ಕಾಲದ ಮುಲಾಮು….
ಸೊಸೆಯನ್ನು ಕೆಕ್ಕರಿಸಿಕೊಂಡು ನೋಡಿದರು ಇಂದಿರಮ್ಮ. ಹಾಗೇ ನೋಡಿದರೆ ಅವಳ ತಾಯಿಗಿಂತ ತಾನು ವಯಸ್ಸಿನಲ್ಲಿ ದೊಡ್ಡವಳು, ವಾವೆಯಲ್ಲಿ ಗಂಡನ ತಾಯಿ ಅತ್ತೆ -ಗೌರವಕ್ಕೆ ಅರ್ಹಳಾದವಳು, ನಾನೊಬ್ಬ ಮನುಷ್ಯಳು ಅಂತಾನೂ ಲೆಕ್ಕಕ್ಕಿಲ್ವೇ…ಸಂಬಂಧವಿಲ್ಲದವಳಂತೆ, ಪ್ರಾಣಿಯಂತೆ-ವಸ್ತುವಿನಂತೆ ಮಾತನಾಡಿಸ್ತಾಳಲ್ಲ ಅಂತ ಆಕೆಗೆ ಹೊಟ್ಟೆ ಧಗಧಗಿಸಿತು.
ಮಗನೊಡನೆ ಜಬರ್ದಸ್ತಿನಿಂದ ಹೊರಗೆ ಹೊರಟವಳನ್ನು ಅಡಿಯಿಂದ ಮುಡಿಯವರೆಗೂ ದಿಟ್ಟಿಸಿದರು. ಅವಳು ಧರಿಸಿದ್ದ ಷರಾಯಿ-ಮೇಲಂಗಿಗೆ ಏನಿಲ್ಲವೆಂದರೂ ಮೂರ್ನಾಲ್ಕು ಸಾವಿರ ತೆತ್ತಿರಬೇಕು. ಥೇಟ್ ಗಂಡಸಿನಂತೆ ಕಾಣಿಸ್ತಾಳೆ. ಬೋಳು ಹಣೆ. ಭುಜಕ್ಕೂ ಮೇಲಕ್ಕೆ ಕತ್ತರಿಸಿದ ಕೂದಲು. ಕೈ ಖಾಲಿ, ಕೊರಳು ಬಿಕೋ. ತುಟಿಗೆ ಮಾತ್ರ ಗಾಢವಾಗಿ ಬಳೆದ ಬಣ್ಣ. ಅವಳು ಓಡಾಡಿದ ಜಾಗವೆಲ್ಲ ಪತ್ತೆಯಾಗಿ ಬಿಡಬೇಕು ಅಂಥ ಉಸಿರುಗಟ್ಟಿಸೋ ಅದೇನೋ ಗಂಧದ ಪರ್ಫ್ಯುಮು…!!!…ಚಪ್ಪಲಿ ಗೂಡು ಭರ್ತಿ ಅವಳದೇ ಐವತ್ತು ಬಗೆಯ ಸಿಂಗಾರದ ಜೋಡಿನ ಅಂಗಡಿ…. ಶೋರೂಮಿನಲ್ಲಿರೋ ವ್ಯಾನಿಟಿ ಬ್ಯಾಗ್ ಗಳೆಲ್ಲ ಖರೀದಿಯಾಗಿ ಇವಳ ಬೀರು ತುಂಬಾ ತೂಗಾಡ್ತಿವೆ!..
‘ನಡೀರಿ ಹೊತ್ತಾಯ್ತು…’ ಎಂದು ಗಂಡನನ್ನು ಹೊರಡಿಸಿಕೊಂಡು, ಬೆರಳಲ್ಲಿ ಕಾರಿನ ಕೀ ತಿರುಗಿಸುತ್ತಾ, ಎದ್ದು ಹೋದ ಮಾತು ಬಿದ್ದೋಗ್ಲಿ ಅಂತ ಅಲಕ್ಷ್ಯದಿಂದ ಅತ್ತೆ ಕಡೆ ತಿರುಗಿಯೂ ನೋಡದೆ, ‘ಹೂಂ ಬರ್ತೀವಿ’ ಎಂದು ಒಂದು ಮಾತು ಬಿಸಾಕಿ ಟಕ ಟಕ ಹೈಹೀಲ್ಡ್ ಸ್ಲಿಪ್ಪರ್ ಶಬ್ದ ಮಾಡಿಕೊಂಡು ಬಾಗಿಲು ದಾಟಿದವಳನ್ನು ಕಂಡು ಇಂದಿರಮ್ಮ ಹಲ್ಲು ಕಟಕಟಿಸಿದರು.
‘ಬರ್ತೀವಮ್ಮ ಎಂದಿದ್ದರೆ ಇವಳಪ್ಪನ ಮನೆ ಗಂಟೇನು ಹೋಗ್ತಿತ್ತು..’- ಎಂದು ನೋವಿನಿಂದ, ದುಃಖದಿಂದ ಕಣ್ತುಂಬಿಸಿಕೊಂಡರು ಆಕೆ.
ಪೇಪರಿನಲ್ಲಿ ಮುಖ ಹುದುಗಿಸಿಕೊಂಡು ಸೋಫಾದ ಮೇಲೆ ಕುಳಿತಿದ್ದ ರಾಮಮೂರ್ತಿಗೆ ಹೆಂಡತಿಯ ಅತಿ ಭಾವುಕತೆ ಕಂಡು ರೇಗಿಹೋಯಿತು. ‘ಏಯ್, ಸುಮ್ನೆ ಕೂತ್ಕೊಳ್ಳೆ..ದಿನಾ ಇದೇ ನಿನ್ನ ರಗಳೆ ಆಗಿಹೋಯ್ತು…ಅವಳು ಅನ್ನಲ್ಲ, ನೀನು ಬಿಡಲ್ಲ…ಅದೇನು ಅವಳ ಕೈಲಿ ‘ಅಮ್ಮಾ’ ಅಂತ ಅನ್ನಿಸಿಕೊಳ್ಳಬೇಕೂಂತ ಹಟ…ಒಂದ್ವೇಳೆ ಒಳಗೆ ಅಂಥ ಭಾವನೆ ಇಲ್ದೆ, ಬಾಯಲ್ಲಿ ಬರೀ ಅಮ್ಮಾ ಅಂತ ಒದರಿಬಿಟ್ರೆ ಸಾಕೇನೆ …ಹೂಂ..ಇಷ್ಟು ವಯಸ್ಸಾಯ್ತು, ಇನ್ನೂ ಒಂದೂ ಅರ್ಥ ಆಗಲ್ಲ ನಿನಗೆ .. ತೋರಿಕೆಗೆ ಬೆಲೆ ಕೊಡಬಾರದೇ’-ಎಂದು ಆತ, ಹೆಂಡತಿಗೆ ಬುದ್ಧಿ ಹೇಳುವ ತಮ್ಮ ವ್ಯರ್ಥ ಪ್ರಯತ್ನಕ್ಕೆ ರೋಸಿಹೋಗಿ ಮತ್ತೆ ಮುಖಕ್ಕೆ ಪೇಪರ್ ಅಡ್ಡ ಹಿಡಿದುಕೊಂಡರು.
‘ನಿಮಗೆ ನನ್ನ ಮನಸ್ಸಿನ ಸೂಕ್ಷ್ಮ ಒಂದೂ ಅರ್ಥ ಆಗಲ್ಲ..ಮದುವೆಯಾಗಿ ಎರಡು ವರ್ಷ ದಾಟಿತು..ಒಂದು ದಿನ ಆದರೂ ಪ್ರೀತಿಯಿಂದ ಅಮ್ಮಾ ಅಂತ, ಹೋಗಲಿ, ಅತ್ತೆ ಅಂತನಾದರೂ ಕರೆದಿದ್ದಾಳಾ ಶೂರ್ಪನಖಿ…ಹಾದಿ ಬೀದಿಯೋರ್ನೆಲ್ಲ ಆಂಟಿ, ಆಂಟಿ ಅಂತ ಕರೀತಾಳೆ, ನನ್ನ ಏನೋ ಒಂದು ಸಂಬೋಧಿಸಿ ಕರೆಯಕ್ಕೇನು ರೋಗ ಅವಳಿಗೆ…ಪ್ರಾಣಿ ಥರ ಸಂಬೋಧನೆ ಇಲ್ಲದೆ ಮಾತಾಡಿಸ್ತಾಳಲ್ಲ, ಎಷ್ಟು ಕೋಪ ಬರತ್ತೆ ಗೊತ್ತಾ…ಎಷ್ಟು ನೋವಾಗತ್ತೆ ಗೊತ್ತಾ?…ಕಸಕ್ಕಿಂತ ಕಡೆ ನಾನು ಈ ಮನೇಲಿ…’ – ಸೊರಬುಸ ಮಾಡಿದರು ಇಂದಿರಮ್ಮ.
ಸೊಸೆ ಅಷ್ಟು ಖಡಕ್ ಆಗಿರುವಾಗ ತಾವು ತಾನೇ ಏನು ಹೇಳಲು ಸಾಧ್ಯ ಎಂದು ಅಸಹಾಯಕತೆಯಿಂದ ರಾಮಮೂರ್ತಿ ತಮ್ಮ ಬಾಯನ್ನು ಹೊಲಿದುಕೊಂಡು ಕೂತಿದ್ದರು.
ಇಬ್ಬರೂ ಕಡಮೆಯಿಲ್ಲ….ಏತಿ ಎಂದರೆ ಪ್ರೇತಿಗಳು….ಈ ರಂಪ ದಿನಾ ಇದ್ದದ್ದೇ…ಮಗ ನಿತಿನ್ ಕೂಡ ಈ ವಿಷಯದಲ್ಲಿ ಅಸಹಾಯಕನಾಗಿದ್ದ.
‘ಅವಳು ಬೇರೆ ಯಾರದೋ ಮನೆಯೋಳು, ಅವಳು ‘ಅಮ್ಮಾ’ ಅನ್ನದಿದ್ರೆ ಏನಂತೆ…ನಾನು ನಿನ್ನ ಪ್ರೀತಿಯ ಮಗ, ನಿನ್ನ ಬಾಯ್ತುಂಬಾ ಅಮ್ಮ ಅನ್ತೀನಲ್ಲಮ್ಮ ಇನ್ಯಾಕೆ …ಪ್ಲೀಸ್, ಈ ವಿಷಯಾನ ಇಲ್ಲಿಗೇ ಬಿಟ್ಬಿಡಮ್ಮ …ಒಂದು ತಿಳ್ಕೋ, ನಾನೂ ಅವಳ ತಾಯಿಯನ್ನು ಏನೂ ಸಂಬೋಧಿಸಿ ಕರೆಯಲ್ಲ ಗೊತ್ತಾ, ಹಾಗಂತ ಆಕೆ ಬೇಜಾರು ಮಾಡಿಕೊಂಡಿದ್ದಾರಾ ಹೇಳು?..ಸುಮ್ ಸುಮ್ನೆ ನೊಂದುಕೋ ಬೇಡಮ್ಮ…ಅವಳು ಅಮ್ಮಾ ಅನ್ನದಿದ್ರೆ ಕತ್ತೆ ಬಾಲ, ಕುದುರೆ ಜುಟ್ಟು…’ ಎಂದು ತಾಯಿಯನ್ನು ಸಮಾಧಾನಿಸಲು ಪ್ರಯತ್ನಿಸಿದ.
ಶಮಾ ಹತ್ತಿರ ಮಾತ್ರ ಅವನು ಇಷ್ಟು ನಿರ್ಭಿಡೆಯಿಂದ ಮಾತನಾಡಲಾಗಿಲ್ಲ. ಮೆಲ್ಲಗೆ ಗೋಗರೆದ-‘ ಅವರೂ ನಿಂಗೆ ಅಮ್ಮನ ಥರನೇ ಅಲ್ವಾ ಚಿನ್ನಾ …’
‘ಹೌದು ಥರ…ಆದ್ರೆ ಅಮ್ಮಾ ಅಲ್ವಲ್ಲಾ..’
‘ದಿನ ಬೆಳಗಾದ್ರೆ ಒಂದೇ ಮನೆಯಲ್ಲಿ ಇರೋರು ನೀವು, ಸದಾ ಮುಖ ಮುಖ ನೋಡಬೇಕಲ್ವಾ…ಹೀಗೆ ಹಳಸಿಕೊಂಡ್ರೆ ಹೇಗೆ ಶಮಾ?’
‘ಹಾಗಂತಾ…ಮನಸ್ಸಿಗೆ ಒಪ್ಪದ್ದನ್ನ ಮಾಡೂ ಅಂತೀರಾ…ಮೊದಲ್ನೇ ದಿನದಿಂದಲೂ ನಂಗೆ ಅವರನ್ನ ಕಂಡ್ರೆ ಆತ್ಮೀಯತೆ ಹುಟ್ಟಿಲ್ಲ..ಅವರಿಗೂ ನನ್ನ ಕಂಡರೆ ಅಷ್ಟಕ್ಕಷ್ಟೇ.. ಅಷ್ಟಕ್ಕೂ ‘ಅಮ್ಮ’ ಅಂತ ಕರೆಯಕ್ಕೆ ನನ್ನ ಅಮ್ಮಾ ಇದ್ದಾರಲ್ಲಾ?…ನನಗೆ ಆಕೇನ ನೋಡಿದರೆ ಏನೂ ಕರೆಯಕ್ಕೆ ಮನಸ್ಸು ಬರಲ್ಲ ತಿಳ್ಕೊಳ್ಳಿ..’ ಮುಖ ಕೊಂಕಿಸಿದಳು.
ನಿತಿನ್ ನಿರ್ವಿಣ್ಣನಾದ!!…ಸೇರದ ಮನಸ್ಸುಗಳನ್ನು ಬೆಸೆಯೋದು ಹೇಗೆ ಎಂದು ತಂದೆ-ಮಗ ಇಬ್ಬರೂ ತುಂಬಾ ತಲೆ ಕೆಡಿಸಿಕೊಂಡಿದ್ದರು.
ಅತ್ತೆ-ಸೊಸೆಗೆ ಎಣ್ಣೆ-ಸೀಗೆಕಾಯಿ. ಇಂದಿರಮ್ಮ ಎಂದೋ ಒಮ್ಮೆ ಅವಳಮ್ಮನನ್ನು ಆಕ್ಷೇಪಿಸಿದ್ದರು ಅಂತ ಅವಳ ಮನಸ್ಸು ಕಹಿ.
ವಿಧೇಯತೆ ಪದದ ಪರಿಚಯವಿಲ್ಲದ ಸೊಸೆಯ ದಬ್ಬಾಳಿಕೆಯ ವರ್ತನೆ ಕಂಡು ಅತ್ತೆ ಗರಂ!..
‘ನನ್ನ ಮಗನ್ನ ಚೆನ್ನಾಗಿ ಬೋಳಿಸ್ತಾಳೆ..ಅವನ ಸಂಪಾದನೆಯೆಲ್ಲ ಅವಳ ವೈಭವಕ್ಕೇ ಆಗತ್ತೆ…ಬಂದ ಎರಡು ವರ್ಷಗಳಲ್ಲೇ ಗಂಡನ್ನ ಎಷ್ಟು ಪಳಗಿಸಿದ್ದಾಳೆ ನೋಡಿ..’ ಎಂಬ ಮಾಮೂಲಿ ಅತ್ತೆಯ ಅಧಿಕಾರದ ಗುನುಗು ಇಂದಿರಮ್ಮನದು.
ಅಶಾಂತಿಯ ವಾತಾವರಣ ತಂದೆ-ಮಗನಿಗೆ ಹತಾಶೆಯ ಇರುಸು ಮುರುಸು. ಏಕಮಾತ್ರ ಪುತ್ರನಾದ ತಾನು ಹೆಂಡತಿ ಮಾತು ಕೇಳಿಕೊಂಡು ವೃದ್ಧಾಪ್ಯದಲ್ಲಿ ಹೆತ್ತವರನ್ನು ಬಿಟ್ಟು ಹೋದರೆ ತನಗೆ ತಾನೇ ನೆಮ್ಮದಿಯೇ ಎಂಬ ಕೊರಗು ನಿತಿನ್ ದಾದರೆ, ಹೊಟ್ಟೆ ಬಟ್ಟೆ ಕಟ್ಟಿ, ಕಣ್ಣಲ್ಲಿ ಕಣ್ಣು ಇಟ್ಟು ಅಷ್ಟು ಜೋಪಾನವಾಗಿ ಸಾಕಿ-ಬೆಳೆಸಿದ ಮಗನನ್ನು ಪರಭಾರೆ ಮಾಡಿದ ಸಂಕಟ ಮುದಿ ದಂಪತಿಗಳದು. ಯಾಕೋ ಎಲ್ಲೋ ಹಳಿ ತಪ್ಪುತ್ತಿದೆ ಎಂಬ ಭಾವನೆ ಎಲ್ಲರನ್ನೂ ಬಾಧಿಸುತ್ತಿದೆ.
ಹಾಗಂತ ಅತ್ತೆ-ಸೊಸೆ ಇಬ್ಬರೂ ಪರಮ ನೀಚರಲ್ಲ, ಕೆಟ್ಟವರೂ ಅಲ್ಲ. ಆದರೂ ಪರಸ್ಪರ ದ್ವೇಷಿಗಳು.ಇವರಿಬ್ಬರು ಹೊಂದಿ ಬಾಳುವೆ ಮಾಡುವುದಂತೂ ದೂರದ ಮಾತು ಎಂಬುದು ನಿಶ್ಚಿತವಾಗಿತ್ತು. ಈ ಬಗೆಹರಿಯದ ಸಮಸ್ಯೆ ತಂದೆ-ಮಗನಿಗೆ ದೊಡ್ಡ ತಲೆನೋವು!!…
‘ಅವರ ಮಾತೂಕತೆ, ನಡವಳಿಕೆ ನನಗೆ ತುಂಬಾ ಅಲರ್ಜಿ …ಪ್ಲೀಸ್ ಅವರ ವಿಷಯದಲ್ಲಿ ನನ್ನ ಕನ್ವಿನ್ಸ್ ಮಾಡಬೇಡಿ, ನಾನು ಸತ್ತರೂ ಬದಲಾಗಲ್ಲ..’
ಅವಳ ಕಟುಮಾತು ನಿತಿನನ ಮನಸ್ಸು ಇರಿಯಿತು. ಮನೆಯ ನೆಮ್ಮದಿಯೇ ಕದಡಿ ಹೋಗಿತ್ತು!!.. ಅವನು ಆಡುವಂತಿಲ್ಲ, ಅನುಭವಿಸುವಂತಿಲ್ಲ
ಈ ಮಾತನ್ನು ಪರೀಕ್ಷೆ ಮಾಡಿದ ಹಾಗೆ ಆಗ್ಹೋಯ್ತು ಅವತ್ತು.
ಮಟ ಮಟ ಮಧ್ಯಾಹ್ನ. ಸೂರ್ಯ ನೆತ್ತಿಯ ಮೇಲೆ ನಿಗಿ ನಿಗಿ ಕೆಂಡವಾಗಿದ್ದ ಹೊತ್ತು. ಹೊರಗೆ ಟೆರೇಸ್ ಮೇಲೆ ಒಣಗಿಹಾಕಿದ್ದ ಬಟ್ಟೆಗಳನ್ನು ಒಳಗೆ ತಂದಿಟ್ಟ ಇಂದಿರಮ್ಮ ಇದ್ದಕ್ಕಿದ್ದ ಹಾಗೇ ಧುಡುಮ್ಮನೆ ನೆಲಕ್ಕುರುಳಿದರು. ಆಗ ಮನೆಯಲ್ಲಿದ್ದವಳು ಶಮಾ ಒಬ್ಬಳೇ. ಗಾಬರಿಯಾಗಿ ಅತ್ತೆಯ ತಲೆಗೆ ತಣ್ಣೀರು ತಟ್ಟಿ, ಮಹಡಿ ಮೆಟ್ಟಿಲ ಚೂಪು ತುದಿ ತಗುಲಿ ಹಣೆಯಿಂದ ಸುರಿಯುತ್ತಿದ್ದ ರಕ್ತವನ್ನು ಒರೆಸಿ, ಫಸ್ಟ್ ಏಡ್ ಮಾಡಿ, ಕೂಡಲೇ ಗಂಡನಿಗೆ ಫೋನ್ ಮಾಡಿದಳು.
ಜ್ಞಾನ ತಪ್ಪಿ ಬಿದ್ದಿದ್ದ ಅತ್ತೆಯನ್ನು ಕಂಡು ಹೆದರಿದ ಅವಳು ಫ್ಯಾಮಿಲಿ ಡಾಕ್ಟರರಿಗೂ ತಿಳಿಸಿದ್ದಳು. ಹೊರಗೆ ಹೋಗಿದ್ದ ರಾಮಮೂರ್ತಿ ವಿಷಯ ತಿಳಿದವರೇ ದಡಬಡಿಸಿ ಬಂದು ಹೆಂಡತಿಯನ್ನು ನರ್ಸಿಂಗ್ ಹೋಂಗೆ ಸೇರಿಸಿದ್ದರು.
ಎಲ್ಲ ಪರೀಕ್ಷೆಗಳೂ ನಡೆದವು. ಆಗಾಗ ತಲೆನೋವು ಎಂದು ಒದ್ದಾಡುತ್ತಿದ್ದ ಇಂದಿರಮ್ಮನವರ ರಕ್ತಪರೀಕ್ಷೆ, ಬಿಪಿ, ಮೆದುಳು ಸ್ಕ್ಯಾನಿಂಗ್ ಇನ್ನೂ ಏನೇನೋ ತಪಾಸಣೆಗಳು ನಡೆದವು.
ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಹೊಸ ಸಮಸ್ಯೆ ಸ್ಫೋಟಿಸಿತ್ತು.
ಶಮಾ ಮನದಲ್ಲೇ ಉಮ್ಮಳಿಸಿದಳು- ‘ಇನ್ನೇನು ಮತ್ತೆ ನನ್ನನ್ನು ಸುಮ್ಸುಮ್ನೆ ಗೋಳು ಹೊಯ್ದುಕೊಂಡ್ರೆ ಆ ದೇವರು ತೋರಿಸದೆ ಬಿಡ್ತಾನಾ..’
ಆಸ್ಪತ್ರೆಯಲ್ಲಿ ನಿಷ್ಪಂದಳಾಗಿ ಮಲಗಿದ್ದ ಇಂದಿರಮ್ಮನಿಗೆ ಸೊಸೆಯ ಎದುರು ಅನಾರೋಗ್ಯ ವುಂಟಾಗಿ ಅಸಹಾಯಕತೆಯಿಂದ ನರಳುವುದು ಅವಮಾನದ ಸಂಗತಿ. ಮುಖ ತಿರುವಿ ಮಲಗಿದರು.
‘ಅಬ್ಬಾ.. ಎಷ್ಟು ಧಿಮಾಕು..ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗ್ಲಿಲ್ವಂತೆ…’ ಮುಖ ಸೊಟ್ಟ ತಿರುವಿದಳು ಶಮಾ.
ವಾರದಲ್ಲೇ ಮೆಡಿಕಲ್ ರಿಪೋರ್ಟ್ಸ್ ಬಂದಿದ್ದವು. ತಂದೆ-ಮಗ ಹೌಹಾರಿದರು…!..ಈ ರೀತಿ ಇಂದಿರಮ್ಮ ತಲೆ ತಿರುಗಿ ಬಿದ್ದದ್ದು ಅದೆಷ್ಟನೆಯ ಬಾರಿಯೋ.
ಗಂಡನಿಂದ ವಿಷಯ ತಿಳಿದ ಶಮಾಳ ಮನಸ್ಸು ಕರಕ್ಕೆಂದಿತು.
‘ಫಸ್ಟೇಜಂತೆ… ದೇವರ ದಯ…ಅಮ್ಮನ್ನ ಹುಷಾರಾಗಿ ನೋಡಿಕೊಳ್ಳಬೇಕು…’ – ನಿತಿನ್ ನ ದನಿ ತೆಳ್ಳಗಾಗಿತ್ತು.
ಅತ್ತೆಗೆ ಮೊದಲ ಹಂತದ ಕ್ಯಾನ್ಸರ್ ಎಂದು ತಿಳಿದರೂ ಅವಳು ಪ್ರತಿಕ್ರಿಯಿಸಲಿಲ್ಲ. ತಂದೆ-ಮಗ ಟ್ರೀಟ್ ಮೆಂಟಿಗೆ ಓಡಾಡುತ್ತಿದ್ದರು. ಶಮಾ ಮನೆ ಕಡೆಯ ಜವಾಬ್ದಾರಿ ವಹಿಸಿಕೊಂಡಿದ್ದಳು.
ಆಸ್ಪತ್ರೆಯ ಓಡಾಟವೆಲ್ಲ ಮುಗಿದು ಇಂದಿರಮ್ಮ ಮನೆಗೆ ಬಂದಿದ್ದ್ದರು. ಮನೆಗೆ ಬಂದು ತಿಂಗಳಾಗಿದ್ದರೂ ಬಿಗಿಯಾಗೇ ಇದ್ದರು ಆಕೆ ಸೊಸೆಯ ಬಳಿ. ಆದರೆ ಕ್ರಮೇಣ, ಮೊದಲ ಜೋರು ಸ್ವಲ್ಪ ಕಡಮೆಯಾಗುತ್ತ ಬಂದು ಕರಗಿತ್ತು. ಆದರೂ, ಅವಳೆದುರು ಸೋಲು ಒಪ್ಪಿಕೊಳ್ಳಲು ಅವರ ಬಿಂಕ ಅಡ್ಡಬಂದಿತ್ತು.
‘ಇನ್ನಾದರೂ ನೀನು ಮೆಚೂರಿಟಿಯಿಂದ ನಡೆದುಕೋ.. ಹಟ ಯಾವತ್ತೂ ಒಳ್ಳೆಯದಲ್ಲ…ಪ್ರೀತಿ ಮನುಷ್ಯನ ಸಹಜ ಗುಣ ’ – ಗಂಡನ ಮಾತು ಆಕೆಯ ತಲೆಗೆ ಎಷ್ಟು ಇಳಿಯಿತೋ ಗೊತ್ತಿಲ್ಲ.
‘ಖಾಯಿಲೆಯಿಂದ ನರಳುತ್ತಿರೋ ಅಮ್ಮನ ಮೇಲೆ ಯಾಕಿಷ್ಟು ದ್ವೇಷ…ಅವರನ್ನು ಪ್ರೀತಿಯಿಂದ ನೋಡಿಕೊಳ್ಳೋದು ನಮ್ಮೆಲ್ಲರ ಕರ್ತವ್ಯ…ನೀನು ಓದಿದವಳು, ನಾನಿನ್ನು ಹೆಚ್ಚಿಗೆ ಹೇಳಲ್ಲ’
-ಶಮಾ ನಿತಿನನ ಮಾತಿಗೆ ಎದುರಾಡಲಿಲ್ಲ. ಆದರೂ ಒಳಗೊಳಗೇ ಅಂತರಂಗ ಕದಡಿತ್ತು. ದಿನಗಳನ್ನು ಎಣಿಸುತ್ತಿರುವ ಅವರನ್ನು ಕುರಿತು ಚಿಂತಿಸತೊಡಗಿತ್ತು ಅವಳ ಮನ.
ಬೂಚುಬೂಚಿ ಪ್ರೀತಿ ತೋರಿಸದೆ, ಕರ್ತವ್ಯ ಎಂಬಂತೆ ನಿರ್ಭಾವನೆಯಿಂದ ಅವರ ಸೇವೆ ಮಾಡತೊಡಗಿದಳು ಶಮಾ. ಆಕೆಯೂ ಒತ್ತಾಯಕ್ಕೆಂಬಂತೆ ಒಲ್ಲದ ಮನದಿಂದ ತಮ್ಮ ವಿಷಮ ಭಾವನೆಗಳನ್ನು ಒಳಗೇ ನುಂಗಿಕೊಂಡರು.
ಈ ನಡುವೆ ಪ್ರಶಾಂತವಾಗಿತ್ತು ಮನೆ….. ದನಿಗಳ ಕಾಳಗವಿಲ್ಲ. ಸ್ವಲ್ಪ ಎದ್ದು ಓಡಾಡುವ ಹಾಗಾಗಿದ್ದರೂ ಇಂದಿರಮ್ಮ ಸೊಸೆಯನ್ನು ಆಕ್ಷೇಪಿಸುವ ತಂಟೆಗೆ ಹೋಗದೆ ಕೊಂಚ ತಗ್ಗಿದ್ದು ಶಮಳಿಗೂ ಅಚ್ಚರಿ!!!..
ಅವಳು ಮಾಡಿದ್ದನ್ನು ತೆಪ್ಪಗೆ ಉಂಡರು, ನೀಡಿದ ಸೇವೆಯನ್ನು ತಕರಾರಿಲ್ಲದೆ ಸ್ವೀಕರಿಸಿದರು. ಅತ್ತೆಯಲ್ಲಾದ ಪರಿವರ್ತನೆ ಅವಳ ಕಣ್ಣಿಗೆ ಬೀಳದಿರಲಿಲ್ಲ. ಅವಳೂ ತೆಪ್ಪಗಾಗಿದ್ದಳು. ಇನ್ನೆಷ್ಟು ದಿನ ಎಂಬ ಅಂಶ ನೆನಪಾದಾಗ ಅವಳ ಗಟ್ಟಿ ಹೃದಯದಲ್ಲೂ ಮಾನವೀಯ ಸೆಲೆ ಮೆಲ್ಲನೆ ಉಕ್ಕತೊಡಗಿತ್ತು. ಇಂದಿರಮ್ಮನಿಗೂ ಇದೇ ಭಾವ ಹಿಡಿದಲುಗಿಸಿದಾಗ, ಪಶ್ಚಾತ್ತಾಪದ ಭಾವನೆಗಳು ಓತಪ್ರೋತ. ಇರುವಷ್ಟು ದಿನಗಳಾದರೂ ಒಳ್ಳೆಯ ಜೀವ ಎನಿಸಿಕೊಂಡು ಹೋಗುವ ಭಾವ ಬಲಿಯುತ್ತ ಅಂತಃಕರಣವನ್ನು ತುಂಬಿಕೊಂಡರು.
ಇದು ಕಾರಣವೋ ಅಥವಾ ದೇವರ ಕೃಪೆಯೋ ಸೊಸೆಯ ಕಾಳಜಿಯುತ ಸೇವೆಯಿಂದ ಬಹು ಬೇಗ ಹುಷಾರಾಗುತ್ತ ಬಂದಿದ್ದರು ಇಂದಿರಮ್ಮ.
ಒಂದೆರಡು ವರ್ಷಗಳಲ್ಲಿ ಅದೆಷ್ಟು ಬದಲಾವಣೆಗಳನ್ನು ಕಂಡಿತ್ತು ಆ ಕುಟುಂಬ ಎಂಬುದೇ ತಂದೆ-ಮಗನಿಗೆ ಅಚ್ಚರಿ- ಸಂತಸ.
‘ಅಮ್ಮಾ, ಕಾಫಿ ತೊಗೊಳ್ಳಿ…’
– ಇಂದಿರಮ್ಮ ತಮ್ಮ ಕಿವಿಯನ್ನೇ ನಂಬದಾದರು!!.. ಛೆ…ತಾನೇಕೆ ಇಷ್ಟು ಕ್ರೂರಿಯಂತೆ ನಡೆದುಕೊಂಡೆ…ಇವಳೂ ನನ್ನ ಮಗಳ ಹಾಗೇ ಅಲ್ಲವೇ?- ಹೃದಯ ಕಲಸಿ ಬಂದಂತಾಗಿ ಕಣ್ಣಲ್ಲಿ ನೀರಾಡಿತು. ಮಾತೃಹೃದಯ ತೆರೆದುಕೊಂಡು ಮಿದುವಾಯಿತು.
ಸೊರಗಿ ಕೃಶವಾಗಿದ್ದ ಅತ್ತೆಯ ಬತ್ತಿದ ಕಣ್ಣುಗಳನ್ನು ವೀಕ್ಷಿಸುತ್ತ ಶಮಾ ‘ಛೆ…ಇವರೂ ನನ್ನ ತಾಯಿ ಇದ್ದ ಹಾಗಲ್ಲವೇ?’ -ಎಂದು ನೆನೆಯುತ್ತ ಭಾವುಕಳಾದಳು. ಒಳಗೊಳಗೇ ಪಶ್ಚಾತ್ತಾಪ ಹುರಿದು ಮುಕ್ಕುತ್ತಿತ್ತು.
‘ ಕಾಲದ ಮುಲಾಮು, ನೋವಿಗೆ ಸಲಾಮು …’
ರೇಡಿಯೋದಿಂದ ತೇಲಿ ಬರುತ್ತಿದ್ದ ಕವಿತೆಯ ಸಾಲು ಮನೆಯೆಲ್ಲ ಅಲೆಅಲೆಯಾಗಿ ರಿಂಗಣ ಗುಣಿಸಿತು.
******************