ಇತ್ತೀಚಿಗೆ ಬೆಂಗಳೂರಿನ ಬ್ರೂಕ್ ಫೀಲ್ಡ್ ‘ಧ್ವನಿ’ ಆಡಿಟೋರಿಯಂನಲ್ಲಿ ನಡೆದ ಪವಿತ್ರಾ ಅಶೋಕನ್ ಮತ್ತು ಲಕ್ಷ್ಮೀ ವೇಣುಗೋಪಾಲ್ ಅವರ ರಂಗಪ್ರವೇಶದ ‘ಮಾರ್ಗಂ’ ಸಂಪ್ರದಾಯದ ಅಚ್ಚುಕಟ್ಟಾದ ಅಷ್ಟೇ ಸುಮನೋಹರವಾದ ನೃತ್ಯ ಪ್ರದರ್ಶನ ಕಲಾರಸಿಕರ ಕಣ್ತುಂಬಿತು. ಈ ನೃತ್ಯಜೋಡಿ, ‘’ಎಂ.ಎಸ್ ನಾಟ್ಯಕ್ಷೇತ್ರ’’ ಸಂಸ್ಥೆಯ ಆರ್ಟಿಸ್ಟಿಕ್ ಡೈರಕ್ಟರ್ ಆಗಿ ನೂರಾರು ನಾಟ್ಯಾಕಾಂಕ್ಷಿಗಳಿಗೆ ವಿಶ್ವಗುಣಮಟ್ಟದ ನೃತ್ಯಶಿಕ್ಷಣ ನೀಡುತ್ತಿರುವ ಅಂತರರಾಷ್ಟ್ರೀಯ ಕಲಾವಿದೆ ‘ಕೌಸಲ್ಯ ನಿವಾಸ್’ ಅವರ ಸಮರ್ಥ ಗರಡಿಯಲ್ಲಿ ತಯಾರಾದ ಶಿಷ್ಯೆಯರು.
ಅನೇಕ ವರ್ಷಗಳ ಬದ್ಧತೆ ಹಾಗೂ ಪರಿಶ್ರಮದಿಂದ ಸಾದರಪಡಿಸಿದ ಅವರ ನೃತ್ಯ ಪ್ರಸ್ತುತಿ, ಗುರುಗಳು ಹೇಳಿಕೊಟ್ಟ ಅಚ್ಚಿನಲ್ಲಿ ಅಂಗಶುದ್ಧತೆಯಿಂದ ಅಷ್ಟೇ ಸುಂದರ ಆಂಗಿಕಾಭಿನಯ, ಕಣ್ಸೆಳೆವ ಭಂಗಿಗಳಿಂದ ಮನಸೂರೆಗೊಂಡಿತು. ‘ಮಾರ್ಗಂ’ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸಿದ್ದು ಗಮನಾರ್ಹವಾಗಿತ್ತು. ಇಬ್ಬರು ನರ್ತಕಿಯರೂ ಪುಷ್ಪಾಂಜಲಿ, ಅಲ್ಲರಿಪು, ಜತಿಸ್ವರಂವನ್ನು ತಮ್ಮ ಶಿರೋಭೇದ, ದೃಷ್ಟಿಭೇದಗಳ ವಿಶಿಷ್ಟತೆಯಿಂದ, ಖಚಿತ ಹಸ್ತ, ಅಡವು, ಅರೆಮಂಡಿ, ಆಕಾಶಚಾರಿಗಳು, ಆಂಗಿಕಾಭಿನಯಗಳಿಂದ ಮನೋಹರವಾಗಿ ನರ್ತಿಸಿ ಆನಂದ ನೀಡಿದರು.
ನಟರಾಜನ ಪೌರುಷ ಆಯಾಮದ ಹೆಜ್ಜೆಗಳಿಂದ, ಢಮರುಗ-ವಾದ್ಯಗಳ ಆಂಗಿಕಗಳಿಂದ ಹಂಸಧ್ವನಿ ರಾಗದ ಚತುರಶ್ರ ಏಕತಾಳದ ‘ನಟೇಶ ಕೌತ್ವಂ’ ಕೃತಿಯನ್ನು ಯಶಸ್ವಿಯಾಗಿ ನಿರೂಪಿಸಿದರು. ಅಂತ್ಯದಲ್ಲಿ ಮೂಡಿಬಂದ ಮನೋಜ್ಞ ಭಂಗಿ, ಕಲಾವಿದೆಯರ ಹಸನ್ಮುಖ ಮತ್ತು ಲವಲವಿಕೆ ಗಮನ ಸೆಳೆಯಿತು.
ಕವಿ ಪಾಪನಾಶಂ ಶಿವಂ ಅವರ ರಚನೆಯ ನಾಟಿಕುರಂಜಿ ರಾಗ, ಆದಿತಾಳದ ‘’ವರ್ಣ’’ – ಶೃಂಗಾರ, ಭಕ್ತಿರಸ ಮಿಳಿತವಾದ ಕೃತಿ ‘ಸ್ವಾಮಿ, ನಾನುಂದನಡಿಮೈ…’ ಭಕ್ತಿಪೂರ್ವಕವಾಗಿ ಸಮರ್ಪಿತವಾಯಿತು. ನೃತ್ಯ ಪ್ರಸ್ತುತಿಯ ಮುಖ್ಯ ಘಟ್ಟ ಅಷ್ಟೇ ಸಂಕೀರ್ಣವಾದ, ಕಲಾವಿದರಿಗೆ ಸವಾಲು ಒಡ್ಡುವ ಜಟಿಲವಾದ ಕೃತಿ ‘ವರ್ಣ’. ನೃತ್ತ ಮತ್ತ್ತು ಅಭಿನಯ ಕೂಡಿದ ದೀರ್ಘಬಂಧ, ಕಲಾವಿದರ ನೆನಪಿನ ಶಕ್ತಿ ಮತ್ತು ತಾಳ-ಲಯಜ್ಞಾನಗಳ ಸಾಮರ್ಥ್ಯಕ್ಕೆ ಪರೀಕ್ಷೆಯಾಗುವ ‘ಪದವರ್ಣ’ವನ್ನು ಪವಿತ್ರಾ ಮತ್ತು ಲಕ್ಷ್ಮೀ ತುಂಬು ಚೈತನ್ಯದಿಂದ ನಿರ್ವಹಿಸಿದರು. ನಡುನಡುವೆ ಪ್ರಸ್ತುತಗೊಳ್ಳುವ ವಿವಿಧ ನೃತ್ತಾವಳಿ, ಜತಿಮೇಳ ಹೊಸತನದಿಂದ ಮಿಂಚಿತು. ಗಾಯಕಿ ಲಾವಣ್ಯ ರೂಪಕಲಾ ಅವರ ಭಾವಪೂರ್ಣ ಸಂಗೀತ ಶಿವನಾರಾಧನೆಯನ್ನು ಉನ್ನತೀಕರಿಸಿತು. ಗುರು ಕೌಸಲ್ಯ ಅವರ ಉತ್ಸಾಹಭರಿತ ಸ್ಫುಟವಾದ ನಟುವಾಂಗಂ ಹದಿಹರೆಯದ ಕಲಾವಿದೆಯರಿಗೆ ಸ್ಫೂರ್ತಿಯಾಗಿತ್ತು. ಸಂಚಾರಿಯಲ್ಲಿ ‘ಭಕ್ತ ಮಾರ್ಕಂಡೇಯ’ನ ಕಥಾನಕ ಸಂಕ್ಷಿಪ್ತವಾಗಿ ಮೂಡಿಬಂತು. ಈ ಸನ್ನಿವೇಶದಲ್ಲಿ ಒಡಮೂಡಿದ ನಾಟಕೀಯತೆ, ಭಾವಸ್ಫುರಣ ಸೂಕ್ತವಾಗಿತ್ತು. ಮಧ್ಯೆ ಮಧ್ಯೆ ಸ್ವರ ನೈವೇದ್ಯ, ಜತಿಗಳ ಅರ್ಚನೆಯಿಂದ ನೃತ್ತಗಳ ಮಾಲೆ ಅರ್ಪಿತವಾಯಿತು. ಭಾವಗಳಿಗೆ ತಕ್ಕ ಅಭಿನಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರೂಪಿಸಿದ್ದರೆ ಸೂಕ್ತವಾಗುತ್ತಿತ್ತು.
ಅನಂತರ ಪವಿತ್ರಾ- ತನ್ನ ರಮ್ಯವಾದ ನರ್ತನದಿಂದ ‘ಶಬ್ದಂ’ ಕೃತಿಯನ್ನು ನೃತ್ತವಲ್ಲರಿಗಳಿಂದ ಲಾಸ್ಯವಾಗಿ ಅಭಿನಯಿಸಿ ಕಣ್ತಣಿಸಿದಳು. ಜಯದೇವನ ಶೃಂಗಾರರಸದ ‘ಅಷ್ಟಪದಿ’ ಯನ್ನು ಲಕ್ಷ್ಮೀ ತನ್ನ ಕೋಮಲ ಭಾವನೆಗಳ ಅಭಿನಯದಿಂದ ಮನಮುಟ್ಟಿಸಿದಳು.
ಅಂತ್ಯದಲ್ಲಿ ದಂಡಾಯುಧ ಪಾಣಿ ಪಿಳ್ಳೈ ಅವರು ರಚಿಸಿದ ‘ತಿಲ್ಲಾನ’ವನ್ನು ಕಲಾವಿದೆಯರು ಇಡೀ ರಂಗವನ್ನು ಬಳಸಿಕೊಂಡು, ತಮ್ಮ ಮಿಂಚಿನ ಸಂಚಾರದ ಹೆಜ್ಜೆ-ಗೆಜ್ಜೆಗಳಿಂದ ಅನುರಣನಗೊಳಿಸಿ, ರಂಗಾಕ್ರಮಣದಿಂದ ಚೈತನ್ಯಪೂರ್ಣ ಪ್ರಸ್ತುತಿಗೈದು ನಗುಮೊಗದಿಂದ ಆನಂದದಿಂದ ನರ್ತನ ಮಾಡಿದ್ದು ಮುದ ತಂದಿತು. ಕಡೆಯ ಅರ್ಧನಾರೀಶ್ವರರ ಭಂಗಿ ಸೊಗಸಾಗಿತ್ತು.
ಎಲ್ಲಕ್ಕೂ ಕಳಶಪ್ರಾಯವಾಗಿ ಗುರು ಕೌಸಲ್ಯ, ವಾದ್ಯಗೋಷ್ಟಿಯ ನಡುವೆ ಕುಳಿತು ತಾವೇ ನರ್ತನ ಮಾಡುತ್ತಿರುವಂತೆ ಭಾವಾವೇಶಕ್ಕೆ ಒಳಗಾಗಿ ತನ್ಮಯರಾಗಿ, ಜೋಷಿನಿಂದ ನಟುವಾಂಗ ನಿರ್ವಹಿಸಿದ್ದು ಅತ್ಯಂತ ವಿಶೇಷವಾಗಿತ್ತು. ಮಂಗಳದೊಂದಿಗೆ ನೃತ್ಯ ಪ್ರಸ್ತುತಿ ಸಂಪನ್ನವಾಯಿತು.
ಯಾವುದೇ ನೃತ್ಯ ಪ್ರಸ್ತುತಿಗೆ ಗಾಯನ ಮತ್ತು ವಾದ್ಯಗಳ ನುಡಿಸಾಣಿಕೆ ಚೈತನ್ಯಪೂರ್ಣತೆಯನ್ನು ತಂದುಕೊಡುವಲ್ಲಿ ಅದರದೇ ಮುಖ್ಯ ಪಾಲು. ಗಾಯನ- ಲಾವಣ್ಯ ರೂಪಕಲಾ, ಮೃದಂಗ- ಪೃಥ್ವೀ ಕೃಷ್ಣ, ವಯೊಲಿನ್- ಅರುಣಾಚಲಂ ಕಾರ್ತೀಕ್, ಕೊಳಲು- ಬಿ.ಎನ್. ಸ್ಕಂಧ ಕುಮಾರ್ ಮತ್ತು ವೀಣೆ- ಎನ್.ವಿ ಶ್ರೀಕಾಂತ್. ನಟುವಾಂಗ- ಗುರು ಕೌಸಲ್ಯ ನಿವಾಸ್.
**************