Image default
Short Stories

ಅಂತರ

 “ಮನಿಯಾರ್ಡರ್”

ಬಾಗಿಲ ಚಿಲಕವನ್ನು ಟಕಟಕ ಸದ್ದು ಮಾಡಿ ಜೋರಾಗಿ ಕೂಗಿದ ಪೋಸ್ಟ್ ಮ್ಯಾನ್.

ಅಡುಗೆ ಮನೆಯಲ್ಲಿ ಸೊಪ್ಪು ಹಚ್ಚುತ್ತಿದ್ದ ನರ್ಮದಾ ತಕ್ಷಣ ಸ್ಪ್ರಿಂಗಿನಂತೆ ಮೇಲೆದ್ದು ಕೈ ತೊಳೆದುಕೊಂಡು ಸೆರಗಿಗೆ ಕೈ ಒತ್ತಿಕೊಳ್ಳುತ್ತ ಹೊರಗೆ ಧಾವಿಸಿ ಬಂದಳು.

ಅಂಚೆಯವನು  ಪರಿಚಿತ ನಗೆ ನಕ್ಕು ಅವಳ ಮುಂದೆ ಎಂ.ಓ. ಫಾರಂ ಹಿಡಿದ. ಸಹಿ ಹಾಕುವಾಗ ಅವಳ ಕೈ ನಡುಗಿದರೂ ಉಕ್ಕುತ್ತಿದ್ದ ಭಾವನೆಗಳು ತನ್ನ ಮುಖದಲ್ಲಿ ಹೊರಚಿಮ್ಮದಂತೆ ಒತ್ತಾಯಪೂರ್ವಕವಾಗಿ ತಡೆಹಿಡಿದಳು.

ಪೋಸ್ಟ್ ಮ್ಯಾನ್ ಅವಳ ಕೈಗೆ ನೂರರ ಮೂರು ನೋಟುಗಳನ್ನಿಟ್ಟು, ಫಾರಂನ ಕೆಳತುಂಡನ್ನು ಹರಿದುಕೊಟ್ಟು ಹೊರಟುಹೋದ.

ನರ್ಮದಾ ಕಾತುರದಿಂದ ಆ ಕಾಗದದ ತುಂಡನ್ನು ಹಿಂದೆ ಮುಂದೆ ತಿರುಗಿಸಿ ನೋಡಿದಳು, ಏನೂ ಬರೆದಿರಲಿಲ್ಲ… ಖಾಲಿ….. ರೂ. ಜಾಗದಲ್ಲಿ ಮುನ್ನೂರು ಎಂಬ ಸಂಖ್ಯೆ. ಹಿಂದೆ ಹಣ ಕಳುಹಿಸಿದವರ ಗುರುತಿಸಲಾಗದಂಥ ಮೋಡಿ ಅಕ್ಷರದ ಸಹಿ. ಕೈಲಿದ್ದ ನೋಟುಗಳನ್ನು ಸವರುತ್ತ ಮತ್ತೆ ಮತ್ತೆ ದೃಷ್ಟಿಸಿದಳು. ಫಾರಂನ ತುಂಡಿನ ಮೇಲಿದ್ದ ಸಹಿಯನ್ನು ಬೆರಳುಗಳಿಂದ ಸ್ಪರ್ಶಿಸಿದಳು. ಅವಳ ಮೈಯಲ್ಲಿ ಪುಲಕದ ಅಲೆಯೆದ್ದಿತು. ಮೈ ಬಿಸಿಯೇರಿತು. ಕಣ್ಣಾಲಿಗಳು ನೀರಿನಲ್ಲಿ ಮುಳುಗಿ ಫಳಕ್ಕನೆ ಕಣ್ಣ ಹನಿ ಕದಪಿನ ಮೇಲೆ ಪುಟಿಯಿತು. ಕೈಯಲ್ಲಿದ್ದುದನ್ನು ಹಾಗೇ ಎದೆಗೊತ್ತಿಕೊಂಡು ನರ್ಮದಾ ಕುರ್ಚಿಯ ಮೇಲೆ ಕುಸಿದಾಗ ದೊಡ್ಡ ನಿಟ್ಟುಸಿರು ಹೊರಚಿಮ್ಮಿತು.

‘ಅಮ್ಮಾ’ ಎನ್ನುತ್ತ ಓಡಿಬಂದ ಮೂರು ವರ್ಷದ ಅನುಪ ನರ್ಮದೆಯ ಕೈಯಿಂದ ನೋಟುಗಳನ್ನು ಕಸಿದುಕೊಂಡಾಗಲೇ ಅವಳಿಗೆ ಎಚ್ಚರ. ಎದುರಿಗೆ ಬೊಗಸೆಗಣ್ಣುಗಳನ್ನರಳಿಸಿ ನಿಂತ ಮಂಗಳ ಮುದ್ದು ಮೊಗವನ್ನು ಮೈಮರೆತು ದಿಟ್ಟಿಸಿದಳು. ಎಲ್ಲಾ ಅವರದೇ ಪಡಿಯಚ್ಚು. ಮಗುವನ್ನು ಬಾಚಿ ತಬ್ಬಿಕೊಂಡಳು. ಅನುಪಳ ಸೊಂಪುಗೂದಲ ಮೇಲೆ ಅವಳ ಕಂಬನಿ ಜಾರಿತು. ನರ್ಮದಾ ವಿಗ್ರಹದಂತೆ ಕುಳಿತಿದ್ದಳು. ಅವಳೆದುರಿಗಿದ್ದ ಖಾಲಿ ಫಾರಂ ತುಂಡು ಅವಳೆದೆಯೊಳಗೆ ದೊಡ್ಡ ತುಫಾನನ್ನೇ ಎಬ್ಬಿಸಿತ್ತು. ಮತ್ತೆ ಮತ್ತೆ ಅದನ್ನು ತಿರುಗಿಸಿ ನೋಡುವ ತನ್ನ ಭ್ರಮೆಗೆ ತಾನೇ ವಿಷಾದದಿಂದ ನಕ್ಕಳು. ತನ್ನ ಕಣ್ಣೋಟಕ್ಕೆ ಅವರ ಹೃದಯದೊಳಗಿನ ಭಾವನೆಗಳನ್ನು ಅಕ್ಷರವಾಗಿ ಹಿಡಿದಿಡುವ ವಶೀಕರಣ ಶಕ್ತಿಯುಂಟೇ? ಅಂಥ ಸ್ಫೂರ್ತಿ, ಪ್ರೇರಣೆಗಳುಂಟೇ? ತನ್ನ ಹೃದಯ ಎಷ್ಟೇ ಭೋರಿಟ್ಟರೂ, ಒಲುಮೆ ಸುರಿಸಿದರೂ, ಕಣ್ಣೀರು ಹರಿಸಿದರೂ ಅದು ವಾಸ್ತವದಲ್ಲಿ ಬರೀ ಖಾಲಿ ಕಾಗದವಷ್ಟೇ…..ಅಕ್ಷರವನ್ನು ಸ್ಪರ್ಶಿಸದ, ಭಾವನೆಗಳನ್ನು ವರ್ಷಿಸದ ಬರಡು ನಿರ್ಜೀವದ ಕಾಗದದ ತುಂಡು… ತನ್ನ ಪಾಲಿಗೆ ಖಾಲಿಯಾದ ನಿಷ್ಠುರ ಸತ್ಯವನ್ನು ಚುಚ್ಚಿ ಹೇಳುವ ಅದನ್ನು  ಕೈಯಲ್ಲಿ ಹಿಸುಕಿ ಮೂಲೆಗೆಸೆದಳು ನರ್ಮದಾ.

ಅವಳ ಬೆನ್ನ ಹಿಂದೆ ತಂದೆ ನಿಂತಿದ್ದರು. ಅವರ ಮಮತೆಯ ಹಸ್ತ ಅವಳ ಬೆನ್ನ ಮೇಲೆ ಈಜಾಡುತ್ತಿತ್ತು. ಮಗಳ ಹೃದಯದ ಕುದಿತ ಅವರ ಕಣ್ಣುಗಳಲ್ಲಿ ಪ್ರತಿಫಲನಗೊಂಡಿತ್ತು.

ನರ್ಮದಾ ಮೆಲ್ಲನೆದ್ದು ಕಣ್ಣೀರನ್ನು ಬೆರಳಿನಿಂದ ಮಿಡಿದು, ಕೆಳಗೆ ಬಿದ್ದಿದ್ದ ನೋಟುಗಳನ್ನೆತ್ತಿ ತಂದೆಯ ಕೈಲಿಟ್ಟು ಒಳ ನಡೆದಳು.

ಕಳೆದ ಮೂರು ವರ್ಷಗಳಿಂದಲೂ ತಪ್ಪದ ಪುನರಾವರ್ತಿತ ಘಟನೆ ಇದಾಗಿತ್ತು. ದಿನಕರನ ಹೃದಯ ಇಷ್ಟು ಖಾಲಿ, ಕಪ್ಪು ಎಂದವಳಿಗೆ ಮನವರಿಕೆಯಾದದ್ದು ಈಚಿನ ಮೂರು ವರ್ಷಗಳಲ್ಲಿ. ಆದರೆ ಅವಳ ಹೃದಯವಾದರೋ ಅವನನ್ನು ಮೊದಲು ಕಂಡ ದಿನ ಅವನ ಬಗ್ಗೆ ರಂಗು ರಂಗಾಗಿ, ಕಾಮನಬಿಲ್ಲಾಗಿ ಪುಟಿದಿತ್ತು.

“ಅಷ್ಟು ಸೀರಿಯಸ್ ಸ್ವಭಾವದ, ಗಂಭೀರ ಹುಡುಗನನ್ನು ನೀನು ಫಸ್ಟ್ ಸೈಟಿನಲ್ಲೇ ಅದು ಹೇಗೆ ಲವ್ ಮಾಡಿದೆ

ನಿಮ್ಮಿ ?” ಎಂದು ಅವಳ ಹಿರಿಯಣ್ಣ ಶಂಕರ ಅವಳ ಬೆನ್ನನ್ನು ಗುದ್ದಿ ಪ್ರಶ್ನಿಸಿದ್ದ . ನರ್ಮದಾ ತನ್ನೆದೆಯ ರಾಗವನ್ನೆಲ್ಲ ಮುಖಕ್ಕೆ ತಂದುಕೊಂಡಳು.

ಲಜ್ಜೆಯಿಂದ “ಹೋಗೋ ಅದೆಲ್ಲ ನಿನಗ್ಯಾಕೆ?” ಎಂದಿದ್ದಳು ಮೂತಿಯುಬ್ಬಿಸಿ.

“ನನಗದು ಬೇಕು… ಲವ್ ಸೀಕ್ರೆಟ್ ಏನು ಅಂತ ತಿಳ್ಕೋಬೇಕು ಕಣೆ ಹೇಳೇ” ಎಂದು ನರ್ಮದಾಳ ನೀಳ ಹೆರಳನ್ನು ಎಳೆದು ನಿಲ್ಲಿಸಿದ ಶಂಕರ.

ಹೌದು… ತಾನೇನು ಅಂಥ ಆಕರ್ಷಣೆ ಕಂಡೆ ಅವರಲ್ಲಿ ?! ಮಾತು ಮಾತಿಗೆ ಕಣ್ಮಿಟುಕಿಸಿ ತುಂಟ ನಗು ಬೀರುವ ಪರಿಯೇ? ಚಿಗುರು ಮೀಸೆ ತೀಡಿಕೊಳ್ಳುವ ಆಕರ್ಷಕ ವೈಖರಿಯೇ? ಹಣೆಯ ಮೇಲಿನ ಸುಳಿಗೂದಲನ್ನು ಹಿಂದಕ್ಕೆ ತೀಡಿಕೊಳ್ಳುವ ಸುಂದರ ಶೈಲಿಯೇ…? ಊಹೂಂ…ಅಂಥ ಯಾವುದೂ ಅವರಲ್ಲಿ ಇಲ್ಲ…ಅವರ ಬಗ್ಗೆ ತನ್ನ ಸೆಳೆತವನ್ನು ವಿಶ್ಲೇಷಿಸುವುದು ಅವಳಿಗೆ ಈಗ ನಿಜವಾಗಿಯೂ ಕಷ್ಟವಾಯಿತು. ಗಾಂಭೀರ್ಯದ ಕೊಳಗಳಂತಿದ್ದ ಆ ಚಿಕ್ಕ ಚಿಕ್ಕ ಕಣ್ಣುಗಳು, ಸುಲಭದಲ್ಲಿ ಬಿಚ್ಚಿಕೊಳ್ಳಲಾರದ ತುಟಿಗಳು… ಅಪರೂಪಕ್ಕೊಮ್ಮೆ ನಗು ತುಂಬಿಕೊಳ್ಳುವ ಮೊಗ…

ಅಣ್ಣ ಕೇಳಿದ ಪ್ರಶ್ನೆಯನ್ನು ಅವಳು ಮತ್ತೆ ಮತ್ತೆ ತನ್ನನ್ನು ತಾನೇ ಕೇಳಿಕೊಂಡಳು. ಉತ್ತರ ಇದೇ ಎಂದು ನಿರ್ದಿಷ್ಟವಾಗಿ ಸಿಗದೆ ಗೊಂದಲದ ಭಾವ ಮುಖದಲ್ಲಿ ತುಳುಕಿಸಿ,

– “ಏನು ಅಂತ ಡೆಫನೆಟ್ ಆಗಿ ಗೊತ್ತಿಲ್ಲ. ಆದರೂ ಏನೋ” ಎಂದು ಕಿಸಕ್ಕನೆ ನಕ್ಕವಳು ಅಣ್ಣನ ಕೈಯಿಂದ ನುಣುಚಿಕೊಂಡು ದೂರ ಓಡಿದ್ದಳು.

‘ಆ ಪಾಯಿಂಟನ್ನು ಡೆಫ್‍ನೆಟ್ ಆಗಿ ನಿನಗೆ ಗುರುತಿಸಲಿಕ್ಕೆ ಆಗದಿದ್ರೂ… ಆ ಭಾವ ಡೆಫ್‍ನೆಟ್ ಆಗಿ ಶಾಶ್ವತವಾಗಿರಲಿ’ ಎಂದ ಶಂಕರ, ತಂಗಿಯ ಬಾಳು ಹಸನಾಗಿರಲಿ ಎಂದು ಹಾರೈಸಿದ.

ನರ್ಮದಳ ಎರಡನೇ ಅಣ್ಣ ಸುಧೀರನ ಮದುವೆಯಲ್ಲಿ ಗುಂಪಿನಲ್ಲಿ ಕಂಡ ಮುಖ…ಮೊದಲ ನೋಟಕ್ಕೆ ಅವಳ ಹೃದಯದಲ್ಲಿ ಅಚ್ಚೊತ್ತಿ ಕಂಪನಕ್ಕೀಡು ಮಾಡಿದ ಮುಖ. ಮಾತಿಲ್ಲ ಕತೆಯಿಲ್ಲ… ಅವನು ಯಾರೋ ಏನೋ?… ಬರೀ ಪರಸ್ಪರ ಕಣ್ಣೋಟ !… ಮೂರು ದಿನಗಳಲ್ಲೇ ಆ ಬಂಧ ಬೆಚ್ಚಗೆ ಬೆಸೆದುಕೊಂಡಿತ್ತು.

ಫೈನಲ್ ಬಿ.ಎ. ಓದುತ್ತಿದ್ದ ಹತ್ತೊಂಬತ್ತು ವರ್ಷದ ಚೆಲುವೆ ನರ್ಮದಾ ತನ್ನ ನೀಳ ಜೋಡಿ ಜಡೆಗಳನ್ನು ಬಳುಕಾಡಿಸಿಕೊಂಡು ಮದುವೆಯ ಮನೆ ತುಂಬ ಚಟುವಟಿಕೆಯಿಂದ ಓಡಾಡಿದ್ದೇ ಓಡಾಡಿದ್ದು.

ಬೀಗರ ಔತಣದ ದಿನ. ಅತ್ತಿಗೆಯ ಸೋದರತ್ತೆಯ ಮಗ, ನರ್ಮದಳ ಹೃದಯವನ್ನು ಕಲರವಗೊಳಿಸಿದ ದಿನಕರನ ಜೊತೆ ಅವಳ ಮೂರು ಜನ ಅಣ್ಣಂದಿರು ಮಾತನಾಡುತ್ತಿದ್ದ ದೃಶ್ಯ ಕಂಡು ಅವಳೆದೆ ಬಡಿದುಕೊಂಡಿತು. ಅವಳು ಹಾರೈಸಿದಂತೆ, ಕನಸು ಹೆಣೆದಂತೆಯೇ ಎಲ್ಲವೂ ಮುಂದಕ್ಕೆ ಸಾಂಗವಾಗಿ ನಡೆಯಿತು. ಒಳ್ಳೆಯ  ವರ ಎಂದು ದಿನಕರನನ್ನು ಯಾರೋ ಅವಳ ತಂದೆಗೆ ತೋರಿಸಿದ್ದರು. ಅದರ ಬಗ್ಗೆ ಮುಂದಕ್ಕೆ ಅವಳ ಅಣ್ಣಂದಿರು ವಿಚಾರಿಸಿಕೊಂಡರು ಕೂಲಂಕಷವಾಗಿ. ವಧೂ ಪರೀಕ್ಷೆಗೆ ಒಂದು ದಿನ ಗೊತ್ತುಪಡಿಸಿದರು.

ಬರಲಿರುವ ಹುಡುಗ ದಿನಕರನೆಂದು ತಿಳಿಯದ ನರ್ಮದಾ, ತಾನು ಆ ಹುಡುಗನ ಮುಂದೆ ಕೂರುವುದಿಲ್ಲವೆಂದು ಚಂಡಿ ಹಿಡಿದಳು. ಕಡೆಗೆ ಅವಳತ್ತಿಗೆ ಅವಳ ಮನವೊಲಿಸಿ ಕೇಳಿದಾಗ, ತಾನು ಆಕೆಯ ಸೋದರತ್ತೆ ಮಗನನ್ನು ಮೆಚ್ಚಿಕೊಂಡಿರುವುದಾಗಿ ತಿಳಿಸಿದಾಗ ಎಲ್ಲರಿಗೂ ನಗುವೋ ನಗು. ರೋಗಿ ಬಯಸಿದ್ದು ವೈದ್ಯ ಹೇಳಿದ್ದೂ ಎರಡೂ ಒಂದೇ ಆಗಿ ಅವಳ ಮನ ಆಗಸಕ್ಕೆ ಖುಷಿಯಿಂದ ಜಿಗಿಯಿತು.

ಮದುವೆಯ ಮುಂಚಿನ ಕಳ್ಳನೋಟ, ಮುಸಿನಗು ಕಾತುರ, ನಿರೀಕ್ಷೆಯ ಅಂಕ ಮುಗಿದು ಭಾವೋದ್ರೇಕದ ಅಪ್ಪುಗೆ, ಮುದ್ದಾಟಗಳ ಸ್ಪರ್ಶ ಸುಖ, ತೃಪ್ತಿಯ ನಿಲುಗಡೆಗೆ ತಲುಪಿದ ನಂತರ, ಅವರಿಬ್ಬರ ಹೃದಯಗಳ ಕವಾಟಗಳು ತೆರೆದುಕೊಂಡವು… ಮನಸ್ಸು, ಅಭಿರುಚಿ, ಅಭಿಪ್ರಾಯ, ರೀತಿ ರಿವಾಜು, ನಡುವಳಿಕೆಯ ವಾಸ್ತವದ ಗಟ್ಟಿ ದಿನಗಳಲ್ಲಿ ಕಾಲೂರಿದರು.

ದಿನಕರ ಮೊದಲ ನೋಟದಲ್ಲಿ ಕಾಣುವಷ್ಟೇ ನಿಜವಾಗಿ ಗಂಭೀರ ಸ್ವಭಾವದವನವಾಗಿದ್ದ, ಮಿತಭಾಷಿ. ಮಾತಿನ ಮಳೆ, ಪ್ರಣಯ, ಚೆಲ್ಲಾಟಗಳ ನಾಟಕೀಯ ದೃಶ್ಯಗಳಲ್ಲಿ, ಪ್ರದರ್ಶನ ಪ್ರೀತಿಗಳಲ್ಲಿ ಅವನಿಗೆ ನಂಬಿಕೆಯಿರಲಿಲ್ಲ. ಪ್ರೀತಿ ನುಗ್ಗಿ ಬಂದಾಗ ಹೇಗನಿಸುವುದೋ ಹಾಗೆ, ಸೌಮ್ಯವಾಗಿ ವರ್ತಿಸುತ್ತಿದ್ದ.  ಹೆಂಡತಿಯನ್ನು ಕನಸಿನ ಏಣಿಯಲ್ಲಿ ಏರಿಸುವ ಹುಸಿ ಮಾತು, ಅತಿರೇಕದ ಚೆಲ್ಲಾಟವಾಡದೆ ಮೌನವಾಗಿ ಅಪ್ಪಿಕೊಳ್ಳುವ ಗಂಡನ ನೀರಸ ವರ್ತನೆ ನರ್ಮದಳಿಗೆ ಕೊರತೆಯ ಅನುಭವವನ್ನುಂಟುಮಾಡಿತು. ತಾನು ಸಿನಿಮಾಗಳಲ್ಲಿ ಕಂಡಂತೆ, ಕಾದಂಬರಿಗಳಲ್ಲಿ ಓದಿದಂತೆ ತುಂಟ ಸ್ವಭಾವದ ಕೀಟಲೆಯ ಹುಡುಗನನ್ನು ಅವನಲ್ಲಿ ಕಾಣದೆ ನಿರಾಶೆಗೊಂಡಳು. ಅತೃಪ್ತಿಯಿಂದ ಸಿಡಿಮಿಗೊಂಡಳು. ಮುನಿಸು ತೋರಿದಳು, ಗಂಡನೊಡನೆ ಜಗಳವಾಡಲಾರಂಭಿಸಿದಳು.

ಕನಸುಗಾರ್ತಿ ನರ್ಮದಾ ಇದೀಗ ತಾನು ವಿಹರಿಸುತ್ತಿದ್ದ ಆಗಸದಿಂದ ವಾಸ್ತವದ ಭೂಮಿಗೆ ಜಾರಿ ಬಿದ್ದಿದ್ದಳು.

ದಿನಕರನೂ ಕೂಡ ಅವಳ ಬಗ್ಗೆ ಅಷ್ಟೇ ನಿರಾಶೆಗೊಂಡಿದ್ದ.  ತಾನೆಣಿಸಿದಂತೆ, ತಾನು ಬಯಸಿದಂತೆ ಅವಳು ಗಂಭೀರ ಸ್ವಭಾವದ ಗೃಹಿಣಿಯಾಗಿರದೆ, ಕಾಲೇಜಿನ ಟೀನೇಜ್, ಬಾಲಿಶ ಭ್ರಮಾಲೋಕದ ಬೊಂಬೆಯೆಂದು ಅರಿವಾಗತೊಡಗಿದಾಗ ಅವನು ಅತೃಪ್ತಿಯಿಂದ ಮಿಡುಕಾಡಿದ.

“ನನಗೊಬ್ಬಳು  ಪ್ರೌಢ ಮನಸ್ಸಿನ ಹೆಂಡತಿ ಬೇಕು…ವಾಸ್ತವ ಜಗತ್ತಿನ ಅರಿವುಳ್ಳ ಪ್ರಾಜ್ಞೆ…. ಇಂಗಿತಜ್ಞೆ…. ಸ್ಥಿತಪ್ರಜ್ಞೆ ಬೇಕು” ಎಂದವನು ಒಂದು ದಿನ ತನ್ನ ಮನಸ್ಸನ್ನು ಅವಳ ಮುಂದೆ ಸ್ಪಷ್ಟವಾಗಿ ಬಿಚ್ಚಿಟ್ಟ.

“ನನಗೂ ಅಷ್ಟೇ…. ನನ್ನ ವಯಸ್ಸಿಗೆ, ಮನಸ್ಸಿಗೆ ತಕ್ಕಂಥ ರೊಮ್ಯಾಂಟಿಕ್ ಹೀರೋ ಬೇಕು” ಎಂದಳು ನರ್ಮದಾ ಖಡಾಖಂಡಿತವಾಗಿ.

“ನಾನು ಬಯಸಿದಂತೆ ನೀನಿಲ್ಲ”

“ನಾನು ಅಂದುಕೊಂಡಂತೆ ನೀವಿಲ್ಲ’

ಪರಸ್ಪರ ವಿಮುಖರಾಗಿ ಕುಳಿತರು. ಈ ವಿಮುಖತೆ ಆಳವಾಗಿ ಬೆಳೆಯಿತು. ಅವನೂ ಹಟ ಸಡಿಲಿಸಲಿಲ್ಲ. ಇವಳೂ ತಣ್ಣಗಾಗಲಿಲ್ಲ. ಅವರೀರ್ವರ ನಡುವೆ ಶೀತಲಯುದ್ಧ ಪ್ರಾರಂಭವಾಗಿ ಮೂರು ನಾಲ್ಕು ತಿಂಗಳು ಕಳೆದಿದ್ದರೂ ಅವರ ಪ್ರೀತಿ ಸಮರದ ವಿಜಯ ಪತಾಕೆಯಂತೆ ಅವಳ ಗರ್ಭದೊಳಗಿನ ಕುಡಿ, ದಾಂಗುಡಿಯಿಟ್ಟು ಬೆಳೆದಿತ್ತು.

ಒಂದು ಬೆಳಗ್ಗೆ ನರ್ಮದಾ ಹೆಣ್ಣುಮಗುವಿನ ತಾಯಿಯಾದಳು. ಆದರೂ ಅವರೀರ್ವರ ನಡುವಿನ ಅಂತರ ಕಡಿಮೆಯಾಗಿರಲಿಲ್ಲ. ಬಾಣಂತಿ ಕೋಣೆಯಲ್ಲಿ ಮಗುವನ್ನು ಮೌನವಾಗಿ ದಿಟ್ಟಿಸುತ್ತ ಕೂರುವ ಗಂಡನನ್ನು ಒಮ್ಮೆ ನರ್ಮದಾ ಕೆಣಕಿದಳು.

“ಹೋಗಲಿ ನಿಮಗೆ ಹೆಣ್ಣನ್ನು ಕಂಡರೆ ಭಾವನೆಗಳು ಬೇಡ, ಕನಿಷ್ಠ ನಿಮ್ಮದೇ ಮಗುವನ್ನು ಕಂಡರೂ ಪ್ರೀತಿ ವಾತ್ಸಲ್ಯ ಉಕ್ಕಿ ಬರಬಾರ್ದೇ?…. ದೂರ ಕೂತ್ಕೊಂಡು ಮನಸ್ಸಿನಲ್ಲೇ ಮುದ್ದು ಮಾಡ್ತೀರಾ? ಹೂಂ… ಹುಸಿಬಿಂಕ…”

“ಹೌದು ಅದು ನನ್ನ ರೀತಿ”

“ಆದರೆ…. ಲೋಕರೂಢಿಯಾಗಿರದ ಈ ನಿಮ್ಮ ರೀತಿಗಳನ್ನು, ನಡವಳಿಕೆಗಳನ್ನು ಐ ಹೇಟ್!” ಎಂದು ಹೆಚ್ಚು ಕಮ್ಮಿ ಜೋರಾಗಿಯೇ ಕೂಗಿದ್ದಳು ನರ್ಮದಾ. ದಿನಕರ ಅವಳ ಆವೇಶ ಕಂಡು ಗಡಬಡಿಸಿ ನಿಂತ.

“ನಿಮ್ಮೀ!” ಅವನ ಧ್ವನಿ ಗಡಸು ಪಡೆದಿತ್ತು. ಕೋಪ ಅವನ ಮೊಗದಲ್ಲಿ ಕುಪ್ಪಳಿಸುತ್ತಿತ್ತು.

“ನೀವು ಹೋಗಿ ಇಲ್ಲಿಂದ” ಎಂದು ಅಷ್ಟೇ ಕೋಪದಿಂದ ಚೀರುತ್ತ ಅವಳು ಜೋರಾಗಿ ಬಿಕ್ಕಳಿಸುತ್ತ ಮುಖ ಮುಚ್ಚಿಕೊಂಡಳು.

ಬಾಣಂತಿ ಕೋಣೆಯೊಳಗೆ ನಡೆಯುತ್ತಿದ್ದ ಗಲಾಟೆ ಕೇಳಿ, ಅವಳ ತಂದೆ ತಾಯಿಗಳು ತಕ್ಷಣ ಗಾಬರಿಯಿಂದ ಒಳ ನುಗ್ಗಿದರು. ಮಗಳು ಜೋರಾಗಿ ಅಳುತ್ತಿರುವುದನ್ನು ಕಂಡು ಹೆತ್ತಕರುಳು ಚುರ್ರೆಂದು ಅವಳ ತಾಯಿ ಓಡಿ ಬಂದು ಮಗಳನ್ನು ತಬ್ಬಿಕೊಂಡು “ಅಳಬೇಡವೇ ನನ್ನ ತಾಯಿ…. ಹಸೀ ಬಾಣಂತಿ ನಂಜಾಗುತ್ತೆ, ಸಮಾಧಾನ ಮಾಡ್ಕೋ, ಸನ್ನಿಗಿನ್ನಿಯಾದ್ರೆ ಗತಿಯೇನು?” ಎಂದು ಬಡಬಡಿಸಿದರು.

ಇಷ್ಟಕ್ಕೆಲ್ಲಾ ಕಾರಣನಾದ ಅಳಿಯನತ್ತ ಅವಳ ತಂದೆ ಒಮ್ಮೆ ಕ್ರೂರದೃಷ್ಟಿ ಬೀರಿ ಮಗಳ ಮೈದಡವಿದರು.

ದಿನಕರನಿಗೆ ಅಪಮಾನವೆನಿಸಿತು. ಕ್ಷಣವೂ ಅಲ್ಲಿ ನಿಲ್ಲದೆ ಅವನು ಧಡಧಡ ಹೊರಗೆ ನಡೆದ.

ಅಂದವನು ಹಾಗೆ ಹೊರಗೆ ನಡೆದವನು ಮತ್ತೆ ಬರಲೇ ಇಲ್ಲ !

ತಿಂಗಳು – ವರ್ಷ ಕಳೆಯಿತು.

ಅಳಿಯನ ಕ್ಷಮೆ ಯಾಚಿಸಿ ಅವನನ್ನು ಮತ್ತೆ ಕರೆ ತರಲು ಹೊರಟ ತಂದೆಯನ್ನು, ಅಣ್ಣನನ್ನು ನರ್ಮದಾ ನಿಷ್ಠುರವಾಗಿ ತಡೆದಳು.

“ಅವರಿಗೇ ಅಷ್ಟು ಅಟ್ಯಾಚ್‍ಮೆಂಟ್ ಇಲ್ಲದಿದ್ದ ಮೇಲೆ, ನಾವು ಯಾಕೆ ಸೋಲಬೇಕು?”

“ಜೀವನದಲ್ಲಿ ಸೋಲು ಗೆಲುವಿನ ಪ್ರಶ್ನೆಯಿಲ್ಲ”

“ಪ್ರಶ್ನೆ ಹಾಕಿದವರು ಅವರೇ ಆದರೆ, ಅದಕ್ಕೆ ಪ್ರಶ್ನಾರ್ಥಕ ಚಿಹ್ನೆ ಸೇರಿಸುವುದು ತಪ್ಪೇ?”

“ಪ್ರಶ್ನೆ – ಉತ್ತರ – ಚಿಹ್ನೆ – ತರ್ಕಗಳಿಂದ ಬಾಳು ಆಗಲ್ಲಮ್ಮ…. ಹೊಂದಿಕೊಂಡು ಹೋಗುವ ಕಲೆ ಇಲ್ಲಿ ಮುಖ್ಯ”

ಹಿರಿಯರ ಉಪದೇಶ ಅವಳ ತಾಪವನ್ನು ಶಮನಗೊಳಿಸಲಿಲ್ಲ. ಅಷ್ಟು ಸಣ್ಣ ಮಾತಿಗೆ ಕೋಪಿಸಿಕೊಂಡು ಹೋದ ಅವರು ಎಂಥ ಗಂಡಸು?… ಹೊಂದಿಕೊಂಡು ಹೋಗುವ ಕಲೆ ಎನ್ನುವ ಚಾತುರ್ಯ ನನಗೆ ಮಾತ್ರ ಅನ್ವಯಿಸುವುದೇ ? ನನಗೆ ನನ್ನ ವಯಸ್ಸಿಗೆ ಸಹಜವಾದ ಕನಸುಗಳಿರುವುದು ತಪ್ಪೇ ? ಉಕ್ಕುವ ನನ್ನ ಭಾವನೆಗಳನ್ನು ಬಗ್ಗುಬಡಿಯುವುದು ಸರಿಯೇ, ಹೀಗೆ ನಡುನೀರಿನಲ್ಲಿ ಕೈಬಿಡುವುದು ಧರ್ಮವೇ?…. ಅಗ್ನಿಸಾಕ್ಷಿಯಾಗಿ ತನ್ನನ್ನು ಕೈಹಿಡಿದ ಅವರ ಕರ್ತವ್ಯವೇನು….?

ನೂರೆಂಟು ಪ್ರಶ್ನೆಗಳ ಕೊಂಡಿಗಳು ರಪರಪನೆ ಅವಳನ್ನು ಕುಕ್ಕಿದವು.

ಉತ್ತರವಾಗಿ ಮುಂದಿನ ಐದನೆಯ ತಾರೀಖು ಅವಳ ಹೆಸರಿಗೆ ಮನಿಯಾರ್ಡರ್ ಬಂತು.

ಆ ಹಣ ಕಳಿಸುತ್ತಿದ್ದ ಹಿನ್ನಲೆಯಲ್ಲಿ ಪ್ರೀತಿಯ ಕಾವಿಲ್ಲದೆ; ಕರ್ತವ್ಯದ ಒಗಚು ಮನೋಭಾವ ಗುರುತಿಸಿ ಅವಳು ಒಳಗೊಳಗೆ ಅತ್ತುಕೊಂಡಿದ್ದಳು.

ದಿನ ಕಳೆದಂತೆ ಅವಳ ನೋವು ತೀವ್ರಗೊಂಡಿತ್ತು. ಎಲ್ಲರಂತೆ ತಾನೂ ಗಂಡ – ಮಗು – ಸಂಸಾರ – ಮನೆ ಎಂಬ ತನ್ನದೇ ಆದ ವರ್ತುಲದಲ್ಲಿ ಸ್ಥಿರಗೊಳ್ಳದೆ, ನೆರೆಹೊರೆ, ಸಮಸ್ತ ಬಂಧು ಬಾಂಧವರ ಮಧ್ಯೆ ನಿರ್ದಿಷ್ಟ ನೆಲೆಯಿಲ್ಲದೆ ಅವಮಾನಿತಳಾಗಿ ಕುಗ್ಗಿದ್ದಳು-ಬೆಂದಿದ್ದಳು.

ಅವಳ ಹಿರಿಯರು ಅವನನ್ನು ಕಂಡು ಮಾತನಾಡೋಣವೆಂದು ಪ್ರಯತ್ನಿಸಿದರು. ದಿನಕರ ಯಾವುದೋ ದೂರದ ಊರಿಗೆ ವರ್ಗ ಮಾಡಿಸಿಕೊಂಡು ಹೊರಟುಹೋಗಿದ್ದ. ಪ್ರತಿ ತಿಂಗಳೂ ತಪ್ಪದೆ ಬರುವ ಅವನ ಎಂ.ಓ.ನಲ್ಲಿ ವಿಳಾಸವಿರುತ್ತಿರಲಿಲ್ಲ.

ಗಂಡನಿಗೆ ತಾನು ಪ್ರೀತಿಯ ಕೊಂಡಿಯಾಗದೆ ಕೇವಲ ಕರ್ತವ್ಯದ ಸರಪಳಿಯಾದೆನೇ ? – ಎಂಬ ಭಾವ ಅವಳನ್ನು ತಲ್ಲಣಗೊಳಿಸಿತು. ಅವನು ಹಣ ಕಳಿಸುವ ಬದಲು ಆ ಬಿಳೀ ಕಾಗದದಲ್ಲಿ ಎರಡು ಸಾಲು, ಪ್ರೀತಿಯದ್ದಲ್ಲವಾದರೂ ಸಂಬಂಧ ಸೂಚಿಸುವ ನಾಲ್ಕಕ್ಷರ ಮೂಡಿಸಿದ್ದಿದ್ದರೆ… ಎಂದು ನೆನೆನೆನೆದು ಅವಳು ಕೋಡಿಗಟ್ಟಲೆ ಕಣ್ಣೀರು ಹರಿಸಿದ್ದಾಳೆ… ಆದರೆ… ಬರೀ ಖಾಲಿ ಕಾಗದ…. ಭಾವನೆ ಸೂಸದ ವ್ಯಾವಹಾರಿಕ ನೋಟುಗಳು…. ತನ್ನ ಬಾಳಿಗೆ ಗಂಡ ಈ ರೀತಿ ಬೆಲೆ ಕಟ್ಟಿದುದನ್ನು ಕಂಡು ಅವಳ ಅಂತರಂಗ ಮೂಕವಾಗಿ ರೋಧಿಸಿತು.

ಮಗಳ ದುಃಖವನ್ನು ನೋಡಲಾರದೆ ಅವಳ ತಂದೆ ಅಳಿಯನ ವಿಳಾಸವನ್ನು ಹೇಗೋ ಪತ್ತೆ ಮಾಡಿ ಆ ದಿನವೇ “ನಮಗೆ ನಮ್ಮ ಮಗಳು ಭಾರವಲ್ಲ. ನಿನಗೆ ಪ್ರೀತಿಯಿದ್ದರೆ ನಿನ್ನ ಹೆಂಡತಿಗೆ ಹಣ ಕಳಿಸುವ ಬದಲು ನಾಲ್ಕು ಸಾಲಿನ ಕಾಗದ ಬರಿ” ಎಂದು ಕಾಗದ ಬರೆದು ಹಾಕಿದರು.

ಅದೇ ಕಡೆ. ಮತ್ತೆ ದಿನಕರನಿಂದ ನರ್ಮದೆಯ ಹೆಸರಿಗೆ ಎಂ.ಓ. ಬರಲಿಲ್ಲ. ಕಾಗದವೂ ಸಹ.  ನರ್ಮದೆಯ ನಿರೀಕ್ಷೆಯ ದಿನಗಳು ಬಲಿತು ಹಣ್ಣಾಗಿ ಕೊಳೆತು ಉದುರಿದವು. ಮತ್ತದು ಬೀಜವಾಗಿ ಮೊಳೆಯಲೇ ಇಲ್ಲ!

ದಿನಕರ ದೂರದ ಮುಂಬೈನಲ್ಲಿ ಹಿರಿಯ ಅಧಿಕಾರಿಯಾಗಿ ಕೈತುಂಬ ಸಂಪಾದಿಸುತ್ತಿದ್ದು, ದೊಡ್ಡ ಫ್ಲ್ಯಾಟಿನ ಒಡೆಯನಾಗಿರುವ ಸುದ್ದಿ, ಮೊದಲಿನ ಹಠ ಕೋಪ ಬಿಡದೆ ಅವನು ಹಾಗೇ ಒಂಟಿ ಬಾಳು ದೂಡುತ್ತಿರುವ ಸುದ್ದಿಗಳು ಆಗಿಂದಾಗ್ಗೆ ಅವಳ ಕಿವಿಯನ್ನು ಮುಟ್ಟುತ್ತಿದ್ದವು.

ದಿನಗಳೆದಂತೆ ಹೆಚ್ಚು ಕಡಿಮೆ ಅವನು ಮರೆತೇ ಹೋಗಿದ್ದ ಅವಳ ಪಾಲಿಗೆ, ಮನೆಯವರ ಪಾಲಿಗೆ. ಗಂಡನ ಆಸೆ ಬಿಟ್ಟು, ಚಿಂತೆಯ ಕುಲುಮೆಯಲ್ಲಿ ಕುದ್ದು ಕೃಶಳಾಗಿದ್ದ ನರ್ಮದೆಗೆ ಈಗ ಮಗಳ ಭವಿಷ್ಯದ ಚಿಂತೆಯೊಂದೇ.

ಹದಿನೇಳು ವರ್ಷದ ಅನುಪ ಮೊದಲ ವರ್ಷದ ಡಿಗ್ರಿಯಲ್ಲಿದ್ದಳು. ಅವಳು ತಂದೆಯ ಮೊಗವನ್ನೇ ಕಂಡರಿಯಳಾದರೂ ಅವಳಿಗೆ ತಾಯಿ – ತಂದೆ ಎರಡೂ ನರ್ಮದಳೇ ಆಗಿದ್ದಳು. ತಾತ-ಅಜ್ಜಿ, ಸೋದರಮಾವಂದಿರ ಬಲ-ಬೆಂಬಲವಿತ್ತು. ಅವರ ಅಕ್ಕರೆಯ ಕೂಸಾಗಿ ಅರಳಿದ್ದಳು ಅನುಪ. ಆಡಿಕೊಂಡಿರಬೇಕಾದ ಈ ವಯಸ್ಸಿನಲ್ಲಿ ಮಗಳಿಗೆ ಇಷ್ಟು ಬೇಗ ಮದುವೆ ಮಾಡಿ ಸಂಸಾರದ ನೊಗ ಹೊರೆಸಿ, ಮೂವತ್ತೇಳು ವರ್ಷಕ್ಕೆ ತಾನು ಮುದುಕಿಯಾದಂತೆ ಅವಳನ್ನುಸಂಸಾರ ಬಂಧನಕ್ಕೆ ಸಿಕ್ಕಿಸುವುದು ನರ್ಮದಳಿಗೆ ಬೇಡವಾಗಿತ್ತು. ಆದರೆ ಅನುಪಳಿಗೆ ಕಂಕಣ ಬಲ ಕೂಡಿ ಬಂದಿತ್ತು. ರೂಪವಂತ ಎಂಜಿನಿಯರ್ ಅವಳನ್ನು ಮೆಚ್ಚಿ ಮದುವೆಯಾಗಲು ತಾನಾಗಿಯೇ ಮುಂದೆ ಬಂದಿದ್ದ.

ಅನುಪಳ ತಾತ-ಮಾವಂದಿರು ಜರೀ ಸೀರೆ- ಬಟ್ಟೆಗಳು, ಒಡವೆ, ಮಾಂಗಲ್ಯಗಳನ್ನು ಸಿದ್ಧ ಮಾಡಿಕೊಂಡು ಮದುವೆ ನಿಷ್ಕರ್ಷಿಸಿಯೇಬಿಟ್ಟರು. ನರ್ಮದಾ ಆಗ ಗತ್ಯಂತರವಿಲ್ಲದೆ ಅಸ್ತು ಎನ್ನಲೇಬೇಕಾಯಿತು.

ಇಂಥ ಸಂದರ್ಭದಲ್ಲಿ ಅನುಪಳ ತಂದೆಯೆನಿಸಿಕೊಂಡವನಿಗೆ ತಿಳಿಸಬೇಕೇ ಬೇಡವೇ ? ಎಂಬ ಜಿಜ್ಞಾಸೆ… ತಿಳಿಸಿದರೆ ಅವನು ಬಂದು ಏನು ಗಲಾಟೆ ಮಾಡುವನೋ ಎಂಬ ಭಯ… ತಿಳಿಸದಿದ್ದರೆ ಹೇಗೋ ?.. ಲಗ್ನಪತ್ರಿಕೆ ಅಚ್ಚಾಗಿದೆ. ಮರ್ಯಾದೆಯ ಪ್ರಶ್ನೆ. ಕಡೆಗೆ ನರ್ಮದೆಯ ತಂದೆ ಗಟ್ಟಿ ಮನಸ್ಸು ಮಾಡಿ ‘ನಿನ್ನ ಮಗಳಿಗೆ ಮದುವೆ, ಬಾ…’ ಎಂದು ಕರ್ತವ್ಯದ ದೃಷ್ಟಿಯಿಂದ ಲಗ್ನಪತ್ರಿಕೆಯೊಡನೆ ಅಳಿಯನಿಗೆ ಕಾಗದ ಬರೆದರು. ಆದರೆ ಅವನು ಬರುವುದಿಲ್ಲವೆಂಬುದು ಅವರಿಗೆ ಖಾತ್ರಿಯಿತ್ತು.

ಆ ದಿನ ಮನೆಯೊಳಗೆ ದೇವರ ಸಮಾರಾಧನೆಯ ಗಡಿಬಿಡಿ. ಗೋಧಿ ಕಲ್ಲಿನ ಶಾಸ್ತ್ರ ನಡೆಯುತ್ತಿತ್ತು. ನರ್ಮದೆ ಮೂಲೆಯಲ್ಲಿ ಮೌನವಾಗಿ ನಿಂತು ಹನಿದುಂಬಿದ ಕಣ್ಣುಗಳಿಂದ ದಿಟ್ಟಿಸುತ್ತಿದ್ದಳು.

ಇದಕ್ಕಿದ್ದ ಹಾಗೆ ಸುಧೀರ ಹೊರಗಿನಿಂದ ‘ನಿಮ್ಮಿ’ ಎಂದು ಜೋರಾಗಿ ಕೂಗುತ್ತ ಒಳಗೆ ಓಡಿಬಂದ. ಅವನ ಮುಖದಲ್ಲಿ ಗಾಬರಿ, ಬೆವರು ಕಟ್ಟಿಳಿಯುತ್ತಿತ್ತು. ಬಾಗಿಲಲ್ಲಿ ನಿಂತಿದ್ದವರಲ್ಲಿ ಗಡಿಬಿಡಿ ಕಾಣಿಸಿಕೊಂಡಿತು. ಗುಜು ಗುಜು… ನರ್ಮದೆಯ ಬಳಿ ಧಾವಿಸಿದ ಸುಧೀರ “ನಿನ್ನ ಗಂಡ ಬರ್ತಿದ್ದಾನೆ” ಎಂದ.

ನರ್ಮದೆಯ ಎದೆ ನಗಾರಿಯಂತೆ ಧಡಧಡನೆ ಬಡಿದುಕೊಂಡಿತು. ಮುಖ ಅರಕ್ತವಾಯಿತು. ಇನ್ನೇನು ಅವಲಕ್ಷಣ ಕಾದಿದೆಯೋ ಎಂದು ಭಯವಿಹ್ವಲಳಾದ ಆಕೆ ಕಂಪಿಸತೊಡಗಿದಳು. ಅವಳ ಹೆತ್ತವರ ಮುಖಗಳೂ ಬಿಳುಚಿಕೊಂಡವು.

ಬಾಗಿಲಲ್ಲಿ ದಿನಕರ ಕಾಣಿಸಿಕೊಂಡ. ಪ್ರಯಾಣದಿಂದ ಬಳಲಿದ ಮುಖ… ಎರಡೂ ಕೈಗಳಲ್ಲಿ ಸೂಟುಕೇಸುಗಳು.

“ಬನ್ನಿ ಬನ್ನಿ” ಎಂದು ಶಂಕರ ಭಯಮಿಶ್ರಿತ ನಗೆಯಿಂದ ಔಪಚಾರಿಕವಾಗಿ ಸ್ವಾಗತಿಸಿ, ಅವನ ಕೈಯಿಂದ ಸೂಟ್‍ಕೇಸ್ಗಳನ್ನು ತೆಗೆದುಕೊಂಡ.

ನರ್ಮದಾ ನಿಂತ ನೆಲ ಬಿರಿಯಬಾರದೇ ಎಂದು ನಿಂತಲ್ಲೇ ಕುಸಿಯತೊಡಗಿದಳು. ತತ್‍ಕ್ಷಣ ದಿನಕರ ಅವಳನ್ನು ಕಂಡವನೇ “ನಿಮ್ಮಿ” ಎನ್ನುತ್ತ ಅವಳತ್ತ ಧಾವಿಸಿ ತನ್ನೆರಡೂ ಕೈಗಳಿಂದ ಅವಳನ್ನು ಬಾಚಿ ತಬ್ಬಿಕೊಂಡ, ಸುತ್ತಲಿನವರ ಪರಿವೆಯಿಲ್ಲದೆ.

ನೆರೆದವರೆಲ್ಲ ಅವಕ್ಕಾದರು !

“ನಿಮ್ಮಿ… ನಮ್ಮ ಮಗಳೆಲ್ಲಿ ?”

ದಿನಕರನ ಆತ್ಮೀಯ ನುಡಿಗಳನ್ನು ಕೇಳುವಾಗ ಅವಳ ಕಣ್ಣಲ್ಲಿ ಬಳಬಳನೆ ನೀರು ತಟ್ಟನೆ ನುಗ್ಗಿ, ಭಾವಪ್ರವಾಹ ಕಟ್ಟೆಯೊಡೆದು, ತನ್ನರಿವಿಲ್ಲದೆ ಅವನ ಕಾಲು ಮುಟ್ಟಿದಳು. ಆದರವನು ಅರ್ಧದಲ್ಲಿಯೇ ಅವಳನ್ನು ತಡೆದು ತನ್ನದೆಗೆ ಒರಗಿಸಿಕೊಂಡ. ಅವರೀರ್ವರ ನಡುವಣ ದೀರ್ಘಕಾಲದ ಅವರ ವಿರಹ ಕರಗಿ ಹರಿದಿತ್ತು !

ದಿನಕರ ಮಗಳಿಗಾಗಿ ತಾನು ತಂದಿದ್ದ ಸೀರೆ, ಒಡವೆ, ಮಂಗಳಸೂತ್ರವನ್ನು ಅತ್ತೆ-ಮಾವನವರ ಕೈಗಳಲ್ಲಿಟ್ಟ.

“ಇವುಗಳನ್ನೆಲ್ಲ ನಿನ್ನ ಹೆಂಡತಿಗೆ ಕೊಡಪ್ಪ… ಈ ದಿನ ನನ್ನ ಮೊಮ್ಮಗಳ ಮದುವೆಯಲ್ಲ… ನನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯ ಸಂತೋಷದ ದಿನ… ನಿಮ್ಮೀ, ನಿನ್ನ ಗಂಡ ತಂದಿರೋ ಸೀರೆಯನ್ನು ಉಟ್ಕೊಂಡು ಬಾಮ್ಮ… ಈ ಮಂಗಳ ಸೂತ್ರವನ್ನು ನಿನ್ನ ಹೆಂಡತಿಯ ಕೊರಳಿಗೆ ಕಟ್ಟಿ ನಮ್ಮ ಕನ್ಯಾಸೆರೆ ಬಿಡಿಸಪ್ಪ” ಎನ್ನುವಷ್ಟರಲ್ಲಿ ಅವಳ ತಂದೆಯ ಕೊರಳ ಸೆರೆ ಬಿಗಿದು ಬಂದಿತ್ತು.

ದಿನಕರ ಮಾವ ಹೇಳಿದಂತೆ ಶಿರಸಾವಹಿಸಿದ.

ಜೊತೆಗೆ ಎಲ್ಲರ ಸಮಕ್ಷಮದಲ್ಲಿ ತನ್ನ ಹಟ-ಮೌಢ್ಯಗಳ ಪರಿಣಾಮಕ್ಕಾಗಿ ಪಶ್ಚಾತ್ಪಾಗೊಂಡು ಅತ್ತೆ-ಮಾವನವರ ಕ್ಷಮೆ ಯಾಚಿಸಿದ.

ಅನುಪ ತನ್ನ ಗಂಡನ ಮನೆಗೆ ಹೊರಟ ದಿನವೇ ನರ್ಮದಳೂ ತನ್ನ ಗಂಡನ ಮನೆಗೆ ಹೊರಟಿದ್ದಳು. ಆಗ ಅವಳ ಹೆತ್ತವರು ಆಶೀರ್ವದಿಸಿದಂತೆಯೇ ಅದರ ಫಲ ಶೀಘ್ರದಲ್ಲಿ ಕೈಗೂಡಿತ್ತು.

ವರ್ಷ ಕಳೆಯುವುದರಲ್ಲಿ ನರ್ಮದಾ, ಮಗಳೊಡನೆ ತಾನೂ ತಾಯಿಯ ಮನೆಗೆ ಬಾಣಂತನಕ್ಕೆ ಬಂದಿದ್ದಳು.

                            ***********************

Related posts

ಬಿಕರಿ

YK Sandhya Sharma

ಇಂಚರ

YK Sandhya Sharma

ಕಮಲು ಯೋಗ ಕಲಿತದ್ದು

YK Sandhya Sharma

Leave a Comment

This site uses Akismet to reduce spam. Learn how your comment data is processed.