“ವಿಮಲಮ್ಮಾ….. ವಿಮಲಮ್ಮಾ…..”
ಬೀಗಿತ್ತಿಯಾಗಲಿದ್ದವರ ಮುಂದೆ ಹಿಡಿದಿದ್ದ ತಿಂಡಿಯ ತಟ್ಟೆ ಹಾಗೇ ನಿಂತಿತು. ಕತ್ತು ಹೊರಳಿಸಿ ನೋಡಿದರು ವಿಮಲಮ್ಮ. ಆಕೆಯ ಮುಖ ಅರಳುವ ಬದಲು ಗಂಟಾಯಿತು. “ಇದ್ಯಾಕೆ ಬಂತಪ್ಪ ಈಗ?” ಎಂದು ಒಳಗೇ ಗೊಣಗುಟ್ಟಿಕೊಂಡರೂ ಆಕೆ, ಮುಖದಲ್ಲಿ ಕೃತಕ ನಗೆ ಹಾಸಿ “ಬಾಮ್ಮ ರಂಜನಾ…..” ಎಂದು ಬಾಗಿಲಲ್ಲಿ ನಿಂತವಳನ್ನು ಬಾಯ್ತುಂಬ ಕರೆದಂತೆನಿಸಿದರೂ ಒಳಬರುವಂತೆ ಆಹ್ವಾನಿಸಲಿಲ್ಲ ಆಕೆಯ ನೋಟ.
ರಂಜನಾ ಅನುಮಾನಿಸುತ್ತಾ ಹಾಗೇ ಹೊಸ್ತಿಲ ಬಳಿ ನಿಂತವಳು ಸಂಕೋಚದಿಂದ– “ನಾನು ಆಮೇಲೆ ಬರ್ತೀನಿ ವಿಮಲಮ್ಮ, ಮನೆಗ್ಯಾರೋ ನೆಂಟರು ಬಂದಿರೋ ಹಾಗಿದೆ” – ಎನ್ನುತ್ತಾ ಮುಂದಿಟ್ಟ ಹೆಜ್ಜೆಯನ್ನು ತಡೆದಳು.
‘ಸರಿ’ ಎನ್ನುವಂತೆ ವಿಮಲಮ್ಮ ಅವಳಿಗೆ ಬೆನ್ನು ತಿರುಗಿಸಿ ತಿಂಡಿ ಸರಬರಾಜಿನ ತಮ್ಮ ಕೆಲಸದತ್ತ ಗಮನ ನೆಟ್ಟರು.
“ಇರಲಿ, ಅದಕ್ಕೇನಂತೆ….. ಒಳಗೆ ಬಾಮ್ಮ….. ಕೂತ್ಕೋ…..” ಎನ್ನುತ್ತ ವೆಂಕಟೇಶಯ್ಯ ತಮ್ಮ ಎಂದಿನ ಹಾರ್ದಿಕ ನಗೆ ಸೂಸೂತ್ತ ರಂಜನಾಗೆ ಸೋಫಾದ ಮೇಲೆ ಕೂರುವಂತೆ ಕೈ ತೋರಿಸಿ- “ಈಕೆ ರಂಜನಾ ಅಂತ ನಮ್ಮ ಪಕ್ಕದ ಮನೆ ಹುಡುಗಿ, ಸರಕಾರಿ ಕೆಲಸದಲ್ಲಿದ್ದಾಳೆ….. ಇವಳ ಯಜಮಾನರು ಡಾಕ್ಟರು….. ಇಬ್ಬರು ಹೆಣ್ಣು ಮಕ್ಕಳು” ಎಂದು ರಂಜನಳನ್ನು ಬಂದ ಅತಿಥಿಗಳಿಗೆ ಪರಿಚಯ ಮಾಡಿಕೊಟ್ಟು- “ನೋಡಮ್ಮ ರಂಜನಾ, ಇವರು ನಮ್ಮ ಬೀಗರಾಗೋರು….. ಈ ಹುಡುಗಿ ಮಾಯಾ ಅಂತ, ನಮ್ಮ ಸುಧೀಗೆ ನೋಡಿರೋ ಹುಡ್ಗಿ, ಇವತ್ತು ಫೈನಲ್ ಮಾತುಕತೆ ಆಡಕ್ಕೆ ಬಂದಿದ್ದಾರೆ” – ಎಂದಾತ ಸರಳವಾಗಿ ಪರಸ್ಪರರನ್ನು ಪರಿಚಯಿಸಿದರು.
“ಓಹ್ ಸಾರಿ ಅಂಕಲ್….. ನೀವೊಳ್ಳೆ ಬಿಜಿಯಾಗಿದ್ದೀರಾ….. ರಾಂಗ್ ಟೈಮ್‍ನಲ್ಲಿ ಬಂದಿದ್ದೀನಿ…..” ಎಂದು ನುಡಿಯುತ್ತ ಸಂಕೋಚದಿಂದ ತಟ್ಟನೆ ಮೇಲೆದ್ದ ರಂಜನಳನ್ನು, ಸುಧೀಂದ್ರ ತಡೆಯುತ್ತಾ- “ಪರವಾಗಿಲ್ಲ, ಕೂತ್ಕೊಳ್ಳಿ ಮೇಡಮ್….. ಪಕ್ಕದ ಮನೇಲಿದ್ರೂ ನೀವೂ ಅಪರೂಪಾನೇ….. ಅಮ್ಮಾ….. ತಿಂಡಿ ಕೊಡಮ್ಮಾ ಇವರಿಗೆ’ ಎಂದು ತಾಯಿಯತ್ತ ತಿರುಗಿದ.
ಅವಳಿಗೆ ತಿಂಡಿ ಕೊಡಲು ಅಭ್ಯಂತರವಿರದಿದ್ದರೂ ವಿಮ್ಮಲಮ್ಮನವರಿಗೆ, ಈ ಸಂದರ್ಭದಲ್ಲಿ ಅವಳ ಆಗಮನ ಹಿತವೆನಿಸಲಿಲ್ಲ.
ರಂಜಳನ ಮೊಗವನ್ನು ತಪ್ಪಿತಸ್ಥಪ್ರಜ್ಞೆ ಆವರಿಸಿತು. ಛೇ….. ಸಹಾಯ ಕೇಳಲು ಬಂದವಳು, ತಾನು ಇಂಥ ಅಸಂದರ್ಭದಲ್ಲಿ ಬರಬಾರದಿತ್ತು ಎಂದು ಒಳಗೇ ಮಿಡುಕಿಕೊಂಡಳು. ಆದರೇನು ಬಂದುದಾಗಿತ್ತು.
ಸಂಕೋಚದಿಂದ ಆದಷ್ಟೂ ತನ್ನ ಧ್ವನಿಯನ್ನು ಕುಗ್ಗಿಸಿ-
“ವಿಮಲಮ್ಮ, ನಿಮ್ಮನೆ ಅಡುಗೆಯವಳನ್ನು ಒಂದು ವಾರದ ಮಟ್ಟಿಗೆ ನಮ್ಮನೆಗೆ ಅಡುಗೆ ಮಾಡಕ್ಕೆ ಕಳಿಸಿಕೊಡಕ್ಕಾಗತ್ತಾ?….. ನಿಮ್ಮನೆ ಕೆಲಸವೆಲ್ಲಾ ಮುಗಿದ ಮೇಲೆ” – ಎಂದು ಹಿಂಜರಿಯುತ್ತ ಕೇಳಿದಳು ರಂಜನಾ.
“ಯಾಕೆ, ನೀನೆಲ್ಲಿ ಹೋಗ್ತಿದ್ದೀಯಾ? ನಿಮ್ಮ ತೌರುಮನೆಗೋ-ಅಣ್ಣನ ಮನೆಗೋ….. ಈಗೇನೂ ಮಕ್ಕಳಿಗೆ ರಜವಿದ್ದ ಹಾಗೆ ಕಾಣಲ್ವಲ್ಲ?!….. ಅದೇನು ಇದಕ್ಕಿದ್ದ ಹಾಗೆ? – ವಿಮಲಮ್ಮ ತಮ್ಮ ಮಾಮೂಲಿ ಶೈಲಿಯಲ್ಲಿ ದೊಡ್ಡ ಕಂಠದಲ್ಲಿ ಪ್ರಶ್ನಿಸಿದರು.
ರಂಜನಾ ಉತ್ತರಿಸುವ ಮೊದಲೇ ವಿಮಲಮ್ಮನ ಹೊಸ ಬೀಗಿತ್ತಿ ಸರೋಜಮ್ಮ-
“ನೀವೂ ಮಕ್ಕಳೂ ಎಲ್ಲ ಹೋದ್ಮೆಲೆ ಯಜಮಾನರಿಗೊಬ್ಬರಿಗ್ಯಾಕೆ ಅಡುಗೆ ಮಾಡಿಸ್ತೀರಿ…ಅವರು ಯಾವುದಾದರೂ ಹೊಟೇಲ್ ಗಿಟೇಲ್ಲಿಗೆ ಹೋದ್ರಾಯ್ತು ಬೆಂಗಳೂರಿನಲ್ಲೇನು ಹೊಟೇಲ್ಲಿಗೆ ಬರವೇ?….. ಅಲ್ವೇ ವಿಮಲಮ್ಮಾ?” -ಎಂದಾಕೆ ಪಟಪಟನೆ ಮಾತನಾಡಿದಾಗ ರಂಜನಾಗೆ ಗಂಟಲು ಕಟ್ಟಿದಂತಾಯಿತು. ವಿಷಯ ಹೇಳಲು ಹೊರಟವಳಿಗೆ ಹಿಂಜರಿಕೆಯುಂಟಾಗಿ, ‘ಸಂಜೆ ಇವರೆಲ್ಲ ಹೊರಟು ಹೋದಮೇಲೆ ಬಂದು ಹೇಳಿದ್ರಾಯ್ತು’ ಅಂದುಕೊಳ್ಳುತ್ತ ಮೆಲ್ಲನೆ ಸಾವರಿಸಿಕೊಂಡು ಹೊರಡಲು ಎದ್ದುನಿಂತಳು ರಂಜನಾ,
“ಕೂತ್ಕೋಮ್ಮ ರಂಜನಾ…. .ತಿಂಡಿ ತಿನ್ನು-ಕೈಲಿ ಹಾಗೇ ತಟ್ಟೆ ಇಟ್ಕೊಂಡೇ ಇದ್ದೀಯಾ…” -ವೆಂಕಟೇಶಯ್ಯನ ಆತ್ಮೀಯ ನುಡಿ ಅವಳನ್ನು ಮತ್ತೆ ಕೂಡಿಸಿತು. ಅವಳ ಮುಖದಲ್ಲಿ ಗಾಬರಿ, ಆತಂಕದ ಭಾವ ಗಮನಿಸಿದ ಆತ- “ತಿಂಡಿ ತಿಂದ್ಮೇಲೆ ನಿಧಾನವಾಗಿ ಹೇಳುವಿಯಂತೆ, ಕೂತ್ಕೋಮ್ಮ….. ಒಂದು ವಾರ ಮನೆಬಿಟ್ಟು ಹೋಗೋಕ್ಕೆ-ಗಂಡನ್ನ ಬಿಟ್ಟಿರಕ್ಕೆ ಎಷ್ಟು ಯೋಚನೆ ಮಾಡ್ತೀಯೇ ತಾಯಿ….. ಹೂಂ ….. ಮುಖ ನೋಡು ಎಷ್ಟು ಮಂಕಾಗಿ ಹೋಗಿದೆ….. ಅಯ್ಯೋ ಹುಚ್ಚು ಹುಡುಗಿ….. ಮೊದಲು ತಿಂಡಿ ತಿನ್ನು”
ವೆಂಕಟೇಶಯ್ಯನವರ ಮುಖದಲ್ಲಿ ಒಸರುತ್ತಿದ್ದ ಪಿತೃವಾತ್ಸಲ್ಯದ ಭಾವ ಕಂಡು ಅವಳ ಕೊರಳಸೆರೆ ಉಬ್ಬಿಬಂತು.
“ಪಕ್ಕದ ಮನೇಲಿ ನಾವಿರೋವಾಗ-ನಿನ್ನ ಗಂಡ ಯಾಕೆ ಹೊಟೇಲ್ಲಿಗೆ ಹೋಗಬೇಕಮ್ಮ….. ನೋ ನೋ….. ದಿನಾ ಎರಡೂ ಹೊತ್ತು ಅವರು ಇಲ್ಲಿಗೇ ಬರಲಿ….. ಹಾಗಂತ ನೀನಾತನಿಗೊಂದು ಮಾತು ಹೇಳ್ಬಿಟ್ಟು ಬಾ, ಹೋಗು ಸುಧೀ….. ಪಾಪ….. ಆತನೂ ತುಂಬು ಸಂಕೋಚ ಸ್ವಭಾವದೋರು….. ರಂಜನಾಗೆ ಸರಿಯಾಗಿದ್ದಾರೆ ಅವರು” ಎಂದಾತ ನಿಷ್ಕಲ್ಮಷತೆಯಿಂದ ಹಲ್ಲು ಬಿಚ್ಚಿ ಜೋರಾಗಿ ನಕ್ಕರು.
ವೆಂಕಟೇಶಯ್ಯನವರ ಆತ್ಮೀಯ ಸ್ವಭಾವ ಅವಳಿಗೆ ಹೊಸದೇನಲ್ಲ. ತಾವು ಅವರ ನೆರೆಮನೆಗೆ ಬಂದಾಗಲೇ 15 ವರ್ಷ ವರ್ಷಗಳೇ ಕಳೆದಿದ್ದವು. ಅದೇತಾನೆ ಮದುವೆ ಮಾಡಿಕೊಂಡು ಬಂದು ತಾವು ಸಂಸಾರ ಹೂಡಿದ್ದು ಅವರ ಪಕ್ಕದ ಮನೆಯಲ್ಲೇ. ಹೆತ್ತ ತಂದೆಗಿಂತ ಹೆಚ್ಚಾಗಿ ಆತ ಅವರ ಹೊಸ ಸಂಸಾರಕ್ಕೆ ಸಾಮಾನು-ಸರಂಜಾಮು ಹೊಂದಿಸಿಕೊಡುವುದರಲ್ಲಿ ನೆರವಾಗಿದ್ದರು. ಮೇಲ್ನೋಟಕ್ಕೆ ವಿಮಲಮ್ಮ ಸ್ವಲ್ಪ ಜೋರು ಹೆಂಗಸಿನಂತೆ ಕಂಡರೂ ಆಕೆ ಕೂಡ ಮೃದು ಹೃದಯಿ. ಅಡುಗೆ ಮಾಡಲು ಬಾರದೆ ಪರದಾಡುತ್ತಿದ್ದಾಗ ತನಗೆ ಆಕೆ ಅದೆಷ್ಟು ಸಹನೆಯಿಂದ ಬಗೆಬಗೆಯ ಅಡುಗೆಗಳನ್ನು ಹೇಳಿಕೊಟ್ಟು, ಸಂಸಾರದ ಎಷ್ಟೋ ವಿಷಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವುದನ್ನು ಕಲಿಸಿಕೊಟ್ಟಿದ್ದರು.
ಅವರ ಏಕಮಾತ್ರ ಪುತ್ರ ಸುಧೀಂದ್ರನೂ ಅಷ್ಟೇ ನಿರ್ಭಿಡೆಯ ಮಾತುಗಾರ-ಸ್ನೇಹಮಯಿ. ರಂಜನಾ ಅವರ ನೆರೆಮನೆಗೆ ವಾಸಕ್ಕೆ ಬಂದಾಗ ಅವನಿನ್ನೂ ಎಂಜಿನಿಯರಿಂಗ್ ವಿದ್ಯಾರ್ಥಿ. ಆದರೂ ಅವನು ಅವಳ ಗಂಡನೊಡನೆ ಸ್ನೇಹ ಬೆಳೆಸಿ ಅವರ ಸಮವಯಸ್ಕನಂತೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದ. ಹೀಗಾಗಿ ರಂಜನಾಗೆ ಪಕ್ಕದ ಮನೆಯವರು ತೌರು ಮನೆಯವರಂತಾಗಿದ್ದರು.
ರಂಜನಳ ಗಂಡನಿಗೆ ವೈದ್ಯ ವೃತ್ತಿ. ಬೆಳಗ್ಗೆ ಹೊತ್ತಿನಲ್ಲಿ ಮೂರ್ನಾಲ್ಕು ನರ್ಸಿಂಗ್ ಹೋಮ್‍ಗಳ ಭೇಟಿ. ಅನಂತರ ಸ್ವಂತ ಕ್ಲಿನಿಕ್, ಮತ್ತೆ ಸಂಜೆ ಕ್ಲಿನಿಕ್ ಕೆಲಸ. ರಾತ್ರಿ ಅವರು ಮನೆಗೆ ಹಿಂತಿರುಗುವಲ್ಲಿ ರಾತ್ರಿ ದಟ್ಟವಾಗಿ ರಂಜನಾ ತಟ್ಟೆಹಾಕಿಕೊಂಡು ಅವರ ದಾರಿ ಎದುರು ನೋಡುತ್ತ ಕಾಯುತ್ತಿದ್ದಳು. ಅವಳಿಗೂ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಸರಕಾರಿ ಕೆಲಸ. ಬೆಳಗ್ಗಿನಿಂದ ರಾತ್ರಿಯವರೆಗೆ ಯಾಂತ್ರಿಕವಾಗಿ ಮನೆಗೆಲಸ, ಕಚೇರಿ ಕೆಲಸಗಳ ನಡುವೆ ಮಕ್ಕಳ ಶಾಲೆ, ಬೇಬಿ ಸಿಟಿಂಗ್‍ಗಳ ಓಡಾಟದಲ್ಲಿ ಅವಳು ಹೈರಾಣಾಗಿ ಹೋಗಿದ್ದಳು.
ಅಂತೂ ಅದು ಹೇಗೆ ಆ ಮಕ್ಕಳು ಹನ್ನೆರಡು ಮತ್ತು ಹದಿನಾಲ್ಕು ವರ್ಷದವರಾಗಿ ಬೆಳೆದರೋ ಅದೇ ಅವಳಿಗೆ ಆಶ್ಚರ್ಯ!
ಈ ಮಧ್ಯೆ ಸುಧೀಂದ್ರನ ಎಂಜಿನಿಯರಿಂಗ್ ಪರೀಕ್ಷೆ ಮುಗಿದು, ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಅವನಿಗೆ ಒಳ್ಳೆಯ ಕಡೆ ಕೆಲಸವೂ ದೊರೆತಿತ್ತು. ಜತೆಗೆ ಅವನು ಕಂಪ್ಯೂಟರ್‍ನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿದ್ದ. ಸುಂದರ, ಸದೃಢ ಯುವಕ, ಒಳ್ಳೆಯ ಉದ್ಯೋಗ, ಅನುಕೂಲಸ್ಥ ಕುಟುಂಬದ ಅವನು ಅತ್ಯುತ್ತಮ ವರೆನೆನಿಸಿಕೊಂಡಿದ್ದ. ಅವರ ಆಸ್ತಿ-ಅಂತಸ್ತುಗಳಿಗೆ ತಕ್ಕಂಥ ಕನ್ಯೆಯೇ ಅವನ ಕೈಹಿಡಿದಳು. ಹಾಲು ಜೇನಿನಂಥ ಸಂಸಾರ-ಮುದ್ದಾದ ಎರಡು ಪುಟ್ಟ ಪುಟ್ಟ ಮಕ್ಕಳು….. ವಿಧಿಗೇ ಹೊಟ್ಟೆಕಿಚ್ಚಾಯಿತೇನೋ ಎಂಬಂತೆ ಅವನ ಹೆಂಡತಿ ಕ್ಯಾನ್ಸರಿಗೆ ತುತ್ತಾಗಿ ಎರಡು ವರ್ಷಗಳ ಕಾಲ ಆ ಕೆಟ್ಟ ಕಾಯಿಲೆಯ ಜೊತೆ ಹೋರಾಡಿ ಆಕಾಲ ಮರಣಕ್ಕೀಡಾಗಿದ್ದು ಸುಧೀಂದ್ರನ ಬಾಳಿನ ಪುಟವನ್ನೇ ಬದಲಾಯಿಸಿಬಿಟ್ಟಿತ್ತು.
ಬದಕಿನ ಬಗ್ಗೆ ಸುಂದರ ಕನಸುಗಳನ್ನು ಹೆಣೆದುಕೊಂಡಿದ್ದ ಅವನ ಭಾವುಕ ಮನಸ್ಸು ಛಿದ್ರ ಚೂರಾಗಿತ್ತು. ದಿಕ್ಕೆಟ್ಟು ದಿನವೆಲ್ಲ ಕಣ್ಣೀರುಗರೆಯುತ್ತ ಹತಾಶನಾಗಿ ಕೂರುತ್ತಿದ್ದ ಅವನನ್ನು ಕಂಡು ಹೆತ್ತವರ ಹೊಟ್ಟೆಗೆ ಕಾದಸೀಸ ಎರೆದಂತಾಗಿ ಅವರೂ ಮೌನವಾಗಿ ಕಣ್ಣೀರಿಡುತ್ತಿದ್ದರು. ದುರಂತದ ಛಾಯೆಯರಿಯದ ಹಸುಗಂದಮ್ಮಗಳನ್ನು ಅವನ ತೊಡೆಯ ಮೇಲಿಟ್ಟು, ಮಗನನ್ನು ವಾಸ್ತವ ಜಗತ್ತಿಗೆಳೆದು ತರಲು ಶಕ್ತಿ ಮೀರಿ ಪ್ರಯತ್ನಿಸಿದ್ದರು ಅವನ ಹೆತ್ತವರು. ಬದುಕಿನ ಆಸೆ ಕುಡಿಯನ್ನು ಮೀಟಿ ಅವನಿಗೆ ಧೈರ್ಯ-ಸಮಾಧಾನಗಳ ತೈಲವೆರೆದಿದ್ದರು ಆ ದಂಪತಿಗಳು.
ಎರಡು-ಮೂರು ವರ್ಷ, ಸುಧೀಂದ್ರ ಹಟ ಹಿಡಿದು ಕೂತಿದ್ದ-ತನ್ನ ಬಾಳಲ್ಲಿ ಇನ್ನೊಂದು ಹೆಣ್ಣಿನ ಪ್ರವೇಶ ಕೂಡದೇ ಕೂಡದೆಂದು. ಆದರೆ ಕಡೆಗೂ ಅವನೊಂದು ದಿನ ತಾಯಿಯ ಕಣ್ಣೀರಿಗೆ ಸೋಲಲೇ ಬೇಕಾಯ್ತು. ಬರುವ ಹೆಣ್ಣು ತನ್ನ ಆಸ್ತಿ-ಅಂತಸ್ತು, ಅಧಿಕಾರ-ಯೌವನ, ಮನೆ ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವುದು ಕಷ್ಟವೇನಲ್ಲ ಎನಿಸಿದರೂ ತನ್ನ ಮಕ್ಕಳಿಗೆ ನಿಸ್ವಾರ್ಥ-ವಾತ್ಸಲ್ಯಮಯಿ ಮಮತೆಯ ತಾಯಿಯಾಗಬಲ್ಲಳೇ ಎಂಬುದೊಂದೇ ಢವಗುಡುವ ಪ್ರಶ್ನೆ ಅವನೆದೆಯನ್ನು ಅಮುಕುತ್ತಿತ್ತು. ಮೂರ್ನಾಲ್ಕು ವರ್ಷಗಳಿಂದ ಹೆಣ್ಣಿನ ಸಹವಾಸವಿಲ್ಲದ ಅವನ ಯೌವನ ತುಂಬಿದ ದೇಹ, ಹೊಸ ಅನುಭವ-ಸುಖಕ್ಕೆ ಕಾತುರಪಡುವ ಬದಲು ಆತಂಕಗೊಂಡಿತ್ತು.
ತನ್ನ ಹಾಗೇ ಜೀವನದಲ್ಲಿ ನೋವಿನಲ್ಲಿ ಬೆಂದು, ನಿರಾಶೆಯಲ್ಲಿ ಮಾಗಿದ ಹೆಣ್ಣು ನನ್ನ ಮಕ್ಕಳಿಗೆ ತಾಯಿಯಾದರೆ ಹೇಗೆ? ಎಂಬ ಸಲಹೆಯನ್ನು ಅವನು ತನ್ನ ತಾಯ್ತಂದೆಗಳ ಮುಂದಿಟ್ಟಿದ್ದ. ವೆಂಕಟೇಶಯ್ಯನವರೇನೋ ಅದಕ್ಕೆ ಕೂಡಲೇ ಸಮ್ಮತಿಸಿದರು. ತಟ್ಟನೆ ಅವರ ಕಣ್ಮುಂದೆ ಬಂದವಳು ಅವರ ಸೋದರ ಸಂಬಂಧಿ ಗುರುರಾಜನ ಮಗಳು ಸುಚೇತಾ. ಮದುವೆಯಾದ ವರುಷದಲ್ಲೇ ಗಂಡನನ್ನು ಕಳೆದುಕೊಂಡು ಅದೇ ನೋವಿನಲ್ಲೇ ದಿನಗಳನ್ನು ದೂಡುತ್ತಿದ್ದ ನಿರ್ಭಾಗ್ಯ ಸುಚೇತಳ ಮೃದು ನಡವಳಿಕೆ, ಸುಸ್ವಭಾವವನ್ನು ಅವರು ಬಲ್ಲದವರೇನಲ್ಲ. ಸುಧೀಂದ್ರನ ಮದುವೆಗೆ ಮುನ್ನವೇ ಅವಳನ್ನು ಮನೆ ತುಂಬಿಸಿಕೊಳ್ಳುವ ಬಗ್ಗೆ ಯೋಚಿಸಿದ್ದ ಆತ, ಹೆಂಡತಿಯ ಅಡಂಬರ ಸ್ವಭಾವ ಆಸೆ-ಆಕಾಂಕ್ಷೆಗಳನ್ನು ಅರಿತವರು ಇದು ಆಗ ಹೋಗದ್ದು ಎಂದು ತೆಪ್ಪಗಾಗಿದ್ದರು.
ಅಷ್ಟರಲ್ಲಿ ಸುಧೀಂದ್ರನಿಗೆ ಹೆಣ್ಣು ಕೊಡಲು ಅನೇಕ ಶ್ರೀಮಂತರು ನಾ ಮುಂದು ತಾ ಮುಂದು ಎಂದು ಮುಂದೆ ಬಂದಿದ್ದು, ಅವನ ಮದುವೆ ನಡೆದುಹೋಗಿತ್ತು. ಸುಧೀಂದ್ರನಿಗೆ ಸುಚೇತಳ ರೂಪು, ಸೌಮ್ಯ ಸ್ವಭಾವಗಳು ಹಿಡಿಸಿದ್ದರೂ ಆಗವನು ತಾಯಿಯ ಆಸೆಗೆ ಎದುರಾಡುವ ಧೈರ್ಯ ಮಾಡಿರಲಿಲ್ಲ.
ಈಗ ಮತ್ತೆ ಅವನ ಮನದ ಮುಂದೆ ಸುಚೇತಳ ಚಿತ್ರ ಸುಳಿದಾಡಲಾರಂಭಿಸಿತು. ಅದರೆ ಅಷ್ಟರಲ್ಲಾಗಲೇ ವಿಮಲಮ್ಮ, ತಮ್ಮ ಕ್ಲಬ್ ಸ್ನೇಹಿತೆಯ ತಂಗಿ ಸರೋಜಮ್ಮನ ಮಗಳು ಮಾಯಳನ್ನು ನೋಡಿ ಒಪ್ಪಿಕೊಂಡು ಬಂದಿದ್ದರು. ಅವಳು ಡಬ್ಬಲ್ ಗ್ರಾಜ್ಯುಯೇಟಾಗಿದ್ದು ನೋಡಲು ಸುಂದರವಾಗಿದ್ದಳು. ವಯಸ್ಸೂ ಅಂಥದ್ದೇನೂ ಮೀರಿರಲಿಲ್ಲ…..ಮೂವತ್ತರ ಹತ್ತಿರ ಹತ್ತಿರ… ಅವರೇ ಎರಡನೆಯ ವರನನ್ನು ಮದುವೆಯಾಗಲು ಸಂತೋಷವಾಗಿ ಒಪ್ಪಿರುವಾಗ ತಡವೇಕೆ ಎಂದು ವಿಮಲಮ್ಮ ಆ ಹುಡುಗಿಯನ್ನು ಮಗನ ಕಣ್ಣಿಗೆ ಹಾಕಿದ್ದರು. ಬಲವಂತವಾಗಿ ಆಕೆ ಮಗನನ್ನು ಮದುವೆಗೆ ಒಪ್ಪಿಸಿಯೂ ಇದ್ದರು.
“ನಮ್ಮ ಮಾಯಾಗೆ ಸೋಷಿಯಲ್ ವರ್ಕ್ ಅಂದರೆ ಪ್ರಾಣ….. ಮಹಿಳೆಯರು ಮತ್ತು ಮಕ್ಕಳ ಅನೇಕ ಸಂಘ-ಸಂಸ್ಥೆಗಳ ಜತೆ ಅವಳಿಗೆ ಕಾಂಟ್ಯಾಕ್ಟ್ ಇದೆ, ಸಮಾಜಸೇವೆ ಅಂತ ಮೂರು ಹೊತ್ತು ಅವಳು ಹೊರಗೇ ಇರ್ತಾಳೆ- ಅಂಥ ಮೃದು ಹೃದಯಿ. ತುಂಬಾ ಹೆಲ್ಪಿಂಗ್ ನೇಚರ್ ಅವಳದು’’ -ಎಂದು ಅವಳ ತಾಯಿ, ತಮ್ಮ ಮಗಳ ಬಗ್ಗೆ ಮಾಡಿದ ಗುಣಗಾನವನ್ನು, ವಿಮಲಮ್ಮ ಮಗನ ಕಿವಿಯೊಳಗೆ ತುರುಕಿದ್ದರು. ಅಂತೂ ಹೇಗೋ ಸುಧೀಂದ್ರ ತಾಯಿಯ ಒತ್ತಾಯಕ್ಕೆ ಈ ಮದುವೆಗೆ ತಲೆಯಾಡಿಸಿದ್ದ. ತನ್ನ ಹಸುಗಂದಮ್ಮಗಳಿಗೆ ವಾತ್ಸಲ್ಯಮಯಿ ತಾಯಿಯೊಬ್ಬಳು ದೊರಕಿದರಷ್ಟೇ ಸಾಕು ಎಂಬುದೇ ಅವನ ಕಳಕಳಿಯ ತುಡಿತವಾಗಿತ್ತು.
ಮದುವೆಯ ಮಾತುಕತೆಗೆಂದು ಈ ದಿನ ಭಾವೀ ಬೀಗರು ಅವರ ಮನೆಗೆ ಆಗಮಿಸಿದ್ದರು. ಇಂಥ ಮುಖ್ಯ ಗಳಿಗೆಯ ಮೂಡ್ ಹಾಳು ಮಾಡುವಂತೆ ರಂಜನಾ ಆಗಮಿಸಿದ್ದನ್ನು ಕಂಡು ವಿಮಲಮ್ಮ ಕೊಂಚ ಕಸಿವಿಸಿಗೊಂಡಿದ್ದರು. ಸಾಲದ್ದಕ್ಕೆ ಅವಳು ಬಂದ ಕೆಲಸ ಮುಗಿಸಿಕೊಂಡು ಎರಡು ನಿಮಿಷದಲ್ಲಿ ಹೊರನಡೆಯದೆ, ನಡೆಯುತ್ತಿದ್ದ ಮದುವೆಯ ಮಾತುಕತೆ ಅರ್ಧಕ್ಕೇ ನಿಂತು ಬಂದವರೆಲ್ಲರ ಗಮನ ಅವಳತ್ತಲೇ ನೆಡುವಂಥ ಪ್ರಸಂಗ ನಿರ್ಮಾಣವಾಗುತ್ತಿರುವ ಬಗ್ಗೆ ಆಕೆಯ ಮೊಗದಲ್ಲಿ ಬೇಸರ ಹನಿಯಿತು. ಅಸಹನೆ ತುಳುಕಾಡಿತು.
“ರಂಜನಾ ನೀನು ಇದ್ದಕ್ಕಿದ್ದ ಹಾಗೆ ಯಾವ ಊರಿಗೆ ಹೊರಟೆಯಮ್ಮ?….. ಅಡುಗೆಯವರು ಯಾಕೆ ಬೇಕಾಗಿತ್ತು ?” – ವೆಂಕಟೇಶಯ್ಯನವರ ದನಿಯಲ್ಲಿ ಕಳಕಳಿ ತುಂಬಿತ್ತು.
ರಂಜನಳ ಮೊಗ ಆರ್ದ್ರವಾಯಿತು….. ಕುಸಿಗೊರಲು…..
’’ ನನಗೆ ಮಂಗಳೂರಿಗೆ ಟ್ರಾನ್ಸ್‍ಫರ್ ಆಗಿದೆ ಅಂಕಲ್, ಪ್ರಮೋಷನ್ ಕೊಟ್ಟು, ಇದ್ದಕ್ಕಿದ್ದ ಹಾಗೆ ಇವತ್ತು ಆರ್ಡರ್ ಕೈಲಿಟ್ಟು ತತ್‍ಕ್ಷಣ ಡ್ಯೂಟಿಗೆ ಜಾಯಿನ್ ಆಗಬೇಕು ಅಂತ ನಮ್ಮ ಡೈರೆಕ್ಟರ್ ಕರೆದು ಹೇಳಿದ್ದಾರೆ”
-ಅವಳ ಮುಖದೊಡನೆ ದನಿಯೂ ಪೆಚ್ಚಾಗಿತ್ತು.
“ಆ ಹೌದಾ?….. ಕಂಗ್ರಾಟ್ಸ್….. ಪ್ರಮೋಷನ್‍ನಂಥ ಸಂತೋಷದ ಸುದ್ದೀನ ಸಪ್ಪೆಮುಖ ಹಾಕಿಕೊಂಡು ಹೇಳ್ತಿದ್ದೀಯಲ್ಲಮ್ಮ. ಎನಿವೇ-ಮೊದಲ ಭಾಗದ ಸುದ್ದಿಗೆ ಸಂತೋಷ….. ಎರಡನೆಯ ಭಾಗದ ಸುದ್ದಿಗೆ ಬೇಜಾರಾಯ್ತಮ್ಮ….. ವರ್ಗ ಕ್ಯಾನ್ಸಲ್ ಮಾಡಿಸಿಕೊಳ್ಳಕ್ಕೆ ಆಗಲ್ವೇ?” – ವೆಂಕಟೇಶಯ್ಯನವರು ಆತಂಕ ವ್ಯಕ್ತಪಡಿಸಿದರು.
“ಇಲ್ಲ ಅಂಕಲ್….. ಪ್ರಮೋಷನ್ ಮೇಲೆ ಟ್ರಾನ್ಸ್‍ಫರ್ ಮಾಡಿದಾಗ ನಾವು ಬೇರೆ ಜಾಗಕ್ಕೆ ಹೋಗಲೇಬೇಕಾಗುತ್ತೆ ”-ಅವಳ ಮಾತು ಮುಗಿಯುವ ಮುನ್ನವೇ ಭಾವಿ ಬೀಗಿತ್ತಿ “ಹಾಗೇನಿಲ್ಲಮ್ಮ….. ನಂಗೂ ಗೊತ್ತಿದೆ ಸ್ಟೇಟ್ ಗವರ್ನಮೆಂಟ್‍ಮೆಂಟ್ ರೂಲ್ಸೂ, ರೆಗ್ಯುಲೇಷನ್ನು….. ಪ್ರಮೋಷನ್ ಬೇಡ ಅಂದ್ರೆ ಇದೇ ಜಾಗದಲ್ಲಿ ಕಂಟಿನ್ಯೂ ಮಾಡಬಹುದು”-ಎಂದರು ಖಚಿತವಾಗಿ.
“ಆದರೆ ಇದೇ ಮೊದಲ ಪ್ರಮೋಷನ್….. ಅದೂ ಕೆಲಸಕ್ಕೆ ಸೇರಿ 12 ವರ್ಷಗಳ ಅನಂತರ…..” ತಡವರಿಸಿದಳು ರಂಜನಾ. ಬಡ್ತಿ ನಿರಾಕರಣೆ ಬಗ್ಗೆ ಆಕೆ ಕಟುವಾಗಿ ಮಾತನಾಡಿದಾಗ ಅವಳ ಹೃದಯದ ಛಳಕು ಕಣ್ಣಂಚಿನಲ್ಲಿ ಕಾಣಿಸಿಕೊಂಡಿತು. ತಾನು ಈ ಅಸಂದರ್ಭದಲ್ಲಿ ಇವರ ಮನೆಗೆ ಬರಬಾರದಿತ್ತು ಎಂದು ಒಳಗೇ ಮಿಡುಕಿದಳು.
ಆಕೆ ಅಷ್ಟಕ್ಕೇ ಮಾತು ನಿಲ್ಲಿಸಲಿಲ್ಲ. “ ಅಲ್ಲಮ್ಮ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅಂದ್ಹಾಗಾಯ್ತು….. ಗಂಡ, ಮಕ್ಕಳು, ಸಂಸಾರ ಡಿಸ್ಟರ್ಬ್ ಆಗಬಾರ್ದು ಅಂತಿದ್ರೆ ಬಡ್ತಿ ಬಿಡಬೇಕಪ್ಪ….. ನಾನೂ ಸರಕಾರಿ ಸೇವೇಲೇ ಇದ್ದೆ….. ಮಕ್ಕಳಾಗ್ತಿದ್ದ ಹಾಗೇ- ಹೆಣ್ಣಾದವಳು ಅಚ್ಚುಕಟ್ಟಾಗಿ ಸಂಸಾರ ಮಾಡೋದೇ ಧರ್ಮ ಅಂತ ತೀರ್ಮಾನಿಸಿ ರಿಸೈನ್ ಮಾಡ್ಬಿಟ್ಟೆ…..” ಎಂದು ಹೆಮ್ಮೆಯಿಂದ ಹೇಳಿಕೊಂಡರಾಕೆ.
ರಂಜನಳ ಮೊಗ ಅರಕ್ತವಾಯಿತು. ಆಕೆಯ ಪುಕ್ಕಟೆ ಸಲಹೆ ಅವಳಿಗೆ ನುಂಗಲಾರದ ತುತ್ತಾಯಿತು. ಏನೋ ಸಹಾಯ ಕೇಳಲು ಬಂದವಳು, ಬಿಚ್ಚಿಕೊಂಡ ಹೊಸ ಚರ್ಚೆಯನ್ನು ಅರಗಿಸಿಕೊಳ್ಳಲಾರದೆ ಗಲಿಬಿಲಿಗೊಂಡಳು.
“ಹಾ ನೀವು ಹೇಳೋದೇನೋ ಸರೀನೇ, ಆದ್ರೆ ಈಗಿನ ಕಾಲದಲ್ಲಿ ಸರಕಾರಿ ಕೆಲಸ ಸಿಗೋದೇ ಕಷ್ಟ, ಅಂಥ್ರದಲ್ಲಿ ಸಿಕ್ಕಿದ್ದನ್ನ ಅಷ್ಟು ಸುಲಭವಾಗಿ ಬಿಟ್ಟು ಬಿಡಕ್ಕೆ ಆಗತ್ಯೇ”-ಎಂದು ವೆಂಕಟೇಶಯ್ಯ ಬೀಗಿತ್ತಿಯ ಮಾತನ್ನೊಪ್ಪದೆ ತಲೆಯಾಡಿಸಿದಾಗ, ಆಕೆ ವಾದಕ್ಕೆ ಮುಖದಲ್ಲಿ ಹುರುಪು ತುಂಬಿಕೊಂಡು “ಅಂದ್ಮೇಲೆ ಸಂಬಳ-ಉದ್ಯೋಗಾನೇ ಹೆಚ್ಚು ಅನ್ನೋರು , ಸುಮ್ನೆ ಬಾಯ್ಮುಚ್ಕೊಂಡು ಹೋಗಿ ಜಾಯಿನ್ ಆಗಬೇಕಪ್ಪ….. ಕಷ್ಟ-ಕಾರ್ಪಣ್ಯ ಅಂತ ರಾಗ ಎಳೆಯೋರಿಗೆ ಸರಕಾರಿ ಸೇವೆ ಲಾಯಕ್ಕಲ್ಲ ಬಿಡಿ”-ಎಂದರು ಖಡಾಖಂಡಿತವಾಗಿ ಭಾವೀ ಬೀಗಿತ್ತಿ.
ರಂಜನಳ ದನಿ ಸತ್ತಿತ್ತು. ತಲೆ ಧಿಮ್ಮೆನ್ನುತ್ತಿತ್ತು.
“ನೀನು ಮಂಗಳೂರಿಗೆ ಹೋಗೋದೂಂತ ತೀರ್ಮಾನಿಸಿ ಬಿಟ್ಟಿದ್ದೀಯಾ ರಂಜನಾ?”-ವಿಮಲಮ್ಮ ನಡೆಯುತ್ತಿದ್ದ ಬಿಸಿಬಿಸಿ ಚರ್ಚೆಯನ್ನು ಕಂಡು ಅಚ್ಚರಿಗೊಂಡು ಪ್ರಶ್ನಿಸಿದರು. ರಂಜನಾ ಸಾವರಿಸಿಕೊಳ್ಳುತ್ತ….. “ಹೂಂ ಸ್ವಲ್ಪ ದಿನ ನೋಡೋದು. ಅಡ್ಜಸ್ಟ್ ಆದ್ರೆ ಹೇಗೋ ಸ್ವಲ್ಪ ದಿನ ಕಾಲ ದೂಡಿ ಮತ್ತೆ ರಜ ಹಾಕಿ ಬರೋದೂಂತ ಯೋಚಿಸ್ತಿದ್ದೀನಿ…..” ಎಂದಾಗ ಬೀಗಿತ್ತಿಗೆ ಅವಳ ಮಾತು ಕೇಳಿ ರೇಗಿಹೋಯ್ತು.
“ನಿಮ್ಮಂಥೋರು ಇರೋ ಹೊತ್ತಿಗೆ ಸರಕಾರ ಹೀಗಾಗಿರೋದು-ಉದ್ಧಾರವಾಯ್ತು….. ನಿಮ್ಮ ಕಥೇನೇ ನಿಮಗೆ ದೊಡ್ಡದಾದರೆ ದೇಶದ ಗತಿಯೇನು?”-ಎಂದರಾಕೆ ಒಂದು ಬಗೆಯ ಟೀವಿಯಲ್ಲಿ, ಕಂಠದಲ್ಲಿ ತುಸು ಕಾಠಿಣ್ಯ ತುಂಬಿ. ಆಕೆಗೆ ನಿಯತ್ತಾಗಿ ಉತ್ತರಿಸುವುದು ರಂಜನಳಿಗೆ ಇಷ್ಟವಿರದಿದ್ದರೂ, ಆಕೆಯನ್ನು ಲಕ್ಷಿಸದಂತೆ ವಿಮ್ಮಲಮ್ಮನ ಕಡೆಗೆ ತನ್ನ ಮುಖ ತಿರುಗಿಸಿ, “ನಮ್ಮ ಯಜಮಾನರು ನನ್ನ ಜತೆ ಮಂಗಳೂರಿಗೆ ಬಂದು ಒಂದು ವಾರ ಇದ್ದು ನನಗೆಲ್ಲ ವ್ಯವಸ್ಥೆಯನ್ನು ಮಾಡಿಬರ್ತಾರೆ….. ಅದುವರೆಗೂ ಹುಡುಗರಿಬ್ಬರೇ ಮನೇಲಿ….. ಅದಕ್ಕೆ ನಿಮ್ಮನೆ ಅಡುಗೆ ಹುಡುಗಿ ಜಯನ್ನ ಸ್ವಲ್ಪ ಅಡುಗೆಗೆ ಸಹಾಯಕ್ಕೆ, ರಾತ್ರಿ ಮಲಗಕ್ಕೆ ಸ್ವಲ್ಪ ಕಳಿಸಿಕೊಟ್ಟರೆ ತುಂಬಾ ಹೆಲ್ಪ್ ಆಗತ್ತೇಂತ ಕೇಳೋಣಾಂತ ಬಂದೆ” ಎಂದಳು ತಡವರಿಸುತ್ತಾ.
ಭಾವೀ ಬಿಗಿತ್ತೀಯ ಮುಖಚಹರೆ ವ್ಯಗ್ರವಾಯಿತು. ‘’ಅಲ್ಲಮ್ಮ ಮೈನೆರೆದ, ವಯಸ್ಸಿಗೆ ಬಂದ ಹುಡುಗಿಯರಿಬ್ಬರನ್ನೇ ಬಿಟ್ಟು ಹೋಗ್ತೀರಾ….. ಎಷ್ಟು ಧೈರ್ಯ ನಿಮಗೆ?”
“ಅವರಿಗೆ ಪರೀಕ್ಷೆ ಟೈಮು, ಇಲ್ಲದಿದ್ರೆ ಅವರನ್ನೂ ನಮ್ಜೊತೆ ಕರ್ಕೊಂಡು ಹೋಗ್ಬಹುದಿತ್ತು”-ರಂಜನಾ ಪೆಚ್ಚಾಗಿ ತಲೆ ಬಾಗಿಸಿ ಉತ್ತರಿಸಿದಳು.
ಅವರೆಲ್ಲರ ಮಾತುಗಳನ್ನು ಮೌನವಾಗಿ ಆಲಿಸುತ್ತಿದ್ದ ಸುಧೀಂದ್ರನಿಗೆ ರಂಜನಾಳ ಪ್ರಾಮಾಣಿಕ ಉತ್ತರ ಕೇಳಿ ನಗುಬಂತು. ಅವಳು ವಿಧೇಯ ವಿದ್ಯಾರ್ಥಿಯಾಗಲಿಕ್ಕೆ ಲಾಯಕ್ಕೆನಿಸಿತು. ಪ್ರಶ್ನೆಗೆ ನಿಯತ್ತಿನ ಉತ್ತರ!!!..
“ಛೇ….. ಪಾಪ ನಿಮ್ಮ ಮನೆಯವರೆಲ್ಲರಿಗೂ ಎಂಥಾ ತೊಂದರೆ ಬಂತು!….. ನೋ ನೋ….. ಇದು ಒಂದು ವಾರಕ್ಕೆ ಬಗೆಹರಿಯೋ ಕಥೆಯಲ್ಲ….. ಮನೇಲಿ ಹೆಣ್ಣು ದಿಕ್ಕಿಲ್ಲದಿದ್ರೆ ಏನ್ಗತಿ?! ಸಣ್ಣ ಸಣ್ಣ ಹುಡುಗಿಯರು ಒಲೆ ಮುಂದೆ ಕೈಬಾಯಿ ಸುಟ್ಕೋತಿದ್ರೆ ಅವರ ಓದಿನ ಗತಿಯೇನು? ಇನ್ನು ಗಂಡಸು ಇದ್ದೇನು ಪ್ರಯೋಜನ? ಎರಡು ತುತ್ತು ಕೂಳು ಬೇಡವೇ?”-ಭಾವೀ ಬೀಗಿತ್ತಿ ಅನುಕಂಪದಿಂದ ಲೊಚಗುಟ್ಟಿದರು.
“ನೀವು ಹೋಗಲೇಬೇಕೂಂತ ತೀರ್ಮಾನ ಮಾಡಿಬಿಟ್ಟಿದ್ದೀರಾ?”-ಈ ಸಲ ಪ್ರಶ್ನಿಸುವ ಸರತಿ ಭಾವೀ ಸೊಸೆ ಮಾಯಳದು.
“ಹೂಂ…..” ಕ್ಷೀಣ ಉತ್ತರ.
“ಛೇ….. ಕಾಲ ಕೆಟ್ಟೋಯ್ತಮ್ಮ….. ಹೆಂಗಸರು ಹೇಳಿದ ಮಾತು ಕೇಳದೇ ಇದ್ರೆ ಹೀಗೇ ಯದ್ವಾತದ್ವಾ ಸಂಸಾರ. ಕಂಡ ಕಂಡವರನ್ನೆಲ್ಲ ಯಾಚಿಸೋ ಪರಿಸ್ಥಿತಿ”
-ಭಾವೀ ಬೀಗಿತ್ತಿಯ ತೀಕ್ಷ್ಣ ಆಕ್ಷೇಪಣೆಯ ಮಾತುಗಳನ್ನು ಕೇಳಿ ರಂಜನಳ ಮೊಗ ಅವಮಾನದಿಂದ ಕೆಂಪಾಯಿತು. ಕೂರಲು ಆಗದೆ, ಏಳಲೂ ಆಗದೆ ಚಡಪಡಿಸಿದಳು.
“ನೀವು ಒಂದು ವಾರ ಅಡುಗೆಯವಳನ್ನು ಕಳಿಸಕ್ಕೆ ಆಗತ್ತೋ ಇಲ್ಲವೋ ಅಷ್ಟು ಹೇಳಿ?” ಎನ್ನಬೇಕೆಂದಿದ್ದ ಅವಳ ಮಾತು ಗಂಟಲಲ್ಲೇ ಹೂತು ಹೋಗಿತ್ತು.
“ನನ್ನ ಮಾತು ಕೇಳೋದಾದ್ರೆ ನೀವು ಕೆಲಸ ಬಿಟ್ಟುಬಿಡೀಮ್ಮ….. ಹೆಂಗಸು ಕೆಲಸಕ್ಕೆ ಹೋದ್ರೆ ಮನೆ ನೆಮ್ಮದಿಯೇ ಕೆಟ್ಟು ಹೋಗುತ್ತೆ. ಗಂಡ ಒಂದು ದಿಕ್ಕಾದರೆ, ಮಕ್ಕಳು ದಾರಿ ಬಿಟ್ಟು ಹೋಗ್ತಾರಷ್ಟೆ”-ಈ ಬಾರಿ ಬಿಟ್ಟೀ ಸಲಹೆ ಕೊಟ್ಟವರು ಭಾವೀ ಬೀಗರು.
ಅವರ ವಾಗ್ಬಾಣಗಳ ಪ್ರಹಾರಕ್ಕೆ ಸಿಕ್ಕಿದ ರಂಜನಾ ತತ್ತರಿಸಿ ಹೋದಳು. ಅವಳೆದೆ ಜಾಗಟೆಯಂತೆ ಹೊಡೆದುಕೊಂಡಿತು. ಎದುರಿನಿಂದ ಸಲಹೆಗಳು ಓತಪ್ರೋತವಾಗಿ ಹರಿದು ಬರುತ್ತಿದ್ದವು..
“ನೋಡಿ, ಇನ್ನೂ ಒಂದು ಕೆಲಸ ಮಾಡೀಮ್ಮಾ….. ಅನಾಥಾಶ್ರಮ, ಅಬಲಾಶ್ರಮಗಳಲ್ಲಿ ದಿಕ್ಕೆಟ್ಟ ಅನಾಥ ಹೆಂಗಸರು ಬೇಕಾದಷ್ಟು ಜನ ಇರ್ತಾರೆ….. ಅವರನ್ನ ಬೇಕಾದ್ರೆ ಕೆಲಸಕ್ಕೆ ಇಟ್ಕೋಬಹುದು….. ನಾನು ಬೇಕಾದ್ರೆ ಯಾವುದಾದ್ರೂ ಹುಡುಗೀನ ಗೊತ್ತು ಮಾಡಿಕೊಡ್ತೀನಿ. ನೀವು ಅವಳನ್ನ ಮನೇಲಿಟ್ಕೊಂಡು, ಕೆಲಸ ಮಾಡಿಸ್ಕೊಂಡು, ವರ್ಷಕ್ಕೆ ಎರಡು ಸೀರೆ, ತಿಂಗಳಿಗೊಂದಷ್ಟು ಸಂಬಳ ಅಂತ ಅವಳ ಅಕೌಂಟಿಗೆ ಹಾಕಿದರಾಯ್ತು….. ನೋ ಪ್ರಾಬ್ಲಮ್, ಅವಳಿಗೂ ಒಂದು ಸಹಾಯ ನಿಮಗೂ ಒಂದು ಆಸರೆ ಆಯ್ತು….. ಅನಾಥ ಮಕ್ಕಳಿಗೇನು, ಧಂಡಿಯಾಗಿ ಸಿಕ್ತಾವೆ”
-ಮಾಯಾಳ ಮೊಗದಲ್ಲಿ ಒಂದು ಬಗೆಯ ತಾತ್ಸಾರದ ಭಾವನೆ ಜಿನುಗುತ್ತಿತ್ತು.
ವಿಷಯ ಎಲ್ಲಿಂದೆಲ್ಲಿಗೋ ಹೋಗುತ್ತಿರುವುದನ್ನು ಗಮನಿಸಿದ ರಂಜನಾ ಗಾಬರಿಯಾದಳು. ಕಳೆದರ್ಧ ಗಂಟೆಯಿಂದ ಬರೀ ತನ್ನ ಉದ್ಯೋಗ-ವರ್ಗದ ಬಗ್ಗೆಯೇ ಭಾರಿ ಚರ್ಚೆ ನಡೆಯುತ್ತಿರುವುದನ್ನು ಕಂಡು ಅವಳಿಗೆ ಅಸಾಧ್ಯ ಹಿಂಸೆ-ಚಡಪಡಿಕೆ-ಕಸಿವಿಸಿಯುಂಟಾಗಿ, ತಾನ್ಯಾಕೆ ಈಗ ಇವರ ಮನೆಗೆ ಬಂದೆನೋ ಎಂಬ ಪಶ್ಚಾತ್ತಾಪ ಭಾವ ಅಮುಕತೊಡಗಿತು. ಅಲ್ಲದೆ ಸುಧೀಂದ್ರನ ಮದುವೆಯಂಥ ಮುಖ್ಯ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ತನ್ನ ಆಗಮನ ಈ ವೇಳೆಯಲ್ಲಿ ಎಷ್ಟು ಉಚಿತ ಎಂಬ ಸಂಕೋಚವೂ ಆವರಿಸಿ, ತನ್ನಿಂದ ಅವರ ಮಾತುಕತೆ ಅರ್ಧದಲ್ಲೇ ನಿಂತುಹೋದುದನ್ನು ಕಂಡು ಲಜ್ಜೆಯಿಂದ ಎದ್ದು ನಿಂತವಳು-
“ಸಾರಿ, ಪಾಪ ನೀವೆಲ್ಲ ಏನೋ ಸಿರಿಯಸ್ಸಾಗಿ ಡಿಸ್ಕಸ್ ಮಾಡಕ್ಕೆ ಸೇರಿದ್ರೀ….. ನನ್ನ ಸಮಸ್ಯೆ ಹೇಳಿ ನಿಮ್ಮ ತಲೆ ತಿನ್ನ್ನುತ್ತ ಇದ್ದೀನಿ….. ಕ್ಷಮಿಸಿ”-ಎಂದು ಧಡಧಡನೆ ಅಲ್ಲಿಂದ ಹೊರೆಧಾವಿಸಿದ ರಂಜನಳ ಕಣ್ಣಂಚಿನಲ್ಲಿ ಕಂಬನಿ ತುಳುಕುತ್ತಿತ್ತು.
‘’ಇದೆಂಥ ನೆರೆಹೊರೆ ವಿಮಲಮ್ಮ?!!!….. ತಮ್ಮ ಸಂಸಾರದ ಹೊರೆಯನ್ನೆಲ್ಲ ನಿಮ್ಮ ತಲೆಗೆ ಕಟ್ಟಕ್ಕೆ ಬರ್ತಾರಲ್ಲ!’’
ತಾಯಿಯ ಜತೆ ಮಗಳೂ- “ ನ್ಯೂಸೆನ್ಸ್….. ಬೀದಿಯೋರಿಗೆಲ್ಲ ಸಹಾಯ ಮಾಡಕ್ಕಾ ನೀವು ಅಡುಗೆಯವಳನ್ನ ಇಟ್ಕೊಂಡಿರೋದು….. ನೀವು ನೆರೆಹೊರೆಯೋರಿಗೆ ಇಷ್ಟು ಸಲುಗೆ ಕೊಟ್ಟರೆ ಇನ್ನೂ ಕಷ್ಟಾನೇ”-ಎಂದು ಮುಖ ಸೊಟ್ಟಗೆ ಮಾಡಿದಾಗ, ಭಾವೀ ಬೀಗರು ಮೇಲೆದ್ದವರು-“ನಾವಿನ್ನು ಬರ್ತೀವಿ ವೆಂಕಟೇಶಯ್ಯನವರೇ ….. ಅನ್ಯಾಯವಾಗಿ ಆ ಹುಡುಗಿಯಿಂದ ನಮ್ಮ ಅಮೂಲ್ಯ ಸಮಯವೆಲ್ಲಾ ದಂಡವಾಗಿ ಹೋಯ್ತು….. ನಾಳೆ ನಾಡಿದ್ರಲ್ಲಿ ಮತ್ತೆ ನೋಡೋಣ….. ಅಷ್ಟರಲ್ಲಿ ಶಾಸ್ತ್ರಿಗಳನ್ನು ಕಂಡು ಮದುವೆ ಮುಹೂರ್ತ ನಿಶ್ಚಯಿಸಿಕೊಂಡು ಬರ್ತೀವಿ ” ಎಂದವರೆ ಹೆಂಡತಿ-ಮಗಳನ್ನು ಮೇಲೆಬ್ಬಿಸಿಕೊಂಡು ಹೊರಟು ನಿಂತರು.
ಬಂದವರೆಲ್ಲ ಹೊರಟುಹೋದ ಮೇಲೆ ಮನೆ ಭಣಭಣಗುಟ್ಟಿದಂತೆನಿಸಿ, ವಿಮಲಮ್ಮನ ಮೊಗ ಕಳಾಹೀನವಾಯಿತು.
“ಛೇ….. ಎಂಥ ಸಮಯ ಆರಿಸಿಕೊಂಡು ಬಂದಳು ಈ ರಂಜನಾ….. ಕೆಲಸ ಎಲ್ಲ ಕೆಟ್ಟುಹೋಯ್ತು…” ಎಂದು ವಿಮಲಮ್ಮ ಸಿಡುಕುತ್ತ ಬೇಸರಿಸಿಕೊಂಡು ನಿಟ್ಟುಸಿರು ಕಕ್ಕಿದಾಗ, ಸುಧೀಂದ್ರ ನಗುತ್ತಾ “ಹಾಗ್ಯಾಕನ್ತೀಯಾಮ್ಮಾ?….. ಪಾಪ ಆಕೆ ಬಂದು ನಮ್ಮ ಕೆಲಸ ಕೆಡಿಸಲಿಲ್ಲ, ಬದಲು ಕೆಡೋದನ್ನ ತಪ್ಪಿಸಿದರು….. ನಮ್ಮನೆ ಉಳಿಸಿದರು, ನನ್ನ ಮಕ್ಕಳನ್ನು ಕಾಪಾಡಿದರು ”
ಮಗನ ಒಗಟು ಮಾತಿಗೆ ಬೆರಗಿನಿಂದ ಕಣ್ಣರಳಿಸಿದರು ದಂಪತಿಗಳಿಬ್ಬರು-
“ಏನೋ ಹಾಗಂದ್ರೆ?!!!….. ನಾವು ಇವತ್ತು ಮದುವೆ ಬಗ್ಗೆ ಮಾತುಕತೆಯೆಲ್ಲ ಮುಗಿಸಿ ಒಂದು ತೀರ್ಮಾನಕ್ಕೆ ಬರಬೇಕಿತ್ತಲ್ಲೋ” ಎಂದು ಬಾಯರಳಿಸಿದರು.
‘’ತೀರ್ಮಾನ ಆಯ್ತಲ್ಲಮ್ಮ… ಆ ಮಾಯಾ, ನಮ್ಮನೆಗೆ ಸೂಕ್ತವಾದವಳಲ್ಲ ಅಂತ… ಇವತ್ತೇನಾದರೂ ರಂಜನಾ ನಮ್ಮನೆಗೆ ಬರದೇ ಇದ್ದಿದ್ರೆ ನಮ್ಮ ತೀರ್ಮಾನ ತಪ್ಪಾಗಿ, ಆಮೇಲೆ ನಾನು ಸರಿಪಡಿಸಿಕೊಳ್ಳಲಾಗದೆ ಪಶ್ಚಾತ್ತಾಪ ಪಟ್ಟು ಜೀವನ ಪರ್ಯಂತ ಒದ್ದಾಡಬೇಕಾಗ್ತಿತ್ತು ಅಷ್ಟೆ. ಸದ್ಯ ರಂಜನಾಗೆ ಥ್ಯಾಂಕ್ಸ್ ಎ ಲಾಟ್ ” ಎಂದವನು ಕೃತಜ್ಞತೆಯಿಂದ ದೀರ್ಘ ಉದ್ಗಾರ ಹೊರಡಿಸಿದಾಗ, ವಿಮಲಮ್ಮ ಮತ್ತು ವೆಂಕಟೇಶಯ್ಯ ಇಬ್ಬರೂ ಕಕ್ಕಾಬಿಕ್ಕಿಯಾಗಿ ನಿಂತಿದ್ದರು.
“ಎಂಥ ವ್ಯಾವಹಾರಿಕ ಜನಗಳಮ್ಮ ಇವರು !!!.. ಕೊಂಚವೂ ಹೃದಯ ವೈಶಾಲ್ಯವಿಲ್ಲದ ಇಂಥ ನಿರ್ದಯಿ ಹುಡುಗಿ ನನ್ನ ಮಕ್ಕಳಿಗೆ ಹೇಗೆ ತಾನೆ ಮಮತಾಮಯಿ ತಾಯಿಯಾಗಬಲ್ಲಳು ಹೇಳಿ ? ಸದ್ಯ ದೇವರು ದೊಡ್ಡವನು….. ನಮ್ಮ ಸಂಸಾರ ಕಾಪಾಡಿದ….. ರಂಜನಾ ಸರಿಯಾದ ಸಮಯಕ್ಕೆ ಬಂದಿದ್ರಿಂದ, ಮಾಯಾಳ ನಿಜವಾದ ಬಣ್ಣ , ಸ್ವಭಾವ ಅನಾವರಣವಾಯ್ತು”
-ಎಂದು ಸುಧೀಂದ್ರ ಸಮಾಧಾನದ ಪೇರುಸಿರು ಚೆಲ್ಲಿದ.
****************
4 comments
ತುಂಬ ಚೆಂದದ ಕಥೆ. ಕುತೂಹಲಕಾರಿಯಾಗಿತ್ತು.
ನಿಮ್ಮ ಪ್ರೀತಿಯ ಓದಿಗೆ, ಪ್ರೋತ್ಸಾಹಕ್ಕೆ ಮತ್ತು ಮೆಚ್ಚ್ಚುಗೆಗೆ ಅನಂತ ನಮನಗಳು. ನಿಮ್ಮ ಈ ಸಹೃದಯತೆ ಹೀಗೆಯೇ ಮುಂದುವರಿಯಲಿ ಎಂದು ಕೋರುತ್ತೇನೆ.
Agodella olleyadakke. Kathe tumba eshtta aayitu.
ಅಪಾರ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ, ಪ್ರೀತಿಯ ಓದಿಗೆ ವಾರುಣಿ ಅವರೇ.