Image default
Dance Reviews

ವಿಸ್ಮಯ ಸೃಷ್ಟಿಸಿದ ‘ಅರಣ್ಯೇ ನಿನಗೆ ಶರಣು’ ಹೃದಯಸ್ಪರ್ಶೀ ನೃತ್ಯರೂಪಕ

ಚೌಡಯ್ಯ ಮೆಮೋರಿಯಲ್ ಹಾಲ್ ಪರಿಸರಪ್ರೇಮಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ರಂಗದ ಮೇಲೆ ವಿಶಿಷ್ಟ ಬೆಳಕಿನ ವಿನ್ಯಾಸದಲ್ಲಿ ಅನಾವರಣಗೊಂಡಿದ್ದ  ಚೇತೋಹಾರಿ ನೃತ್ಯವಲ್ಲರಿಗಳು, ನಾಟಕೀಯ ಸನ್ನಿವೇಶಗಳು ಐವತ್ತಕ್ಕೂ ಹೆಚ್ಚು ಮಂದಿ ಕಲಾವಿದರ ನೃತ್ಯ ವೈಖರಿಯಲ್ಲಿ ಅರಣ್ಯದ ಮಹತ್ವವನ್ನು ಎತ್ತಿಹಿಡಿದ ಹೃದಯಸ್ಪರ್ಶೀನೃತ್ಯರೂಪಕ ‘ಅರಣ್ಯೇ ನಿನಗ ಶರಣು’ ವೀಕ್ಷಕರಿಗೆ ರಸದೌತಣವನ್ನು ನೀಡಿತು.

ನಾಗರೀಕತೆ ಬೆಳೆದಂತೆ, ಸಮೃದ್ಧವಾಗಿ ಪಸರಿಸಿದ್ದ ಸಸ್ಯಶಾಮಲೆ-ಕ್ಷಮಯಾ ಧರಿತ್ರಿಯಾದ ಭೂತಾಯಿಯ ಒಡಲನ್ನು ಜನ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಮಾರಣಹೋಮಗೈದ ಹೃದಯಂಗಮ ಚಿತ್ರದೀಪಿಕೆಯನ್ನು ‘ಶ್ರೀ ರಾಜ ರಾಜೇಶ್ವರಿ ಕಲಾನಿಕೇತನ’ ನೃತ್ಯಸಂಸ್ಥೆಯು, ಬೆಂಗಳೂರು ಎನ್ವಿರಾನ್ ಮೆಂಟ್ ಟ್ರಸ್ಟ್ ಸಹಯೋಗದೊಂದಿಗೆ ನಡೆಸಿದ  ‘ಸಮನ್ವಯ ಕಲೋತ್ಸವ’ದಲ್ಲಿ ಅರ್ಥಪೂರ್ಣವಾಗಿ ಪ್ರದರ್ಶಿಸಿತು.

       ಒಂದು ಗಂಟೆಗಳ ಕಾಲ ಅರಣ್ಯದ ತಣ್ಣೆಳಲ ರಮ್ಯಲೋಕಕ್ಕೆ ಕರೆದೊಯ್ದು ಆಕೆಯ ಅಮೂಲ್ಯ ಸಂಪನ್ಮೂಲ ಕೊಡುಗೆ, ವನರಾಜಿ-ಖಗ-ಮೃಗಗಳ ಸಮೃದ್ಧತೆಯ ವಿಹಂಗಮ ನೋಟವಿತ್ತ ಸಂದೇಶಾತ್ಮಕ ಈ ನೃತ್ಯನಾಟಕವು, ಪ್ರಸಕ್ತ ವಿಶ್ವದ ಸವಾಲಾಗಿರುವ ಭೂರಕ್ಷಣೆಯ ಸುತ್ತ ಹೆಣೆಯಲಾದ, ಜಾಗತಿಕ ಸಮಸ್ಯೆಗೆ ಕನ್ನಡಿ ಹಿಡಿದ ಅದ್ಭುತ ಪ್ರಯೋಗವಾಗಿತ್ತು.

ಪರಿಸರತಜ್ಞ ಡಾ. ಅ.ನಾ ಯಲ್ಲಪ್ಪ ರೆಡ್ಡಿ ಅವರು ರಚಿಸಿರುವ ‘ಅರಣ್ಯೇ ನಿನಗ ಶರಣು’ ಪುಸ್ತಕಾಧಾರಿತ ಹಾಗೂ ಅವರ ಪರಿಕಲ್ಪನೆಯ ಈ ನೃತ್ಯ ನಾಟಕಕ್ಕೆ ಡಾ. ವೀಣಾ ಮೂರ್ತಿ ವಿಜಯ್ ಅವರ ಕಲಾತ್ಮಕ ಅಪೂರ್ವ ನೃತ್ಯಸಂಯೋಜನೆ-ನಿರ್ದೇಶನ ಜೀವ ಚೈತನ್ಯ ತುಂಬಿತ್ತು. ಸನ್ನಿವೇಶಗಳಿಗೆ ಮಾಧುರ್ಯದಲೆಯ ಸ್ಪರ್ಶ ನೀಡಿದ ಪರಿಣತ ಸಂಗೀತಜ್ಞ ಡಾ. ಪ್ರವೀಣ್ ಡಿ. ರಾವ್ ಅವರ ವಿಶಿಷ್ಟ ಸಂಗೀತ, ವಿ. ವಿ. ಗೋಪಾಲರ ಸಂಭಾಷಣೆಗಳು, ಹಚ್ಚ ಹಸಿರಿನ ಪ್ರಪ್ಹುಲ್ಲತೆಯನ್ನು ಸೊಗಯಿಸಿದ ಉಡುಗೆ-ತೊಡುಗೆಗಳು, ಎಲ್ಲಕ್ಕೂ ಕಿರೀಟವಿಟ್ಟಂತೆ ಕಣ್ಮನ ಸೂರೆಗೊಂಡ ಸೂರ್ಯಾ ರಾವ್ ಅವರ ಬೆಳಕು ವಿನ್ಯಾಸದ ಕಲಾನೈಪುಣ್ಯ ಒಟ್ಟು ಪರಿಣಾಮವನ್ನು ಗಾಢಗೊಳಿಸಿತ್ತು.

ಹಿನ್ನಲೆಯ ಪರದೆಯ ಮೇಲೆ ಮೂಡಿ ಬರುತ್ತಿದ್ದ ಪರಿಸರದ ವಿಸ್ಮಯ ದೃಶ್ಯಗಳ ಚಿತ್ರಗಳು, ಪ್ರಾಕೃತಿಕ ಸಹಜಾನುಭವಕ್ಕೆ ಪೂರಕವಾಗಿದ್ದ ಸರಳ ರಂಗಸಜ್ಜಿಕೆ, ಧ್ವನಿ ಪರಿಣಾಮಗಳು, ಅನನ್ಯ ಸಂಪತ್ತನ್ನಿತ್ತು, ಅಗಾಧ ಪ್ರೀತಿ-ಕರುಣೆಗಳ ಕಡಲಧಾರೆಯನ್ನೇ ಕರೆಯುತ್ತಿರುವ ಭೂತಾಯ ರಕ್ಷಣೆಗೆ ನಾವಿಂದು ಮುಂದಾಗಬೇಕಾದ ತುರ್ತು, ಅನಿವಾರ್ಯತೆಯನ್ನು ಸಾರಿ ಹೇಳಿತು.  

ಸಹನಾಮಯಿ ಭೂಮಾತೆಯಾಗಿ ಖ್ಯಾತ ನೃತ್ಯಗುರು-ಕಲಾವಿದೆ ಡಾ. ವೀಣಾ ಮೂರ್ತಿಯವರ ಸಾತ್ವಿಕಾಭಿನಯ ನೃತ್ಯರೂಪಕವನ್ನು ಕಳೆಗಟ್ಟಿಸಿತು. ಭೂಸಿರಿಯ ದುರ್ಬಳಕೆ, ನಶಿಸಿಹೋಗುತ್ತಿರುವ ಹಸಿರು ಕಾನನಗಳ ಹನನವನ್ನು ಕುರಿತು ವ್ಯಾಕುಲಗೊಳ್ಳುವ, ವಿಷಾದಿಸುವ, ಸೂತ್ರಧಾರಿಯ ಕೊರವಂಜಿಯ ಪಾತ್ರದಲ್ಲಿ ಲವಲವಿಕೆಯಿಂದ ಮಿಂಚಿದ ಪರಿಣತ ಕಲಾವಿದೆ ಶಮಾ ಕೃಷ್ಣಾ ಹೃನ್ಮನ ಸೂರೆಗೊಂಡರು.

ಮಹಾನ್ ಸಸ್ಯವಿಜ್ಞಾನಿ, ಅಡವಿಯ ಮಗಳು ಶಬರಿಯ ವಿಶೇಷ ವ್ಯಕ್ತಿತ್ವದ ವಿವಿಧ ಆಯಾಮಗಳಿಗೆ ನೃತ್ಯ-ನೂಪುರ ತೊಡಿಸಿದ ನುರಿತ ಕಲಾವಿದೆ ಅನುರಾಧಾ ವಿಕ್ರಾಂತ್ ತಮ್ಮ ಸುರಮ್ಯ ಲಾಸ್ಯನರ್ತನದಿಂದ ನೆನಪಿನಲ್ಲಿ ಉಳಿಯುವಂಥ ಅಭಿನಯ ನೀಡಿದರು. ಸೌಮ್ಯಾಭಿನಯದ ಸುಂದರರೂಪಿ ಕೋದಂಡರಾಮ ತನ್ನ ಮಂದಸ್ಮಿತವದನದ ಹೊಳಪಿನಿಂದ, ಶಬರಿಗೆ ಮಹದಾನಂದ ನೀಡಿದ ಮರ್ಯಾದಾ ಪುರುಷೋತ್ತಮನಾಗಿ ಸುಂದರ ಆಂಗಿಕಾಭಿನಯದಲ್ಲಿ ಗಮನ ಸೆಳೆದ ಉತ್ತಮ ಕಲಾವಿದ ಮಿಥುನ್ ಶ್ಯಾಂ ಚಿದಾನಂದ ನೀಡಿದರು.

ಭೂ ತಲ್ಲಣವನ್ನು ಸಾಂಕೇತಿಕವಾಗಿ ಧ್ವನಿಸಿದ ಗಗನಗಾಮಿ ಕಲಾವಿದನ ಪಾತ್ರವನ್ನು ಚೇತನ್ ಪಿ. ಬಹು ಚಮತ್ಕಾರಯುತವಾಗಿ ನಿರ್ವಹಿಸಿ ಮೆಚ್ಚುಗೆ ಪಡೆದರು. ಮಾರ್ಮಿಕಭಿನಯ ನೀಡಿದ ಜೆ. ಮನು, ರಾಜೇಶ್ ಮತ್ತು ರಾಧಿಕಾ ರಾಮಾನುಜಂ ಮುಂತಾದ ನೃತ್ಯ ಕಲಾವಿದರು ಗಮನ ಸೆಳೆದರು. ಗಿಡ-ಮರ-ಸಸ್ಯ ಸಂಕುಲ- ಪ್ರಾಣಿ- ಪಕ್ಷಿಗಳ ಗಡಣವನ್ನು ಸೊಗಸಾಗಿ ಸೃಜಿಸಿದ ಸಹ ನೃತ್ಯ ಕಲಾವಿದೆಯರ ತನ್ಮಯತೆಯ ಸಾಮರಸ್ಯದ ಲಯಬದ್ಧ ಹೆಜ್ಜೆಗೆಜ್ಜೆಗಳ ಚಲನೆಗಳು ಆಕರ್ಷಕವಾಗಿದ್ದು ಸ್ತುತ್ಯಾರ್ಹವೆನಿಸಿತು. ಒಟ್ಟಾರೆ ನೃತ್ಯರೂಪಕದ ಅದ್ಧೂರಿ ನಿರ್ಮಾಣ ಮತ್ತು ಸುಮನೋಹರ ಪ್ರಸ್ತುತಿ ಅದ್ಭುತವಾಗಿದ್ದು, ಯಶಸ್ಸು ಕಂಡು,  ಮನಮುಟ್ಟಿತೆಂದರೆ ಖಂಡಿತಾ ಅತಿಶಯೋಕ್ತಿಯಲ್ಲ.

ಪ್ರದರ್ಶನವನ್ನು ವೀಕ್ಷಿಸಿ, ಹೃದಯ ತುಂಬಿಬಂದಾಗ ಹೊರಬಂದ ಮಾತುಗಳು: ಇನ್ನಾದರೂ ನಾವು ನಶಿಸಿಹೋಗುತ್ತಿರುವ ನಮ್ಮ ಜೀವಸೆಲೆಯಾದ ಪ್ರಾಕೃತಿಕ ಸಂಪತ್ತಿನ ರಕ್ಷಣೆಗೆ ಕಾಳಜಿ ವಹಿಸೋಣ. ನಗರಗಳ ಮಾಲಿನ್ಯ ತೊಲಗಿ, ಎಲ್ಲೆಡೆ ಆರೋಗ್ಯಕರ ವಾತಾವರಣ ಪಸರಿಸಲಿ. ಕಣ್ತುಂಬುವ ಹಸಿರಸಿರಿ ಪಲ್ಲವಿಸಲಿ, ತನ್ಮೂಲಕ ಶಾಂತಿ ಸೌಹಾರ್ದತೆಗಳನ್ನು ಬಿತ್ತರಿಸೋಣ, ನಮ್ಮ ಒಳಗಣ್ಣ ತೆರೆಯೋಣ…ಸಮೃದ್ಧ ಹಸಿರ ಪರಿಸರವನ್ನು ಪುನಶ್ಚೇತನಗೊಳಿಸೋಣ ಬನ್ನಿ. ಇದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ-ಕರ್ತವ್ಯ.

                                      

Related posts

ಸಾತ್ವಿಕಾಭಿನಯದ ನಿವೇದಿತಳ ಮನತಣಿಸಿದ ನೃತ್ಯ

YK Sandhya Sharma

ಸುಂದರ ಅಭಿನಯದ ಸುಷ್ಮಳ ಕಲಾತ್ಮಕ ನಾಟ್ಯಪ್ರದರ್ಶನ

YK Sandhya Sharma

ಕಣ್ಮನ ಸೆಳೆದ ವೈವಿಧ್ಯಪೂರ್ಣ ‘ತಾಳ್-ತರಂಗ್ ’

YK Sandhya Sharma

Leave a Comment

This site uses Akismet to reduce spam. Learn how your comment data is processed.