ನೃತ್ಯ ಪ್ರಕಾರಗಳು ವೈವಿಧ್ಯಪೂರ್ಣ. ಪ್ರತಿಯೊಂದೂ ತನ್ನದೇ ಆದ ವೈಶಿಷ್ಟ್ಯದಿಂದ ಮನಸ್ಸನ್ನಾವರಿಸುವ ಸೊಬಗನ್ನು ಪಡೆದಿರುತ್ತದೆ. ಭರತನಾಟ್ಯ, ಕುಚಿಪುಡಿ, ಕಥಕ್, ಮೋಹಿನಿಯಾಟ್ಟಂ, ಒಡಿಸ್ಸಿ ಮುಂತಾದ ನಾಟ್ಯಬಗೆಗಳು ಅವುಗಳು ಉಗಮಿಸಿದ ಅಥವಾ ಪ್ರಚುರಗೊಂಡ ನಾಡಿನ ಅಸ್ಮಿತೆಗಳಿಂದ- ಭಿನ್ನತೆಯಿಂದ ಕಂಗೊಳಿಸಿದರೆ, ಅಷ್ಟೇ ವಿಶೇಷತೆಯನ್ನೂ ಒಳಗೊಂಡಿರುತ್ತದೆ. ವೇಷಭೂಷಣ, ನೃತ್ಯಶೈಲಿ, ಸಂಗೀತ- ವಾದ್ಯ ಪರಿಕರಗಳ ಸಾಂಗತ್ಯವೂ ಕೂಡ ನವ ನವೋನ್ಮೇಷವಾಗಿರುತ್ತವೆ. ಆದರೆ ಅವುಗಳ ಅಂತಿಮ ಗುರಿಯೊಂದೇ, ಅದೇ ರಸಾನಂದ, ದೈವೀಕ ಅನುಭೂತಿ, ಆಧ್ಯಾತ್ಮಿಕ ಗಂತವ್ಯ. ನೃತ್ಯ ಕಲಾವಿದರಿಗೆ ಆ ಜಗನ್ನಿಯಾಮಕ ಪರಮ ಶಕ್ತಿಗೆ ಶರಣು ಹೋಗುವ ಸಮರ್ಪಿಸಿಕೊಳ್ಳುವ ಧನ್ಯತೆ-ತೃಪ್ತಿಯ ಸಾರ್ಥಕ್ಯ ಭಾವ.
ನೃತ್ಯದ ಈ ಎಲ್ಲ ಪದರುಗಳ ಸಮಾಗಮ-ಸಂಗಮವಾದ ನೃತ್ಯ ಪ್ರದರ್ಶನಗಳು ಕಲಾರಸಿಕರಿಗೆ ಹೃನ್ಮನ ತುಂಬುವ ರಸಜೇನು. ಇತ್ತೀಚಿಗೆ ಇಂಥ ಒಂದು ನೃತ್ಯದ ಔತಣವನ್ನು ಉಣ ಬಡಿಸಿದವರು ಖ್ಯಾತ ‘ಸ್ಪೇಸ್’ ಕಥಕ್ ನೃತ್ಯಸಂಸ್ಥೆಯ ಪರಿಣತ ಗುರು ಅಂಜನಾ ಗುಪ್ತ ಮತ್ತು ಅವರ ಶಿಷ್ಯೆ-ಮಗಳು ಶ್ರುತಿ ಗುಪ್ತ ಹಾಗೂ ಸ್ಪೇಸ್ ನೃತ್ಯಶಾಲೆಯ ವಿದ್ಯಾರ್ಥಿಗಳು.
ನಗರದ ಭಾರತೀಯ ವಿದ್ಯಾಭವನದಲ್ಲಿ ಇತ್ತೀಚಿಗೆ ನಡೆದ ‘ಸ್ಪೇಸ್’ ನೃತ್ಯಶಾಲೆಯ ವಾರ್ಷಿಕ ಕಾರ್ಯಕ್ರಮ ‘ಕಥಕ್ ನೃತ್ಯ ಸಾರ’-ಒಂದು ದೈವೀಕ ಸಮರ್ಪಣೆ. ಇಡೀ ನೃತ್ಯಗುಚ್ಛ, ಭಕ್ತಿಮಾರ್ಗದ ಸ್ತುತಿ-ಸಂಕೀರ್ತನೆ ಮೂಲಕ ದೈವದ ಸಾಕ್ಷಾತ್ಕಾರದ ಪ್ರಯತ್ನವಾಗಿತ್ತು. ಆತ್ಮ ಶೋಧನೆಯ ಈ ಯಾನ ವಿಶಿಷ್ಟವಾಗಿದ್ದು, ಒಂದು ಕಥಾಕೇಂದ್ರದ ಸುತ್ತ ಪಸರಿಸಿದ ಪುಷ್ಪಮಾಲೆಯಾಗಿತ್ತು. ಈ ಪ್ರಸ್ತುತಿಯ ಪರಿಕಲ್ಪನೆ, ನಿರ್ದೇಶನ ನೃತ್ಯ ಸಂಯೋಜನೆ ಗುರು ಅಂಜನಾ ಗುಪ್ತ ಮತ್ತು ಶ್ರುತಿ ಗುಪ್ತ ಅವರದಾಗಿತ್ತು. ಇಡೀ ಕಾರ್ಯಕ್ರಮ ನೃತ್ತ-ನೃತ್ಯ ಮತ್ತು ನಾಟ್ಯ ಸಂಗಮದ ಕಣ್ಮನ ತಣಿಸಿದ ಮೇಳವಾಗಿತ್ತು.
ಶುಭಾರಂಭಕ್ಕೆ ಭರತನಾಟ್ಯದಲ್ಲಿರುವಂತೆ ‘ಪುಷ್ಪಾಂಜಲಿ’ಯ ಆಶಯದಂತೆ, ದೇವಾನುದೇವತೆಗಳ, ಗುರು-ಹಿರಿಯರ ಆಶೀರ್ವಾದ ಬೇಡುವ ನೃತ್ತನಮನ ನಾಲ್ವರು ಹಿರಿಯ ವಿದ್ಯಾರ್ಥಿಗಳಿಂದ ಸುಂದರವಾಗಿ ಮೂಡಿಬಂತು. ನೃತ್ತಾರ್ಚನೆ ವಿವಿಧ ಆಯಾಮಗಳಲ್ಲಿ ಶೋಭಿಸಿತು. ನಾಲ್ವರು ನರ್ತಕಿಯರ ತತ್ಕಾರಗಳ ಗೆಜ್ಜೆಯುಲಿ ಹಿತವಾಗಿ ಕಿವಿದುಂಬಿತು.
ಅನಂತರ ಆಕರ್ಷಕ ‘ ಧಮಾರ್’ –ಶುದ್ಧ ನೃತ್ತದ ಪ್ರಸ್ತುತಿ. ಶಿವನ ತಾಂಡವ ಹೆಜ್ಜೆಗಳ ರಭಸವನ್ನು ಪ್ರತಿಧ್ವನಿಸುವ, ಪೌರುಷ ಆಯಾಮಕ್ಕೆ ಹೊಂದುವ ಪಕಾವಾಜ್ ತಾಳದಲ್ಲಿ ಮೂಡಿಬಂದ ರಭಸದ ‘ ಧಮಾರ್’ನ ಸೊಗಸನ್ನು ಅನಾವರಣಗೊಳಿಸಿದ ಕಲಾವಿದರು ಆದಿತ್ಯ, ಅಂತರ ಮತ್ತು ಶ್ರುತಿ. ಶಿವನ ಢಮರುಗದ ನುಡಿಸಾಣಿಕೆಯೊಂದಿಗೆ , ಪನ್ನಗಾಭರಣನ ವಿಶಿಷ್ಟ ಮೆರುಗು, ಜಟಾಜೂಟದ ವೈಖರಿಗಳನ್ನು ತಮ್ಮ ಮಿಂಚಿನ ವೇಗದ ಹೆಜ್ಜೆ-ತತ್ಕಾರ್ ಮತ್ತು ಚಕ್ಕರ್ಗಳ ಬೆರಗಿನೊಂದಿಗೆ ನೋಡುಗರ ಹೃದಯದಲ್ಲಿ ಪರಿಣಾಮ ಮೂಡಿಸಿದರು. ಕಲಾವಿದರೆಲ್ಲ ಆನಂದಾನುಭವದಿಂದ ನಗುನಗುತ್ತ ನರ್ತಿಸಿದ್ದು ಆಹ್ಲಾದಕರವಾಗಿತ್ತು.
ಮುಂದೆ- ನೃತ್ಯ ಪ್ರಧಾನವಾದ ‘ಚತುರಂಗ’, ಮತ್ತು ಹೋಲಿ ಕೃತಿಗಳು ಮನಮುಟ್ಟಿದವು. ‘ಚತುರಂಗ’- ಕಥಕ್ ನ ಪುರಾತನವಾದ, ಸಂಗೀತಾತ್ಮಕ ಕೃತಿ. ಹೆಸರಿಗೆ ಅನ್ವರ್ಥಕವಾಗಿ ನೃತ್ಯದ ನಾಲ್ಕು ಅಂಗಗಳನ್ನು ಒಳಗೊಂಡ ಈ ಪ್ರಾರ್ಥನಾ ಕೃತಿ ಶಿವನಿಗೆ ತಾದಾತ್ಮ್ಯದಿಂದ ಅರ್ಪಿತವಾದ ದೈವೀಕ ನರ್ತನ. ರಾಗಕ್ಕೆ ಅನುಗುಣವಾಗಿ ಸಾಗುವ ಶಿವನ ಸ್ತುತಿ-ಸಾಹಿತ್ಯ, ಸರ್ಗಂ ಬೋಲ್ಸ್ ಅಥವಾ ಸ್ವರಗಳು, ತರಾನ ಬೋಲ್ಸ್ ಮತ್ತು ಪಕ್ವಾಜ್ ಬೋಲ್ಸ್ ಗಳಿಂದ ಕೂಡಿದ ಪ್ರಸ್ತುತಿ ರಂಗದ ಮೇಲೆ ನೂಪುರಗಳ ಅಲೆಯನ್ನು ಝೇಂಕರಿಸಿತು. ಮಾರ್ದವ ಮುಖಾಭಾವದಿಂದ , ಮಂದ್ರಸ್ಥಾಯಿಯಲ್ಲಿ ಹೆಜ್ಜೆ ಹಾಕಲಾರಂಭಿಸಿದ ಕಲಾವಿದರು, ತಮ್ಮ ಲಂಗದ ಚುಂಗುಗಳನ್ನು ಹಿಡಿದು, ನಯವಾಗಿ ಬಾಗುವ, ಕೊರಳನ್ನು ಓರೆಯಾಗಿ ಕುಲುಕಿಸುತ್ತ ಮಿಂಚಿನ ಕಣ್ಣೋಟದಿಂದ ಸೆಳೆವ ಬಗೆ ಅನನ್ಯವಾಗಿತ್ತು. ಹಿನ್ನಲೆಯ ತಾಳವಾದ್ಯಗಳ ಲಯಕ್ಕೆ ತಕ್ಕಂತೆ ಚಮತ್ಕಾರಿಕವಾಗಿ ಪಾದಭೇದಗಳನ್ನು ಪ್ರದರ್ಶಿಸುವ, ಮನೋಹರ ಹಸ್ತಚಲನೆಗಳಿಂದ ಮೋಡಿ ಮಾಡುವ ಪರಿ, ನಿರಂತರ ಚಕ್ಕರ್ ಹೊಡೆಯುತ್ತಲೇ ತಟ್ಟನೆ ಭಂಗಿಗಳಲ್ಲಿ ಸ್ಥಗಿತವಾಗುವ ಶೈಲಿ ಮನಸ್ಸನ್ನು ಆಕರ್ಷಿಸಿತು. ಮೂರು ಜನ ಕಲಾವಿದರ ಕ್ಲುಪ್ತ ಕಾಲನಿರ್ವಹಣೆ, ತಾಳಜ್ಞಾನ, ಮಿಂಚಿನ ಹೆಜ್ಜೆಗಳ ಸಾಂಗತ್ಯ ಗಮನ ಸೆಳೆಯಿತು. ಕಡೆಯ ಅವರ ಆರೋಹಣದ ಭಂಗಿಗಳು ಕಲಾರಸಿಕರಿಂದ ಮೆಚ್ಚುಗೆ ಪಡೆಯಿತು.
‘ಹೋಲಿ- ( ರಚನೆ- ಶ್ರೀ ಬಿಂದಾದಿನ್ ಮಹಾರಾಜ) ಶ್ರೀಕೃಷ್ಣನ ಜೊತೆ ರಾಧಾ ಮತ್ತು ಇನ್ನಿತರ ಗೋಪಿಕಾ ಸ್ತ್ರೀಯರು ಮನದಣಿಯೆ ಆಡಿದ ರಂಗಿನಾಟದ ‘ಹೋಳಿ’ಯ ದೃಶ್ಯ ವರ್ಣರಂಜಿತವಾಗಿತ್ತು. ಗೀತ-ವಾದ್ಯ-ಮುರಳೀ ಗಾನದ ಸುಮಧುರ ಹಿನ್ನಲೆ ಹೆಂಗೆಳೆಯರ ನರ್ತನ ವಿಲಾಸಕ್ಕೊಂದು ಹೊಸ ಮೆರುಗು ತಂದಿತ್ತು. ಶ್ರೀಕೃಷ್ಣನ ಲೀಲಾವಿನೋದಗಳು, ಗೋಪಿಕೆಯರ ಆನಂದದ ಲಹರಿ, ರಾಸಲೀಲೆಯ ದೃಶ್ಯಗಳನ್ನು ನರ್ತಕಿಯರು ಸಮರ್ಥವಾಗಿ ಕಟ್ಟಿಕೊಟ್ಟಿದ್ದರು. ಆಕರ್ಷಕ ವರ್ಣರಂಜಿತ ಉಡುಪುಗಳನ್ನು ತೊಟ್ಟ ರಮಣಿಯರು ಕೃಷ್ಣನೆಂಬ ಪ್ರಾಣಸಖನ ಸ್ನೇಹ ಮಾಧುರ್ಯ ಹೀರಲು ಹಾರಿಬಂದ ಬಣ್ಣ ಬಣ್ಣದ ಚಿಟ್ಟೆಗಳಂತೆ ಭಾಸವಾದರು. ನರ್ತಕಿಯರ ಸಾಮರಸ್ಯದ ನೃತ್ತಲೀಲೆಗಳು ರಂಗದ ತುಂಬಾ ಸಂಭ್ರಮಿಸಿ, ಭಾವದೋಕುಳಿ ಎರಚಿದವು.
ಕೃತ್ತಿಕಾ, ಮಹತಿ, ಕಾವೇರಿ ಮತ್ತು ಉಜ್ವಲಾ, ವೀಣಾ, ತನಿಷಾ, ಶಿವಾನಿ ಮತ್ತು ತನು ಒಟ್ಟಾಗಿ ನರ್ತಿಸಿದ, ಶಿವ ಮತ್ತು ಕೃಷ್ಣನ ಆರಾಧನೆಯ ಎರಡೂ ನೃತ್ಯಗಳು ರಂಜನಾತ್ಮಕವಾಗಿ ಕಂಗೊಳಿಸಿದರೂ ಆಂತರ್ಯದಲ್ಲಿ ದೈವೀಕತೆಯನ್ನು ಬಿಂಬಿಸಿದವು.
ಸಾಮಾನ್ಯವಾಗಿ ಕಥಕ್ ನಲ್ಲಿ ಇಂದು ಅಷ್ಟಾಗಿ ಕಾಣದ, ಸೌಮ್ಯ ಸ್ವಭಾವದ ಪತಿವ್ರತೆ, ಮಂಡೋದರಿಯ ಭಾವನೆಗಳ ಕಥಾನಕವನ್ನು, ಕಥಾವಾಚನ ಶೈಲಿಯಲ್ಲಿ ಶ್ರುತಿ ಗುಪ್ತ ಭಾವನಾತ್ಮಕವಾಗಿ ಸೆರೆ ಹಿಡಿದರು. ಶ್ರೀರಾಮ, ರಾವಣನನ್ನು ಕೊಲ್ಲುವನೆಂದು, ರಾಮನೇ ಗೆಲ್ಲುವನೆಂದು ಚೆನ್ನಾಗಿ ಅರಿತಿರುವ ಮಂಡೋದರಿ ಪತಿಯನ್ನು ತಡೆಯುವ, ಅವಳ ನೋವಿನ ಸ್ವಗತದ ನಿರೂಪಣೆ ಮನಮುಟ್ಟಿತು.
ಇಡೀ ಪ್ರಸ್ತುತಿಯ ಹೂರಣವನ್ನು ಪ್ರತಿಬಿಂಬಿಸುವ ಕಡೆಯ ಕೃತಿಯನ್ನು ರಚಿಸಿದವರು ಅರ್ಜುನ್ ಭಾರದ್ವಾಜ್ ನೃತ್ಯದ ಬಗ್ಗೆ ನೀಡುವ ವ್ಯಾಖ್ಯೆ ಹೀಗಿದೆ: ಪ್ರೇಕ್ಷಕರ ಮನರಂಜಿಸುವ ಈ ನೃತ್ಯಗಳು ಭೌತಿಕ ಆನಂದ,ದೈವದ ಪ್ರಸನ್ನತೆ- ದೈವೀಕತೆ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಸಾಗುತ್ತದೆ. ಅಂತಿಮವಾಗಿ ರಸಾನಂದ ಮತ್ತು ಆತ್ಮಶುದ್ಧಿಯೇ ಇದರ ಗುರಿ ಎನ್ನುತ್ತಾರೆ. ಇದರ ಸಂಗೀತ ಸಂಯೋಜನೆ ಕಾರ್ತೀಕ್ ರಾಮನ್.
ಪ್ರಸ್ತುತಗೊಂಡ ಎಲ್ಲ ಕೃತಿಗಳಿಗೆ ಸಂಗೀತ ಸಂಯೋಜಿಸಿ, ಸೊಗಸಾಗಿ ಭಾವಪೂರ್ಣವಾಗಿ ಹಾಡಿದವರು ಶಂಕರ ಶಾನುಭಾಗ್ ಮತ್ತು ರಘುನಂದನ್ ಭಟ್. ಪಂಡಿತ್ ಬಿರ್ಜು ಮಹಾರಾಜ್ ಅವರ ಸಂಗೀತ ಸಂಯೋಜನೆಯೂ ಇದರೊಂದಿಗಿದ್ದುದು ವಿಶೇಷ.
ನಲುಮೆಯ ವಾತಾವರಣದಲ್ಲಿ, ನರ್ತಕಿಯರು ಸಂತಸದಿಂದ ಗೃಹಾಲಂಕಾರ ಮಾಡಿ, ಒಟ್ಟಾಗಿ ನಲಿಯುತ್ತ ಸಂಭ್ರಮಿಸುತ್ತಾರೆ. ಆ ಪರಾತ್ಪರ ಶಕ್ತಿಗೆ ಶರಣಾಗತರಾಗಿ ಭಕ್ತಿ ತಾದಾತ್ಮ್ಯತೆಗಳಿಂದ ಸಮರ್ಪಿಸಿಕೊಳ್ಳುವರು. ಪ್ರೇಕ್ಷಕ ಮಹಾಪ್ರಭುಗಳಿಗೆ ಅನುನಯದಿಂದ ವಂದಿಸಿ, ಆನಂದಾನುಭಾವದಿಂದ ಪುಳಕಿತರಾದರೆ, ನೋಡುವ ರಸಿಕರು ರಸಾನಂದದಲ್ಲಿ ಮೀಯುವರು.
******************************