ಅಭಿನಯ, ನರ್ತನ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಿರುವ ಬಹುಮುಖ ಚಟುವಟಿಕೆಯ ಪ್ರತಿಭಾಶಾಲಿ ಚೈತ್ರ, ಚೈತನ್ಯದ ಚಿಲುಮೆ. ದಿನವಿಡೀ ಒಂದಲ್ಲ ಒಂದು ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವ ಚೈತ್ರ ಚಿಕ್ಕಂದಿನಿಂದ ತನ್ನ ಪ್ರತಿಭೆಯ ಛಾಪು ತೋರುತ್ತಲೇ ಬಂದವಳು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿರಿಯ ಸ್ಥಾನದಲ್ಲಿದ್ದ ತಂದೆ ನರಸಿಂಹಸ್ವಾಮಿ , ಗೃಹಿಣಿಯಾದ ತಾಯಿ ಮಹಾಲಕ್ಷ್ಮಿ ಅವರ ಸಂಪೂರ್ಣ ಆಸಕ್ತಿ-ಬೆಂಬಲಗಳಿಂದ ಬಾಲಕಿ ಚೈತ್ರಾಗೆ ಕಲಾಪಥದಲ್ಲಿ ಉತ್ತಮ ಮಾರ್ಗದರ್ಶನ ದೊರೆಯಿತು. ಮಗಳಲ್ಲಿದ್ದ ಕಲಾಸಕ್ತಿ ಅವರ ಗಮನ ಸೆಳೆದಿತ್ತು. ಮೂರುವರ್ಷದ ಬಾಲಕಿ ಮೈಸೂರಿನ ಖ್ಯಾತ ನೃತ್ಯ ಗುರುಗಳಾದ ವಿ.ಕೃಪಾ ಫಡ್ಕೆ ಅವರಲ್ಲಿ ಭರತನಾಟ್ಯ ಕಲಿಯಲು ಸೇರ್ಪಡೆಯಾದಳು.
ತಂದೆಗೆ ವಿವಿಧ ಸ್ಥಳಗಳಿಗೆ ಆಗಾಗ ವರ್ಗವಾಗುತ್ತಿದ್ದ ಕಾರಣ ಚೈತ್ರಳ ನೃತ್ಯಾಭ್ಯಾಸದ ಗುರುಗಳೂ ಬದಲಾಗುವುದು ಅನಿವಾರ್ಯವಾಯಿತು. ದಾವಣಗೆರೆಯಲ್ಲಿ ವಿ. ಪೂರ್ಣಿಮಾ ಭಾಗವತರ್ ಬಳಿ ಅಭ್ಯಾಸ ಮುಂದುವರಿಸಿ ಅವರ ತರಬೇತಿಯಲ್ಲಿ ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಉನ್ನತಾಂಕಗಳನ್ನು ಪಡೆದುಕೊಂಡಳು. ಸುಮಧುರ ಕಂಠವೂ ಹೊಂದಿದ್ದ ಕಾರಣ ಜೊತೆ ಜೊತೆಯಲ್ಲಿ ಸಂಗೀತಾಭ್ಯಾಸವೂ ನಡೆಯಿತು. ಬೆಂಗಳೂರಿಗೆ ಬಂದ ನಂತರ ಸ್ಮಿತಾ ಶ್ರೀಪತಿಯವರಲ್ಲಿ ನಾಟ್ಯಾಭ್ಯಾಸ ಮುಂದುವರಿಯಿತು. ಈ ಮಧ್ಯೆ ಅನೇಕ ವೇದಿಕೆಯ ಕಾರ್ಯಕ್ರಮಗಳನ್ನು ನೀಡುತ್ತ ಕಲಾರಸಿಕರ ಮೆಚ್ಚುಗೆ ಪಡೆಯುತ್ತಾ ಬಂದ ಚೈತ್ರ, ಇನ್ನೂ ಹೆಚ್ಚಿನ ಆಸಕ್ತಿ-ಕಠಿಣ ಶ್ರಮದಿಂದ ತನ್ನ ನೃತ್ಯಾಭ್ಯಾಸ ಮುಂದುವರಿಸಿದಳು. ಆನಂತರ ವಿ. ಪ್ರಿಯಶ್ರೀ ರಾವ್ ಅವರಲ್ಲಿ ನೃತ್ಯ ತರಪೇತು ಪಡೆದು, ತಂಜಾವೂರಿನ ತಮಿಳು ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಡಿಸ್ಟಿಂಕ್ಷನ್ ನಲ್ಲಿ ಪಡೆದ ಹೆಮ್ಮೆ ಇವಳದು.
ಬಾಲ್ಯದಿಂದ ಓದಿನಲ್ಲೂ ಜಾಣೆಯಾಗಿದ್ದ ಚೈತ್ರ ಎಲ್ಲ ಕಲಾಪ್ರಕಾರಗಳಲ್ಲೂ ತನ್ನ ಸಮಾನ ಆಸಕ್ತಿ ತೋರಿದ್ದರ ಫಲ ಅವಳು ‘ಆಲ್ರೌಂಡರ್’ ಎನಿಸಿಕೊಂಡಿದ್ದಳು. ತಾನು ಓದಿದ್ದ ಡೈಸಿ ಮತ್ತು ಸೇಂಟ್ ಪಾಲ್ಸ್ ಕಾನ್ವೆಂಟುಗಳಲ್ಲಿ ಅವಳು ಶಾಲೆಯ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಅನೇಕ ಬಹುಮಾನಗಳನ್ನು ಗಳಿಸುವುದು ವಾಡಿಕೆಯಾಗಿತ್ತು. ಸಂಗೀತ-ನೃತ್ಯ- ಅಭಿನಯ ಮತ್ತು ಚಿತ್ರಕಲೆಯ ಸ್ಪರ್ಧೆಗಳಲ್ಲಿ ಬಹುಮಾನಗಳ ಸೂರೆ. ಆಶುಭಾಷಣ, ಚರ್ಚಾಸ್ಪರ್ಧೆ, ವಿವಿಧ ವೇಷಭೂಷಣ ಛದ್ಮವೇಶ, ಕಥಾ ನಿರೂಪಣೆ, ಸಂಸ್ಕೃತ ಕಂಠಪಾಠ ಎಲ್ಲ ವಿಭಾಗಳಲ್ಲೂ ನಿಪುಣೆ ಎನಿಸಿಕೊಂಡು ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದಳು ಚೈತ್ರ.
ಅವಳ ಕಲಾ ಚಟುವಟಿಕೆಗಳು ಕಾಲೇಜಿಗೆ ಬಂದಾಗಲೂ ಉತ್ಸಾಹದಿಂದ ಮುಂದುವರಿದವು. ತುಮಕೂರಿನ ಸರ್ವೋದಯ ಕಾಲೇಜಿನಲ್ಲಿ ಪಿ.ಯೂ.ಸಿ. ಮುಗಿಸಿ, ಬೆಂಗಳೂರಿನ ರೇವಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಕಂಪ್ಯೂಟರ್ ಸೈನ್ಸ್’ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬಿ.ಇ. ಪದವೀಧರೆಯಾದಳು. ನೃತ್ಯ ಚೈತ್ರಳ ಜೀವನದ ಅವಿಭಾಜ್ಯ ಅಂಗವಾಗಿದ್ದುದರಿಂದ ಅವಳು ನರ್ತಿಸದ ದಿನವಿರಲಿಲ್ಲ. ನಿಷ್ಠೆಯಿಂದ ನೃತ್ಯಾಭ್ಯಾಸ ಮಾಡುವುದು ದಿನಚರಿಯಾಗಿತ್ತು. ನಾಡಿನ ವಿವಿಧ ದೇವಾಲಯಗಳಲ್ಲಿ, ಸಾಂಸ್ಕೃತಿಕ ವೇದಿಕೆಗಳಲ್ಲಿ ಅವಳ ಪ್ರತಿಭಾ ಪ್ರದರ್ಶನಕ್ಕೆ ಕಲಾರಸಿಕರು ಸಾಕ್ಷಿಯಾದರು. ಮೆಚ್ಚುಗೆಯ ಮಹಾಪೂರ ಅವಳ ಹುರುಪನ್ನು ಇಮ್ಮಡಿಗೊಳಿಸಿತು. ಮುಂದೆ-ಪ್ರಸಿದ್ಧ ನೃತ್ಯಪಟು-ಗುರು ಕಿರಣ್ ಸುಬ್ರಹ್ಮಣ್ಯಂ ದಂಪತಿಗಳ ಗರಡಿಯಲ್ಲಿ ಚೈತ್ರ, ನೃತ್ಯದ ಹೊಸ ಆಯಾಮಗಳನ್ನು ರೂಢಿಸಿಕೊಳ್ಳಲು ‘ರಸಿಕ’ ಶಾಲೆಗೆ ಸೇರ್ಪಡೆಯಾದಳು. ಇಂದು ‘ರಸಿಕ’ ತಂಡದ ಭಾಗವಾಗಿ ತನ್ನ ನೃತ್ಯಚೈತನ್ಯವನ್ನು ಪೂರ್ಣ ಪ್ರಮಾಣದಲ್ಲಿ ದುಡಿಸಿಕೊಳ್ಳುತ್ತ, ನೃತ್ಯಾನುಭಾವದ ಆನಂದದ ಮಜಲುಗಳನ್ನೇರುತ್ತಿರು ವುದು ಸ್ತುತ್ಯಾರ್ಹ ಮುನ್ನಡೆ. ಶ್ರೀ ಕಿರಣ್ ಅವರ ನೇತೃತ್ವದಲ್ಲಿ ನಡೆದ ಅವಳ ಸಾರ್ಥಕ ‘ರಂಗಪ್ರವೇಶ’ ಅವಳ ಸ್ಮರಣೀಯ ಅನುಭವಗಳಲ್ಲಿ ಒಂದು. ಸಾಫ್ಟವೇರ್ ಇಂಜಿನಿಯರಾಗಿ ಉದ್ಯೋಗ ಮಾಡುತ್ತಾ ಸತತ ನೃತ್ಯ ಪ್ರದರ್ಶನ ನೀಡುತ್ತ ಬಂದಿರುವುದು ಅವಳ ನೃತ್ಯಾಸಕ್ತಿಯ ದ್ಯೋತಕ.
ನೃತ್ಯದ ಜೊತೆ ಚೈತ್ರ, ಪ್ರಸ್ತುತ ವಿ. ಸುಮನಾರಾವ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮುಂದುವರಿಸಿದ್ದಾಳೆ. ಶ್ರೀ ಪ್ರಸಾದ್ ಚೆರ್ಕಾಡಿ ಬಳಿ ಯಕ್ಷಗಾನ ಕಲಿಯುತ್ತಿದ್ದಾಳೆ. ಚಿತ್ರ ರಚನೆ ಮತ್ತು ಪೇಂಟಿಂಗ್ ನಲ್ಲಿ ಕರ್ನಾಟಕ ಸರ್ಕಾರದ ಗ್ರೇಡ್ ಪರೀಕ್ಷೆಗಳನ್ನು ಮುಗಿಸಿಕೊಂಡಿರುವ ಇವಳು, ಚಿತ್ರಗಳನ್ನು ರಚಿಸುವ ಉತ್ತಮ ಹವ್ಯಾಸದಲ್ಲೂ ನಿರತಳಾಗಿದ್ದಾಳೆ. ಕೇವಲ ಶಾಸ್ತ್ರೀಯ ನೃತ್ಯಗಳಲ್ಲಿ ಮಾತ್ರವಲ್ಲದೆ, ಯಕ್ಷಗಾನ, ಜಾನಪದ ನೃತ್ಯ ಪ್ರವೀಣೆಯಾದ ಚೈತ್ರ, ಕಾನ್ಟೆಂಪೋರರಿ ನೃತ್ಯಶಿಕ್ಷಣವನ್ನೂ ಪಡೆದು ‘’ಆಹನ್ ಎನ್ಸೆಮ್ಬಲ್’’ ನೃತ್ಯತಂಡದಲ್ಲಿ ನೃತ್ಯಪ್ರದರ್ಶನಗಳನ್ನು ನೀಡುತ್ತ ಬಂದಿರುವುದು ಇವಳ ವೈಶಿಷ್ಟ್ಯ.
ಇತ್ತೀಚಿಗೆ ಟಿ.ಎಸ್. ನಾಗಾಭರಣರ ನಿರ್ದೇಶನದಲ್ಲಿ ಸಂಗೀತ ವಿದುಷಿ ಪಿ. ರಮಾ ನೇತೃತ್ವದ ‘ಸಂಗೀತ ಸಂಭ್ರಮ’ ಮತ್ತು ‘ಬೆನಕ’ ಸಂಸ್ಥೆಗಳು ಪ್ರದರ್ಶಿಸಿದ ‘ಬೆಂಗಳೂರು ನಾಗರತ್ನಮ್ಮ’ ನಾಟಕದಲ್ಲಿ ಚೈತ್ರ ಮುಖ್ಯಪಾತ್ರದಲ್ಲಿ ಬಹು ಚೂಟಿಯಾಗಿ ನಟಿಸಿ ತನ್ನ ನಟನಾ ಪ್ರತಿಭೆಯನ್ನು ಸಾಬೀತು ಮಾಡಿದ್ದಾಳೆ. ಅನೇಕ ವಾಣಿಜ್ಯ ಜಾಹೀರಾತುಗಳಲ್ಲಿ ಅಭಿನಯಿಸಿ ಗಮನ ಸೆಳೆದಿರುವುದಲ್ಲದೆ ಇವಳು, ಕೆಲವು ಕನ್ನಡ ಚಲನಚಿತ್ರಗಳು, ಷಾರ್ಟ್ ಫಿಲಂ ಗಳಿಗೆ ‘ಡಬ್ಬಿಂಗ್ ಆರ್ಟಿಸ್ಟ್’ ಆಗಿ ಕಂಠದಾನ ಮಾಡಿ ತನ್ನ ಬಹುಮುಖೀ ಆಸಕ್ತಿ-ಪ್ರತಿಭೆಗಳನ್ನು ಸಾಕ್ಷೀಕರಿಸಿದ್ದಾಳೆ. ಬರವಣಿಗೆಯಲ್ಲೂ ಪರಿಶ್ರಮ ಹೊಂದಿರುವ ಚೈತ್ರ ಕಂಟೆಂಟ್ ಲೇಖಕಿ, ಕನ್ನಡ ಕಥೆ-ಕವನಗಳ ರಚಯಿತ್ರಿ ಕೂಡ. ತಾನು ಎಂಜಿನಿಯರಿಂಗ್ ಓದಿದ ರೇವಾ ಸಂಸ್ಥೆಯಿಂದ ‘ಬೆಸ್ಟ್ ಸ್ಟೂಡೆಂಟ್-ಎಕ್ಸಲೆನ್ಸಿ ಇನ್ ಆಲ್ ಆರ್ಟ್ಸ್ ಅಂಡ್ ಕಲ್ಚರ್’ ಎಂಬ ಪ್ರಶಸ್ತಿ ಪಡೆದಾಕೆ. ದೇಶ-ವಿದೇಶಗಳಲ್ಲಿ ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಹೆಮ್ಮೆಯ ನೃತ್ಯಗಾತಿ ಕೂಡ ಇವಳು. ಪ್ರಸ್ತುತ ಯಲಹಂಕದಲ್ಲಿ ತನ್ನದೇ ಆದ ‘ರುಕ್ಮಿಣಿ ನೃತ್ಯಶಾಲೆ’ ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ನಾಟ್ಯಶಿಕ್ಷಣ ನೀಡುತ್ತಿರುವ ನೃತ್ಯಗುರು ಎಂಬ ಹಿರಿಮೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ, ಯುನೈಟೆಡ್ ಕಿಂಗ್ಡಂ ನ ಎಡಿನ್ಬರ್ಗ್ ನಲ್ಲಿ ಮತ್ತು ಯುಕೆ ಯ ವಿವಿಧ ಭಾಗಗಳಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ ಅಗ್ಗಳಿಕೆ ಇವಳದು. ದೇಶದಾದ್ಯಂತ ವಿವಿಧ ಸಂಸ್ಥೆಗಳು ಆಯೋಜಿಸಿದ ಅಖಿಲಭಾರತ ನಾಟ್ಯೋತ್ಸವಗಳು, ಯುವಸೌರಭ, ದಸರಾ, ದೀಪಾವಳಿ, ಸ್ವಾತಂತ್ರ್ಯೋತ್ಸವ ಮುಂತಾದ ಅನೇಕ ಸಮಾರಂಭಗಳಲ್ಲಿ ಮತ್ತು ‘ ಬಿ’ ಟಿವಿ ಉದ್ಘಾಟನ ಸಮಾರಂಭಗಳಲ್ಲದೆ ಅನೇಕ ಕಾರ್ಪೋರೆಟ್ ನೃತ್ಯ ಕಾರ್ಯಕ್ರಮಗಳಲ್ಲ್ಲಿ ನರ್ತಿಸಿರುವ ಖ್ಯಾತಿ ಇವಳದು.
ಚೈತ್ರಳ ವಿವಿಧ ಚಟುವಟಿಕೆಗಳಿಗೆ ಅನೇಕ ಪ್ರಶಸ್ತಿ-ಬಿರುದು, ಸನ್ಮಾನಗಳು ಸಂದಿರುವುದು ಅತ್ಯಂತ ಸಹಜ. ಪುಟ್ಟ ಬಾಲಕಿಯಾದಾಗಿನಿಂದಲೂ ಪ್ರಶಸ್ತಿಗಳ ಗೌರವ. ಅರಳು ಮಲ್ಲಿಗೆ, ಶ್ರೀಗಂಧ ಕಲಾ ಸಿಂಚನ, ಬಾಲನಾಟ್ಯ ಮಯೂರಿ, ಜ್ಞಾನಶ್ರೀ, ಕರ್ನಾಟಕ ಕಲಾರತ್ನ, ಕರ್ನಾಟಕ ಬೆಳ್ಳಿಕಿರಣ, ಮಯೂರ ಪ್ರಶಸ್ತಿಗಳು ಅವಳ ಮುಡಿಗೇರಿದ ಹೆಮ್ಮೆಯ ಗರಿಗಳು.
*****************************