ಮಂದಿರದ ನಾಲ್ಕೂ ಮೂಲೆಗಳಿಗೆ ಕಟ್ಟಿದ್ದ ಮೈಕುಗಳಿಂದ ಭಜನೆ ತಾರಕಸ್ಥಾಯಿಯಲ್ಲಿ ಕೇಳಿಸುತ್ತಿತ್ತು. ಒಳಹೊರಗೆ ಕಿಕ್ಕಿರಿದ ಜನ. ಮಂದಿರದ ಬಲ ಆವರಣದಲ್ಲಿ ಭಜನೆಯಲ್ಲಿ ಮೈಮರೆತ ಭಕ್ತವೃಂದ. ನಡುವೆ ಹಾರ್ಮೋನಿಯಂ ನುಡಿಸುತ್ತ ತನ್ಮಯನಾಗಿ ಹೇಳಿಕೊಡುತ್ತಿದ್ದವನ ತಾಳಕ್ಕನುಗುಣವಾಗಿ ಸ್ವರ ಏಳುತ್ತಿತ್ತು. ಎತ್ತರವಾದ ಪೀಠದ ಮೇಲೆ ಒಂದು ಜೊತೆ ಮರದ ಪಾದುಕೆಗಳು, ಮೇಲೆರಡು ಪಾರಿಜಾತದ ಹೂ-ಮಂತ್ರಾಕ್ಷತೆ. ಸಾಲಾಗಿ ಬಂದವರು ಭಕ್ತಿಯಿಂದ ಪಾದುಕೆಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಪಕ್ಕದ ಬಾಗಿಲಿನಿಂದ ಹೊರಬೀಳುತ್ತಿದ್ದರು.
![](http://sandhyapatrike.com/wp-content/uploads/2021/02/nee-mayeyo-3.jpg)
ಬೆಳಗಿನಿಂದ ಒಂದೇ ಸಮನೆ, ಜನ ಸಾಲು ಹರಿಯುತ್ತಿದ್ದರೂ ಇನ್ನೂ ಜನಜಾತ್ರೆ ಕರಗಿರಲಿಲ್ಲ. ಭಜನೆ ನಿಂತಿರಲಿಲ್ಲ. ಕರ್ಪೂರದ ಸುಗಂಧ ಅಡಗಿರಲಿಲ್ಲ ಊರಿಗೆ ಊರೇ ಅಲ್ಲಿ ನೆರೆದಿತ್ತೇಕೆ, ಸುತ್ತಮುತ್ತಲ ಪ್ರದೇಶದವರೂ ಮಂದಿರವನ್ನು ಮುತ್ತಿದ್ದರು. ಹೊರ ಜಗುಲಿಯ ಮೇಲೆ ಕುಳಿತಿದ್ದ ಜುಬ್ಬಾ, ಪೈಜಾಮದ ಯುವಕ, ಅಲ್ಲಿ ನಡೆಯುವ ವಿದ್ಯಮಾನವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತ, ಕೈಲಿದ್ದ ನೋಟ್ ಪುಸ್ತಕದಲ್ಲಿ ಏನೇನೋ ಸರಸರನೆ ಗೀಚಿಕೊಳ್ಳುತ್ತಿದ್ದ. ಪಕ್ಕದಲ್ಲಿ ಆರಾಮವಾಗಿ ಗೋಡೆಗೊರಗಿ ಕುಳಿತು ಹರಟುತ್ತಿದ್ದ ಮುದಕರ ಪಾಳ್ಯದ ಹರಟೆಯಲ್ಲೂ ಅವನಿಗೆ ಉಪಯೋಗವಾಗುವ ಒಂದೆರಡು ಅಂಶಗಳು ಸಿಕ್ಕವು. ಅವರ ಸಂಭಾಷಣೆಯ ಸ್ವಾರಸ್ಯವನ್ನು ಅಕ್ಷರಕ್ಕಿಳಿಸಿಕೊಂಡ.“
”ನಡೀರಿ ವಿಟೋಬ ಛತ್ರದಾಗ ಭಾಷಣ ಇಡಸ್ಯಾರಂತ… ನಾವು ಕೇಳೋಣ ಹೊಂಡ್ರಿ ಮತ್ತ ಲಘೂನ” -ಧೋತರ ನೇರಪಡಿಸಿಕೊಂಡು, ನಶ್ಯ ಮೂಗಿನೊಳಗೆ ತುರುಕಿಕೊಳ್ಳುತ್ತ ಒಬ್ಬ ಮುದುಕರು ಕಟ್ಟೆ ಬಿಟ್ಟೇಳುವಾಗ ಯುವಕನ ಕಿವಿ ಚುರುಕಾಯಿತು.
‘ವಿಟ್ಹೋಬ ಛತ್ರ ಎತ್ಲಾಗೆ?’ ಭುಜಕ್ಕೆ ಚೀಲ ನೇತು ಹಾಕಿಕೊಳ್ಳುತ್ತ ಲಗುಬಗೆಯಿಂದ ಅವನೂ ಅವರೊಡನೆ ಎದ್ದ.
“ಎಲ್ಲಿಂದ ಬಂದೀಯಪ್ಪ” ಆಚೆ ಮೆಟ್ಟಿಲ ಮೇಲೆ ಮುದುರಿ ಕುಳಿತಿದ್ದ ಮುದುಕಪ್ಪನ ಪ್ರಶ್ನೆ ಅವನನ್ನು ತಡೆದು ನಿಲ್ಲಿಸಿತು. ಹುಬ್ಬು ಹಣೆದು ಪಕ್ಕಕ್ಕೆ ತಿರುಗಿ ನೋಡಿದ ಯುವಕ. ಸುಕ್ಕು ಬೇರುಬಿಟ್ಟ ಹಣ್ಣಾದ ಮುಖ, ಬೋಳುಮಂಡೆ, ಕೃಶ ಶರೀರ, ನಡುಗುವ ದನಿ.ಆತನ ಪ್ರಶ್ನೆಗೆ ಉತ್ತರಿಸುವ ಸಹನೆ ಅವನಲ್ಲಿರಲಿಲ್ಲ. ಮುದುಕನತ್ತ ಅಲಕ್ಷ್ಯದ ನೋಟವೆಸೆದು, ಮುಂದೆ ತೆರಳುತ್ತಿದ್ದ ವೃದ್ಧರ ತಂಡವನ್ನು ಹಿಂಬಾಲಿಸಿಕೊಂಡು ಸರಸರನೆ ವಿಟ್ಹೋಬ ಛತ್ರದತ್ತ ಹೆಜ್ಜೆಯಿಕ್ಕಿದ.
* * *
![](http://sandhyapatrike.com/wp-content/uploads/2021/02/story-6.jpg)
‘ನಂಗ ಇದು ಎಷ್ಟೂ ಸೇರೋದಿಲ್ಲ’ ಹೆಂಡತಿಯ ಕೈಯಿಂದ ಗಬಕ್ಕನೆ ಬುಟ್ಟಿ ಕುಸಿದುಕೊಂಡವರೇ ಮುಖವನ್ನು ಗಂಟುಹಾಕಿದರು ದೀನಾನಾಥರು.
ಮಂದಿರಕ್ಕೆ ಹೋಗುವ ಆಕೆಯ ಉತ್ಸಾಹ ಜರ್ರನೆ ಇಳಿಯಿತು. ಕೆನ್ನೆಯಿಂದ ನೆಲದವರೆಗೂ ನೀರು ತೊಟ ತೊಟ. ಮುಖ ಮುಚ್ಚಿಕೊಂಡು ಒಳಗೋಡಿದ ಆಕೆ, ಕ್ಷಣದಲ್ಲಿ ಹೊಸಪತ್ತಲ ಕಿತ್ತೆಸೆದು, ಒಡವೆ ಕಳಚಿ, ಕೋರಿ ಸುತ್ತಿಕೊಂಡು ಮುಸುಕಿಕ್ಕಿದರು.ಸ್ವಲ್ಪ ಹೊತ್ತಿನನಂತರ ಆತ ನಿಧಾನವಾಗಿ ಒಳಬಂದು ಹಣಕಿದರು. ಸೂರ್ಯ ನೆತ್ತಿ ಬೇಯಿಸುತ್ತಿದ್ದರೂ ಅಡಿಗೆ ಮನೆಯಿಂದ ಕೂಳು ಬೇಯುವ ವಾಸನೆಯೇ ಇಲ್ಲ! ಒಳಕೋಣೆಯಲ್ಲಿ ಬಿಕ್ಕಳಿಕೆ. ನಯವಾಗಿ ಆಕೆಯ ಮುಸುಕು ಸರಿಸಿ ಕಣ್ಣೀರೊರಸಿ ನುಡಿದರು.
‘ಆದರೂ ನಂಗ ಸೇರೂದಿಲ್ಲ”
ಒಂದು–ಎರಡು ದಿನ. ಆಕೆ ಭಜನಾಮಂದಿರಕ್ಕೆ ಹೋಗಲಿಲ್ಲ. ಮಂದಾಸನವನ್ನೂ ಬೆಳಕು ಮಾಡಲಿಲ್ಲ. ಕತ್ತಲ ಸಾಮ್ರಾಜ್ಯ ಬೀಡುಬಿಟ್ಟ ದೇವರಕೋಣೆಗೆ ಗಂಡನನ್ನು ಕರೆತಂದು ‘ಈಗ ನಿಮಗೆ ಸಮಾಧಾನ ಆತಾ?” ಎಂದು ಒರಟಾಗಿ ಕೇಳಿದರಾಕೆ. ತಮ್ಮ ಅಭಿಪ್ರಾಯವನ್ನು ಅಪಾರ್ಥ ಮಾಡಿಕೊಂಡ ಹೆಂಡತಿಯ ಮಾತಿಗೆ ಬದಲಾಡದೆ ಸುಮ್ಮನೆ ನಕ್ಕರು ಆತ.ಈ ಬಗೆಯ ವಿಲಕ್ಷಣ ನಡವಳಿಕೆಯೇನೂ ಆಕೆಗೆ ಹೊಸದಲ್ಲ. ಮದುವೆಯಾದ ದಿನದಿಂದಲೂ ಸುಪರಿಚಿತ. ಆಕೆ ಕಂಡ ಹಾಗೆ ಆತನೆಂದೂ ದೇವರು – ಸ್ವಾಮಿಗಳೆಂದು ದೇವಸ್ಥಾನ, ಮಠ ಮಂದಿರಗಳತ್ತ ತಪ್ಪಿಯೂ ತಿರುಗಿದವರಲ್ಲ. ಹಾಗೆ ಹೋಗುವವರನ್ನು ಕಂಡರೂ ಸಿಡಿಮಿಡಿ. ದಿನಬೆಳಗಾದರೆ ಮನೆಯವರಿಗೆಲ್ಲ ಬೋಧನೆಯ ವರಾತ.
![](http://sandhyapatrike.com/wp-content/uploads/2021/02/lady-135.jpg)
“ಭಾಳ ಸಣ್ಣಂವ ಇದ್ದಾಗ, ನಮ್ಮ ದೀನೂಗೆ ದೇವ್ರಂದ್ರ ಅದೇನು ಭಕ್ತಿ-ಗೌರವ? ಬರ್ತಾ ಬರ್ತಾ ನೋಡು ಯಾಕೋ ಹಿಂಗಾಗೋದ. ನಮ್ಮ ಕಡೆ ರಾವು ಬಡಿದರ ಹೀಂಗ ದೈವದ್ವೇಷಿ ಆಗ್ತಾರಂತ ಹೇಳ್ತಾರ”-ಆಕೆಯ ಅತ್ತೆ ಗಲ್ಲದ ಮೇಲೆ ಬೆರಳು ತಟ್ಟಿಕೊಂಡು ದಿನಕ್ಕೆರಡು ಸಲವಾದರೂ ಹೀಗನ್ನುವುದು ತಪ್ಪಿಲ್ಲ.ಆದರೆ ಇದಾವುದನ್ನೂ ದೀನಾನಾಥರು ಕಿವಿಗೆ ಹಾಕಿಕೊಳ್ಳುವುದಿಲ್ಲ.
*
ಭಾಷಣಕಾರರು ಮೇಲೆದ್ದು, ಸ್ವಾಮೀಜಿಯವರ ಚಿತ್ರಪುಟವನ್ನು ಅನಾವರಣ ಮಾಡಿ, ಅದಕ್ಕೆ ಹೂಮಾಲೆ ಹಾಕಿದ್ದೇ ತಡ, ಮುಗಿಲು ಹರಿಯುವ ಚಪ್ಪಾಳೆ ಕಿವಿಗಡಚಿಕ್ಕಿತು.
‘ಸ್ವಾಮೀಜೀ ಕಿ ಜೈ..ಸ್ವಾಮೀಜೀ ಕಿ ಜೈ’ – ಜೈಕಾರ ಘೋಷ ಸರಿಯಲು ಹತ್ತು ನಿಮಿಷಗಳು ಹಿಡಿದವು.ದಡಬಡಿಸಿಕೊಂಡು ಬಂದ ಆ ಯುವಕ ಕುರ್ಚಿ ಹೊಂದಿಸಿಕೊಂಡು ಕೂತು, ಬೇಗ ಬೇಗ ಚೀಲದಿಂದ ನೋಟ್ ಪುಸ್ತಕ ತೆಗೆದು ಭಾಷಣಕಾರರ ಬಾಯರಳುವುದನ್ನೇ ಕಾದು ಕೂತ.
“ನಮ್ಮ ಸ್ವಾಮೀಜಿ ಜೀವನಕಥಿ ನಿಮಗೆಲ್ರಿಗೂ ತಿಳಿದಾ ಆದ… ಅವರ ಬಗ್ಗೆ ನೂರಾರು ಪುಸ್ತಕ, ಭಾಷಣ, ಗ್ರಂಥಗಳು ಬಂದಾವ. ಆದ್ರೂ ವರ್ಷಾ ವರ್ಷಾ ಅವರ ಪುಣ್ಯದಿನದಾಗ, ಅವರ ಜೀವನ ಸ್ಮೃತಿ ನೆನಸ್ಕೊಂಬೋದು ನಮ್ಮ ಮುಂದಿನ ಪೀಳಿಗ್ಗೆ ಒಂದು ಹೊಸಾ ಸ್ಫೂರ್ತಿ ಇದ್ದಾಂಗ, ದಿಕ್ಸೂಚಿ ಇದ್ದಾಂಗ, ಒಂದು ಮಾದರಿ ಇದ್ದಾಂಗ….,ದಡಬಡ ಭಾಷಣ ನೋಟ್ ಪುಸ್ತಕದೊಳಗೆ ನುಗ್ಗುತ್ತಿತ್ತು.
“ಎಲ್ಲಿಂದ ಬಂದೀಯಪ್ಪಾ?” ಮತ್ತದೇ ಪ್ರಶ್ನೆ! ಯುವಕ ಥಟ್ಟನೆ ಪಕ್ಕಕ್ಕೆ ತಿರುಗಿ ನೋಡಿದ. ಕೋಲನ್ನು ನೆಲದ ಮೇಲೆ ಮಲಗಿಸಿ, ಕುರ್ಚಿಯೊಳಗೆ ಏರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ ಮುದುಕಪ್ಪನ ಮುಖದಲ್ಲಿ ವಿಶಾಲ ಬೊಚ್ಚುನಗೆ!ಇದೇ ಸ್ವಲ್ಪ ಹೊತ್ತಿನ ಹಿಂದೆ ತಾನೆ ಮಂದಿರದ ಮೆಟ್ಟಿಲ ಮೇಲೆ ಮುದುರಿ ಕುಳಿತಿದ್ದ ಅಜ್ಜ, ಪುನಃ ಗಂಟು ಬಿದ್ದದ್ದಕ್ಕೆ ಬೇಸರಿಸಿಕೊಂಡು ಅವನು, ಉದಾಸೀನದಿಂದ ಮುದುಕನ ಪ್ರಶ್ನೆ ಕೇಳದವನಂತೆ ಕತ್ತು ಮೀಟಿ ವೇದಿಕೆಯತ್ತ ಗಮನ ಕೇಂದ್ರೀಕರಿಸಿದ.
![](http://sandhyapatrike.com/wp-content/uploads/2021/02/nee-maayeyo-2.jpg)
‘ಏನ್ ಬರ್ಕೋತಿದ್ದೀ?’’ -ಅವನ ಕುಂಕುಳು ಚುಚ್ಚಿ ಮತ್ತೆ ಮಾತಿಗೆಳೆಯುವ ಪಟ್ಟು ಹಿಡಿದಿದ್ದ ಮುದುಕಪ್ಪ.ಯುವಕನ ಮೋರೆ ಫಕ್ಕನೆ ಗಂಟಾಯಿತು. ತನ್ನ ಬಿಳೀ ಜುಬ್ಬವನ್ನು ನೋಡಿಕೊಳ್ಳುತ್ತ ಸರಿಪಡಿಸಿಕೊಂಡು, ಪಕ್ಕದಲ್ಲಿ ವಕ್ರಿಸಿದ ಮುದುಕಪ್ಪನ ಕೊಳೆಯ ಬೆರಳುಗಳನ್ನು ಸೀಳುವಂತೆ ಚೂಪಾಗಿ ನೋಡಿದ. ಅವ ಗುಹೆಯಂಥ ಬಾಯನ್ನು ತೆರೆದು ಅಡ್ಡಗಲಕ್ಕೂ ಆಕಳಿಸಿದ್ದನ್ನು ಕಂಡಮೇಲೆ ಈ ಮುದಿಯ ತನ್ನನ್ನು ಸುಮ್ಮನೆ ಕೂಡುವುದಕ್ಕೆ ಬಿಡನೆಂಬುದು ಗಟ್ಟಿಯಾಗಿ, ಯುವಕ ಬೇಸರಿಕೆಯಿಂದ ಉತ್ತರಿಸಿದ.
‘ಭಾಷಣ”
’“ಗೊತ್ತದ …..ಯಾಕಂತಾ?”“
”ನಿಂಗೇನರ್ಥ ಆಗುತ್ತೆ ಅಜ್ಜಾ … ನಾವೆಲ್ಲ ಕಾಲೇಜ್ ಕಲಿತವರು. ಸಂಶೋಧನೆ ಮಾಡ್ತೀದೀನಿ ನಾನು. ಈಗ ಗ್ರಂಥ ಬರೀಬೇಕಾಗಿದೆ… ಸ್ವಾಮೀಜಿಯವರ ಜೀವನಚರಿತ್ರೆ ಆರಿಸಿಕೊಂಡಿದ್ದೀನಿ.. ಅದಕ್ಕೆ ವಿಷಯ ಸಂಗ್ರಹ …ಗೊತ್ತಾಯ್ತೇ?’’- ಎಂದು ಧ್ವನಿಯೇರಿಸಿ ಅಸಹನೆಯಿಂದ ಉತ್ತರಿಸಿ, ಸರ್ರನೆ ಮೇಲೆದ್ದು ಇನ್ನೊಂದು ಮೂಲೆಗೆ ಹೋಗಿ ಕುಳಿತ.
ಐದು ನಿಮಿಷ ತನ್ನ ನೋಟ್ಸಿನೊಳಗೆ ಇನ್ಯಾವುದೋ ಕಣ್ಣುಗಳು ನೆಟ್ಟಿರುವಂತೆನಿಸಿ ಅವನು ಪಕ್ಕಕ್ಕೆ ತಿರುಗಿ ನೋಡಿದರೆ ಅದೇ ಮುದುಕಪ್ಪ! ಅಜ್ಜ ಆಸಕ್ತಿಯಿಂದ, ಅವನ ಶಾಯಿ ಹರಡಿಕೊಳ್ಳುತ್ತಿದ್ದ ಬಗೆಯನ್ನು ಬಗ್ಗಿ ಬಗ್ಗಿ ವೀಕ್ಷಿಸುತ್ತಿದ್ದ. ಅವನ ಹುಬ್ಬುಗಳು ವಿಲಕ್ಷಣವಾಗಿ ಬಳುಕಾಡುತ್ತಿದ್ದವು. ಮುದುಕನಿಗೆ ತಲೆ ಕೆಟ್ಟಿದೆ ಎಂದು ಅವನಿಗೆ ತತ್‍ಕ್ಷಣ ತಿಳಿದುಹೋಯಿತು. ಆದರೆ ಅವನಿಗೆ ಹೆದರಿ, ಪದೇ ಪದೇ ಜಾಗ ಬದಲಾಯಿಸುವುದು ಅಷ್ಟು ಚೆಂದ ಕಾಣದೆಂದು ಯುವಕ ತುಟಿ ಕಚ್ಚಿ ತೆಪ್ಪಗೆ ಅಲ್ಲೇ ಕುಳಿತ.
“ಸ್ವಾಮೀಜಿಯವರ ಶಿಷ್ಯರು ಈ ದಿನ ದೇಶದ ತುಂಬ…ಅವರ ಪಂಥ, ಅನುಯಾಯಿಗಳು ಲಕ್ಷಾಂತರ…ಅವರ ಬೋಧನೆ, ತತ್ತ್ವ…’’-ಧ್ವನಿವರ್ಧಕ ಘಂಟಾಘೋಷವಾಗಿ ಸಾರುತ್ತಿತ್ತು. ಮುದುಕಪ್ಪ ಮುಜುಗರದಿಂದ ಮುಖ ಕಿವುಚಿ ಚಡಪಡಿಸುತ್ತಾ ಯುವಕನ ಗಮನ ಸೆಳೆದ.“ನಿನಗ ಅವರ ಜೀವನ ಚರಿತ್ರ ಬೇಕು ಹೌದಲ್ಲೋ…ಬಾ ನನ ಜೋಡಿ…ನಾ ಛಲೋತ್ನ್ಯಾಗ ಹೇಳ್ತೀನಿ. ಎಲ್ಲ ಇದ್ದಿದ್ಹಂಗ ಬರ್ದು ಪುಸ್ತಕಕ್ಕ ಹಚ್ಚು, ನಿನ್ನ ಜನ ಭೇಷ್ ಅಂತಾರ”ಯುವಕ ಗಹಗಹಿಸಿ ನಕ್ಕ. ಮುದುಕಪ್ಪ ಬೆಪ್ಪಾಗಿ ಕಣ್ಣರಳಿಸಿ ಅವನನ್ನೇ ಕರುಣೆಯಿಂದ ದಿಟ್ಟಿಸಿದ.
*
“ಎಂದಿಗೂ ಕೂಡದು. ವ್ಯಕ್ತಿ ಪೂಜಾ ಮಾಡೋದು ಭಾಳ ತಪ್ಪು. ಅರ್ಥಿಲ್ಲದ್ದು… ಮೂಢನಂಬಿಕೆ, ಮೂರ್ಖತನ… ಅವರೂ ನಮ್ಮ ಹಂಗ ಸಾಮಾನ್ಯ ಮನುಷ್ಯರ… ಇಲ್ಲದ ಕಿರೀಟ ಕಟ್ಟಿ ಅವರಿಗೆ ದೈವತ್ವ ಹಚ್ಚೋದನ್ನ ನಾವು ಇನ್ನು ಮುಂದಾದ್ರೂ ನಿಂದ್ರಿಸಬೇಕು. ಇಲ್ಲದಿದ್ರ ನಾವೆಂದೂ ಉದ್ಧಾರವಾಗೋದಿಲ್ಲ.’’-ಗಂಡ ಕನವರಿಸಿಕೊಳ್ಳುತ್ತಿದ್ದಾರೆಂದು ಆಕೆ ತಲೆಬಾಗಿಲು ದಾಟಿ ಓಡಿಬಂದರು. ದೀನಾನಾಥರ ತಾಯಿ ವಿಚಿತ್ರವಾಗಿ ಮಗನನ್ನೇ ದಿಟ್ಟಿಸಿದರು. ದೀನಾನಾಥರು ಬಡಬಡಿಸುತ್ತಲೇ ಇದ್ದರು. ಎಚ್ಚರವಾಗಿಯೇ ಜೋರಾಗಿ ಹೇಳುತ್ತಿದ್ದರು!
![](http://sandhyapatrike.com/wp-content/uploads/2021/02/nee-mayeyo-4.jpg)
ದೂರದ ತಿರುವಿನಲ್ಲಿ ಕೋಲೂರಿಕೊಂಡು ಬರುತ್ತಿದ್ದ ಮಾವನನ್ನು ಕಾಣುತ್ತಲೇ ದೀನಾನಾಥರ ಹೆಂಡತಿ, ಗಂಡನನ್ನು ಅವನ ಪಾಡಿಗೆ ಬಿಟ್ಟು ಅತ್ತೆಯನ್ನು ಕರೆದುಕೊಂಡು ಹೊರಮೆಟ್ಟಿಲ ಬಳಿ ಧಾವಿಸಿದಳು.“ಭಾಳ ಜನ್ರು ಸೇರಿದ್ರಾ?” ಕುತೂಹಲದ ಜೋಡಿಕಂಠ.ಜಗುಲಿಯ ಕಟ್ಟೆಯ ಮೇಲೆ ತಳವೂರುತ್ತ ದೊಡ್ಡ ನಿಟ್ಟುಸಿರು ಚಿಮ್ಮಿಸಿ,“ಓ ಜನರೋ ಜನ್ರು… ಭಾಷಣ ಅಂತೂ…” ದೀನಾನಾಥರ ತಂದೆ, ಅದ್ಭುತವಾಗಿ ಬಣ್ಣಿಸುತ್ತಿದ್ದರು.
ಕಿವಿಯಲ್ಲಿ ಬೆರಳದ್ದಿಕೊಂಡು ಬಾಗಿಲುದ್ದಕ್ಕೂ ಬಂದು ನಿಂತ ಮಗನನ್ನು ಕಾಣುತ್ತಲೇ ಅರಳಿದ ಮೂರುಬಾಯಿಗಳೂ ಬಂದಾದವು. ಆದರೆ ಅವರನ್ನು ಗಮನಿಸದವರಂತೆ ದೀನಾನಾಥರು, ತಮ್ಮ ಕಿರಿಮಗನನ್ನು ಕರೆದು ಗೆಳೆಯ ರಘೋತ್ತಮನನ್ನು ತಕ್ಷಣ ಕರೆತರಲು ಹೇಳಿದರು.
ಐದ್ಹತ್ತು ನಿಮಿಷಗಳಲ್ಲಿ ನಾಲ್ಕೆಂಟು ಗೆಳೆಯರು ಕೂಡಿದರು. ಜಗುಲಿಯ ಮೇಲೆ ಸಭೆ ಬೀಡುಬಿಟ್ಟಿತು. ಬಾಗಿಲಲ್ಲಿ ಕುತೂಹಲದ ಇಣುಕು ನೋಟಗಳು. ಅದೇ ತಾನೆ ಬಡಬಡಿಸುತ್ತಿದ್ದ ಮಾತುಗಳನ್ನು ದೀನಾನಾಥರು ಮತ್ತೆ ಹೇಳಿದರು.“ನಮ್ಮ ಊರಿನಾಗೆಲ್ಲ ಈ ಬಾಬ, ಸ್ವಾಮಿ, ಪವಾಡಪುರುಷರ ಕಾಟ ಹೆಚ್ಚಾಗಿ ಹೋತು…..ಸೃಷ್ಟಿಕರ್ತ ದೇವರಿಗಿಂತ ಈ ಮನುಷ್ಯರ ಕಾರುಬಾರು, ಪೂಜಾನಾ ಅತಿಯಾಗಿ ಹೋತು… ಇದರಿಂದ ನಮ್ಮನೆ ಮಕ್ಳ, ಹೆಣ್ಣು ಮಕ್ಳ ಮನಸ್ನ್ಯಾಗ ಇಲ್ಲದೆಲ್ಲಾ ಈಗ್ಲಿಂದಾನಾ ತುಂಬ್ತಾ ಹೋದ್ರ… ಇದು ಕಡೀಕ ಎಲ್ಲಿಗ್ಹೋಗ್ತದೋ ಅಂತ ಕಲ್ಪನೆ ಮಾಡ್ಲಿಕ್ಕೂ ಶುದ್ಧ ಆಗೋಣಿಲ್ಲ….ಇವರನ್ಯಾರು ತಿದ್ದೋವರ ಇಲ್ಲಾ? ವ್ಯರ್ಥ.. ವ್ಯಾಳ್ಯಾ ಹಾಳ್‍ಮಾಡ್ತಾರ ಇವ್ರು… ಇದರಿಂದ ಜನಕ್ಕೂ ಸಮಾಜಕ್ಕೂ ಏನು ಉಪಯೋಗ?”ಅವರ ಮನಸ್ಸಿನೊಳಗೇ ಕೊರೆದು ಭುಗಿಲ್ಲೆನ್ನುತ್ತಿದ್ದ ವಿಚಾರಗಳೆಲ್ಲ ಅಬ್ಬರವಾಗಿ, ಆವೇಶದಿಂದ ಹೊರಬಂದವು. ಸುತ್ತ ಕುಳಿತಿದ್ದ ತಲೆಗಳೂ ಅವರ ಅಭಿಪ್ರಾಯವನ್ನು ಒಪ್ಪಿ ತಲೆಹಾಕಿದವು.
ದೀನಾನಾಥರು, ಮೂರು ಹಗಲು ಮೂರು ರಾತ್ರಿ ಕೂತು ಚಿಂತಿಸಿಯೇ ಚಿಂತಿಸಿದರು. ನಾಲ್ಕಾರು ಬಾರಿ ಜಗುಲಿಯ ಮೇಲೆ ಸಭೆ ನಡೆಯಿತು.ಸಮಾಜಸೇವೆಯೇ ನಿಜವಾದ ಪೂಜೆ ಎಂಬ ತತ್ತ್ವವನ್ನು ನಂಬಿಕೊಂಡು ಬಂದವರು ದೀನಾನಾಥರು. ಅರ್ಥವಿಲ್ಲದ ಯಾಂತ್ರಿಕ ಬಾಹ್ಯಪೂಜೆ, ನೈವೇದ್ಯ ಸೇವೆ-ಸ್ತುತಿಗಳನ್ನು ಅಪನಂಬಿಕೆಯಿಂದ, ಜುಗುಪ್ಸೆಯಿಂದ ಕಾಣುವ ದೃಷ್ಟಿ ಅವರದು. ಅವರ ಮನದಿಂಗಿತ ಸಭೆಯ ಕೆಲವರ ಮನಸ್ಸಿನಲ್ಲೂ ಇಳಿಯಿತು. ಅವರ ಕಾರ್ಯಕ್ಕೆ ಸಹಕರಿಸಿ ನಿಂತರು.ಕೆಲವು ಗೆಳೆಯರನ್ನು ಕೂಡಿಕೊಂಡು ದೀನಾನಾಥರು, ವರ್ತಕರ ಪೇಟೆಯತ್ತ ಅನಾಥಶ್ರಮಕ್ಕಾಗಿ ಚಂದಾ ಎತ್ತಲು ನಡೆದರು. ಊರಿನ ಕೆಲ ಹಿರಿಯರು ಬಾಗಿಲಿಗೆ ಬಂದು ನಿಂತಾಗ ‘ಇಲ್ಲ’ ಎಂದು ಹೇಳಲು ಸಂಕೋಚ ಹಲವರಿಗೆ, ಇಷ್ಟವಿದ್ದೋ ಇಲ್ಲದೆಯೋ ಸಂದೂಕ ಸಡಿಲಿಸಿ ‘ರಾಮ್ ರಾಮ್’ ಎಂದು ಕೈ ಮುಗಿದರು.
![](http://sandhyapatrike.com/wp-content/uploads/2021/02/Story-Edegudi-1.jpg)
ಅಂತೂ ಸಂಜೆ ಸೋರುವುದರಲ್ಲಿ ಡಬ್ಬಿ ಭಾರವಾಯಿತು. ಮತ್ತೆ ಕೆಲವು ಸಂಜೆಗಳ ಅಲೆದಾಟದಲ್ಲಿ ಹಣ ಕೂಡಿಸಿದ್ದಾಯ್ತು. ಅವರ ಯೋಚನೆಯಂತೆ ಅನಾಥಶ್ರಮ ಪ್ರಾರಂಭವಾಯಿತು. ಬೀದಿಯಲ್ಲಿ ಮೈಯೊರಗಿಸಿದ್ದ ಮಕ್ಕಳು-ಮರಿಗಳು ಬಂದು ಬೆಚ್ಚನೆಯ ಆಸರೆಯೊಳಗೆ ನಕ್ಕವು.ದೀನಾನಾಥರಿಗೂ ತುಟಿಬಿಚ್ಚಿದ ಸಂತೃಪ್ತಿಯ ನಗು. ಅನಾಥಶ್ರಮದ ಸಂಪೂರ್ಣ ಮೇಲ್ವಿಚಾರಣೆ ಅವರದಾಯಿತು.ಮತ್ತೆ ನಾಲ್ಕುದಿನಗಳಲ್ಲಿ ಅವರ ಕೈಗೆ ಚಂದಾದ ಹುಂಡಿ ಬಂದಾಗ ಮನೆಯವರಿಗೆಲ್ಲ ಕುಚೋದ್ಯದ ನಗು!
“ನಮಗೆಲ್ಲ ಏನೋ ಬೋಧನೆ ಮಾಡ್ತಿದ್ದ…ಈಗ ಇವನಿಗ ಯಾವ ಹುಚ್ಚು!” ಅವನ ತಾಯಿ ವ್ಯಂಗ್ಯವಾಗಿ ಅವರ ಕಿವಿಗೆ ಬೀಳುವಂತೆಯೇ ಹೇಳಿದರು.ದೀನಾನಾಥರು ಸುಮ್ಮನೆ ಊರೊಳಕ್ಕೆ ನಡೆದರು.ಸಂಜೆ ಸಭೆಯಲ್ಲಿ ಗಹನವಾದ ಸಮಾಲೋಚನೆ. ಹಿಂದಿನದಕ್ಕಿಂತ ಈ ಸಭೆ ಸ್ವಲ್ಪ ದೊಡ್ಡದಾಗಿತ್ತು. ಹೊಸ ಹೊಸ ತಲೆಗಳು, ಹೊಸ ಹೊಸ ವಿಚಾರಗಳು… ಬರುವ ವಾರ ಸರಳ-ಸಾಮೂಹಿಕ ವಿವಾಹದ ಏರ್ಪಾಟು ನಡೆದಿತ್ತು.ಅದ್ದೂರಿಯಲ್ಲದಿದ್ದರೂ ತೃಪ್ತಿಕರವಾಗಿ ಮದುವೆಗಳು ಜರುಗಿದವು. ಅವರ ಕಾಲಿಗೆರೆಗುವ ಸಾಲು ಸಾಲು ದಂಪತಿಗಳು. ಕೃತಜ್ಞತೆಯ ಮುಗಿದ ಕರಗಳು.
“ಅಂತೂ ಭಾಳ್ ಮಂದೀಗ ಉಪಯೋಗ ಆಗೋ ಹಂಗ ಕೆಲಸ ಮಾಡೀರಿ… ದೇವರು ಒಳ್ಳೇದು ಮಾಡಲಿ”ತುಂಬು ಮನದ ಹರಕೆಗಳು.ಉತ್ಸಾಹಗೆಡದೆ ದೀನಾನಾಥರು ವಿದ್ಯಾರ್ಥಿಗಳ ಹಾಸ್ಟೆಲ್ಲಿಗಾಗಿ ಕೆಲಸ ಮುಂದುವರೆಸಿದರು. ಹಾಸ್ಟೆಲ್ಲಿನ ಉದ್ಘಾಟನೆಯ ದಿನವಂತೂ ದೀನಾನಾಥರಿಗೆ ಎಲ್ಲರಿಂದಲೂ ಹೊಗಳಿಕೆಯ ಸುರಿಮಳೆ. ಕುಬ್ಬರಾಗಿ ವಿನಯದಿಂದ ಕೈ ಜೋಡಿಸಿ ಅವರು ‘ಇದರಾಗ ನನ್ನದೇನೂ ಇಲ್ರೀ. ನಿಮ್ಮೆಲ್ರ ಪ್ರಯತ್ನ…ಶ್ರಮ’ ಎಂದಾಗ ಹರ್ಷೋದ್ಧಾರ.
ಕೆಲವೇ ದಿನಗಳಲ್ಲಿ ದೀನಾನಾಥರು ಪ್ರಸಿದ್ಧಿಯ ಪಟ್ಟವೇರಿದ್ದರು. ಎಲ್ಲರ ಬಾಯಲ್ಲೂ ಅವರ ಮಾತೇ, ಕೀರ್ತಿಯೇ…ಮೊದಲಿನ ಹಾಗೆ ದೀನಾನಾಥರಿಗೆ, ಮನೆಯವರಿಗೆ ಬೋಧನೆ ಮಾಡುತ್ತ ಕುಳಿತುಕೊಳ್ಳಲು ಸಮಯವಿಲ್ಲ. ಆಶ್ರಮದವರು, ಹಾಸ್ಟೆಲಿನವರು ಇನ್ನೂ ಹಲವಾರು ಸಂಘ ಸಂಸ್ಥೆಗಳವರು ಅವರ ಸಂದರ್ಶನಕ್ಕಾಗಿ ಹೊರಗೆ ಕಾದು ಕುಳಿತಿರುತ್ತಾರೆ. ಹೊಸಹೊಸ ಬೇಡಿಕೆಗಳು ತಲೆಯೆತ್ತುತ್ತಿರುತ್ತವೆ. ಅವರ ಮುಂದೆ ಚಾಚಿ ಬಂದ ಹಸ್ತ ನಿರಾಶೆಯಿಂದ ಎಂದೂ ಮುದುರಿಕೊಂಡದ್ದೇ ಇಲ್ಲ. ಮಂಡಲಿಯವರೊಡನೆ ಚರ್ಚಿಸಿ, ದೀನಾನಾಥರು ಸಹಾಯ ಬೇಡಿ ಬಂದವರನ್ನು ನಗುತ್ತ ಹಿಂದಿರುಗುವಂತೆ ಮಾಡುವ ವಾಡಿಕೆ ಜನಜನಿತವಾಗಿತ್ತು.ದಿನೇದಿನೇ ಅವರ ಜನಪ್ರಿಯತೆ, ಉದಾರ ನೆರವಿನ ಮನೋಭಾವದ ಕೀರ್ತಿ ಉದ್ದಗಲಕ್ಕೂ ಹರಡುತ್ತಾ ಹೋಯಿತು. ಅವರ ಸುತ್ತಲಿನ ಮಂಡಲಿ ವಿಸ್ತಾರಗೊಳ್ಳುತ್ತಾ ಹೋಯಿತು. ಅವರ ಅನುಯಾಯಿಗಳು ದಟ್ಟವಾಗುತ್ತ ಹೋದರು.ಆಗಾಗ ಅವರು ಚರ್ಚಾಗೋಷ್ಠಿಗಳನ್ನು ಏರ್ಪಡಿಸುತ್ತಿದ್ದರು.
“ದೇವರ್ನ ಇಲ್ಲ ಅನ್ನೋ ಹಂಗಿಲ್ಲ…ಜನ ಹೇಳೋ ಹಂಗ ಅವ ಇರೋದು ಗುಡ್ಯಾಗಲ್ಲ, ಬೇರೆ ಬೇರೆ ರೂಪದ್ಯಾಗ… ನಾವು ಆಚರಿಸೋ ಸತ್ಯ, ಧರ್ಮ, ನ್ಯಾಯ, ಕರ್ತವ್ಯ ಬ್ಯಾರೆ ಬ್ಯಾರೆ ಹಂತದೊಳಗ ಬಿಚ್ತಾ ಹೋದಂಗ ಹರಡಿಕೊಳ್ತಾ ಹೋಗೋ ಅನಂತ ಶಕ್ತೇನ ದೇವ್ರ ಅಂತ ಯಾಕ್ ಒಪ್ಕೋಬಾರ್ದು?”ಹೌದೆನಿಸಿತು ಹಲವರಿಗೆ. ಮತ್ತೆ ಕೆಲವರಿಗೆ ಸುಲಭದಲ್ಲಿ ಒಪ್ಪಿಕೊಳ್ಳಲು ಬಿಂಕ. ಚರ್ಚೆ ಮಾಡುವ ಚಪಲ. ಅವರ ಬಳಿ ಚರ್ಚಿಸಿ ಗೆಲ್ಲುವುದು ಕಠಿಣ ಎಂಬ ಅನುಭವ ಕೆಲವರಿಗೆ. ಅವರ ವಿಶ್ಲೇಷಣೆ ಬಹುಮಂದಿಯ ಮನಸ್ಸನ್ನು ನೇರ ಪ್ರವೇಶಿಸಿತು. ಅವರ ವಿಚಾರಧಾರೆಯಲ್ಲಿ ಸಾರ ಕಾಣತೊಡಗಿದ್ದರಿಂದ ಹಿಂಬಾಲಕರು ಸಹಾ ಅವರನ್ನು ಆವರಿಸಿತೊಡಗಿದರು.ಆದರೆ ಅವರ ಅಪೇಕ್ಷೆಯಂತೆ ತಮ್ಮ ಮನೆಯವರನ್ನು ಬದಲಿಸುವುದು ಅವರಿಗೆ ಸುಲಭದಲ್ಲಾಗಲಿಲ್ಲ. ಅದಕ್ಕಾಗಿ ಅವರು ಅವಸರವೂ ಪಡಲಿಲ್ಲ. ಜನರ ಬಾಯಲ್ಲಿ ಅವರ ಸುತ್ತಿ ಕೇಳಿ, ಅವರ ಮನೆಯವರು ಅವರ ಕಾರ್ಯವನ್ನು ಹಂಗಿಸುವುದನ್ನು ನಿಲ್ಲಿಸಿದ್ದರು. ಅವರ ಸುತ್ತ ಮುಕುರುವ ಸಮಾಜದ ಗಣ್ಯರನ್ನು, ಸಾಮಾಜಿಕ ಕಾರ್ಯಕರ್ತರನ್ನು ಕಾಣುತ್ತ, ಅವರ ಕೃತಿಗಳ ಬಗ್ಗೆ ಗೌರವ ಕ್ರಮೇಣ ಮೊಳಕೆಯೊಡೆದಿತ್ತು.
![](http://sandhyapatrike.com/wp-content/uploads/2021/02/old-man1.jpg)
ಕಾಲ ಸರಿಯುವುದರಲ್ಲಿ ದೀನಾನಾಥರ ಶ್ರಮ-ಫಲದಿಂದ ಅನೇಕ ಶಾಲಾ-ಕಾಲೇಜುಗಳು, ಆಸ್ಪತ್ರೆ- ಆಶ್ರಮ, ಹಾಸ್ಟೆಲ್ಲುಗಳು ಬದುಕು ಕಂಡವು. ಗಡ್ಡ ಬೋಳಿಸಲೂ ಅವರಿಗೆ ಬಿಡುವಿಲ್ಲ. ಹಗಲೂ ರಾತ್ರಿ ಜನಸೇವೆಯ ಚಿಂತೆಯಲ್ಲೇ ಅವರು ತೆಳ್ಳಗಾದರು. ಅಂತೂ ಅವರ ಕೂದಲು ಬೆಳ್ಳಿ ಅಂಚು ನೇಯ್ದುಕೊಳ್ಳವಷ್ಟರಲ್ಲಿ ಅವರ ಮನೆ ಸಂಪೂರ್ಣ ಬದಲಾವಣೆ ಕಂಡು, ದೇವರಮನೆ ಕೊಡುಗೈ ಉಗ್ರಾಣವಾಗಿತ್ತು. ಈಗ ಬಡಬಗ್ಗರಿಗೆ ದಾನ-ಧರ್ಮ, ನೆರೆಹೊರೆಯವರಿಗೆ ಸಹಾಯಮಾಡುವ ನಂಬಿಕೆ ಅವರ ಹೆಂಡತಿಯಲ್ಲಿ ಆಳವಾಗಿ ಬೇರುಬಿಟ್ಟಿತ್ತು. ದೀನಾನಾಥರ ತಾಯಿಯೂ ಎದುರಾಡದೆ ಬದಲಾವಣೆಯ ಗರಿತೊಟ್ಟು ನಡೆದಿದ್ದರು. ಹಲವಾರು ವರುಷಗಳಿಂದ ನಡೆಸಿಕೊಂಡು ಬಂದಿದ್ದ ಮೂಢನಂಬಿಕೆ, ಪೂಜೆ ಇತ್ಯಾದಿಗಳಿಗೆ ತೆರೆ ಎಳೆದು ಅವರ ತಂದೆಯೂ ಮಗನ ಭಾಷಣ ಕೇಳಲು ಚಾಪೆಯ ಒಬ್ಬ ಪ್ರೇಕ್ಷಕರಾಗಿದ್ದರು.‘
”ಶುಷ್ಕ ವ್ಯಕ್ತಿಪೂಜಾ, ಪಂಥ, ಪ್ರತಿಮೆ, ಅರ್ಥಿಲ್ಲದ ಆಚರಣೇನ ಬಹಿಷ್ಕರಿಸಬೇಕು ಅನ್ನೋದ್ ನನ್ ಧ್ಯೇಯ… ಜನರ ಸಲುವಾಗಿ ಏನಾದ್ರೂ ಮಾಡೋಣ…ಹಳೀ ಕಟ್ಟಳೇನ ಬಿಟ್ಟು ಹೊಸ ದಾರ್ಯಾಗ ಹೆಜ್ಜೀ ಹಾಕೋಣ… ನಮಗೆ ಗುಂಪಿಲ್ಲ. ಪಂಥಿಲ್ಲ… ಅದನ್ನು ಹರದೊಗೆದು ಬಂದ ಅಪಂಥೀಯರು ನಾವಾಗೋಣ.. ಮಾನವೀಯತೆ ಅಷ್ಟ ನಮ್ ಗುರಿ…’– ಗಂಟೆಗಟ್ಟಲೆ ಅವರು ಮಾತನಾಡಿದರು.ಜನಗಳಿಗೂ ಅದು ಹಿಡಿಸಿತು.
‘ಇವತ್ನಿಂದ ನಮಗ ಯಾವ ಪಂಥಾನೂ ಇಲ್ಲ. ನಮ್ಮನ್ನ ಯಾರ್ಗೂ ಮೀಸಲಾಗಿ ಇಟ್ಟುಕೊಳ್ಳುದ್ದಿಲ್ಲ. ನಾವು ಸ್ವತಂತ್ರರು’ ಎಂದು ದಿಟ್ಟವಾಗಿ ಮನಸಾ ಪ್ರತಿಜ್ಞೆ ತೊಟ್ಟು ಘೋಷಣೆ ಕೂಗಿದಾಗ ದೀನಾನಾಥರ ಮುಖದ ಮೇಲೆ ಬೆಳೆದಿಂಗಳು ಬಳುಕಿತು.
ದೀನಾನಾಥರ ಸಮಾಜಸೇವಾ ಮನೋಭಾವ, ವ್ಯಕ್ತಿತ್ವ, ಜನರ ಮೇಲೆ ಗಾಢಪ್ರಭಾವ ಬೀರಿತ್ತು. ಸ್ವಭಾವತಃ ಮೃದುವಾದ ಅವರ ಮಮತಾಪೂರಿತ ಹೃದಯ, ಮಾತುಗಳಿಗೆ ಮಾರುಹೋದರು. ಜೊತೆಗೆ ಅವರು ಹೇಳುವ ತತ್ತ್ವವೂ ಸಿಹಿಯಾಗಿ ಕಾಣತೊಡಗಿತು. ಬಲವಾಗುತ್ತ ಹೋದ ಅವರ ಶಿಷ್ಯಕೋಟಿ, ನೂರು-ಸಾವಿರವಾಗಿ ಅವರ ಕಲ್ಪನೆಯ ರೂಪುರೇಷಗಳನ್ನು ಕೆಲವೇ ದಿನಗಳಲ್ಲಿ ಕಾರ್ಯಕ್ಕಿಳಿಸುತ್ತಿದ್ದರು. ಹೀಗಾಗಿ ಜನತೆ, ಅವರ ಮಾರ್ಗದರ್ಶನ ಪಡೆಯಲು ಕಿಕ್ಕಿರಿಯುತ್ತಿದ್ದರು. ದಿನದಿಂದ ದಿನಕ್ಕೆ ಅವರ ಆತ್ಮೀಯ ಬೆಸುಗೆ ಭದ್ರವಾಗಿ ಬೆಳೆಯುತ್ತಲೇ ಹೋಯಿತು.
ಅದೊಂದು ಕಾರ್ಮೋಡದ ದಿನ… ಜನ ದಿಕ್ಕೆಟ್ಟವರಂತೆ ಗೊಳೋ ಎಂದು ಅಳುತ್ತ ದೀನಾನಾಥರ ಮನೆಯ ಸುತ್ತ ಘೇರಾಯಿಸಿದ್ದರು.ಎರಡು ದಿನ ಪೂರ್ತಿ, ಬೆಳಗಿನ ಜಾವದಿಂದ ರಾತ್ರಿಯವರೆಗೂ ಜನಸಾಗರ, ಜನಸೇವಾಧುರೀಣ ದೀನಾನಾಥರ ಅಂತಿಮದರ್ಶನ ಪಡೆಯುವುದಕ್ಕಾಗಿ ನುಗ್ಗಾಡುತ್ತಿದ್ದರು. ತಾಯಿಯನ್ನು ಕಳೆದುಕೊಂಡ ತಬ್ಬಲಿಗಳಂತೆ ಅವರ ಶಿಷ್ಯ ಕೋಟಿ ಒದ್ದಾಡಿ ಅಶ್ರುತರ್ಪಣ ಸುರಿಸಿದರು.ಊರಿಗೆ ಊರೇ ಅವರ ಶವಯಾತ್ರೆಯಲ್ಲಿ ಪಾಲ್ಗೊಂಡಿತು. ಬೀದಿ- ಬೀದಿಗಳಲ್ಲಿ ಉತ್ಸವ ನಡೆಯಿತು. ದೊಡ್ಡವರು, ಚಿಕ್ಕವರೆನ್ನದೆ ಎಲ್ಲರೂ ಅವರ ಪಾದಕ್ಕೆ ತಲೆಸೋಕಿಸಿದರು. ಮಕ್ಕಳನ್ನು ಅವರ ಕಾಲಡಿಗೆ ಹಾಕಿದರು. ಹೂವಿನ ತೇರಲ್ಲಿ ಅವರ ಪಾರ್ಥಿವ ಶರೀರ ಮುಚ್ಚಿಹೋಗಿತ್ತು. ದೀನಾನಾಥರ ಮೇಲೆ ರಚಿಸಿದ ಭಜನೆ, ಪದ್ಯಗಳನ್ನು ಹಾಡುತ್ತ ಅವರ ಮುಂದೆ ನಡೆಯುತ್ತಿತ್ತು ಅನುಯಾಯಿಗಳ ತಂಡ. ಸುತ್ತಮುತ್ತಲ ಪ್ರದೇಶಗಳಿಂದಲೂ ಜನಸಾಲು ಇಲ್ಲಿಗೆ ಹರಿದು ಬರುತ್ತಿತ್ತು.
ಹತ್ತುದಿನಗಳು ಶೋಕದ ಮುಸುಕು ತೊಟ್ಟ ಮನೆ-ಮನಗಳೂ ಸೂತಕಗೊಂಡಿದ್ದವು. ಎಲ್ಲೆಲ್ಲೂ ಅವರ ಉನ್ನತ ಗುಣಗಳ ಸುದ್ದಿಯೇ ಹಾರಾಡುತ್ತಿದ್ದವು. ಭಜನಾ ಮಂದಿರಗಳಲ್ಲದೆ ಪ್ರತಿ ಸೂರಿನಡಿಯೂ ಅವರ ಫೋಟೋ ಮಲ್ಲಿಗೆಹಾರ ಧರಿಸಿ ರಾರಾಜಿಸಿದವು. ಮನೆಯ ಹೆಂಗಳೆಯರು ಸಂಜೆ ದೀಪ ಹಚ್ಚಿ ಮುಂಬಾಗಿಲು ತೆರೆದು ಅವರ ಚಿತ್ರಪಟದೆದುರು ನಿಂತು ಕೈಮುಗಿದು ಊದುಬತ್ತಿಗಳನ್ನು ಹಚ್ಚಿಟ್ಟರು.ಮೊದಲ ವರ್ಷದ ಅವರ ಜಯಂತ್ಯುತ್ಸವವನ್ನು ಜನ ಅದ್ಧೂರಿಯಾಗಿ ಆಚರಿಸಿದರು. ಎಲ್ಲೆಲ್ಲೂ ಅವರ ಹೆಸರಿನ ಮಂಟಪಗಳು, ಕಾರ್ಯಕ್ರಮ-ಉಪನ್ಯಾಸಗಳು. ಅವರ ದೊಡ್ಡ ಶಿಲಾಪ್ರತಿಮೆಯನ್ನು ಚೌಕದ ಮಧ್ಯದಲ್ಲಿ ಸ್ಥಾಪಿಸಿ, ಮಂತ್ರಿ ಮಹೋದಯರ ಕೈಯಿಂದ ಅನಾವರಣ ಮಾಡಿಸಿದರು. ನೂರಾರು ಮಾಲೆಗಳು ಅವರ ಕೊರಳಿಗೆ ಬಿದ್ದವು. ಅಡ್ಡ ಬೀಳುವ ತಲೆಗಳೆಷ್ಟೋ!
![](http://sandhyapatrike.com/wp-content/uploads/2021/02/nee-maayeyo-story-1.jpg)
ಕೆಲವೇ ದಿನಗಳಲ್ಲಿ ಹಲವಾರು ದೀನಾನಾಥ ಮಂಡಲಿಯವರು ಬೇರೆ ಬೇರೆ ಕಡೆ ಭಜನಾ ಮಂದಿರಗಳನ್ನು ಕಟ್ಟಿಸಿಕೊಂಡು ಅವರ ಪ್ರತಿಮೆಗಳನ್ನು ಸ್ಥಾಪಿಸಿದರು. ಚಂದಾ ಎತ್ತಿ ಆಲಂಕಾರಿಕ ಗುಡಿ-ಗೋಪುರಗಳನ್ನು ಕಟ್ಟಿಸಿದರು. ಪ್ರತಿವರ್ಷ ಅವರ ಪುಣ್ಯತಿಥಿಯಂದು ಊರಲ್ಲೆಲ್ಲಾ ಸಂಭ್ರಮ. ದಸರಾ ಆಚರಿಸಿದಂತೆ ಹತ್ತು ದಿನಗಳೂ ವಿವಿಧ ಕಾರ್ಯಕ್ರಮಗಳು, ಜಾತ್ರೆ, ಜನಜಂಗುಳಿ.
*
“ದೀನೂ… ಏಯ್ ದೀನೂ” – ಮಧ್ಯವಯಸ್ಕನೊಬ್ಬ ರಸ್ತೆ ದಾಟುತ್ತಿದ್ದ ತನ್ನ ಹತ್ತುವರ್ಷದ ಮಗನ ರೆಟ್ಟೆ ಹಿಡಿದು ಜೋರಾಗಿ ಅಬ್ಬರಿಸಿದ.ಸರಸರ ಮುಂದುವರೆಯುತ್ತಿದ್ದ ಯುವಕನನ್ನು ಹಿಂಬಾಲಿಸುತ್ತಿದ್ದ ಮುದುಕಪ್ಪ ಗಕ್ಕನೆ ನಿಂತ.
‘ಈ ಹುಡುಗನ ಹೆಸರೇನು?’“
”ದೀನಾನಾಥ…..ದೀನಾನಾಥ ಸ್ವಾಮಿಜಿಯವರ ದಯದಿಂದ ಹುಟ್ಟಿದಂವ…ಎಲ್ಲಾ ಆ ಅವತಾರ ಪುರುಷರ ದಯಾ…” ಎಂದು ನುಡಿದು ತನ್ಮಯನಾಗಿ ಆಕಾಶದತ್ತ ತನ್ನೆರಡು ಕೈಯನ್ನೂ ಚಾಚಿ ತೋರಿದ ಆ ಹುಡುಗನ ತಂದೆ.
“ನೀವು ಇಲ್ಲಿಯವರೇನಾ?” ಮುದುಕಪ್ಪ ಅಚ್ಚರಿಯಿಂದ ಪ್ರಶ್ನಿಸಿದ.
“ಹೌದು…ನಮ್ತಾತ ಮುತ್ತಾತಂದಿರ ಕಾಲದಿಂದ ನಾವು ದೀನಾನಾಥ ಪಂಥದವರು… ಅವರು ನಮ್ಮ ಆಚಾರ್ಯ ಪುರುಷರು….. ಅವರ ಬಗ್ಗೆ ಪವಾಡ ಕತೆಗಳು ಒಂದಲ್ಲ. ಎರಡಲ್ಲ…..”.
ಮುದುಕಪ್ಪ ಶಿಲ್ಪ ಕಡೆದಂತೆ ನಿಂತಲ್ಲೇ ನಿಂತ ಬೆರಗಿನಿಂದ.ಯುವಕ ಸರಸರನೆ ಮುಂದಿನ ಗಲ್ಲಿಯಲ್ಲಿ ಮರೆಯಾಗುತ್ತಿರುವುದನ್ನು ಗಮನಿಸಿ, ತಟ್ಟನೆ ಕೋಲಿಗೆ ಚಾಲನೆ ತುಂಬಿ ದಡದಡನೆ ಮುಂದುವರೆದ. ಉದ್ದನೆಯ ಆ ರಸೆಯ ಕೊನೆಯಲ್ಲಿ ಬಲಭಾಗದ ತಿರುವಿನ ಮೂಲೆಯಲ್ಲೊಂದು ಪಾಳುಬಿದ್ದ ಕಟ್ಟಡ. ಮುದುಕಪ್ಪನ ನಡಿಗೆಯ ಗತಿ ಮಂದವಾಯಿತು. ಹುಬ್ಬಿಗೆ ಕೈ ಹಚ್ಚಿ ಕಣ್ಣು ಕಿವುಚಿ ದಿಟ್ಟಿಸಿದ.
‘ದೀನಾನಾಥ ಆಶ್ರಮ’ ಎಂದು ತೂಗಾಡುತ್ತಿದ್ದ ಬೋರ್ಡು!ಮುದುಕಪ್ಪನ ಕಣ್ಣೊಳಗೆ ಕತ್ತಲೆಯ ಕಾವಳ ತುಂಬಿ ಬಂದಂತಾಗಿ ಜೋಲಿ ಹೊಡೆದ. ಸಾವರಿಸಿಕೊಂಡು ಎದುರಿನ ಸಂದಿಗೆ ತಿರುಗಿದ. ‘ದೀನಾನಾಥರ ಉಚಿತ ವಿದ್ಯಾರ್ಥಿನಿಲಯ’ ಬೋರ್ಡಿನ ಮುಖದ ತುಂಬಾ ಸುಣ್ಣದ ಪಟ್ಟೆಗಳು. ಪಕ್ಕದಲ್ಲೇ ಹೊಸದೊಂದು ಫಲಕ! …‘ದೀನಾನಾಥ ಸ್ವಾಮಿಜಿ ದೇವಾಲಯ’…ಘಮ್ಮನೆ ಧೂಪದ ಸುವಾಸನೆ ತೂರಿಬಂದು ಮೂಗನ್ನು ತುಂಬಿಕೊಂಡಿತು. ಮುದುಕಪ್ಪ ಕೆಮ್ಮುತ್ತ ಮುಂದೆ ನಡೆದ. ಘಂಟೆಯ ಠಣ ಠಣಾತ್ಕಾರ… ಭಕ್ತಾದಿಗಳು ಪ್ರದಕ್ಷಿಣೆ ಬಂದು ನಮಸ್ಕರಿಸುವುದು ಕಂಡಿತು.
![](http://sandhyapatrike.com/wp-content/uploads/2021/02/youth-1.jpg)
ಯುವಕ ಮುಂದುವರಿಯುತ್ತಿದ್ದವನು ತಟ್ಟನೆ ತನ್ನ ಚಪ್ಪಲಿ ಪಕ್ಕಕ್ಕೆ ಕಳಚಿ, ಒಂದು ಕ್ಷಣ ಕಣ್ಮುಚ್ಚಿ ಒಳಗಿದ್ದ ಮೂರ್ತಿಗೆ ಕೈ ಮುಗಿದು, ಮತ್ತೆ ಚಪ್ಪಲಿ ಮೆಟ್ಟಿ, ಬಗಲಿನ ಚೀಲ ತೂಗಾಡಿಸಿಕೊಂಡು ಹೆಜ್ಜೆ ಚುರುಕಾಗಿಸಿದ.ಸುತ್ತ ಇಟ್ಟಾಡುತ್ತಿದ್ದ ಘಾಟು ನೆತ್ತಿಗೇರಿ ಮುದುಕಪ್ಪ ಕೆಮ್ಮಿ ಕ್ಯಾಕರಿಸಿ ಪಕ್ಕಕ್ಕೆ ಉಗುಳಿ ಬೇಗ ಬೇಗ ನಡೆದರೂ ಅವನಿಗೆ ಯುವಕನ ಹೆಜ್ಜೆಗೆ ಸರಿಗಟ್ಟಲಾಗಲಿಲ್ಲ. ಕುಂಟುತ್ತ ಮುಂದಡಿಯಿಟ್ಟ.
ಸುತ್ತ ಆರೆಂಟು ರಸ್ತೆಗಳು ಹರಿದು ಬಂದು ಸೇರುವ ಜಾಗದಲ್ಲಿ ದೊಡ್ಡ ವೃತ್ತ. ಸುತ್ತ ಜಾತ್ರೆಗೆ ನೆರೆದ ಜನಗಳ ಗಜಿಬಿಜಿ. ರಸ್ತೆಯ ಎರಡೂ ಬದಿಯಲ್ಲಿ ಸಾಲು ಸಾಲು ಅಂಗಡಿಗಳು. ಬಿರುಸಿನ ವ್ಯಾಪಾರ. ಯುವಕ ತಟ್ಟನೆ ಅಂಗಡಿಯೊಂದರ ಮುಂದೆ ನಿಂತ. ಮುದುಕಪ್ಪನ ಹೆಜ್ಜೆಯೂ ತಡೆಯಿತು. ಅಂಗಡಿಯವ ಉತ್ಸಾಹದಿಂದ ‘ಏನ್ ಬೇಡ್ತೀರಿ ಸಾರ್?’ಎಂದ.ಅಂಗಡಿಯ ಮುಂಭಾಗದ ಛಾವಣಿಯಿಂದ ಹೊರಗೆ ತೋರಣದಂತೆ ತೂಗುಬಿದ್ದಿದ್ದ ಸ್ವಾಮಿಜಿಯ ತರಹಾವರಿ ಚಿತ್ರಪಟಗಳು, ರುದ್ರಾಕ್ಷಿ ಮಣಿಗಳು, ದೀನಾನಾಥರ ಭಾವಚಿತ್ರದ ಕ್ಯಾಲೆಂಡರುಗಳು, ಪದಕಗಳು, ತಾಯಿತಗಳು, ಬೀಗದಕೈ ಸರಪಳಿಗಳು ಇಂಥವೇ ಹತ್ತು ಹಲವಾರು ವಸ್ತುಗಳು ಸ್ವಾಮೀಜಿಯ ಅಚ್ಚು ತಳೆದು ಎಲ್ಲ ಅಂಗಡಿಯ ತುಂಬ ಕಿಕ್ಕಿರಿದು ಕುಳಿತಿದ್ದವು.‘
”ಸ್ವಾಮೀಜಿ ಪ್ರಸಾದ ಕೊಡಿ ಸಾಕು’ ಕೇಳಿದ ಯುವಕ.ಪಚ್ಚಕರ್ಪೂರದ ಸುಗಂಧ ಹೊತ್ತ ಕವರೊಂದು ಯುವಕನ ಕೈಗೆ ಬಂತು. ಅದನ್ನವನು ಕಣ್ಣಿಗೊತ್ತಿಕೊಂಡು ಚೀಲದೊಳಗಿಟ್ಟುಕೊಂಡು ಎದುರಿನ ಪಾರ್ಕಿನೊಳಗೆ ನುಗ್ಗಿ ಕಲ್ಲುಬೆಂಚಿನ ಮೇಲೆ ಧೊಪ್ಪನೆ ಕುಳಿತು, ತನ್ನ ಹಡಪ ಪಕ್ಕಕ್ಕೆ ಹರವಿಕೊಂಡು ಪೆನ್ನಿನ ಕ್ಯಾಪು ತೆಗೆದ.“
”ವಿಷಯ ಸಂಗ್ರಹ ಆತಾ?”
ಯುವಕ ಗಕ್ಕನೆ ಕತ್ತು ತಿರುಗಿಸಿ ಹುಬ್ಬೇರಿಸಿ ಹಿಂದಕ್ಕೆ ನೋಡಿದ.ಅದೇ ಮುದುಕಪ್ಪ! ವಿಷಾದ ನಗೆ ಚಿಮುಕಿಸುತ್ತ ಹಿಂಬದಿ ನಿಂತಿದ್ದಾನೆ!
“ಆಯ್ತು ಇನ್ನೇನು ಊರಿಗೆ ಹೋದ ತತ್‍ಕ್ಷಣ ಗ್ರಂಥ ಶುರು ಮಾಡ್ಬೇಕು” – ಅವನದು ಹೆಮ್ಮೆಯ ಬೀಗು. ‘ಮಹನೀಯರೇ…ಮಹಿಳೆಯರೇ…ಜನ್ರ ಕಲ್ಯಾಣದ ಸಲುವಾಗಿ ನಮ್ಮ ಸ್ವಾಮೀಜಿಯವರು ತಮ್ಮದೇ ಆದ ಒಂದು ಪಂಥ ಕಟ್ಟಿದರು, ಗುಂಪುಗೂಡಿಸಿದರು…’ ಮೈಕು ಕರ್ಕಶವಾಗಿ ಅರಚುತ್ತಿತ್ತು.
ಮುದುಕಪ್ಪನ ಮುಖದ ತುಂಬ ಒಮ್ಮೆಲೆ ನೋವು ಸ್ರವಿಸಿತು. ಅವನು ನಿಟ್ಟುಸಿರುಗುಳಿ ಮುಖ ಕಿವುಚಿ ತನ್ನ ಎರಡು ಕಿವಿಗಳನ್ನೂ ಮುಚ್ಚಿಕೊಂಡಾಗ ಯುವಕನಿಗೆ ಅಚ್ಚರಿ! ವಿಲಕ್ಷಣವಾಗಿ ಅವನನ್ನೇ ದಿಟ್ಟಿಸಿದ.
‘ಕಡೀಕ ಒಂದ್ಮಾತು ತಮ್ಮ… ಯಾವುದಾದ್ರೂ ಉಪಯೋಗ ಆಗೋಂಥಾ ವಿಚಾರ ಬರೆಯೋದ್ ಬಿಟ್ಟು ಈ ಸ್ವಾಮಿ, ಬಾಬಾ ಅಂತ ನಿಮ್ಮಂಥ ಕಲಿತೋರು, ಖರೇ ಏನು ಅಂತ ತಿಳಿಕೊಳ್ದ ಮೂಢರಾಗಿ ನಡೀತಿದ್ದೀರಲ್ಲಾ ಅಂತ ಕಾಳಜಿ ಅಷ್ಟ…..ನೀನಾರೂ ಖರೇವನ್ನ ಬರ್ದು, ಸತ್ತಿರೋ ಅವರ ಆತ್ಮಕ್ಕೆ ಶಾಂತಿ ತಂದ್ಕೊಡು’- ಏಕೋ ಅವನ ಧ್ವನಿ ದೀನವಾಗುತ್ತಿದೆ ಎನಿಸಿತು ಯುವಕನಿಗೆ. ಈ ಹುಚ್ಚ ತನಗೆಲ್ಲಿ ಗಂಟುಬಿದ್ದ ಎಂದು ಬೇಸರ, ಉಪೇಕ್ಷೆಯಿಂದ ತಲೆಕೆರೆದು ಆಕಳಿಸಿದ. ಅವನನ್ನು ನೀಗಿಸಿಕೊಳ್ಳವ ಉಪಾಯಕ್ಕಾಗಿ ಅತ್ತಿತ್ತ ನೋಡುತ್ತ ಪಕ್ಕದಲ್ಲಿದ್ದ ಪ್ರಸಾದದ ಕವರನ್ನು ಕೈಗೆತ್ತಿಕೊಂಡು ಮುದುಕಪ್ಪನ ಮುಂದೆ ಎರಡು ಹಳಕು ಕಲ್ಲುಸಕ್ಕರೆ ಚಾಚಿ ‘ಪ್ರಸಾದ ತಿಂದು ನೀನಿನ್ನು ಹೊರಡು… ನನಗೆ ಪುರುಸೊತ್ತಿಲ್ಲ” ಎಂದ.ಮುದುಕಪ್ಪನ ಕೈ ಮರಗಟ್ಟಿತ್ತು. ಕಣ್ಣೀರಿನ ಪೊರೆಯಿಂದ ಹೊಳೆಯುತ್ತಿದ್ದ ತನ್ನ ಕಣ್ಣುಗಳನ್ನು ಎದುರಿಗೆ ಕಂಬದ ಮೇಲೆ ಅಡ್ಡಡ್ಡಲಾಗಿ ಕಟ್ಟಿದ್ದ ಬಟ್ಟೆಯ ಬ್ಯಾನರಿನ ಮೇಲಿನ ಅಕ್ಷರಗಳ ಮೇಲೆ ತೀಕ್ಷ್ಮವಾಗಿ ಓಡಾಡಿಸುವುದರಲ್ಲಿ ಗಮನ ನೆಟ್ಟಿದ್ದ ಆ ಮುದುಕಪ್ಪ.
‘ದೀನಾನಾಥ ಸ್ವಾಮಿಜಿ ಜಯಂತಿ’… ಗದ್ಗದಿತ ಧ್ವನಿ ಬಡಕಲಾಗಿ ಹೊರಬಿತ್ತು.
![](http://sandhyapatrike.com/wp-content/uploads/2021/02/old-man-8.jpg)
“ನನ್ನ ಯಾರು ಅರ್ಥ ಮಾಡ್ಕೊಳ್ಳೇ ಇಲ್ಲಾ, ಪಂಥ-ಜಾತಿ ಇರಬಾರದು, ವ್ಯಕ್ತಿ ಪೂಜಾ ಮಾಡಬಾರ್ದು ಅಂತ ಹೊರಟ ನನ್ನದೇ ಒಂದು ಜಾತಿ, ಪಂಥ ಬೆಳ್ಕೊಂಡ್ತಾ!…ಅಯ್ಯೋ… ಕಡೀಕ ನನ್ನನ್ನಾ ಪೂಜಾ ಮಾಡ್ಲಿಕ್ ಸುರು ಮಾಡಿದ್ರ……. ಎಂಥ ಹುಚ್ಚು ಜನ್ರಪ್ಪ ಇವ್ರು !….ಅಯ್ಯೋ ದೇವ್ರಾ……”ಅಳಲು ತುಂಬಿದ ಭಾರದ ಧ್ವನಿ ಹಿಂದೆ ಗದ್ಗದಿಸಿದಾಗ ಯುವಕ ಬೆಚ್ಚಿಬಿದ್ದ. ಕೈಯಲ್ಲಿದ್ದ ಪ್ರಸಾದದ ಪೊಟ್ಟಣವನ್ನು ಕೆಳಗೆತ್ತಿ ಹಾಕಿ ದಢಾರನೆ ಎದ್ದುನಿಂತು ಹಿಂತಿರುಗಿ ನೋಡಿದ. ಯಾರೂ ಇಲ್ಲ!!!… ಯುವಕ ದಿಗ್ಬ್ರಮೆಯಿಂದ ಗರಗರ ಸುತ್ತಿ ಆ ಮುದುಕಪ್ಪನಿಗಾಗಿ ಹುಡುಕಾಡಿದ…. ಅವನ ಸುಳಿವೇ ಇಲ್ಲ!.. ಅವನಾಡಿದ ನುಡಿ ಕಿವಿಯಲ್ಲಿ ಮೊರೆದು ಮೈ ಜುಂ ಎಂದಿತು.
ಕೆಳಗೆ ಹುಲ್ಲಿನ ಮೇಲೆ ಬಿದ್ದಿದ್ದ ಪ್ರಸಾದದ ಕಟು ವಾಸನೆ ಉಸಿರು ಕಟ್ಟಿಸುವಂತೆ ಮೂಗನ್ನು ಏರತೊಡಗಿತು.
“ಮಹನೀಯರೇ, ಮಹಿಳೆಯರೇ….. ನಮ್ಮ ಸ್ವಾಮಿಜಿಯವರು ಪಂಥ ಕಟ್ಟಿದರು……”
-ಮೈಕಿನ ಕಂಠ ಏರುತ್ತ… ಹರಡುತ್ತ.. ಸುತ್ತಲಿನ ವಾತಾವರಣವನ್ನೆಲ್ಲ ದಟ್ಟವಾಗಿ ಆಕ್ರಮಿಸತೊಡಗಿತು.
******
2 comments
Sahajavaagi krutajnate torisuva park. Adakke viruddha hogalaguvudilla.
ನಿಮ್ಮ ಅಭಿಪ್ರಾಯ ಸ್ಪಷ್ಟವಾಗಲಿಲ್ಲ.