ಕಮ್ಲೂಗೆ ಮಾವು ತಂದ ಪೇಚು
ಹಣ್ಣುಗಳ ರಾಜ ಮಾವಿನಹಣ್ಣು ಅಂತಾರೆ. ಎಲ್ಲರೂ ಮಾವಿನಹಣ್ಣು ಅಂದರೆ, ಅದರಲ್ಲೂ ಬಾದಾಮಿ ಮಾವು ಎಂದರೆ ಬಾಯಿ ಬಾಯಿ ಬಿಡುವಾಗ ಕಮ್ಲೂಗೆ ಮಾತ್ರ ಮಾವು ಅಂದ್ರೆ ಸಿಂಹಸ್ವಪ್ನ!!!…. ಎದುರಿಗೆ ಮಂಕರಿಗಟ್ಟಲೆ ಮಾವಿನಹಣ್ಣು ಇಟ್ಟುಕೊಂಡು ಹ್ಯಾಪುಮೋರೆ ಹಾಕಿಕೊಂಡು ಚಿಂತಾಕ್ರಾಂತಳಾಗಿ ಕೂತಿರಬೇಕೇ ಕಮ್ಲೂ!!..
ತೋಟದಿಂದ ತಂದ ಮಾವಿನಹಣ್ಣಿನ ಬುಟ್ಟಿಗಳನ್ನು ತಂದು ಅವಳ ಎದುರಿಗೆ ಸಾಲಾಗಿ ಜೋಡಿಸಿಟ್ಟ ಕಿರಿಮಗ ‘ನನ್ನ ಕೆಲಸ ಮುಗೀತು, ಇನ್ನು ವಿಲೇವಾರಿ ನಿನ್ನ ಕೆಲಸ ಕಣಮ್ಮ ’-ಎಂದವನೇ ಅಲ್ಲಿಂದ ಕಾಲ್ಕಿತ್ತಿದ್ದ.
ಕಮ್ಲೂ ಮುಖ ಇಂಗು ತಿಂದ ಮಂಗನಂತಾಗಿತ್ತು. ಇದು ಪ್ರತಿವರ್ಷದ ತಲೆನೋವು ಅವಳಿಗೆ. ‘ಅಲ್ಲೇ ಯಾರಿಗಾದರೂ ಗುತ್ತಿಗೆ ಕೊಡಕ್ಕೆ ಆಗ್ತಿರ್ಲಿಲ್ವೇನೋ..ನನ್ನ ಪ್ರಾಣ ಯಾಕೆ ತಿನ್ತೀರೋ ನನ್ಮುಂದೆ ಹೀಗೆ ಸುರಿದು… ಮನೆಗೆಲಸವೇ ಹೊರೆಯಿದೆ, ಇದ್ ಬೇರೆ ಗಂಟ್ ಹಾಕ್ತೀರಾ…ಗಂಡಸ್ರು ನೀವು ಈ ಕೆಲಸವೆಲ್ಲ ಮಾಡ್ಬೇಕು, ಹೂಂ…ನಮ್ಮನೇಲಿ ಎಲ್ಲ ವಿಚಿತ್ರ..’ – ಎಂದು ಪೇಪರ್ ಓದುತ್ತ ಕುಳಿತಿದ್ದ ಗಂಡ ಶ್ರೀಕಂಠು ಕಡೆ ತಿರುಗಿ ನೋಟದಿಂದ ತಿವಿದಳು.
‘ನೀನು ಎಫಿಶಿಯೆಂಟು ಕಣೆ…ಯಾರಿಗೆ ಬೇಕಾದ್ರೂ ಮಾರು, ಕೊಡು, ಹಂಚು..ನೋ ಅಬ್ಜೆಕ್ಷನ್…ಒಟ್ನಲ್ಲಿ ಇದು ಖರ್ಚಾಗ್ಬೇಕು ಅಷ್ಟೇ ’
ಗಂಡನ ಬೇಜವಾಬ್ದಾರಿ ಮಾತು ಕೇಳಿ ಅವಳಿಗೆ ರೇಗಿಹೋಯ್ತು.
‘ ಮುಂದಿನವಾರ ನಮ್ಮ ಮಹಿಳಾ ಸಂಘದಲ್ಲಿ ನನ್ನ ಭಾಷಣ ಇದೆ. ನಾನು ಸಿದ್ಧವಾಗಬೇಕು…ನಾಲ್ಕೈದು ಸೀರೆಗಳಿಗೆ ಫಾಲ್ ಹಾಕಿಸಬೇಕು, ಬ್ಲೌಸ್ ಕೊಡಲು ಟೈಲರ್ ಹತ್ರ ಹೋಗಲೇಬೇಕು…ಈ ಅವಾಂತರದಲ್ಲಿ ಇದನ್ನೆಲ್ಲಿ ದಾಟಿಸೋದೂ ರೀ..’ಎಂದು ಅರ್ಧ ಕೋಪದಿಂದ ಇನ್ನರ್ಧ ದೈನ್ಯದಿಂದ ವಟಗಟ್ಟಿದಳು.
ಇದು ಪ್ರತಿವರ್ಷದ ಅವಳ ತಪ್ಪದ ವ್ಯಥೆ.
‘ಯಾಕಾದರೂ ಈ ಪಾಟಿ ಮಾವು ಬೆಳೀತೀರೋ…ನನ್ನ ಕರ್ಮ..’-ಎಂದವಳೇ ಮೇಲೆದ್ದು ಸೀದಾ ಖಾಲಿಯಿದ್ದ ಮುಂದಿನ ಕೋಣೆಯುದ್ದಗಲಕ್ಕೂ ಪೇಪರ್ಗಳನ್ನು ಹಾಸಿ, ಬುಟ್ಟಿಯಲ್ಲಿದ್ದ ಹಸಿರು ಮಾವಿನಕಾಯಿಗಳನ್ನು ಆಯ್ದು, ಅವುಗಳ ಮೇಲೆ ಹರಡಿದಳು. ಈ ಕೆಲಸ ಬರೋಬರ್ರಿ ಒಂದುಗಂಟೆಗೂ ಹೆಚ್ಚು ಹಿಡಿಯಿತು. ಭಾಳ ಹೊತ್ತು ಹಾಗೇ ಬಗ್ಗಿದವಳು ಮೇಲೇಳಲು ಹೋಗಿ ‘ಅಮ್ಮಾ’ಎಂದು ನೋವಿನಿಂದ ಚೀರಿದಳು. ಶ್ರೀಕಂಠು ಹಾರಿಬಂದ ಅಲ್ಲಿಗೆ ಗಾಬರಿಯಿಂದ.
‘ಆಯ್ಯೋ ರೀ ನನ್ನ ಬೆನ್ನು…’ ಎಂದು ನೋವಿನಿಂದ ಮತ್ತೆ ಪತರಗುಟ್ಟಿದಳು. ಮುಖ ವಿಕಾರ ಮಾಡಿದ ಅವಳನ್ನು, ಗಂಭೀರವದನನಾಗಿ, ಶ್ರೀಕಂಠು ಮೆಲ್ಲನೆ ಅವಳನ್ನು ನಡೆಸಿಕೊಂಡು ಬಂದು ಬೆಡ್ ರೂಮಿನ ಹಾಸಿಗೆಯ ಮೇಲೆ ಮಲಗಿಸಿದ. ಹಾಂ..ಹೂಂ..ಎಂದು ವರಲೋಕ್ಕೆ ಶುರುಮಾಡಿದ ಅವಳ ಬೆನ್ನಿಗೆ ‘ಮೂವ್’ ತಿಕ್ಕಿದ. ಉಹೂಂ..ಉಪ್ಪಿನ ಶಾಖ ಕೊಟ್ಟ. ನೋವು ಜಪ್ಪಯ್ಯ ಅನ್ನಲಿಲ್ಲ. ಕಮ್ಲೂ ನೋವಿನಿಂದ ಒಂದೇ ಸಮನೆ ಬೊಮ್ಮಡಿ ಹೊಡೆಯುತ್ತಲೇ ಇದ್ದಳು.
ಶ್ರೀಕಂಠೂಗೆ ದಿಕ್ಕುತೋಚದೆ, ಹಿರಿಮಗನಿಗೆ ಫೋನ್ ಹಚ್ಚಿ ಮಹಡಿಯ ಮೇಲೆ ವರ್ಕ್ ಫ್ರಂ ಹೋಂ ನಲ್ಲಿದ್ದ ಮಗರಾಯನ ಸಹಾಯದಿಂದ ಹತ್ತಿರದ ಡಾಕ್ಟರ ಹತ್ತ್ತಿರ ಕರೆದೊಯ್ದ. ಕೂಡಲೇ ಅವಳನ್ನು ಫಿಸಿಯೋ ಥೆರಪಿ ವಾರ್ಡ್ಗೆ ಸಾಗಿಸಿದರು. ಕರೆಂಟಿನ ವಯರುಗಳು ಅವಳ ಬೆನ್ನನ್ನು ಉಜ್ಜಿದವು. ಒಂದುವಾರ ದಿನಾ ಬಂದು ಟ್ರೀಟ್ ಮೆಂಟ್ ತೊಗೋಬೇಕು ಎಂದು ಫಿಸಿಯೋ ಥೆರಪಿಸ್ಟ್ನಿಂದ ಅಪ್ಪಣೆ ಆರ್ಡರ್ ಆದ್ಮೇಲೆ, ವಿಧಿಯಿಲ್ಲದೇ, ಅವಳನ್ನು ಪ್ರತಿದಿನಾ ನರ್ಸಿಂಗ್ ಹೋಂಗೆ ಕರ್ಕೊಂಡು ಬರೋ ಕೆಲಸ ಶ್ರೀಕಂಠೂಗೇ ಅಂಟಿಕೊಂಡಿತು.
ಒಂದು-ಎರಡು..ಮೂರು ದಿನ…ಕಮ್ಲೂಗೆ ನೋವು ಸ್ವಲ್ಪ ಕಡಿಮೆಯಾಯಿತು. ಆ ದಿನ ಮಲಗಿದ್ದವಳು ತಟ್ಟನೆ ಏನೋ ನೆನೆಸಿಕೊಂಡು ಜೋರಾಗಿ ಕೂಗಿಕೊಂಡಳು. ಶ್ರೀಕಂಠೂ ಗಾಬರಿಯಿಂದ ಓಡಿಬಂದ. ಅವಳು ಅಥ್ಲಿಟ್ ಥರ ಓಡಿಹೋಗಿ ಮುಂದಿನ ಕೋಣೆಯ ಬಾಗಿಲು ತೆರೆದು ನೆಲದ ಮೇಲೆ ಹರಡಿದ್ದ ಮಾವಿನಹಣ್ಣಿನ ಸ್ಥಿತೀನ ಚೂಪುಗಣ್ಣಿಂದ ನೋಡಿ ‘ಅಯ್ಯೋ ಅಯ್ಯೋ..’ ಎಂದರಚಿಕೊಂಡಳು. ಅವಳ ಹೃದಯಾನೇ ಬಾಯಿಗೆ ಬಂದ ಹಾಗಾಯ್ತು. ಪೇಪರ್ ಮೇಲೆ ರಸ ಕಾರಿಕೊಂಡು ಪಚಕ್ಕೆಂದು ನೆಲಕ್ಕೆ ಅಂಟಿಕೂತ ಕೆಲವು ಹಣ್ಣುಗಳ ದೈನ್ಯಾವಸ್ಥೆ ಕಂಡು ಹೌಹಾರಿ ಮುಟ್ಟಲು ಹೋದವಳು ‘ಇಸ್ಸಿ’ ಎಂದು ಕೈ ಕೊಡವಿಕೊಂಡಳು. ಮೂರೇದಿನಗಳಲ್ಲಿ ಹಸಿರಿಗಿದ್ದ ಅವುಗಳ ಕೊಳೆತ ಅವಸ್ಥೆಗೆ ಸಂಕಟಪಡುತ್ತ ಮುಖ ಕಿವುಚಿದಳು. ಒಂದೆರಡನ್ನು ಅಲುಗಾಡಿಸಿ ನೋಡಿದಳು. ಹಳದಿ ಬಣ್ಣಕ್ಕೆ ತಿರುಗಿ ಸ್ವಲ್ಪ ಮೆತ್ತಗಾಗಿದ್ದವು. ತಿರುವಿಹಾಕಿ ನೋಡಿದಳು. ಕೆಳಭಾಗದಲ್ಲಿ ಕಳಿತ-ಕೊಳೆತವಾಸನೆ. ಮುಖ ಸಿಂಡರಿಸಿಕೊಂಡು ನಿಟ್ಟುಸಿರಿಕ್ಕುತ್ತ, ಗಟ್ಟಿಯಾಗಿರುವ ಮಾಗದವುಗಳನ್ನು ಹೊಸಪೇಪರಿನ ಮೇಲೆ ಮಗ್ಗುಲಾಗಿಸಿ, ಹಣ್ಣಾದವುಗಳನ್ನು ಬುಟ್ಟಿಗೆ ತುಂಬಿಸಿಟ್ಟಳು. ಕೊಳೆತ ರಾಶಿ ಹಣ್ಣುಗಳನ್ನು ನೋಡಿ ಹೊಟ್ಟೆಯುರಿದುಹೋಯಿತು. ಹಲ್ಲುಮುಡಿಗಚ್ಚಿ, ದೊಡ್ಡ ಪ್ಲಾಸ್ಟಿಕ್ ಬಕೇಟು, ಮೊರ-ಪೊರಕೆ ಕೈಯಲ್ಲಿ ಹಿಡಿದು ಕೊಳೆತಹಣ್ಣುಗಳ ಶವಸಂಸ್ಕಾರಕ್ಕೆ ಸಿದ್ಧವಾದಳು.
ಮೊರಕ್ಕೆ ಎಲ್ಲ ಪಿತಪಿತ ಹಣ್ಣುಗಳನ್ನೂ ಗೋರಿಕೊಂಡು, ಎತ್ತೆತ್ತಿ ಪ್ಲಾಸ್ಟಿಕ್ ಬಕೇಟಿಗೆ ತುಂಬಿ, ರಣರಂಪವಾದ ನೆಲದ ಬವಣೆಯನ್ನು ನೋಡಿ ಕೋಪ ಚಿಮ್ಮಿ- ‘ಇದೊಂದು ಚಾಕರಿ ಬೇರೆ ಬಾಕಿ ಇತ್ತು…ನನ್ನ ಹಣೇಬರಕ್ಕೆ…’ ಎಂದು ಗೊಣಗುಟ್ಟಿಕೊಂಡು, ಕೊಳೆತ ಮೂರುಬುಟ್ಟಿ ಹಣ್ಣುಗಳನ್ನು ಎತ್ತಿಕೊಂಡುಹೋಗಿ ಸೀದಾ ಮನೆಮುಂದಿನ ಗಿಡಗಳ ಬುಡಗಳಿಗೆ ಸುರಿದುಬಂದಳು.
‘ಅಯ್ಯೋ ಅಷ್ಟು ಕಷ್ಟಪಟ್ಟು ಬೆಳೆದದ್ದೆಲ್ಲ ಅನ್ಯಾಯವಾಗಿ ಗೊಬ್ಬರವಾಗೋಯ್ತಲ್ಲ ‘ ಎಂಬ ಕಿಚ್ಚು ಜಠರವನ್ನೆಲ್ಲ ವ್ಯಾಪಿಸಿ ಉರಿಕಾಣಿಸಿಕೊಂಡಿತು. ಲಕ್ಷಣವಾಗಿ ಕೆಮಿಕಲ್ಸ್ ಹಾಕಿ ಹಣ್ಣುಮಾಡಿದರೆ ಒಂದೇ ದಿನಕ್ಕೆ ಹಣ್ಣಾಗತ್ತೆ, ಸುಲಭದ ಕೆಲಸ…ಯಾರಿಗೆ ಬೇಕು ಈ ಉಪದ್ವ್ಯಾಪ, ಆರ್ಗ್ಯಾನಿಕ್ ಅಂತೆ…ಸಹಜವಾಗಿ ಹಣ್ಣು ಮಾಡಬೇಕಂತೆ, ಇದೆಲ್ಲಿ ಗೋಳು?…ಇದರಲ್ಲಾಗೋ ವೇಸ್ಟು ನನಗೆ ತಾನೇ ಗೊತ್ತು’ -ಎಂದು ಗಂಡ-ಮಕ್ಕಳ ಸಾವಯವ ಕೃಷಿಯ ಆಸೆಗೆ – ಸಹಜ ಹಣ್ಣುಮಾಡುವಿಕೆಯ ಹುಚ್ಚಿಗೆ ತನ್ನಲ್ಲೇ ಶಪಿಸಿಕೊಂಡಳು.
ನೆಲದ ಮೇಲಿನ ರಂಪವನ್ನು ನೋಡಲಾರದೆ, ತೆಂಗಿನಪೊರಕೆಯಲ್ಲಿ ಎಲ್ಲವನ್ನೂ ಗುಡ್ಡೆಮಾಡಿ ಹೊರಗೆ ಸುರಿದು ಬಂದು, ಬಕೆಟ್ ನೀರು ತುಂಬಿಸಿಕೊಂಡು ತಂದು ಸಾರಿಸೋಬಟ್ಟೆ ಹಿಡಿದು ನೆಲಸಾರಿಸಿ ಶುಭ್ರ ಮಾಡೋ ಅಷ್ಟರಲ್ಲಿ ಮೈಪೂರ್ತಿ ನೆಗ್ಗಿಹೋಗಿ, ತೊಟ ತೊಟ ಬೆವರ ಸ್ನಾನ!!..
ಒಂದೊಂದು ವಾರ, ಕೊಳೆತಹಣ್ಣು ತುಂಬಿಟ್ಟ ಚೀಲಗಳನ್ನು, ಕಸದವನು ಬಾರದೇ, ಕಾಂಪೌಂಡಿನೊಳಗೇ ಇಟ್ಟುಕೊಳ್ಳಬೇಕಾದಾಗ ಅಕ್ಕಪಕ್ಕದವರ ಶಾಪವೆಲ್ಲ ಕಮ್ಲೂ ಪಾಲಿಗೇ ಗ್ಯಾರಂಟಿ. ‘ಇದೇನ್ರೀ…ಅಸಹ್ಯ ವಾಸನೆ..ಕೊಳಕು…’
ಜೊತೆಗೆ ಕಸದವನ ಕೈಲೂ ಸಹಸ್ರನಾಮ!… ಆ ಜಾಗವನೆಲ್ಲ ಕೆಲಸದವಳಿಗೆ ಒಂದಕ್ಕೆ ಡಬ್ಬಲ್ ಹಣ ತೆತ್ತು ಸೋಪ್ ಹಾಕಿ ಉಜ್ಜಿಸಿ ಕ್ಲೀನ್ ಮಾಡಿಸಿದರೂ ಅಂಟು ಅಂಟು..ವಾಸನೆ.
ಈ ಗೋಳು ಒಂದುಕಡೆಯಾದರೆ, ಕಮ್ಲೂ ದುಃಖ-ಗೋಳಾಟ ಇನ್ನೊಂದು ವರಸೆ.
‘ಹೋಗ್ಲಿ ಈ ಪಾಟಿ ಕಷ್ಟಪಟ್ಟು ಹಣ್ಣುಗಳನ್ನೆಲ್ಲ ಒಪ್ಪಮಾಡಿದ ನಾನು, ಹಣ್ಣುಗಳನ್ನಾದ್ರೂ ತಿಂದು ತೃಪ್ತಿ ಪಟ್ಟೆನೇ…. ಸಿಹಿಯಾದ ಈ ಹಣ್ಣುಗಳನ್ನು ರುಚೀನೂ ನೋಡೋಹಾಗಿಲ್ವಂತೆ..ಎಲ್ಲರ ಕಟ್ಟಪ್ಪಣೆ…ಗಂಡ-ಮಕ್ಕಳಿಗೆ ಹೆಚ್ಚಿಕೊಟ್ಟ ಹಣ್ಣುಗಳ ಬರೀ ಸಿಪ್ಪೆ- ಓಟೆಗಳನ್ನು ಚೀಪಿ ಮಗನ ಕೈಲಿ ಆವಾಜ್ ಹಾಕಿಸಿಕೊಳ್ಳೋದು ಯಾರಿಗೆ ಬೇಕು?..ಹೋಗಲಿ ಈ ಪಾಟಿ ಹಣ್ಣು ಚೆಲ್ಲಾಡಿ ಹೋಗ್ತಿವೆಯಲ್ಲ, ಅವರಾದರೂ ತಿನ್ತಾರಾ…ಉಹೂಂ… ತಿನ್ರೋ ಅಂತ ಗೊಗರೆಯಬೇಕು..’ ಎಂದು ಬೆನ್ನು ಸೆಟೆಸಿ ನಿಂತವಳು, ‘ಹಾಂ..’- ಎಂದು ಸೊಂಟ ನೀವಿಕೊಳ್ತಾ ಉದ್ಗಾರವೆತ್ತಿದಳು ಕಮ್ಲೂ.
ನಡುಮನೆಗೆ ಬಂದರೆ ಮೇಜಿನ ತುಂಬಾ ಹರಡಿಟ್ಟ ರಸಪುರಿ, ಬಾದಾಮಿ, ಮಲಗೋವ, ನೀಲಂ, ಮಲ್ಲಿಕಾ ಒಂದೇ ಎರಡೇ…ತರಹಾವರಿ ಜಾತಿಯ ಮಾವಿನಹಣ್ಣುಗಳು…ನೋಡಿಯೇ ಅವಳ ಶುಗರ್ ಲೆವೆಲ್ ಏರಿಹೋಯಿತು…ಬರೀ ನಿಟ್ಟುಸಿರು…ಹೇಗಾದರೂ ಮಾಡಿ ಇವನ್ನೆಲ್ಲ ಖರ್ಚು ಮಾಡೋದಷ್ಟೇ ಅವಳ ಅಜೆಂಡಾ!…
ಊಟಕ್ಕೆ ಕೆಳಗಿಳಿದು ಬರೋ ಮಕ್ಕಳಿಗಾಗೇ ಕಾದಿದ್ದವಳು ಅನುನಯದಿಂದ- ‘ಊಟ ಆದ್ಮೇಲೆ ಹಣ್ಣು ತಿನ್ನಬೇಕು ಕಣ್ರೋ, ಒಳ್ಳೇದು ’-ಎಂದು ತಾಕೀತು ಮಾಡಿದಳು. ಅವರು ಕ್ಯಾರೇ ಅನ್ನಲಿಲ್ಲ.
‘ನಮಗೆ ಊಟ ಮಾಡೋಕ್ಕೇ ಟೈಮಿಲ್ಲ, ಇನ್ನು ನಿನ್ನ ಹಣ್ಣು ಬೇರೆ …’ಎಂದು ಅಸಡ್ಡೆಯಿಂದ ಮುಖ ಸಿಂಡರಿಸಿ, ಕಾಟಾಚಾರಕ್ಕೆ ನಾಲ್ಕುತುತ್ತು ಉಂಡು, ಮಹಡಿಯೇರಿದಾಗ ಕಮ್ಲೂ ಮುಖ ನೋಡಬೇಕಿತ್ತು…
‘ಕೊಬ್ಬು …’- ಎಂದು ಗೊಣಗಿಕೊಳ್ತಾ ಮುಖ ತಿರುವಿ-. ‘ಸರಿ…ಹೆಚ್ಚಿದ್ದೆಲ್ಲ ನಾನೇ ತಿಂತೀನಿ ಬಿಡು…’ ಎಂದು ಹಣ್ಣಿನ ಬಟ್ಟಲನ್ನು ಕೈಗಿತ್ತಿಕೊಂಡಾಗ,
ಕಿರಿಯವನು ‘ಸದ್ಯ ನಿನ್ನ ಶುಗರ್ ಶೂಟ್ ಆಪ್ ಆಗಿ ಆಂಬ್ಯುಲೆನ್ಸ್ ಕರೆಸಿ, ನರ್ಸಿಂಗ್ ಯಾತ್ರೆ ಗ್ಯಾರಂಟಿ ನಮಗೆ’ ಎಂದು ಮುಲಾಜಿಲ್ಲದೆ ಅವಳ ಕೈಯ್ಯಿಂದ ಹಣ್ಣಿನ ಬೌಲ್ಲನ್ನು ಕಸಿದುಕೊಂಡಾಗ ಕಮ್ಲೂಗೆ ಅಳೂನೇ ಬಂದಿತ್ತು.
‘ ಹೋಗ್ರೋ ಅಷ್ಟು ದೊಡ್ಡ ತೋಟ ಇದ್ಗೊಂಡು, ಅಟ್ಲೀಸ್ಟ್ ನಾ ಒಂದು ಓಟೆ ಚೀಪೋದೂ ಬೇಡ್ವಾ…ನನ್ನ ಕರ್ಮ..ನನಗೆ ಇಷ್ಟೇ ಲಭ್ಯ’ ಎಂದು ಸೊರಬುಸ ಮಾಡಿದಳು.
ಹೆಚ್ಚಿದ್ದೆಲ್ಲ ದಂಡವಾಗತ್ತಲ್ಲಾಂತ ‘ರೀ…ನಿಮಗೆ..’- ಎಂದು ರಾಗವೆಳೆದಾಗ ಶ್ರೀಕಂಠೂ- ‘ಅಯ್ಯೋ ಸದ್ಯ ಹೋದವಾರ ತಿಂದಿದ್ದೇ ಉಷ್ಣ ಆಗಿ ಬೇಧಿಯಾಗ್ತಿದೆ…’ ಎಂದು ತಟ್ಟನೆ ಜಾಗ ಖಾಲಿಮಾಡಿದ.
ಕಮ್ಲೂ ಪೆಚ್ಚಾದಳು!!.. ‘ನನಗೊಳ್ಳೆ ಗ್ರಾಚಾರ…ಎಲ್ಲರನ್ನೂ ಓಲೈಸೋ ಹಣೆಬರಹ… ಮಾವಿನಹಣ್ಣು ಅಂದ್ರೆ ಎಲ್ರೂ ಓಡಿಹೋಗ್ತೀರಲ್ಲೋ…ಆದರೆ ವಾರ ವಾರ ಮಾತ್ರ ತಂದು ಸುರಿದು, ನನ್ನ ಪ್ರಾಣ ಹಿಂಡ್ತೀರಲ್ಲೋ … ’ ಎಂದು ಭುಸುಗುಡುತ್ತ ಮೇಲೆದ್ದವಳೇ, ಹಣ್ಣಿನಬುಟ್ಟಿಗಳನ್ನು ಟೇಬಲ್ ಮೇಲೆ ಸಾಲಾಗಿ ಜೋಡಿಸಿಟ್ಟು ಮೊಬೈಲ್ನಿಂದ ನಾಲ್ಕೈದು ಫೋಟೋಗಳನ್ನು ಕ್ಲಿಕ್ಕಿಸಿ ತತಕ್ಷಣ ಫೇಸ್ ಬುಕ್ಕಿಗೆ ಪೋಸ್ಟ್ ಮಾಡಿದಳು.
‘ತಾಜಾ ತರಹಾವರಿ ಮಾವಿನಹಣ್ಣುಗಳು…ತಿನ್ನಲು ರೆಡಿ…’
ಕೂಡಲೇ ಆ ಕಡೆಯಿಂದ ಬಾಣ ಬಿಟ್ಟಹಾಗೇ ದಬೆದಬೆ ಪ್ರಶ್ನೆಗಳ ಸುರಿಮಳೆ!!..
’ಕೆಜಿ ಎಷ್ಟು?….ಸಿಹಿಯಾಗಿದ್ಯಾ?…ಮಾಗಿದೆಯಾ?…ಡೋನ್ಜೋ ಕಳಿಸ್ತೀರಾ?…’ ನಾನಾ ನಮೂನೆ ಪ್ರಶ್ನೆಗಳು…
ಕಮ್ಲೂ ಕೋಪ ನೆತ್ತಿಗೇರಿತು!!.. ಆದರೂ ಸಮಾಧಾನ ತಂದ್ಕೊಂಡು ಉತ್ತರಿಸಿದಳು. ತಲೆ ತಿನ್ನೋ ತರ್ಲೆ ಪ್ರಶ್ನೆಗಳು.. ಚೌಕಾಸಿ ಬೇರೆ..ಗಿಟ್ಟೋ ಥರ ಕಾಣಲಿಲ್ಲ…ಬೇಕು ಅಂದವರು ಯಾರೂ ಮನೆಗೆ ಬರಲಿಲ್ಲ. ಆರ್ಡರೂ ಕಳಿಸಲಿಲ್ಲ. ಒಂದೂ ಬೋಣಿಯಾಗೋ ಲಕ್ಷಣ ಕಾಣಿಸದೆ ಅವಳು, ಟಕ್ಕೆಂದು ಪೋಸ್ಟ್ ಡಿಲಿಟ್ ಮಾಡಿ ಕೈತೊಳ್ಕೊಂಡಳು.
ಕಮ್ಲೂ ಯೋಚನೆ ಈಗ ಕವಲಾಯ್ತು.
ಅರಿಶಿನ ಕುಂಕುಮಕ್ಕೆ ಮುತ್ತ್ತೈದರನ್ನು ಕರೆದು ಅಡಿಕೆಲೆಯಲ್ಲಿ ಹಣ್ಣು ಇಟ್ಟುಕೊಟ್ಟು ಖರ್ಚು ಮಾಡೋಣಾ ಅಂದ್ರೆ ಆಷಾಢ…!!
ನೋಡುನೋಡುತ್ತಿದ್ದ ಹಾಗೇ ಬೆಳಗಾಗೋದ್ರಲ್ಲಿ ಚೆನ್ನಾಗಿದ್ದ ಹಣ್ಣುಗಳ ಮೇಲೆ ಅದ್ಯಾವ ಮಾಯದಲ್ಲಿ ಕಪ್ಪುಮಚ್ಚೆಗಳು ಹುಯ್ದಿವೆ!!..ಆಗಲೇ ಗುಂಗಾಡು ಆಡಕ್ಕೆ ಶುರು ಮಾಡಿವೆ..
ಕಮ್ಲ್ಲೂ ಹೈರಾಣಾದಳು!!..
ಪ್ರತಿವಾರ ಕಮ್ಲೂ ಪಾಲಿಗೆ ಇದೇ ಕಥೆ..ತೋಟದಿಂದ ಹಣ್ಣು ಬರೋದು ತಪ್ಪಲ್ಲ..ಮನೇಲಿ ಎಲ್ಲರನ್ನೂ ‘ಕ್ಯಾಚ್’ ಹಾಕ್ಕೊಂಡು ಹಣ್ಣು ಹೆಚ್ಚಿ ಬಲವಂತದಿಂದ ತಿನ್ನಿಸೋ ಸಾಹಸ ತಪ್ಪಲಿಲ್ಲ. ಅವರನ್ನು ಬೇರೆ ರೀತಿ ಆಕರ್ಷಿಸಬೇಕೂಂತ, ‘ಯು ಟ್ಯೂಬ್’ ನೋಡಿ ಮಾವಿನಹಣ್ಣಿನ ಸೀಕರಣೆ..ಷೇಕ್ಗಳು, ಬರ್ಫಿ, ಹಲ್ವಾ ಇನ್ನೂ ಏನೇನೋ ಮಾವಿನ ರೂಪಾಂತರದ ಕಮ್ಲೂ ಅವತಾರಗಳು ಒಂದೇ ಎರಡೇ?…
ಮಾತಿಗೆ ಸಿಕ್ಕವರಿಗೆಲ್ಲ ತನ್ನ ನಿದ್ದೆಗೆಡಿಸಿದ ಮಾವಿನಹಣ್ಣಿನ ಪುರಾಣಾನ ಅವಳು ಬೇಸರವಿಲ್ಲದೆ ಒದರಿದ್ದೇ ಒದರಿದ್ದು. ಜೊತೆಗೆ, ಬೇಕು ಬೇಕಾದವರೆನ್ನೆಲ್ಲ ಫೋನ್ ಮಾಡಿ ಕರೆಸಿ ಕೊಟ್ಟಿದ್ದೂ ಆಯ್ತು.
ಕಮ್ಲೂ, ಮನೆಮುಂದೆ ಬೋರ್ಡ್ ತೂಗುಹಾಕಿ, ಜಗುಲಿಯಲ್ಲಿ ಹಣ್ಣು ಜೋಡಿಸಿಟ್ಟುಕೊಂಡು ಮಾರಾಟಕ್ಕೆ ಕೂತುಕೊಳ್ಳೋದು ಒಂದು ಬಾಕಿ ಉಳಿದಿತ್ತು. ಹೀಗೆ ಅವಳ ತಲೆಯಲ್ಲಿ ಹೊಳೆಯದ ಐಡಿಯಾಗಳೇ ಇರಲಿಲ್ಲ. ಅಕ್ಕ ಪಕ್ಕದವರಿಗೆ ಮಾರುವುದು ಹೇಗೆಂಬ ಸಮಸ್ಯೆ. ಬಿಟ್ಟಿ ಎಷ್ಟೂಂತ ಕೊಡೋದು?….
ಅವಳ ಕನಸಲ್ಲೂ ತೂಗಾಡೋ ಮಾವಿನ ಗೊಂಚಲುಗಳೇ. ಬೆಚ್ಚಿ ಬೆಚ್ಚಿ ಎದ್ದು ಕೂತ್ಕೊಳ್ತಿದ್ದಳು! ಮಾವಿನಹಣ್ಣಿನ ಕಾಲದಲ್ಲಂತೂ ಹೀಗೆ ಅವಳಿಗೆ ಅವುಗಳನ್ನು ಸಂಭಾಳಿಸುವಲ್ಲಿ, ವಿತರಣೆ ಮಾಡುವಲ್ಲಿ ಸುಸ್ತೋ ಸುಸ್ತು. ದಿನವೆಲ್ಲ ಕಮ್ಲೂಗೆ ಅದೇ ಧ್ಯಾನ . ಮನೆಗೆ ಬಂದಬಂದವರಿಗೆಲ್ಲ ಕೊಟ್ಟು, ಪುಣ್ಯ ಕಟ್ಟಿಕೊಂಡಾಯ್ತು. ಆ ಪೈಕಿ ಕೆಲಸದವಳು, ತರಕಾರಿಯವಳು, ದಿನಸಿ ಹುಡುಗ, ಪೋಸ್ಟ್ ಮ್ಯಾನು , ಸ್ವಿಗ್ಗಿ-ಅಮೆಜಾನ್ ಹುಡುಗರನ್ನೂ ಬಿಟ್ಟೂ ಬಿಡದೆ ಹಣ್ಣು ಹೊರೆಸಿ ಕಳಿಸಿ ಪೇರುಸಿರುಬಿಟ್ಟಳು.
ಆದರೆ, ಈ ಪೈಕಿ ಮನೆಯ ಖಾಯಾಮ್ ಗಿರಾಕಿಗಳು ಮಾತ್ರ ಪರಾರಿ ಎನ್ನುವುದೊಂದು ಅವಳಿಗೆ ಭಾರಿ ನಿರಾಸೆ !!!. ..
ಆದರೂ, ಈ ವೀಕೆಂಡ್ ನಲ್ಲಿ ಅವಳ ಮುಖದಲ್ಲಿ ವಿಜಯದ ನಗೆ ಅರಳಿತ್ತು. ಕಡೆಗೂ ಟೇಬಲ್ ಖಾಲಿಯಾಗಿತ್ತು!!.. ನಿರಾಳವಾಗಿ ಸೋಫಾದ ಮೇಲೆ ಉಸ್ಸಪ್ಪ ಅಂತ ಬಿದ್ಕೊಂಡಳು ಕಮ್ಲೂ .
ಅಷ್ಟರಲ್ಲಿ ಕಾಲಿಂಗ್ ಬೆಲ್..!
‘ಅರೇ ಹಣ್ಣೆಲ್ಲ ಖಾಲಿಯಾದಾಗಲೇ ಗೆಸ್ಟ್ ಗಳು ಬರಬೇಕೇ ?’ ಎಂದು ಗುನುಗುನಿಸುತ್ತ ಬಾಗಿಲು ತೆರೆದಳು ಕಮ್ಲೂ.
ಅಪರೂಪಕ್ಕೆ ಊರಿನಿಂದ ಬಂದಿಳಿದ ಚಿಕ್ಕಮ್ಮ ಒಳಗಡಿಯಿರಿಸಿದರು.
‘ನಿನ್ನ ನೋಡಿ ತುಂಬಾ ದಿನಗಳಾಯ್ತು ಕಣೆ ಕಮ್ಲೂ… ಬರೀ ಕೈಯಲ್ಲಿ ಹೇಗೆ ಬರೋದು ಅಂತ’ ಎನ್ನುತ್ತಾ ಆಕೆ, ಘಮಘಮಿಸುವ ಮಾವಿನಹಣ್ಣು ತುಂಬಿ ತುಳುಕುತ್ತಿದ್ದ ಒಂದು ದೊಡ್ಡಬ್ಯಾಗ್ ತೆಗೆದು ಅವಳ ಮುಂದೆ ಚಾಚಿದಾಗ ಕಮ್ಲೂಗೆ ಬವಳಿ ಬಂದಂತಾಯ್ತು!
*********** ವೈ.ಕೆ.ಸಂಧ್ಯಾ ಶರ್ಮ