Image default
Dancer Profile

ಪ್ರತಿಭಾವಂತ ನೃತ್ಯಗುರು ವಿದುಷಿ ಕೆ.ಬೃಂದಾ

ಭರತನಾಟ್ಯದಲ್ಲಿ ಉತ್ತಮ ಶಿಕ್ಷಣ ಪಡೆದಿರುವ ವಿದುಷಿ ಬೃಂದಾ ನೃತ್ಯಕ್ಷೇತ್ರದಲ್ಲಿ ಖ್ಯಾತಿ ಪಡೆದ ಪ್ರತಿಭಾವಂತ ನೃತ್ಯ ಕಲಾವಿದೆ, ನಾಟ್ಯಗುರು, ನೃತ್ಯ ಸಂಯೋಜಕಿ, ಗಾಯಕಿ ಮತ್ತು ನಟವನ್ನಾರ್ ಕೂಡ. ಸುಮಾರು ಮೂರು ದಶಕಗಳ ಸುದೀರ್ಘ ಅನುಭವ ಹೊಂದಿರುವ ಇವರ ಸಾಧನೆಗೆ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ‘’ಕಲಾಶ್ರೀ’’ ಪ್ರಶಸ್ತಿ ನೀಡಿ ಗೌರವಿಸಿದೆ.

ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಹಿರಿಯ ಕವಿವರ್ಯ ಡಾ. ಪು.ತಿ.ನ. ಮತ್ತು ಸಾಹಿತ್ಯ ದಿಗ್ಗಜ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಉನ್ನತ ಸಂಸ್ಕಾರದ ಕುಟುಂಬಕ್ಕೆ ಸೇರಿದವರು ಬೃಂದಾ. ತಂದೆ ಕೃಷ್ಣ ಅಯ್ಯಂಗಾರ್ ಶಿಕ್ಷಕರು, ತಾಯಿ ಶ್ರೀಮತಿ ಗಾಯಕಿ ಮತ್ತು ಲೇಖಕಿ. ಅಣ್ಣ ಕರ್ನಾಟಕ ಕಲಾಶ್ರೀ ಪಡೆದ ವರದರಾಜನ್ ದೊಡ್ಡ ಸಂಗೀತ ವಿದ್ವಾಂಸರು, ಅಕ್ಕ ಶ್ರೀವಲ್ಲಿ ಅಂಬರೀಶ್ ಭರತನಾಟ್ಯ ಕಲಾವಿದೆ ಮತ್ತು ಹಿರಿಯ ನೃತ್ಯಗುರು. ಚಿಕ್ಕಮ್ಮ ಪ್ರಸಿದ್ಧ ಸಂಗೀತಗಾರ್ತಿ ಜಾಹ್ನವಿ ಜಯಪ್ರಕಾಶ್. ಇಂಥ ಸುಸಂಸ್ಕೃತ ವಾತಾವರಣದಲ್ಲಿ ಬೆಳೆದ ಬೃಂದಾ ಮೂರುವರ್ಷದ ಮಗುವಾಗಿದ್ದಾಗಲೇ ನೃತ್ಯಾಸಕ್ತಿ ತೋರಿದವರು. ಮಗಳಲ್ಲಿದ್ದ ಕಲಾವಂತಿಕೆಯನ್ನು ಗುರುತಿಸಿದ ತಾಯಿ, ಅವಳನ್ನು ಮೈಸೂರಿನ ಖ್ಯಾತ ನೃತ್ಯಗುರು ಡಾ.ವೆಂಕಟ ಲಕ್ಷಮ್ಮನವರಲ್ಲಿ ಭರತನಾಟ್ಯಾಭ್ಯಾಸಕ್ಕೆ ತೊಡಗಿಸಿದ್ದು ಬಾಲಕಿ ಬೃಂದಾಗೆ ನೃತ್ಯಕೃಷಿಗೆ ಗಟ್ಟಿ ಅಡಿಪಾಯ ದೊರೆಯಲು ಸಾಧ್ಯ ವಾಯಿತು. ಹನ್ನೆರಡನೆಯ ವರ್ಷಕ್ಕೆ ರಂಗಪ್ರವೇಶವಾಯಿತು. ನಾಟಕಾಭಿನಯ, ಮೃದಂಗ ನುಡಿಸಾಣಿಕೆಯಲ್ಲೂ ಅನುಭವವುಳ್ಳ ಬೃಂದಾಗೆ ಸಂಗೀತ-ನೃತ್ಯಗಳ ಸ್ಪರ್ಧೆಗಳಲ್ಲಿ ಬಂದ ಬಹುಮಾನಗಳು ಅಸಂಖ್ಯ. ಅತ್ಯಾಸಕ್ತಿ-ಶ್ರದ್ಧೆಯಿಂದ ನೃತ್ಯವನ್ನು ತಮ್ಮ ಬದುಕಿನಲ್ಲಿ ಆವಾಹಿಸಿಕೊಂಡ ಬೃಂದಾ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಸೀನಿಯರ್ ಪರೀಕ್ಷೆಯಲ್ಲಿ ಚಿನ್ನದ ಪದಕ ಮತ್ತು ವಿದ್ವತ್ ನಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡರು. ಮುಂದೆ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ನೃತ್ಯವನ್ನೇ ಪ್ರಧಾನ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಪದವೀಧರೆಯಾದರು. ಅಲ್ಲೂ ಪ್ರಥಮದರ್ಜೆ-ಚಿನ್ನದಪದಕ ಲಭಿಸಿತು.ಅನಂತರ  ನಾಟ್ಯಗುರು ತುಳಸಿ ರಾಮಚಂದ್ರ ಅವರ ನುರಿತ ಗರಡಿಯಲ್ಲಿ ಉನ್ನತ ನೃತ್ಯಶಿಕ್ಷಣ ದೊರೆಯಿತು. ಮುಂದೆ ಗುರು ಭಾನುಮತಿ ಅವರಲ್ಲೂ ಹೆಚ್ಚಿನ ತರಬೇತಿ ಪಡೆದುಕೊಂಡದ್ದು ಅವರ ವಿಶೇಷ.

ಇಷ್ಟರಲ್ಲಾಗಲೇ ಬೃಂದಾರ ಪ್ರತಿಭಾ ಪ್ರದರ್ಶನಗಳಿಗೆ ಸಾಕಷ್ಟು ಅವಕಾಶಗಳು ಒದಗಿ ಬಂದವು. ಎಲ್ಲೆಡೆ ಏಕವ್ಯಕ್ತಿ ಪ್ರದರ್ಶನ ನೀಡಿ ಕಲಾರಸಿಕರ ಹಾಗೂ ವಿಮರ್ಶಕರ ಮೆಚ್ಚುಗೆ ಓತಪ್ರೋತ. ಖ್ಯಾತ ಮೈಸೂರು ಸಿ.ರಂಗಯ್ಯ ವಿರಚಿತ ರಾಮಾಯಣ ಮತ್ತು ನರಸಿಂಹಾವತಾರ ನೃತ್ಯರೂಪಕದ ಎಲ್ಲ ಪಾತ್ರಗಳನ್ನೂ ಬೃಂದಾ ಏಕವ್ಯಕ್ತಿಯಾಗಿ ಅಭಿನಯಿಸಿ ೧೨೫ ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದು ದಾಖಲೆಯಾಯಿತು. ಸಂಕೀರ್ಣ ಅಡವುಗಳು, ಅಪೂರ್ವ ಭಂಗಿಗಳ ಪ್ರದರ್ಶನದಲ್ಲಿ ದೇಹದ ಮೇಲಿನ ನಿಯಂತ್ರಣ ಮತ್ತು ನೃತ್ತಾಭಿನಯದಲ್ಲಿ ವಿಶಿಷ್ಟ ಛಾಪೊತ್ತಿದ ಬೃಂದಾ, ನ್ರುತ್ಯರಂಗದಲ್ಲಿ ತಮ್ಮ ಅಸ್ಮಿತೆಯನ್ನು ತೋರ್ಪಡಿಸಿ ಸಾಧನೆಯ ಪಥದಲ್ಲಿ ಸಾಗತೊಡಗಿದ್ದು ಅವರ ಅಗ್ಗಳಿಕೆ. ಅವರನ್ನರಸಿ ಬಂದ ಗೌರವ-ಪ್ರಶಸ್ತಿಗಳು ಒಂದೆರಡಲ್ಲ. ಅಭಿನಯ ಶಾರದೆ, ಬೆಂಗಳೂರು ರತ್ನ, ನೃತ್ಯ ನಿಪುಣೆ ಮತ್ತು ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಮತ್ತು ಕಲಾಶ್ರೀ ಅವರ ಮುಕುಟಕ್ಕೇ ರಿದ ಹೆಮ್ಮೆಯ ಗರಿಗಳು.

ಬೋಧಕರ ಗಮನ ಸೆಳೆದಿದ್ದ ಈ ಪ್ರತಿಭಾವಂತ ವಿದ್ಯಾರ್ಥಿಗೆ ಓದಿದ ಕಾಲೇಜಿನಲ್ಲೇ ಉಪನ್ಯಾಸಕ ವೃತ್ತಿ ದೊರೆಯಿತು. ಕೆಲವೇ ತಿಂಗಳುಗಳಲ್ಲಿ ಸರ್ಕಾರಿ ಶಾಲೆಯಲ್ಲಿ ನೃತ್ಯ ಶಿಕ್ಷಕಿಯ ಹುದ್ದೆ ದೊರೆತು , ಮುಂದೆ ಅವರ ವೃತ್ತಿಬದುಕು ಸಂಪೂರ್ಣ ನೃತ್ಯಮಯವೇ ಆಯಿತು. ಹೀಗೆ ಎರಡು ದಶಕಗಳ ಕಾಲ ವೃತ್ತಿ-ಪ್ರವೃತ್ತಿಗಳೆರಡರಲ್ಲೂ ಅರ್ಪಣಾ ಮನೋಭಾವದಿಂದ ಶ್ರಮಿಸಿದ ಬೃಂದಾ, ತಮ್ಮದೇ ಆದ ‘ಅನನ್ಯ ಕಲಾನಿಕೇತನ’ ನೃತ್ಯಶಾಲೆಯಲ್ಲಿ ನೂರಾರು ಮಕ್ಕಳಿಗೆ ನಿಷ್ಠೆಯಿಂದ ನೃತ್ಯ ವಿದ್ಯಾದಾನ ಮಾಡಿದ್ದು ಅವರ ಬದ್ಧತೆಯ ಇನ್ನೊಂದು ಮುಖ.

ವಿಶ್ವಾದ್ಯಂತ ಇವರ ಶಿಷ್ಯರು ನೃತ್ಯಗುರುಗಳಾಗಿ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ನೃತ್ಯರಂಗದಲ್ಲಿ ಶ್ರಮಿಸುತ್ತಿದ್ದಾರೆ. ಈ ಮಧ್ಯೆ ಅವರು ಧಾರವಾಡ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡರು. ಇವರು, ಶಾಸ್ತ್ರೀಯ ಭರತನಾಟ್ಯದಲ್ಲಿ ಪಾರಂಗತೆಯಾಗಿದ್ದರೂ ತಮ್ಮ ಸೃಜನಾತ್ಮಕ, ಹೊಸಪ್ರಯೋಗ-ಪರಿಕಲ್ಪನೆಗಳಿಗೆ ಶಾಸ್ತ್ರದ ಬೇಲಿ ಹಾಕಿಕೊಂಡಿರಲಿಲ್ಲ. ಹೊಸತನಕ್ಕೆ ತುಡಿಯುವ ಮುಕ್ತ ಮನಸ್ಸ್ತು ಅವರದಾಗಿದ್ದ ಕಾರಣ, ವಿವಿಧ ಜಾನಪದ ಶೈಲಿಗಳಿಗೂ ತೆರೆದುಕೊಂಡರು. ಕನ್ನಡ, ಗುಜರಾತಿ ಮತ್ತು ಪಂಜಾಬಿ ಜಾನಪದ ನೃತ್ಯಗಳಲ್ಲಿ ವಿಶೇಷ ಪರಿಣತಿ ಪಡೆದುಕೊಂಡು,  ದೇಶಾದ್ಯಂತ  ತಂಡದೊಂದಿಗೆ ಅನೇಕ ಪ್ರತಿಷ್ಟಿತ ನೃತ್ಯೋತ್ಸವಗಳಲ್ಲಿ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನಗಳನ್ನು ಪ್ರಸ್ತುತಪಡಿಸಿದ ಹೆಮ್ಮೆ ಇವರದು. ಬೃಂದಾರ ಮಗಳು ಅನನ್ಯ, ತಾಯಿಯಂತೆಯೇ ಅತ್ಯಂತ ಪ್ರತಿಭಾವಂತಳಾಗಿದ್ದು , ಭರತನಾಟ್ಯದ ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದಲ್ಲದೆ ಎರಡು ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೂ ಭಾಜನಳಾಗಿ , ತಾಯಿಯಾ ಜೊತೆ ಜೋಡಿಯಾಗಿ ಮಲೇಶಿಯಾ, ದುಬೈ ಮುಂತಾದೆಡೆ ನೃತ್ಯ ಪ್ರದರ್ಶನ ನೀಡಿದ್ದಾಳೆ.

ಉತ್ತಮ ಗಾಯಕಿ, ನಟುವನ್ನಾರ್ ಆದ ಬೃಂದಾ, ನೃತ್ಯಸಂಯೋಜನೆಯಲ್ಲೂ ಗುಣಮಟ್ಟ ಕಾಪಾಡಿಕೊಂಡವರು. ಅವರ ಪ್ರಸಿದ್ಧ ನೃತ್ಯರೂಪಕಗಳೆಂದರೆ, ಶ್ರೀ ವೆಂಕಟೇಶ್ವರ ವೈಭವ, ಶ್ರೀಕೃಷ್ಣ ಲೀಲಾ, ಶಿವಶಕ್ತಿ, ಮೋಹಿನಿ ಭಸ್ಮಾಸುರ, ಮಹಾದೇವಿ ಮತ್ತು ಗಂಗಾವತರಣ ಮುಂತಾದವು. ಸರ್ಕಾರಿ ಶಾಲೆಯಲ್ಲಿ ಬೃಂದಾ, ಪರೀಕ್ಷಾ ಮಂಡಳಿ ನಡೆಸುವ ಎಲ್ಲ ನೃತ್ಯ ಪರೀಕ್ಷೆಗಳ ನಿರ್ವಾಹಕಿಯಾಗಿ ಎರಡುದಶಕಗಳ ಕಾಲ  ನಿಸ್ಪ್ರುಹ ಸೇವೆ ಸಲ್ಲಿಸಿ, ಸ್ವಯಂನಿವೃತ್ತಿ ಪಡೆದರೂ, ಇಂದೂ ಆ ಜವಾಬ್ದಾರಿಗಳು ಅವರ ಹೆಗಲನ್ನು ಬಿಟ್ಟಿಲ್ಲ. ಅವರ ನುರಿತಾನುಭವ ಸಾಮರ್ಥ್ಯವನ್ನು ಮನಗಂಡ ಸರ್ಕಾರ, ಅವರ ನಿಸ್ವಾರ್ಥ ಸೇವೆಯನ್ನು ಇನ್ನೂ ಬಳಸಿಕೊಳ್ಳುತ್ತಿದೆ ಎಂಬುದು ಬೃಂದಾ ಅವರ ಧನಾತ್ಮಕಾಂಶ.  

Related posts

ಕಡಲಾಚೆಯ ಅಪೂರ್ವ ನೃತ್ಯಪ್ರತಿಭೆ ಶ್ರೀದೇವಿ ಜಗನ್ನಾಥ್

YK Sandhya Sharma

ಕೂಚಿಪುಡಿ ನೃತ್ಯಾಭಿನಯ ಕುಶಲಿ ಸರಸ್ವತಿ ರಜತೇಶ್

YK Sandhya Sharma

ಪ್ರತಿಭಾ ಸಂಪನ್ನೆ ಸಂಧ್ಯಾ ಕೇಶವ ರಾವ್

YK Sandhya Sharma

Leave a Comment

This site uses Akismet to reduce spam. Learn how your comment data is processed.