Image default
Short Stories

Skit- Kamlu Maga Foreign Returned

ಕೊರಳನ್ನು ಒಂಟೆಯಂತೆ ಉದ್ದಕ್ಕೆ ಚಾಚಿ ಚಾಚೀ ಕಮ್ಲೂ ಕುತ್ತಿಗೆ ಒಂದೇಸಮನೆ ನೋಯತೊಡಗಿತ್ತು. ಏರ್ಪೋರ್ಟಿನ ವಿಶಾಲ ಪ್ರಾಂಗಣದಿಂದ  ಜನ ದುಬುದುಬು ಹೊರಗೆ ಉಕ್ಕಿ ಹೊರಬರುತ್ತಲೇ ಇದ್ದಾರೆ!!!..

ಶ್ರೀಕಂಠೂ ಕೂಡ ಹದ್ದಿನಂತೆ ತನ್ನ ಚೂಪುನೋಟಾನ ಅತ್ತಿತ್ತ ವಾಲಾಡಿಸುತ್ತಿದ್ದ. ಆದರೆ ಆ ಗುಂಪಿನಲ್ಲಿ ಅವರ ಮಗರಾಯ ಮಾತ್ರ ಪತ್ತೇನೇ ಇಲ್ಲ! ಕಮ್ಲೂ ಆತಂಕದಿಂದ ಏರ್ಪೋರ್ಟಿನ ಒಳಭಾಗದ ಎಲ್ಲ ದಿಕ್ಕಿನಲ್ಲೂ ಮೂಲೆಮೂಲೆಗಳನ್ನೂ ಸೋಸಿ ನೋಡಿದಳು…ಉಹೂಂ…

ಖುಷಿಯಿಂದ ಹೊರದ್ವಾರದಿಂದ ಚಿಮ್ಮುತ್ತ, ತನ್ನ ಕಡೆ ಹಾರಿಕೊಂಡು ಬರ್ತಾನೆ ಅಂತ ನಿರೀಕ್ಷಿಸಿದ್ದ ಅವರ ಅಮೇರಿಕಾ ರಿಟರ್ನ್ಡ್ ಮಗ ಮಾತ್ರ ನಾಪತ್ತೆ!… ನಿರಾಸೆಯಿಂದ ಮುಖ ಜೋಲಾಯ್ತು.

ಗಾಜಿನ ಮಹಾದ್ವಾರದ ಬಳಿ ನಿಂತಿದ್ದ ಸೆಕ್ಯುರಿಟಿ ಬಳಿ ಧಾವಿಸಿ ಎರೆಡೆರಡು ಸಲ ಕನ್ಫರ್ಮ್ ಮಾಡಿಕೊಂಡಿದ್ದಳು- ಆಗ ಲ್ಯಾಂಡ್ ಆಗಿದ್ದು ವಾಶಿಂಗ್ ಟನ್ ವಿಮಾನಾನಾ ಅಂತ. ಅವನು ಕೊಂಚ ರೇಗಿಕೊಂಡೇ ಉತ್ತರಿಸಿದ್ದ.

 ‘ಬಂದಾಗಲೇ ಅರ್ಧ ಗಂಟೆಯಾಯ್ತಲ್ಲ…’  

‘ಇದೆಂಥ ಅವಸರಾನೇ ನಿಂದು, ಅತಿಯಾಯ್ತು…ಚೆಕ್ಕಿಂಗ್ ಮಾಡಿಕ್ಕೊಂಡು  ಲಗೇಜ್ ತೊಗೊಂಡು ಬರಬೇಡವೇ?…ಇದೇನು ನಿಮ್ಮಪ್ಪನೂರು ತಿಪ್ಪಗಾನಹಳ್ಳಿಯೇ, ಮನೆಮುಂದೆ ಬಸ್ಸು ಬಂದು ನಿಂತ್ಕೊಳಕ್ಕೆ ‘ ಅಂತ ಶ್ರೀಕಂಠೂ ಗೊಣಗಿದಾಗ ಕಮ್ಲೂ ವಿಧಿ ಇಲ್ಲದೆ ತುಟಿ ಹೊಲಿದುಕೊಂಡಳು.

ಗಂಡ-ಹೆಂಡ್ತಿ ಇಬ್ಬರೂ ವಿಮಾನನಿಲ್ದಾಣದ ಹೊರದ್ವಾರದ ಬಳಿ ನಿಂತು ಗಂಟೆ ಕಳೆದಿತ್ತು. ನಾಲ್ಕು ವರ್ಷದಿಂದ ಕಾಣದ ಮಗನ ಮೋರೆ ನೋಡಲು ಹಂಬಲಿಸಿದ್ದರು. ಚಾತಕಪಕ್ಷಿಯಂತೆ ಕಾದುಕೊಂಡಿದ್ದಷ್ಟೇ ಬಂತು, ಮಗನ ಸುಳಿವೇ ಇಲ್ಲ!

ತಮ್ಮುಂದೆ ಹಾದುಹೋದ ಜನಗಳು, ಲಗೇಜ್ ಎಳೆದುಕೊಂಡು ಹೋಗುತ್ತಿದ್ದ ಬಗೆಯನ್ನು,  ಬೆನ್ನ ಮೇಲೆ ಅಕ್ಕಿಮೂಟೆಯಂಥ ಬ್ಯಾಕ್ ಪ್ಯಾಕ್ ಹೊತ್ತುಕೊಂಡ ವಿವಿಧ ಅವತಾರಗಳನ್ನೆಲ್ಲ ದಿಟ್ಟಿಸುವುದು ಅವಳಿಗೆ ಮನರಂಜನೆಯೆನಿಸಿತು.

ಇನ್ನೂ ಅರ್ಧಗಂಟೆ ಕಳೆಯಿತು…ಜನ ಖಾಲಿಯಾಗತೊಡಗಿತು. ದಂಪತಿಗಳು ಮುಖ ಮುಖ ನೋಡಿಕೊಂಡರು ಬೆಪ್ಪಾಗಿ.

ಹಿಂದಿನಿಂದ ಯಾವುದೋ ಪ್ರಾಣಿ ಗಕ್ಕನೆ ಅಪ್ಪಿ ಹಿಡಿದುಕೊಂಡಂತಾಗಿ ಕಮ್ಲೂ ಉಸಿರುಗಟ್ಟಿತು.

‘ಮಾಮ್…ಡ್ಯಾಡ್ ..’

ರೊಯ್ಯನೆ ತಿರುಗಿ ನೋಡಿದಳು. ಗುರುತು ಹತ್ತಲಿಲ್ಲ.!!!..

ತಲೆಯ ಮೇಲೆ ಮುಸುಕಿನ ಜೋಳದ ಬಣ್ಣದ, ಎದ್ದುನಿಂತ ಒರಟುಗೂದಲು…. ಬಲಹುಬ್ಬಿನಿಂದ  ನೇತಾಡುತ್ತಿದ್ದ ಪುಟಾಣಿ ರಿಂಗು, ಅದರೊಳಗೊಂದು ಬಣ್ಣದಮಣಿ. ಕಣ್ಣುಗಳನ್ನಾವರಿಸಿದ್ದ  ಅಗಲಕಟ್ಟಿನ ಕನ್ನಡಕ!!!…

 ಗಾಬರಿಯಿಂದ ದೂರಸರಿದ ಅವಳ ದೃಷ್ಟಿ ಕೆಳಗೋಡಿತು.

ಎಣ್ಣೆಗಾಣದ ಕೂದಲ ಭಿಕ್ಷುಕನಂತೆ ಕಾಣುತ್ತಿದ್ದ ಅವನು, ತೊಟ್ಟ ಚಿಂದಿಬಟ್ಟೆಯ ಪ್ಯಾಂಟು, ತೊಡೆ, ಮಂಡಿಯ ಕೆಳಗಿನವರೆಗೂ ಬರೀ ತಾತಾ ತೂತಿ. ಫ್ಯಾನ್ಸಿ ಡ್ರೆಸ್ ನಂತಿದ್ದ ಅವನ ವಿಚಿತ್ರ ವೇಷ ಕಂಡು ಬೆರಗಾಗಿ ಕಣ್ಣರಳಿಸಿದಳು!…

‘ಮಾಮ್, ಡ್ಯಾಡ್, ಈಟ್ ಈಸ್ ಮೀ..?’ -ಪರಿಚಿತ ಧ್ವನಿ ಕೇಳಿ ಇಬ್ಬರೂ ಕಣ್ಣು ಪಿಳುಕಿಸಿ, ಎದುರಿಗೆ ನಿಂತವನನ್ನು ಅಡಿಯಿಂದ ಮುಡಿಯವರೆಗೂ ದಿಟ್ಟಿಸಿದರು.

‘ಏನೋ ನಿನ್ನ ಈ ಅವತಾರ?!!…ಥೂ..’ -ಮುಖ ಸಿಂಡರಿಸಿದಳು ಕಮ್ಲೂ.

‘ಶುರುವಾಯ್ತಲ್ಲ ನಿನ್ನ ವಟವಟ..ಸ್ವಲ್ಪ ಬಾಯಿಗೆ ಜಿಪ್ ಹಾಕ್ಕೋ..’ ಎಂದು ಶ್ರೀಕಂಠೂ, ಅವಳ ಬಾಯಿಗೆ ಬ್ರೇಕ್ ಹಾಕಿ, ಮಗನನ್ನು ನಗುತ್ತ ಬರಮಾಡಿಕೊಂಡ.

ದಾರಿಯುದ್ದಕ್ಕೂ ನಕುಲ ಬೆರಗಾಗಿ ಪ್ರಶ್ನೆಗಳನ್ನು ಕೇಳಿದ್ದೇ ಕೇಳಿದ್ದು…

’ಎಷ್ಟೊಂದು ಚೇಂಜ್ ಆಗಿಬಿಟ್ಟಿದೆ ಡ್ಯಾಡಿ ಈ ಊರು?… ಗಿಜಿ ಗಿಜಿ ಜನಗಳು, ವೆಹಿಕಲ್ಸು!!..’

‘ಚೇಂಜ್ ಆಗಿರೋದು ನಿನ್ನ ಅವತಾರ ಕಣೋ…’ -ಫಾರಿನ್ ರಿಟರ್ನ್ಡ್ ಮಗನಿಗೆ ಗರಮ್ಮಾಗಿ ಉತ್ತರಿಸಿದಳು ಕಮ್ಲೂ.

ಮನೆಯೊಳಗೆ ಕಾಲಿಡುತ್ತಿದ್ದ ಹಾಗೆ ನಕುಲನ ಉವಾಚ – ‘ಐ ವಾಂಟ್ ಮಿನರಲ್ ವಾಟರ್ ಮಾಮ್ ?’ ತಟ್ಟನೆ ರೇಗುತ್ತ ಕಮ್ಲೂ, ‘ಏಯ್, ಲಕ್ಷಣವಾಗಿ ಮೊದ್ಲು ಅಂತಿದ್ದ ಹಾಗೇ ಅಮ್ಮಾ ಅನ್ನೋ’ -ಎನ್ನುತ್ತಾ ಅವನ ಮುಂದೆ ಬಿಸಿಲೇರಿ ನೀರಿನ ಬಾಟಲನ್ನು ತಂದಿಟ್ಟಳು.

‘ಥ್ಯಾಂಕ್ಯೂ ..’ ನಕುಲನ ನಯವಾದ ಉಲಿ.

‘ಇದೇನೋ ಹೊಸಥರ..?!’ -ಕಮ್ಲೂ ವಿಚಿತ್ರವಾಗಿ ದಿಟ್ಟಿಸಿದಳು.

‘ಮಾಮ್, ಐ ವಾಂಟ್ ಮೈ ಡಿನ್ನರ್ ಅಟ್ ಎಯ್ಟ್…ಆಯಿಲ್ ಲೆಸ್ ಚಪಾತಿ ಟು , ವೆಜಿಟೆಬಲ್ ಸಲಾಡ್ ಇನಫ್ ’

‘ಮಾರ್ನಿಂಗ್ ಬ್ರೇಕ್ ಫಾಸ್ಟ್ಗೆ ಬ್ರೆಡ್ ಟೋಸ್ಟ್ ಅಂಡ್ ಜ್ಯಾಮ್ ವಿಥ್ ಬಟರ್’

ಹುಬ್ಬೇರಿಸಿದ ಕಮ್ಲೂ ಗಂಡನತ್ತ ವಾರೆನೋಟ ಕುಲುಕಿಸಿ,

‘ಆಹಾ.. ಮೊದ್ಲು ಯಾವಾಗಲೂ ಮಸಾಲುದೋಸೆ, ಇಡ್ಲಿ, ತಾಲೀಪಟ್ಟು, ಅವಲಕ್ಕಿ ಒಗ್ಗರಣೆ, ಕುರುಕಲು ತಿಂಡಿ ಅಂತ ಹಟ ಮಾಡ್ತಿದ್ದೋನು, ಇಷ್ಟು ಬದಲಾವಣೆಯೇ?..’

ಕಮ್ಲೂ ಗೊಣಗಾಟಕ್ಕೆ ಶ್ರೀಕಂಠೂ ಸೈಲೆಂಟು.

ಮಗ ವಿದೇಶದಿಂದ ಬರ್ತಾನೆ ಅಂತ ಕನಸು ಕಾಣ್ತಿದ್ದ ಕಮ್ಲೂ, ಅವನ ರೂಮನ್ನು ನೀಟಾಗಿ ಕ್ಲೀನ್ ಮಾಡಿಸಿ, ಚೆನ್ನಾಗಿ ಒಗೆದ ಬೆಡ್ ಶೀಟ್ ಮತ್ತು ದಿಂಬಿನಚೀಲ ಹಾಕಿ ಹಾಸಿಗೆಯನ್ನು ಶುಭ್ರವಾಗಿ ರೆಡಿ ಮಾಡಿದ್ದಳು. ಫಾರಿನ್ನಿಂದ ಬರೋವವರ ವಿಚಾರ ಅವಳಿಗೆ ಅಷ್ಟಿಷ್ಟು ತಿಳಿದಿತ್ತು. ಮಗ ನಖರ ಮಾಡಬಾರದೂಂತ ಅವಳು, ಭಯ-ಭಕ್ತಿಯಿಂದ ಈ ಎಲ್ಲ ವ್ಯವಸ್ಥೆಗಳನ್ನು ಆಸ್ಥೆಯಿಂದ ಮಾಡಿದ್ದಳು ಅಂದರೂ ಸರಿಯೇ.

‘ಗುಡ್ ನೈಟ್ ಮಾಮ್ ಅಂಡ್ ಡ್ಯಾಡ್..’

ಕಮ್ಲೂ, ಗಂಟಲಲ್ಲಿ ಏನೋ ಸಿಕ್ಕಾಕೊಂಡಂತೆ ಮುಖ ಹುಳ್ಳಗೆ ಮಾಡಿ, ಹಿಂದಿನ ಒರಟ, ಅಶಿಸ್ತಿನ ಮುದ್ದೆಯಾಗಿದ್ದ ನಕುಲ ಇವನೇನಾ ಎಂಬ ಅನುಮಾನ ಧುತ್ತನೆ.  

ಬೆಳಗ್ಗೆಯೇ ಶುರುವಾಯಿತು – ಕಾಫೀಲೋಟ ಕೈಗಿಟ್ಟಾಕ್ಷಣ- ‘ಥ್ಯಾಂಕ್ಯೂ ಮಾಮ್ ’, ತಿಂಡಿಗೂ  ಥ್ಯಾಂಕ್ಸ್…ಊಟಕ್ಕೂ ಥ್ಯಾಂಕ್ಸ್..ಹೆಜ್ಜೆ ಹೆಜ್ಜೆಗೂ ಧನ್ಯವಾದಗಳ ಸುರಿಮಳೆಯಲ್ಲಿ ನೆಂದು ಅವಳು ಗೊಂದಲಕ್ಕೀಡಾದಳು

ಒಂದು ದಿನಕ್ಕೇ ಕಮ್ಲೂಗೆ ಇದು ಇರಿಟೇಟ್ ಆಗಿ ಕೂಗಾಡಿದಳು-

‘ಇದೇನೋ ಮಗನೇ ನಿನ್ನ ಹೊಸ ವರಸೆ?!!…ನಂಗಿವೆಲ್ಲ ಸರಿಬರಲ್ಲ ಕಣೋ..’ ಎಂದು ಅವನ ಸ್ವಾಟೆ ತಿವಿದು ಅಲ್ಲಿಂದ ಕಾಲ್ಕಿತ್ತಳು.

ವಾರದಲ್ಲಿ, ಪಕ್ಕದ ಅಂಗಡಿಯಲ್ಲಿದ್ದ ಬಿಸಿಲೇರಿ ವಾಟರ್ ಬಾಟಲುಗಳೆಲ್ಲ ಖಾಲಿಯಾಗಿ, ಇವರ ಮನೆ ಹಿತ್ತಲಲ್ಲಿ ಖಾಲಿಬಾಟಲಿನ ದೊಡ್ಡ ಮೂಟೆ ಊದಿಕೊಂಡಿತು. ಇದ್ಯಾಕೋ ಅತಿ ಅತಿಯೆನಿಸಿತವಳಿಗೆ.  

ಮೊದಲು ರಾಶಿ ಹಸೀಮೆಣಸಿನಕಾಯಿ ಅರೆದು ಮಾಡುತ್ತಿದ್ದ ರೊಟ್ಟಿಗೆ ಇನ್ನಷ್ಟು ಖಾರ ಬೇಕೂಂತ ಹಾರಾಡುತ್ತಿದ್ದ ಈ ನಕುಲ, ಈಗ ರೊಟ್ಟಿ ತುದಿ ಮುರಿದು ತಿಂದವನೇ ‘ಹೋ’ ಅಂತ ಬೊಬ್ಬೆ ಹೊಡೆಯುತ್ತ ಬುಡದಲ್ಲಿ ಬೆಣೆ ಹೊಕ್ಕ ಮಂಗನಂತೆ ಮನೆ ತುಂಬಾ ಬಾಲ್ ಡ್ಯಾನ್ಸ್ ಮಾಡಿ ನಾಲ್ಕು ಬಾಟಲು ನೀರು ಗಟಗಟಿಸಿದ.

ಶ್ರೀಕಂಠೂ ಕೂಡಲೇ ಮಿನರಲ್ ವಾಟರ್ ಕ್ರೇಟ್ಗೆ ಅನ್ಲೈನಲ್ಲಿ ಆರ್ಡರಿಸಿ, ಬ್ರೆಡ್ಡು-ಬಟರ್ರು-ಜ್ಯಾಮ್ ಅಂಗಡಿಯನ್ನೇ ಮನೆಗೆ ತರಿಸಿಕೊಂಡು- ‘ಇನ್ಮೇಲೆ ನೀನು ಕೈ ಬಾಯಿ ಸುಟ್ಕೊಂಡು ಮಾಡೋದು ಬೇಡ ಕಣೆ ಕಮ್ಲೂ, ನಿನ್ಮಗ ನಿನ್ ಕೆಲ್ಸ ಹಗುರ ಮಾಡಿದ್ದಾನೆ..’ ಎಂದು ಅನೌನ್ಸ್ ಮಾಡಿದ.

ಕಮ್ಲೂ- ಮಗನ ಮಂದೆ ಬ್ರೆಡ್ ಒಣ ಟೋಸ್ಟ್ ಕುಕ್ಕಿದವಳೇ, ಘಮ ಘಮ ಎನ್ನುವ ಮಸಾಲು ದೋಸೆಯನ್ನು ಕಾವಲಿಯ ಮೇಲೆ ಹುಯ್ಯತೊಡಗಿದಳು. ಮನೆತುಂಬ ಆಲೂಗಡ್ಡೆ -ಈರುಳ್ಳಿ ಪಲ್ಯದ ಸುವಾಸನೆ ಇಟ್ಟಾಡಿತು. ಮಗನ ಹೊಟ್ಟೆ ಉರಿಸುವಂತೆ ಅವಳು, ಶ್ರೀಕಂಠೂ ಮುಂದೆ ಹೊಂಬಣ್ಣದ ದೋಸೆಯನ್ನು ಇಡಕ್ಕಿಲ್ಲ ಅವನದನ್ನು ಮುರಿಮುರಿದು ಚಪ್ಪರಿಸಿ ತಿನ್ನೋ ಪರಿ ಕಂಡು ಅವಳಿಗೆ ಹೊಟ್ಟೆಯಿಂದುಕ್ಕುವ ನಗು!..

ಮಗ ಉಪಹಾರದ ಮೆನು ಹೇಳೋಕ್ಕೆ ಮುಂಚೆಯೇ ಅವನಿಗೆ ಒಂದು ವಾರ ಪೂರ್ತಿ ಒಣಬ್ರೆಡ್ಡೆ ಬ್ರೇಕ್ ಫಾಸ್ಟು, ಊಟಕ್ಕೆ ಸುಕಾ ಚಪಾತಿ- ಹಸುವಿನಂತೆ ಮೇಯಿ ಅಂತ ಹಸಿ ತರಕಾರಿಗಳ ಗುಡ್ಡೆ, ಸೂಪು.. ಕೆಚಪ್ ಬಾಟಲುಗಳನ್ನು ತಂದು ಎದುರಿಗೆ ಜೋಡಿಸಿಟ್ಟಳು.

ಗಂಡ-ಹೆಂಡ್ತಿ ಮಾತ್ರ ತಂಪಾಡಿಗೆ ಇಡ್ಲಿ-ಚಟ್ನಿ, ಪೂರಿ-ಸಾಗು, ರವೇ ಭಾತು, ಹುಳಿ ಅವಲಕ್ಕಿ, ತಾಲೀಪಟ್ಟು, ನೀರುದೋಸೆ ಮಾಡಿಕೊಂಡು, ಅದರ ಮೇಲೆ ಹಸಿವಿನ ತುಪ್ಪ ಸುರ್ಕೊಂಡು ಹೊಡೀತಿದ್ರೆ, ನಕುಲ ನೋಡಿಯೂ ನೋಡದವನ ಹಾಗಿದ್ರೂ, ಅವನ ಮೂಗಿನ ಹೊಳ್ಳೆಗಳು ಅರಳುತ್ತಿದ್ದುದನ್ನು ಕಮ್ಲೂ ಗಮನಿಸಿ ಗಂಡನತ್ತ ತಿರುಗಿ ಕಣ್ಣು ಮಿಟುಕಿಸಿದ್ದೇ ಮಿಟುಕಿಸಿದ್ದು.  

ಹಬ್ಬದ ದಿನವೂ ಡಿಟ್ಟೋ ಡಿಟ್ಟೋ…ಕರಿದಶ್ಯಾವಿಗೆ ಪಾಯಸದ ಮೇಲೆ ಗಿಜಿಗುಡುತ್ತಿದ್ದ ದ್ರಾಕ್ಷಿ-ಗೋಡಂಬಿ ಚೂರುಗಳು, ಹೀರೇಕಾಯಿ ಬೋಂಡ, ಕಾಯಿ-ಸಾಸಿವೆ ಚಿತ್ರಾನ್ನ, ಮಜ್ಜಿಗೆ ಪಳದ್ಯ ಕಲೆಸಿ ಗಂಡ-ಹೆಂಡ್ತೀ ಲೊಟ್ಟೆ ಹೊಡೆಯುತ್ತಿದ್ದ ದೃಶ್ಯಾನ ನೋಡಲಾರದೆ ಮಗರಾಯ ಜಾಗ ಖಾಲಿಮಾಡಿದ್ದು ನೋಡಿ ಕಮ್ಲೂ ಹೊಟ್ಟೆ ಚುರ್ರೆಂದಿತು.

ಮಹಾ ನಾಲಗೆ ಚಪಲದ, ಅಡಾವುಡಿ ಒರಟು ಸ್ವಭಾವದ ನಕುಲನೇ ಇವನು ಅಂತ ಅಚ್ಚರಿ.  

ಆ ದಿನ ಆಫೀಸಿನಿಂದ ಬಂದವನೆ ನಕುಲ, ಹಿಂದಿನಂತೆ ಕಮ್ಲೂ ಸೆರಗಿನ ತುದಿಯನ್ನು ಬೆರಳಿಗೆ ಸುತ್ತಿಕೊಳ್ಳುತ್ತಾ ಅಲವತ್ತುಕೊಂಡ.

 ‘ಮಾಮ್…ನನ್ನ ಕಲೀಗ್ಸ್ ಟೆಕ್ಕಿಗಳೆಲ್ಲ ಒಂದೇ ಥರ…ಹಳ್ಳಿಮನೆ, ಹಟ್ಟಿ ಬುತ್ತಿ, ಮನೆ ಊಟ, ಅಜ್ಜಿಯ ಕೈತುತ್ತು, ಸ್ಟ್ರೀಟ್ ಫುಡ್ದು ಹೀಗೆ, ಇನ್ನೂ ಏನೇನೋ, ಹುಡುಕ್ಕೊಂಡು ಹೋಗ್ತಾರೆ..ದೆ ಆರ್ ಆಲ್ ಕ್ರೇಜಿ…ಹೋಂ ಸಿಕ್ ಫೆಲೋಸ್..ಎಷ್ಟು ದೂರ ಆದ್ರೂ ಸರಿ, ಗಲ್ಲಿ ಗಲ್ಲಿ ಹುಡ್ಕೊಂಡು ಹೋಗಿ, ಹೋಂ ಫುಡ್ ಎಂಜಾಯ್ ಮಾಡ್ತಾರೆ …ಐ ಕಾಂಟ್  ಅಂಡರ್ ಸ್ಟಾಂಡ್ ದಿಸ್..’ -ಎಂದು ಕನ್ಫ್ಯೂಸ್ ಮುಖಭಾವ ಮಾಡಿ, ತಲೆಯನ್ನು ಪರಪರ ಕೆರೆದುಕೊಂಡಾಗ, ಕಮ್ಲೂ ಮುಲಾಜಿಲ್ಲದೆ-

 ‘ನೀನು ಕಣೋ ಕ್ರೇಜಿ, ಅವರಲ್ಲ…ಇದೇ ರುಚಿಕಟ್ಟಾದ ಆಹಾರ, ಅವರೇ ಕರೆಕ್ಟು..ಇದೇ ನ್ಯಾಚುರಲ್ ಕಣೋ..’ ಎಂದು ತುಟಿ ಸೊಟ್ಟ ಮಾಡಿದಾಗ ನಕುಲನ ಮುಖ ನೋಡಬೇಕಿತ್ತು.

ಅಮೆರಿಕದಿಂದ ಬಂದು ತಿಂಗಳು ಕಳೆದಿದ್ದರೂ ಅವನಿನ್ನೂ ಕಾವೇರಿ ನೀರು ಗುಟುಕರಿಸಿರಲಿಲ್ಲ. ಸೆರಾಮಿಕ್ ಪ್ಲೇಟು-ಸ್ಪೂನು-ಫೋರ್ಕು… ಹಿಂದಿನಂತೆ ಸ್ಟೀಲ್ ತಟ್ಟೇಲಿ ನೆಕ್ಕಿಕೊಂಡು ತಿಂದ ಮಜಾ ತೊಗೊಂಡಿರಲಿಲ್ಲ. ಇದನ್ನು ಕಂಡೂ ಕಾಣದ ಹಾಗೇ ಕಮ್ಲೂ- ಶ್ರೀಕಂಠೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.

ಭಾನುವಾರ- ಕಮ್ಲೂ- ಬಾಣಲೆಯಲ್ಲಿ ಎಣ್ಣೆ ಇಟ್ಟು ಸೀಮೆಯಕ್ಕಿ ಮತ್ತು ಅರಳು ಸಂಡಿಗೆ ಕರಿಯುತ್ತ, ಉದ್ದಿನ ಹಪ್ಪಳದ ರುಚಿ ನೋಡ್ತಾ ಸುಖಿಸ್ತಿದ್ರೆ, ಹಿಂದಿನಿಂದ ಅನಾಮತ್ತು ಬಂದು ತಬ್ಬಿದ ಮಗರಾಯ-‘ಅಮ್ಮಾ’ಎಂದು ರಾಗ ಎಳೆದವನೇ, ಹಪ್ಪಳ-ಸಂಡಿಗೆಗೆ ಕೈಹಾಕಿ ತನ್ನ ಊಟದ ತಟ್ಟೆಗೆ ಬಡಿಸಿಕೊಂಡ.

ಕಮ್ಲೂ ಗಕ್ಕನೆ ತಿರುಗಿ ನೋಡ್ತಾಳೆ- ನಕುಲ ಸ್ಟೀಲ್ ತಟ್ಟೆ ತುಂಬಾ ಅನ್ನ-ಹುಳಿ ಸುರ್ಕೊಂಡು ಕಲೆಸಿ ಸೊರಬುಸ ಶಬ್ದ ಮಾಡ್ಕೊಂಡು  ತಿನ್ತಾ ಇದ್ದಾನೆ!..

ಕಮ್ಲೂ- ಶ್ರೀಕಂಠೂ ಇಬ್ರೂ ಸ್ಟ್ಯಾಚ್ಯು!… ನಕುಲ ತನ್ನ ಪಾಡಿಗೆ ತಾನು ಸ್ಟೀಲ್ ತಟ್ಟೆಯನ್ನು ನೆಕ್ಕುತ್ತ ಪಕ್ಕಾ ಲೋಕಲ್ ಆಗ್ಬಿಟ್ಟಿದ್ದ.!!

                                 

Related posts

ಆಗಂತುಕರು

YK Sandhya Sharma

ಬರಸಿಡಿಲು

YK Sandhya Sharma

ಕಾಲ್ಗುಣ

YK Sandhya Sharma

8 comments

Kusuma seshadri October 27, 2023 at 11:15 pm

Very easy and funfilled, attractive humorous dialogues, nice to read!

Reply
YK Sandhya Sharma October 30, 2023 at 10:31 pm

ಅಪಾರ ಧನ್ಯವಾದಗಳು ಗೆಳತಿ ಕುಸುಮಾ.

Reply
YK Sandhya Sharma March 27, 2024 at 7:17 pm

Thanks Kusuma.

Reply
YK Sandhya Sharma May 10, 2024 at 8:06 pm

Thanks a lot Kusuma

Reply
M C SUJENDRA BABU October 28, 2023 at 9:28 am

Really good work done by Smt Sandhya Sharma madam 👏

Reply
YK Sandhya Sharma October 30, 2023 at 10:29 pm

ಧನ್ಯವಾದಗಳು ಸುಜೇಂದ್ರ ಬಾಬು ಅವರಿಗೆ.

Reply
YK Sandhya Sharma March 27, 2024 at 7:17 pm

Thanks a lot Sujendra Babu.

Reply
YK Sandhya Sharma May 10, 2024 at 8:06 pm

Thank you so much

Reply

Leave a Comment

This site uses Akismet to reduce spam. Learn how your comment data is processed.