ವಿಖ್ಯಾತ ‘ಪ್ರಭಾತ್ ಕಲಾವಿದರು’ ನೃತ್ಯನಾಟಕ ಮತ್ತು ಇನ್ನಿತರ ನೃತ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಮತ್ತು ಟಿವಿ ಧಾರಾವಾಹಿಗಳನ್ನು ನೋಡುವವರಿಗೆ ದೀಪಶ್ರೀ ಹರೀಶ್ ಅವರದು ಪರಿಚಿತ ಮುಖವೇ. ಮೂಲಭೂತವಾಗಿ ನೃತ್ಯ ಕಲಾವಿದೆಯಾಗಿ ಅರಳಿದ ದೀಪಶ್ರೀ ಅನಂತರ ಇನ್ನಿತರ ಕಲಾಸಕ್ತಿಗಳತ್ತ ಮುಖ ಮಾಡಿದವರು. ಪ್ರಭಾತ್ ಕಲಾವಿದರು ಸಂಸ್ಥೆಯ ತಾಂತ್ರಿಕ ನಿರ್ದೇಶಕ, ಚಲನಚಿತ್ರ ಮತ್ತು ಧಾರಾವಾಹಿಗಳ ನಟ ಹರೀಶ್ ಪ್ರಭಾತ್ ಅವರ ಸಾಂಗತ್ಯಕ್ಕೆ ಬಂದ ಮೇಲೆ ದೀಪಶ್ರೀ ಮತ್ತಷ್ಟು ತಮ್ಮ ಕಲಾ ಚಟುವಟಿಕೆಗಳನ್ನು ವಿಸ್ತೃತಗೊಳಿಸಿಕೊಂಡವರು.
ಮೂಲತಃ ರಂಗಭೂಮಿ ಮತ್ತು ಸಾಹಿತ್ಯಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದ ಲೇಖಕ ಶ್ರೀ ಟಿ.ಕೆ. ಗುಂಡಣ್ಣ ಮತ್ತು ಗಮಕ ಕಲಾವಿದೆ ಸುಧಾ ಅವರ ಮಗಳಾದ ದೀಪಶ್ರೀ ತನ್ನ ಮೂರನೆಯ ವಯಸ್ಸಿನಲ್ಲೇ ಕುಟುಂಬದ ಸಮ್ಮಿಲನ ಕಾರ್ಯಕ್ರಮದಲ್ಲಿ ತನ್ನ ನೃತ್ಯ-ನಾಟಕ ಪ್ರತಿಭೆ ಪ್ರದರ್ಶಿಸಿದವಳು. ನಿವೇದಿತಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಶಾಲೆಯಲ್ಲಿನ ಎಲ್ಲ ನೃತ್ಯ-ನಾಟಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದು. ಏಕ ಪಾತ್ರಾಭಿನಯ, ಚರ್ಚಾ ಸ್ಪರ್ಧೆ, ಪ್ರಬಂಧ ರಚನೆ, ಕೋ ಕೋ ಕ್ರೀಡೆ, ಸಂಗೀತ ಮುಂತಾದ ಎಲ್ಲ ಸ್ಪರ್ಧೆಗಳಲ್ಲೂ ಬಹುಮಾನಗಳ ಸೂರೆ. ಅವಳು ಅಭಿನಯಿಸಿದ ನಾಟಕ ದೂರದರ್ಶನದಲ್ಲಿ ಪ್ರಸಾರ. ಸಂಗೀತವನ್ನೂ ಕಲಿಯುತ್ತಿದ್ದ ದೀಪಶ್ರೀ, ಐವತ್ತನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದಕ್ಷಿಣ ಭಾರತದಾದ್ಯಂತವಲ್ಲದೆ ದೆಹಲಿಯಲ್ಲೂ ನೃತ್ಯತಂಡದಲ್ಲಿ ನೃತ್ಯ ಪ್ರದರ್ಶನದಲ್ಲಿ ಭಾಗಿಯಾದದ್ದು ವಿಶೇಷ.
ಬಿ.ಎಂ.ಎಸ್. ಕಾಲೇಜಿನಿಂದ ಬಿ.ಎ. ಪದವೀಧರೆಯಾದ ದೀಪಶ್ರೀ ಇಂಗ್ಲೀಶ್ ಎಂ.ಎ. ಸ್ನಾತಕೋತ್ತರ ಪದವಿ ಕೂಡ ಪಡೆದಿದ್ದಾಳೆ. ಪದವಿ ಕಾಲೇಜಿನಲ್ಲಿ ಅಂತರ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ‘ಟ್ಯಾಲೆಂಟ್ ಕ್ವೀನ್’ ಎಂಬ ಬಿರುದು ಲಭ್ಯ. ‘ಫೆಸ್ತಿವಲ್ಸ್ ಆಫ್ ಇಂಡಿಯಾ’ ಗೆ ನೃತ್ಯ ಸಂಯೋಜಿಸಿದ ಅನುಭವ. ಕಾಲೇಜಿನ ಕಲಾಸಂಘದ ಉಪಾಧ್ಯಕ್ಷೆಯೂ ಆಗಿ ಕಾರ್ಯ ನಿರ್ವಹಣೆ. ನಾಲ್ಕನೇ ನ್ಯಾಷನಲ್ ಗೇಮ್ಸ್ ಸಮಾರಂಭದಲ್ಲಿ ಸಮೂಹ ನೃತ್ಯದಲ್ಲಿ ಭಾಗಿ.
ಬಾಲ್ಯದಲ್ಲೇ ಗುರು ಆರ್.ಟಿ. ಪ್ರಭಾ ಅವರಿಂದ ಭರತನಾಟ್ಯ ಕಲಿಯಲಾರಂಭ. ಅವರ ನೇತೃತ್ವದಲ್ಲಿ ರಾಮಾಯಣ ಮತ್ತು ಪುರಂದರದಾಸ ನೃತ್ಯರೂಪಕಗಳಲ್ಲಿ ಪಾಲ್ಗೊಂಡಿದ್ದಳು. ಅನಂತರ ‘ಸುಕೃತಿ ನಾಟ್ಯಾಲಯ’ದ ಗುರು ಹೇಮಾ ಪ್ರಭಾತ್ ಅವರಲ್ಲಿ ನೃತ್ಯ ಕಲಿಕೆಯನ್ನು ಮುಂದುವರಿಸಿದಳು. ಅವರು ಆಯೋಜಿಸಿದ ಕಾರ್ಯಾಗಾರದಲ್ಲಿ ನಟುವಾಂಗ ಮಾಡುವುದನ್ನು ಕಲಿತಳು. ಹೇಮಾ ಅವರ ಸಂಪಾದಕತ್ವದ ‘ನೃತ್ಯ ಸಂಹಿತೆ’ -ನೃತ್ಯದ ಟೆಕ್ಸ್ಟ್ ಬುಕ್ ಹೊರತರುವಲ್ಲಿ ಸಹಾಯಕಿಯಾಗಿ ಅನುಭವ ಗಳಿಕೆ.
ಮುಂದೆ- ದೀಪಶ್ರೀ ‘ಪ್ರಭಾತ್ ಕಲಾವಿದರು’ ಕುಟುಂಬದ ಸದಸ್ಯೆಯಾದದ್ದು ಅವರ ಬೆಳವಣಿಗೆಗೆ ಪೂರಕವಾಯಿತು. ವಿದ್ವಾನ್ ಗೋಪೀನಾಥ ದಾಸರು ರೂಪಿಸಿ, ಅರ್ಪಿಸಿದ ಅನೇಕ ಪ್ರಸಿದ್ದ ನಿರ್ಮಾಣಗಳಾದ ಶ್ರೀ ಕೃಷ್ಣ ವೈಜಯಂತಿ, ಕರ್ನಾಟಕ ವೈಭವ, ಮೋಹಿನಿ ಭಸ್ಮಾಸುರ, ಪುಣ್ಯಕೋಟಿ, ವಿಜಯನಗರ ವೈಭವ, ಕರುನಾಡ ವೈಭವ, ಪುಣ್ಯಕೋಟಿ, ಸಿಂಡ್ರೆಲ್ಲಾ, ಮಹಿಷಾಸುರ ಮರ್ಧಿನಿ, ಧರ್ಮಭೂಮಿಯ ಜೊತೆಗೆ ಇತ್ತೀಚಿಗೆ ಪ್ರಖ್ಯಾತವಾದ ಶ್ರೀ ರಾಮ ಪ್ರತಿಕ್ಷಾ ನೃತ್ಯ ನಾಟಕಗಳಲ್ಲಿ, ರೂಪಕಗಳಲ್ಲಿ ಪ್ರಧಾನ ಪಾತ್ರದಲ್ಲಿ, ಭಾರತಾದ್ಯಂತವಲ್ಲದೆ, ಅಮೇರಿಕಾ ಸೇರಿದಂತೆ ಕುವೈತ್, ಮಸ್ಕಟ್, ಕತಾರ್ ನಲ್ಲಿ ನೃತ್ಯ ಪ್ರದರ್ಶನ ನೀಡಿರುವ ಹಿರಿಮೆ ಇವರದು.
ನಮ್ಮ ಸನಾತನ ಪರಂಪರೆ, ಸಂಸ್ಕೃತಿಯ ದ್ಯೋತಕವಾದ ‘ಹರಿಕಥೆ’ ಪ್ರಕಾರದಲ್ಲಿ ದೀಪಶ್ರೀ ಪರಿಶ್ರಮಿಸಿದ್ದು, ಉತ್ತಮ ಕಲಾವಿದೆಯೆನಿಕೊಂಡಿದ್ದಾರೆ. ಗೋಪೀನಾಥ ನ್ಯಾಸ ಆಯೋಜಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಹರಿಕಥಾ ಕೀರ್ತನೆ ನಡೆಸಿಕೊಟ್ಟಿರುವರು. ಪ್ರಸ್ತುತ ಇವರು ತಮ್ಮದೇ ಆದ ‘ಪ್ರಭಾತ್ ಕಲಾಗುಡಿ’ಯಲ್ಲಿ ಭರತನಾಟ್ಯ, ಹರಿಕಥೆ, ಅಭಿನಯ ಮತ್ತು ರಂಗಭೂಮಿಯ ತಾಂತ್ರಿಕ ವಿಷಯಗಳನ್ನು ಬೋಧಿಸುತ್ತಾರೆ.
ಅನೇಕ ಶಾಲೆಗಳ ವಿದ್ಯಾರ್ಥಿಗಳಿಗಾಗಿ ನೃತ್ಯರೂಪಕಗಳಿಗೆ ನೃತ್ಯ ಸಂಯೋಜಿಸಿದ್ದು, ತಮ್ಮ ಎಂಟನೆಯ ವಯಸ್ಸಿನಿಂದ ದೂರದರ್ಶನದಲ್ಲಿ ಅಭಿನಯಿಸಿ ಅನುಭವ ಗಳಿಸಿದ್ದರಿಂದ ಅಭಿನಯ ದೀಪಶ್ರೀಗೆ ಕರಗತ. ಅನೇಕ ಟಿವಿ ವಾಹಿನಿಗಳ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ಹೆಸರಿಸುವುದೆಂದರೆ- ಕ್ರೇಜಿ ಕರ್ನಲ್, ಮಾಯಾಮೃಗ, ಮನ್ವಂತರ, ಕಥಾಸಾಗರ, ಟೈಮ್ ಪಾಸ್ ತೆನಾಲಿ, ಮೌನರಾಗ, ಬೃಂದಾವನ, ಕಣ್ಣಾಮುಚ್ಚಾಲೆ, ಪಾಪ ಪಾಂಡು, ಯದ್ವಾತದ್ವಾ, ಪ್ರತಿಬಿಂಬ ಮುಂತಾದವು.
ಅಭಿನಯಿಸಿದ ಟೆಲಿಫಿಲಂಗಳೆಂದರೆ-ನಿನ್ನ ಜೊತೆ, ಚಂದ್ರವದನ, ಸೇತುವೆ ಮತ್ತು ನಮ್ಮೂರ ಕುಸುಮ ಮುಂತಾದವು. ನಿರ್ದೇಶಕ ಪಿ. ಶೇಷಾದ್ರಿಯವರ ರಾಷ್ಟ್ರ ಪ್ರಶಸ್ತಿ ವಿಜೇತ ’ಮುನ್ನುಡಿ’ ಚಲನಚಿತ್ರದಲ್ಲಿ ಅಭಿನಯ. ಅಭಿನಯಿಸಿದ ‘ಮುಮುಕ್ಷು’ -ಕಿರುಚಿತ್ರದ ಅಭಿನಯಕ್ಕೆ ‘ಉತ್ತಮ ನಟಿ’ ಪ್ರಶಸಿ ಸಂದಿದೆ. ಇದಲ್ಲದೆ ಇನ್ನೂ ಕೆಲವು ಕಿರುಚಿತ್ರಗಳ ನಟನೆಗೆ ಪ್ರಶಸ್ತಿ ಲಭಿಸಿದೆ. ಕನ್ನಡಭಾಷೆಯ ಮೇಲೆ ಹಿಡಿತವಿರುವ ದೀಪಶ್ರೀಗೆ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವುದು ಪ್ರೀತಿಯ ಹವ್ಯಾಸ.
ಆಕೆಯ ಎಲ್ಲ ಕಲಾಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಪತಿ ಹರೀಶ್ ಮತ್ತು ತಬಲಾ ಅಭ್ಯಾಸ ಮಾಡುತ್ತಿರುವ ಹತ್ತುವರ್ಷದ ಅವಳೀ ಮಕ್ಕಳಾದ ಪ್ರತ್ಯುಷ್ ಮತ್ತು ಪ್ರಜ್ವಲ್ ಅವರಿಂದ ಕೂಡಿದ ಸುಖೀ ಕುಟುಂಬ ದೀಪಶ್ರೀಯವರದು.
************
2 comments
ನೃತ್ಯ ಹಾಗೂ ರಂಗ ಕಲಾವಿದೆ ದೀಪಶ್ರೀ ಅವರ ವೈಯಕ್ತಿಕ ಹಾಗೂ ಸಾಧನೆಗಳ ಕುರಿತ ನಿಮ್ಮ ಲೇಖನ ಇಷ್ಟವಾಯಿತು.ಪ್ರಭಾತ್ ಕಲಾವಿದರು ಕುಟುಂಬದ ಪ್ರತಿಭೆಯು ಟೀವಿ ಧಾರಾವಾಹಿಗಳಲ್ಲಿ ಅಭಿನಯಿಸಿರುವುದನ್ನು ನೋಡಿದ್ದೆ.ಇದೀಗ ನಿಮ್ಮ ಲೇಖನದ ಮೂಲಕ ಪರಿಚಯ ಆದಂತಾಯಿತು.
ಗೌರವಪೂರ್ವಕ ನಮನಗಳು ಭಗವಾನ್ ಅವರೇ. ನನ್ನ ಲೇಖನ ನಿಮಗೆ ಮೆಚ್ಚುಗೆಯಾದುದಕ್ಕೆ ಅನಂತ ವಂದನೆಗಳು. ದಯವಿಟ್ಟು ಸಂಧ್ಯಾ ಪತ್ರಿಕೆಯ ನನ್ನೆಲ್ಲ ಬರಹಗಳನ್ನೂ ಓದಿ ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.