Image default
Dance Reviews

ಲವಲವಿಕೆಯ ಕಾರಂಜಿ -ಅಪೂರ್ವ ನೃತ್ಯ ನೈದಿಲೆ ಅನುಶ್ರೀ ಭಟ್

ಸಂಜೆ ಐದರ ಮಳೆ ಭಯಂಕರ. ಆಕಾಶ ಭೂಮಿಗೆ ಸೇತುವೆಯಾದ ಮುಸಲಧಾರೆ! ಪ್ರಚಂಡ ಸುರಿದ ಮಳೆಯ ನಡುವೆಯೂ ಕಲಾಪ್ರಿಯರು ಅನುಶ್ರೀಯ ರಂಗಪ್ರವೇಶದ ಸುಮನೋಹರ ನೃತ್ಯ ಸಿಂಚನಕ್ಕಾಗಿ ಉತ್ಸಾಹದಿಂದ- ಅತ್ಯಾಸಕ್ತಿಯಿಂದ ಆಗಮಿಸಿದ್ದು ಸ್ತುತ್ಯಾರ್ಹ.


ಸುಮಾರು ಎರಡು ಗಂಟೆಗಳಿಗೂ ಮಿಕ್ಕಿ ಸುಲಲಿತವಾಗಿ ನರ್ತಿಸಿದ ವಿದುಷಿ. ಅನುಶ್ರೀ ಭಟ್ ನೃತ್ಯಕಾರಂಜಿಯನ್ನು ಎವೆಯಿಕ್ಕದೆ ವೀಕ್ಷಿಸಿದಾಗ ಅನ್ನಿಸಿದ್ದು: ಈ ಬಾಲೆ ನೃತ್ಯ ಮಾಡಲೆಂದೇ ಹುಟ್ಟಿದವಳೇ? ಎಂಬ ಬೆರಗು. ನರ್ತನ ಅವಳ ಮೈ-ಮನಗಳಲ್ಲಿ ಹಾಸುಹೊಕ್ಕಾಗಿ ಬೇರೆತುಹೋಗಿತ್ತು! ತನು ಹಕ್ಕಿಯಷ್ಟು ಹಗುರವೇನೋ ಎಂಬ ಭಾಸ ತರುವಂತಿದ್ದ ಅವಳ ಆಕಾಶಚಾರಿಗಳು, ಎಗರು ಅಡವುಗಳು, ಎರಡೂ ಪಾದಗಳನ್ನೆತ್ತಿ ಕುಪ್ಪಳಿಸುತ್ತ ಪ್ರದರ್ಶಿಸಿದ ವಿವಿಧ ವಿನ್ಯಾಸದ ಖಚಿತ ಹೆಜ್ಜೆ-ಪಾದಭೇದಗಳು ನೋಡುಗರನ್ನು ಬೆರಗುಗೊಳಿಸಿದವು. ಕಲಾವಿದೆಗೆ ಸಂಪೂರ್ಣ ತನ್ನ ದೇಹದ ಮೇಲಿದ್ದ ನಿಯಂತ್ರಣ-ಸಮತೋಲನ ಎದ್ದು ಕಾಣುತ್ತಿತ್ತು. ಅದರ ಹಿಂದಿದ್ದ ಅವಳ ದೀರ್ಘ ಅಭ್ಯಾಸ, ಪರಿಶ್ರಮ- ಉತ್ತಮ ತರಬೇತಿಗಳು ಸುವ್ಯಕ್ತವಾಗಿದ್ದವು. ‘ನೃತ್ಯಕುಟೀರ’ದ ಮಾರ್ಗದರ್ಶಕಿ, ಕಲಾಕ್ಷೇತ್ರ ಬಾನಿಯಲ್ಲಿ ರೂಹುಗೊಂಡ ವಿದುಷಿ ದೀಪಾ ಭಟ್ ಎರಡು ದಶಕಗಳ ಅವಳ ನಾಟ್ಯಗುರುಗಳೇ ಅನುಶ್ರೀಯ ನೃತ್ಯ ನೈಪುಣ್ಯಕ್ಕೆ ಹೊಳಪಿನ ಪ್ರಭಾವಳಿಯನ್ನಿತ್ತವರು.


ಅಪರೂಪದ ಕನ್ನಡ ಕೃತಿಗಳಿಗೆ ಒತ್ತು ನೀಡಿ ವಿಶೇಷವಾಗಿ ನೃತ್ಯ ಸಂಯೋಜಿಸುವುದು ಗುರು ದೀಪಾ ಅವರ ವೈಶಿಷ್ಟ್ಯ. ಗುರುಗಳು ಹೇಳಿಕೊಟ್ಟದ್ದನ್ನು ಅಚ್ಚುಕಟ್ಟಾಗಿ ಸಾಕ್ಷಾತ್ಕರಿಸಿದ ಅನುಶ್ರೀಯ ದಣಿವರಿಯದ ದೇಹ ಸಾಮರ್ಥ್ಯ, ಪುಟಿಯುವ ಚೈತನ್ಯ, ಹಸನ್ಮುಖ, ಗೆಲುವಿನ ನಡೆ ಮೊದಲನೋಟದಲ್ಲೇ ಕಲಾರಸಿಕರನ್ನು ಸೆಳೆದ ಧನಾತ್ಮಕ ಗುಣಾವಳಿಗಳು. ಶುಭಾರಂಭದ ‘ಪುಷ್ಪಾಂಜಲಿ’ಯಲ್ಲೇ ಕಲಾವಿದೆಯ ಪಾದರಸದ ಆಂಗಿಕಾಭಿನಯ-ನೃತ್ತಗಳ ಮನೋಹರತೆಗಳು ಪರಿಚಯವಾದವು.

ವೀಣಾಪಾಣಿಯ ರಸಭಂಗಿಗಳು, ಗಾಢ ತನ್ಮಯತೆಯ ಸರಸ್ವತಿ ಸಾಕ್ಷಾತ್ಕಾರ ‘ಕೌತ್ವಂ’ -ನಿರೂಪಣೆಯಲ್ಲಿ ಸೊಗಯಿಸಿದವು. ಗುರು ದೀಪಾಭಟ್ ಅವರ ಸ್ಫುಟವಾದ ಉತ್ಸಾಹಭರಿತ ನಟುವಾಂಗದಿಂದ ಉತ್ತೇಜಿತ ‘ಜತಿಸ್ವರ’ದ ನೃತ್ತಾಮೋದ ಮಿಂಚಿನ ಸಂಚಾರದಲ್ಲಿ ಝೇಂಕರಿಸಿತು. ಶಾಸ್ತ್ರೀಯ ಚೌಕಟ್ಟಿನಲ್ಲೇ ಅರಳಿದ ನೃತ್ತಾವಳಿಗಳ ಸೌಂದರ್ಯ ಹೊಸತನದ ಮೆರುಗು ಪಡೆದಿತ್ತು.


‘ದೀನಬಂಧು’ – ಭಕ್ತಿರಸ ಪ್ರಧಾನವಾದ ಪದವರ್ಣದಲ್ಲಿ ಅನುಶ್ರೀ ತಾನೊಬ್ಬ ಪರಿಣತ ಕಲಾವಿದೆಯೆಂಬುದನ್ನು ಸಾಬೀತುಗೊಳಿಸಿದಳು. ಭಕ್ತಿ ತಾದಾತ್ಮ್ಯದ ಭಾವ-ಭಂಗಿಗಳು, ಮುಖಾಭಿವ್ಯಕ್ತಿ, ರಸಪೂರ್ಣ ಆಂಗಿಕಾಭಿನಯ, ದಣಿವರಿಯದ ನೃತ್ತದೊರತೆ ಮನೋಹರವಾಗಿ ಅಭಿವ್ಯಕ್ತಗೊಂಡವು. ಪ್ರತಿಯೊಂದು ಸಂಚಾರಿಯಲ್ಲೂ ಭಾವತೀವ್ರತೆಗೆ ಸಾಥ್ ನೀಡಿದ ಮುರಳೀಗಾನ (ಮಹೇಶಸ್ವಾಮಿ) , ಪಿಟೀಲು ವಾದನ (ಮಧುಸೂದನ್) , ಭಾವಪೂರ್ಣ ಗಾಯನ (ಬಾಲಸುಬ್ರಮಣ್ಯ ಶರ್ಮ) ಮತ್ತು ನಾಗರಾಜ್ ಅವರ ಸೊಗಸಾದ ಮೃದಂಗ ಕರ್ಣಾನಂದಕರವಾಗಿತ್ತು. ಸಂಚಾರಿಯ ಕಥಾನಕಗಳನ್ನು ಕಲಾವಿದೆ ಸಾಹಿತ್ಯದ ಸಹಾಯವಿಲ್ಲದೆಯೂ ನೋಡುಗರಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಪರಿಣಾಮಕಾರಿಯಾಗಿ ಅಭಿನಯಿಸಿದ್ದು ವಿಶೇಷ. ನಗುಮುಖದಿಂದ ಆನಂದದ ಹೆಜ್ಜೆಗಳನ್ನಿಟ್ಟ ಕಲಾವಿದೆ ಅನುಕ್ಷಣವೂ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಿವೇದಿಸಿದ್ದು ಚೇತೋಹಾರಿಯಾಗಿತ್ತು.


ಜಯಲಕ್ಷ್ಮೀ ಭಟ್ ವಿರಚಿತ ‘ಕನ್ನಗಿಯ ಕಥೆ’ ಸವಿಸ್ತಾರವಾಗಿ ಅಷ್ಟೇ ಪ್ರಭಾವಶಾಲಿಯಾಗಿ ನವರಸಾಭಿನಯವನ್ನು ಅಭಿವ್ಯಕ್ತಿಸಿ, ರಸೋತ್ಪತ್ತಿಯನ್ನುಂಟು ಮಾಡಿದ ಅನುಶ್ರಿ ನಿಜಕ್ಕೂ ಭರವಸೆಯ ಕಲಾವಿದೆಯಾಗಿ ಹೊಮ್ಮಿದಳು. ‘ರುಸಲಿ ರಾಧಾ..’ ಮರಾಠಿ ಅಭಂಗ್ ಪ್ರಸ್ತುತಿಯಲ್ಲಿ ಪ್ರಣಯಿನಿಯ ಶೃಂಗಾರದ ರಸಮಿಂಚುಗಳನ್ನು, ‘ತಿಲ್ಲಾನ’ದ ಚೈತನ್ಯಪೂರ್ಣ ಸಂಚಾರಗಳಲ್ಲಿ ಅನುಪಮಳೆನಿಸಿದಳು.

Related posts

ಮಹತಿಯ ಆಹ್ಲಾದಕರ ನರ್ತನಲಾಸ್ಯ- ಸುಂದರಾಭಿನಯ

YK Sandhya Sharma

ತೇಜಸ್ವಿನಿಯ ಪ್ರಬುದ್ಧ ನರ್ತನದ ಸೊಗಸಿನ ಸಿರಿ

YK Sandhya Sharma

ರೋಶಿನಿಯ ಪ್ರಬುದ್ಧ ಅಭಿನಯ- ಸಮ್ಮೋಹಕ ನಾಟ್ಯ

YK Sandhya Sharma

Leave a Comment

This site uses Akismet to reduce spam. Learn how your comment data is processed.