‘ಅರಣ್ಯೇ ನಿನಗೆ ಶರಣು’-ನೃತ್ಯ ನಾಟಕ
ಬೆಂಗಳೂರು ಎನ್ವಿರಾಮೆಂಟ್ ಟ್ರಸ್ಟ್, ಶ್ರೀ ರಾಜ ರಾಜೇಶ್ವರಿ ಕಲಾನಿಕೇತನ ಮತ್ತು ಇನ್ಸ್ ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಅಂಡ್ ಆಕ್ಷನ್ (ಇಕ್ರಾ) ಆಯೋಜಿಸಿರುವ ಸಮಾರಂಭದಲ್ಲಿ ಡಾ.ಎಲ್ಲಪ್ಪ ರೆಡ್ಡಿ ಅವರು ರಚಿಸಿರುವ ‘ಅರಣ್ಯೇ ನಿನಗೆ ಶರಣು’ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗುವುದು. ಅದೇ ಸಂದರ್ಭದಲ್ಲಿ ಪ್ರಸಕ್ತ ವಿಶ್ವದ ಸವಾಲಾಗಿರುವ ಭೂ ರಕ್ಷಣೆಯ ಸುತ್ತ ಹೆಣೆಯಲಾದ ಜಾಗತಿಕ ಸಮಸ್ಯೆಯನ್ನು ಕುರಿತ ‘ಅರಣ್ಯೇ ನಿನಗೆ ಶರಣು’ ಎಂಬ ನೃತ್ಯ ನಾಟಕವನ್ನು ಪ್ರದರ್ಶಿಸಲಾಗುವುದು.
‘ಓ ಅರಣ್ಯವೇ’ ನಿನಗೆ ನಮ್ಮ ವಿನಮ್ರ ಪ್ರಣಾಮಗಳು. ಅನನ್ಯ ಸಂಪನ್ಮೂಲವನ್ನಿತ್ತು ನಮ್ಮ ಮೇಲೆ ಅಗಾಧ -ಪ್ರೀತಿ -ಕರುಣೆಗಳ ಕಡಲಧಾರೆಯನ್ನೇ ಕರೆಯುತ್ತಿರುವ ಭೂತಾಯ ರಕ್ಷಣೆಗೆ ಪರಿಸರದ ಹಿತ ಕಾಯುವ ಮೂಲಕ ನಾವು ಮುಂದಾಗಬೇಕಾದ ಪರಿಸ್ಥಿತಿ ಇಂದು ಅನಿವಾರ್ಯವಾಗಿದೆ . ನಮ್ಮ ಭೂಸಿರಿಯ ಸಂಪತ್ತಾದ, ಹಸಿರು ಉಸಿರಾದ ಕಾನನಗಳು, ಮಣ್ಣು, ನೀರು, ಗಾಳಿ, ಪ್ರಾಣಿ-ಪಕ್ಷಿಗಳು, ಕ್ರಿಮಿ-ಕೀಟಗಳು ಮತ್ತು ಭೂಪ್ರದೇಶ ಎಲ್ಲವನ್ನೂ ಕ್ರಮೇಣ ನಾವು ಕಳೆದುಕೊಳ್ಳುತ್ತ ಬಂದಿದ್ದೇವೆ. ಈಗಲಾದರೂ ಎಚ್ಚೆತ್ತುಕೊಳ್ಳೋಣ. ಇನ್ನು ಸಮಯಾವಕಾಶವಿಲ್ಲ. ನಶಿಸಿಹೋಗುತ್ತಿರುವ ಪ್ರಾಕೃತಿಕ ಸಂಪತ್ತಿನ ಬಗ್ಗೆ ಕಾಳಜಿ ವಹಿಸೋಣ, ಅದರ ರಕ್ಷಣೆಯ ಕ್ರಮವನ್ನು ಕೈಗೊಳ್ಳುವ ತುರ್ತು ಇಂದು ಎದುರಾಗಿದೆ.ಪ್ರಸಕ್ತ ಪರಿಸರ-ಭೂ ರಕ್ಷಣೆಗಳ ಸಮಸ್ಯೆ ಕುರಿತು ನಾವು ಎಚ್ಚರಗೊಳ್ಳುವ ಅನಿವಾರ್ಯತೆ ಸಮೀಪಿಸಿರುವ ಈ ಸಂದರ್ಭಕ್ಕೆ ಕನ್ನಡಿ ಹಿಡಿವ ನೃತ್ಯ ನಾಟಕವೊಂದು ಪ್ರದರ್ಶಿತವಾಗುತ್ತಿದೆ.
ಪ್ರಸ್ತುತ ಸಮಸ್ಯೆಗಳನ್ನು ಕುರಿತು ಡಾ.ಎಲ್ಲಪ್ಪ ರೆಡ್ಡಿ ಅವರು ರಚಿಸಿರುವ ‘ಅರಣ್ಯೇ ನಿನಗೆ ಶರಣು’ ಎಂಬ ಪುಸ್ತಕಾಧಾರಿತ ನೃತ್ಯ ನಾಟಕವು ಇದೇ ತಿಂಗಳ 27 ಬುಧವಾರದಂದು ಸಂಜೆ 6 ಗಂಟೆಯಿಂದ ವೈಯ್ಯಾಲಿಕಾವಲ್ ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಪ್ರದರ್ಶಿತಗೊಳ್ಳುತ್ತಿದೆ. ಬನ್ನಿ ಈ ಪರಿಣಾಮಕಾರಿ ಹೃದಯಸ್ಪರ್ಶೀ ಪ್ರದರ್ಶನವನ್ನು ನೋಡಿ ನಮ್ಮ ಒಳಗಣ್ಣ ತೆರೆಯೋಣ, ಕಾರ್ಯಪ್ರವೃತ್ತರಾಗೋಣ , ಭೂತಾಯಿಯ ಸವಕಳಿಯನ್ನು, ನಶಿಸಿಹೋಗುತ್ತಿರುವ ಸಂಪನ್ಮೂಲಗಳನ್ನು ಪುನಶ್ಚೇತನಗೊಳಿಸೋಣ ಬನ್ನಿ…ಇನ್ನಾದರೂ ನಗರಗಳ ಮಾಲೀನ್ಯ ತೊಲಗಿ, ಎಲ್ಲೆಡೆ ಶಾಂತ ಪರಿಸರ, ಕಣ್ತುಂಬುವ ಹಸಿರ ಸಿರಿ ನವ ಪಲ್ಲವಿಸಲಿ, ಶಾಂತಿ-ಸೌಹಾರ್ದತೆಗಳನ್ನು ಪಸರಿಸೋಣ ಬನ್ನಿ.
ಇದೇ ಸಂದರ್ಭದಲ್ಲಿ ಐವರು ಧೀಮಂತ ಮಹಿಳಾ ರೈತರನ್ನು ಗೌರವಿಸಲಾಗುವುದು.
ಈ ಸುಮನೋಹರ ನೃತ್ಯನಾಟಕಕ್ಕೆ ಸಂಗೀತ ಸಂಯೋಜಿಸಿದವರು ಸಂಗೀತಜ್ಞ ಡಾ. ಪ್ರವೀಣ್ .ಡಿ ರಾವ್, ನೃತ್ಯ ಸಂಯೋಜನೆ ಮತ್ತು ನಿರ್ದೇಶನ ಡಾ. ವೀಣಾ ಮೂರ್ತಿ ವಿಜಯ್ . ಇದರಲ್ಲಿ ಪ್ರಸಿದ್ದ ನೃತ್ಯಪಟುಗಳಾದ ವೀಣಾ ಮೂರ್ತಿ, ಶಮಾ ಕೃಷ್ಣ, ಅನುರಾಧ ವಿಕ್ರಾಂತ್, ಮಿಥುನ್ ಶ್ಯಾಂ, ರಾಧಿಕಾ ರಾಮಾನುಜ, ರಾಜೇಶ್- ಜೆ.ಮನು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.ಪರಿಸರ ಸಂಬಂಧಿತ ಸಮಗ್ರ ವಿಷಯಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿರುವ ‘’ ‘ಅರಣ್ಯೇ ನಿನಗೆ ಶರಣು’ ಎಂಬ ಈ ಸಕಾಲಿಕ ನೃತ್ಯನಾಟಕವನ್ನು ವೀಕ್ಷಿಸಿ, ನಮ್ಮ ಕರ್ತವ್ಯಗಳ ಬಗ್ಗೆ ಜಾಗೃತಿ ಪಡೆಯೋಣ, ಕ್ರಿಯಾಶೀಲರಾಗೋಣ. ಈ ನೃತ್ಯ ನಾಟಕವನ್ನು ವೀಕ್ಷಿಸಲುಎಲ್ಲರಿಗೂ ಹಾರ್ದಿಕ ಸ್ವಾಗತ.