Image default
Short Stories

ಆಸ್ತಿಕರು

ರಸ್ತೆಯ ತಿರುವಿನಲ್ಲಿ ತಿರುಗುವಾಗಲೇ ಮನೆಯ ಮುಂದೆ ದೊಡ್ಡ ಗುಂಪು ಗೂಡಿರುವುದು ಕಂಡಿತು. ಎದೆ ಡಬಡಬ ಹೊಡೆದುಕೊಂಡಿತು. ನಡಿಗೆಯನ್ನು ವೇಗಗೊಳಿಸಿದೆ. ಮುಂಜಾನೆ ಹೆಂಡತಿ ಎದೆನೋವೆಂದು ಹೇಳುತ್ತಿದ್ದರೂ ಅಲಕ್ಷಿಸಿ ತಾನು ಕಾಲೇಜಿಗೆ ಹೊರಟುಬಂದಿದ್ದು ತಪ್ಪಾಯಿತೆಂದು ಮತ್ತೆ ಮತ್ತೆ ಅಂದುಕೊಳ್ಳುತ್ತ ಕಂಗಾಲಾದಾಗ ನನ್ನ ಕಲ್ಪನೆಯಲ್ಲಿರದ ದೇವರ ಚಿತ್ರಗಳೆಲ್ಲ ಕಣ್ಣೆದುರು ಬಂದು ನಿಂತವು.

ದೇವರನ್ನು ಮೊರೆ ಹೋಗಲು ನಾಚುತ್ತ ನನ್ನ ಮನ ಹಿಂಜರಿಯುತ್ತಿದ್ದುದು, ಮನೆಯೊಳಗೆ ಮುಕುರುತ್ತಿದ್ದ ಜನರನ್ನು ಕಾಣುತ್ತ ತಲ್ಲಣಿಸಿ ತನ್ನರಿವಿಲ್ಲದೆ ದೇವರನ್ನು ಜಪಿಸಿತು. ಭಾರವಾಗುತ್ತಿದ್ದ ಕಾಲನ್ನು ಎಳೆದಿಡುತ್ತ, ಏದುಸಿರನ್ನು ಬಿಡುತ್ತ ಮೆಲ್ಲನೆ ಗುಂಪಿನೊಳಗೆ ನುಸುಳಿ ಮನೆಯ ಒಳ ಹೊಕ್ಕೆ.

ನನ್ನ ನಿರೀಕ್ಷೆಯ ದೃಶ್ಯಕ್ಕೆ ವಿರುದ್ಧವಾಗಿ ನನ್ನವಳು ಜಗುಲಿಯ ಮೇಲೆ ಲವಲವಿಕೆಯಿಂದ ಹರಟುತ್ತ ಕುಳಿತಿದ್ದಾಳೆ! ವಿಶಾಲ ಅಂಗಳದ ಮಲ್ಲಿಗೆ-ಜಾಜಿ ಬಳ್ಳಿಗಳ ಗಿಡಗಳ ಮಗ್ಗುಲ ಜಾಗದಲ್ಲಿ ಜನ ಗುಂಪು. ಮುಗಿದ ಕೈಗಳು. ನಾನು ಪ್ರಶ್ನಾರ್ಥಕವಾಗಿ ದಿಟ್ಟಿಸಿದೆ. ಸಂದಿಯೊಳಗೆ ಕಣ್ಣು ತೂರಿಸಿ ನೋಡಿದೆ. ಒಂದು ಸಣ್ಣ ಹೂವಿನ ಗೋಪುರ. ಎಲ್ಲರ ಮುಖಗಳಲ್ಲೂ ಭಕ್ತಿಭಾವ ಕೆನೆಗಟ್ಟಿರುವುದನ್ನು ಕಂಡು ದಿಗ್ಭಮೆಯಾಯಿತು!

ಅಮ್ಮ ನನ್ನನ್ನು ಕಾಣುತ್ತಲೇ, “ನೋಡಪ್ಪ ರಾಜಣ್ಣ, ನಿಂಗೆ ಬುದ್ಧಿ ಕಲಿಸಲಿಕ್ಕೆ ನಾಗಪ್ಪನೇ ನಮ್ಮ ಮನೆಗೆ ಬಂದಿದ್ದಾನೆ” ಎಂದು ಆಶ್ಚರ್ಯ ತುಳುಕಿಸುತ್ತ ಹೇಳಿದ ಮಾತು ಅರ್ಥವಾಗದೆ, ನೆಲದ ಮೇಲೆ ಅರಳಿದ್ದ ಹೂವಿನ ಗುಪ್ಪೆಯನ್ನೇ ಮಿಕಿ ಮಿಕಿ ದೃಷ್ಟಿಸಿದೆ.

“ತಮಾಷೆ ನೋಡಣ್ಣ ಇಲ್ಲಿ… ಮಹಾ ನಾಸ್ತಿಕನ ಮನೆಯಲ್ಲೇ ದೇವ್ರು ಹುಟ್ಟಿದ್ದಾನೆ”

-ನನ್ನ ಹಿರಿಯ ಮಗಳು ಲೇವಡಿ ಮಾಡಿದಾಗ, ನಾನು ಮತ್ತಷ್ಟು ಸಂದಿಗ್ಧಕ್ಕೆ ಸಿಲುಕಿ ಗಲಿಬಿಲಿಗೊಂಡೆ.

ಸುತ್ತ ನೆರೆದಿದ್ದವರು, “ಕಲಿಯುಗದಲ್ಲಿ ಪರಮಾತ್ಮ ಭಕ್ತರ ಕಣ್ಣಿಗೆ ಕಾಣಿಸ್ಕೋಳಲ್ಲ. ಹಾಗೆ ಹೀಗೆ ಅಂತಾರಲ್ಲ… ಉಂಟೇ?… ಈ ಚೋದ್ಯಕ್ಕೇನು ಹೇಳ್ತೀರಾ?……. ಸರಿಯಾಗಿ ಸುಬ್ರಹ್ಮಣ್ಯನ ದೇವಸ್ಥಾನದ ಎದುರು ಮನೆಯಲ್ಲೇ ನಾಗಪ್ಪ ಕಾಣಿಸ್ಕೊಂಡಿದ್ದಾನಲ್ಲಾ!?” ಎನ್ನುತ್ತ ಮೂಗಿನ ಮೇಲೆ ಬೆರಳು ಇರಿಸಿಕೊಂಡರು.

ಉಹುಂ… ಇಷ್ಟಾದರೂ ನನಗೆ ನಡೆದ ಸಂಗತಿಯ ತಳ ಬುಡ ಅರ್ಥವಾಗಲಿಲ್ಲ. ಎಲ್ಲರಿಗೂ ಹುಚ್ಚು ಹಿಡಿಯಿತೇ ಎಂದು ಆಶ್ಚರ್ಯವಾಯಿತು. ಪಕ್ಕದ್ಮನೆ ಮಡಿ ಹೆಂಗಸು ಅಂಬಕ್ಕನ ಮಾತು ಒಗಟಿನ ಗುಂಪಿಗೇ ಸೇರಿತು.

 “ನೆನ್ನೆಯೆಲ್ಲಾ ನಾವು ನಾಗಪ್ಪನ ಬಗ್ಗೆಯೇ ಮಾತ್ನಾಡ್ತಿದ್ವು ನೋಡಿ ಸೀತಮ್ಮ”

ಅಮ್ಮ ಮುಖದಲ್ಲಿ ವಿಸ್ಮಯ ಬೆರೆಸಿ ಹೌದೆನ್ನುತ್ತ ಭಕ್ತಿಯಿಂದ ಅರೆಗಣ್ಣು ಮುಚ್ಚಿ ಪಟಪಟ ಕೆನ್ನೆ ಬಡಿದುಕೊಂಡು, ಬಾಯಲ್ಲಿ ಪಿಟಿಪಿಟಿಸುತ್ತ ಹೂವಿನ ಗುಪ್ಪೆಗೆ ಮೂರು ಪ್ರದಕ್ಷಿಣೆ ಬಂದು ಅಡ್ಡ ಬಿದ್ದಾಗ ನನಗೆ ನಗು ತಡೆಯಲಾಗಲಿಲ್ಲ.

ಅಷ್ಟರಲ್ಲಿ ಜನ ಒಬ್ಬರ ಮೇಲೊಬ್ಬರು ಬಿದ್ದು ನುಗ್ಗಲಾರಂಭಿಸಿದರು. ನಮಸ್ಕಾರ ಸೇವೆಗೆ ಸಣ್ಣ ಗಲಾಟೆಯೇ ಶುರುವಾಯಿತು.

“ಚೆನ್ನಾಗಿದೆ ತಮಾಷೆ” ಎಂದುಕೊಳ್ಳುತ್ತ ಮನದೊಳಗೆ ನಗುತ್ತ ನಡೆಯುತ್ತಿದ್ದ  ನಾಟಕವನ್ನು ವೀಕ್ಷಿಸತೊಡಗಿದೆ. ಗುಂಪನ್ನು ತಡೆಗಟ್ಟಲು ಆಚೆ ಮನೆಯ ರಾಮು-ನಾಣಿ ಸ್ವಯಂಸೇವಕರಾಗಿ ನಿಂತು, “ಸದ್ದು…ಸದ್ದು… ಎಲ್ಲಾ ಸಾಲಾಗಿ ಸಾವಕಾಶವಾಗಿ ಬಂದು, ಪರಮಾತ್ಮನ ದರ್ಶನ ಪಡೆಯಿರಿ” ಎಂದು ಮೈಕಿನ ಕಂಠದಂತೆ ಧ್ವನಿಯೇರಿಸಿ ಕೂಗುತ್ತ ನೆರೆದವರನ್ನು ಶಿಸ್ತುಗೊಳಿಸಲು ಪ್ರಯತ್ನಿಸುತ್ತಿದ್ದರು.

ಅಂಗಳದ ತುಂಬಾ ಜನ ಸೇರಿಬಿಟ್ಟಿದ್ದರು. ನಡುವೆ ಹೂವಿನ ಗುಪ್ಪೆಯ ಸುತ್ತ ಮಾತ್ರ ಒಂದು ಮಾರು ಸ್ಥಳ ಖಾಲಿ ಬಿಟ್ಟಿದ್ದರು. ಯಾರೋ ಆದಿಶೇಷನ ಮೇಲೊಂದು ಕೀರ್ತನೆ ಹಾಡಲಾರಂಭಿಸಿದರು. ಭಕ್ತಿ  ಆವೇಶಗಳಿಂದ ವಿಕಾರವಾಗುವ ಅವರ ಮುಖಭಾವಗಳನ್ನು ನೋಡುವುದು ಮೋಜೆನಿಸಿ ನನ್ನ ಗಂಭೀರ ಸ್ವಭಾವ ಮರೆತು, ಆಸಕ್ತಿಯಿಂದ ಗಮನಿಸತೊಡಗಿದೆ. ಉಳಿದವರು ಬಾಯಿಗೆ ಬಂದ ಸ್ತೋತ್ರಗಳನ್ನು ಜಪಿಸಿಕೊಳ್ಳುತ್ತ ಕ್ಯೂನಲ್ಲಿ ಬಂದು ಪ್ರದಕ್ಷಿಣೆ ಹಾಕಿ ತಲೆಯನ್ನು ನೆಲಕ್ಕೆ ಮುಟ್ಟಿಸಿ, ದಕ್ಷಿಣೆಯಿಟ್ಟು ಹಿಂತಿರುಗತೊಡಗಿದರು.

ಇವತ್ತೆಲ್ಲ ಈ ಸಾಲು ಕರಗುವುದೇ ಇಲ್ಲವೇನೋ ಎನಿಸುವಷ್ಟು ಮುಗಿಯದ ಜನ. ಇಲ್ಲಿ ನಡೆಯುತ್ತಿರುವುದಕ್ಕೂ ನನಗೂ ಸಂಬಂಧವಿಲ್ಲವೆನ್ನುವಂತೆ ದೂರದಲ್ಲಿ ನಿಂತು ಹಾಸ್ಯನೋಟದಿಂದ ನೋಡುತ್ತಿದ್ದ ನನಗೆ ಇದು ಕನಸೋ ಎಂಬ ಭ್ರಮೆ.

ಧೋ ಎಂದು ಮಳೆ ಸುರಿದಂತೆ ಭಕ್ತರ (ಕುತೂಹಲಿಗಳ ?) ಸಂಖ್ಯೆ ಹೆಚ್ಚಾಯಿತು.

ನೆರೆದವರಲ್ಲೇ ಯಾರೋ ಅರ್ಚಕರು ಹುಟ್ಟಿಕೊಂಡರು. ಮಡಿ ಉಟ್ಟುಕೊಂಡು ಬಂದು ಹೂವಿನ ಗುಪ್ಪೆಯನ್ನು ಸಡಿಲ ಮಾಡಿದರು. ಆತುರದಿಂದ ಅದರೊಳಗೆ ಚೂಪುಗಣ್ಣು ತೂರಿಸಿದೆ. ಸುಮಾರು ಐದಿಂಚಿನ, ದಿಟ್ಟವಾಗಿ ಹೆಡೆ ಬಿಚ್ಚಿ ಕೂತ ಪಂಚಲೋಹದ ನಾಗಪ್ಪನ ಪ್ರತಿಮೆ! ಇದೆಲ್ಲಿಂದ ಬಂತು? ಎಂದು ನನಗೆ ವಿಸ್ಮಯ! ವಿಚಾರಿಸಲು ಅತ್ತಿತ್ತ ತಿರುಗಿದರೆ ಯಾರೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಅರ್ಚಕ ತನ್ನ ಪಾಡಿಗೆ ತಾನು ಎಂಜಲುಗುಳುತ್ತ ಗಟ್ಟು ಮಾಡಿದ ಮಂತ್ರಗಳನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಸುತ್ತಿದ್ದ. ಕಾಣಿಕೆ ಹಣದ ಗಾತ್ರ, ನಾಗಪ್ಪನಿಗೂ ಮೀರಿ ಬೆಳೆದಿತ್ತು.

ಯಾರೋ ಹೋಗಿ ವಾಲಗದವರನ್ನು ಕರೆತಂದಿದ್ದರು. ಅವರು ಬಾಗಿಲ ಬಳಿ ಲಕ್ಷಣವಾಗಿ ಚಕ್ಕಂಬಕ್ಕಳ ಹಾಕಿ ಕುಳಿತು, ನಾಗಸ್ವರ ನುಡಿಸುತ್ತಿದ್ದರು. ಕೆಲವರು ನಾದಕ್ಕೆ ತಕ್ಕಂತೆ ಕೊರಳಲ್ಲಿ ಸ್ಪ್ರಿಂಗ್ ಕೂಡಿಸಿಕೊಂಡವರಂತೆ ತಲೆ ಕುಣಿಸುತ್ತಿದ್ದರೆ, ಮತ್ತೆ ಕೆಲವರು ನಾಗಸ್ವರದ ಧ್ವನಿಯನ್ನು ನಾಗಪ್ಪನ ಕಿವಿದುಂಬುವಂತೆ ಕೈಗಳಿಂದ ತೂರುತ್ತಿದ್ದರು. ನನಗೇಕೋ ಮುಜುಗರವೆನಿಸತೊಡಗಿತ್ತು. ನನ್ನ ಮನೆಯಲ್ಲಿ ನಾನೇ ಅಪರಿಚಿತನಂತೆ ಮೂಲೆ ಸೇರಿದ್ದೆ.  ಬೆಳಗ್ಗೆ ಪ್ರಶಾಂತವಾಗಿದ್ದ ವಾತಾವರಣ, ಕೆಲವೇ ಗಂಟೆಗಳಲ್ಲಿ, ಗುರುತು ಹತ್ತದಂತೆ ಗಜಿಬಿಜಿಯ ಸಂತೆ, ಸಾರ್ವಜನಿಕ ರಂಗವಾಗಿತ್ತು.

ಬಾಗಿಲು ಹಾರು ಹೊಡೆದಿತ್ತು. ಮನೆ ಬಿಕೋ ಎಂದಿತ್ತು. ಗೇಟಿನ ಹೊರಗೆ ಚಪ್ಪಲಿಯ ರಾಶಿ. ಬೀದಿಯಲ್ಲಿ ಹೋಗಿ ಬರುವವರೆಲ್ಲ ಮನೆಯೊಳಕ್ಕೆ ಒಮ್ಮೆ ಹಾದುಹೋಗುವವರೇ. ಕುತೂಹಲದಿಂದ ಹಣಕಿಕ್ಕುವ ಗಜಿಬಿಜಿ ಜನ. ಒಮ್ಮೆಲೇ ಅವರ ಮೇಲೆಲ್ಲ ಅಸಹ್ಯ-ವಾಕರಿಕೆ-ಕೋಪ ನುಗ್ಗಿ ಬಂತು. ಇಡೀ ಬಡಾವಣೆಯ ಜನರೆಲ್ಲ ನಮ್ಮ ಮನೆಯಂಗಳಕ್ಕೆ ಸಲೀಸಾಗಿ ನುಗ್ಗುತ್ತಿದ್ದಾರೆ! ಗುಂಪಿನೊಳಗೆ ಹೇಗೋ ನುಸುಳಿ ನಾಗಪ್ಪನನ್ನು ಬೆಕ್ಕಸಬೆರಗಾಗಿ ಬಾಯ್ಬಿಡುತ್ತ ದಿಟ್ಟಿಸಿ, ಗಲ್ಲ, ಕೆನ್ನೆ ಬಡಿಬಡಿದುಕೊಳ್ಳುತ್ತ ಆಚೀಚೆಯವರಲ್ಲಿ ಬಾಯಿ ತೂರಿಸಿ, ಕಿವಿ ಕೊಟ್ಟು ಪವಾಡದ ಬಗ್ಗೆ ತಮಗೆ ತೋಚಿದ್ದನ್ನೆಲ್ಲ ಒದರಿ, ತಾವು ಕಂಡು-ಕೇಳಿದ ಇನ್ನಿತರ ಪವಾಡಗಳನ್ನು ಕುರಿತು ಹರಟೆ ಹೊಡೆಯುತ್ತ, ಹಿಂದಿನವರು ದಬ್ಬಿದಾಗ ಗೊಣಗುಟ್ಟಿಕೊಳ್ಳುತ್ತ ಜಾಗ ಖಾಲಿ ಮಾಡುತ್ತಿದ್ದರು.

ಕಿವಿಗಡಚಿಕ್ಕುವ ಚಿಟಿಚಿಟಿ ಮಾತು, ವಾಲಗದ ಸದ್ದು, ತಿದಿ ಒತ್ತಿದಂತೆ ಉಸಿರಿನ ಹಬೆ, ಚುಡಾಯಿಸುತ್ತ ಬಳಕುತ್ತಿದ್ದ ನನ್ನ ಮುಖದ ಗೆರೆಗಳು ಬಿಗಿದುಕೊಂಡವು. ಏಕೋ ಎಲ್ಲರೂ ನನ್ನನ್ನು ಅಲಕ್ಷಿಸುತ್ತಿದ್ದಾರೆಂಬ ಭಾವನೆ ಬಲಿಯತೊಡಗಿತು. ಅಷ್ಟರಲ್ಲಿ ಯಾರೋ ನನ್ನ ಮೈ, ಕೈ ತಿವಿದಾಗ ನನ್ನ ಸಿಟ್ಟು ಭುಗಿಲ್ಲೆಂದಿತು. ಅವಡುಗಚ್ಚುತ್ತ ನನ್ನವಳತ್ತ ತಿರುಗಿದೆ. ಅವಳು ಕೂತ ಜಾಗ ಬಿಟ್ಟು ಕದಲಿರಲಿಲ್ಲ. ಹೊಟ್ಟೆ ತಮಟೆ ಬಡಿಯಲು ಪ್ರಾರಂಭಿಸಿತ್ತು. ಬಹುಶಃ ಯಾರಿಗೂ ಹೊಟ್ಟೆ ಇರುವ ವಿಚಾರವೇ ನೆನಪಿಲ್ಲವೇನೋ! ಅಡಿಗೆ ಮನೆ ಅನಾಥವಾಗಿತ್ತು. ಅಮ್ಮ ಮಡಿ ಉಟ್ಟುಕೊಳ್ಳುವುದನ್ನೂ ಮರೆತು ಬೆಳಗಿನಿಂದ ಒಂದೇ ಸಮನೆ ಟೇಪ್ ರೆಕಾರ್ಡರ್ ನಂತೆ ಆಶ್ಚರ್ಯ ಧುಮ್ಮಿಕ್ಕಿಸುತ್ತ ಹೇಳುತ್ತಲೇ ಇದ್ದಾಳೆ:

“ನಿಜವಾಗ್ಲೂ ನಮ್ಮಪ್ಪನ ಸತ್ಯ ಬಹು ದೊಡ್ಡದಮ್ಮಾ… ಹಿಂದಿನಿಂದ್ಲೂ ನಮ್ಮ ಮನೆತನಕ್ಕೆ ನಾಗರದೋಷ ಅಂತಾರೆ. ನಾವು ಆಗಾಗ ತನಿ ಎರೆಯೋದು. ನಾಗರಪ್ರತಿಷ್ಠೆ ಮಾಡೋದು ಸಂಪ್ರದಾಯ.. ಆದ್ರೆ ನಮ್ಮ ಗ್ರಾಚಾರ. ಇವನಿಗೆ ಯಾವುದರಲ್ಲೂ ನಂಬ್ಕೆಯಿಲ್ಲ. ಹಾಸ್ಯ ಮಾಡ್ತಾನೆ. ಇವನ್ಗೋಸ್ಕರ ಭಾಳ ಹಿಂದೇನೇ ಹರಕೆ ಮಾಡ್ಕೊಂಡಿದ್ದೆ, ಇನ್ನೂ ತೀರಿಸಕ್ಕಾಗಿಲ್ಲ.. ಬಾರೋ, ಘಾಟಿಗೆ ಹೋಗಿ ಬರೋಣಾಂದ್ರೆ ಕೇಳಲ್ಲ.. ನಂಗೆ ಒಳಗೊಳಗೆ ಭಯವಿದ್ದೇ ಇತ್ತು ನಾಗಪ್ಪನೇ ತನ್ನ ಕಾಣಿಕೆ ತೊಗೊಂಡ್ಹೋಗಕ್ಕೆ ಮನೆ ಬಾಗಿಲಿಗೆ ಬಂದಿದ್ದಾನೆ ನೋಡಿ, ಇದರಿಂದ ಏನು ಕಾದಿದೆಯೋ ಅಂತ ಹೆದರಿಕೆಯಾಗ್ತಿದೆ…. ದಿಕ್ಕೇ ತೋಚ್ತಿಲ್ಲಮ್ಮ”

            ಅಮ್ಮನ ಕಣ್ಣ ತುಂಬ ನೀರು ತುಂಬಿಕೊಂಡಿತು. ಅವಳ ಅಜ್ಞಾನದ ಮಾತುಗಳನ್ನು ಕೇಳಿ ನನ್ನೊಳಗೆ ಕೋಪ ಭುಸುಗುಟ್ಟಿತು. ಪಕ್ಕದವರ್ಯಾರೋ ಅವಳಿಗೆ ಸಮಾಧಾನ ಹೇಳುತ್ತಿದ್ದರು.

“ಬಿಡಿ ಏನಾಗಲ್ಲ.. ಶುಭ ಚಿಹ್ನೆ… ನಿಮ್ಮಗ ಇನ್ಮೇಲೆ ಸರಿ ಹೋಗ್ತಾನೆ”

ನನಗೆ ಚುರುಕು ಮುಟ್ಟಿತಾದರೂ “ಶುದ್ದ ಮೂರ್ಖರ ಸಂತೆ” ಎಂದು ತಾತ್ಸಾರದಿಂದ ಗೊಣಗುಟ್ಟಿಕೊಂಡು ಸುಮ್ಮನಾಗಬೇಕಾಯಿತು.

ಸ್ವಲ್ಪ ಹೊತ್ತಿನಲ್ಲಿ ಹೆಂಗಸರ ಹರಟೆ ಕೇಳುತ್ತ ನಲವತ್ತರ ನಾನು ನಾಲ್ಕು ವರ್ಷದ ಅಮಾಯಕನಂತೆ ಕಕ್ಕಾಬಿಕ್ಕಿಯಾಗಿದ್ದೆ! ಅವರ ಭಾವ ಪ್ರದರ್ಶನ, ಕೈ ಬಾಯಿ ತಿರುಗಿಸಾಟ, ಎವೆಯಿಕ್ಕದೆ ಅವರನ್ನೇ ದಿಟ್ಟಿಸುವಂತೆ ನಿಲ್ಲಿಸಿಕೊಂಡಿತ್ತು.

ಹೆಂಗಸರೆಲ್ಲ ಎದ್ದು ನಿಂತು ನಾಗಪ್ಪನನ್ನು ಹಾಲು-ತುಪ್ಪದಲ್ಲಿ ತೊಳೆದರು. ಕರ್ಕಶ ಕೀರಲು ಕಂಠಗಳು ಬೆರೆತು ರಾಗ ಮೂಡಿಸಿದವು. ಹೂಮಾಲೆ ಪ್ರತಿಮೆಯನ್ನು ಮುಚ್ಚಿತು. ಅಂಗಳದ ತುಂಬ ಅಗರಬತ್ತಿಯ ಸುವಾಸನೆ ದಟ್ಟವಾಗಿ ಹರಡಿದಾಗ, ನಾನು ಪೇರುಸಿರು ಚೆಲ್ಲಿದೆ.

 ಪ್ರತಿಮೆಯ ಮುಂದೆ ಹಣ್ಣುಕಾಯಿಗಳ ಗೋಪುರ. ಹೊರೆಗೆ ಏರು ದನಿಯಲ್ಲಿ ನಾಗಸ್ವರ ರೂಪುಗೊಳ್ಳುತ್ತಿದ್ದ ಹೊಸ ದೃಶ್ಯಗಳನ್ನು ವೀಕ್ಷಿಸುತ್ತಿದ್ದಂತೆಯೇ ನನ್ನ ಹೊಟ್ಟೆಯಲ್ಲೇನೋ ವಿಚಿತ್ರ ಸಂಕಟ. ಸಹನೆ ಆವಿಯಾಯಿತು. ಮುಖವನ್ನು ಹಿಂಡುತ್ತ ನೋವು-ಕೋಪಗಳಿಂದ ಧುಮುಗುಟ್ಟುತ್ತ ಮನೆಯೊಳಗೇ ನಡೆದು ಕೋಣೆಗೆ ನುಗ್ಗಿದೆ.

“ಏನಾಯ್ತಣ್ಣ?” ಹಿಂದೆಯೇ ಓಡಿ ಬಂದ ಕಿರಿಮಗಳ ಪ್ರಶ್ನೆಯನ್ನು ಲಕ್ಷಿಸದೆ ಹಾಸಿಗೆಯ ಮೇಲೆ ಬೋರಲು ಬಿದ್ದೆ.

ನಿಮಿಷ ಕಳೆಯುವುದರಲ್ಲಿ ನನ್ನ ಸುತ್ತ, ಅಮ್ಮ, ನನ್ನವಳು ಮತ್ತು ಮಕ್ಕಳೆಲ್ಲ ಕೋಟೆಯಂತೆ ಆವರಿಸಿಕೊಂಡಿದ್ದರು. ನನ್ನ ಕೈ ಹೊಟ್ಟೆಯ ಮೇಲಿದ್ದುದನ್ನು ಗಮನಿಸಿದ ಅಮ್ಮ- “ಮೊದ್ಲೆದ್ದು ನಾಗಪ್ಪನಿಗೆ ತಪ್ಪು ದಂಡ ಕಟ್ಟಿಟ್ಟು ನಮಸ್ಕಾರ ಹಾಕಪ್ಪ, ಊರೋರೆಲ್ಲ ನೆರೆದಿದ್ದಾರೆ. ಏಳು, ಚೆನ್ನಾಗಿರಲ್ಲ, ಇವತ್ನಿಂದಲಾದ್ರೂ ಆಸ್ತಿಕನಾಗುವಂತೆ ಬಾ” ಎನ್ನುತ್ತ ನನ್ನನ್ನು  ವಶೀಕರಣ ಮಾಡಿಕೊಂಡವಳಂತೆ ಎಬ್ಬಿಸಿ ನಾಗಪ್ಪನ ಬಳಿ ಆಸ್ತಿಕಾಶ್ರಮ ಕೊಡಿಸುವಂತೆ ಕೂಡಿಸಿದಾಗ, ಅಮ್ಮನ ಹುಚ್ಚನ್ನು ಕಂಡು ನನಗೆ ನಗಬೇಕೋ ಅಳಬೇಕೋ ತಿಳಿಯದಾಯಿತು.

ಕಿಟಕಿಯಂಚಿನ ಮೂಲೆಯಲ್ಲಿ ನನ್ನ ವಿದ್ಯಾರ್ಥಿಗಳ ಗುಂಪು ಕಂಡಂತಾಗಿ ತಟ್ಟನೆ ಕೆಂಪಾಗಿ ನಾನು ಧಡಕ್ಕನೆ ಮೇಲೆದ್ದೆ. ಅಮ್ಮನ ಕಣ್ಣು ಕನ್ನಂಬಾಡಿಯಾಯಿತು.

“ಬೇಡ ಕಣ್ಣಪ್ಪ, ನಾಗಪ್ಪ ಮುನಿದಾನು”

ಕಾಲೇಜಿನ ಪ್ರೊಫೆಸರ್ ಆದ ನನ್ನನ್ನು ತಾಯಿ ಎಲ್ಲರ ಮುಂದೆ ಆಟಿಗೆಯಂತೆ ನಡೆಸಿಕೊಳ್ಳುತ್ತಿರುವುದನ್ನು ಕಂಡು ಅವಮಾನಿತನಾಗಿದ್ದೆ.

“ಎಲ್ಲಿತ್ತು ಇದು?” ಗಡುಸಾಗಿ ಪ್ರಶ್ನಿಸಿದೆ.

ಬಹಳ ಹೊತ್ತಿನ ನಂತರ, ಮನೆಯೊಡೆಯನಾಗಿ, ನನ್ನ ಕೇಳದೆ ಅವಾಂತರವೆಬ್ಬಿಸಿದ ಕೋಪವನ್ನು ವ್ಯಕ್ತಪಡಿಸುತ್ತ ಅಧಿಕಾರಯುತವಾಗಿ ಪ್ರಶ್ನಿಸಿ, ಆ ಪ್ರತಿಮೆಯ ಉಗಮದ ಬಗ್ಗೆ ವಿಷಯ ಮೀಟಿದೆ.

“ಅಲ್ರೀ, ಈ ಸುದ್ದಿ ಆಗ್ಲೇ ಊರೆಲ್ಲ ಹರಡಿದೆ. ನಿಮಗಿನ್ನೂ ತಿಳೀದೇ! ನೀವು ಆತ್ಲಾಗೆ ಕಾಲೇಜಿಗೆ ಹೋಗುತ್ಲು, ನಾನು ಗಿಡಗಳಿಗೆ ನೀರು ಹಾಕೋಣ ಅಂತ ಅಂಗಳಕ್ಕೆ ಹೆಜ್ಜೆ ಇಟ್ಟೆ ನೋಡಿ ದಂಗು ಬಡಿದುಹೋದೆ.. ನಾಗರಾಣಿ ಗಿಡದ ಮುಂದೆ ನಾಗಪ್ಪನ ಪ್ರತಿಮೆ! ಸುಮಿ-ಪ್ರೇಮಿ ಬೆಳಿಗ್ಗೆ ಹೂ ಕುಯ್ಯುವಾಗಲೂ ಏನೂ ಇರಲಿಲ್ಲವಂತೆ!!!…ದೇವರು ಉದ್ಭವ ಆಗಿಬಿಟ್ಟಿದಾನ್ರೀ! ಜನಗಳಿಗೆ ದೇವರ ಬಗ್ಗೆ ನಂಬಿಕೆ ಕಡ್ಮೆ ಆದ್ರೆ ಹೀಗಾಗೋದು ಉಂಟಂತೆ!’ ಎಂದು ನನ್ನವಳು ಅದ್ಭುತ ಕಂಡವಳಂತೆ, ಮುಗ್ಧತೆಯಿಂದ ಕಣ್ಣರಳಿಸಿ ನನ್ನನ್ನು ನಂಬಿಸುವಂತೆ ಪ್ರಾಮಾಣಿಕ ವಿನಯದ ದನಿಯಲ್ಲಿ ನುಡಿದಳು.

“ಯಾಕೆ? ತನ್ನ ಅಸ್ತಿತ್ವ ಜ್ಞಾಪಿಸೋದಕ್ಕಾ?” ಕೆಕ್ಕರಿಸಿ ನೋಡಿ ಹರಿತವಾಗಿ ಪ್ರಶ್ನಿಸಿದೆ.

“ಸಾಕು ನಿಮ್ಮ ತಮಾಷೆ.. ಪ್ರತ್ಯಕ್ಷವಾದ್ಮೇಲಾದ್ರೂ ನೀವು ದೇವರಿದ್ದಾನೆ ಅಂತ ನಂಬಬಾರ್ದೆ?”

ಯಾಕೋ ಅವಳ ಮುಖ-ಧ್ವನಿ ದೈನ್ಯವಾಗ್ತಿದೆ ಎನಿಸಿದಾಗ ಮುಜುಗರವಾಗಿ, ‘’ನನ್ನ ಮಣಿಸ್ಬೇಕೂಂತ ನಿಮಗ್ಯಾಕೀ ಹಠ.. ಹೊರಟ್ಹೋಗಿ.. ನನ್ನ ನಂಬ್ಕೆ ಬದಲಾಗಲ್ಲ. ಬೇಕಾದೋರು ತೊಗೊಂಡ್ಹೋಗಿ ಅದನ್ನಿಟ್ಕೋಳ್ಳಿ.. ನನ್ನ ಮನೆಯಲ್ಲಂತೂ ಇದಕ್ಕೆ ಜಾಗವಿಲ್ಲ”

-ಹುಚ್ಚನಂತೆ ಕೂಗಾಡಿದೆ.

“ಬಾಯಲ್ಮಾತ್ರ ಏನೂ ಮಾತಾಡ್ಬೇಡ ಕಣೋ ರಾಜಣ್ಣ, ನನ್ನಾಣೆ” –ಅಮ್ಮ ಚಂಡಿ ಹಿಡಿದಳು.

ನಿಜವಾಗಿಯೂ ಪ್ರತಿಮೆ ಉದ್ಭವದ ವಿಷಯ ಕೇಳಿ ನನಗೆ ತುಂಬಾ ಆಶ್ಚರ್ಯವಾಗಿದ್ದರೂ ಅದನ್ನು ತೋರಗೊಡಲಿಲ್ಲ. ಅದನ್ನೇ ಕುರಿತು ಚಿಂತಿಸಲು ತೊಡಗಿದಂತೆ, ನನ್ನ ಬುದ್ಧಿ-ಭಾವನೆಗಳು ಸಡಿಲಾದಂತೆ ನನ್ನ ಒಳಗೆಲ್ಲ ಕರ ಕರಗಿ ಹೊಟ್ಟೆಯೊಳಗಿನಿಂದ ಸುಳಿನೋವು ನೊರೆನೊರೆಯಾಗಿ ಮೇಲೆದ್ದಿತು. ನರಳುತ್ತ ನಾನು ಮೌನವಾಗಿ ದಿಂಬು ಕಚ್ಚಿದೆ. ನಿಮಿಷ ನಿಮಿಷಕ್ಕೂ ನೋವು ಪದರ ಪದರವಾಗಿ ಪಸರಿಸಿದಂತೆ ಉರಿಯತೊಡಗಿತು.

“ಬಾಯ್ತೆಗಿ…ಪ್ರಶ್ನಿಸದೆ ಗುಟುಕರಿಸು.. ಅಭಿಷೇಕದ ಹಾಲು… ನಾಗಪ್ಪನ ಪ್ರಸಾದ… ಎಲ್ಲಾ ಶಾಂತವಾಗುತ್ತೆ’’- ಎನ್ನುತ್ತ ಅಮ್ಮ ನನ್ನ ಬಾಯಿ ಬಿಡಿಸಿ ಹಾಲು ಹುಯ್ದಳು. ಪ್ರತಿಭಟಿಸದೆ ಮೆಲ್ಲನೆ ಗುಟುಕರಿಸಿದೆ.

ಹಾಂ…ಪವಾಡ ! …ಕೂಡಲೇ ಹೊಟ್ಟೆ ತಂಪಾದಂತಾಯಿತು… ಮೈ ಹಗುರವಾಯಿತು… ಒಳಗೆ ನಾಚಿಕೆ ಚೆಲ್ಲಾಡಲು ಪ್ರಾರಂಭವಾದರೂ ಒಮ್ಮೆಲೆ ದೇವರ ಮಹಿಮೆಯನ್ನು ನಂಬಿದಂತೆ  ಪ್ರತಿಕ್ರಿಯೆ ವ್ಯಕ್ತಪಡಿಸುವಷ್ಟು ಮೂರ್ಖ ನಾನಾಗಿರಲಿಲ್ಲ. ಅದಕ್ಕೆ, ನನ್ನ ಹೊಟ್ಟೆ ಶಾಂತವಾದ ಭಾವವನ್ನು ನಾನು ಬಿಂಕದಿಂದ ಹೊರಗೆ ಪ್ರಕಟಪಡಿಸಲಿಲ್ಲ.

“ಏಳು ಮಡಿಯುಟ್ಟು ದೇವರ ಪೂಜೆ ಮಾಡಪ್ಪ…’’

-ಅಮ್ಮನ ಒತ್ತಾಯ ನನ್ನ ಬುದ್ಧಿಯನ್ನು ಶೂನ್ಯಗೊಳಿಸಿತು.  ಎಂದೂ ವಿಗ್ರಹಾರಾಧನೆ ಮಾಡಿರದ ನನ್ನನ್ನು ಅಪ್ಪಟ ಪೂಜಾರಿಯಾಗಿಸಿತು. ಪ್ರಜ್ಞೆಗೆ ಮಂಕು ಅಡರಿದಂತೆ, ಕಾಲೇಜಿನ ಯೋಚನೆ ಮರೆತು, ನಾನು ಮಂತ್ರಮುಗ್ಧನಂತೆ ದೇವರಮನೆ ಹೊಕ್ಕು, ಮಂದಾಸನದ ಮುಂದೆ ಪದ್ಮಾಸನ ಹಾಕಿ ಕುಳಿತೆ.

ಸಂಜೆ ವೇಳೆಗೆ ಹೊರಗೆ ಭಕ್ತರ ಪೂರ ಹೊಮ್ಮಿತು. ಪವಾಡದ ಸೋಂಕು ನನ್ನನ್ನೇರಲು ಪ್ರಯತ್ನಿಸುತ್ತಿತ್ತು. ನಾನು ಮರುಳೋ, ಜನ ಮರಳೋ ಎಂಬುದನ್ನು ಒರೆಗೆ ಹಚ್ಚುತ್ತ, ಅಂಗಳದಲ್ಲಿ ಬೀಡುಬಿಟ್ಟ ನಾಗಪ್ಪನನ್ನೇ ಎವೆಯಿಕ್ಕದೆ ದಿಟ್ಟಿಸುತ್ತ ಕುಳಿತೆ.

ಅಪೂರ್ವ ಕಲಾವಂತಿಕೆಯ ಮೂರ್ತಿ!!!.. ಸಿಂಬಿ ಸುತ್ತಿ ಹೆಡೆ ಎತ್ತಿ ಕುಳಿತಿರುವ ನಾಗಪ್ಪ. ಅದರಿಂದ ವಿಶಿಷ್ಟ ಪ್ರಕಾಶ ಹೊರಹೊಮ್ಮುತ್ತಿರುವಂತೆ ಭಾಸ. ಭ್ರಮಿತನಂತೆ ಅದನ್ನು ನೋಡುತ್ತಲೇ ಇದ್ದೆ, ಅದೆಷ್ಟೋ ಹೊತ್ತು. ಹಸಿವು-ಬಾಯಾರಿಕೆ ಬಾಧಿಸಲಿಲ್ಲ. ರಾತ್ರಿಯಾಗುವವರೆಗೂ ಜನಸಂದಣಿ ಇದ್ದೇ ಇತ್ತು.

ಮರುದಿನ ನಾನು ಕಾಲೇಜಿಗೆ ಹೊರಡಲು ತಯಾರಾಗುವಷ್ಟರಲ್ಲಿ ಹಿರಿ ಮಗಳು, ನಾಗಪ್ಪನ ಸುತ್ತ ಅಂದವಾಗಿ ಬಣ್ಣದಲ್ಲಿ ರಂಗೋಲಿ ಬಿಡಿಸುತ್ತಿದ್ದಳು. ಅಮ್ಮ ಬತ್ತಿ ಹೊಸೆದು ಕೊಡುತ್ತಿದ್ದಂತೆ ಇವಳು ಆರತಿ, ಸೊಡರು, ದೀಪದ ಕಂಬಗಳಿಗೆ ಹಾಕುತ್ತಿದ್ದಳು. ಆಗಲೇ ಜನರ ನೆರೆ ಪ್ರಾರಂಭ.

ಕ್ಲಾಸ್ ರೂಮಿನಲ್ಲಿದ್ದರೂ ಕಣ್ಣ ಮುಂದೆ ಅದೇ ದೃಶ್ಯ!!!. ಭೌತಶಾಸ್ತ್ರವನ್ನು ಬೋಧಿಸುವಾಗ ಮನಸ್ಸು ಅಳುಕಿತು. ದೇವರು ಎನ್ನುವುದು ಬರೀ ಒಂದು ಶಕ್ತಿ ಅಷ್ಟೇ… ಅದಕ್ಕೆ ನಾವು ನಾನಾ ಆಕಾರ-ರೂಪಗಳನ್ನು ಕೊಟ್ಟಿದ್ದೇವೆ. ಕೇವಲ ಕಲ್ಪನೆ… ಪ್ರತಿಮಾರಾಧನೆ, ಪೂಜೆ ಇವುಗಳನ್ನು ಮಾಡೋದನ್ನು ನಿಷೇಧಿಸಬೇಕು… ನಮ್ಮ ಬುದ್ಧಿ-  ಸಾಮರ್ಥ್ಯಗಳು, ಕಾಲ ಇದರಿಂದ ವ್ಯರ್ಥ. ಆದಷ್ಟೂ ಸೈಂಟಿಫಿಕ್ ಮನೋಭಾವ ಬೆಳೆಸ್ಕೋಬೇಕು.. ಹಾಗೆ ಹೀಗೇಂತ… ದಿನನಿತ್ಯ ಭಾಷಣ ಹೊಡೆಯುತ್ತಿದ್ದ ನಾನು ಇಂದೇನಾಗ್ತಿದ್ದೇನೆ? ಎಂದು ನೆನೆದಾಗ ಮೈ ಬೆವರಿತು. ಪಾಠವನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಬಂದೆ.

ಮನೆಯ ಅಂಗಳ ಪುಟ್ಟ ದೇವಸ್ಥಾನವಾಗಿತ್ತು. ಅತ್ತ ಹೊರಳದೆ ನಡುಮನೆಗೆ ಬಂದು ತಲೆಗೆ ಕೈ ಹಚ್ಚಿ ಕುಳಿತೆ.

“ನೋಡ್ರಿ, ಇವ್ರು ಪೇಪರಿನವರಂತೆ…’’ ಹೆಂಡತಿ ಮುಂದಕ್ಕೆ ಏನು ಹೇಳುತ್ತಿದ್ದಳೋ…

“ನೀನೇ ಮಾತಾಡು’’ ಎಂದು ಅಲ್ಲಿಂದೆದ್ದೆ. ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ. ಅರಿಯದ ಚಡಪಡಿಕೆ ಕಳವಳ- ತಪ್ಪಿತಸ್ಥ ಭಾವನೆಗಳು ಹುರಿಗಟ್ಟುತ್ತಿದ್ದವು…. ನಾನೇಕೆ ಇದಕ್ಕೆಲ್ಲ ಅವಕಾಶ ಕೊಟ್ಟೆ ? ಎಂಬ ಪಶ್ಚಾತಾಪದ ಕುಟುಕು ಹುಟ್ಟಿದಲ್ಲೇ ಕರಗಿಹೋಯಿತು. ಈಗಂತೂ ನಾಗಪ್ಪನನ್ನು ಕದಲಿಸಲು ಖಂಡಿತ ಯಾರೂ ಬಿಡುವುದಿಲ್ಲ ಎಂಬುದು ನಿಶ್ಚಯವೆನಿಸಿದಾಗ, ಬಂದು ಹೋಗುವವರನ್ನು ತಡೆಯಲಾಗದೆ, ಅಸಹನೆಯಿಂದ ಬೆಪ್ಪಾಗಿ ಅವರನ್ನೇ ನೋಡುತ್ತ ನಿಂತೆ.

ದಿನಗಳು ಉರುಳುತ್ತಿದ್ದವು. ಹೆಚ್ಚೂ ಕಡಿಮೆ ಎಲ್ಲ ಪೇಪರುಗಳಲ್ಲೂ ಈ ಪವಾಡದ ಸುದ್ದಿ ಅಚ್ಚಾಗಿತ್ತು. ಒಂದೆರಡರಲ್ಲಿ ಅಮ್ಮ-ಇವಳು ಸಹ-ಕಾಣಿಸಿಕೊಂಡಿದ್ದರು. ಅವರಿಬ್ಬರೂ ದಿನವಿಡೀ ಇದಕ್ಕಾಗಿಯೇ ಮೀಸಲಾಗಿದ್ದರು. ಒಂಟಿಯಾದ ನನ್ನನ್ನು ಬೇಜಾರು ಮುತ್ತತೊಡಗಿತು.

ನಾನು ನಾನಾಗಿಲ್ಲವೆಂಬ ಭಾವನೆ ಕೊರೆಯುತ್ತಿತ್ತು. ಮನೆಯವರೆಲ್ಲ ಇಮ್ಮಡಿ ಆಸ್ತಿಕರಾಗಿ ನಾಗಪ್ಪನ ಉಸ್ತುವಾರಿಕೆ ನೋಡಿಕೊಳ್ಳುವವರೇ. ಅಮ್ಮ ಕೆಲವು ಹಿರಿಯರನ್ನೆಲ್ಲ ಕರೆಸಿ ನನಗೆ ಬುದ್ಧಿ ಹೇಳಿಸಿದಳು. ಅಂತೂ ಅದು ಹೇಗೆ ನನ್ನ ಬ್ರೈನ್‍ವಾಷಾಗಿ ನಾನು ಅವಳ ಕಲ್ಪನೆಯ ಭಕ್ತಶಿರೋಮಣಿಯಾದೆನೋ ನನಗೇ ಗೊತ್ತಿಲ್ಲ… ಅದೇ ನನಗೊಂದು ಪವಾಡ !

ಅಮ್ಮ ಹೇಳಿದಂತೆ ಚಾಚೂ ತಪ್ಪದೆ ಕೇಳುವ ಗೊಂಬೆಯಾಗಿ ನಾನು ಮಾರ್ಪಾಟು ಹೊಂದಿದ್ದೆ.

ನಿತ್ಯ ಪೂಜೆ-ನೈವೇದ್ಯಗಳು. ದಿನ ಕ್ರಮೇಣ ಭಕ್ತ ಕೋಟಿ ಬೆಳೆದಂತೆ ಕಾಣಿಕೆಯ ಹುಂಡಿಯೂ ಬೆಳೆಯುತ್ತ ಹೋಯಿತು, ಭಾರವಾಗುತ್ತ ಹೋಯಿತು. ಹಿರಿಯ ಮಂಡಳಿ ಕೂಡಿ ನಿರ್ಧರಿಸಿತು. ಹೇಗೂ ವಿಶಾಲ ಅಂಗಳ. ಮೂಲೆಯ ಮನೆಯಾದ್ದರಿಂದ ಪಕ್ಕದಲ್ಲಿ ಇನ್ನೊಂದು ಸೈಟಿನಷ್ಟು ಜಾಗ ಖಾಲಿ ಇತ್ತು. ಅಲ್ಲೇ ಕರಿಕಲ್ಲಿನ ನಾಗಪ್ಪನನ್ನು ಪ್ರತಿಷ್ಟಾಪಿಸಿ, ಸಣ್ಣ ಗುಡಿ ನಿರ್ಮಾಣ-ಪ್ರತಿಷ್ಠಾಪನೆ-ನಿತ್ಯಪೂಜೆಯ ವ್ಯವಸ್ಥೆಗಾಗಿ ಈ ಹಣ ವಿನಿಯೋಗ ಮಾಡುವ ಯೋಜನೆ ಹಾಕಿ, ನನ್ನನ್ನು ತಾವಾಗಿಯೇ ನಾಗದೇವತಾ ಸಮಿತಿಯ ಅಧ್ಯಕ್ಷನನ್ನಾಗಿ ಘೋಷಿಸಿದ್ದರು. ಈ ಎಲ್ಲ ಅನಪೇಕ್ಷಿತ ಬೆಳವಣಿಗೆಗಳನ್ನು ಕಂಡು ನನಗೆ ಹುಚ್ಚು ಹಿಡಿದಂತಾಗಿತ್ತು.

ಒಂದೆರಡು ದಿನಗಳು ಸರಿದಿದ್ದವು. ನನ್ನ ಬುದ್ಧಿಗೆ ಮಂಕು ಕವಿದಂತಾಗಿತ್ತು. ಜನಗಳು ತಮ್ಮ ತಮ್ಮಲ್ಲೇ ಚರ್ಚಿಸಿ ಏನೇನೋ ತೀರ್ಮಾನ ಕೈಗೊಳ್ಳುತ್ತಿದ್ದರು. ಭಕ್ತ ಗಡಣ ಆವೇಶಿತರಾಗಿದ್ದರು.

ನನ್ನ ತಲೆಯನ್ನೀಗ ಹಿಂದಿನ ವಿಚಾರಗಳು ಹಿಂಸಿಸುತ್ತಿಲ್ಲ, ಪರಾತ್ಪರ ತತ್ವದಲ್ಲೇನೋ ಅರ್ಥ-ಸತ್ಯತೆಗಳನ್ನು ಕಂಡುಕೊಂಡ ಭಾವುಕ ಭಕ್ತ ಮನಸ್ಸು ಈಗ. ಬುದ್ಧಿ ದುರ್ಬಲಗೊಂಡ ಅನುಭವ. ಸಂಶೋಧನೆ-ಆಲೋಚನೆಗಳ ಕಾವು ಆರಿಹೋಗಿತ್ತು. ಒಟ್ಟಾರೆ ಅಮ್ಮನ ಅರ್ಥದಲ್ಲಿ ನಾನೊಬ್ಬ ಆಸ್ತಿಕ ಸಮುದಾಯದ ವೇದಾಂತ ಚರ್ಚೆಯಲ್ಲಿ ಗೋಣು ಹಾಕುವವನಾಗಿದ್ದೆ.

ಅಂದು ಭಾನುವಾರ. ಮುಂದಿನ ಜಗುಲಿಯಲ್ಲಿ ಬಿಡುವಾಗಿ ಕುಳಿತಿದ್ದೆ. ಭಕ್ತರು ಬಂದು ಹೋಗುತ್ತಿದ್ದರು. ಮನಸ್ಸಿಗೆ ಕೊಂಚ ಕಾವು ಮೂಡಿಸುವ ಚುಮುಚುಮು ಬಿಸಿಲಲ್ಲಿ ಮೈ ಕಾಯಿಸಿಕೊಳ್ಳುತ್ತ ಕೂತಿದ್ದೆ. ನನ್ನ ಸ್ಥಿತ್ಯಂತರವನ್ನು ಕುರಿತ ಆಲೋಚನೆ ನನ್ನ ಮೆದುಳಲ್ಲಿ ಮೆಲ್ಲನೆ ಸುಲಿದುಕೊಳ್ಳುತ್ತಿದ್ದಂತೆ, ನನ್ನನ್ನು ಬಾಹ್ಯಲೋಕಕ್ಕೆಳೆದು ಎಚ್ಚರಿಸುವಂತೆ, ತಲೆಯ ಮೇಲೇನೋ ಟಪ್ಪೆಂದು ಬಿತ್ತು. ಗಾಬರಿಯಾಗಿ ಮೇಲೆದ್ದು ನೋಡಿದೆ. ಭುಜದ ಮೇಲಿಂದ ಸತ್ತ ಇಲಿಯೊಂದು ಉದುರಿತು. ಮೇಲೆ ದೊಡ್ಡ ಹದ್ದೊಂದು ಶಬ್ದ ಮಾಡುತ್ತ ಹಾರಾಡುತ್ತಿತ್ತು.

ಫಕ್ಕನೆ ಮನಸ್ಸಿಗೇನೋ ಮಿಂಚಿದಂತಾಗಿ, ಹದ್ದು , ಇಲಿಯನ್ನು ಎತ್ತಿ ಹಾಕಿದ ಜಾಗದಿಂದ ನೇರವಾಗಿ ತಲೆಯೆತ್ತಿ ನೋಡಿದೆ. ಹದ್ದು ಇನ್ನೂ ಗಿರಗಿಟ್ಟಲೆಯಂತೆ ಸುತ್ತುತಲೇ ಇತ್ತು. ಅಂಗಳದಲ್ಲಿ ಮಂಡಿಸಿದ್ದ ನಾಗಪ್ಪನಿದ್ದ ನೆಲೆಯನ್ನು ಅಳೆದು ನೋಡಿದೆ. ಒಡನೆಯೇ, ನಾಗಪ್ಪ ಭುಸುಗುಡುತ್ತ , ಇಲಿಯನ್ನು ಕಬಳಿಸಲು ಸರ್ರನೆ ಹರಿದುಬಂದಂತೆ, ನನ್ನ ತಲೆಯೊಳಗೆ ವಿಚಾರಧಾರೆ ಧುಮ್ಮಿಕ್ಕಲು ಮೊದಲಾಯಿತು. ಆಲೋಚಿಸುತ್ತಲೇ ಮೇಲೆದ್ದವನ ನನ್ನ ಕಾಲು ಎದುರಿಗಿದ್ದ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನದತ್ತ ಮೆಲ್ಲನೆ ಸಾಗಿತು.

ವಿಶಾಲ ಪ್ರಾಂಗಣದ ಅಶ್ವತ್ಥ ಕಟ್ಟೆಯ ಸುತ್ತ ಜನಸಂಭ್ರಮ…ಅದು ಎಂದಿನ ನೋಟವೇ… ಬಹುಶಃ ಮಕ್ಕಳಿಲ್ಲದ ದಂಪತಿಗಳ ನಾಗರ ಪ್ರತಿಷ್ಠೆಯೋ ಏನೋ… ಸದ್ದಿಲ್ಲದೆ ನಾನು ಅಲ್ಲಿ ಸೇರಿದೆ. ಕಣ್ಣು ಕುಕ್ಕಿತು…. ಹೊಸ ಹೊಸದಾಗಿ ನೆಟ್ಟ ನಾಗರ ಕಲ್ಲುಗಳು… ಬುಡದಲ್ಲಿ ಪೂಜಾ ಸಾಮಗ್ರಿಗಳು.. ಅಲ್ಲಲ್ಲಿ ಪೂಜೆಗಿಟ್ಟುಕೊಂಡ ಬೆಳ್ಳಿ-ತಾಮ್ರಗಳ ಬಳ್ಳಿ ಸುರುಳಿಯ ನಾಗಪ್ಪಗಳು ಹಲ್ಲು ಕಳೆದುಕೊಂಡವಂತೆ ಚೆಲ್ಲಾಪಿಲ್ಲಿಯಾಗಿ ಮಣ್ಣಿನ ನೆಲದಲ್ಲಿ ಸಪ್ಪಗೆ ಬಿದ್ದಿದ್ದವು. ಪುರೋಹಿತರ ಮಂತ್ರೋಚ್ಚಾರ…ಹೂವಿನರಾಶಿಯಲ್ಲಿ ಪೂಜೆಗಿಟ್ಟುಕೊಂಡ ನಾಗಪ್ಪಗಳು ಹುದುಗಿಹೋಗಿದ್ದವು.  ಪ್ರತಿದಿನದಂತೆ ಪ್ರದಕ್ಷಿಣೆ ಹಾಕುತ್ತಿದ್ದ ಭಕ್ತಪರವಶ ತಂಡ!

ಹೊಟ್ಟೆಯಲ್ಲೇನೋ ಕಡೆದುಕೊಂಡು ಬಂದಂತೆ ಗರಗರನಾಡಿ ಸಂಕಟ ಮೇಲೆದ್ದಿತು. ಕಾಲಿನಿಂದ ತಲೆಯವರೆಗೂ ಕೊಕ್ಕುಗಳು ಕುಟುಕಿದಂತೆ… ತಲೆಯೊಳಗೆ ವಿಕ್ಷಿಪ್ತ ಯೋಚನೆಗಳು ಭುಗ್ಗನೆದ್ದಾಗ ಸರಸರನೆ ಮನೆಯತ್ತ ನಡೆದೆ. ನಾನೆಂಥ ಮೂಢ! ಪಶ್ಚಾತ್ತಾಪ ಚುಚ್ಚಿ ಚುಚ್ಚಿ ಪರಿಹಾಸ್ಯಗೈದಾಗ ನಾಚುತ್ತ ಹೊಸಿಲು ದಾಟಿದೆ. ನನ್ನ ವಿದ್ಯಾರ್ಥಿಗಳು ಲೇವಡಿ ಮಾಡುತ್ತಿದ್ದರು. ನಾನು ತಲೆ ಕಳಚಿಟ್ಟು ಅಮ್ಮ ಮುಂತಾದವರ ಸಾಲಿನಲ್ಲಿ ನಿಂತು ಭಜಿಸಿದ್ದೇ ಭಜಿಸಿದ್ದು….ಛೆ..ಛೆ..

ಅಷ್ಟರಲ್ಲಿ ಅಪ್ರಯತ್ನಿತವಾಗಿ ಹೆಜ್ಜೆ ಅಲ್ಲೇ ಕೀಲಿಸಿತು.

ಅಂಗಳದ ನಡುವೆ ಹೂಹಾರಗಳ ಮಧ್ಯೆ ಕುಳಿತ ಉದ್ಭವ(!) ನಾಗ ಹೆಡೆಯಾಡಿಸಿದಂತೆ ಭಾಸ !!!. ಪಕ್ಕದಲ್ಲಿ ಭೂತಾಕಾರದ ಹಣದ ಹುಂಡಿ!… ನೋಡುನೋಡುತ್ತಿದ್ದಂತೆ ನಾಗಪ್ಪ ಕರಕರಗಿ ಕುಬ್ಜನಾಗುತ್ತಾ ನೆಲದೊಳಗೆ ಅಡಗಿ ಹೋಗುತ್ತಿದ್ದ. ಪಕ್ಕದಲ್ಲಿನ  ಹಣದ ಹುಂಡಿ ಇನ್ನೂ ದೊಡ್ಡ ದೊಡ್ಡದಾಗಿ ಊದಿಕೊಳ್ಳುತ್ತಾ, ಎತ್ತರ-ಗಾತ್ರ ಭೂಮ್ಯಾಕಾಶ ವ್ಯಾಪಿಸುವಂತೆ ಬೃಹತ್ತಾಗಿ ಬೆಳೆಯತೊಡಗಿದಂತೆ ಭಾಸವಾಗುತ್ತಲೇ, ತಲೆಯನ್ನು ಕೊರೆಯಲಾರಂಭಿಸಿದ ವಿಚಾರಗಳನ್ನು ನಾನು ಬಲವಾಗಿ ಝಾಡಿಸಿ ತಳ್ಳಿ,  ಮಡಿಯುಟ್ಟುಕೊಳ್ಳಲು ದೇವರ ಮನೆಯತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ. 

                                                          ***********

Related posts

ನಿನ್ನಂಥ ಅಪ್ಪಾ ಇಲ್ಲ!!

YK Sandhya Sharma

ಪ್ರಾಪ್ತಿ

YK Sandhya Sharma

ಪುರಸ್ಕಾರ

YK Sandhya Sharma

Leave a Comment

This site uses Akismet to reduce spam. Learn how your comment data is processed.