ಸಾಮಾನ್ಯವಾಗಿ ಕಲ್ಪಿತ ಕಥೆಗಳಿಗಿಂಥ ನಮ್ಮ ನಡುವಿನ ಜೀವಂತ ವ್ಯಕ್ತಿಗಳನ್ನು ಕುರಿತು ಅವರ ಜೀವನರೇಖೆಯನ್ನು ಚಿತ್ರಿಸುವ ಪ್ರಯತ್ನಗಳು ಪರಿಣಾಮಕಾರಿಯಾಗಿ ಮನಮುಟ್ಟುವ ಸಾಧ್ಯತೆಗಳು ಹೆಚ್ಚು. ಅಂಥ ಒಂದು ಆಪ್ತ ಬದುಕಿನ ಸ್ಪಂದನೆಯನ್ನು ಇತ್ತೀಚಿಗೆ ನಗರದ ಚೌಡಯ್ಯ ಸ್ಮಾರಕ ಭವನದ ವೇದಿಕೆಯ ಮೇಲೆ ಆಗು ಮಾಡಿಕೊಟ್ಟಿದ್ದು ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ. ಎರಡು ಗಂಟೆಗಳ ಕಾಲ ಬೆಂಗಳೂರು ನಾಗರತ್ನಮ್ಮನವರ ಮನಮಿಡಿಯುವ ಜೀವನಗಾಥೆಯನ್ನು ನೋಡುಗರು ಮಂತ್ರಮುಗ್ಧರಾಗಿ ವೀಕ್ಷಿಸಿದರು. ಕುತೂಹಲ ಕೆರಳಿಸುತ್ತ ಸಾಗಿದ ಬಾಲಸುಂದರಿ ಬಿರುದಾಂಕಿತ ಖ್ಯಾತ ಸಂಗೀತ ವಿದುಷಿಯ ಜೀವನ ಕ್ಷಣಗಳು ಉಸಿರು ಬಿಗಿ ಹಿಡಿದು ನೋಡುವಂತೆ ಸೆರೆಹಿಡಿದಿತ್ತು. ವಿ.ಶ್ರೀರಾಮ್ ಮತ್ತು ಮಲೆಯೂರು ಗುರುಸ್ವಾಮಿ ಅವರ ಮೂಲಕಥೆಯನ್ನು ಆಧರಿಸಿ ಹೂಲಿ ಶೇಖರ್ ಮತ್ತು ಪ್ರತಿಭಾ ನಂದಕುಮಾರ್ ರಂಗಕ್ಕೆ ಅಳವಡಿಸಿದ್ದರು. ನಾಟಕದ ನಿರ್ಮಾಪಕಿ ವಿದುಷಿ ಪಿ. ರಮಾ, ಸ್ವಾರಸ್ಯ ನಡೆಯ ಈ ನಾಟಕದಲ್ಲಿ ಕಿವಿಗಳು ಇಂಪಾದ ಹಾಡುಗಳಿಂದ ತುಂಬಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಣ್ಮನ ತಣಿಸಿದ ಈ ಸಂಗೀತಪೂರ್ಣ ನಾಟಕವನ್ನು ‘’ಸಂಗೀತ ಸಂಭ್ರಮ’’ ಮತ್ತು ‘’ಬೆನಕ’’ ತಂಡಗಳು ಪ್ರಸ್ತುತಪಡಿಸಿದವು.
ಭಾರತೀಯ ಸಂಗೀತದ ಇತಿಹಾಸದಲ್ಲಿ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರ ಹೆಸರು ಚಿರಸ್ಥಾಯಿ, ಈಕೆ ಸಂಗೀತ ಮತ್ತು ನೃತ್ಯಲೋಕಕ್ಕೆ ನೀಡಿದ ಕೊಡುಗೆ ಅಪಾರ. ಈಕೆ ದೇವದಾಸಿಯ ಮನೆತನದಲ್ಲಿ ಹುಟ್ಟಿದ್ದೊಂದು ಆಕಸ್ಮಿಕ. ಹುಟ್ಟು ಪ್ರತಿಭಾವಂತೆಯ ಜೀವನದಲ್ಲಿ ಅಡ್ಡಗಾಲಾದ ಈ ಮನೆತನದ ಕರಿಯ ಛಾಯೆ ಉಂಟುಮಾಡಿದ ಪ್ರಭಾವ ಅಷ್ಟಿಷ್ಟಲ್ಲ. ಅಪೂರ್ವ ಸುಂದರಿ, ಸಂಗೀತ-ನೃತ್ಯ ಕಲೆಗಳ ಈ ಅನನ್ಯ ಕಲಾವಿದೆ, ಅಂದಿನ ಸಾಂಪ್ರದಾಯಕ ಕಾಲಘಟ್ಟದಲ್ಲಿ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ ಸಾಧನೆಯ ಹಾದಿಯಲ್ಲಿ ನಡೆದುದು ಸಣ್ಣ ಸಾಹಸವಲ್ಲ. ಈ ಸವಾಲನ್ನು ಅದ್ಭುತವಾಗಿ ನಿರ್ವಹಿಸಿದ ದಿಟ್ಟಮನದ ಈ ಹೋರಾಟಗಾರ್ತಿಯ ಜೀವನ ಪುಟಗಳು ಘಟನಾವಳಿಗಳ ದೃಶ್ಯಗಳಲ್ಲಿ ಮೂಡಿದ್ದು, ನಾಟಕ ಮನಸ್ಪರ್ಶಿಯಾಗಿ ಮೂಡಿಬಂದು ನೋಡುಗರ ಹೃದಯಗಳು ಭಾರವಾದವು.
ಆಕೆಯ ಜೀವನಚರಿತ್ರೆಯ ಕಥಾ ನಿರೂಪಣೆಯ ಕೊಂಡಿಯಾಗಿ ಕಣ್ಮನ ಸೆಳೆದ ಭಾಗವತಿಕೆಯ ವೇಷದ ಮೇಳದ ಹಾಡುಗಾರ್ತಿಯರು ಕನ್ನಡ-ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರೂಪಿಸುತ್ತ ಜೊತೆಗೆ ಸಂಗೀತದ ಸವಿಯನ್ನೂ ಉಣಬಡಿಸಿದರು. ನಾಟಕದ ಬೆಳವಣಿಗೆಯ ತಂತ್ರವಾಗಿ ನಿರ್ದೇಶಕರು ಮೇಳವನ್ನು ಬಳಸಿಕೊಂಡಿದ್ದು ಸೊಗಸಾಗಿತ್ತು, ಅಷ್ಟೇ ಸಹಜವಾಗಿತ್ತು ಕೂಡ.
ತಿರುವಾಯ್ಯೂರಿನಲ್ಲಿ ನಾಗರತ್ನಮ್ಮನೇ ನಿರ್ಮಿಸಿದ್ದ ತ್ಯಾಗರಾಜರ ಮೂರ್ತಿಯೆದುರು ಆಕೆ ಮೈಮರೆತು ಸಂಗೀತಸೇವೆ ನಡೆಸಿಕೊಡುತ್ತಿದ್ದ ಸನ್ನಿವೇಶದಲ್ಲಿ ಸಂಭವಿಸಿದ ದುರ್ಘಟನೆಯಿಂದ ನಾಟಕದ ಆರಂಭ. ಅಲ್ಲಿಂದ ಕಥೆ ಹಿಂದಕ್ಕೆ ಹೊರಳುತ್ತ ಸಿಂಹಾವಲೋಕನದಲ್ಲಿ ನಾಗರತ್ನಮ್ಮನ ಬಾಲ್ಯದ ಪುಟಗಳು ಅರಳುತ್ತ ಹೋಗುತ್ತವೆ.
ಬಾಲೆಯ ಸಂಗೀತ-ನೃತ್ಯ ಪ್ರೇಮ, ತಾಯಿಯ ಪ್ರೋತ್ಸಾಹ ಮುಂದೆ ಅವಳ ಕಲಾಭಿವೃದ್ಧಿಗಾಗಿ ನಂಜನಗೂಡಿನಿಂದ ಮೈಸೂರಿನತ್ತ ಅವರ ಪಯಣ. ಮೈಸೂರಿನಲ್ಲಿ ಘನ ವಿದ್ವಾಂಸರ ಆಶ್ರಯದಲ್ಲಿ ಅನೇಕ ಭಾಷೆಗಳ ಅಭ್ಯಾಸ, ಸಂಗೀತ-ನೃತ್ಯ, ಹರಿಕಥೆಗಳಲ್ಲಿ ಪರಿಶ್ರಮ ಪಡೆದು ಸಂಸ್ಕಾರವಂತಳಾಗಿ ಬೆಳೆದ ನಾಗರತ್ನ, ಜಸ್ಟೀಸ್ ನರಹರಿರಾಯರ ಆಶ್ರಯ ಪಡೆದದ್ದು, ಅನಂತರ ಕಾರಣಾಂತರದಿಂದ ಬೆಂಗಳೂರಿಗೆ ಬಂದು ತನ್ನ ಪ್ರತಿಭಾ-ಪಾಂಡಿತ್ಯ ಪ್ರಕಾಶಿಸಿ, ಅನಂತರ ಮದರಾಸಿಗೆ ತೆರಳಿ ಅಲ್ಲಿ ಆಕೆ ಮಾಡಿದ ಸಾಧನೆಗಳು ಬೆರಗು ಹುಟ್ಟಿಸುವಂಥದ್ದಾಗಿದ್ದವು. ಹಂತಹಂತವಾಗಿ ಖ್ಯಾತಿ ಪಡೆದ ಆಕೆಯ ಜೀವನದ ಏರುಪೇರುಗಳು ಆಕೆಯನ್ನು ಘಾಸಿಗೊಳಿಸಿದರೂ, ದೇವದಾಸಿಯರು ಎದುರಿಸುತ್ತಿದ್ದ ಅವಮಾನ, ತಲ್ಲಣಗಳನ್ನು ಸಹಿಸಲಾರದೆ, ‘ದೇವದಾಸಿ’ಯರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ‘ವೇಶ್ಯೆ’ಯರೆಂಬ ಕೆಟ್ಟ ಶಬ್ದ- ಅರ್ಥಗಳನ್ನು ಅಳಿಸಿ ಹಾಕಲು ಆಕೆ ಮಾಡಿದ ಹೋರಾಟದ ಪ್ರಯತ್ನಗಳು, ದಿಟ್ಟಮನದ ನಿರ್ಧಾರಗಳ ಪ್ರಸಂಗಗಳು ಹರಿತವಾಗಿ ಹೃದಯಸ್ಪರ್ಶಿಯಾಗಿ ಚಿತ್ರಿತವಾಗಿದ್ದವು.
ಸಂಗೀತಮೂರ್ತಿಯಾಗಿದ್ದ ಆಕೆಗೆ ಸಂದ ಮರ್ಯಾದೆಗಳು, ಶ್ರೋತೃವರ್ಗದ ಅಪಾರ ಮೆಚ್ಚುಗೆ, ಆಸ್ತಿ-ಹಣ ಗಳಿಕೆ, ಕಡೆಗೆ ಸಂಪೂರ್ಣ ತ್ಯಾಗಮಯಿಯಾಗಿ ಆಕೆ, ತಿರುವಾಯ್ಯೂರಿನಲ್ಲಿದ್ದ ತ್ಯಾಗರಾಜಸ್ವಾಮಿಗಳ ಸಮಾಧಿಯ ಜೀರ್ಣೋದ್ಧಾರಕ್ಕಾಗಿ ತನ್ನ ಸಮಸ್ತ ಸಂಪತ್ತನ್ನೂ ಧಾರೆಯೆರೆಯುವ ನಾಗರತ್ನಮ್ಮನ ಅಂತಃಕರಣ ಎಂಥವರನ್ನೂ ಅಲುಗಾಡಿಸುತ್ತದೆ. ಎಲ್ಲ ಕಥೆಗಳಲ್ಲಿರುವಂತೆ ಒಂದು ಒಳ್ಳೆಯ ಕೆಲಸಕ್ಕೆ ನೂರೆಂಟು ಅಡ್ಡಿ ಎನ್ನುವಂತೆ ಸಂಪ್ರದಾಯಸ್ಥರ-ಕುಹಕಿಗಳ ವಿರೋಧ ಲೆಕ್ಕಿಸದೆ ಆಕೆ, ಜೀರ್ಣೋದ್ಧಾರ ಕಾರ್ಯ ಮತ್ತು ಅಲ್ಲಿ ನಿತ್ಯ ಸಂಗೀತ ಪೂಜೆ ಸತತ ನಡೆಯವ ವ್ಯವಸ್ಥೆ ಮಾಡಿ ತನ್ನ ಜೀವ ಬಲಿದಾನದಿಂದ ಅಮರಳಾಗಿ ಉಳಿಯುವ ಆ ದಿವ್ಯಚೇತನದ ಕಥೆಯನ್ನು ನಾಟಕ ಸಂಕ್ಷಿಪ್ತವಾಗಿ ಅನಾವರಣಗೊಳಿಸಿತು.
ಇದುವರೆಗೂ ಅಜ್ಞಾತವಾಗಿ ಉಳಿದಿದ್ದ ಕೆಚ್ಚೆದೆಯ ಈ ಸಾಧಕಿಯ ಜೀವನದ ಕೆಲವು ಅಂಶಗಳು ಉಲ್ಲೇಖನೀಯ. ಖ್ಯಾತಿಯ ಉತ್ತುಂಗಕ್ಕೇರಿದ ಆಕೆಯ ವರಮಾನ ಎಷ್ಟಿತ್ತೆಂದರೆ, ಆದಾಯ ತೆರಿಗೆ ಕಟ್ಟುತ್ತಿದ್ದ ಮೊದಲ ಕಲಾವಿದೆ ಅವಳಾಗಿದ್ದಳು. ಗ್ರಾಮಾಫೋನಿಗೆ ಹಾಡಿದ ಪ್ರಥಮ ಸಂಗೀತಗಾರ್ತಿಯೂ ಆಕೆಯೇ. ಜೀವನದ ತೂಫಾನಿಗೆ ಸಿಲುಕಿ, ನಂಜನಗೂಡಿನಿಂದ, ಮೈಸೂರಿಗೆ, ಬೆಂಗಳೂರಿಗೆ ಮತ್ತು ಮದರಾಸಿಗೆ ಸ್ಥಳಾಂತರಗೊಂಡ ಈ ಹಾಡುಹಕ್ಕಿಯ ಬದುಕಿನ ಘಟನೆಗಳು ನಿಜಕ್ಕೂ ಸಿನಿಮೀಯವಾಗಿವೆ. ಅವನ್ನು ಅಷ್ಟೇ ಅಚ್ಚುಕಟ್ಟಾಗಿ, ಪರಿಣಾಮಕಾರಿಯಾಗಿ ನಾಗಾಭರಣರು ತಮ್ಮ ಹರಿತ ನಿರ್ದೇಶನದಿಂದ ಕಂಡರಿಸಿದ್ದಾರೆ.
ಡಾ. ಪಿ.ರಮಾ ಪ್ರೌಢ ನಾಗರತ್ನಮ್ಮನ ಪಾತ್ರದಲ್ಲಿ ಗಾಂಭೀರ್ಯ ತುಂಬಿದ ಅಭಿನಯ ನೀಡಿ, ತಮ್ಮ ಸುಶ್ರಾವ್ಯ ಕಂಠದಲ್ಲಿ ಸಂಗೀತದ ರಸದೌತಣವನ್ನು ಉಣಬಡಿಸಿ ಶ್ರೋತೃಗಳ ಮನ ತಣಿಸಿದರು.
ನಾಟಕೀಯ ಅಂಶಗಳು ಈ ನಾಟಕದಲ್ಲಿ ಕಡಿಮೆ ಇದ್ದರೂ, ಕುತೂಹಲ ಕೆರಳಿಸುವ ಸ್ವಾರಸ್ಯಪೂರ್ಣ ಲವಲವಿಕೆಯ ಸನ್ನಿವೇಶಗಳು, ಬಿಗಿಯಾದ ಚಿತ್ರಕಥೆ ಮತ್ತು ಸಂಗೀತ ರಸಾಯನದಿಂದ ನಾಟಕ ಮನಸ್ಸನ್ನು ಗೆಲ್ಲುತ್ತದೆ. ಎಲ್ಲೂ ಯಾಂತ್ರಿಕತೆ, ಬೇಸರ ಕಾಡದ ಎರಡುಗಂಟೆಗಳ ಈ ನಾಟಕ ಮುಗಿದದ್ದೇ ಅರಿವಿಗೆ ಬರುವುದಿಲ್ಲ. ಸಂಗೀತ ಸುಧೆ ತನ್ಮಯಗೊಳಿಸುತ್ತದೆ.
ಯುವತಿ ನಾಗರತ್ನ- ಅನನ್ಯ ಭಟ್ , ಮಧ್ಯವಯಸ್ಕ ನಾಗರತ್ನ- ದೀಪ್ತಿ ಶ್ರೀನಾಥ್ ಮತ್ತು ಸಾಕುಮಗಳು ಬನ್ನೀ ಬಾಯಿಯಾಗಿದ್ದ ಚೈತ್ರ ನರಸಿಂಹಸ್ವಾಮಿ ಅವರ ಅಭಿನಯ ಹದವಾಗಿವೆ. ಉಳಿದ ಪಾತ್ರಗಳು ಕಥೆಯ ನಡೆಗೆ ಪೂರಕವಾಗಿವೆಯಾದರೂ ಅಭಿನಯ ಕೌಶಲದಿಂದ ಸೆಳೆಯುವುದಿಲ್ಲ. ವಿರೋಧಿಗಳ ಪಂಗಡದ ಪಾತ್ರಗಳ ಕುಹಕ, ಕೋಡಂಗಿತನ ಕೊಂಚ ಅತಿರೇಕವೆನಿಸಿತು. ನರಹರಿರಾಯರ ಘನತೆ-ಗಾಂಭೀರ್ಯಕ್ಕೆ ತಕ್ಕಂಥ ಪಾತ್ರದ ಆಯ್ಕೆ ಉಚಿತವೆನಿಸಲಿಲ್ಲ. ಚಿತ್ರಪಟಗಳಲ್ಲಿ ಕಂಡುಬರುವ ಸುಲಕ್ಷಣೆಯಾದ ನಾಗರತ್ನಮ್ಮನವರ ಕಚ್ಚೆ ಸೀರೆ, ವೇಷ-ಭೂಷಣ, ಕೇಶವಿನ್ಯಾಸವನ್ನು ನಾಟಕದಲ್ಲಿ ಅಳವಡಿಸಿಕೊಂಡಿದ್ದರೆ ಅಧಿಕೃತ ಸೊಬಗು ಇನ್ನೂ ಹೆಚ್ಚು ಎದ್ದುಕಾಣುತ್ತಿತ್ತು.
ಉಳಿದ ಸ್ತ್ರೀ ಪಾತ್ರಗಳಿಗೂ ಈ ಮಾತು ಅನ್ವಯ. ತಾಲೀಮಿನ ಕೊರತೆ ಕೊಂಚ ಕಂಡರೂ ಪ್ರಥಮ ಪ್ರದರ್ಶನದಲ್ಲಿ ಇವೆಲ್ಲ ನಗಣ್ಯ. ನಿರ್ದೇಶಕ ನಾಗಾಭರಣರ ಸ್ಪಷ್ಟ ಛಾಪು ಗುರುತಿಸಬಹುದಿತ್ತು. ಒಟ್ಟಾರೆ ರಂಗದ ಮೇಲಿನ, ನೇಪಥ್ಯದ ಎಲ್ಲರ ಸಮಷ್ಟಿ ಪ್ರಯತ್ನ, ಹೊಸಪ್ರಯೋಗ, ಸುಂದರ ಅನುಭವದ ಸಂಗೀತದಲೆಯಲ್ಲಿ ಕೊಂಡೊಯ್ಯುವ ಈ ರಸಯಾತ್ರೆ ನಿಜಕ್ಕೂ ಸ್ಮರಣೀಯ ಅನುಭವ ನೀಡಿತು ಎಂದರೆ ಅತಿಶಯೋಕ್ತಿಯಲ್ಲ.
**********************************