ಆ ಸಂಜೆ-
ಪುರಭವನದಲ್ಲಿ ಜನವೋ ಜನ. ತನ್ನ ನೆಚ್ಚಿನ ಕವಿಯ ಸನ್ಮಾನ ಕಾರ್ಯಕ್ರಮದಲ್ಲಿ ಶಾರ್ವರಿ ಭಾವುಕಳಾಗಿದ್ದಳು. ರವಿತೇಜರ ಕವನಗಳೆಂದರೆ ಅವಳಿಗೆ ಪಂಚಪ್ರಾಣ. ನೇರ ಹೃದಯಗಹ್ವರ ಸೇರುವ ಅರ್ಥಪೂರ್ಣ ರಚನೆಗಳು ಅವನ ಕವಿತೆಗಳು. ಎಲ್ಲಕ್ಕಿಂತ ಅವನ ಹೃದಯ ವೈಶಾಲ್ಯದ ಸಮಾಜಮುಖಿ ಪದ್ಯಗಳು ಕವಿಮನದ ಕನ್ನಡಿಯಾಗಿದ್ದವು. ಅವಳೂ ಪದ್ಯಜೀವಿಯೇ. ಭಾವನಾ ಪ್ರಪಂಚದಲ್ಲಿ ತೇಲಾಡುವ ಇಬ್ಬರ ಅಭಿರುಚಿಗಳೂ ಒಂದಾಗಿ ಅವರು ಹತ್ತಿರ ಹತ್ತಿರವಾದರು. ಇಬ್ಬರೂ ತಂತಮ್ಮ ಕವನಗಳ ಸಾಂಗತ್ಯದಲ್ಲಿ ಒಂದಾಗಿದ್ದರು.
ಪ್ರಖ್ಯಾತ ಕವಿ, ಅವಳ ನೋವಿನ ಕಥೆಗೆ ಕಿವಿಯಾಗಿದ್ದವನು , ಅವಳ ಬಾಳಿಗೆ ಆಸರೆಯಾದ. ನಲವತ್ತು ದಾಟಿದ್ದರೂ ಕವಿಯ ಭಾವವೀಣೆಗೆ ಶ್ರುತಿ ಹಿಡಿದವರಿಲ್ಲ. ಹಾಗೆಂದೇ ಅವನು ಇಂದಿಗೂ ಒಂಟಿ. ಹಾಸಿಗೆ ಹಿಡಿದ ತಾಯಿಯೊಬ್ಬರೇ ಅವನ ಅತ್ಯಾಪ್ತ ಜೀವ. ಆಕೆಯೊಬ್ಬಳನ್ನು ಬಿಟ್ಟರೆ ಮನೆಯಲ್ಲಿ ನೀನೇ ಎಂದು ಅವನನ್ನು ಕೇಳುವವರಿಲ್ಲ. ಜೋಪಾನ ಮಾಡಿ ಉಪಚರಿಸುವವರಿಲ್ಲ. ಸದಾ ಕಾಡುವ ಅನಾಥಪ್ರಜ್ಞೆ . ಬಿಳಿ ಜುಬ್ಬಾ-ಪೈಜಾಮ, ಬಗಲಲ್ಲೊಂದು ತೂಗಾಡುವ ಬಟ್ಟೆಯ ಚೀಲ. ಅದರ ತುಂಬಾ ಪುಸ್ತಕಗಳಷ್ಟೇ ಅವನ ಆಸ್ತಿ. ಮುಖದಲ್ಲಿ ಸಣ್ಣಗೆ ಮಿನುಗುವ ಮುಗುಳ್ನಗು ಅವನ ಚಹರೆ.
ಇಂತಪ್ಪ ಬ್ರಹ್ಮಚಾರಿಗೆ ನವ ಯುವತಿ-ಚೆಲುವೆಯಾದ ಅವಳು ಬಾಳು ಕೊಟ್ಟಳೋ ಅಥವಾ ಪುಟ್ಟಮಗುವಿನ ತಾಯಿ-ವಿಧವೆಯ ಮೊಗದಲ್ಲಿ ಸಂತೃಪ್ತಿಯ ನಗು ಅರಳಿಸಿದವನು ಅವನೋ ಎಂಬುದೇ ಯಕ್ಷಪ್ರಶ್ನೆ!!ಉತ್ತಮ ವರಮಾನದ ಒಳ್ಳೆಯ ಉದ್ಯೋಗದಲ್ಲಿದ್ದ ಶಾರ್ವರಿ, ಪ್ರತಿದಿನ ಬೆಳಕು ಕಣ್ಣು ಬಿಡುವಷ್ಟರಲ್ಲಿ ಸಂಪೂರ್ಣ ಮನೆಗೆಲಸದ ಜೊತೆಗೆ, ಉಸಿರಾಡುವ ಶವದಂತಿದ್ದ ಅತ್ತೆಯ ಸೇವೆಯನ್ನು ನಿಷ್ಠೆಯಿಂದ-ಮನಃಪೂರ್ವಕ ಮಾಡಿ, ತಿಂಗಳು ಪೂರ ಮನೆಯ ಒಳ-ಹೊರಗೆ ದುಡಿದು ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾಗ, ಜನ ಅಂದದ್ದು ರವಿತೇಜ ನಿಜಕ್ಕೂ ಉದಾರಿ-ವಿಧವೆಯೋದ್ಧಾರಿ!!!..