Image default
Dancer Profile

ಖ್ಯಾತ ಅಭಿನೇತ್ರಿ – ನೃತ್ಯ ಕಲಾವಿದೆ ಹೇಮಾ ಪ್ರಶಾಂತ್

ಸತತ ಒಂದು ವರ್ಷಕಾಲ ನಡೆದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಜನಪ್ರಿಯ ಚಲನಚಿತ್ರ ‘ಅಮೇರಿಕಾ…ಅಮೇರಿಕಾ’ ಯಾರಿಗೆ ತಾನೇ ನೆನಪಿಲ್ಲ? ಆ ಚಿತ್ರದ ನಾಯಕಿ ಮೋಹಕ ನಗುವಿನ ಹೇಮಾ ಪ್ರಭಾತ್ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ನೃತ್ಯ ಕಲಾವಿದೆಯಾದ ಹೇಮಾಗೆ ಕಲೆ ರಕ್ತಗತವಾಗಿ ಬಂದದ್ದು. ತಾತ ಹರಿಕಥಾ ವಿದ್ವಾನ್ ಗೋಪಿನಾಥ್ ದಾಸ್ ಖ್ಯಾತ ಪ್ರಭಾತ್ ಕಲಾವಿದರು ಸಂಸ್ಥಾಪಕರು. ಕಣ್ಣು ಬಿಟ್ಟಾಗಿನಿಂದ ಕಿವಿಗೆ ಗೆಜ್ಜೆ ಸದ್ದು, ಸಂಗೀತ ಬೀಳುತ್ತಿದ್ದುದರಿಂದ ಸಹಜವಾಗಿ ಹೇಮಾ ಐದನೆಯ ವಯಸ್ಸಿಗೇ ಭರತನಾಟ್ಯ ಕಲಿಯಲಾರಂಭಿಸಿದಳು. ಮನೆಯಲ್ಲೂ ಪ್ರೋತ್ಸಾಹದ ವಾತಾವರಣ. ಅವಕಾಶಗಳೂ ವಿಪುಲ. ಪ್ರತಿಭೆ ಜನ್ಮದತ್ತವಾದ್ದರಿಂದ ಬಾಲನಟಿಯಾಗಿ ಹತ್ತು ಚಲನಚಿತ್ರಗಳಲ್ಲಿ ನಟಿಸಿದಳು.

ಬಹು ಸಹಜವಾಗಿ ಸ್ಫುಟವಾಗಿ ಮಾತನಾಡುವ ಸಹಜಾಭಿನಯದ ಹೇಮಾಗೆ, ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಅವಕಾಶಗಳು ಒದಗಿದರೂ, ನೆಪ ಮಾತ್ರದ, ಮರಸುತ್ತುವ ನಾಯಕಿ ಪಾತ್ರಗಳನ್ನು ಒಲ್ಲದೆ, ಪ್ರಾಮುಖ್ಯವಿರುವ ದೊರೆ, ರವಿಮಾಮ, ಸಂಭ್ರಮ ಮುಂತಾದ ಆರು ಚಲನಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಆದರೆ ಅವರ ಮೂಲ ಒಲವು ಇದ್ದದ್ದು ನೃತ್ಯದತ್ತಲೇ.

‘ಗೋಪಣ್ಣ’ ಎಂದೇ ಕಲಾವಲಯದಲ್ಲಿ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಗೋಪೀನಾಥದಾಸರ ಹಿರಿಮಗ ವೆಂಕಟೇಶ ಮತ್ತು ಸುಧಾ ದಂಪತಿಗಳ ಮಗಳು ಹೇಮಾ ಮೊದಲು ಭರತನಾಟ್ಯ ಕಲಿತದ್ದು ನೃತ್ಯಗುರು ನರ್ಮದಾ ಅವರಲ್ಲಿ. ಅನಂತರ ಯು.ಎಸ್. ಕೃಷ್ಣರಾವ್ ಅವರಲ್ಲಿ ಅಭ್ಯಾಸ ಮಾಡಿ ಅವರ ಮಾರ್ಗದರ್ಶನದಲ್ಲಿ, 1989 ರಲ್ಲಿ ಸಂಪೂರ್ಣ ಕನ್ನಡ ಕೃತಿಗಳ ಮೂಲಕವೇ ‘ರಂಗಪ್ರವೇಶ’ಮಾಡಿದ್ದು ನಿಜಕ್ಕೂ ವಿಶೇಷವೇ. ಕನ್ನಡ ಕೃತಿಗಳಿಗೆ ಆದ್ಯತೆ ನೀಡುವ ಹೇಮಾ, ಅದೇ ಸತ್ಸಂಪ್ರದಾಯವನ್ನು  ತಮ್ಮ ಹದಿನೈದು ಜನ ಶಿಷ್ಯರ ರಂಗಪ್ರವೇಶಗಳಲ್ಲೂ ಅನುಸರಿಸಿಕೊಂಡು ಬಂದದ್ದು ಅವರ ವೈಶಿಷ್ಟ್ಯ.

ಶಾಲೆಯ ಓದು, ನೃತ್ಯಾಭ್ಯಾಸ, ಚಿತ್ರಗಳಲ್ಲಿ ನಟನೆಯನ್ನು ಸಮತೂಗಿಸಿಕೊಂಡು ಬರುತ್ತಿದ್ದ ಹೇಮಾ, ಗುರು ಸುನಂದಾದೇ ವಿಯವರ ಬಳಿ ಕಲಿತು ಕರ್ನಾಟಕ ಸರ್ಕಾರ ನಡೆಸುವ ಸೀನಿಯರ್ ನೃತ್ಯಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಮುಂದಿನ ಕಲಿಕೆಯನ್ನು ಸರೋಜಾ ವೈದ್ಯನಾಥನ್, ರೇವತಿ, ಉಡುಪಿ ಲಕ್ಷ್ಮೀನಾರಾಯಣ್ (ಚೆನ್ನೈ) ಅವರಲ್ಲಿ ಮುದುವರಿಸಿದರು.

ಅಂತರ ಶಾಲಾ-ಕಾಲೇಜುಗಳ ನೃತ್ಯಸ್ಪರ್ಧೆಯಲ್ಲಿ ಬಹುಮಾನ ಇವರಿಗೆ ಕಟ್ಟಿಟ್ಟಬುತ್ತಿ. ಜೊತೆಗೆ ಪ್ರಭಾತ್ ಕಲಾವಿದರು ನೃತ್ಯರೂಪಕಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಉಳಿದಂತೆ ವಿವಿಧ ಕಲಾ ಉತ್ಸವಗಳಲ್ಲಿ ನೃತ್ಯ ಪ್ರದರ್ಶನ ನೀಡುವುದು ನಿರಂತರವಾಗಿತ್ತು. ಅವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಗೌರವಗಳನ್ನು ನೀಡಿದವು. 1985 ರಲ್ಲಿ ಬಾಲನಟಿ  ಪ್ರಶಸ್ತಿ, ಅನಂತರ ಉದಯೋನ್ಮುಖ ಪ್ರಶಸ್ತಿ, ಕಿರುತೆರೆಯ 25 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದು ಅವುಗಳಲ್ಲಿ ‘ಭಾಗೀರಥಿ’ ಧಾರಾವಾಹಿಯ ಪಾತ್ರಕ್ಕಾಗಿ ‘’ಅತ್ಯುತ್ತಮ ನಟಿ’’ ಪ್ರಶಸ್ತಿ ಪಡೆದುಕೊಂಡದ್ದು ಅವರ ಅಗ್ಗಳಿಕೆ.

ಹೇಮಾ ನೃತ್ಯ ಪ್ರದರ್ಶನ ನೀಡಿದ ಪ್ರಮುಖ ಉತ್ಸವಗಳೆಂದರೆ, ಯು.ಎಸ್. ಕೃಷ್ಣರಾವ್ ಶತಮಾನೋತ್ಸವ, ಗೋಪಿನಾಥ ಶತಮಾನೋತ್ಸವಗಳಲ್ಲದೆ ದೇಶಾದ್ಯಂತ ಅನೇಕ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ತಾತನವರ ನೆನೆಪಿಗಾಗಿ, ವರ್ಷವಿಡೀ ಪ್ರತಿತಿಂಗಳೂ ರಾಜ್ಯಮಟ್ಟದಲ್ಲಿ, ಸಂಗೀತ, ನೃತ್ಯ, ಹರಿಕಥೆ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ. ನಶಿಸಿ ಹೋಗುತ್ತಿರುವ ನಮ್ಮ ಸನಾತನ ಕಲೆಯಾದ ಹರಿಕಥೆಯ ತರಬೇತಿಯನ್ನು ಹೇಮಾ, ಮಕ್ಕಳಿಗೆ ನೀಡುತ್ತ ಬಂದಿರುವುದು ಸ್ತುತ್ಯಾರ್ಹ ಕಾರ್ಯ.

ತಮ್ಮ ಶಿಷ್ಯರು ನೃತ್ಯದ ಎಲ್ಲ ಆಯಾಮಗಳಲ್ಲೂ ಪರಿಣತಿ ಸಾಧಿಸಲು ನೆರವಾಗುವಂತೆ, ಪ್ರಸಾಧನ, ನಟುವಾಂಗ ತರಬೇತಿ ಮತ್ತು ಕಲಾಶಿಬಿರ, ನಾಟಕ ಕಾರ್ಯಾಗಾರಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸಂಭ್ರಮ, ಹರಿಸರ್ವೋತ್ತಮ, ಸಿದ್ಧಿ-ಬುದ್ಧಿ, ದಶಾವತಾರ ಮುಂತಾದ ನೃತ್ಯರೂಪಕಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಸಿಂಡ್ರೆಲಾ, ಕರುಣಾಮಯಿ, ಶಿವ, ಕರುನಾಡ ವೈಭವ, ಅಭಿಜ್ಞಾನ, ಉತ್ತರಗೋಗ್ರಹಣ ನೃತ್ಯ ನಾಟಕಗಳಿಗೆ ನೃತ್ಯ ನಿರ್ದೇಶನ ನೀಡಿದ್ದಾರೆ. ವರಕವಿ ಕುವೆಂಪು ಮತ್ತು ಕ್ರೇಜಿ ಕುಟುಂಬ ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಬಹುಮುಖ ಪ್ರತಿಭೆಯ ಹೇಮಾ, ತಮ್ಮ ಬಿಡುವಿರದ ಚಟುವಟಿಕೆಗಳ ನಡುವೆ 2000 ರಲ್ಲಿ ತಮ್ಮದೇ ಆದ    ‘ಸುಕೃತಿ ನಾಟ್ಯಾಲಯ’ ಸ್ಥಾಪಿಸಿ, ನೂರಾರು ಮಕ್ಕಳಿಗೆ ಭರತನಾಟ್ಯ ಶಿಕ್ಷಣ ನೀಡುತ್ತಿರುವ ಕ್ರಿಯಾಶೀಲೆ.

ಇವರು, ನೃತ್ಯ ಸಂಹಿತೆ ಪ್ರಾರಂಭಿಕ ಮತ್ತು ನೃತ್ಯ ಸಂಹಿತೆ ಪರಿಣತಿ ಶೀರ್ಷಿಕೆಯ ನೃತ್ಯ ಶಿಕ್ಷಣದ ಹೊತ್ತಿಗೆಗಳನ್ನು ಸಂಸ್ಥೆಯವತಿಯಿಂದ ಹೊರತಂದಿರುವುದು ನೃತ್ಯಾಭ್ಯಾಸಿಗಳಿಗೆ ಉತ್ತಮ ಕೈಪಿಡಿ.

ಪತಿ ಪ್ರಶಾಂತ್ ಶಾಸ್ತ್ರೀ ಖ್ಯಾತ ನೃತ್ಯಪಟುವಾಗಿದ್ದು, ದಂಪತಿಗಳು ಒಟ್ಟಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ವಿಶಿಷ್ಟತೆ ಇವರದು. ತಾಯಿಯ ಬಳಿಯೇ ನೃತ್ಯ ಕಲಿಯುತ್ತಿರುವ ಹದಿಮೂರರ ಬಾಲೆ ಅರುಣಿಮಾ ಮತ್ತು ಪುಟ್ಟಕಂದ ಆದ್ವಿಕಾ ಜೊತೆಗಿನ ಸಂತೃಪ್ತ ಕುಟುಂಬ ಇವರದು.

Related posts

ಕೂಚಿಪುಡಿ ನೃತ್ಯ ಪ್ರವೀಣೆ ರೇಖಾ ಸತೀಶ್

YK Sandhya Sharma

ನರ್ತನ ನಿಪುಣ ಮಿಥುನ್ ಶ್ಯಾಂ

YK Sandhya Sharma

ಉದಯೋನ್ಮುಖ ನೃತ್ಯಗಾರ್ತಿ ಎಂ. ಅಮೃತಾ

YK Sandhya Sharma

Leave a Comment

This site uses Akismet to reduce spam. Learn how your comment data is processed.