿತಾ ನರ್ತನ

YK Sandhya Sharma

ಮನಸೂರೆಗೊಂಡ ‘ಸ್ಪೇಸ್’ ಕಥಕ್ ನೃತ್ಯಾವಳಿ

YK Sandhya Sharma

ನಾಟ್ಯ-ಯೋಗ ಚತುರೆ ನವ್ಯಾ ದೇಸಾಯಿ

YK Sandhya Sharma

2 comments

Ranjana Nagaraja September 20, 2020 at 4:55 pm

Wonderful Article ma’am. Thank you for supporting all the young artistes through your writings.

Reply
YK Sandhya Sharma September 20, 2020 at 7:23 pm

Thank you very much for your affectionate comment. You are a talented young dance artist. you have bright future. God bless you.

Reply

Leave a Comment

This site uses Akismet to reduce spam. Learn how your comment data is processed.