“ಸರಿ, ನಾ ಇನ್ನು ಬರ್ಲಾ?”
ಫ್ಲಾಸ್ಕಿನ ಮುಚ್ಚಳ ತಿರುಗಿಸಿ ಹೊರಟು ನಿಂತಳು ಸ್ಮೃತಿ .
“ಹೂಂ” – ಸುಭಾಷನದು ಕ್ಷೀಣ ಉತ್ತರ.
ವೈರ್ ಬ್ಯಾಗಿನಲ್ಲಿ ಊಟದ ಕ್ಯಾರಿಯರನ್ನಿಟ್ಟು ಮೇಲೆ ಚಿಕ್ಕವಸ್ತ್ರವನ್ನು ಹೊದಿಸಿ ಗಂಡನ ಕಡೆ ತಿರುಗಿದಳು. ಸುಭಾಷ್ ಎತ್ತಲೋ ನೋಡುತ್ತಾ ಮಲಗಿದ್ದ. ಸದ್ದು ಮಾಡದೆ ಮೆಲ್ಲನೆ ವಾರ್ಡಿನಿಂದ ಹೊರಬಂದು ಸ್ಟೇಷನ್ ಕಡೆ ಸರಸರನೆ ಹೆಜ್ಜೆ ಹಾಕಿದಳು.
“ಹಲೋ” ದನಿ ಬಂದತ್ತ ಹಿಂತಿರುಗಿ ನೋಡಿದಳು ಸ್ಮೃತಿ. ಸುಭಾಷನ ಆತ್ಮೀಯ ಗೆಳೆಯ ಕಾರ್ತಿಕ್. ಮುಖದಲ್ಲಿ ನಗು ಹನಿಸಿ ಅವಳು ಇಳಿದನಿಯಲ್ಲಿ ‘ಹಲೋ’ಎಂದು ಮುಂದೆ ನಡೆದಳು.
“ಏನು ಅಂಥಾ ಅರ್ಜೆಂಟು? ಮನೆಗೆ ತಾನೇ….. ಇವತ್ತು ಹೇಗಿದ್ದಾನೆ ಸುಭಾಷ್?” ಪಕ್ಕಕ್ಕೇ ಬಂದ ಕಾರ್ತಿಕ್. ನಡಿಗೆಯನ್ನು ನಿಧಾನ ಮಾಡಬೇಕಾಯಿತು ಸ್ಮೃತಿ.
“ಪರವಾಗಿಲ್ಲ” ಗೆಲವು ಕಳೆದುಕೊಂಡ ಅವಳ ದನಿಯನ್ನು ಗುರುತಿಸಿ ಅವನು “ನೀವೇನು ಅವನ ವಿಷ್ಯದಲ್ಲಿ ಅಷ್ಟೊಂದು ವರಿ ಮಾಡ್ಕೋಬೇಕಿಲ್ಲ. ನಾಳೆ ನಾನು ಆ ಸರ್ಜನ್ನ ನೋಡಿ ಇನ್ನೂ ಚೆನ್ನಾಗಿ ಕೇರ್ ತಗೊಳ್ಳಕ್ಕೆ ಹೇಳ್ತೀನಿ. ಹಿ ವಿಲ್ ಬಿ ಆಲ್‍ರೈಟ್ ಇನ್ ಫಿಫ್ಟೀನ್-ಟ್ವೆಂಟಿ ಡೇಸ್’’ ಎಂದ. ಸ್ಮೃತಿ ಮಾತನಾಡಲಿಲ್ಲ. ಇಬ್ಬರೂ ಸ್ಟೇಷನ್ನಿನ ಒಳಗೆ ಬಂದರು. ಕಾರ್ತಿಕ್ ‘ಮಾತುಂಗ’ಕ್ಕೆ ಎರಡು ಟಿಕೇಟ್ ತೆಗೆದಾಗ ಅವಳಿಗೆ ಅಚ್ಚರಿ. ಅವಳು ಕೇಳಬೇಕೆಂದಿದ್ದುದನ್ನು ಅವನೇ ಹೇಳಿದ “ನೀವೊಬ್ರೆ ಹೋಗ್ತಿದ್ದೀರ. ಅದಕ್ಕೆ ನಿಮ್ಮನ್ನ ಬಿಟ್ಬಿಟ್ಟು ಅಲ್ಲಿಂದ ಬಸ್ನಲ್ಲಿ ಹೋಗ್ತೀನಿ”
ಫ್ಲಾಟ್‍ಫಾರಂ ಮೇಲೆ ಎಂದಿಗಿಂತ ಹೆಚ್ಚು ಜನಸಂದಣಿ. ರೈಲು ಬಂತು. ಒಮ್ಮೆಲೆ ಜನ ಅದಕ್ಕೆ ಮುಗಿಬಿದ್ದರು. ಅರ್ಧ ನಿಮಿಷದಲ್ಲಿ ಹತ್ತುವವರು ಹತ್ತಿದರು. ಇಳಿಯುವವರು ಇಳಿದರು. ಕಾರ್ತಿಕ್ ಅವಳನ್ನು ಹಿಡಿದು ಒಳಗೆ ಎಳೆದುಕೊಳ್ಳದೇ ಇದ್ದಿದ್ದರೆ ಅನ್ಯಮನಸ್ಕಳಾಗಿದ್ದ ಸ್ಮೃತಿ ನಿಲ್ದಾಣದಲ್ಲೇ ಉಳಿಯುತ್ತಿದ್ದಳೇನೋ? ಅವಳ ಮನಃಸ್ಥಿತಿಯನ್ನರಿತ ಕಾರ್ತಿಕ್ ಬಾಗಿಲ ಬಳಿ ನಿಂತಿದ್ದ ಅವಳನ್ನು ಒಳಗೆ ಕರೆದ.
“ಬನ್ನಿ….. ಇನ್ನು ಸ್ವಲ್ಪ ಒಳಗೆ ಬನ್ನಿ….. ಇಲ್ಲದಿದ್ರೆ. ಏನಿಲ್ಲ ಮುಂದಿನ ಸ್ಟೇಷನ್ನಲ್ಲಿ ಈ ಜನ ನಿಮ್ಮನ್ನ ಪ್ಲಾಟ್‍ಫಾರಂ ಮೇಲೆ ತಳ್ಳಿರ್ತಾರೆ” ಅವನ ಸಶಬ್ದ ನಗುವಿನೊಡನೆ ಮಿಣಗುಟ್ಟುವ ಹಲ್ಲುಗಳನ್ನು ಕಂಡಾಗ ಅವಳಲ್ಲಿ ಉತ್ಸಾಹ ಮೆಲ್ಲಗೆ ಅಂಬೆಗಾಲಿಕ್ಕುತ್ತದೆ. ಒಳಗೆ ಬಂದು ಮೇಲಿನ ಬಾರನ್ನು ಹಿಡಿದುಕೊಳ್ಳುತ್ತಾಳೆ.
“ನಿಮ್ಮನ್ನ ಅಲ್ಲಿ ನೋಡಿದಾಗಲೇ ತಿಳ್ಕೊಂಡೆ. ಇವತ್ಯಾಕೋ ನೀವೇನೋ ಒಂಥರ ಇದ್ದೀರ ಅಂತ. ಅದಕ್ಕೆ ನಿಮ್ಮನ್ನ ಮನೆ ತಲುಪಿಸಿಯೇ ಹೋಗೋಣಾಂತ ತೀರ್ಮಾನಿಸಿದೆ”
ಅವನ ಬಿಚ್ಚುವ ತುಟಿಗಳ ಮೋಡಿಯನ್ನೇ ಪರವಶಳಾಗಿ ನೋಡುತ್ತಿದ್ದ ಸ್ಮೃತಿಗೆ ಅವನ ಮಾತು ಕೇಳಲಿಲ್ಲ.
ಮನೆ ಹತ್ತಿರವಾದಾಗ “ನಾಳೇನೂ ಒಂಬತ್ತೂವರೆಗೆ ಊಟ ತಗೊಂಡು ಹೋಗ್ಬೇಕಾ?” ಎಂದು ಕೇಳಿದ. ಸ್ಮೃತಿ ತಲೆಯಾಡಿಸಿದಳು.
“ಹಾಗಾದ್ರೆ ನಾಳೆ ಬೆಳಗ್ಗೆ ಒಂಬತ್ತಕ್ಕೆ ಬರ್ತೀನಿ….. ನಿಮ್ಮನ್ನ ಆಸ್ಪತ್ರೆಯಲ್ಲಿ ಬಿಟ್ಟು ಹಾಗೆ ಆಫೀಸಿಗೆ ಹೋಗ್ತೀನಿ” ಎಂದವನು ಹೋಗುವಾಗ ಕೈಯಾಡಿಸಿದ. ತನಗೆ ಗೊತ್ತಿಲ್ಲದಂತೆ ಅವಳೂ ಕೈ ಮೇಲೆ ಎತ್ತಿದಳು.
ಕಬ್ಬಿಣದ ಗೇಟನ್ನು ತಳ್ಳಿ ಮೆಟ್ಟಿಲುಗಳನ್ನು ಸರಸರನೆ ಏರಿದಳು. ಮೈ ತುಂಬ ಹೊಸ ಅಲೆಗಳ ಪುಳಕ …. ಕೈಕಾಲುಗಳಲ್ಲಿ ಅತೀವ ಚಟುವಟಿಕೆ ಸ್ರಾವ. ಒಂದು ಮಹಡಿಯನ್ನು ಹತ್ತಿ ಎರಡು ನಿಮಿಷ ಅಲ್ಲೇ ನಿಂತಳು. ಎದೆಯ ತುಂಬ ಸರಸರ ಶಬ್ದ. ಉಸಿರಿನ ಆವೇಗ. ಸೀರೆಯ ನೆರಿಗೆಯ ಗೊಂಚಲನ್ನು ಮೇಲಕ್ಕೆತ್ತಿ ಹಿಡಿದುಕೊಂಡು ಚಟಪಟ ಮತ್ತಷ್ಟು ಮೆಟ್ಟಲುಗಳನ್ನೇರಿ ಬಲಕ್ಕೆ ತಿರುಗಿ ಎರಡನೆಯ ಬಾಗಿಲಿನ ಮುಂದೆ ನಿಂತಳು.
ಬೀಗ ತೆಗೆದು ಬ್ಯಾಸ್ಕೆಟ್ಟಿನಲ್ಲಿದ್ದ ಕ್ಯಾರಿಯರನ್ನು ತೊಳೆಯುವ ಗೋಜಿಗೆ ಹೋಗದೆ ಹಾಗೇ ಬಂದು ಮಂಚದ ಮೇಲೆ ಉರುಳಿಕೊಂಡಳು…. ಐದಾರು ನಿಮಿಷ…. ನಂತರವೇ ಅವಳ ಒಳಗೆ ನಡೆಯುತ್ತಿದ್ದ ಭಾವನೆಗಳ ಹರಿದಾಟ ಒಂದು ನಿಲುಗಡೆಗೆ ಬಂದದ್ದು.
ಮೆಲ್ಲನೆದ್ದು ಮುಸುರೆ ಪಾತ್ರೆಗಳನ್ನು ತೊಳೆದಿಟ್ಟು, ಹಾಲು ಕುಡಿದು ಅಡಿಗೆ ಮನೆಯ ಚಿಲಕವನ್ನು ಹಾಕಿ ಹೊರಬಂದಳು. ಬಾಗಿಲ ಬಡಿತ. ‘ಓ ಅವಳೇ ಇರಬೇಕು….. ಗಂಟೆ ಹತ್ತಾಯ್ತು’ ಅಂದುಕೊಂಡು ಬಾಗಿಲು ತೆರೆದಳು ಸ್ಮೃತಿ.
ಹೌದು, ಅವಳೇ!…ಸುಭಾಷ್ ಆಸ್ಪತ್ರೆ ಸೇರಿದಂದಿನಿಂದ ರಾತ್ರಿ ಮಲಗಲು ಬರುತ್ತಿದ್ದ ಅಯ್ಯರ್ ಮಗಳು ವಿನೂ.
“ವಿನೂ ನಿಂಗೆ ಸುಮ್ನೆ ವಾರದಿಂದ ತೊಂದ್ರೆ ಕೊಡ್ತಿದ್ದೇನೆ. ಸಾರಿ, ಪರ್ವಾಗಿಲ್ಲ. ನಾ ಒಬ್ಳೇ ಮಲಗ್ತೀನಿ, ಭಯವಿಲ್ಲ. ನೀ ಹೋಗು ಓದ್ಕೋ, ಪರೀಕ್ಷೆ ಹತ್ರ ಬರ್ತಿದೆಯಲ್ಲ” ಎಂದು ಅವಳನ್ನು ಕಳುಹಿಸಿ ಬಾಗಿಲನ್ನು ಭದ್ರಪಡಿಸಿ ಹಾಸಿಗೆ ಸೇರಿದಳು.
ಸುಭಾಷ್ ಆಸ್ಪತ್ರೆ ಸೇರಿದ ಎರಡು ಮೂರು ದಿನಗಳು ಅವಳಿಗೆ ಗಾಬರಿಯಿಂದ ನಿದ್ದೆಯೇ ಹಾರಿಹೋಗಿತ್ತು. ನೆನ್ನೆ ಮೊನ್ನೆ ಚೆನ್ನಾಗಿ ಬಂದಿತ್ತು. ಇಂದು ಯಥಾಪ್ರಕಾರ ಅವಳ ರೆಪ್ಪೆಗಳು ಒಂದಾಗಲಿಲ್ಲ. ಇಂದು ಅಂದಿನ ಗಾಬರಿ ಕಾರಣವಲ್ಲ. ಒಳಗೆ ಅರಿಯದ ಕಚಗುಳಿಯಾಟ. ತನಗೆ ಇಂದೇನಾಗಿದೆ ಎಂದು ಯೋಚಿಸಿದಳು. ಬಲು ಅಚ್ಚರಿ. ಈ ನಡುವೆ ಉತ್ಸಾಹವೇ ಸೋರಿಹೋದ ತನ್ನಲ್ಲಿ ಲವಲವಿಕೆ! ಬೆಳಗಿನಿಂದ ನಡೆದುದನ್ನೆಲ್ಲ ಒಮ್ಮೆ ಮೆಲುಕು ಹಾಕಿದಳು. ಸಂಜೆಯವರೆಗೂ ಅಂಥದೇನೂ ನಡೆಯಲಿಲ್ಲ.
“ಹಲೋ” ಇನಿದಾದ ದನಿ ಕಿವಿಯಲ್ಲಿ ಗುಂಗುರು. ಹಿಂತಿರುಗಿ ನೋಡುವಂತಾಯಿತು ಅವಳಿಗೆ. ಸಂಜೆಯ ಮೇಲಿಂದ ತನ್ನ ಎದೆಬಡಿತ ತೀವ್ರ. ತಾನು ಎಂದೂ ಅನುಭವಿಸಿದ ಅವ್ಯಕ್ತ ಹಿತದ ಬುಗ್ಗೆ. ಕಣ್ಣಲ್ಲಿ ಕಾರ್ತಿಕನ ಗೊಂಬೆ ನಿಂತಂತೆ- ‘ಛೀ, ಇವತ್ಯಾಕೆ ನಾನು ಹೀಗಾದೆ’ ಎಂದು ತನ್ನನ್ನು ತಾನು ಬಯ್ದುಕೊಂಡು ‘ದೇವರೇ, ಇವರಿಗೆ ಆದಷ್ಟು ಬೇಗ ವಾಸಿ ಮಾಡಿ ಮನೆಗೆ ಕಳಿಸಪ್ಪ’ ಎಂಬ ಬೇಡಿಕೆಯನ್ನು ಸ್ವಲ್ಪ ಜೋರಾಗೇ ಅಂದುಕೊಂಡು, ಅದರ ಬಗ್ಗೆಯೇ ಆಲೋಚಿಸುವಂತೆ ಮನಸ್ಸನ್ನು ಅದರಲ್ಲಿ ಅದ್ದಿ, ರೆಪ್ಪೆಗೊಡಿಸುವ ಪ್ರಯತ್ನವನ್ನು ಮಾಡಿದಳು.
ಬೆಳಗ್ಗೆ ಒಂಬತ್ತಕ್ಕೆಲ್ಲ ಕಟ್ಟು ಅನ್ನ, ಮೊಸರನ್ನವನ್ನು ಕಲೆಸಿ ಕ್ಯಾರಿಯರ್‍ನಲ್ಲಿ ತುಂಬಿಸಿ ಇಟ್ಟಾಗಿತ್ತು. ಸೀರೆ ಬದಲಾಯಿಸಿ ತಾನು ಒಂದು ತುತ್ತು ಉಂಡು ಆಸ್ಪತ್ರೆಗೆ ಹೊರಡಲು ಸಿದ್ಧಳಾದಳು. ಹಿಂದಿನ ರಾತ್ರಿ ಅವಳಲ್ಲಿ ಆವಿರ್ಭವಿಸಿದ ಭಾವನೆಗಳು ಅವಳಲ್ಲಿ ಒಂದು ನಿರ್ಧಾರ ಮೂಡಿಸಿದ್ದವು. ಇನ್ನೆಂದೂ ತಾನು ಮನಸ್ಸನ್ನು ಹೀಗೆ ಹರಿಯಬಿಡಬಾರದು. ತಾನಾಯಿತು ತನ್ನವರ ಯೋಗಕ್ಷೇಮವಾಯಿತು. ಅವರು ಹುಷರಾಗಿ ಮನೆಗೆ ಬರುವುದಷ್ಟೇ ತನ್ನ ಗುರಿಯಾಗಿರಬೇಕು. ‘ದೇವರೆ ನನ್ನವರಿಗೆ ಆರೋಗ್ಯ ಕೊಟ್ಟು ನನ್ನನ್ನು ಕಾಯುವುದು ನಿನ್ನ ಹೊಣೆ’ ಎಂದು ದೇವರಿಗೆ ಕೈಮುಗಿದು, ಬಾಗಿಲಿಗೆ ಬೀಗ ತಗುಲಿಸಿ ಮೆಟ್ಟಲುಗಳಿಳಿದರೆ ಕೆಳಗಿನ ವರಾಂಡ.
ಕೆಳಗಿನ ಎರಡೆರಡು ಮೆಟ್ಟಲುಗಳನ್ನು ಲೀಲಾಜಾಲವಾಗಿ ಏರುತ್ತ ಎದುರಾಗಿಯೇ ಬಿಟ್ಟ ಕಾರ್ತಿಕ್!!!…
‘ಓ….. ಹಲೋ….. ಆಗ್ಲೇ ರೆಡಿಯಾಗಿ ಹೊರಟುಬಿಟ್ರೀ…ಕ್ವೈಟ್ ಸ್ಮಾರ್ಟ್ ‘ -ಮುಗುಳ್ನಗೆ.
ಅವಳ ಮುಖದ ಬಿಗಿದ ಸ್ನಾಯುಗಳು ಸಡಿಲ-ತೀರ ಸಡಿಲವಾದವು. ಮಾಂಸ ಖಂಡಗಳು ಅರಳಿದವು. ತುಟಿಗಳು ಪಟಪಟನೆ ಅಲ್ಲಾಡಿದವು.
ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದರು. ಹತ್ತಿರದ ಬಸ್ ಸ್ಟಾಪಿನಲ್ಲಿ ಬಂದು ನಿಂತರು. ಇನ್ನೂ ಎರಡು ನಿಮಿಷವೂ ಆಗಿರಲಿಲ್ಲ. ಇಬ್ಬರೂ ಬಾಯಿ ಬಿಚ್ಚುವ ಮುನ್ನವೇ ಬಸ್ ಬಂತು. ಅವರು ಆಸ್ಪತ್ರೆ ಸೇರಿದಾಗ ಸುಭಾಷ್ ಯಾವುದೋ ಇಂಗ್ಲೀಷ್ ಕಥೆ ಪುಸ್ತಕ ಓದುತ್ತ ಕುಳಿತಿದ್ದ.
“ಹಾಯ್” ಗೆಳೆಯನನ್ನು ಕೈ ಹಿಡಿದು ಹಾಸಿಗೆ ಮೇಲೆಯೇ ಕೂಡಿಸಿಕೊಂಡ.
“ಬರ್ತೀನೋಮ್ಮ, ಆಫೀಸಿಗೆ ಹೊತ್ತಾಯ್ತು…. ಹೇಗಿದ್ದೀಯಾ? ಈಗೇನು ಹೊಟ್ಟೆನೋವು ಇಲ್ವಲ್ಲ” ಎಂದು ಕಾರ್ತಿಕ್ ದೊಡ್ಡದಾಗಿ ನಕ್ಕು “ನಿಂಗೆ ಚೇಸ್ ಪುಸ್ತಕ ಓದುತ್ತಿದ್ದರೆ ಯಾವ ಹೊಟ್ಟೆನೋವೂ ಇಲ್ಲ, ತಲೆನೋವೂ ಇಲ್ಲ ಅಲ್ವೇನೋ? ಕಳ್ಳಬಡ್ಡಿ ಮಗಂದದು ನಿನ್ನ ನೋವು. ನಿನ್ನ ಹಾಗೆ ಪೋಕ್ರಿ ಕಣೋ” ಎಂದು ಹೊರಟು ನಿಂತ.
“ಸೀ ಯೂ, ಸಂಜೆ ಆದ್ರೆ ಬರ್ತೀನಿ ಕಣೋಮ್ಮ” ಎಂದು ಹೊರಟವನಿಗೆ “ಲೇ ವಚನ್, ನವೀನ್, ಸಂತೋಷ ಒಬ್ರೂ ಪತ್ತೇನೇ ಇಲ್ವಲ್ಲೋ….. ಸಂಜೆ ಬರಕ್ಕೆ ಹೇಳೋ ಅವ್ರಿಗೆ….. ಇಲ್ಲಿ ಶುದ್ಧ ಬೋರು. ಕಾರ್ಡ್ಸ್‍ಗೆ ಕೈ ಹಚ್ಚಿ ಎಷ್ಟು ದಿನ ಆಯ್ತೋ” ಎಂದು ಸುಭಾಷ್ ನುಡಿದ.
“ರೈಟೋ” ಎಂದು ಕಾರ್ತಿಕ್ ಸ್ಮೃತಿಗೆ ಕಣ್ಣಿನಲ್ಲೇ ಹೋಗಿ ಬರುತ್ತೇನೆಂದು ಹೇಳಿ ಹೊರಬಿದ್ದ. ಅವನು ತನ್ನ ಕಣ್ಣಲ್ಲಿ ನೋಟ ಬೆರೆಸಿದಾಗ ಸ್ಮೃತಿಯ ಎದೆಯಲ್ಲಿ ಮಂಜುಗಡ್ಡೆಗಳನ್ನು ಸುರಿದ ಹಾಗಾಯಿತು. ಗಾಬರಿಯಿಂದ ಗಂಡನತ್ತ ತಿರುಗಿ ನೋಡಿದಳು. ಅವನಿಗೆ ಈ ಬಗ್ಗೆ ಗಮನವೇ ಇಲ್ಲ. ಅವನ ಕಣ್ಣು ಪುಸ್ತಕದಲ್ಲಿ ಮಗ್ನವಾಗಿತ್ತು. ಸ್ಮೃತಿಯಿಂದ ದೊಡ್ಡ ನಿಟ್ಟುಸಿರು ಹೊರಬಂದಿತು.
ಸ್ವಲ್ಪ ಹೊತ್ತು ಅವಳು ಪತ್ರಿಕೆಗಳನ್ನು ತಿರುವಿ ಹಾಕಿದಳು. ಈಸಿಚೇರಿನ ಮೇಲೆ ಕಣ್ಮುಚ್ಚಿ ಸ್ವಲ್ಪ ಹೊತ್ತು ಮಲಗಿ ಕಣ್ಬಿಟ್ಟಳು. ಸುಭಾಷ್ ಹಾಗೇ ಕುಳಿತಿದ್ದ. ಅವನಿಗೆ ಅವಳು ಅಲ್ಲಿ ಇರುವುದರ ಪರಿವೆಯೇ ಇಲ್ಲ. ಸ್ಮೃತಿ ಗಂಡನನ್ನೇ ದಿಟ್ಟಿಸಿ ನೋಡಿದಳು. ತನ್ನಲ್ಲಿ ನಡೆಯುತ್ತಿರುವ ಹಾಗೆ ಅವನ ಮುಖದ ಮೇಲೆ ಯೋಚನೆಯ ಒಂದು ತಂತು ಸಹ ಇಣುಕಿ ಹಾಕುತ್ತಿಲ್ಲ. ನಿಶ್ಚಿಂತ… ಇರುವ ಬುದ್ಧಿ ಮನಸ್ಸನ್ನೆಲ್ಲ ಹರವಾಗಿ ತೆರೆದು ಕತೆಪುಸ್ತಕದಲ್ಲಿ ಬರುವ ಪತ್ತೇದಾರನ ಸಾಹಸಕಾರ್ಯ ವೀಕ್ಷಣೆಗೇ ಧಾರೆ ಎರೆದಿದ್ದಾರೆ. ಎಳೆಬಾಲಕನಂತೆ ಅಘಟಿತ ಘಟನೆಗಳನ್ನೇ ಮೆಚ್ಚಿ ಆಸ್ವಾದಿಸುತ್ತ ಖುಷಿ ಪಡುತ್ತಾರೆ. ಮೈ ಮರೆಯುತ್ತಾರೆ.
‘ಛೆ..ಬಾಲಿಶ….. ತೀರ ಬಾಲಿಶ’ ಅಕ್ರೋಶದಿಂದ ತುಟಿ ಕಚ್ಚಿ ಎದ್ದು ನಿಂತಳು ಸ್ಮೃತಿ.
‘ನಾನಿಲ್ಲದ ಮನೆಯಲ್ಲಿ ವಾರದಿಂದ ನೀನು ಹೇಗೆ ಕಾಲ ಕಳೆಯುತ್ತಿದ್ದೀಯಾ?….. ಭಯವಾಗುವುದಿಲ್ಲವೇ? ರಾತ್ರಿ ಯಾರು ಮಲಗುತ್ತಾರೆ….. ಈ ಓಡಾಟ ತುಂಬ ತೊಂದ್ರೆಯಾಗ್ತಿದೆಯಲ್ವೇ?’ ಇತ್ಯಾದಿ ಇತ್ಯಾದಿಗಳ ಬಗ್ಗೆ ಒಂದೇ ಒಂದು ಮಾತು…ಉಹೂಂ… ನನ್ನ ಮನಸ್ಸು, ಮನೆ, ಸಂಸಾರವನ್ನು ಕುರಿತು ಒಂದು ಮಾತು ಕೇಳಿದ್ದಾರೆಯೇ? ಯಾವುದೂ ಬೇಡ….. ಹಾಗಿದ್ರೆ ಇಂಥವರಿಗ್ಯಾಕೆ ಮದುವೆ ಬೇಕಿತ್ತು?…… ಇನ್ನೊಬ್ಬರನ್ನು ಗೋಳಾಡಿಸೋದರಲ್ಲಿ ಏನು ಆನಂದ? ಎಂಬ ಪ್ರಶ್ನೆ ಹುಟ್ಟಿಸಿದ ಅವಳ ಕೋಪ-ಕಣ್ಣು, ಮೂಗು, ತುಟಿಗಳಿಂದ ಹೊರನುಗ್ಗಿತು. ಕೈಲಿದ್ದ ಪತ್ರಿಕೆಯನ್ನು ಶಬ್ದವಾಗುವಂತೆ ನೆಲಕ್ಕೆ ಬಿಸಾಡಿ ಧಡಾರನೆ ವಾರ್ಡಿನಿಂದ ಹೊರಬಂದು ಕಾರಿಡಾರಿನ ಕಂಬಕ್ಕೆ ಮುಖ ಒತ್ತಿನಿಂತಳು. ಕಣ್ಣಿನಿಂದ ಫಳಕ್ಕನೆ ನೀರು ಚಿಮ್ಮಿತು. ಬಿಕ್ಕಳಿಕೆ ಹೊರಬರದಂತೆ ಬಾಯಿಗೆ ಕರವಸ್ತ್ರ ಅದುಮಿಕೊಂಡಳು.
ಕಣ್ಣೀರ ತೆರೆ ತೆರೆಯಲ್ಲಿ ನೆನಪಿನ ತೆರೆ-ತೆರೆದುಕೊಂಡಿತು.
ಸ್ಮೃತಿ-ಸುಭಾಷರ ಮದುವೆಯಾಗಿ ಮೂರು ವರುಷಗಳ ಮೇಲಾಗಿತ್ತು. ಮದುವೆಯಾದ ತರುಣದಲ್ಲಿಯೇ ಸೂಕ್ಷ್ಮ ಸ್ವಭಾವದ ಅವಳಿಗೆ ಅವನ ಸ್ವಭಾವ ತಿಳಿದುಹೋಯಿತು. ಮದುವೆ ಮನೆಯಲ್ಲಿ ನೆರೆದ ಗೆಳತಿಯರೆಲ್ಲ “ನೀನು ಭಾಳ ಲಕ್ಕಿ ಕಣೆ….. ನಿಮ್ಮವರು ತುಂಬ ಜಾಲಿ ಫೆಲೋ….. ನಿಮಿಷಕ್ಕೊಂದು ಚಟಾಕಿ ಹಾರಿಸ್ತಾರೆ, ನಗಿಸ್ತಾರೆ….. ಅವರ ಜೊತೆ ಹೊತ್ತು ಹೋಗಿದ್ದೇ ತಿಳಿಯಲ್ಲ….. ಇನ್ನೇನು ನೀ ಅಮ್ಮನ ಮನೆಬಿಟ್ಟು ಹೋಗಕ್ಕೆ ಅಳಬೇಕಿಲ್ಲ” ಅಂತ ಅಂದಿದ್ರು. ಸ್ಮೃತಿಯ ಮೈ ಮನ ಹೂವಾಗಿತ್ತು. ‘ಹೋಗ್ರೇ ಸಾಕು’ ಎಂದು ಮುಗುಳ್ನಕ್ಕು ಅಲ್ಲಿಂದ ಹೊರಗೋಡಿದ್ದಳು.
ಅಂದು ಮದುವೆಯಾದ ನಾಲ್ಕನೆಯ ದಿನ. ಸುಭಾಷನ ಬೆಂಗಳೂರಿನ ಗೆಳೆಯರು ಹೋಟೆಲೊಂದರಲ್ಲಿ ನೂತನ ದಂಪತಿಗಳಿಗೆ ಪಾರ್ಟಿ ಇಟ್ಟುಕೊಂಡಿದ್ದರು. ಸ್ಮೃತಿ ಅತ್ಯಾಸಕ್ತಿಯಿಂದ ಅಲಂಕರಿಸಿಕೊಂಡು ಗಂಡನೊಡನೆ ಹೆಜ್ಜೆ ಹಾಕುವಾಗ ಅವನ ಮೆಚ್ಚುಗೆಯ ನೋಟ, ಮಾತಿಗಾಗಿ ಕಾದೇ ಕಾದಳು. ಸುಭಾಷ್ ತನ್ನ ಕಾಲೇಜು, ಕ್ರಿಕೆಟ್ ಗೆಳೆಯರ ಬಗ್ಗೆ ದೊಡ್ಡ ಭಾಷಣ ಕೊರೆಯತೊಡಗಿದ್ದ. ತನ್ನ ಎಲ್ಲ ಗೆಳೆಯರ ಹೆಸರುಗಳು, ಅವರ ರೀತಿನೀತಿ, ಮಾಡುತ್ತಿದ್ದ ಜೋಕುಗಳು ಪ್ರತಿಯೊಂದೂ ಬಿಡದೆ ಹೇಳುವಾಗ ‘ಸಾಕು ನಿಲ್ಲಿಸಿ’ ಎಂದು ಅರಚುವಂತಾಗಿತ್ತು ಅವಳಿಗೆ. ತಲೆ ಹಬೆಯ ಹಂಡೆಯಾಗಿತ್ತು. ‘ಥೂ, ಇದೆಲ್ಲಿ ಶುದ್ಧ ಬೋರು ಗಂಟು ಬಿತ್ತಪ್ಪ’ ಎಂದು ತನ್ನರಿವಿಲ್ಲದೆ ಗೊಣಗುಟ್ಟಿಕೊಂಡು ಕಾಲೆಳೆದಳು.
ಹೊಟೇಲ್ ತಲುಪುವವರೆಗೂ ಸುಭಾಷನೇ ಮಾತು ಬಿಚ್ಚುತ್ತ ಬಂದ. ತಾನು ನಿರೀಕ್ಷಿಸಿದ ಹಾಗೆ ಅವನಿಂದ ತನ್ನ ಬಗ್ಗೆ ಯಾವ ಕುತೂಹಲದ ಪ್ರಶ್ನೆಗಳೂ ಏಳದಿದ್ದಾಗ ಅವಳಲ್ಲಿ ಸಣ್ಣಗೆ ತಳಮಳದ ಕುದಿತ. ತನ್ನ ಬಗ್ಗೆ, ತನ್ನ ಗೆಳತಿಯರು, ಬಂಧುಗಳ ಬಗ್ಗೆ ಏನೂ ತಿಳಿದುಕೊಳ್ಳುವ ಆಸಕ್ತಿ ಇಲ್ಲವೇ? ಹೊಸ ಹೆಂಡತಿಯ ಬಗ್ಗೆ ಪರಿವೆಯೇ ಇಲ್ಲವಲ್ಲ ಈತನಿಗೆ ಎಂಬ ಆಲೋಚನೆಯ ಸುರುಳಿ ಕವುಚಿದಂತೆ ಅವಳ ಪಾರ್ಟಿಯ ಮೂಡ್ ಹಾಳಾಯಿತು.
ಪಾರ್ಟಿಯಲ್ಲಿ ಯಾರೊಡನೆ ನಿಂತರೂ ಮಾತಾಡಿದರೂ ಗಂಡನ ಸಂಪೂರ್ಣ ಗಮನ ತನ್ನ ಮೇಲೆಯೇ ಕೀಲಿಸಿರಬೇಕು ಎಂಬ ಬಯಕೆ ಹೆಡೆಯಾಡಿಸುತ್ತಿತ್ತು … ಕಣ್ಣಿನಿಂದ ಮುದ್ದಿಸುತ್ತಲೇ ತನ್ನನ್ನು ಎಲ್ಲರಿಗೂ ಪರಿಚಯಿಸುವ ವರಸೆ ನೆನೆದು ಕಲ್ಪನೆ ಗರಿಬಿಚ್ಚಿತ್ತು… ಪಕ್ಕದಲ್ಲಿ ಮೈತಾಗಿಸಿ ಕೂರುವ, ಗೆಳೆಯರ ಗುಂಪಿನಲ್ಲೂ ತನ್ನನ್ನೇ ಶೃಂಗಾರಮಯವಾಗಿ ದಿಟ್ಟಿಸುವ ಒಲವಿನ ಸನ್ನಿವೇಶಗಳ ಹಲವಾರು ರಸನಿಮಿಷ- ದೃಶ್ಯಗಳ ಕುರಿತು ಅವಳು ನೇಯ್ದಿದ್ದ ಕಲ್ಪನೆಗಳೆಲ್ಲ ಗುರುತು ಮೂಡಿಸದ ಹಾಗೆ ಹರಿದುಹೋದವು.
ಅನ್ಯಮನಸ್ಕಳಾಗಿ ಪಾರ್ಟಿ ಹಾಲಿನೊಳಗೆ ನಡೆದಳು. ನೂತನ ದಂಪತಿ ಒಳಬಂದಂತೆ ಗೆಳೆಯರ ಗುಂಪು ಅವರನ್ನು ನುಂಗಿ ಹಾಕಿತು. ಸುತ್ತಲೂ ಬರೀ ಗಂಡಸರೇ. ಚಿಗುರು ಮಿಸೆಯ, ಕುರುಚಲು ಗಡ್ಡದ, ಬೆಲ್‍ಬಾಟಂನ ಹುಡುಗರು. ಶಿಸ್ತಾಗಿ ಕ್ರಾಪು ಬಾಚಿದ ಗಂಭೀರ ಮುಖಗಳು ಒಂದೆರಡು ಮಾತ್ರ . ಸ್ಮೃತಿಗೆ ಮುಜುಗರ, ಚಡಪಡಿಕೆ…. ಸುತ್ತಲೂ ನೋಡಿದಳು.
“ ಶೀ ಈಸ್ ಸ್ಮೃತಿ … ಇವನು ದಿವೂ, ರಾಜೂ, ಸಂಕೇತ್, ಸೀನು, ಮಾನು” ಇನ್ನೂ ಉದ್ದನೆಯ ಪಟ್ಟಿ ಹೇಳುವುದರಲ್ಲೇ ಸುಭಾಷ್ ಮಗ್ನ. ಸ್ಮೃತಿ ನಾಚುತ್ತ ತಲೆ ತಗ್ಗಿಸಿ ನಿಂತಳು. ಸುಭಾಷ್ ಗುಂಪಿನೊಡನೆ ಕೈ ಕುಲಕುತ್ತ ಅವಳನ್ನು ಅಲ್ಲೇ ಬಿಟ್ಟು ಅಲ್ಲಲ್ಲಿ ಅವರಿವರೊಡನೆ ನಿಂತ, ಹರಟಿದ, ಕೇಕೆ ಹಾಕಿ ನಕ್ಕ.
ನಾಲ್ಕಾರು ಹುಡುಗರು ಬಂದು ಅವಳನ್ನು ಮಾತಾಡಿಸಿ, ‘ಬನ್ನಿ ತಿಂಡಿ ತೊಗೊಳ್ಳೋಣ’ ಎಂದು ಕರೆದರು. ಗುಂಪಿನಲ್ಲಿ ಹುದುಗಿ ಹೋಗಿದ್ದ ನೂತನ ಪತಿಗಾಗಿ ಅವಳು ಕಣ್ಣನ್ನು ಅತ್ತಿತ್ತ ಹೊರಳಿಸಿ, ಅವನ ಸುಳಿವುಗಾಣದೆ ನಿರಾಶಳಾಗಿ ಸಪ್ಪಗಾದಳು. ಅಷ್ಟರಲ್ಲಿ ಯಾರೋ ಹೋಗಿ ಸುಭಾಷನನ್ನು ಕರೆತಂದರು.
“ ಸ್ಮೃತಿ, ತೊಗೋ ನೀನು ಅವರ ಜೊತೆಯಲ್ಲೇ …ಬೀ ಫ್ರೀ.. ನಾನು ಮಾತ್ರ ಈ ವಿಷಯದಲ್ಲಿ ಮಹಾ ಸೋಷಿಯಲ್ಲು….. ನೀನು ನನ್ನ ಜೊತೆ ಹೇಗಿರ್ತೀಯೋ ನನ್ನ ಫ್ರೆಂಡ್ಸ್ ಜೊತೇನೂ ಹಾಗೇ ಇರು. ಐ ಡೋಂಟ್ ಮೈಂಡ್ …ಹೆಂಡ್ತಿ ಅಂದ್ರೆ ನನಗೆ ಮಾತ್ರ ಸೇರಿದ ವಸ್ತು ಅಂತ ಅಧಿಕಾರ ಚಲಾಯಿಸೋ ಜಮಾನವೆಲ್ಲ ಕಳೆದು ಹೋಯ್ತು; ಈಗಿನ ಕಾಲಕ್ಕೆ ತಕ್ಕ ಹಾಗೆ ಬ್ರಾಡ್ ಮೈಂಡಾಗಿರಬೇಕು. ಐ ಲೈಕ್ ಇಟ್..ಬೀ ಸೋಶಿಯಲ್ ಅಂಡ್ ಸ್ಮಾರ್ಟ್’ ಎನ್ನುತ್ತಾ, ಸುಭಾಷ್ ನಕ್ಕು ಗೆಳೆಯರ ಮಧ್ಯೆ ಸೇರಿಹೋದ.
ಗಂಡನ ರೀತಿ, ಮಾತುಕತೆ ಹಿಡಿಸದೆ ಮುಖ ಹಿಂಡಿದಳು ಮುಜುಗರದಿಂದ. ಆಚೀಚೆ ಮುಕ್ತವಾಗಿ ನಗುತ್ತ ಕುಳಿತ ಯುವಕರನ್ನು ನೋಡಿ ಮುದುರಿಕೊಂಡಳು. ಮನಸ್ಸು ಕೊತಕೊತ ಕುದಿಯುತ್ತಿತ್ತು. ಹೆಂಡತಿಯ ಬಗ್ಗೆ ಅವರ ಅಭಿಪ್ರಾಯ ಏನೇ ಇರಲಿ ಎಲ್ಲರೆದುರಿನಲ್ಲಿ ಹೀಗೆ ಸದರದ ಭಾವನೆಯನ್ನು ಅಭಿವ್ಯಕ್ತಿಸುವುದೇ? ನನ್ನ ಮನ ಬಯಸುತ್ತಿರುವಂತೆ ಅವರಿಗೂ ಹೊಸ ಹೆಂಡತಿಯ ಸಾಮೀಪ್ಯ ಬೇಕೆನಿಸುವುದಿಲ್ಲವೇ?…ಎಂಥ ವಿಚಿತ್ರ ಮನುಷ್ಯ?!!.. ಸ್ವಲ್ಪ ಹೊತ್ತೂ ಪಕ್ಕದಲ್ಲಿ ಬಂದು ಕೂರರಲ್ಲ ಎಂದು ಸಿಟ್ಟು ಮೂಡಿಬಂತು. ತಿಂದದ್ದೆಲ್ಲ ಗಂಟಲಲ್ಲೇ ಕೂತಂತಾಗಿ ಕೈತೊಳೆಯಲು ಮೇಲೆದ್ದು ಬಿಟ್ಟಳು. ಎದ್ದು ಹೋಗುವಾಗ ಅವಳ ಸೆರಗು ಕುರ್ಚಿಯ ಮೊಳೆಗೆ ಸಿಕ್ಕಿಹಾಕಿಕೊಂಡು ಮುಗ್ಗುರಿಸುವಂತಾಯಿತು. ಪಕ್ಕದಲ್ಲೇ ಇದ್ದ ನಗುಮೊಗದ ಅವನ ಗೆಳೆಯ ಅವಳ ರೆಟ್ಟೆಗೆ ಕೈಹಾಕಿ ಹಿಡಿದುಕೊಂಡ. ಅವನ ಇನ್ನೊಂದು ಕೈ ಸೊಂಟಕ್ಕೆ ಆಸರೆ ನೀಡಿತ್ತು. ಶಾಕ್ ಹೊಡೆದವಳಂತೆ ಅವಳು ರೊಯ್ಯನೆ, ಸೆರಗು ಬಿಡಿಸಿಕೊಂಡು, ಅನತಿ ದೂರದಲ್ಲಿ ಹರಟೆಯಲ್ಲಿ ಮೈಮರೆತಿದ್ದ ಗಂಡನೆಡೆಗೆ ಸಿಟ್ಟಿನ ದೃಷ್ಟಿ ತೂರಿದಳು. ತಿದಿ ಒತ್ತಿದ ಹಾಗೆ ಅವಳ ಮೂಗಿನಿಂದ ಉಸಿರು ಹೊರ ಹಾಯುತ್ತಿತ್ತು. ಸಹನೆಯ ಕಟ್ಟೆಯೊಡೆದು, ಸರಕ್ಕನೆ ವಾಶ್ ರೂಮಿಗೆ ನುಗ್ಗಿ ಬಿಕ್ಕಸಿದಳು.
‘ದೇವರೇ ಇಂಥವರ ಜೊತೆ ಮುಂಬಯಿಯಲ್ಲಿ ಹೇಗೆ ಸಂಸಾರ ಮಾಡಲಿ’ ಎಂದು ಮುಖ ಮುಚ್ಚಿಕೊಂಡಳು. ಅಂದೇ ಅವಳ ಕಲ್ಪನೆಯ, , ಹೆಂಡತಿಯ ಬಗ್ಗೆ ಅತೀವ ಆಸಕ್ತಿ ತಳೆವ, ಪ್ರೀತಿಯಲ್ಲಿ ಹಿಗ್ಗುವ ಜೊತೆಗಾತಿಯನ್ನು ಅರಳಿಸುವ ರಸಿಕ ಪತಿಯ ಚಿತ್ರ ಹರಿದು ಚೂರು ಚೂರಾಯಿತು.
ಅವನೊಡನೆ ಸಂಸಾರ ಹೂಡಿದ ಪ್ರತಿದಿನಗಳಲ್ಲೂ ಅವನ ವ್ಯಕ್ತಿತ್ವ ಮತ್ತಷ್ಟು ಸ್ಪಷ್ಟ ಸ್ಪಷ್ಟ. ಸುಭಾಷನಿಗೆ ಮನಸ್ಸು ಬಂದರೆ ಹೆಂಡತಿಯನ್ನು ಅಪ್ಪಿ ಕುಣಿಯುತ್ತಾನೆ. ಮುಂಬಯಿಯ ಪ್ರತಿ ಹೊಟೇಲಿನಲ್ಲಿಯೂ, ಪಾರ್ಕಿನಲ್ಲೂ, ಸಮುದ್ರದ ತಡಿಯಲ್ಲೂ ಅಲೆದಾಡುತ್ತಾನೆ. ತನಗೆ ಅವಳ ಬಗ್ಗೆ ಇರುವ ಪ್ರೇಮವನ್ನು ಅನಿಸಿದಂತೆ ಹೇಳಿಬಿಡುವ, ತೋರಿಸಿಬಿಡುವ ಪ್ರವೃತ್ತಿ… ಲಲ್ಲೆ ಮಾತಿಲ್ಲದೆ ಅಪ್ಪಿ ಬಿಡುತ್ತಾನೆ. ಪ್ರೀತಿಯ ಮಳೆಗರೆಯುತ್ತಾನೆ. ತನಗೆ ಮನಸ್ಸಿಗೆ ಬಂದುದನ್ನೆಲ್ಲ ಖರೀದಿಸಿ ಅವಳಿಗೆ ಉಡುಗೊರೆಯಾಗಿ ನೀಡಿ ಸಂತೋಷಪಡುತ್ತಾನೆ. ಆದರೆ ಒಂದು ದಿನವಾದರೂ ಹೆಂಡತಿಯನ್ನು ‘ನನ್ನ ಕಂಡ್ರೆ ನಿಂಗೇನನ್ನಿಸುತ್ತೆ? ನಿನ್ನ ಭಾವನೆಗಳೇನು?’ ಎಂದು ಅವಳ ಮನಸ್ಸನ್ನು ಮಾತನಾಡಿಸಿದವನೇ ಅಲ್ಲ. ಇದನ್ನು ನೆನೆದಾಗ, ತನಗೆ ಹುಚ್ಚು ಹಿಡಿಯುವ ದಿನ ದೂರವಿಲ್ಲ ಎಂದವಳಿಗೆ ಅನಿಸುತ್ತದೆ.
ಅಪ್ಪಿ-ಮುದ್ದಿಸುವ ಪತಿಯಿದ್ದರೂ ಮನಸ್ಸಿಗೇನೋ ಖಾಲಿ ಖಾಲಿಯ ಅನುಭವ. ಏನೋ ಅರೆಕೊರೆ..ಅವ್ಯಕ್ತ ಭಾವನೆಗಳು ತಳಮಳಿಸಿ ಹೊರಳುತ್ತವೆ. ತನಗೂ ಅವರ ಬಗ್ಗೆ ಇರುವ ಒಲವನ್ನು ಅನೇಕ ಹೋಲಿಕೆ, ವರ್ಣನೆಗಳಲ್ಲಿ ಉಸಿರಬೇಕೆನಿಸುತ್ತದೆ. ತನ್ನ ರಸಿಕತೆಯ ಸ್ವರಕ್ಕೆ ಪ್ರತಿಧ್ವನಿ ಬೇಕೆನಿಸುತ್ತದೆ. ಅವರ ಮುಖವನ್ನು ಹಿಡಿದು ಮುದ್ದಿಸಬೇಕೆನಿಸುತ್ತದೆ. ಅನೇಕ ರೀತಿಯಲ್ಲಿ ತನ್ನ ಒಳಗನ್ನು ಬಯಲಾಗಿಸಬೇಕೆನಿಸುತ್ತದೆ. ಆದರೆ ಅವುಗಳೆಲ್ಲ ಬರೀ ಅನಿಸಿಕೆಗಳಾಗಿಯೇ ಕೂತಿವೆ. ಅವುಗಳಿಗೆ ಮುಹೂರ್ತವೇ ಕೂಡಿಬಂದಿಲ್ಲವೆಂದು ಚಿಂತಿಸಿದಾಗ ಅವಳ ಹೃದಯ ಧಗಧಗಿಸುತ್ತದೆ.
ದಿನಗಳೆದಂತೆ, ಗಂಡನಿಗೆ ತನ್ನ ಹೃದಯದ ಹೊಯ್ದಾಟ, ಭಾವನೆಗಳ ಭರತದ ಬಗ್ಗೆ ಅರಿವು- ಕಾಳಜಿಗಳೇ ಇಲ್ಲ ಎಂಬ ತೀವ್ರತೆಯ ಬಿಸಿ ತಟ್ಟಿದಾಗ ಅವಳಿಗೆ, ತನ್ನ ಇರುವಿಕೆಗೇನು ಬೆಲೆ ಎಂದೂ ಅನಿಸಿದ್ದಿದೆ. ತನ್ನ ಭೌತಿಕ ಕಾಮನೆಗಳಿಗಿಂತ ಅಂತರಂಗದ ತುಡಿತಗಳ ಧ್ವನಿಗಳೇ ಪ್ರಧಾನವಾಗಿ ಹುಯ್ಲಿಡುತ್ತವೆ. ಅದರ ಹಸಿವು ಇಂಗಿಸಲಾರದೆ, ಅದಕ್ಕೆ ಹೊರತೂಬು ಕಾಣಿಸಲಾರದೆ ಏದುಸಿರಿನ ಕಟ್ಟುಗಳನ್ನು ಬಿಚ್ಚುತ್ತಾಳೆ.
ಅವನ ಚಂಚಲ ಸ್ವಭಾವದ ಬಾಲಿಶ ನಡವಳಿಕೆಗಳೊಂದೂ ಅವಳಿಗರ್ಥವಾಗದು. ತನ್ನ ಮನಸ್ಸಿಗೆ ಬಂದಂತೆ ವರ್ತಿಸುವ ಸುಭಾಷನಿಗೆ ತಕ್ಕುದಾಗಿ ತಾನೆಷ್ಟೇ ರೂಪುಗೊಳ್ಳುತ್ತ ಹೋದರೂ ಅಪೂರ್ಣ, ಅನರ್ಥ ಎಂಬ ಅತೃಪ್ತಿಯ ನೊರೆ ಹೊರಧುಮ್ಮಿಕ್ಕಿ ಕಾಡುತ್ತದೆ. ಸೂಕ್ಷ್ಮದ ನೆಲೆಯಲ್ಲೇ ಸಂಚರಿಸಿ ಗೊತ್ತಿರದ ಅವನ ವ್ಯಕ್ತಿತ್ವವೇ ಅವಳಿಗೊಂದು ಸವಾಲು. ಭಾವನೆಗಳೇ ಇಲ್ಲದ, ಬಂದರೂ ಅವು ಗಟ್ಟಿಯಾಗಿರದ, ಜೀವನವನ್ನು ಕುರಿತು ಗಂಭೀರವಾಗಿ ಆಲೋಚಿಸದ, ಇನ್ನೊಂದು ಜೀವಿಯ ಮನೋವ್ಯಾಪಾರಗಳನ್ನು ಗಮನಿಸುವ ಗೋಜಿಗೆ ಹೋಗದ ಅವನು, ಯಾವುದನ್ನೂ ಆಳವಾಗಿ ಪರಿಭಾವಿಸದ ವ್ಯಕ್ತಿ ಎಂಬುದು ಸ್ಪಷ್ಟವಾಗುತ್ತ ಹೋದ ಹಾಗೆ ಅವಳು ಉಬ್ಬೆಯಲ್ಲಿ ಬೆಂದವಳಂತೆ ಹೊಯ್ದಾಡುತ್ತಾಳೆ. ಮುಜುಗರದ ಬಾಧೆಯಿಂದ ಅವಳದೆಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಮನಸ್ಸನ್ನು ಹೊಸಕಿ ಬಿಟ್ಟಿದ್ದಾಳೆ.
ಹೀಗೆಯೇ ಅವಳು ಯಾಂತ್ರಿಕವಾಗಿ ನಿರಾಸಕ್ತಿಯಿಂದ ಮೂರು ವರುಷಗಳನ್ನು ತಳ್ಳಿದ್ದು ಮೂರು ಯುಗಗಳಂತೆ ಕಂಡಿತ್ತು. ತನ್ನ ನೋವು ಶಮನ ಮಾಡಲಾದರೂ ತನ್ನ ಒಡಲೊಳಗೆ ಪುಟ್ಟಜೀವವೊಂದು ಉದಯಿಸದಿದ್ದುದು ಅವಳೆದೆಗೆ ಭಾರಿ ಸಿಡಿಲು. ಗಂಡನ ಮೇಲಿನ ಕೋಪ ಪರ್ವತವಾಗುತ್ತದೆ. ಮರುಕ್ಷಣವೇ ತನ್ನ ಅಸಹಾಯಕತೆಗೆ ದಾರಿಗಾಣದೆ ನಿಟ್ಟುಸಿರುಗರೆದು ಸುಮ್ಮನಾಗುತ್ತಾಳೆ.
ಈ ಮಧ್ಯೆಯೇ ಆಗಾಗ ಹೊಟ್ಟೆನೋವು ಅನ್ನುತ್ತಿದ್ದ ಸುಭಾಷ್, ಅವಳ ಒತ್ತಾಯಕ್ಕೆ ಮಣಿದು ಈ ಸಲ ಡಾಕ್ಟರಿಗೆ ತೋರಿಸಿದ್ದು. ಅವರು ಆಸ್ಪತ್ರೆಗೆ ಅಡ್ಮಿಟ್ಟಾಗಲು ಹೇಳಿದ್ದು. ಮೊದಲೇ ಕಳವಳಿಸಿದ್ದ ಅವಳ ಅಂತರಂಗ ಇದರಿಂದ ಮತ್ತಷ್ಟು ನಾದಿ ಹೋಯಿತು.
ಎಕ್ಸರೇ ರಿಸಲ್ಟ್ ಬಂತು. ಆಲ್ಸರ್ ವಿಪರೀತವಾಗಿದೆ, ಆಪರೇಷನ್ ಮಾಡಲೇಬೇಕು ಎಂದರು ಡಾಕ್ಟರ್. ಅಳಲುಪಕ್ರಮಿಸಿದ ಅವಳನ್ನು ಕಂಡೂ ಅವನು ಶಾಂತವಾಗಿಯೇ ಇದ್ದ. ಸಮಾಧಾನ ಹೇಳುವ ಗೋಜಿಗೆ ಹೋಗಲಿಲ್ಲ. ಏನೂ ಆಗಿಲ್ಲವೆಂಬಂತೆ, ದುಃಖಿತ ಹೆಂಡತಿಯನ್ನು ತಲೆ ಎತ್ತಿಯೂ ನೋಡದೆ, ಮುಖದಲ್ಲಿ ಯಾವ ಭಾವಗಳ ನೆರಿಗೆಯೂ ಚಿಮ್ಮಿಸದವನು ಕೈಲಿದ್ದ ಪುಸ್ತಕದೊಳಗೆ ಕಳೆದುಹೋಗಿದ್ದ.
ಇದೀಗ ಅವಳ ಅಳು ಉಮ್ಮಳಿಸಿತು. ತನ್ನ ಆರೋಗ್ಯದ ಬಗ್ಗೆ ಚಿಂತಿಸದ, ಹೆಂಡತಿಯ ಮನದೊಳಗಿನ ತೂಫ್ಹಾನನ್ನು ಲೆಕ್ಕಿಸದ ಅವನು ನಿರಾಳವಾಗಿಯೇ ಅವಳ ಕಣ್ಣುಗಳಿಗೆ ಕಂಡ.
‘ಆಪರೇಷನ್ ಆಗಲಿ, ಸರಿಯಾದ್ರೆ ಉಳಿತೀನಿ, ಇಲ್ಲದಿದ್ರೆ ಇಲ್ಲ’ ಎಂದು ಲಘುವಾಗಿ ನುಡಿದವನನ್ನು ನುಂಗುವಂತೆ ನೋಡಿದಳು ಸ್ಮೃತಿ. ಅವನ ಬೇಜವಾಬ್ದಾರಿ ವ್ಯಕ್ತಿತ್ವ ಕಂಡು ಅವಳ ಮನಸ್ಸು ಮತ್ತಷ್ಟು ಕುದ್ದುಹೋಯ್ತು. ಮನ ವಿಕ್ಷಿಪ್ತಗೊಂಡಿತು. ಅವನಿಗೆ ಬೇಕಾದಾಗ ಅವನ ಬಯಕೆಗಳನ್ನು ಪೂರೈಸಲು ಅವನ ಒಲವನ್ನು ಸ್ವೀಕರಿಸಲು ತಾನು ಸಿದ್ಧವಾಗಿ ಬೊಗಸೆಗೈ ಚಾಚಿರಬೇಕು. ಉಳಿದ ವೇಳೆಯಲ್ಲಿ ತನಗೂ ಅವಳಿಗೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುವ ಅವನ ಸಿನಿಕ ವರ್ತನೆ ಕಂಡಾಗ ಅವಳಿಗೆ ತಾನು ಅವನ ಜೊತೆ ಇದ್ದೂ ಇಲ್ಲದ ಹಾಗನಿಸುತ್ತದೆ.
ಮುಖ ಒದ್ದೆಯಾದಾಗಲೇ ಸ್ಮೃತಿಗೆ ತನ್ನ ಬಟ್ಟೆಯೆಲ್ಲ ನೆನೆದಿದೆ ಎಂಬ ಅರಿವು ಮೂಡಿದ್ದು. ಜುಲೈ ತಿಂಗಳ ಮಳೆ ಪ್ರಚಂಡವಾಗಿ ರಾಚುತ್ತಿತ್ತು. ಎದ್ದುನಿಂತು ಸೀರೆಯ ಅಂಚನ್ನು ಹಿಂಡಿಕೊಂಡು ಒಳಬಂದಳು. ಮಳೆ ಶುರುವಾಗಿ ಎಷ್ಟೋ ಹೊತ್ತಾಗಿತ್ತು. ನಿಲ್ಲುವ ಸೂಚನೆಯೇ ಕಾಣಲಿಲ್ಲ. ಜಡೆಯನ್ನು ಬಿಚ್ಚಿ, ಟವೆಲ್ಲಿನಿಂದ ಕೂದಲನ್ನು ಒರೆಸಿಕೊಂಡು ಮಲಗಿದ್ದ ಗಂಡನತ್ತ ನಿರಾಸಕ್ತಿಯ ನೋಟವನ್ನೆರಚಿ, ಕೈ ಗಡಿಯಾರ ನೋಡಿಕೊಂಡಳು. ನಾಲ್ಕೂವರೆ. ಫ್ಲಾಸ್ಕಿನಿಂದ ಅವನಿಗೆ ಕಾಫಿ ಬಗ್ಗಿಸಿಕೊಟ್ಟು ತಾನೂ ಕುಡಿದಳು. ಸುಭಾಷನಿಗೆ ಇಷ್ಟು ಹೊತ್ತೂ ಸ್ಮೃತಿ ಏನು ಮಾಡುತ್ತಿದ್ದಳು, ಮಳೆ ಹೊಡೆಯುತ್ತಿರುವ ಬಗ್ಗೆ, ಅವಳು ನೆನೆದದ್ದೂ ಒಂದು ತಿಳಿಯದು. ದಿಂಬಿನಡಿಯಿಂದ ಟ್ರಾನ್ಸಿಸ್ಟರ್ ತೆಗೆದು ಅದಕ್ಕೆ ಕಿವಿ ಹಚ್ಚಿದ. ಹೈದರಾಬಾದಿನಲ್ಲಿ ನಡೆಯುತ್ತಿರುವ ಕ್ರಿಕೆಟ್ ಮ್ಯಾಚಿನ ಕಾಮೆಂಟರಿ ಕೇಳುತ್ತ, ಅವಳು ಕೇಳಲಿ ಬಿಡಲಿ ಅದರ ಸ್ಕೋರನ್ನು ಹೇಳಿದ.
‘ವಾರೆವ್ಹಾ….. ಅಯ್ಯೋ’ ಎಂದು ಗುನುಗುಟ್ಟುತ್ತಿದ್ದ ಮಧ್ಯೆ ಮಧ್ಯೆ. ಇದಕ್ಕಿದ್ದ ಹಾಗೆ ಅವಳಿಗೆ ಅವನ ಬಗ್ಗೆ ಕರುಣೆ ಹುಟ್ಟಿಬಂತು. ಮರುಕದ ನೋಟದಿಂದ ಅವನನ್ನು ಸವರಿ ವಾರ್ಡಿನಿಂದ ಹೊರಗೆದ್ದು ಬಂದಳು.
ಸಂಜೆ- ಮಳೆ ತುಂತುರಾದಾಗ ಸುಭಾಷನ ಗೆಳೆಯರು ವಚನ್, ನವೀನ್ ಒಳನುಗ್ಗಿದರು.
“ಹೇಗಿದ್ದೀಯಯ್ಯಾ?…..”… ಸುಭಾಷನ ಮುಖದಲ್ಲಿ ಸಂತಸ ಹೊಳೆಯಾಯಿತು. ಲವಲವಿಕೆಯಿಂದ ಎದ್ದು ಕೂತು ಮ್ಯಾಚಿನ ಬಗ್ಗೆ ಒಂದಿಷ್ಟು ಕೊರೆದು “ಬನ್ರೋಮ್ಮ ಬೋರು, ಸ್ವಲ್ಪ ಹೊತ್ತು ಕಾರ್ಡ್ಸ್ ಆಡೋಣ” ಎಂದ.
“ಇಲ್ಲಪ್ಪ ಹೊತ್ತಾಯ್ತು. ಭಾನುವಾರ ಫ್ರೀಯಾಗಿ ಬರ್ತೀವಿ” ಎಂದು ಮೇಲೆದ್ದ ವಚನ್.
“ನಾನೂ ಬರ್ತೀನ್ರೀ ಕತ್ಲಾಯ್ತು’ ಎಂದು ಸ್ಮೃತಿ ಗಂಡನಿಗೆ ತಿಳಿಸಿ ಅವಳು ಹೊರಡಲು ಅಣಿಯಾದಾಗ, ವಚನ್ – “ಹೇಗೆ ಹೊರಡ್ತೀರಿ ನೀವು ?” ಎಂದು ಕೇಳಿದ.
” ಬೈ ಟ್ರೈನ್ ‘’ ಎಂದು ಸ್ಮೃತಿ ಎದ್ದು ನಿಂತಳು. “ಅಯ್ಯೋ ಇವತ್ತೇನು ಕಡಿಮೆ ಮಳೆ ಹುಯ್ದದ್ದು ಅಂದ್ಕೊಂಡ್ರಾ?….. ಭಾರಿ ಮಳೆ ಕೊಚ್ಚಿದೆ. ಈ ನೂರು ವರುಷಗಳಿಂದಲೂ ಇಲ್ಲ. ಆಗ್ಲೇ ರೇಡಿಯೋನಲ್ಲೇ ಅನೌನ್ಸ್ ಆಯ್ತು. ರೈಲ್ವೇ ಟ್ರಾಕ್ ಮೇಲೆ ನೀರು ನಿಂತು ಲೋಕಲ್ ಟ್ರೈನ್ಸೆಲ್ಲ ನಿಂತ್ಹೋಗಿದೆ….. ವಾಟರ್ ಕ್ಲಿಯರ್ ಆಗಕ್ಕೆ ಮಿನಿಮಮ್ ಥ್ರೀ ಡೇಸ್ ಬೇಕು”
ವಚನನ ಮಾತು ಕೇಳಿ ಒಂದು ನಿಮಿಷ ಗಾಬರಿಗೊಂಡರೂ ಅವಳು “ಪರ್ವಾಗಿಲ್ಲ ಬಸ್ನಲ್ಲಿ ಹೋಗ್ತೀನಿ” ಎಂದಾಗ ಸುಭಾಷ್, “ವಚನನ ಮೋಟಾರ್ ಬೈಕ್‍ನಲ್ಲೇ ಹೋಗು. ಹೇಗಿದ್ರೂ ಅವನು ಸೈಯಾನ್‍ಗೆ ಹೋಗೋನು. ನಿನ್ನ ಬಿಟ್ಟು ಮುಂದೆ ಹೋಗ್ತಾನೆ” ಅಂದ.
“ಹೌದು ಬಸ್ ಕಾದು ಹೋಗೋದು ಸುಮ್ನೆ ತೊಂದ್ರೆ. ಬನ್ನಿ ಡ್ರಾಪ್ ಮಾಡ್ರೀನಿ” -ಎಂದ ವಚನ್.
‘ನಿಮಗ್ಯಾಕೆ ಇಲ್ಲದ ತಲೆಹರಟೆ’ ಎಂಬಂತೆ ಗಂಡನೆಡೆ ನೋಟ ಚುಚ್ಚಿ ಸ್ಮೃತಿ, “ಸ್ಸರಿ” ಎಂದು ಧಡಾರನೆ ಮೇಲೆದ್ದು ವೇಗವಾಗಿ ವಾರ್ಡಿನಿಂದ ಹೊರನಡೆದಳು ಸುಭಾಷನಿಗೆ ‘ಬರ್ತೀನಿ’ ಎಂದು ಸಹ ಹೇಳದೆ.
ಎಂದೂ ಮೋಟರೂ ಬೈಕ್‍ನಲ್ಲಿ ಕೂಡದ ಅವಳು, ಹಿಡಿತ ತಪ್ಪಿ ಜಾರುವಂತಾದಾಗ ವಚನನ ಭುಜ ಬಳಸಿದಾಗ ಅವಳಿಗೆ ಗಂಡನ ಮೇಲೆ ಸಿಟ್ಟೇರುತ್ತಿತ್ತು. ಹಿಂದೊಮ್ಮೆಯೂ ಹೀಗೆಯೇ ಯಾರ ಜೊತೆಯೋ ಸ್ಕೂಟರ್‍ನಲ್ಲಿ ಒತ್ತಾಯ ಮಾಡಿ ಕಳಿಸಿದ್ದು ನೆನಪಾಗಿ “ಯೂಸ್‍ಲೆಸ್ ಫೆಲೋ” ಎಂದು ಗೊಣಗುಟ್ಟಿಕೊಂಡಳು.
ಮಳೆಯ ಹನಿ ಬಿರುಸುದಾಗ ವಚನನ ಬೆನ್ನು ತನ್ನ ಸೊಂಟಕ್ಕೆ ಆಂಟಿಕೊಂಡಿದೆ ಎನಿಸಿದಾಗ ಮೈಯನ್ನು ಬಿಗಿಮಾಡಿಕೊಂಡಳು. ವಚನನಿಗೆ ಅವಳ ಏದುಸಿರು, ಮೈ ಕಿವುಚಿಕೊಂಡಿದ್ದು ಅರಿವಾಗಿರಬೇಕು. “ಏನು?” ಎಂದ ಕೇಳಿದ. ಸ್ಮೃತಿ ತಲೆಯಾಡಿಸಿದಳು.
ದಾದರ್ ಸಮೀಪಿಸುತ್ತಿರುವಾಗ ಪಟಪಟನೆ ಹನಿ ವೇಗವಾಯಿತು. ವಚನ್ ಪಕ್ಕದ ರೋಡಿಗೆ ಬೈಕನ್ನು ತಿರುಗಿಸಿ ಹೋಟೇಲೊಂದರ ಮುಂದೆ ನಿಲ್ಲಿಸಿದ. ಇಬ್ಬರೂ ಸ್ಪೆಷಲ್ ರೂಂನಲ್ಲಿ ಕುಳಿತರು. ವಚನನ ಮುಖ ನೋಡಿ ಮಾತಾಡಲು ಅವಳಿಗಾಗಲಿಲ್ಲ. ಸಂಕೋಚ ಮುತ್ತಿತು. ಏನು ಮಾತಾಡಬೇಕೆಂದು ಇಬ್ಬರಿಗೂ ತಿಳಿಯಲಿಲ್ಲ. ಸುಭಾಷನ ಆರೋಗ್ಯದ ಬಗ್ಗೆ ಮಾತು ಶುರುಮಾಡಿದ ವಚನ್. ಮುಂದೆ ಸಿನಿಮಾ, ಹವ್ಯಾಸ ಇತ್ಯಾದಿಗಳ ಬಗ್ಗೆ ಅವನು ಮಾತು ನೇಯುತ್ತಿದ್ದಂತೆ ಅವಳಿಗೂ ಸ್ವಲ್ಪ ಚಳಿ ಬಿಟ್ಟಿತ್ತು. ಬಾಗಿದ್ದ ತಲೆಯನ್ನೆತ್ತಿ ಅವನ ಕಣ್ಣುಗಳನ್ನೇ ದಿಟ್ಟಿಸಿ ಉತ್ತರಿಸುವಾಗ ಅವಳಲ್ಲಿದ್ದ ಅಂಜಿಕೆ ಮೆಲ್ಲಮೆಲ್ಲನೆ ಹಿಂದಕ್ಕೆ ಕಾಲ್ತೆಗೆಯಿತು.
“ನೀವು ಮನೆಗೆ ಹೋಗಿ ಇನ್ನೂ ಅಡಿಗೆ ಮಾಡಿಕೊಂಡು ಊಟ ಮಾಡೋದು ಯಾವಾಗ?….. ಇಲ್ಲೇ ಮಾಡೋಣ. ನಿಮ್ದೇನೂ ಅಡ್ಡಿ ಇಲ್ಲ ತಾನೇ” ಎಂದು ಅವನು ಬಾಯಿ ಅರಳಿಸಿದಾಗ ಸ್ಮೃತಿ ಹೂನಗೆ ನಕ್ಕಳು.
ಊಟ ಮಾಡಿ ಅವರು ಹೊರಬರುವಷ್ಟರಲ್ಲಿ ಆಕಾಶ ತಿಳಿಯಾಗಿತ್ತು. ಫ್ಲಾಸ್ಕನ್ನು ಭುಜಕ್ಕೆ ತೂಗು ಹಾಕಿಕೊಂಡು ವಚನನ ಹಿಂದೆ ಕುಳಿತಾಗ ಮೊದಲಿನ ಹಿಂಜರಿತ ಕಾಡಲಿಲ್ಲ.
ಮರುದಿನ- ಅವನು ಡ್ರಾಪ್ ಕೊಡುವೆನೆಂದಾಗ ಅವಳು ಇಲ್ಲವೆನ್ನಲಾಗಲಿಲ್ಲ. ‘ಓ.ಕೆ.’ ಎಂದು ತಲೆಯಾಡಿಸಿ ಹೊರಟಿದ್ದಳು.
ಅಂದು ಶನಿವಾರ. ಮಧ್ಯಾಹ್ನವೇ ಆಸ್ಪತ್ರೆಗೆ ಬಂದ ವಚನ್. ಬಂದ ಸ್ವಲ್ಪ ಹೊತ್ತಿಗೆಲ್ಲ ಅವನು ಹೊರಡಲು ಎದ್ದಾಗ “ಸ್ಮೃತಿ ನೀನು ಮನೆಗೆ ಹೋಗೋ ಹಾಗಿದ್ರೆ ಇವನ ಜೊತೆ ಹೋಗು. ಸುಮ್ನೆ ಇಲ್ಲಿ ಕೂತು ಏನ್ಮಾಡ್ತೀ, ನಾನು ಮಲಗಿ ಸೊಗಸಾದ ನಿದ್ದೆ ತೆಗೀತೀನಿ” ಎಂದು ಸುಭಾಷ್ ಪಕ್ಕಕ್ಕೆ ಹೊರಳಿ ಮೈಮೇಲೆ ರಗ್ ಎಳೆದುಕೊಂಡ.
ವಚನ್ ಬೈಕನ್ನು ಸ್ಟಾರ್ಟ್ ಮಾಡಿದ. ಬೈಕ್ ವಿಕ್ಟೋರಿಯಾ ಟರ್ಮಿನಸ್ ಕಡೆ ತಿರುಗಿದಾಗ ಸ್ಮೃತಿ ಅವನ ಭುಜ ಅದುಮಿ “ಇದೇನು ದಾರಿ ಮರೆತ್ರಾ?” ಎಂದು ಕೇಳಿದಳು ಮೃದುವಾಗಿ.
“ನೋ ನೋ….. ಇವತ್ತು ಅಪರೂಪಕ್ಕೆ ಒಂದು ಕನ್ನಡ ಫಿಲ್ಮ್ ಬಂದಿದೆ. ಅದನ್ನು ನಿಮಗೆ ತೋರಿಸೋಣಾಂತ. ಆಮೇಲೆ ನಂಗೆ ಚೌಪಾತಿಯಲ್ಲಿ ಭೇಲ್‍ಪುರಿ ತಿನ್ಬೇಕೂಂತ ಆಸೆಯಾಗಿದೆ. ದಯವಿಟ್ಟು ನೀವು ಕಂಪೆನಿ ಕೊಡ್ಬೇಕು. ಇಲ್ಲ ಅನ್ಬಾರ್ದು” – ಅವನು ನಿರೀಕ್ಷಿಸಿದಂತೆ ಹಿಂದಿನಿಂದ ಯಾವ ಅಸಮ್ಮತಿಯ ದನಿಯೂ ಹೊರಡಲಿಲ್ಲ. ವಚನ ಖುಷಿಯಾಗಿ ಬೈಕಿನ ಆಕ್ಸಿಲರೇಟರ್ ತಿರುಗಿಸಿದ.
ಟಾಕೀಸಿನ ಹೊರಗೆ ಹಾಕಿದ್ದ ಪೋಸ್ಟರುಗಳ ಕಡೆ ಕಣ್ಣು ಹಾಯಿಸಿದಳು ಸ್ಮೃತಿ. ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಕೆಲವು ಸನ್ನಿವೇಶಗಳಲ್ಲಿ ಅವಳಿಗೆ ಕೂರಲಾಗದೆ ಹೊರಗಾದರೂ ಎದ್ದು ಹೋಗೋಣವೆಂದೆನಿಸಿ ಚಡಪಡಿಸಿದಳು. ಅವಳ ಚಡಪಡಿಕೆ ಕಂಡು ‘ಯಾಕೆ….. ಏನಾಯ್ತು?” ಎಂದು ವಚನ್ ಮೆಲ್ಲನೆ ಅವಳ ತೋಳು ಒತ್ತಿ ಪ್ರಶ್ನಿಸಿದ. ಸ್ಮೃತಿ ಸಾವರಿಸಿಕೊಂಡು “ನಥಿಂಗ್ ” ಎಂದು ಚಿತ್ರದಲ್ಲಿ ಆಸಕ್ತಳಂತೆ ನಟಿಸಿದಳು. ಚಿತ್ರ ಮುಗಿಯುವವರೆಗೂ ಅವನ ಕೈ ತನ್ನ ತೋಳನ್ನು ಸುತ್ತಿಕೊಂಡಿದ್ದರೂ ಅವಳು ಬಿಡಿಸಿಕೊಳ್ಳಲಿಲ್ಲ. ಅವನ ಮೊದಲ ಬಿಸಿಸ್ಪರ್ಶ ಅವಳ ಮೈ ತುಂಬ “ಝುಂ” ಎಂಬ ಪುಳಕ ತರಂಗ ಹಬ್ಬಿಸಿ ನರಗಳನ್ನು ಮೀಟುತ್ತಿರುವಂತಾಯಿತು. ಸುಭಾಷನ ತೋಳ ಬಿಗಿತದಲ್ಲಿ ಇಲ್ಲದ ಹಿಡಿತ, ಸುಖದ ಜೊಂಪು…. ತಾನೆಂದೂ ಅನುಭವಿಸಿರದಂಥ ಹೊಸ ಮಿಡಿತ!!!.
ಚೌಪಾತಿಯಲ್ಲಿ ಭೇಲ್‍ಪುರಿ ತಿಂದು ಅವರಿಬ್ಬರೂ ಸ್ವಲ್ಪ ಹೊತ್ತು ಸಮುದ್ರದ ಅಲೆಗಳತ್ತ ಮುಖ ಮಾಡಿ ಕುಳಿತಿದ್ದರು. ಅಲ್ಲಿಂದ ಹೊರಟಾಗ ಇಬ್ಬರ ಮನಸ್ಸೂ ಬೆಚ್ಚಗಾಗಿತ್ತು. ಮನೆ ಹತ್ತಿರ ಸ್ಮೃತಿ ಇಳಿದಾಗ, ವಚನ್- “ನಾಳೆ ನಮ್ಮನೆಗೆ ನೀವು ಖಂಡಿತ ಬರ್ಲೇಬೇಕು” ಎಂದು ಒತ್ತಾಯದ ಆಹ್ವಾನ ನೀಡಿದ.
ಮರುದಿನ ವಚನ್ ಬರುವಷ್ಟರಲ್ಲಿ ಸ್ಮೃತಿ ಎಂದಿಲ್ಲದ ಆಸಕ್ತಿಯಿಂದ ಅಲಂಕರಿಸಿಕೊಂಡು ಬಾಗಿಲಲ್ಲಿ ನಿಂತು ಅವನ ಹಾದಿಯನ್ನೇ ಎದುರು ನೋಡುತ್ತಿದ್ದಳು.
“ಮೊದ್ಲು ಆಸ್ಪತ್ರೆಗೆ ಹೋಗಿ ಅವರಿಗೆ ಊಟ ಕೊಟ್ಟು ಆಮೇಲೆ ನಿಮ್ಮನೆಗೆ….. ಹ್ಞಾ” ಎಂದಳು.
“ಓ.ಕೆ.” ಎಂದು ನಗೆಯ ಹೂ ತುರಾಯಿಯನ್ನು ಅವಳೆಡೆಗೆ ಎರಚಿದ ವಚನ್.
ಒಟ್ಟಿಗೆ ಒಳಬಂದ ಸ್ಮೃತಿ ಮತ್ತು ವಚನರನ್ನು ಸುಭಾಷ್ ನಗುಮುಖದಿಂದ ಸ್ವಾಗತಿಸಿದ. ಸ್ಮೃತಿಯ ಮನಸ್ಸಿಗೆ ಕರಕರೆ ಎನಿಸಿತು.
“ಇದೇನು ನೀವಿಬ್ಬರು!.. ಎಲ್ಲಿಂದ!.. ಹೇಗೆ?!’’ ಒಂದೂ ಪ್ರಶ್ನೆ ಇಲ್ಲ.!!..ಅವಳ ಮುಖದ ಮೇಲೆ ನಲಿಯುತ್ತಿದ್ದ ನಗೆ ಸತ್ತುಹೋಯ್ತು. ಗಂಡನಿಗೆ ಮೌನವಾಗಿ ಊಟಬಡಿಸಿ, ವಚನನಿಗೆ “ಹೋಗೋಣ್ವಾ?” ಎಂದು ನೆರಿಗೆಗಳನ್ನು ಅಲೆ ಅಲೆಯಾಗಿ ಕೂಡಿಸಿಕೊಂಡು ಹೊರಬಂದು ಬೈಕಿನ ಹತ್ತಿರ ನಿಂತಳು.
ಸೈಯಾನಿನಲ್ಲಿದ್ದ ವಚನನ ಮನೆ ತಲುಪಿದಾಗ ಹನ್ನೊಂದು ಗಂಟೆಯಾಗಿತ್ತು. ವಚನ ಮೊದಲೇ ತಿಳಿಸಿದ್ದಂತೆ ಅವನ ಅಡುಗೆಯ ಹುಡುಗ ಊಟ ತಯಾರು ಮಾಡಿಟ್ಟಿದ್ದ. ಮೇಜಿನ ಎದುರು ಬದುರು ಕುಳಿತು ಅವರಿಬ್ಬರೂ ನಗುತ್ತ ಮಾತಾಡಿದರು. ವಚನನ ವಿಷಯವನ್ನೆಲ್ಲಾ ಸ್ಮೃತಿ ವಿಚಾರಿಸಿಕೊಂಡಳು. ಶ್ರೀಮಂತ, ವಿದ್ಯಾವಂತ ತರುಣ ಇಷ್ಟು ರಸಿಕನಾಗಿದ್ದೂ ಇನ್ನೂ ಏಕೆ ವಿವಾಹವಾಗಿಲ್ಲ ಎಂಬ ಅಚ್ಚರಿ ಕವಿದು ಬಂದದ್ದು ಬಾಯಿಯ ಹೊರಗೂ ನುಸುಳಿ ಬಂತು.
“ನನ್ನ ಅಭಿರುಚಿಗೆ ಹೊಂದುವ ಹುಡುಗಿ ಇನ್ನೂ ಸಿಕ್ಕಿಲ್ಲ. ಸಿಕ್ಕ ತತ್‍ಕ್ಷಣ ನಮ್ಮ ತಂದೆ ತಾಯಿ, ನಾನು ಮೆಚ್ಚಿದ ಹುಡುಗಿಯ ಜೊತೆ ಮದುವೆ ಮಾಡಿಸಲು ತುದಿಗಾಲಲ್ಲೇ ನಿಂತಿದ್ದಾರೆ” ಅಂದ.
“ ಓ…ಹಾಗಾದ್ರೆ ಹುಡುಗಿ ಹುಡುಕುತ್ತಿದ್ದಿರಾ ಅನ್ನಿ ” ಎಂದವಳು ಜೇನುನಗೆ ಬೀರಿದಾಗ,
“ಎಕ್ಸ್ಯಾಟ್ಲೀ ” ಎಂದು ವಚನ ಅವಳ ಕೆನ್ನೆಯ ಮೇಲೆ ನಯವಾಗಿ ಹೊಡೆದಾಗ ಇಬ್ಬರೂ ಬೆಚ್ಚಿಬಿದ್ದರು.
“ನಾ ಬರ್ತೀನಿ ಹೊತ್ತಾಯ್ತು” ಎಂದು ಇದ್ದಕ್ಕಿದ್ದ ಹಾಗೆ ಮೇಲೆದ್ದು ಸ್ಮೃತಿ ಬಾಗಿಲ ಬಳಿ ನಡೆದಳು. ವಚನ್ ಬೈಕ್ ಸ್ಟಾರ್ಟ್ ಮಾಡುವಷ್ಟರಲ್ಲಿ ‘ನೋ ಥ್ಯಾಂಕ್ಸ್ ‘ ಎಂದು ನುಡಿದವಳೇ, ಟ್ಯಾಕ್ಸಿಯೊಂದನ್ನು ಕರೆದು ‘ಮಾತುಂಗ’ ಎಂದಳು. ಅವಳ ಬುದ್ಧಿಗೆ ಮಂಕು ಕವಿದಂತಾಗಿತ್ತು. ತಲೆ ಗಿರಗಿರನೆ ಸುತ್ತುತ್ತಿತು. ಮೈಯಿನ ಚರ್ಮವೆಲ್ಲ ಸುರುಳಿ ಸುರುಳಿಯಾಗಿ ಸುಲಿದಂತಾಯಿತು. ಮನೆ ಸೇರಿದವಳೇ ನಿಶ್ಚೇಷ್ಟಿತಳಂತೆ ಹಾಸಿಗೆಯ ಮೇಲೆ ಧೊಪ್ಪನೆ ಬಿದ್ದಳು.
ಆಪರೇಷನ್ ಆದ ಮರುದಿನ ಸುಭಾಷ್ ಗೆಲುವಾಗಿ ಗೆಳೆಯರೊಡನೆ ಮಾತನಾಡುತ್ತಿದ್ದ.
“ನವೀನನ ಕಾರಿನಲ್ಲಿ ಹೋಗು ಸ್ಮೃತಿ…..ಯಾಕೆ ಈ ಬಿಸಿಲಿನಲ್ಲಿ ಸ್ಟೇಷನ್‍ವರ್ಗೂ ನಡೀತಿ” ಎಂದು ಹೆಂಡತಿಯ ಕಡೆಗೆ ತಿರುಗಿ ಕಕ್ಕುಲತೆಯಿಂದ ನುಡಿದ. ಸ್ಮೃತಿ ಬದಲು ಹೇಳದೆ ನವೀನನೊಡನೆ ಹೆಜ್ಜೆ ಹಾಕಿದಳು.
ತಿರುವಿನಲ್ಲಿ ಕಾರು ಸರಕ್ಕನೆ ವಾಲಿದಾಗ ಸ್ಮೃತಿ ಪಕ್ಕದಲ್ಲಿದ್ದ ಅವನ ಭುಜದ ಮೇಲೊರಗಿ ‘ಸಾರಿ’ ಎಂದು ಮುದ್ದಾಗಿ ನಕ್ಕಳು. ಆಗ-ಇದು ತಾನಲ್ಲ ಎಂದವಳಿಗೆ ಅನಿಸತೊಡಗಿತು.. ಹಣೆಯ ಮೇಲಿನ ಬೆವರಮಣಿಯನ್ನು ಕರ್ಚೀಪಿನಿಂದ ಒತ್ತಿದಳು.
“ ಲೆಟ್ ಅಸ್ ಹ್ಯಾವ್ ಎ ಕಪ್ ಆಫ್ ಕಾಫೀ ‘’
ನವೀನನ ಜೊತೆ ಖುಷಿಯಿಂದ ಕಾಫಿ ಕುಡಿದಳು. ಅದೇ ಮೊದಲು ನವೀನನನ್ನು ಕಂಡರೆ ಸಿಡಿದು ಬೀಳುತ್ತಿದ್ದಳು. “ಮದುವೆಯಾಗಿರೋ ಹೆಂಡ್ತೀನ ಬಿಟ್ಟು ಬಂದು ಉಳಿದ ಹುಡುಗಿಯರನ್ನು ಕಂಡ್ರೆ ಕಣ್ಣರಳಿಸ್ತಾನೆ….. ನಂಗೇನೋ ಅವನು ಒಳ್ಳೋನು ಅಂತ ಅನ್ನಿಸಲ್ಲರೀ . ಆದಷ್ಟು ಅವನ್ನ ದೂರ ಇಟ್ರೆ ವಾಸಿ….ಐ ಹೇಟ್ ಹಿಂ”- ಅಂದಿದ್ದಳು ಗಂಡನ ಬಳಿ.
ಆಗ ಸುಭಾಷ್- “ಅವನು ಬಹಳ ಸೋಷಿಯಲ್ಲು. ನೀ ಮಿಸ್ಟೇಕ್ ಮಾಡ್ಕೊಂಡಿದ್ದೀಯಾ….ನನ್ನ ಹಾಗೆ ನೀನೂ ನನ್ನ ಫ್ರೆಂಡ್ಸ್ ಜೊತೆಯಲ್ಲಿ ಮಿಂಗಲ್ ಆದ್ರೆ ನಂಗೆ ತುಂಬಾ ಇಷ್ಟ ನೋಡು ” ಅಂತ ಸಮಜಾಯಿಷಿ ಹೇಳಿದ್ದ.
ತಾನು ದೂರುತ್ತಿದ್ದ ಅದೇ ನವೀನನ ಜೊತೆಯಲ್ಲಿ ಇವರು ನನ್ನನ್ನು ಕಳಿಸಿದ್ದಾರೆ, ನಾನು ಬಂದಿದ್ದೀನಿ. ಹೌದು, ನಾನೂ ತುಂಬ ಸೋಷಿಯಲ್ಲು ಅಂತ ಗುನುಗುನಿಸಿಕೊಳ್ಳುತ್ತ ಸ್ಮೃತಿ ತನ್ನಲ್ಲೇ ನಕ್ಕಳು.
ಅಂದು ಸುಮಂತ್, ಹ್ಯಾಂಗಿಂಗ್ ಗಾರ್ಡನ್‍ಗೆ ಆಹ್ವಾನಿಸಿದಾಗ ಬದಲಾಡದೆ ಅವನೊಡನೆ ಸುತ್ತಾಡಿ ಬಂದಳು. ನಿಧಾನವಾಗಿ ಕತ್ತಲು ಹಬ್ಬಿದಾಗ, ಮೇಲೆ ನಿಂತು ಕೆಳಗೆ ಕ್ವೀನ್ಸ್ ನೆಕ್‍ಲೇಸನ್ನು ದಿಟ್ಟಿಸುತ್ತ ನಿಂತಾಗ ಸುಮಂತನ ತೋಳು ತನ್ನನ್ನು ಬಳಸಿದ್ದರೂ ಅವಳು ಗಾಬರಿಗೊಳ್ಳಲಿಲ್ಲ. ಸುಭಾಷನನ್ನು ಮರೆತು ಜೋರಾಗಿ ನಕ್ಕಳು. ಗಲಗಲನೆ ಮಾತಾಡಿದಳು, ಅವನ ತೋಳೊಳಗೇ ನಡೆದು ಬಂದಳು.
ಇನ್ನೊಮ್ಮೆ, ವಚನ್ ‘ಮಹಾಲಕ್ಷ್ಮಿ’ ದೇವಾಲಯಕ್ಕೆ ಕರೆದೊಯ್ದಾಗ ಫೇಡಾ, ಹೂವಿನ ಹಾರವನ್ನು ಅಲ್ಲಿಯ ಪೂಜಾರಿಗೆ ಕೈಗಿತ್ತು, ಪ್ರಸಾದವಾಗಿ ಬಂದದ್ದನ್ನು ಬಾಯಿಗೆ ಹಾಕಿಕೊಂಡು ಸರಸರನೆ ಮೆಟ್ಟಲಿಳಿದು, ಸಮುದ್ರದ ಅಲೆಯ ನೊರೆ ನೊರೆ ಬಂಡೆಯ ಮೇಲೆ ಮಂಟಪವಾಗುವುದನ್ನು ಕಂಡು ಖುಷಿಯಿಂದ ವಚನನಿಗೆ ತೋರಿಸಿದಳು.
ಬಿಳಿಯ ಫ್ರಿಲ್ ಲಂಗ ತೊಟ್ಟು ದೂರದಿಂದ ನೆಗೆದು ಬರುವ ಕಡಲನ್ನು ಕುರಿತು ಅವನ ಕಿವಿಯಲ್ಲಿ ಉಸುರಿದಾಗ ‘ ಫೈನ್ ಇಮ್ಯಾಜಿನೇಷನ್ ‘ಎಂದು ನಕ್ಕ, ಬೆನ್ನು ತಟ್ಟಿದ. ಅವನ ಕೈ ಹಿಡಿದುಕೊಂಡು ಬಂಡೆಯಿಂದ ಬಂಡೆಗೆ ನಡೆದು ಬಂದಳು. ಬಂಡೆಯ ಮೇಲೆ ಕುಳಿತು ಅವರಿಬ್ಬರೂ ತುಂಬ ಮಾತನಾಡಿದರು. ಅವಳ ಅತೃಪ್ತ ದಾಂಪತ್ಯದ ಸುಳಿವನ್ನು ಅರಿತ ಅವನು “ನಾನು ನಿಮ್ಮನ್ನು ತುಂಬ ಪ್ರೀತಿಸ್ತಿದ್ದೀನಿ ಸ್ಮೃತಿ… ನೀವು ಕಳ್ಕೊಂಡಿರೋ ಸುಖಾನ ನಾನು ನಿಮಗೆ ನೀಡ್ತೀನಿ” ಎಂದು ಪ್ರಾಮಾಣಿಕವಾಗಿ ಹೃದಯ ತೋಡಿಕೊಂಡು ಅವಳ ಕೈಮೇಲೆ ಕೈ ಇಟ್ಟ.
ಸ್ಮೃತಿಯ ಹೃದಯ ಕರಕರಗಿ ಹರಿಯಿತು. ತಾನು ಇವನ ಆಸರೆಯಲ್ಲಿ ಖಂಡಿತ ಸುಖವಾಗಿರುತ್ತೇನೆಂಬ ಭರವಸೆಯ ಸುಖ ಕಣ್ಮಿಟುಕಿಸಿತು.
“ನಾನು ನಾಳೆಯೇ ನಿಮ್ಮನೆಗೆ ಬಂದು ಬಿಡ್ತೀನಿ ವಚನ್” ಎಂದು ನಿರ್ಧರಿಸಿದವಳೇ ಅವನ ಹಸ್ತವನ್ನದುಮಿ ಮೇಲಕ್ಕೆದ್ದಳು.
ರಾತ್ರಿಯೆಲ್ಲ ಅವಳಲ್ಲಿ ರಂಗು ರಂಗಿನ ಹಲವಾರು ಭಾವಗಳ ಗುದ್ದಾಟ. ತನ್ನನ್ನು ಅಲಕ್ಷಿಸಿದ ಗಂಡನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂಬ ಭಾವ ಬಲಿತು ಗಟ್ಟಿಗೊಳ್ಳುತ್ತಿತ್ತು.
ಬೆಳಗ್ಗೆ ಬೇಗ ಎದ್ದವಳೇ ಸಿದ್ಧವಾಗಿ ತನ್ನ ಬಟ್ಟೆಗಳನ್ನೆಲ್ಲ ಜೋಡಿಸಿಟ್ಟುಕೊಂಡಳು. ಏನೋ ಬಿಡುಗಡೆಯ ಭಾವ ಉಳಿಯಿತು. ಸುಖದ ಕನಸು ಹೂವಾಗಿತ್ತು. ಹಾಡೊಂದನ್ನು ಗುನುಗುನಿಸುತ್ತ ಸಂತಸದಿಂದ ಚಪ್ಪಲಿ ಹಾಕಿಕೊಂಡಳು. ಅಷ್ಟರಲ್ಲಿ-
‘ಟ್ರಿಣ್….. ಟ್ರಿಣ್’ – ಕರೆಗಂಟೆ.
ಓಡಿಹೋಗಿ ಬಾಗಿಲು ತೆರೆದಳು ಸ್ಮೃತಿ . ಹೃದಯ ಬಾಯಿಗೆ ಬಂದಂತಾಯಿತು.
“ ಡಿಸ್‍ಛಾರ್ಜ್ ಮಾಡಿದರು. ಇನ್ನೇನು ಭಯವಿಲ್ಲ ಅಂದ್ರು ಡಾಕ್ಟರು. ಡೋಂಟ್ ವರಿ ಡಾರ್ಲಿಂಗ್…ಅಂದಹಾಗೆ ನೀನು ಯಾಕೆ ಎರಡು ದಿನದಿಂದ ಬರ್ಲೇ ಇಲ್ಲ. ನವೀನ್ ಕಾರಿನಲ್ಲಿ ಕರ್ಕೊಂಡು ಬಂದ” ಎನ್ನುತ್ತ ಒಳಗೆ ಬಂದ ಸುಭಾಷನನ್ನು ಕಂಡು, ಸ್ಮೃತಿ ಮುಖ ಮುಚ್ಚಿಕೊಂಡು ಒಳಗೋಡಿದಳು.
************