In Kannada

YK Sandhya Sharma

ಶ್ರೀಮತಿ ವೈ.ಕೆ.ಸಂಧ್ಯಾ ಶರ್ಮ ಅವರು ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ಲೇಖಕಿ, ಕಾದಂಬರಿಕಾರ್ತಿ, ಅಂಕಣ ಬರಹಗಾರ್ತಿ, ನೃತ್ಯ-ನಾಟಕಗಳ ಖ್ಯಾತ ಕಲಾ ವಿಮರ್ಶಕಿ ಮತ್ತು ರಂಗಕರ್ಮಿ.

ಕನ್ನಡ ಎಂ.ಎ.ಪದವೀಧರೆ ( ಡಿಸ್ಟಿಂಕ್ಷನ್ )ಯಾದ ಇವರು, ಈ ಹಿಂದೆ  ಪ್ರಜಾಮತ,  ಪ್ರಜಾಪ್ರಭುತ್ವ ಮತ್ತು ಇಂಚರ ಪತ್ರಿಕೆಗಳಲ್ಲಿ  ಸಹಾಯಕ ಸಂಪಾದಕಿಯಾಗಿ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ.  

ಕರ್ನಾಟಕ ವಾರ್ತಾಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಪ್ರಾರಂಭಿಸಿದ ಇವರು, ಕಳೆದ 54 ವರ್ಷಗಳಿಂದ ಸಾಹಿತ್ಯಕೃಷಿ ನಡೆಸುತ್ತ ಜನಪ್ರಿಯ ಲೇಖಕಿಯಾಗಿದ್ದಾರೆ. ಇವರು,  ಸುಮಾರು 250 ಸಣ್ಣಕತೆಗಳು, 35 ಕಾದಂಬರಿ ಮತ್ತು ಇನ್ನಿತರ ಸಾಹಿತ್ಯ ಪ್ರಕಾರದ ಕೃತಿಗಳು, ಕವನಗಳು, ಹಾಸ್ಯಬರಹಗಳು,  ನಾಟಕ,  ಜೀವನಚರಿತ್ರೆಯನ್ನು ರಚಿಸಿದ್ದಾರೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರು ಬರೆದ ಸುಮಾರು 900 ಕ್ಕೂ ಹೆಚ್ಚು  ನಾಟಕ -ಮತ್ತು ನೃತ್ಯ ವಿಮರ್ಶಾ ಲೇಖನಗಳು ಹಾಗೂ ಇನ್ನಿತರ ವಿಷಯಗಳ ಬಗೆಗಿನ ಲೇಖನಗಳು  ಪ್ರಕಟವಾಗಿವೆ.

ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ  ಮಾನ್ಯತೆ ಪಡೆದ ಕಲಾವಿದೆ (ಆಡಿಷನ್ಡ್ ಆರ್ಟಿಸ್ಟ್). ಅಲ್ಲಿ ಸುಮಾರು 200 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುವ ಇವರಿಗೆ  ಬಾಲ್ಯದಿಂದಲೂ  ರಂಗಭೂಮಿಯ ನಂಟು. ತಮ್ಮದೇ ಆದ ‘ಸಂಧ್ಯಾ ಕಲಾವಿದರು’ ಹವ್ಯಾಸೀ ನಾಟಕ ತಂಡದ ಸ್ಥಾಪಕಿ ಇವರು.

ಇವರ ಸಾಹಿತ್ಯ ಸಾಧನೆಗೆ ಬಂದಿರುವ ಪ್ರಶಸ್ತಿಗಳು ಅನೇಕ. ಅವುಗಳಲ್ಲಿ ಪ್ರಮುಖವಾದುವು-

ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ಕರ್ನಾಟಕ ದಸರಾ ಪ್ರಶಸ್ತಿ,  ಕನ್ನಡ ಲೇಖಕಿಯರ ಸಂಘದ ಪ್ರಶಸ್ತಿ,  ಪಂಜೆ ಮಂಗೇಶರಾಯರ ಪ್ರಶಸ್ತಿ, ಕೆನರಾ ಬ್ಯಾಂಕ್ ‘ ಮಹಿಳಾ ಸಾಧಕಿ’ ಪ್ರಶಸ್ತಿ ಮತ್ತು ಅಬ್ದುಲ್ ಕಲಾಮ್ ಪ್ರಶಸ್ತಿ, ‘ನಿದಂ’ ಸಂಸ್ಥೆಯಿಂದ ‘ವುಮನ್ ಅಚಿವರ್’ ಮತ್ತು ಬೆಂಗಳೂರು ದಕ್ಷಿಣ ಶಾಸಕ ಕ್ಷೇತ್ರದಿಂದ ‘ನಾರೀ ಶಕ್ತಿ” ಪ್ರಶಸ್ತಿಗಳನ್ನು ನೀಡಲಾಗಿದೆ.

‘’ಕನ್ನಡ ಸೇವಾ ರತ್ನ’’-ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲೆ. ಮಂಗಳೂರಿನ ಸಾಧನಾ ಸಾಂಸ್ಕೃತಿಕ ಪ್ರತಿಷ್ಟಾನದಿಂದ ‘’ ಸಾಧನಾ’’ ಪ್ರಶಸ್ತಿ ಮತ್ತು ಇತೀಚೆಗೆ ‘ಚಂದ್ರಕಲಾ ಸ್ವರಲಿಪಿ ಪ್ರತಿಷ್ಟಾನ’ದ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಯನ್ನು ಬೆಂಗಳೂರಿನ ಗಾಯನ ಸಮಾಜವು ಕೊಡಮಾಡಿದೆ.

‘ಶಿವಪ್ರಿಯ’ ಅಂತರರಾಷ್ಟ್ರೀಯ ನೃತ್ಯ ಸಂಸ್ಥೆಯು ‘’ ಸಾಹಿತ್ಯ ಭಾರತಿ’’ ಮತ್ತು ” ವಾಕ್ಸರಸ್ವತಿ” ಎಂಬ ಬಿರುದುಗಳನ್ನು ನೀಡಿದೆ. ಇತ್ತೀಚಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ”ಪಂಕಜಶ್ರೀ” ಪ್ರಶಸ್ತಿ, ಹಾಗೂ ವಿಪರ ಮಹಿಳಾ ಪ್ರತಿಷ್ಠಾನ ‘ಗಾರ್ಗಿ’ ಮತ್ತು ನಾಟ್ಯ ಸಂಪದ ”ಕಲಾಭಿಸಾರಿಕೆ” ಪ್ರಶಸ್ತಿ ನೀಡಿ ಗೌರವಿಸಿದೆ. 2017 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ವಹಿಸಿದ ಗೌರವ ಪಡೆದಿದ್ದಾರೆ.