Image default
Dance Reviews

ಅಂಗಶುದ್ಧಿಯ ಸುಮನೋಹರ ನಿಶಾ ನರ್ತನ

ಕಲಾರಸಿಕರು ಎದುರಿಗೆ ಕುಳಿತು ಮೆಚ್ಚುಗೆಯ ಕರತಾಡನ ಮಾಡುತ್ತಿದ್ದರೆ ಕಲಾವಿದರಿಗೆ ನರ್ತಿಸಲು ಸಹಜ ಸ್ಫೂರ್ತಿ -ಉತ್ಸಾಹದ ರಂಗು.  ನೃತ್ಯ-ಅಭಿನಯದ ಸಾಕ್ಷಾತ್ಕಾರಕ್ಕೆ ಉತ್ತಮ ಪ್ರಭಾವಳಿ ನೀಡುವ ಉತ್ತಮ  ಸಂಗೀತ-ವಾದ್ಯಗೋಷ್ಠಿಯ  ಸಾಹಚರ್ಯವಿದ್ದರಂತೂ ನೃತ್ಯ ಕಲಾವಿದರಿಗೆ ಜೀವಂತಿಕೆಯ ಚೈತನ್ಯ. ಇದು ಎಂದಿನ ನೃತ್ಯ ಕಾರ್ಯಕ್ರಮಗಳ ದೃಶ್ಯ. ಆದರೆ ಇಂದಿನ ವಿಶ್ವವ್ಯಾಪಿ ಕರಾಳ ಕರೋನದ ಆಕ್ರಮಣದ ಸಂದರ್ಭದಲ್ಲಿ ರಂಗಪ್ರವೇಶಗಳು ನಡೆಯುವ ಸನ್ನಿವೇಶಗಳೇ ವಿಭಿನ್ನ.

ಇಂಥ ವಿಷಮ ಪರ್ವಕಾಲದಲ್ಲಿ ಕೆಲಕಾಲ ಕೈಕಟ್ಟಿ ಕುಳಿತ ನೃತ್ಯ ಕಲಾವಿದರು ತಮ್ಮ ಸೃಜನಾತ್ಮಕ ಚಟುವಟಿಕೆಗಳನ್ನು ಹೆಚ್ಚು ಕಾಲ ಹತ್ತಿಕ್ಕಲಾರದೆ ಪರ್ಯಾಯವಾಗಿ ಕಂಡುಕೊಂಡ ಮಾರ್ಗವೇ ‘ಅಂತರ್ಜಾಲ’ ಮಾಧ್ಯಮ ಬಳಕೆ. ಕಳೆದೊಂದು ವರ್ಷದಿಂದ ಈ ಬಗೆಯ ‘ವರ್ಚ್ಯುಯಲ್’ ನೃತ್ಯ ಕಾರ್ಯಕ್ರಮಗಳು ನಡೆಯುತ್ತಿರುವುದು ಇಂದು ಸರ್ವೇ ಸಾಮಾನ್ಯವಾಗಿದೆ.

ಇತ್ತೀಚಿಗೆ ಅಮೇರಿಕಾದ’ ಬೇ’ ಏರಿಯಾದಲ್ಲಿ  ಇಂಥದೊಂದು ಅಪೂರ್ವ ‘ರಂಗಪ್ರವೇಶ’ ನೃತ್ಯ ಕಾರ್ಯಕ್ರಮ ನಡೆಯಿತು. ಅಲ್ಲಿ ಎಲ್ಲವೂ ಶಿಸ್ತುಬದ್ಧ ಮತ್ತು ಕಾನೂನಿನ ಚೌಕಟ್ಟಿನಲ್ಲೇ ನಡೆಸಬೇಕಾದ ನಿಬಂಧನೆ ಇರುತ್ತದೆ. ಅದರಂತೆ ಖ್ಯಾತ ‘ವಿದ್ಯಾ ಡಾನ್ಸ್ ಅಕಾಡೆಮಿ’ಯ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ ಮತ್ತು ನಾಟ್ಯಗುರು ವಿದುಷಿ. ವಿದ್ಯಾಲತಾ ಜೀರಗೆಯವರ ಗರಡಿಯಲ್ಲಿ ಕಲಾತ್ಮಕವಾಗಿ ರೂಪುಗೊಂಡ ಕಲಾಶಿಲ್ಪ ಕು. ನಿಶಾ ನವೀನ್ ‘ರಂಗಪ್ರವೇಶ’ವು ವಿದ್ಯುಕ್ತವಾಗಿ ನೆರವೇರಿತು.

ತಂತ್ರಜ್ಞರೂ ಸೇರಿದಂತೆ ಕೇವಲ ಇಪ್ಪತ್ತು ಜನರಿಗೆ ಮಾತ್ರ ಪ್ರವೇಶಾವಕಾಶವಿದ್ದ ಆಡಿಟೋರಿಯಂನಲ್ಲಿ ಕಲಾವಿದೆ ನಿಶಾ, ಸುಂದರ ವೇಷ-ಭೂಷಣಗಳಿಂದ ಸಜ್ಜಿತಳಾಗಿ, ಎದುರಿಗೆ ಸಾವಿರಾರು ಮಂದಿ ಕಲಾರಸಿಕರು ಆಸಕ್ತಿಯಿಂದ ನೃತ್ಯ ವೀಕ್ಷಣೆ ಮಾಡುತ್ತಿದ್ದಾರೆಂಬ ಭಾವನೆಯಲ್ಲಿ ರಂಗದ ಮೇಲೆ ಸುಮನೋಹರವಾಗಿ ಎರಡು ಗಂಟೆಗಳ ಕಾಲ ನಿರಾಯಾಸವಾಗಿ ಲವಲವಿಕೆಯಿಂದ ನರ್ತಿಸಿದ್ದು ಸ್ತುತ್ಯಾರ್ಹ .

ಆತ್ಮವಿಶ್ವಾಸದಿಂದ ರಂಗವನ್ನು ಪ್ರವೇಶಿಸಿದ ಹನ್ನೆರಡು ವರ್ಷದ ಪುಟ್ಟ ಕಲಾವಿದೆ ನಿಶಾ ನವೀನ್, ಹಸನ್ಮುಖದಿಂದ ಶುಭಾರಂಭಕ್ಕೆ ಆರಭಿರಾಗ-ಆದಿತಾಳದ ‘ಪುಷ್ಪಾಂಜಲಿ’ ಯನ್ನು ಬಹು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದಳು. ನೃತ್ಯಕ್ಕೆ ಹೇಳಿ ಮಾಡಿಸಿದ ಸಪೂರ ಮೈಕಟ್ಟು, ಲೀಲಾಜಾಲವಾಗಿ ಬಾಗಿ ಬಳುಕುತ್ತಿದ್ದ ಎಳೆಯ ಶರೀರ ಅವಳ ಅಂಗಶುದ್ಧಿಯ ನರ್ತನದ ಸೌಂದರ್ಯವನ್ನು ಎತ್ತಿ ಹಿಡಿಯಿತು. ಗುರು-ಹಿರಿಯರು, ದೇವಾನುದೇವತೆಗಳಿಗೆ ವಂದನೆ ಸಲ್ಲಿಸಿದನಂತರ ಪ್ರಥಮ ವಂದಿತ ವಿಘ್ನನಿವಾರಕ ಗಣೇಶನಿಗೆ ಸಂಪ್ರದಾಯದಂತೆ ‘ನೃತ್ಯನೈವೇದ್ಯ’ ಅರ್ಪಿಸಿದಳು. ನಿಶಾ, ತನ್ನ ನೃತ್ತ ನಾವಿನ್ಯತೆಯಿಂದ ಮುದನೀಡಿದಳು. ಗಣಪನ ವಿವಿಧ ಭಂಗಿಗಳು ಸೊಗಯಿಸಿದವು.

ಮುಂದೆ- ಶುದ್ಧ ನೃತ್ತದ ಕೃತಿ ‘ಜತಿಸ್ವರಂ’-  ನೃತ್ಯ ಕಲಾವಿದರ ಮೂಲಭೂತ ನೃತ್ಯ ವ್ಯಾಕರಣದ ಆಯಾಮಗಳ ತಿಳುವಳಿಕೆ ಮತ್ತು ಪರಿಶ್ರಮವನ್ನು ಬಿಂಬಿಸುವ ನೃತ್ತ ಪರಿಣತಿಯ ಕೈಗನ್ನಡಿ. ‘ಮಾರ್ಗಂ’- ಸಂಪ್ರದಾಯದ ವಿನ್ಯಾಸದಲ್ಲಿನ ಎಲ್ಲ ಕೃತಿಗಳಲ್ಲೂ ಕಾಣಸಿಗುವ ನೃತ್ತಗಳ ನೇಯ್ಗೆ, ವಿವಿಧ ಬಗೆಗಳನ್ನು ಕಲಾವಿದರು ಕರಗತ ಮಾಡಿಕೊಂಡಿದ್ದಕ್ಕೆ ಸಾಕ್ಷಿಗೊಡುವ ಈ ‘ಜತಿಸ್ವರ’ ನಿರೂಪಣೆಯಲ್ಲಿ ಯಶಸ್ವಿಯಾದರೆ ಮುಂದಿನ ಕೃತಿಗಳ ಸಾಕಾರ ಫಲಪ್ರದ ಮತ್ತು ಅಷ್ಟೇ ಸಲೀಸು.   

ನಿಶಾಳ ನೃತ್ಯಾಭ್ಯಾಸ ಮತ್ತು ಪರಿಶ್ರಮ, ಅವಳು ನೃತ್ತಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಪರಿ, ನಾವೀನ್ಯತೆ ಹಾಗೂ ಬೆಡಗು ತುಂಬಿದ್ದ ಜತಿಗಳು, ಸ್ವರಗಳ ಮಾಧುರ್ಯದ ಆವರ್ತನದಲ್ಲಿ ಮೆಚ್ಚುಗೆ ಪಡೆಯಿತು. ನಾಟ್ಯಗುರು ದಿ. ನರ್ಮದಾ ನೃತ್ಯ ಸಂಯೋಜಿತ ಆಭೋಗಿ ರಾಗದ ‘ಜತಿಸ್ವರ’ದಲ್ಲಿ ಕಲಾವಿದೆ, ಅನುಪಮವಾಗಿ ತೋರಿದ ದೃಷ್ಟಿ-ಶಿರೋಭೇದ ಮತ್ತು ಮಿಂಚಿನ ಸಂಚಾರದ ಪಾದಭೇದಗಳ ವೈವಿಧ್ಯ ಗಮನ ಸೆಳೆಯಿತು. ಅವಳ ಅಂಗಶುದ್ಧಿಯ ಅಚ್ಚುಕಟ್ಟಾದ ನರ್ತನ ವೈಶಿಷ್ಟ್ಯಪೂರ್ಣವಾಗಿ ಸೆಳೆದರೆ, ನೃತ್ತಗಳಲ್ಲೇ ಭಂಗಿಗಳನ್ನು ರಚಿಸಿದ ಬಗೆ ವಿಶೇಷವಾಗಿತ್ತು. ನಾಟ್ಯದ ಎಲ್ಲ ಆಯಾಮಗಳನ್ನೂ ಸಮಗ್ರ ದರ್ಶನ ಮಾಡಿಸಿದ ಕ್ರೌಢೀಕೃತ ಜತಿಗಳ ಗುಚ್ಛ ಮನಕಾನಂದ ನೀಡಿತು.  

ಶ್ರೀ ಮುತ್ತುಸ್ವಾಮಿ ದೀಕ್ಷಿತರ ದ್ವಿಜವಂತಿ ರಾಗದ ‘’ ಅಖಿಲಾಂಡೇಶ್ವರಿ ರಕ್ಷಮಾಂ ‘’ -ದೇವೀ ಕೀರ್ತನೆಯನ್ನು ಭಕ್ತಿ ತಾದಾತ್ಮ್ಯತೆಯಿಂದ ಸಾಕ್ಷಾತ್ಕಾರಗೊಳಿಸಿದಳು ಕಲಾವಿದೆ. ಬಾಲಸುಬ್ರಮಣ್ಯ ಶರ್ಮ ಅವರ ಭಾವಪೂರ್ಣ ಗಾಯನ ನೃತ್ಯಾಭಿನಯಕ್ಕೆ ಜೀವ ತುಂಬಿ, ಗಾಯನದ ಮಾರ್ದವತೆ, ನರ್ತನಲಾಸ್ಯದಲ್ಲಿ ಪ್ರತಿಧ್ವನಿಸಿತು. ನಿಶಾಳ ಒಂದೊಂದು ಭಾವಭಂಗಿಗಳೂ ಮನೋಹರತೆಯ ಚೌಕಟ್ಟಿನಲ್ಲಿ ದೈವೀಕತೆಯನ್ನು ಧಾರೆಯೆರೆಯಿತು. ದೇವಿಯ ಮನೋಹರ ರೂಪ-ಮಹಿಮೆಗಳ ವರ್ಣನೆ, ಸಾತ್ವಿಕತೆಯಿಂದ ಶೋಭಿಸಿದ ಮೊಗದ ಭಾವಪ್ರದ ರೇಖೆಗಳು ದೇವಿಯ ಸಮರ್ಪಣೆಯಲ್ಲಿ ಕೃತಕೃತ್ಯ ಕಂಡವು. ಯಾವುದೇ ಆರ್ಭಟವಿಲ್ಲದ ಸೌಮ್ಯ ನೃತ್ತಗಳು ಹೃದಯಸ್ಪರ್ಶಿಯಾಗಿದ್ದವು. ಅನನ್ಯ ಭಕ್ತಿಯ ಈ ಸಮರ್ಪಣೆ ದೇವಿಗರ್ಪಿಸಿದ ಏಕಾಂತ ಸೇವೆಯಂತೆ ಭಾಸವಾಯಿತು.

ಅನಂತರ-ನೃತ್ಯ ಪ್ರಸ್ತುತಿಯ ಹೃದಯ ಭಾಗ ಅಷ್ಟೇ ಹೃದ್ಯವೂ ಆದ ಘಟ್ಟ ‘ವರ್ಣಂ’. ಬಹು ಸಂಕೀರ್ಣ ಮತ್ತು ದೀರ್ಘ ಬಂಧದ ಪ್ರಸ್ತುತಿ, ಕಲಾವಿದೆಯ ತಾಳ-ಲಯಜ್ಞಾನ ಮತ್ತು ನೆನಪಿನ ಶಕ್ತಿಗೆ ಹಾಗೂ ನೃತ್ಯ ಸಾಮರ್ಥ್ಯಕ್ಕೆ ಸವಾಲೊಡ್ಡುವಂಥದ್ದು. ಜೊತೆ ಜೊತೆಯಲ್ಲಿ ಅಭಿನಯ ಪ್ರಭುತ್ವವನ್ನೂ ನಿರೀಕ್ಷಿಸುವಂಥದ್ದು.

ಕಲಾವಿದೆ ನಿಶಾ ಪ್ರಸ್ತುತಪಡಿಸಿದ ವೀಣೆ ಶೇಷಯ್ಯರ್ ‘ಶಣ್ಮುಗಪ್ರಿಯ’ ರಾಗದಲ್ಲಿ ರಚಿಸಿದ ಪದವರ್ಣ ‘ದೇವಾದಿ ದೇವ ನಟರಾಜ’ನನ್ನು ಮನಸಾರೆ ಸ್ತುತಿಸುವ ಕೃತಿ, ಹಲವು ಸಂಚಾರಿ ಕಥಾನಕಗಳು ನಾಟಕೀಯ ಆಯಾಮದಿಂದ ಕಂಗೊಳಿಸಿದವು. ಚಿದಂಬರದ ದೇವಾಲಯಕ್ಕೆ ನಟರಾಜನ ದರ್ಶನಕ್ಕೆ ಹಾತೊರೆದು ಬರುವ ಭಕ್ತೆಯ ಹಂಬಲ-ಅನನ್ಯ ಭಕ್ತಿ ಸಮರ್ಪಣೆ ರೋಚಕಾನಂದ ನೀಡಿತು. ಶಿವನಿಗೆ ಸಂಬಂಧಿಸಿದ ಅವನ ಜೀವನದ ವಿವಿಧ ಘಟಾನಾವಳಿಗಳ ಮೂಲಕ ನವರಸಗಳ ಸಮರ್ಥ ಸ್ಫುರಣೆ, ನಟರಾಜನ ವೈಭವವನ್ನು ಬಿತ್ತರಿಸುವಲ್ಲಿ ಶಕ್ತವಾಗಿತ್ತು. ನಡುನಡುವೆ ನೃತ್ತಾವಳಿಗಳಲ್ಲಿ ನಾಟ್ಯಪ್ರಿಯ ನಟರಾಜನಿಗೂ ನೃತ್ತಾವೃತ ನರ್ತನಕ್ಕೂ ಅವಿನಾಭಾವ ಸಂಬಂಧವೆಂಬಂತೆ, ನಿಶಾ ಶಿವನನ್ನು ನೃತ್ಯಾರ್ಚನೆಯಲ್ಲಿ ಸಾಕ್ಷಾತ್ಕರಿಸಿದಳು. ಕಲಾವಿದೆಯ ಅನಾಯಾಸ ನರ್ತನ-ಮಿಂಚಿನ ಓಟದ ನೃತ್ತಗಳ ಓಘ, ಭ್ರಮರಿಗಳು, ಮಂಡಿ ಅಡವು, ವಿವಿಧ ಚಾರಿಗಳು ಕಲಾವಿದೆಯ ಚೈತನ್ಯಕ್ಕೆ ಕನ್ನಡಿ ಹಿಡಿದವು.

ಮುಂದೆ- ಶ್ರೀಮನ್ನಾರಾಯಣ (ಬೌಳಿ ರಾಗದ -ಅಣ್ಣಮಾಚಾರ್ಯರ ರಚನೆ)ನ ರೂಪ-ಶಕ್ತಿ-ಮಹಿಮೆಗಳನ್ನು ಬಗೆಬಗೆಯಾಗಿ ಮನದುಂಬಿ ವರ್ಣಿಸಿ, ಕೊಂಡಾಡುವ ಭಕ್ತೆ, ಕಡೆಯಲ್ಲಿ ಆತನಿಗೆ ಶರಣಾಗುವ ಈ ಭಕ್ತಿಪ್ರಧಾನ ಕೃತಿ, ಮನೋಹರವಾಗಿ ಪ್ರಸ್ತುತಿಗೊಂಡಿತು. ದಶಾವತಾರದ ನೋಟ ಬಹು ಸಂಕ್ಷಿಪ್ತವಾಗಿ ಸಾಗಿ ಪರಿಣಾಮ ಬೀರಿತು. ಅನಂತರ-ವಿದ್ಯಾಲತಾ ನೃತ್ಯ ಸಂಯೋಜನೆಯ ಗುರು ಸುರಜಾನಂದ ( ಬೇಹಾಗ್ ರಾಗ-ಖಂಡಚಾಪು ತಾಳ) ಕೃತ ‘ಮುರುಗನಿನ್ ಮರುಪೆಯರ್’ – ಮನ್ಮಥರೂಪದ ಮುರುಗನ ರೂಪಾತಿಶಯ, ಮಹಿಮಾಪೂರ್ಣ ವ್ಯಕ್ತಿತ್ವವನ್ನು ಕಲಾವಿದೆ ನಿಶಾ, ತನ್ನ ದ್ರವೀಕೃತ ಸುಮನೋಹರ ಚಲನೆಗಳಿಂದ, ಕಮನೀಯ ಭಂಗಿಗಳಿಂದ ಕಣ್ಮುಂದೆ ಸುಂದರವಾಗಿ ಕಂಡರಿಸಿದಳು.  

ಆದ್ಯಂತರಹಿತ ಮೇರುಶಕ್ತಿ ನಟರಾಜನ ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಡುವ ದಯಾನಂದ ಸರಸ್ವತಿ ಅವರ ಜನಪ್ರಿಯ ರಚನೆ (ರೇವತಿ ರಾಗ) ‘ ಭೋ ಶಂಭೋ ಶಿವ ಶಂಭೋ ಸ್ವಯಂಭೋ’-ನಿಶಾಳ ಮಿಂಚಿನ ಸಂಚಾರದ ಹೆಜ್ಜೆ-ಗೆಜ್ಜೆಗಳ ಶುದ್ಧ ನೃತ್ತ ಸಂಚಾರದಲ್ಲಿ, ಅಂಗಶುದ್ಧಿಯ ಅಚ್ಚುಕಟ್ಟಾದ ಚಲನೆಗಳಲ್ಲಿ ಅದ್ಭುತವಾಗಿ ಮೂಡಿಬಂತು. ನಾಟ್ಯಾಧಿಪತಿ ನಟರಾಜನ ಆನಂದತಾಂಡವದ ರೋಮಾಂಚಕ ಪ್ರಸ್ತುತಿಯು, ಆಕೆಯ ಮಂಡಿ ಅಡವು, ಆಕಾಶಚಾರಿಗಳ ಮೋಡಿಯಲ್ಲಿ, ಉತ್ತಮ ನಿಯಂತ್ರಣದ ಶಕ್ತ ಯೋಗಭಂಗಿಗಳ ಪ್ರದರ್ಶನಗಳಲ್ಲಿ ಯಶಸ್ವಿಯಾಯಿತು. ಕಲಾವಿದೆಗೆ ಗುರುಗಳಿಂದ ದೊರೆತ ಕಠಿಣ ತರಬೇತಿ-ಉತ್ತಮ ಶಿಕ್ಷಣ ಸುವ್ಯಕ್ತವಾದವು. ವಿದ್ಯಾಲತಾ ಅವರ ಎಲ್ಲ ನೃತ್ಯ ಸಂಯೋಜನೆಗಳು ಮನೋಹರತೆಯಿಂದ ಮನಮುಟ್ಟಿದವು.

ಅಂತ್ಯದಲ್ಲಿ ಕಲಾವಿದೆಯ ಮಿಂಚಿನ ವೇಗದ ಸಂಕೀರ್ಣ ಅಡವುಗಳು-ಪಾದಭೇದದ ವೈವಿಧ್ಯತೆ, ಶುದ್ಧನೃತ್ತದ ಕಲಾತ್ಮಕತೆ, ಲಯದ ಮೇಲಿನ ಪ್ರಭುತ್ವವನ್ನು ಬಾಲಮುರಳೀ ಕೃಷ್ಣ ವಿರಚಿತ ಬೃಂದಾವನೀ ರಾಗದ ‘ತಿಲ್ಲಾನ’ ಕೃತಿಯು ಸಂಪೂರ್ಣ ಅಭಿವ್ಯಕ್ತಿಸಿತು. ‘ಮಂಗಳ’ದೊಡನೆ ಸ್ಮರಣೀಯವಾದ ನಿಶಳ ನೃತ್ಯ ಪ್ರಸ್ತುತಿ ಸಂಪನ್ನಗೊಂಡಿತು.

ರಂಗಪ್ರವೇಶದಂದು,  ಕು. ನಿಶಾ ತನ್ನ ಶ್ರದ್ಧಾಪೂರ್ವಕ ಅಚ್ಚುಕಟ್ಟಾದ ನರ್ತನವನ್ನು ಶಾಸ್ತ್ರೀಯ ಚೌಕಟ್ಟಿನೊಳಗೆ ಸೊಗಸಾಗಿ ನಿರೂಪಿಸಿ, ತಾನೊಬ್ಬ ಭರವಸೆಯ ಕಲಾವಿದೆಯೆಂಬುದನ್ನು ಸಾಬೀತುಗೊಳಿಸಿದಳು.

ಶ್ರೀ ಬಾಲಸುಬ್ರಹ್ಮಣ್ಯ ಶರ್ಮರ ಭಾವಪೂರ್ಣ ಗಾಯನ, ಕಿಕ್ಕೇರಿ ಜಯರಾಂ-ಕೊಳಲು, ಗುರುಮೂರ್ತಿ-ಮೃದಂಗ, ಕಾರ್ತೀಕ್ ದಾತಾರ್-ರಿದಂ ಪ್ಯಾಡ್ ಮತ್ತು ಶ್ರೀಹರಿ ನಟುವಾಂಗದಿಂದ ಕೂಡಿದ ವಾದ್ಯಗೋಷ್ಠಿಯವರ  ಕೌಶಲ್ಯಪೂರ್ಣ ಸಾಂಗತ್ಯ ನಾಟ್ಯಪ್ರದರ್ಶನಕ್ಕೆ ಮೆರುಗು ನೀಡಿತ್ತು.

                                *********

Related posts

ರಸಾನುಭವದ ರಸಸಂಜೆ- ನೀಲಾ ಮಾಧವ ನೃತ್ಯರೂಪಕ

YK Sandhya Sharma

‘ರಸಾನಂದ’ದ ಚೇತೋಹಾರಿ ನೃತ್ಯಗಳ ಸರಮಾಲೆ

YK Sandhya Sharma

‘ಶ್ರೀರಾಮಾಯಣ ದರ್ಶನ’ದ ದಿವ್ಯಾನುಭೂತಿಯ ಸುಂದರ ದೃಶ್ಯಕಾವ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.