Image default
Short Stories

ಕನಸೆಂಬ ಹೆಗಲು…

 ಅತ್ತೆಯವರು ನರಳಿದ ಸದ್ದು ಕೇಳಿ ಶಾರ್ವರಿ ಗಡಿಬಡಿಸೆದ್ದು, ಕೈಲಿದ್ದ ಪುಸ್ತಕವನ್ನು ಮೇಜಿನ ಮೇಲೊಗೆದು ರೂಮಿನತ್ತ ಧಡಕ್ಕನೆ ಧಾವಿಸಿದ್ದಳು. ಸೀತಮ್ಮ ಕ್ಷೀಣದನಿಯಲ್ಲಿ ನೀರು ಎಂದಂತಾಯಿತು . ಪಕ್ಕದಲ್ಲಿಟ್ಟಿದ್ದ ತಂಬಿಗೆಯಿಂದ ಒಳಲೆಯಂಥ ಪುಟ್ಟಲೋಟಕ್ಕೆ ನೀರು ಬಗ್ಗಿಸಿ ಅವರ ತಲೆಯನ್ನು ಕೊಂಚ ಎತ್ತಿಹಿಡಿದು ಮೆಲ್ಲಗೆ ನೀರನ್ನು ಕುಡಿಸಿದಳು ಶಾರ್ವರಿ. ಆಕೆಯ ಕಟವಾಯಿಯಿಂದ ನೀರಿನ ತೊಟ್ಟುಗಳು ಹೊರಗೆ ಜಾರಿದರೂ ಸ್ವಲ್ಪ ಗುಟುಕರಿಸಿದರು.   

ಆಕೆಯ ಪಸೆಯಾರಿದ ಕಣ್ಣುಗಳಲ್ಲಿ ಕೃತಜ್ಞತೆ ಕೆನೆಗಟ್ಟಿತ್ತು.

 ‘ಯಾವ ಜನ್ಮದ ಪುಣ್ಯವೋ, ನೀನು ನನ್ನ ಮಗಳೇ ಆಗಿದ್ದೀ’ -ಎಂದು ಸದಾ ಮಮತೆಯ ಸೆಲೆಯಾಗಿ ಕಕ್ಕುಲತೆಯಿಂದ ಉಸುರುತ್ತಿದ್ದ ಆಕೆ, ಇಂದು ಮಾತನಾಡಲಾಗದಿದ್ದರೂ ಅವರ ಮುಖಭಾವ ಅದೇ ಮಾತುಗಳನ್ನು ಅನುರಣಿಸುತ್ತಿತ್ತು. ಅದನ್ನು ಚೆನ್ನಾಗಿ ಗ್ರಹಿಸಿದ್ದ ಶಾರ್ವರಿ, ಮೌನವಾಗಿ ಆಕೆಯ ಮೇಲುಹೊದಿಕೆಯನ್ನು ಸರಿಪಡಿಸಿ ಅಲ್ಲಿಂದ ಮೆಲ್ಲನೆ ಹೊರಸರಿದಳು.

ಮನಸ್ಸು ಗುಬ್ಬಳಿಸುತ್ತಿತ್ತು. ಬಗೆ ಹರಿಯದ ಚಿಂತೆಗಳು ಹೊಸಕುತ್ತಿದ್ದವು. ತಾನು ಹೀಗೆ ಎಷ್ಟು ದಿನಗಳು ಎಂದು ಆಫೀಸಿಗೆ ರಜ ಹಾಕಲು ಸಾಧ್ಯ?…ನಾಳೆಯಿಂದ ಸಂಬಳರಹಿತ ರಜೆ… ಅನಿವಾರ್ಯ…. ಅದಕ್ಕೆ ಎಷ್ಟು ಸಬೂಬುಗಳನ್ನು ಹೆಣೆಯಬೇಕೆಂದು ಅವಳಿಗೆ ಗೊತ್ತು. ಮೇಲಧಿಕಾರಿಯ ಮುಂದೆ ಹಿಡಿಯಾಗಿ ನಿಂತು ಅಂಗಲಾಚುವ ಹಿಂಸೆ-ಸಂಕಟ ಅವಳಿಗಷ್ಟೇ ಗೊತ್ತು.

‘ನಿಮ್ಮ ಸಮಸ್ಯೆಗಳು ಹತ್ತಲ್ಲ, ಹರಿಯಲ್ಲ….ಬೇರೇನಾದರೂ ಏರ್ಪಾಟು ಮಾಡಿ ಬನ್ನಿ, ರಾಶಿ ಕೆಲಸ ಪೆಂಡಿಂಗ್ ಇದೆ’- ಎಂದು ಕೆಂಡನೋಟ ಎರಚುವ ಬಾಸ್ ನ ಸಿಗಿನೋಟ ತಾಳಲಾರದೆ ತಾನು ನಿಂತಲ್ಲೇ ಹಾಗೇ ಆವಿಯಾಗಿ ಹೋಗಬಾರದೇ’-ಎಂದು ಅವಳಿಗೆ ತನ್ನ ಮೇಲೆಯೇ ಹೇಸಿಗೆ ಉಂಟಾಗುತ್ತಿತ್ತು. ಪಾಪ ಅವರೂ ಎಷ್ಟೂಂತ ಸಹಿಸಿಯಾರು…ವರ್ಷಗಳಿಂದ ಇದೇ ಕಥೆ…ಅತ್ತೆಯನ್ನು ನೋಡಿಕೊಳ್ಳಲು ಪ್ರತ್ಯೇಕವಾಗಿ ಕೇರ್ ಟೇಕರ್ ಅನ್ನು ಇಡುವಷ್ಟು ಧಾರಾಳ ಹಣವಿರಲಿಲ್ಲ. ಹಾಗೂ ಎಜೆನ್ಸಿಯವರನ್ನು ಕೇಳಿದಾಗ, ನೋಡಿಕೊಳ್ಳಲು ಬರುವವರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಸಂಬಳದ ಜೊತೆ ಹೊತ್ತು ಹೊತ್ತಿಗೆ ಊಟ-ತಿಂಡಿ ಸಕಲವೂ ಕೊಡಲೇಬೇಕೆಂಬ ಷರತ್ತು ಏಜೆನ್ಸಿ ಕಡೆಯಿಂದ ಬಂದ ಕಾರಣ ಶಾರ್ವರಿ ಅದರ ಆಸೆಯನ್ನು ಬಿಟ್ಟಿದ್ದಳು.

ಬೆಳಗ್ಗೆ ನಾಲ್ಕು ಗಂಟೆಗೆಲ್ಲ  ಎದ್ದು, ಮನೆಗೆಲಸ ನಿಭಾಯಿಸಿ, ತಿಂಡಿ-ಅಡುಗೆ ಮಾಡಿಟ್ಟು, ಅತ್ತೆಗೆ ಸ್ಪಾಂಜ್ ಬಾತ್ ಕೊಟ್ಟು, ಏನಾದರೂ ತಿನ್ನಿಸಿ ಮನೆ ಬಿಡುವಷ್ಟರಲ್ಲಿ ಒಂಭತ್ತು ದಾಟಿರುತ್ತಿತ್ತು. ಅಷ್ಟರಲ್ಲಿ ಮಗಳು ತನ್ವಿಯ ಜಡೆ ಹೆಣೆದು, ಯೂನಿಫಾರ್ಮ್ ಇತ್ಯಾದಿಗಳನ್ನು ಗಮನಿಸಿ ಶಾಲೆಗೆ ರೆಡಿ ಮಾಡಿ, ತಿಂಡಿಯನ್ನು ಡಬ್ಬಿಗೆ ಹಾಕಿ ಕಳುಹಿಸುತ್ತಿದ್ದ ಹಾಗೇ, ಹೊರಗೆ ವರಾಂಡದಲ್ಲಿ ಸದಾ ಪೇಪರ್ ನೊಳಗೆ ಮುಖ ಹೂತು ಕುಳಿತಿರುತ್ತಿದ್ದ ಗಂಡನ ಮುಂದೆ ಹಬೆಯಾಡುವ ಕಾಫಿಯ ಲೋಟವನ್ನು ಟಣ್ಣೆಂದು ಸದ್ದಾಗುವಂತೆ ಇಟ್ಟು, ಅವನಿಗೆ ತಿಂಡಿಯನ್ನು ಡೈನಿಂಗ್ ಟೇಬಲ್ ಮೇಲೆ ತಟ್ಟೆಯಲ್ಲಿ ಹಾಕಿ ಮುಚ್ಚಿಟ್ಟು, ಸರಬರ ಚಪ್ಪಲಿ ಮೆಟ್ಟಿ ಬಸ್ ಸ್ಟಾಪಿಗೆ ಧಾವಿಸಿ ಬರುವಷ್ಟರಲ್ಲಿ ಏದುಸಿರು, ಎದೆಯ ಲಬ್ ಡಬ್ ಕಿವಿಗೆ ಕೇಳುವಷ್ಟು ಸಶಬ್ದವಾಗಿರುತ್ತಿತ್ತು. ಕಡೆಯ ಮೆಟ್ಟಿಲವರೆಗೂ ತೂಗಾಡುತ್ತಿದ್ದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ಹತ್ತಬೇಕೆನ್ನುವ ಆತುರದಲ್ಲಿ ‘ಸಾಕಪ್ಪ ಈ ಜನ್ಮ’ ಎನಿಸಿಬಿಡುತ್ತಿತ್ತವಳಿಗೆ.

ಶಾರ್ವರಿಯ ಕಣ್ಣು ಅಪ್ರಯತ್ನವಾಗಿ ಗೋಡೆ ಗಡಿಯಾರದತ್ತ ಹೊರಳಿತು. ಗಂಟೆ ಮೂರು ದಾಟಿತ್ತು. ಹೊರಗಡೆ ವ್ಯಾನ್ ಶಬ್ದ ಕೇಳದೆ ಅವಳ ಹೃದಯ ಹೊಡೆದುಕೊಳ್ಳತೊಡಗಿತು. ಇಷ್ಟುಹೊತ್ತಿಗೆ ದಿನಾ ಶಾಲೆಯಿಂದ ಬರುತ್ತಿದ್ದ ಹದಿಮೂರರ ಮಗಳು ಯೂನಿಫಾರ್ಮ್ ಬಿಚ್ಚುತ್ತ, ಅಮ್ಮಾ ಎಂದು ರಾಗ ಎಳೆಯಬೇಕಿತ್ತು. ಆದರೆ  ಇಂದು, ನಾಲ್ಕಾಗುತ್ತ ಬಂತು. ಹತ್ತು ಸಲ ಮುಂಬಾಗಿಲಿಗೂ ಗೇಟಿಗೂ ಎಡತಾಕಿದಳು. ಇನ್ನೂ ಮೈನರೆದು ಒಂದುತಿಂಗಳಾಗಿದೆ. ಹಸೀ ಮೈಯಿ. ಹಾಗಂತ ಮುಚ್ಚಟೆ ಮಾಡಿಸಿಕೊಳ್ಳುವ ಹುಡುಗಿಯಲ್ಲ. ಮೂರನೆಯ ದಿನಕ್ಕೇ ಶಾಲೆಗೆ ಜಿಗಿದವಳು. ಶಾಸ್ತ್ರಗಳಿರಲಿ, ಅಂಟಿನ ಉಂಡೆ, ಕೊಬ್ಬರಿ-ತುಪ್ಪ ಅಂತ ಮೈ ಗಟ್ಟಿ ಮಾಡಲೂ ಅವಕಾಶ ಕೊಟ್ಟವಳಲ್ಲ. ಇತ್ತ ಮಗಳನ್ನು ಕಾಯಲೋ, ಅತ್ತ ಅತ್ತೆಯನೂ ನೋಡಿಕೊಳ್ಳಲೋ ಎಂಬ ಇಬ್ಬಂದಿ ಸಂಕಟ ಶಾರ್ವರಿಯ  ತಲೆ ತಿನ್ನುತ್ತಿತ್ತು. ಎರಡೂ ನೆಪದಲ್ಲಿ ತಿಂಗಳಿಂದ ಹಾಕಿದ್ದ ರಜೆಗಳೆಲ್ಲ ಅದ್ಹೇಗೆ ಕರಗಿಹೋದವೋ ಗೊತ್ತಾಗಲೇ ಇಲ್ಲ!!..

ಇದರ ಮಧ್ಯೆ ತನ್ನನ್ನು ಕಾಡುತ್ತಿದ್ದ ತನ್ನ ಸ್ವಂತದ ನೋವುಗಳು ಗಪ್ ಚಿಪ್ಪಾಗಿ ಬಿಟ್ಟಿದ್ದವು. ಸೂರ್ಯನ ಬೆಳಗಿನ ಮೊದಲ ಕಿರಣದಿಂದ ಮೈಮುರಿತ ದುಡಿತ, ಕಛೇರಿಯ ಕೆಲಸದ ಹೊರೆ, ಇದರ ಮಧ್ಯೆ ಮನೆಗೆ ಬೇಕಾದ ದಿನಸಿ, ತರಕಾರಿ ಇತ್ಯಾದಿ ಪದಾರ್ಥಗಳ ಜೊತೆ ಅತ್ತೆಯ ಔಷಧಿಗಳ ಖರೀದಿ, ನೀರು-ವಿದ್ಯುತ್ ಬಿಲ್ ಗಳ ಪಾವತಿಗಾಗಿ ನಿಲ್ಲದ ಓಡಾಟ ಬೇರೆ ಅವಳನ್ನು ಹೈರಾಣಾಗಿಸಿತ್ತು.

ಚಿಂತೆಯ ಮೊತ್ತವಾಗಿ ಪ್ರತಿಮೆಯಂತೆ ಅಲುಗಾಡದೆ ಕುಳಿತಿದ್ದ ಶಾರ್ವರಿ, ಹೊರಗೆ ಶಾಲಾ ವ್ಯಾನಿನ ಶಬ್ದಕ್ಕೆ ಬೆಚ್ಚಿ ಬಿದ್ದೆದ್ದು, ಬಾಗಿಲತ್ತ ಓಡಿದಳು. ಮಗಳ ಮುಖವನ್ನು ಕಾಣುವ ತನಕ ಗಾಬರಿ ಇಡುಗಿದ ಮೊಗ.

 ‘ಛೆ… ಈ ಹೆಣ್ಣುಮಕ್ಕಳು ಯಾಕಾದರೂ ಹುಟ್ಟುತ್ತಾರೋ, ಜವಾಬ್ದಾರಿ’ ಎಂದು ಮನದೊಳಗೆ ಗೊಣಗುಟ್ಟಿಕೊಂಡವಳು, ಮಗಳ ಮುದ್ದುಮುಖ ನೋಡುತ್ತಿದ್ದ ಹಾಗೇ ಅವಳನ್ನು ತಕ್ಕೈಸಿಕೊಂಡು, ‘ನೀನಿಲ್ಲದಿದ್ದರೆ, ನಾನೆಂದೋ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಿದ್ದೆ ಪುಟ್ಟಿ’- ಎಂದು ಇನ್ನಿಲ್ಲದ ಹಾಗೇ ಮಗಳನ್ನು ಪ್ರೀತಿಯಿಂದ ಮುದ್ದಿಸಿದಳು.

‘ಅಮ್ಮ, ನೋಡು ಇದರಲ್ಲೇನೋ ನಿನ್ನ ಕಥೆಯೋ ಕವನವೋ, ಬಂದಿರಬೇಕು..’ -ಎಂದು ತನ್ವೀ, ಪೋಸ್ಟ್ ಬಾಕ್ಸಿನಿಂದ ಪತ್ರಿಕೆಯನ್ನು ತೆಗೆದು ಅವಳ ಕೈಗಿತ್ತಾಗ ಶಾರ್ವರಿಯ ಮೊಗ ಆನಂದದ ಕೊಡ!!.. ಪಟಕ್ಕನೆ ಅದನ್ನು ಅವಳ ಕೈಯಿಂದ ಇಸಿದುಕೊಂಡು ಅವಸರದಿಂದ ಪುಟಗಳನ್ನು ಪಟಪಟನೆ ತಿರುಗಿಸತೊಡಗಿದಳು. ತಾಯಿಯ ಆನಂದದ ಮುಖಭಾವ ಮಗಳ ತುಟಿಯಂಚಿನಲ್ಲಿ ನಗು ನೇಯ್ದಿತು. ‘ಅಲ್ಲಮ್ಮ, ನೀನೇ ಬರೆದ ಕಥೆ..ಓದಲು ಏಕಿಷ್ಟು ಕಾತರ?!!..’

‘ಹೋಗೇ….ನಿನಗವೆಲ್ಲ ಗೊತ್ತಾಗಲ್ಲ’ ಎಂದರೂ, ಪತ್ರಿಕೆಯಲ್ಲಿ ಪ್ರಕಟವಾಗಿದ್ದ ತನ್ನ ಬರಹವನ್ನು ಕಂಡು ಶಾರ್ವರಿಯ ಮೊಗವರಳಿತು. ಅದೊಂದೇ ಅವಳ ಸಂತೋಷದ ಸ್ವಂತ ಕ್ಷಣ!!!…

ತೆರೆದ ಪುಟದೊಳಗೆ ಅಲುಗಾಡದ ಕಣ್ಣೆವೆಗಳು…. ತಾನು ಬರೆದ ಕಥೆಯನ್ನು ನಿಧಾನವಾಗಿ ಓದತೊಡಗಿದಳು.  

ಆ ಸಂಜೆ ಪುರಭವನದಲ್ಲಿ ಜನವೋ ಜನ. ತನ್ನ ನೆಚ್ಚಿನ ಕವಿಯ ಸನ್ಮಾನ ಕಾರ್ಯಕ್ರಮದಲ್ಲಿ ಅವಳು ಭಾವುಕಳಾಗಿದ್ದಳು. ರವಿತೇಜರ ಕವನಗಳೆಂದರೆ ಅವಳಿಗೆ ಪಂಚಪ್ರಾಣ. ನೇರ ಹೃದಯಗಹ್ವರ ಸೇರುವ ಅರ್ಥಪೂರ್ಣ ರಚನೆಗಳು ಅವನ ಕವಿತೆಗಳು.  ಎಲ್ಲಕ್ಕಿಂತ ಅವನ  ಹೃದಯ ವೈಶಾಲ್ಯದ ಸಮಾಜಮುಖಿ ಪದ್ಯಗಳು ಕವಿಮನದ ಕನ್ನಡಿಯಾಗಿದ್ದವು.

ಅವನ ಕವನಗಳನ್ನು ಅದೆಷ್ಟು ಕಾಲದಿಂದ ಓದಿಕೊಂಡು ಬಂದಿದ್ದಳೋ ಅವಳು. ಹೆಚ್ಚೂ ಕಡಿಮೆ ಅವನು ಬರೆದ ಕವನಗಳೆಲ್ಲ ಬಾಯಿಪಾಠವಾಗಿದ್ದವು. ಜೊತೆಗೆ ಅವು ಯಾವ್ಯಾವ ಪತ್ರಿಕೆಗಳಲ್ಲಿ ಯಾವಾಗ ಪ್ರಕಟವಾಗಿದ್ದವು ಎಂಬ ಇತ್ಯಾದಿ ವಿವರಗಳೆಲ್ಲ ಬಹುಶಃ ಅವನಿಗಿಂತ ಇವಳೇ ಕರಾರುವಾಕ್ಕಾಗಿ ನೆನಪಿನಲ್ಲಿಟ್ಟುಕೊಂಡಿದ್ದಳು.

ಅವಳೂ ಪದ್ಯಜೀವಿಯೇ. ಅವಳದೂ ಎಷ್ಟೋ ಕವನಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿ ತಾನು ‘ಕವಯಿತ್ರಿ’ ಎಂಬ ಹೆಮ್ಮೆ ಒಳಗೊಳಗೇ. ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೇ ಅವಳು, ವೇದಿಕೆ ಹತ್ತಿ ತನ್ನ ಪ್ರೀತಿಯ ಕವಿ ರವಿತೇಜನ ಬಳಿಸಾರಿ, ಅದೇ ತಾನೇ ಕೊಂಡುಕೊಂಡ ಅವನ ಕವನ ಸಂಕಲನದ ಮೊದಲಪುಟವನ್ನು ಅವನ ಮುಂದೆ ಹರವಿ, ಲೇಖನಿಯನ್ನು ಮುಂಚಾಚಿ ‘ನಿಮ್ಮ ಹಸ್ತಾಕ್ಷರ..’ ಎಂದು ಅವನ ಮೊಗವನ್ನು ವೀಕ್ಷಿಸಿದಳು.

 ಅವಳ ನಸುಗೆಂಪಾದ ಸುಂದರ ಮೊಗದಲ್ಲಿ ಉತ್ಸಾಹ ಕಿಕ್ಕಿರಿದಿತ್ತು. ಕಣ್ಣುಗಳಲ್ಲಿ ಕಾತುರತೆ. ಅವಳು ನೀಡಿದ ಪುಸ್ತಕದೊಳಗೆ ಅವನು ತನ್ನ ಹಸ್ತಾಕ್ಷರ ಮೂಡಿಸಿದಂತೆ, ಅವಳು, ತನ್ನ ಹೃದಯದ ಭಾವಕೋಶದ ಮೇಲೆ ಅವನು ಹಸ್ತಾಕ್ಷರ ಒತ್ತಿದಂತಾಗಿ ನವಿರಾಗಿ ಕಂಪಿಸಿದಳು. ಧನ್ಯತೆಯಿಂದ ಪುಸ್ತಕವನ್ನು ಎದೆಗೊತ್ತಿಕೊಂಡು ‘ಥ್ಯಾಂಕ್ಸ್’ ಎಂದು ಮೆಲ್ಲುಲಿದಳು.

ರವಿತೇಜ ನಗುವ ಕಂಗಳನ್ನು ಅವಳತ್ತ ತುಳುಕಿಸಿ ‘ನಿಮ್ಮ ಹೆಸರು…ಏನ್ಮಾಡ್ತಾ ಇದ್ದೀರಿ…ಕಾಲೇಜು ವಿದ್ಯಾರ್ಥಿನಿಯೇ?…’ ಎಂದಾಗ ಅವಳು ನಾಚಿ ನೀರಾದಳು. ತಾನಷ್ಟು ಎಳೆಯದಾಗಿ ಕಾಣುತ್ತೇನೆಯೇ…ಎಂಬ ಲಜ್ಜೆಯ ಭಾವದಲ್ಲಿ ಖುಷಿಗೊಂಡಳು.

ಅವಳ ಪರಿಚಯ ಕೇಳಿ ಅವನೂ ತಲೆಯಾಡಿಸಿ ಆಕರ್ಷಕವಾಗಿ ನಕ್ಕ. ಎಲ್ಲಕ್ಕಿಂತ ಹೆಚ್ಚಾಗಿ ಅವಳೂ ಪದ್ಯಗಳನ್ನು ಬರೆಯುತ್ತಾಳೆಂಬ ಭಾವ ಅವನಿಗೆ, ಅವಳಲ್ಲಿ ಆಸಕ್ತಿ ಕುದುರಿಸಿತ್ತು. ಆಸ್ಥೆಯಿಂದ ಅವಳ ಸವಿವರ ಪರಿಚಯವನ್ನು ವಿಚಾರಿಸಿಕೊಂಡ ಆ ಕವಿವರ್ಯ.  

ಕೆಲವೇ ದಿನಗಳು…ತಿಂಗಳುಗಳು…ಕವಿಗೋಷ್ಠಿ, ವಿಚಾರಸಂಕಿರಣ, ಸಾಹಿತ್ಯ ಸಮಾರಂಭಗಳಲ್ಲಿ ಭೇಟಿ-ಮಾತೂಕತೆಗಳು ಅವರ ನಡುವೆ ಪರಿಚಯ ಹೆಚ್ಚಿಸಿ, ಆತ್ಮೀಯತೆ ಬೆಸೆದಿತ್ತು. ಭಾವಪ್ರಪಂಚದ ಆ ವಿಹಾರಿಗಳಿಬ್ಬರು ಅದೆಷ್ಟು ಮಾತನಾಡಿದರೋ, ಚರ್ಚಿಸಿದರೋ, ನಕ್ಕು ಮತ್ತೆ ಮತ್ತೆ ನೋಡುವ-ಭೇಟಿಯಾಗುವ ತುಡಿತದಲ್ಲಿ ಪರಸ್ಪರರ ಅಭಿರುಚಿಗಳೂ ಹಿತವಾಗಿ ಬೆರೆತು, ಅವರು ಹತ್ತಿರ ಹತ್ತಿರವಾದದ್ದು ಕನಸೋ ಎಂಬಂತ್ತಾಗಿತ್ತು ಅವಳ ಪಾಲಿಗೆ.

 ಇಬ್ಬರೂ ತಂತಮ್ಮ ಕವನಗಳ ಸಾಂಗತ್ಯದಲ್ಲಿ ಒಂದಾಗಿ ಹೋಗಿದ್ದರು. ಪ್ರೇಮ ಸಂವಾದ ಅರ್ಥಪೂರ್ಣವಾಗಿ ಟಿಸಿಲೊಡೆದಿತ್ತು. ಆ ಪ್ರಖ್ಯಾತ ಕವಿ, ಅವಳ ನೋವಿನ ಕಥೆಗೆ ಕಿವಿಯಾಗಿದ್ದರು. ಸಾಂತ್ವನದ ನುಡಿಯಾಗಿದ್ದರು. ಆ ಎಳೆಯ ವಿಧವೆಯ ಕಮರಿ ಹೋದ ಭಾವನೆಗಳಿಗೆ ಸಂಚಲನ ಮೂಡಿಸಿದರು. ಒಂದು ಹೆಜ್ಜೆ ಮುಂದುವರಿದು, ಅವಳ ಕದಲಿದ ಬಾಳಿಗೆ ಆಸರೆಯಾಗಲೂ ಕೂಡ ರವಿತೇಜ ತಯಾರಾದರು.

ಅವರ ಔದಾರ್ಯ-ವಿಶಾಲ ಹೃದಯ ಕಂಡವಳಿಗೆ ನೆಲಕಚ್ಚಿದ ತನ್ನ ಕಲ್ಪನೆ-ಕನಸುಗಳು ಕಾಲಿಗೆ ತಡವರಿಸಿದಂಥ ಅನುಭವವಾಗಿ ಮೈಜುಮ್ಮೆಂದಿತು.  ಕೈ ಜಿಗುಟಿ ನೋಡಿಕೊಂಡಳು. ಅವರ ಧ್ವನಿಯಲ್ಲಿದ್ದ ಅನುತಾಪದ ಸ್ನೇಹದ ಪಲುಕುಗಳನ್ನು ಗುರುತಿಸಿ ಪುಲಕಗೊಂಡಳು. ಉಕ್ಕುತ್ತಿದ್ದ ಆನಂದಾತಿಶಯವನ್ನು ತಡೆದುಕೊಳ್ಳಲಾರದೆ, ಲಜ್ಜೆಯಿಂದ ತುಟಿ ಕಚ್ಚಿಕೊಂಡು, ನಸುವಾಗಿ ಜೂಗರಿಸಿದಳು.

ಮರುಕ್ಷಣವೇ ತಾನೇನೋ ತಪ್ಪು ಮಾಡುತ್ತಿರುವೆನೆಂಬ ಅಳುಕೂ ಹರಿದಾಡಿತು ಜೊತೆಜೊತೆಗೆ. ಚಿಂತಾಮಗ್ನಳಾದಳು. ಮದುವೆಯಾದ ಎರಡು ವರ್ಷಗಳೊಳಗೆ  ಕಂಕುಳಿಗೊಂದು ಹೆಣ್ಣುಕೂಸನ್ನಿತ್ತು, ಕಾಮನಬಿಲ್ಲ ರಂಗಿನೋಕುಳಿ ಎರೆದು, ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸಿದ ತನ್ನಿನಿಯ, ಗಂಡನೆಂಬ ಗಂಡ ಅಪಘಾತದ ಅಕಾಲ ಮೃತ್ಯುವಿಗೀಡಾದಾಗ ಅಂದು ದಿಕ್ಕು ತೋರದೆ ಅವಳು ಕುಸಿದಿದ್ದಳು. ಕತ್ತಲಾದ ತನ್ನ ಬಾಳನ್ನು ಕೊನೆಗಾಣಿಸಿಕೊಳ್ಳಲು ಹೊರಟ ಮಗಳನ್ನು ಹೆತ್ತವರು ತಡೆದು, ಅವರಂದು ತಮ್ಮಮಡಿಲಿಗೆ ಹಾಕಿಕೊಳ್ಳದೇ ಇದ್ದಿದ್ದರೆ ಆಗ ಅವಳೇನಾಗುತ್ತಿದ್ದಳೋ  ಅವಳಿಗೇ ತಿಳಿಯದು. ಎಲ್ಲವೂ ಅಯೋಮಯದ ದಿನಗಳು!!…

ಸರಕಾರೀ ಹುದ್ದೆಯಲ್ಲಿದ್ದ ಗಂಡನ ಉದ್ಯೋಗ ಅವಳ ಕೈಹಿಡಿದು, ಅತಂತ್ರವಾಗಿದ್ದ ಆ ತಾಯಿ-ಮಗಳಿಗೊಂದು ಬಾಳು ಕಲ್ಪಿಸಿತ್ತು. ಅನ್ಯೋನ್ಯವಾಗಿದ್ದ ತನ್ನ ಪ್ರೀತಿಯ ಗಂಡನ ನೆನಪಲ್ಲೇ ನವೆದುಹೋಗುತ್ತಿದ್ದ ಅವಳ ಬಾಳಿನಲ್ಲಿ ಆಸಕ್ತಿ ಕುದುರಿಸಿದ್ದು ಅವಳ ಸಾಹಿತ್ಯ ಪ್ರೀತಿ-ಬರವಣಿಗೆ. ಮಗಳ ಮುದ್ದು ಆಟ-ಪಾಟಗಳನ್ನು ನೋಡುತ್ತ ದಿನ ನೂಕುತ್ತಿದ್ದವಳಿಗೆ, ತಂದೆ-ತಾಯಿಯರ ಪ್ರೀತಿಯ ರಕ್ಷೆಯ ಸಮಾಧಾನದ ಗಳಿಗೆಗಳಲ್ಲಿ, ಬೇರೆ ಯಾವ ಅರೆಕೊರೆಯೂ ಬಾಧಿಸಿರಲಿಲ್ಲ,  ಈಗ ಈ ಕವಿ ರವಿತೇಜನ ಪರಿಚಯವಾಗುವವರೆಗೆ. ಅವನ ಕಾಳಜಿಯ ಆತ್ಮೀಯ ನುಡಿಗಳನ್ನು ಕೇಳುವವರೆಗೂ. ಅವನು ಉದಯಿಸಿದ ಪ್ರೀತಿಯ ಬೆಳಕು, ಬೆಚ್ಚನೆಯ ಆಪ್ತ ಭಾವನೆಗಳನ್ನು ತನ್ನ ಹೃದಯಾಂತರಾಳದಲ್ಲಿ ಮೊಳಕೆಯೊಡೆಸುವವರೆಗೂ. ಗಂಡ ಸತ್ತ ನಂತರ ಬೇರಾವ ಪರಪುರುಷರನ್ನೂ ಕಣ್ಣೆತ್ತಿಯೂ ನೋಡದ ಅವಳು ರವಿತೇಜನ ವಿಶಾಲ ಹೃದಯದ ವ್ಯಕ್ತಿತ್ವದ ಮುಂದೆ ತಲೆಬಾಗಿದ್ದಳು.  

ಮುಂಚಾಚಿದ ಆತನ ಕೈಯೊಳಗೆ ಕೈಯನ್ನು ಬೆಸೆಯಲು ಅವಳಿಗೆ ಮೊದಮೊದಲು ಹೇಳತೀರದ ಹಿಂಜರಿಕೆ. ಗಂಡನನ್ನು ಕಳೆದುಕೊಂಡ ವಿಧವೆಯಾದ ತಾನು ಅವಿವಾಹಿತನ ಬಾಳನ್ನು ಪ್ರವೇಶಿಸಿದರೆ, ಸಮಾಜಕ್ಕಿಂತ ಹೆಚ್ಚಾಗಿ ಅವನ ಮನೆಯವರು ಹೇಗೆ ಸ್ವೀಕರಿಸುತ್ತಾರೋ ಎಂಬ ಎದೆದುಡಿತ.!!..

ನಲವತ್ತು ದಾಟಿದ್ದರೂ ಈ ಕವಿಯ ಭಾವವೀಣೆಗೆ ಇಂದಿನತನಕ ಯಾರೂ ಶ್ರುತಿ ಹಿಡಿದವರಿಲ್ಲ. ಹಾಗೆಂದೇ ಅವನು  ಇದುವರೆಗೂ ಒಂಟಿ. ಅಕ್ಕ-ತಂಗಿಯರೆಲ್ಲ ಮದುವೆಯಾಗಿ ಅವರವರ ಮನೆಯಲ್ಲಿ. ಹಾಸಿಗೆ ಹಿಡಿದ ತಾಯಿಯೊಬ್ಬರೇ ಅವನ ಅತ್ಯಾಪ್ತ ಜೀವ. ಆಕೆಯೊಬ್ಬಳನ್ನು ಬಿಟ್ಟರೆ ಮನೆಯಲ್ಲಿ ನೀನೇ ಎಂದು ಅವನನ್ನು ಕೇಳುವವರಿಲ್ಲ. ಜೋಪಾನ ಮಾಡಿ ಉಪಚರಿಸುವವರಿಲ್ಲ. ಸದಾ ಕಾಡುವ ಅನಾಥಪ್ರಜ್ಞೆ. ಹೇಳಿಕೊಳ್ಳುವಂಥ ಅನುಕೂಲದ ಉದ್ಯೋಗವೂ ಇಲ್ಲ. ಬರವಣಿಗೆಯೇ ಮೂಲಾಧಾರ. ತಾಯಿಯ ಕಿಂಚಿತ್ ಪೆನ್ಷನ್ ಹಣ. ಸಂಸಾರ ಹೇಗೋ ನಡೆದುಹೋಗುತ್ತಿತ್ತು.   

 ಬಿಳಿ ಜುಬ್ಬಾ-ಪೈಜಾಮ, ಬಗಲಲ್ಲೊಂದು ತೂಗಾಡುವ ಬಟ್ಟೆಯ ಚೀಲ. ಅದರ ತುಂಬಾ ಪುಸ್ತಕಗಳಷ್ಟೇ ಅವನ ಆಸ್ತಿ. ಮುಖದಲ್ಲಿ ಸಣ್ಣಗೆ ಮಿನುಗುವ ಮುಗುಳ್ನಗು ಅವನ ಚಹರೆ. ಇಂತಪ್ಪ ಬ್ರಹ್ಮಚಾರಿಗೆ  ನವಯುವತಿ-ಚೆಲುವೆಯಾದ ಅವಳು ಬಾಳು ಕೊಟ್ಟಳೋ ಅಥವಾ ಪುಟ್ಟಮಗುವಿನ ತಾಯಿ-ವಿಧವೆಯ ವಿಷಾದ ತುಂಬಿದ ಮೊಗದಲ್ಲಿ ಸಂತೃಪ್ತಿಯ ನಗು ಅರಳಿಸಿದವನು ಅವನೋ ಎಂಬುದು ಯಕ್ಷಪ್ರಶ್ನೆ!!

ಸಂಸಾರ ಆರಂಭವಾಗಿತ್ತು. ನಡೆದಿತ್ತು. ಹೆಚ್ಚು ಘರ್ಷಣೆ ಇಲ್ಲ. ಮನೆ ಪೂರಾ ತೂಗಿಸುವವಳು ಅವಳು. ಹೊಟ್ಟೆಗೆ-ಹಾಸಿಗೆಗೆ ಯಾವುದೂ ಕಡಮೆಯಾಗಿರಲಿಲ್ಲ. ಆಗೀಗ ತವರು ಮನೆಗೆ ಬರುವ ಹೆಣ್ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಹೆಂಡತಿಯನ್ನು ಪಡೆದ ರವಿತೇಜ ನಿಜವಾಗಿ ಧನ್ಯನಾಗಿದ್ದ. ಮತ್ತೆ ಮಕ್ಕಳು ಎಂಬ ಸ್ವಾರ್ಥದ ಗೋಜಲು ಬೇಡ ಎಂದು ಆ ನವವಿವಾಹಿತರಿಬ್ಬರೂ ತಮಗೆ ಸ್ವಂತ ಮಕ್ಕಳು ಮಾಡಿಕೊಳ್ಳುವ ವಿಷಯವನ್ನು ಅವರು ದೂರ ಇಟ್ಟಿದ್ದರು. ಅವಳಿಗಂತೂ ಆ ಕೊರತೆ ಇರಲಿಲ್ಲ. ಬೆಳೆಯುತ್ತಿರುವ ತನ್ನ ಮಗಳನ್ನು ಕಣ್ತುಂಬ ನೋಡುತ್ತ ಮುಚ್ಚಟೆಯಿಂದ ಬೆಳೆಸುತ್ತಿದ್ದವಳ ಕಣ್ಣಿಗೆ ಅವಳು ಕನಸಿನ ಕಿನ್ನರಿ.

ತೆರೆದ ಪುಟದೊಳಗಿನ ಕಥೆ ಅರ್ಧಕ್ಕೇ ತುಂಡರಿಸಿತು.

ಶಾರ್ವರಿಯ ಬೆನ್ನು ಕಳಕ್ಕೆಂದಿತು. ಅಸಾಧ್ಯ ಬೆನ್ನಹುರಿಯ ನೋವು ಝರಿಯಂತೆ ಕುತ್ತಿಗೆಯಿಂದ ಕೆಳಗಿಳಿಯುತ್ತ  ಸಹಿಸಲು ಅಸಾಧ್ಯವೆನಿಸಿತು. ಕಣ್ತುಂಬಿ ಬಂದಿತ್ತು.

ಈ ಬಗೆಯ ನೋವು ಕಳೆದೆರಡು ತಿಂಗಳುಗಳಿಂದ. ಬೆಳಗಿನಿಂದ ಸಂಜೆಯವರೆಗೂ ಒಂದೇ ಸಮನೆ ಕುರ್ಚಿಯಲ್ಲಿ ಕುಳಿತು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದವಳ ಬೆನ್ನು ಮೂಳೆಗಳನ್ನು ಪರೀಕ್ಷಿಸಿದ  ವೈದ್ಯರು, ಏನೇನೋ ಪರೀಕ್ಷೆಗಳನ್ನು ಮಾಡಿಸಿದರು.  ಮೂರು-ನಾಲ್ಕನೆಯ ಹಂತದ  ವರ್ಟಿಬ್ರಲ್ ಕಾಲಂ ಸರಿದಿದೆ, ಆಪರೇಶನ್ ಮಾಡಿಸಿಕೊಂಡರೆ ಉತ್ತಮ ಎಂದರು. ಹಾಗಂತ ಇವಳು ಆಸ್ಪತ್ರೆ ಸೇರಿದರೆ ಮನೆಯಲ್ಲಿ ಗೈಯ್ಯುವವರು ಯಾರು?….ಮುಲಾಜಿಲ್ಲದೆ ಅವಳು ಅವರ ಮಾತನ್ನು ದೂರ ತಳ್ಳಿದ್ದಳು.

ಶಾರ್ವರಿಗೆ ಈ ನೋವು ಬರುಬರುತ್ತಾ ಅಭ್ಯಾಸವಾಗಿ ಬಿಟ್ಟಿತ್ತು.

ನೋವಿನಿಂದ ಮುಖ ಹಿಂಡುತ್ತಲೇ, ಸೊಂಟವನ್ನು ನೀವಿಕೊಳ್ಳುತ್ತ, ಅತ್ತೆಯ ನರಳಾಟದ ಸದ್ದು  ಕೇಳಿ ಮೇಲೆದ್ದು ಅವರ ರೂಮಿಗೆ ಧಾವಿಸಿ, ಒದ್ದೆಯಾದ ಆಕೆಯ ಡೈಪರನ್ನು ಬದಲಿಸಿ, ಗಂಜಿ ಕಾಯಿಸಲು ಅಡುಗೆ ಮನೆಗೆ ನಡೆದಳು.

ಗಂಜಿ ಮಾಡಿಟ್ಟು ಬಂದವಳು ಮತ್ತೆ ಕುರ್ಚಿಯಲ್ಲಿ ಹುದುಗಿ ಕುಳಿತು ಯೋಚನೆಯಲ್ಲಿ ಹುದುಗಿಹೋದಳು.

‘ಅಮ್ಮಾ… ನಿನ್ನ ಮೊಬೈಲ್ ರಿಂಗ್ ಆಗ್ತಿದೆ ಕೇಳಲಿಲ್ವಾ …?’ ಎಂದು ತನ್ವೀ,  ಯೋಚನೆಯ ಹುತ್ತವಾಗಿ ಮರಗಟ್ಟಿ ಕುಳಿತವಳನ್ನು ಕುಲುಕಾಡಿಸಿ, ತಾಯಿಯ ಕೈಗೆ ಫೋನ್ ಕೊಟ್ಟಾಗ, ಶಾರ್ವರಿಯ ಕೈಲಿದ್ದ ಪತ್ರಿಕೆ ಕೆಳಗೆ ಜಾರಿತು.

‘ಹಲೋ…’

ಅತ್ತಲಿನ ದನಿಗೇಳಿ ಅವಳ ಬಾಯಂಗಳದ ಪಸೆ ಆರಿತು. ದನಿ ಬಡಕಲಾಯಿತು.

 ‘ಹಲೋ ಯಾರು…ಏನಾಗಿತ್ತು?…’

ಕೈ ನಡುಗಿ ತಟ್ಟನೆ ಮೊಬೈಲ್ ಫೋನ್ ಕೆಳಗೆ ಬಿತ್ತು.

‘ಯಾರದಮ್ಮ ಫೋನು?..’ ಎನ್ನುತ್ತಾ ತನ್ವೀ ತಾನೇ ಫೋನ್ ಎತ್ತಿಕೊಂಡು ಮಾತನಾಡಿದಳು.

ಊರಿನಲ್ಲಿದ್ದ ಶಾರ್ವರಿಯ ತಾಯಿ, ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿ ಸತ್ತ ಸುದ್ದಿ. ಸ್ಮೃತಿ ತಪ್ಪಿ ಬಿದ್ದಿದ್ದ ತಾಯಿಯನ್ನು ಕಂಡು ತನ್ವೀ, ಗಾಬರಿಯಾಗಿ ತಣ್ಣೀರು ತಟ್ಟಿ ಎಬ್ಬಿಸಲು ಪ್ರಯತ್ನಿಸಿದಳು. ಶಾರ್ವರಿಯ ಕಣ್ಣಿಂದ ಒಂದೇ ಸಮನೆ ನೀರು ಧಡ ಧಡ ..!!

ಮಗಳು ಗರಬಡಿದು ನಿಂತಿದ್ದಳು ಪೆಚ್ಚಾಗಿ.

ಎಂಥ ಪರೀಕ್ಷೆ?!!!…ರವಿತೇಜ ತಿಂಗಳಲ್ಲಿ ಇಪ್ಪತ್ತು ದಿನಗಳು ಮನೆಯಿಂದ ಹೊರಗೇ. ಅದೂ ಊರಿನಿಂದ ಹೊರಗೇ. ಕೆಲಸ-ಸಂಪಾದನೆಗಲ್ಲ…ಭರ್ತಿ ಸಾಹಿತ್ಯಕ ಚಟುವಟಿಕೆಗಳು. ಬರುವಾಗ ರಾಶಿ ರಾಶಿ ಪುಸ್ತಕಗಳನ್ನು ಹೊತ್ತು ತರುತ್ತಿದ್ದ. ಹಣ್ಣು-ಹಂಪಲುಗಳ ಬುಟ್ಟಿ ತುಂಬ ಅಪರೂಪ. ಜೇಬಿನಲ್ಲಿ ಚಿಲ್ಲರೆ ನೋಟುಗಳು.

ಪ್ರತಿಸಲವೂ ಗಂಡ ರವಿತೇಜನ ಪರ್ಸ್ ಭರ್ತಿ ಮಾಡಬೇಕಾದ್ದು ಶಾರ್ವರಿಯ ಹೊಣೆಯೇ. ಹಾಗಂತ ಅವನೆಂದು ಬಾಯಿ ಬಿಟ್ಟು ಕೇಳಿದವನಲ್ಲ, ಕೋಪಿಸಿ ಬೈದವನಲ್ಲ, ಸಿಡಿಮಿಡಿ ತೋರಿದವನಲ್ಲ. ತಾನೇ ತೋಚಿಕೊಂಡು ದುಡಿದು, ಜವಾಬ್ದಾರಿಯಿಂದ ಮನೆಗೆ ಬೇಕಾದ್ದನ್ನು ಹಿಡಿದು ತಂದವನಲ್ಲ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆಸಾಮಿ.

ಶಾರ್ವರಿ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಳು. ಹೆತ್ತಮ್ಮನ ಕಡೆಯ ಮುಖದರ್ಶನವೂ ಇಲ್ಲವಾಯಿತೇ ಎಂದು ನೆನೆದು ಚಿಂತೆ ಉಲ್ಬಣಿಸಿ, ತಲೆಯೊಳಗೆ ಮೆದುಳನ್ನು ನಾದಿದಂತಾಯಿತು. ದುಃಖ ಉಮ್ಮಳಿಸಿ ಬರುತ್ತಿತ್ತು. ಮುಕ್ಕಾಲು ದಿನದ ಪ್ರಯಾಣ ತೌರುಮನೆಗೆ. ತಂದೆ ಸತ್ತಾಗಲೂ ಇಂಥದೇ ಪರಿಸ್ಥಿತಿ. ಅತ್ತೆ ಹಾಸಿಗೆಯಲ್ಲಿ, ಗಂಡ ವಿಳಾಸ ತಿಳಿಯದ ಪರಸ್ಥಳದಲ್ಲಿ.

ರೂಮಿನಿಂದ ಕ್ಷೀಣ ನರಳಿಕೆಯ ದನಿ….

 ತಟ್ಟನೆ ಏಳಹೊರಟ ಶಾರ್ವರಿ, ಕುರ್ಚಿಯಿಂದ ಚಿಮ್ಮಿ ನೆಲದ ಮೇಲೆ ಕುಕ್ಕರಿಸಿ,  ‘ಹಾಂ…’ ಎಂದು ನೋವಿನಿಂದ ಜೋರಾಗಿ ಚೀತ್ಕರಿಸಿದಳು. ಇದನ್ನೆಲ್ಲಾ ನೋಡುತ್ತ ಬೆಪ್ಪಾಗಿ ನಿಂತಿದ್ದ ತನ್ವೀ  ಕಂಗಾಲಾಗಿ ‘ಅಮ್ಮಾ..ಅಮ್ಮಾ..’ ಎಂದು ದನಿ ತೆಗೆದು ಅಸಹಾಯಕತೆಯಿಂದ ಅಳತೊಡಗಿದಳು.

‘ಶ್…ಸಮಾಧಾನ ಮಾಡ್ಕೋ ಪುಟ್ಟಿ…ಒಳಗೆ ಹೋಗಿ ನೋಡಮ್ಮ ಬಂಗಾರ, ಅಜ್ಜೀಗೆ ಏನು ಬೇಕೂಂತ ಕೇಳು…ಬಾಯಿಗೆ ಹಾಕಿರೋ  ಪೈಪ್ನಲ್ಲಿ ನಿಧಾನವಾಗಿ ಸ್ವಲ್ಪ ಸ್ವಲ್ಪ ಗಂಜೀ  ಹಾಕ್ತೀಯಾಮ್ಮ…ಗಂಜಿ ನೀರಾಗಿ ಮಾಡಿದ್ದೀನಿ…’ ಎಂದು ಮಗಳಿಗೆ ಹೇಳುತ್ತ, ರೂಮಿನತ್ತ ಕೈ ಮಾಡಿ ತೋರಿದಳು ಶಾರ್ವರಿ.

ತನ್ವೀ ತಲೆಯಾಡಿಸುತ್ತಾ, ತಾಯಿಯ ಮಾತನ್ನು ಶಿರಸಾ ವಹಿಸಿ ಅಜ್ಜಿಯ ಕೋಣೆಯತ್ತ ವಿಧೇಯತೆಯಿಂದ ತೆರಳಿದಳು.

ಶಾರ್ವರಿಯ ಕಣ್ಣ ಕೊಳ ಭರ್ತಿಯಾಗಿ ಹೊರಗುಕ್ಕುತ್ತಿತ್ತು. ಕೊರಳ ಬಿಕ್ಕುಗಳು ಸಶಬ್ದವಾಗಿ. ಎದುರಿಗೆ ಶೋಕೆಸಿನಲ್ಲಿಟ್ಟಿದ್ದ ಅಪ್ಪ-ಅಮ್ಮನ ಫೋಟೋಗೆ ಕೈ ಮುಗಿದು ‘ಅಮ್ಮ, ಇಷ್ಟೇಮ್ಮಾ ನಿನ್ನ ಋಣ…ಹೋಗಿ ಬಾ..’ -ಎಂದು ತಾಯಿಗೆ ಕೂತಲ್ಲಿಂದಲೇ ಕೈ ಮುಗಿದು, ಕಂಬನಿಯ ವಿದಾಯ ಹೇಳಿ, ಶಿರಬಾಗಿ ವಂದಿಸಿ, ಹೊರ ಧುಮ್ಮಿಕ್ಕಲು ಕಾದಿದ್ದ ಕಣ್ಣೀರ ಅಣೆಕಟ್ಟಿನ ಗೋಡೆ ಕೆಡವಿದಳು.

                                ********************

Related posts

ಪಾತಾಳ ಗರಡಿ

YK Sandhya Sharma

ಗಂಡ-ಹೆಂಡಿರ ಜಗಳ……….

YK Sandhya Sharma

ಎದೆಗುದಿ

YK Sandhya Sharma

Leave a Comment

This site uses Akismet to reduce spam. Learn how your comment data is processed.