Image default
Short Stories

ಹಾವಸೆ

ಷಾರ್ಟ್‍ಹ್ಯಾಂಡ್ ಪುಸ್ತಕದಲ್ಲಿ ಬರೆದುಕೊಂಡು ಬಂದಿದ್ದ ಡಿಕ್ಟೇಷನನ್ನು ಒಪ್ಪವಾಗಿ ಕಂಪ್ಯೂಟರ್‍ನಲ್ಲಿ ಎಂಟ್ರಿ ಮಾಡಿ, ಅನಂತರ ಪ್ರಿಂಟ್‍ಔಟ್ ತೆಗೆದುಕೊಂಡು ಆಫೀಸರ್ ರೂಮಿಗೆ ತೆಗೆದುಕೊಂಡು ಹೋದಳು ಸುಷ್ಮಾ.

ಮಧುಕರ್ ಗಾಢಾಲೋಚನೆಯಲ್ಲಿದ್ದ. ಸುಷ್ಮಾ ಒಳಬಂದಿದ್ದು ಅವನ ಗಮನಕ್ಕೆ ಬಂದಂತಿರಲಿಲ್ಲ. ಅವನ ಮೊಗದಲ್ಲಿ ಚಿಂತೆ ಹೊಗೆಯಂತೆ ತುಂಬಿಕೊಂಡಿತ್ತು.

ಸುಷ್ಮಾ ಒಂದರೆ ಚಣ ಸದ್ದು ಮಾಡದೆ ಮೌನವಾಗಿ ನಿಂತವಳು, ಮೆಲ್ಲನೆ ‘ಸರ್’ ಎಂದಳು. ಅವನು ಅಲುಗಾಡಲಿಲ್ಲ. ಸುಷ್ಮಾ ಅತ್ತಿತ್ತ ನೋಡಿ, ಅವನತ್ತ ಮುಂದಡಿಯಿಟ್ಟು ‘ಸರ್’ ಎಂದವನ ಭುಜವನ್ನು ಮೃದುವಾಗಿ ಅಲುಗಿಸಿದಳು. ಗಡಬಡಿಸಿ ಮೈ ಕೊಡವಿ ಕುಳಿತ ಮಧುಕರ್ ಅವಳತ್ತ ತಿರುಗಿ ಸಾವರಿಸಿಕೊಂಡು ‘ಕಮಾನ್ ಸಿಡೌನ್’ ಎಂದು ತನ್ನೆದುರಿನ ಕುರ್ಚಿಯತ್ತ ಬೊಟ್ಟು ಮಾಡಿ ತೋರಿದ.

ಸುಷ್ಮಾ ಅವನಿಗೆದುರಾಗಿ ಕುಳಿತು, ಕೈಲಿದ್ದ ಪ್ರಿಂಟ್ ಔಟ್ ಷೀಟನ್ನು ಅವನತ್ತ ಚಾಚಿದವಳು ಬೆಚ್ಚಿದಳು. ಮಧುಕರನ ಕಣ್ಣುಗಳಲ್ಲಿ ತೆಳುವಾದ ನೀರಿನ ಪೊರೆ. ಯೋಚನೆಯಿಂದ ಕಂಗೆಟ್ಟ ಆರ್ದ್ರ ಮುಖಭಾವ.

ಸುಷ್ಮಳಿಗೆ ತನ್ನ ಹೃದಯವನ್ನು ಯಾರೋ ಮುಷ್ಠಿಯಲಿಟ್ಟು ಗಟ್ಟಿಯಾಗಿ ಹಿಂಡಿದಂಥ ತೀವ್ರ ನೋವಿನ ಅನುಭವವಾಗಿ ಅವನತ್ತ ಅವಳು ಆರ್ತಳಾಗಿ ದಿಟಿಸಿದಳು. ಇಬ್ಬರೂ ಸ್ವಲ್ಪ ಹೊತ್ತು ಏನೂ ಮಾತನಾಡಲಿಲ್ಲ. ಅವಳ ಕೈಲಿದ್ದ ಪೇಪರ್ ಮೇಜಿನ ಮೇಲೆ ಜಾರಿತು.

‘ಏನಾಯ್ತು ಸರ್?’

ಅವನು ಕಣ್ಣಂಚಿನಿಂದ ತುಳುಕಲಿದ್ದ ನೀರನ್ನು ಬೆರಳಲ್ಲಿ ಒತ್ತಿಹಿಡಿದು,  ಮೇಜಿನ ಮೇಲೆ ಅವಳು ತಂದಿಟ್ಟ ಪೇಪರಿನ ಮೇಲೆ ಕಣ್ಣಾಡಿಸುತ್ತ – ‘ಓ.ಕೆ. ಸಂಜೆ ಹೇಳ್ತೀನಿ ಸುಷ್ಮಾ – ಎಂದು ಗಂಟಲಲ್ಲೇ ಪಿಸುಗುಟ್ಟಿದ ಮಧುಕರ್.

ಅಲ್ಲಿಂದ ಹೊರಗೆದ್ದು ಬಂದ ಸುಷ್ಮಾ ಅವಳು ಅವಳಾಗಿರಲಿಲ್ಲ. ಅಂತರಂಗವೆಲ್ಲ ಕದಡಿ ಹೋದಂತಾಗಿತ್ತು. ಮಧುಕರನ ಮುದುಡಿದ ದುಗುಡ ತುಂಬಿದ ಮೊಗವೇ ಕಣ್ಣೆದುರು ಕಟ್ಟಿದಂತಾಗಿ ಕರುಳು ಹಿಂಡಿದಂತಾಯಿತು.

ಅವಳ ಹಾಗೂ ಮಧುಕರನ ನಡುವಿನ ಸಂಬಂಧ ಅಂಥದ್ದಾಗಿತ್ತು. ಅವನು ಕನ್ನಡಿಯಾದರೆ ಇವಳು ಪ್ರತಿಬಿಂಬ. ಅವನು ದೇಹವಾದರೆ ಇವಳು ನೆರಳು. ಅವನು ಆಗಸವಾದರೆ ಇವಳು ಅದರೊಡಲ ನೀಲಿಯಂತೆ ಅವನಿಂದ ಬೇರ್ಪಡಿಸಲಾರದ, ಅವನೊಳಗೇ ಹರಡಿಕೊಂಡು ಕರಗಿಹೋದಂಥ ಅವಿನಾಭಾವ ಸಂಬಂಧ ಅವರದಾಗಿತ್ತು. ಕಛೇರಿಯಲ್ಲಿ ಆಫೀಸರ್-ಪಿ.ಎ. ಎಂದಷ್ಟೇ ಹಣೆಪಟ್ಟಿಯಾದರೆ ಅಲ್ಲಿಂದೀಚಿನದು ಲೇಬಲ್ ಹಚ್ಚಿ ಒಂದೇ ಮಾತಿನಲ್ಲಿ ಉಸುರಬಹುದಾದಂಥ ಸಂಬಂಧವಂತೂ ಆಗಿರಲಿಲ್ಲ. ಮಧುಕರ್ ಹೃದಯವಾದರೆ ಸುಷ್ಮಾ ಅದರ ನಾಡಿಮಿಡಿತ, ಅವನ ಧಮನಿ ಧಮನಿಯೊಳಗೆ ಪ್ರವಹಿಸುವ ರಕ್ತ ಚೇತನ. ಮಧುಕರನಿಲ್ಲದೆ ಅವಳೊಂದು ಕ್ಷಣವೂ ಜೀವಿಸಿರಳು. ಅವನಿಗಾಗಿ ಅವಳು ತೆತ್ತ ಬೆಲೆ, ಮಾಡಿದ ತ್ಯಾಗ ಅದು ಅವರಿಬ್ಬರಿಗೂ ಚೆನ್ನಾಗಿ ಗೊತ್ತು. ಸಂಬಂಧಗಳು ಎಲ್ಲಿಂದೆಲ್ಲಿಗೆ ತನ್ನ ಬಾಹುಗಳನ್ನು ಚಾಚಿ ಬೆಸೆಯುವುದೋ, ಭಾವಗಳನ್ನು ಮೊಗೆದು ಬಾಚುವುದೋ ಅದಕ್ಕೇ ತಿಳಿಯದು. ಅಷ್ಟು ಅನೂಹ್ಯ, ಅಂಥ ಗಾಢ ಬೆಸುಗೆ, ತರ್ಕಾತೀತ.

ಸುಷ್ಮಾ, ಮಧುಕರನನ್ನು ಮೊದಲ ಬಾರಿ ಸಂಧಿಸಿದ್ದು ಇದೇ ಕಛೇರಿಯಲ್ಲಿ. ಕೆಲಸಕ್ಕೆ ಅವನಿಗೇ ರಿಪೋರ್ಟ್ ಮಾಡಿಕೊಂಡಿದ್ದಳು. ಉದ್ಯೋಗಕ್ಕೆ ಸೇರಿದ ಹೊಸತು. ಇಪ್ಪತ್ತೆರೆಡರ ಯೌವ್ವನವತಿ, ಚೆಲುವೆ ಸುಷ್ಮಾ ಇಡೀ ಆಫೀಸಿಗೆ ಆಕರ್ಷಣಾ ಬಿಂದುವಾಗಿದ್ದಳು. ಎಲ್ಲರೂ ಅವಳ ಹಿಂದೆ ಮುಂದೆ ಸುಳಿಯುವವರೇ. ಯಾವುದಾದರೂ ನೆಪದಲ್ಲಿ ಅವಳನ್ನು ಮಾತನಾಡಿಸಲು ಹಾತೊರೆಯುವವರೇ. ಅದಕ್ಕೆ ಮಧುಕರನೂ ಹೊರತಾಗಿರಲಿಲ್ಲ. ದಿನದ ಹೆಚ್ಚು ಕಾಲ ಅವಳು ತನ್ನ ಹತ್ತಿರವೇ ಕೆಲಸ ಮಾಡುತ್ತಿದ್ದುದರಿಂದ ಅವನಿಗೆ ಅವಳ  ಸಾಮೀಪ್ಯ ಬಹು ಸುಲಭವಾಗಿ ದಕ್ಕಿತ್ತು.

ಮೊದಲನೋಟದಲ್ಲೇ ಅವನು ಅವಳಿಗೆ ಮನಸೋತಿದ್ದ. ಸುಷ್ಮಳಿಗೂ ಅವನ ಸ್ಪುರದ್ರೂಪ, ನಗೆಮೊಗದ ಹಾಸ್ಯಚಟಾಕಿಗಳು, ಚಟುವಟಿಕೆಯ ನಡವಳಿಕೆ ಬಹು ಬೇಗ ಮೋಡಿ ಹಾಕಿದ್ದವು. ಅವನ ಹತ್ತಿರ ಕೆಲಸ ಮಾಡುವುದೊಂದು ಸುಖಾನುಭವ ನೀಡಿತ್ತವಳಿಗೆ.

 ಸುಷ್ಮಾ ಬಹು ಉತ್ಸಾಹದಿಂದ ಕಛೇರಿಯ ಕೆಲಸಗಳನ್ನು ಮಾಡುತ್ತ ಅತ್ಯಲ್ಪ ಕಾಲದಲ್ಲೇ ಮಧುಕರನ ಮೆಚ್ಚುಗೆಗೆ ಪಾತ್ರಳಾಗಿದ್ದಳು.

ಮಧುಕರ್, ವಿವಾಹಿತ ಎಂದು ತಿಳಿದಾಗ ಸುಷ್ಮಳಿಗೆ ಮೊದಲು ಆಘಾತವಾದರೂ, ಅದರ ಹಿಂದೆಯೇ ನಿರಾಶೆ-ಬೇಸರ ಕವಿಯಿತು. ಇವೆಲ್ಲ ನಾಲ್ಕುದಿನಗಳು ಮಾತ್ರ. ಅವನಿಂದ ದೂರ ಸರಿಯುವುದು ಅವಳಿಗೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅತ್ಯಲ್ಪ ಕಾಲದಲ್ಲೇ ಅವಳ ಹೃದಯವನ್ನವನು ಆವರಿಸಿಕೊಂಡಿದ್ದ. ಆಕರ್ಷಣೆ ಬಲವಾಗತೊಡಗಿತ್ತು..ಇದು ಸರಿಯಲ್ಲ ಎಂಬ ಯೋಚನೆ ಮಂಥನವಾಡಿತು…ಅವನನ್ನು ತನ್ನ ಮನಸ್ಸಿನಿಂದ ಅಳಿಸಿ ಹಾಕಲು ಅವಳು¸ ಸರ್ವ ಪ್ರಯತ್ನ ಮಾಡಿದಳು. ಆದರೆ, ಬೆಳಗಿನಿಂದ ಸಂಜೆಯವರೆಗೂ ಅವನ ಆಪ್ತ ಸಹಾಯಕಳಾಗಿ ಅವನ ಬಳಿಯೇ ಇದ್ದು ಎಲ್ಲ ಕೆಲಸಗಳನ್ನೂ ನಿರ್ವಹಿಸಬೇಕಾದ್ದರಿಂದ ಅವಳ ಪ್ರಯತ್ನಗಳೆಲ್ಲ ನಿಷ್ಫಲವಾದವು. ಆಲೋಚನೆಗಳು ದಿಕ್ಕು ತಪ್ಪಿ ಅವನನ್ನೇ ಅಪ್ಪಿದವು.

    ವಿಪರ್ಯಾಸವೆಂದರೆ, ದಿನಗಳೆದಂತೆ ಅವನಿಂದ ದೂರ ಸರಿಯುವ ಬದಲು ಅವಳು ಅವನ ಹೃದಯಕ್ಕೆ ಇನ್ನಷ್ಟು ಹತ್ತಿರವಾಗತೊಡಗಿದ್ದಳು. ಅದಕ್ಕೆ ಬೇರೆಯದೇ ಆದ ಒಂದು ಕಾರಣ – ಹಿನ್ನಲೆಯಿತ್ತು.

ಮಧುಕರ್, ಸುಖವಿವಾಹಿತ ಪುರುಷನಾಗಿದಿದ್ದರೆ ಅವಳಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆದರೆ ಅವನ ಗೆಲುವು ನಗುಮುಖದ ಹಿಂದೆ ಅಡಗಿದ್ದ ಕರುಣಾಜನಕ  ಜೀವನದ ನೋವಿನ ಸಂಗತಿಗಳು ಅವಳಿಗೆ ಮನನವಾದಾಗ, ನಿಜಕ್ಕೂ ಅವಳು ವಿಚಲಿತಳಾಗಿದ್ದಳು. ತನಗೇ ತಿಳಿಯದಂತೆ ಅವಳು ಅವನತ್ತ ಮತ್ತಷ್ಟು ಸರಿದಿದ್ದಳು!!..

ಯಾರ ಹೃದಯವಾದರೂ ಹಿಂಡುವಂಥ ವೇದನೆಯ ಕಥೆ ಅವನದಾಗಿತ್ತು.

 ಚಿಕ್ಕವಯಸ್ಸಿಗೇ ಉನ್ನತ ಹುದ್ದೆ ಪಡೆದ ಪ್ರತಿಭಾವಂತ ಚೆಲುವನಿಗೆ ಜೀವನ ಬರೀ ಕಹಿಬುತ್ತಿಯಾಗಿತ್ತು. ಅವನ ಅದೃಷ್ಟ ಅಡ್ಡದಾರಿ ಹಿಡಿದಿತ್ತು. ಅವನ ರೂಪ ಸರಳತೆಗೆ ಸಾಟಿಯಾಗದ ಘಟವಾಣಿ ಹೆಂಡತಿ, ಬಲವಂತದ ಮದುವೆ ಅವನ ಜೀವನೋತ್ಸಾಹವನ್ನು ಸಂಪೂರ್ಣ ನಾಶ ಮಾಡಿತ್ತು. ಜಗತ್ತಿನ ಲೆಕ್ಕಕ್ಕೆ ಮದುವೆ, ಹೆಂಡತಿ, ಇಬ್ಬರು ಹೆಣ್ಣುಮಕ್ಕಳು… ಹೆಸರಿಗೆ ಸಂಸಾರಸ್ಥ ಜೀವನ. ಆದರೆ ಮಧುಕರ್, ಅಂತರಂಗದೊಳಗೆ ಒಬ್ಬಂಟಿಗನಾಗಿದ್ದ. ಏಕಾಕಿತನದಿಂದ ನರಳುತ್ತಿದ್ದ. ಸ್ವಭಾವತಃ ಒರಟು, ಜಗಳಗಂಟಿಯಾದ ಪತ್ನಿಯೊಡನಾಟದ ಆರೆಂಟು ವರ್ಷದ ರೇಜಿಗೆಯ ಬಾಳುವೆ ಅವನನ್ನು ವಿರಕ್ತನನ್ನಾಗಿ ಮಾಡಿತ್ತು. ತನ್ನೊಳಗೆ ತನ್ನನ್ನೇ ಸುಟ್ಟುಕೊಂಡು ಬಾಳುತ್ತಿದ್ದವನಿಗೆ ಸುಷ್ಮಳ ಪ್ರಫುಲ್ಲ ಸಾನಿಧ್ಯ ಅವನ ಬೆಂದೆದೆಗೆ ತಂಪನ್ನೆರೆದಿತ್ತು. ಸುಷ್ಮಾ ಕೂಡ ಅವನ ಅಗ್ನಿಕುಂಡದ ದಗ್ಧ ಭಾವನೆಗಳಿಗೆ ಸ್ಪಂದಿಸಿ ಅಳ್ಳಕ ತೀರಾ ಅಳ್ಳಕವಾಗಿ ಹೋಗಿದ್ದಳು.

ಕೇವಲ ಅವನ ಬಾಹ್ಯರೂಪಕ್ಕಿಂತ, ಅವನೊಳಗೆ ಹೆಪ್ಪುಗಟ್ಟಿದ್ದ ನೋವು ಅವಳನ್ನು ಇನ್ನೂ ಅವನ ಹತ್ತಿರ ಹತ್ತಿರಕ್ಕೆಳೆದು ತಂದಿತ್ತು. ಸುಷ್ಮಳ ಸ್ನೇಹಕಿರಣ ಅವನು ಜೀವನೋತ್ಸಾಹವನ್ನು ತಳೆಯುವಂತೆ ಮಾಡಿತ್ತು. ಮೋಡ ಮುಸುಕಿದ್ದ ಭಾನುವಿನ ಮುಖಮಂಡಲದಲ್ಲಿ ಮತ್ತೆ ನಗುವಿನ ಕಿರಣಗಳು ಪಸರಿಸಿದಂತಾಗಿತ್ತು. ಆರೆಂಟು ತಿಂಗಳುಗಳಲ್ಲೇ ಅವರಿಬ್ಬರು ಪರಸ್ಪರ ತುಂಬಾ ಹತ್ತಿರವಾಗಿದ್ದರು. ಹದಿಹರೆಯದ ಭಾವುಕ – ಅಪ್ರಬುದ್ಧವೆನಿಸಿಕೊಳ್ಳದ, ಅರ್ಥಪೂರ್ಣ, ತೃಪ್ತಿ – ಸಾರ್ಥಕ್ಯ ಸೊನೆಯ ಸಮೃದ್ಧಪ್ರೇಮ ಅವರದಾಗಿತ್ತು.

ಮಧುಕರನ ಪಾಲಿಗೆ ಇದು ನೂತನಾನುಭವ. ನಿಷ್ಕಲಷ ಮನಃಪೂರ್ವಕ ಧಾರೆ. ಸುಷ್ಮಾ ಅವನನ್ನು ಮನಸಾರೆ ಪ್ರೇಮಿಸಿ, ತನ್ನನ್ನು ತಾನು ಅವನಿಗೆ ಅರ್ಪಿಸಿಕೊಂಡಿದ್ದಳು. ಸುಷ್ಮಾಳ ಸುಖ ಸಹವಾಸದಲ್ಲಿ ಮಧುಕರನಿಗೆ ದಿನಗಳೆದದ್ದೇ ಅರಿವಾಗದಷ್ಟು ಅವನ ಬದುಕು ಹಗುರಗೊಂಡಿತ್ತು.

ಅವರೀರ್ವರ ನಡುವಿನ ಈ ಸಂಬಂಧ ಅವರ ಕಛೇರಿ ವಲಯದಲ್ಲಿ ಗುಟ್ಟಾಗೇನೂ ಉಳಿದಿರಲಿಲ್ಲ.

‘ಎಂಥ ಚೆಂದದ ಹುಡುಗಿ, ಇಷ್ಟು ಚಿಕ್ಕವಯಸ್ಸು.. ಇವಳಿಗೇನು ತಲೆಕೆಟ್ಟಿದೆಯೇ? ಮದುವೆಯಾದ ಗಂಡಸಿನ ಹಿಂದೆ ಬಿದ್ದು ಅನ್ಯಾಯವಾಗಿ ತನ್ನ ಬಾಳನ್ನು ಕೆಡಿಸಿಕೊಳ್ತಿದ್ದಾಳಲ್ಲ’ ಎಂದು ಲೊಚಗುಟ್ಟುವವರು  ಅದೆಷ್ಟೋ ಮಂದಿ. ಆದರೆ ಇದರ ಬಗ್ಗೆ ಅವರಿಬ್ಬರು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈ ಬಗ್ಗೆ ತಲೆಕೆಡಿಸಿಕೊಂಡು ಹುಚ್ಚಾದವರು ಮಾತ್ರ ಸುಷ್ಮಳ ತಂದೆ ಹಾಗೂ ಅವಳ ಅಣ್ಣಂದಿರು. ತಾಯಿಯಿಲ್ಲದ ಮಗುವೆಂದು ಅವಳನ್ನು ಬಲು ಮುಚ್ಚಟೆಯಾಗಿ ಬೆಳೆಸಿದ್ದರವರು. ಸುಷ್ಮಾ, ಕೆಲಸ ಸಿಕ್ಕಿ ತನ್ನ ಕಾಲ ಮೇಲೆ ತಾನು ನಿಲ್ಲುತ್ತಿದ್ದಂತೆ ಈ ರೀತಿ ಸ್ವಚ್ಛಂದ ಸ್ವತಂತ್ರ ವರ್ತನೆ ತೋರಿದ್ದು ಅವರಿಗೆ ನುಂಗಲಾರದ ತುತ್ತು.

‘ಸುಷ್ಮಾ, ನಿನಗೇನು ಹುಚ್ಚುಗಿಚ್ಚು ಹಿಡಿದಿದೆಯೇನು, ನಿನಗ್ಯಾಕೀ ದುರ್ಬುದ್ಧಿ ಬಂತೇ? ನಮ್ಮ ಮನೆತನದ ಮಾನ–ಮರ್ಯಾದೆಯೆಲ್ಲ ಹಾಳು ಮಾಡಿದೆಯಲ್ಲೇ ಚಂಡಾಲಿ.. ನಿನಗೇನು ಗಂಡೇ ಸಿಕ್ತಿರ್ಲಿಲ್ವಾ- ಆ ಮದುವೆಯಾದ ಗಂಡಸಿನ ಮೇಲೆ ಮನಸ್ಸು ಇಟ್ಕೊಂಡಿದ್ದೀಯಲ್ಲ. ಒಳ್ಳೆ ಮಾತ್ನಲ್ಲಿ ಈ ಸಂಬಂಧ ಬಿಟ್ಟು ಬಿಡು’

– ಅವಳ ತಂದೆ ಕೆಂಡಾಮಂಡಲವಾಗಿದ್ದರು. ಸಿಕ್ಕಪಟ್ಟೆ ರೇಗಾಡಿದ ಅವರು ಎದೆಯ ಮೇಲೆ ಕೈಯಿಟ್ಟುಕೊಂಡು ಕುಸಿದಿದ್ದರು. ಅವಳ ಹಿರಿಯಣ್ಣ ಸಮಾಧಾನದ ದನಿಯಲ್ಲಿ ಅನುನಯನಾಗಿ ಅವಳಿಗೆ ಬುದ್ಧಿ ಹೇಳಲು ಯತ್ನಿಸಿದ್ದ. ‘ವಿವಾಹಬಾಹಿರ ಪ್ರೇಮ ಎಂದೂ ಮಾನ್ಯವಲ್ಲ ಕಣೆ.. ಅನ್ಯಾಯವಾಗಿ ಜನಗಳ ಬಾಯಿಗೆ ಬಿದ್ದು ಬಂಗಾರದಂಥ ನಿನ್ನ ಜೀವನಾನ ಹಾಳು ಮಾಡ್ಕೋಬೇಡವೇ .. ನಿಧಾನವಾಗಿ ಯೋಚಿಸಿ ನೋಡು.. ಬೇಕಾದರೆ ಬೇರೆ ಇಲಾಖೆಗೆÀ ನಿನಗೆ ಡೆಪ್ಯುಟೇಷನ್ ಕೊಡಿಸ್ತೀನಿ, ನೀನು ಆತನಿಂದ ದೂರವಿರು’

ಸುಷ್ಮಾ ಹೆಬ್ಬಂಡೆಯಂತೆ ಕೊಂಚವೂ ಅಲುಗಾಡದೆ ಸ್ಥಿರವಾಗಿ ಕುಳಿತಿದ್ದಳು.

 ‘ಭಾಳ ತಿಳುವಳಿಕಸ್ಥೆ, ವಿಚಾರವಾದಿ ಅಂತ ಜಂಭ ಕೊಚ್ಚಿಕೊಳ್ತಿದ್ದವಳು. ಇಂಥ ಅವಿವೇಕದ ಕೆಲಸಾನ ಮಾಡೋದು??.. ಹೂಂ.. ಆಗಿದ್ದಾಯ್ತು, ಇದು ಇವತ್ತಿಗೇ ಕೊನೆ ಆಗಲಿ.. ನಾವು ಒಳ್ಳೆ ಕಡೆ ನಿನಗೆ ಸಂಬಂಧ ಹುಡುಕಿ, ಅನುರೂಪನಾದ ವರನನ್ನು ನೋಡ್ತೀವಿ. ಅವನನ್ನು ಮರೆತು ಬಿಡು’-ಎಂದು ಕಿರಿಯಣ್ಣ ಹಾರಾಡಿದ.

ಸುಷ್ಮಾ ಉಭಾ ಶುಭ ಎನ್ನಲಿಲ್ಲ. ಅವಳ ನಿರ್ಧಾರ ಅಚಲವಾಗಿತ್ತು. ಮಧುಕರನಲ್ಲಿ ಸ್ಥಿರಗೊಂಡಿದ್ದ ಮನಸ್ಸು ಕೊಂಚವೂ ಸಡಿಲವಾಗಲಿಲ್ಲ. ಹಾಗೆ ನೋಡಿದರೆ ಅವಳ ಮನಸ್ಸಿನ ವಿಚಿತ್ರ ಜಾಡುಗಳು ಅವಳಿಗೇ ಅಪರಿಚಿತ. ತುಂಬ ಸುಂದರವಾದ ಯುವಕರು ಯಾರೂ ಅವಳನ್ನು ಆಕರ್ಷಿಸಿರಲಿಲ್ಲ. ಬೇರೆ ಯುವಕರನ್ನು   ಕಂಡಾಗ ಅವಳ ಮನದೊಳಗೆ ಯಾವ ಬಗೆಯ ಪ್ರೇಮದ ಭಾವನೆಗಳು ಎಂದೂ ಲಗ್ಗೆ ಇಟ್ಟಿರಲಿಲ್ಲ! ಬದಲು ಅವಳ ಅಂತರಂಗ ಮಿಡಿಯುತ್ತಿದ್ದುದು ಬೇರೆ ಬಗೆಯ ವ್ಯಕ್ತಿಗಳ ಬಗೆಗೆ ಮಾತ್ರ.

ಅವಳ ಮನಸಿನ ಹೆಜ್ಜೆಗಳು ಅವಳಿಗೇ ಪತ್ತೆಯಾಗದು. ಯಾವುದಾದರೂ ಅಂಗವಿಕಲ ಯುವಕನನ್ನು ನೋಡಿದಾಗ ಅಥವಾ ಕಷ್ಟದಲ್ಲಿರುವ, ನಿರುದ್ಯೋಗಿ ಬಳಲಿ ಬೇಸತ್ತ, ನಿರಾಶೆಯಲ್ಲಿ ಮುಳುಗಿದ ಕರುಣಾಜನಕ ಸ್ಥಿತಿಯಲ್ಲಿರುವ ಏಕಾಕಿ ಜೀವಿಗಳನ್ನು ಕಂಡಾಗ ಅವಳ ಹೃದಯ ಅವಳರಿವಿಲ್ಲದೆ ಮಿಡಿಯತೊಡಗುತ್ತದೆ, ಮರುಗತೊಡಗುತ್ತದೆ. ಹಿಂದೊಮ್ಮೆ ಇಂಥದೇ ಅನಾಥಪ್ರಜ್ಞೆಯಲಿ,್ಲ ಅತಂತ್ರ ಸ್ಧಿತಿಯಲ್ಲಿ ಬಳಲುತ್ತಿದ್ದ ಮಧ್ಯವಯಸ್ಸಿನ ವಿಧುರನೊಬ್ಬನಿಗೆ ಬಾಳು ಕೊಡಲು ಅವಳು ಮನಸ್ಸು ಮಾಡಿದಾಗ ಮನೆಯಲ್ಲಿ ದೊಡ್ಡ ಹಗರಣವೇ ನಡೆದು ಹೋಗಿತ್ತು. ಹೀಗಾಗಿ ಅವಳು ತನ್ನ ಮನಸ್ಸಿನ ವಿಚಿತ್ರ- ವಿಕ್ಷಿಪ್ತ ತುಡಿತಗಳನ್ನೆಲ್ಲ ಅಣ್ಣಂದಿರೆದುರು ಪ್ರಾಮಾಣಿಕವಾಗಿ ತೆರೆದಿಟ್ಟರೆ ತನ್ನ ಮುಖಭಂಗವಾಗುವುದಂತೂ ಖಚಿತವೆನಿಸಿ ಸುಷ್ಮಾ ಯಾರಲ್ಲೂ ತನ್ನ ಮನಸ್ಸಿನ ತುಮುಲಗಳನ್ನು ತೋಡಿಕೊಳ್ಳದೆ, ಒಳಗೊಳಗೇ ತಳಮಳಿಸಿದ್ದಳು.

ಈಗ ಆಗಿದ್ದಾದರೂ ಹಾಗೆಯೇ.. ಮಧುಕರನ ವಿಷಾದದ ಬದುಕು, ಅವನಂತರಂಗದಲ್ಲಿ ಮಡುಗಟ್ಟಿದ್ದ ನೋವು ಅವಳನ್ನು ಮೆತ್ತಗಾಗಿಸಿತ್ತು. ಕರುಣೆ ಹರಿದು, ಅವನತ್ತ ಸೆಳೆದಿತ್ತು. ದುಃಖದಾಳದೊಳಗೆ ಹುದುಗಿ ಹೋಗಿದ್ದವನ ತೋಳು ಹಿಡಿದು ಈಚೆಗೆಳೆದು ಅವನ ಮೊಗದಲ್ಲಿ ಬೆಳದಿಂಗಳು ಸುರಿಯುವ ಹುಚ್ಚು ಬಯಕೆ ಅವಳೊಳಗೆ ಹೆಡೆಯಾಡಿಸಿತ್ತು. ಅದರಂತೆ ಅವಳು ಮಧುಕರನ ಒಣಗಿಹೋದ ಬಾಳನ್ನು ಪ್ರವೇಶಿಸಿ ಅದರಲ್ಲಿ ಹಸಿರು ಚಿಗುರಿಸುವಲ್ಲಿ ಯಶಸ್ವಿಯಾಗಿದ್ದಳು ಕೂಡ.

 ಮಧುಕರ್ ಕಳೆದ ನಾಲ್ಕಾರು ವರ್ಷಗಳಿಂದ ಹೊಸ ಮನುಷ್ಯನಾಗಿದ್ದ. ಸುಷ್ಮಳ ಬರುವು ಅವನ ಬದುಕಿಗೊಂದು ಬೆಳಕಿಂಡಿಯಾಗಿತ್ತು. ಇದಕ್ಕಾಗಿ ಅವನು ಅವಳಿಗೆ ಕೃತಜ್ಞನಾಗಿ ಕಂಬನಿದುಂಬಿ ತೊದಲಿದ್ದ.

‘ಸುಷ್ಮಾ ನೀನು ನಿಜಕ್ಕೂ ನನ್ನ ಎದೆಯ ಹಣತೆ… ಇಂಥ ಪ್ರಕಾಶಮಾನ ದೀಪದ ಗೊಂಚಲನ್ನು ನನ್ನ ಮನೆಯ ಮುಂಬಾಗಿಲಿಗೆ ತೂಗಿಬಿಟ್ಟು ಜಗತ್ತಿನೆದುರು ಇವಳೇ ನನ್ನ ಮನ-ಮನೆಗಳ ಒಡತಿ ಎಂದು ಧೈರ್ಯವಾಗಿ ಸಾರಲಾರದ ಹೇಡಿ ನಾನು… ಅಂಥ ಅದೃಷ್ಟ ನಂಗಿಲ್ಲ ಸುಷ್ಮಾ, ದಯವಿಟ್ಟು ನನ್ನ ಕ್ಷಮಿಸು, ನಾ ನಿನಗೆ ಮೋಸ ಮಾಡ್ತಾ ಇದ್ದೀನಿ… ಏನು ಮಾಡಲಿ ನಾನು ಅಸಹಾಯಕ…’

ಮಧುಕರ ಕಂಠ ಬಿಗಿದು ನುಡಿದಾಗ ಸುಷ್ಮಾ ಕೂಡ ಬಿಕ್ಕಿದ್ದಳು. ತನ್ನ ಶುದ್ಧ ಅಂತಃಕರಣದ ಪವಿತ್ರ ಪ್ರೇಮದ ಪ್ರತಿ ಬಿಂದುವನ್ನೂ ಅವನ ಕರಕಲಾದ ಎದೆಗೆ ಎರೆದು ಅವಳದನ್ನು ಫಲವತ್ತು ಮಾಡಿದ್ದಳು. ಪ್ರಪಂಚದ ದಾಕ್ಷಿಣ್ಯಕ್ಕೆ ನುಲಿಯುವ ಮೆತ್ತನೆಯ ಹೆಣ್ಣು ಅವಳಾಗದೆ ಜಗತ್ತನ್ನು ಎದುರಿಸುವ ಧೈರ್ಯ ಮಾಡಿದ್ದಳು ದಿಟ್ಟೆ ಸುಷ್ಮಾ.

‘ನೀವು ಈ ತಪ್ಪಿತಸ್ಥ ಭಾವನೇನ ಮನಸ್ನಲ್ಲಿಟ್ಕೊಂಡು ಕೊರಗಿದರೆ ನನ್ನಾಣೆ ಮಧು… ಏನ್ಮಡಕ್ಕಾಗತ್ತೆ, ಸಂದರ್ಭ ಹಾಗಿದೆ… ನಾನು ನಿಮ್ಮ ಹೆಂಡತಿಗಿಂತ ಹೆಚ್ಚು ಅಂತ್ಲೇ ನೀವು ಭಾವಿಸಿದ್ದೀರ, ನಾನೂ ಅಷ್ಟೇ… ಒಟ್ನಲ್ಲಿ ನೀವು ಸಂತೋಷವಾಗಿದ್ರಷ್ಟೇ ಸಾಕು ನನಗೆ… ಇದ್ದಷ್ಟೇ ಲಭ್ಯ’

            -ಎಂದು ಸುಷ್ಮಾ, ವೇದಾಂತ ನುಡಿದು, ಬದಲಾಗಿ ತಾನೇ ಅವನಿಗೆ ಸಾಂತ್ವನ-ಸಮಾಧಾನ ಹೇಳಿದಳು.

 ಅವರ ಮಟ್ಟಿಗೆ ಅದು ಸುಮಧುರ ಸುಖ ಸಂಬಂಧ. ಭದ್ರವಾದ ಕೋಟೆಯಂಥ ಅವಳ ಈ ಅಚಲ ಸಂಬಂಧದ ವಿಚಾರದಲ್ಲಿ ಯಾರೂ ಪ್ರವೇಶಿಸಲು ಅವಕಾಶವಾಗಿರಲಿಲ್ಲ. ಈ ವಿಷಯವಾಗಿಯೇ ಅವಳು ತನ್ನ ಮನೆಯವರನ್ನೆಲ್ಲ ದೂರಮಾಡಿಕೊಳ್ಳಲೂ ಹೆದರಲಿಲ್ಲ. ಮನೆಯನ್ನು ಬಿಟ್ಟು ವರ್ಕಿಂಗ್ ವುಮನ್ ಹಾಸ್ಟಲ್ಲಿಗೆ ಸೇರಿಕೊಂಡಿದ್ದಳು. ಮಧುಕರನಿಗೆ ತ್ರಿಕರಣಪೂರ್ವಕವಾಗಿ ಅವಳು ತನ್ನ ತನುಮನ ಧನಗಳನ್ನು ಧಾರೆ ಎರೆದುಕೊಂಡಿದ್ದಳು.

ಇಂಥ ಸುಂದರ ಹುಡುಗಿ ವಿವಾಹಿತನ ಪಾಲಾಗಿದ್ದನ್ನು ಕಂಡು ಆಫೀಸಿನ ಜನ ಆಡಿಕೊಂಡಿದ್ದು – ಕರುಬಿದ್ದು ಈಗ ಗತ ಇತಿಹಾಸ.

ಪ್ರತಿದಿನ ಮಧುಕರ ಬೆಳಗ್ಗೆ – ಸಂಜೆ ಅವಳನ್ನು ಹಾಸ್ಟೆಲ್‍ನಿಂದ ಪಿಕಪ್ಪು – ಡ್ರಾಪ್ ಮಾಡುತ್ತಿದ್ದ. ಆಫೀಸ್ ಮುಗಿದೊಡನೆ ಅವರ ರಸಸಂಜೆ ಆರಂಭಗೊಳ್ಳುತ್ತಿತ್ತು. ಹೋಟೆಲ್ಲು, ಪಾರ್ಕು, ಪಿಕ್ಚರ್ರುಗಳಲ್ಲಿ ಅವರ ಅನುಬಂಧ ಪಲ್ಲವಿಸುತ್ತಿತ್ತು. ಸುಷ್ಮಾ ಅವನ ಮನದಣಿಯೆ ಪ್ರೀತಿ-ಸುಖಗಳನ್ನು ಮನಸಾ  ಕೊಡುವುದವರೊಂದಿಗೆ ತನ್ನ ಹಣವನ್ನೂ ಕೂಡ ಅವನಿಗಾಗಿ ಧಾರಾಳವಾಗಿ ಖರ್ಚು ಮಾಡುತ್ತಿದ್ದಳು. ಅವಳ ದೃಷ್ಟಿಯಲ್ಲಿ ತನ್ನದು ಅವನದು ಎಂಬ ಭೇದವಿರಲಿಲ್ಲ, ಅವನ ಸುಖ-ದುಃಖಗಳೇ ಅವಳದಾಗಿರುತ್ತಿದ್ದವು.

ಆ ದಿನ ಬೆಳಗಿನಿಂದ ಮ್ಲಾನವದನನಾಗಿದ್ದ ಮಧುಕರ- ಸಂಜೆ ಗಾರ್ಡನ್ ರೆಸ್ಟೊರೆಂಟಿನಲ್ಲಿ ತನ್ನ ದುಗುಡದ ಕಾರಣವನ್ನು ಅವಳಲ್ಲಿ ಬಿಚ್ಚಿಕೊಂಡಿದ್ದ. 

‘ನನಗ್ಯಾಕೋ ಬರ್ತಾ ಬರ್ತಾ ನನ್ನ ಹೆಂಡತಿಯ ಸಹವಾಸವೇ ಸಾಕೆನಿಸಿದೆ ಸುಷ್ಮಾ…..ಏನ್ಮಾಡಲಿ, ಆ ಹೆಣ್ಣುಮಕ್ಕಳ ಮುಖ ನೋಡಿಕೊಂಡು ನನ್ನೆದೆಯ ದಳ್ಳುರಿ ನುಂಗಿಕೊಂಡು ತೆಪ್ಪಗಿರ್ತೀನಿ…..ಪ್ರತಿದಿನ ಏನಾದರೊಂದು ಕಿರಿಕ್ಕು ಅವಳದು..ಹಬ್ಬ ಹಬ್ಬಕ್ಕೂ ಒಡವೆ-ಸೀರೆ, ಬಟ್ಟೆಗಳು…ಅವಳು ಕೇಳಿ ಕೇಳಿದ ಸಾಮಾನುಗಳನ್ನು, ಟಿವಿ, ಫ್ರಿಡ್ಜು, ವಾಷಿಂಗ್ ಮೆಷಿನ್ ಎಲ್ಲಾ ತಂದ್ಕೊಟ್ರೂ ಅವಳಿಗೆ ತೃಪ್ತಿಯೇ ಇಲ್ಲ..ದಿವಿನಾಗಿ ಸ್ವಂತ ಮನೇನೂ ಕಟ್ಕೊಟ್ಟಿದ್ದಾಯ್ತು…..ಇಷ್ಟಾದ್ರೂ ಇಂಗದ ದಾಹ..ನಾನೂ ಎಷ್ಟೂಂತ ಸಾಲ ಮಾಡಲಿ ಹೇಳು… ಈಗ ಅಡುಗೆಮನೆ ರಿನೋವೇಷನ್ನು, ಗ್ರಾನೈಟು, ಟೈಲ್ಸೂ ಅಂತ ಕೂತಿದ್ದಾಳೆ…..’

ನಿಜಕ್ಕೂ ಅವನ ಮೊಗದಲ್ಲಿ ನೂರು ಖಂಡುಗ ಜುಗುಪ್ಸೆ ತುಂಬಿತ್ತು. ಒಂದರೆ ಕ್ಷಣ ಸುಷ್ಮಳ ಮುಖ ಚಿಕ್ಕದಾಯಿತು. ಮಧುಕರ ನಗುತ್ತ ಸಂತೋಷವಾಗಿರುತ್ತಾನೆಂದರೆ ಅವಳು ಅವನಿಗಾಗಿ ಏನು ಮಾಡಲೂ ಸಿದ್ಧ, ಯಾವ ತ್ಯಾಗಕ್ಕೂ ಹಿಂದೆ ಮುಂದೆ ನೋಡಳು.

‘ಅರೇ, ಇಷ್ಟು ಸಣ್ಣ ವಿಷ್ಯಕ್ಕೆಲ್ಲ ಇಷ್ಟು ತಲೆ ಕೆಡಿಸಿಕೊಂಡರೆ ಹೇಗೆ ಮಧು?..ನೋ..ನಿಮ್ಮ  ಮುಖ ಹೀಗೆ ಬಾಡಬಾರದು.. ನನ್ನ ಕೈಲಿ ಈ ಪೋಸ್ ನೋಡಕ್ಕಾಗಲ್ಲ, ಬೀ ಚಿಯರ್ ಅಪ್..ನನಗ್ತಾನೆ ಯಾರಿದ್ದಾರೆ ಮಧು..ನಿಮ್ಮಿಂದ ಒಂದು ಮುದ್ದಾದ ಮಗು ಪಡೆಯೋ ಅದೃಷ್ಟವೂ ನನಗಿಲ್ಲ..ಹೂಂ ಪ್ರತಿಸಲ ಮೊಗ್ಗನ್ನು ಚಿವುಟಿ ಹಾಕೋದೇ ಆಗಿದೆ..ಎಲ್ಲಕ್ಕೂ ಪಡೆದುಕೊಂಡು ಬಂದಿರಬೇಕು ಬಿಡಿ..ನಿಮ್ಮ ಮಕ್ಕಳೇ ನನ್ನ ಮಕ್ಕಳಲ್ವೇ..?

-ಎನ್ನುತ್ತ ಅವಳು ಕೆನ್ನೆಯ ಮೇಲೆ ಜಾರಿದ ಕಂಬನಿಯನ್ನು ಮಿಡಿದು, ಹುಸಿನಗೆ ನಕ್ಕು –‘ಆಯ್ತು..ನೀವು ನಿಮ್ಮನೆ ಕಿಚನ್ ರಿನೋವೇಷನ್ಗೆ ರೆಡಿ ಮಾಡ್ಕೊಳ್ಳಿ, ನಾನು ನನ್ನ ಪಿ.ಎಫ್ ಮೇಲೆ ಸಾಲ ತೊಗೊಂಡು ಕೊಡ್ತೀನಿ, ಚಿಂತಿಸಬೇಡಿ ಪ್ಲೀಸ್’-ಎಂದಳು ನಿರಮ್ಮಳ ಮುಖಭಾವದಲ್ಲಿ.

ಮಧುಕರ್ ಗಾಬರಿಗೊಂಡು ತತ್‍ಕ್ಷಣ ಅವಳ ಬಾಯ ಮೇಲೆ ಕೈಯಿಟ್ಟು –‘ ನೋ ಸುಷ್ಮಾ, ನಿನ್ನ ತ್ಯಾಗಕ್ಕೂ ಒಂದು ಮಿತಿ ಇದೆ..ಹೋದ್ಸಲ ಅವಳ ಕೆಂಪಿನ ನೆಕ್ಲೇಸು-ವಜ್ರದ ಓಲೆಗೂ ನೀನೇ ನಿನ್ನ ಉಳಿತಾಯದ ಹಣವನ್ನೆಲ್ಲ ಸುರಿದಿದ್ದೀ..ನೋ ಈ ಸಲ ನಾನು ಇದಕ್ಕೆ ಖಂಡಿತಾ ಒಪ್ಪಲ್ಲ..’

            -ಎಂದು ಅವನು ಖಡಾಖಂಡಿತವಾಗಿ ಅವಳ ಸಹಯವನ್ನು ನಿರಾಕರಿಸಿದ. ಸುಷ್ಮಾ ಮಾತ್ರ ಅದನ್ನು ಕಿವಿಯ ಮೆಲೆ ಹಾಕಿಕೊಳ್ಳದೆ ಅವನ ತಲೆಯ ಮೇಲಿನ ಹೊರೆ ಇಳಿಸಲು ನಿರ್ಧರಿಸಿದ್ದಳು. ಮರುದಿನ ಬೆಳಗ್ಗೆಯೇ ಸಾಲಕ್ಕೆ ಅರ್ಜಿ ಗುಜರಾಯಿಸಿಕೊಂಡಳು.

            ಇಪ್ಪತ್ತೆರಡರ ನವತರುಣಿ ಸುಷ್ಮಾ ಅಂದು ಕಛೇರಿಗೆ ಸೇರಿದ ಪ್ರಾರಂಭದಲ್ಲಿ ಅವನನ್ನು ಎಷ್ಟು ತೀವ್ರವಾಗಿ ಪ್ರೀತಿಸುತ್ತಿದ್ದಳೋ, ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿಗೆ ಇಂದೂ ಈ ನಲವತ್ನಾಲ್ಕರ ಹೊಸ್ತಿಲಲ್ಲೂ ಮಧುಕರನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಅವನ ಮಕ್ಕಳ ಮುಖವನ್ನೇ ಕಂಡಿರದಿದ್ದರೂ, ಅವನ ಹಿರಿಮಗಳ ಇಂಜಿನಿಯರಿಂಗ್, ಎರಡನೇ ಮಗಳ ಮೆಡಿಕಲ್ ಓದಿಗೂ ತನ್ನ ಸ್ವಂತ ಮಕ್ಕಳ ಖರ್ಚಂತೆ ತಾನೇ ಖುದ್ದು ವಹಿಸಿಕೊಂಡು ಸಾಲ ತೆಗೆದುಕೊಟ್ಟಿದ್ದಳು.

 ಮಧುಕರ ತನ್ನ ಕೃತಜ್ಞತೆಯ ಮಹಾಪೂರವನ್ನು ಅವಳ ಮೈತುಂಬ ಹರಿಸಿದ್ದ. ಸುಷ್ಮಳ ಪಾಲಿಗೆ ಇದೊಂದು ಮಹಾ ಹಿಗ್ಗು.

            ಇಡೀ ಅಫೀಸಿನ ಜನಗಳಿಗೆ ಅಚ್ಚರಿಯ ವಿಷಯವೆಂದರೆ, ಅವರೀರ್ವರ ನಡುವಿನ ಈ ಹುಚ್ಚಾಟ ನಾಲ್ಕು ದಿನಗಳದು ಎಂದು ಭಾವಿಸಿದ್ದು ತಲೆಕೆಳಗಾಗಿ, ಅವರ ನಡುವಿನ ಪ್ರೇಮ ಪರಾಕಾಷ್ಠೆಯ ಡಿಗ್ರಿ ಕೊಂಚವೂ ಏರಿಳಿತವಿಲ್ಲದೆ ಸಾಗುತ್ತಿರುವ ಪರಿ. ಜನ ಏನೇ ಅನ್ನಲಿ ಸುಷ್ಮಾ ಮಾತ್ರ ಒಂದೇ ಥರ ಇದ್ದಳು. ಮಧುಕರನೇ ಅವಳ ಪಾಲಿಗೆ ಇಡೀ ಪ್ರಪಂಚವಾಗಿದ್ದ, ಚೇತನವಾಗಿದ್ದ, ಬಾಳಿನ ಗುರಿಯಾಗಿದ್ದ.

ಆ..ದ..ರೆ ಬರಸಿಡಿಲಿನಂತೆ ಬಂದೆರಗಿದ್ದ ಆ ಸುದ್ದಿ ಕೇಳಿ ಅಂದವಳು ತತ್ತರಿಸಿ ಹೋಗಿದ್ದಳು.. .!!…ಹೊಸದಾಗಿ ಬಂದಿದ್ದ ನಿರ್ದೇಶಕರ ಕಿವಿಯನ್ನು ಯಾರೋ ಚುಚ್ಚಿ ಅವಳ ಮನದ ಸ್ಥಿಮಿತವನ್ನು ಕದಡಿದ್ದರು. ಅವಳ ಒಲವಿನ ಭದ್ರಕೋಟೆಯನ್ನು ಬಿರುಕುಗೊಳಿಸಿದ್ದರು. ಬದುಕಿನ ಪರ್ವಕಾಲದ ನಲವತ್ತೈದರ ಅಂಚಿನಲ್ಲಿದ್ದ ಸುಷ್ಮಳ ಆಸನ ಕಂಪವಾಗಿತ್ತು.

            ಮೈತುಂಬ  ಸಾಲದ ಶೂಲ, ಯೌವ್ವನ ಸೋರುತ್ತಿದ್ದ ನಿಶ್ಶಕ್ತಿ-ಬದಲಾವಣೆಗಳ ಈ ಹಂತದಲ್ಲಿ ಅವಳನ್ನೆತ್ತಿ ದೂರದ ಬೀದರ್ ಜಿಲ್ಲೆಗೆ ಒಗೆದಿರುವ ಟ್ರಾನ್ಸಫರ್ ಸುದ್ದಿ ಕೇಳಿ ಸುಷ್ಮಾ ನಡುಗಿ ಹೋದಳು! … ಮಧುಕರನಿಂದ ಅಗಲುವ ಕಲ್ಪನೆಯೇ ಘೋರವೆನಿಸಿ ಅವಳೆದೆ ನಗಾರಿಯಾಗಿತ್ತು.

            ‘ಮಧು, ಪ್ಲೀಸ್ ಮಧು, ನನ್ನ ಇಲ್ಲೇ ಉಳಿಸಿಕೊಳ್ಳಿ..ನಿಮ್ಮನ್ನು ಬಿಟ್ಟು ನಾನು ಒಂದು ಗಳಿಗೆಯೂ ಇರಲಾರೆ..ಡೈರೆಕ್ಟರ್ ಜೊತೆ ನನ್ನ ಪರವಾಗಿ ಮಾತನಾಡಿ, ಈ ಟ್ರಾನ್ಸ್ ಫರ್ ಕ್ಯಾನ್ಸಲ್ ಮಾಡಿಸಿ ಮಧು ಪ್ಲೀಸ್’

            -ಸುಷ್ಮಾ ಪುಟ್ಟಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಳು.

            ಮಧುಕರನೂ ವಿಹ್ವಲನಾಗಿದ್ದ. ನಿವೃತ್ತಿಯ ಅಂಚಿನಲ್ಲಿದ್ದ ಅವನ ಮೊಗದಲ್ಲಿ ವ್ಯಾಕುಲತೆ, ಅಧೀರತೆ ಕೆನೆಗಟ್ಟಿತ್ತು. ಆದರೆ ಅದರ ಕಾರಣವೇ ಬೇರೆಯಾಗಿತ್ತು. ಆ ದಿನ ಮಧ್ಯಾನ್ಹ ಬಂದಿದ್ದ ಟೆಲಿಫೋನ್ ಕರೆ!!

            ‘ನಿಮ್ಮದೇನೋ ಒಳ್ಳೆ ಸಂಬಂಧ..ನನ್ನ ಮಗ ಅಮೆರಿಕದಲ್ಲಿ ಫೇಮಸ್ ಸರ್ಜನ್, ಜೋಡಿ ಸರಿಹೋಗತ್ತೆ ಅಂತ ಯೋಚಿಸಿದ್ವಿ……ಆದರೆ..’- ಅಪಸ್ವರದ ಆಲಾಪವನ್ನು ಒಸರಿಸಿತ್ತು ಆ ದನಿ.

            ‘ದಯವಿಟ್ಟು ತಾವು ಮಧ್ಯಾಹ್ನ ಸಿಕ್ಕುವುದಾದರೆ ನಾನು ಎಲ್ಲ ವಿಷ್ಯಾನೂ ತಮಗೆ ವಿವರವಾಗಿ ಹೇಳ್ತೀನಿ, ಪ್ಲೀಸ್, ನಾನು ನಿಮ್ಮನ್ನು ಎಲ್ಲಿ ಭೇಟಿ ಮಾಡಲಿ?..’

            -ಮಧುಕರ ಪರಿಪರಿಯಾಗಿ ಆ ಧ್ವನಿಯನ್ನು ಅಂಗಲಾಚಿ ಬೇಡಿಕೊಂಡಿದ್ದ.

            ಸುಮಾರು ಒಂದೂವರೆಗೆ ಸರಿಯಾಗಿ ಆತ, ಅರ್ಥಾತ್ ಮಧುಕರನ ಭಾವೀ ಬೀಗರು ತಮ್ಮ ಗಿರಿಜಾಮೀಸೆ ತೀಡಿಕೊಳ್ಳುತ್ತ ಅನಿರೀಕ್ಷಿತವಾಗಿ ಮಧುಕರನ ಛೇಂಬರನ್ನು ಪ್ರವೇಶಿಸಿದ್ದರು.

            ಮಧುಕರ ಅಪ್ರತಿಭನಾದರೂ, ‘ಬನ್ನಿ ಬನ್ನಿ..ಕೂತ್ಕೊಳ್ಳಿ..’ ಎಂದು ವಿನೀತನಾಗಿ ಎದ್ದುನಿಂತು ಅವರನ್ನು ಬರಮಾಡಿಕೊಂಡು ಮುಂದಿನ ಆಸನ ತೋರಿಸಿ, ತಾನು ನಿಂತೇ ಇದ್ದ. ಅವನ ಮೊಗದಲ್ಲಿ ಆತಂಕ ಮಡುಗಟ್ಟಿತ್ತು. ಕೊರಳಸೆರೆ ಭಯದಿಂದ ಹೊರಳುತ್ತಿತ್ತು.

            ಆತ ಕಂಚುಕಂಠದಲ್ಲಿ ಖಚಿತ ಸ್ವರದಲ್ಲಿ ನುಡಿಯುತ್ತಿದ್ದರು:

‘ನಮಗೆ ನಿಮ್ಮ ಹುಡುಗಿಯೇನೋ ತುಂಬ ಹಿಡಿಸಿದಳು ನೋಡಿ, ನಿಮ್ಮ ಕುಟುಂಬ-ಮನೆತನ ಯಾವುದರ ಬಗ್ಗೆಯೂ ನಮ್ಮ ಆಕ್ಷೇಪವಿಲ್ಲ..ಆದರೇನೋ ಸಮಾಚಾರ ಕಿವಿಗೆ ಬಿತ್ತಲ್ಲ ಮಿ. ಮಧುಕರ್, ಇಲ್ಲಿ ನಿಮಗೂ, ನಿಮ್ಮ ಸ್ಟೆನೋಗೂ..’ -ಆತ ಮುಖ ಹಿಂಡಿದರು. ಆತನ ಮುಖದ ಗೆರೆಗಳಲ್ಲಿ ಹೇಯ ಭಾವ!..

            ಮಧುಕರ ಧರೆಗಿಳಿದು ಹೋದ!!..ಅವರ ಮುಂದೆ ಪಿಡಿಚೆಯಾಗಿ ಕುಳಿತ. ಮುಖದ ಸ್ನಾಯುಗಳು ತಪ್ಪಿತಸ್ಥ ಭಾವದಿಂದ ಕಂಪಿಸುತ್ತಿದ್ದವು. ಆದರೂ ಅದನ್ನು ಮೇಲೆ ತೋರ್ಪಡಿಸಿಕೊಳ್ಳದೆ ಕೈ ಹಿಸುಕಿಕೊಳ್ಳುತ್ತಾ ಆಚೀಚೆ ನೋಡಿ ಮೆಲ್ಲಗೆ ಪಿಸು ದನಿಯಲ್ಲಿ ನುಡಿಯುತ್ತಿದ್ದ:

            ‘ಖಂಡಿತಾ ಇಲ್ಲ ಇವರೇ..ಜನ ಹೊಟ್ಟೆಕಿಚ್ಚಿಗೆ ಸಾವಿರ ಹೇಳ್ತಾರೆ..ದೇವರಾಣೆಗೂ ನಾನು ಪ್ರಾಮಾಣಿಕವಾಗಿ ಹೇಳ್ತಾ ಇದ್ದೀನಿ ಸಾರ್…ನಾನು ನನ್ನ ಹೆಂಡ್ತೀನ ಬಿಟ್ಟು ಬೇರೆ ಯಾರನ್ನೂ ಕಣ್ಣೆತ್ತಿ ಸಹ ನೋಡಿದವನಲ್ಲ..ನನ್ನ ಹೆಂಡ್ತೀನ ನೋಡಿದ್ದೀರಲ್ಲ ಸಾರ್- ಸಾಕ್ಷಾತ್ ಲಕ್ಷ್ಮೀದೇವಿ ಥರ ಇದ್ದಾಳೆ..ನಡೆ-ನುಡಿಯಲ್ಲೂ ಅಷ್ಟೇ ಸದ್ಗುಣಿ..ಅಂಥವಳನ್ನು ಇಟ್ಕೊಂಡು, ಹಣ ಸಂಪಾದನೆಗೋಸ್ಕರವೇ ಹೊರಗೆ ಬಂದು ಕೆಲಸ ಮಾಡೋ, ಯಾವುದಕ್ಕೂ ಸಿದ್ಧವಾಗಿರೋ ಬಣ್ಣದ ಚಿಟ್ಟೆಗಳ ಕಡೆ ಯಾರು ನೋಡ್ತಾರೆ ಹೇಳಿ, ಯಾರು ಅಂಥವರನ್ನು ಗೌರವಿಸ್ತಾರೆ ಹೇಳಿ..ಹಾಗೆ ನಮ್ಮ ಆಫೀಸಿನ ಲೇಡಿಸ್‍ಗಳ ಬಗ್ಗೆ ಜನ ತಲೆ ತಟ್ಟಿಗೊಂದು ಮಾತಾಡ್ತಾರೆ, ಅವನ್ನೆಲ್ಲ ನೆಗ್ಲೆಕ್ಟ್ ಮಾಡಬೇಕು..ಅದಕ್ಕೆಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ…ಬಿಲೀವ್ ಮಿ ಸರ್…ಮಹಾಲಕ್ಷ್ಮಿಯಂಥ ಹೆಂಡತಿಯನ್ನಿಟ್ಟುಕೊಂಡು ಕೈಕೆಳಗಿನ ಚೀಪ್ ರೇಟ್ ಹೆಂಗಸರನ್ನ ನಾನೆಂದೂ ಕಣ್ಣೆತ್ತಿಯೂ ನೋಡಿದವನಲ್ಲ ಸರ್..’

            ಕೈಯಲ್ಲಿ ಟ್ರಾನ್ಸ್‍ಫರ್ ಆರ್ಡರ್ ಇಟ್ಕೊಂಡು ಕಣ್ತುಂಬಿಕೊಂಡು ಅದೇತಾನೆ ಬಾಗಿಲ ಬಳಿ ಬಂದು ನಿಂತಿದ್ದ ಸುಷ್ಮಾಗೆ ಅದು ಮಧುಕರನ ದನಿಯೇ ಎಂಬ ಅಪನಂಬಿಕೆಯುಂಟಾಯಿತು. ಅವನ ಒಂದೊಂದು ಮಾತುಗಳನ್ನು ಕೇಳಿ ತತ್ತರಿಸುತ್ತ ಅವಳು ಬಾಗಿಲನ್ನು ಆಸರೆಗೆ ಹಿಡಿದುಕೊಂಡಳು. ಕಣ್ಣು ಕತ್ತಲಿಟ್ಟಿತ್ತು.

ತತ್‍ಕ್ಷಣ ಅವಳ ಹಿಂದೆಯೇ ಬಂದ ಸೆಕ್ಷನ್ ಸೂಪರಿಂಟೆಂಡೆಂಟ್, ಬವಳಿ ಬಂದು ಬೀಳುತ್ತಿದ್ದವಳನ್ನು ಹಿಡಿದುಕೊಂಡು ಹೊರಗೆ ಕರೆತಂದು ಕುರ್ಚಿಯ ಮೇಲೆ ಕೂಡಿಸಿ ಫ್ಯಾನ್ ಹಾಕಿದ.

‘ಧೈರ್ಯ ತಂದ್ಕೊಳ್ಳಿ ಮೇಡಂ, ನೀವು ಇದೇ ಊರಿನಲ್ಲಿ ಬಹಳ ವರ್ಷಗಳಿಂದ ಇದ್ದೀರ, ಲಾಂಗ್ ಸ್ಟ್ಯಾಂಡಿಂಗ್, ಟ್ರಾನ್ಸ್‍ಫರ್ ಮಾಡೋಣವೇ, ಅಂತ ಡೈರೆಕ್ಟರ್ ಸಾಹೇಬ್ರು ಎದುರಿಗಿದ್ದ ಮಧುಕರ್ ಅವರನ್ನ ಅಭಿಪಾಯ ಕೇಳಿದಾಗ, ಅವರು ಏನೂ ಮಾತಾಡಲೇ ಇಲ್ವಂತೆ…ಛೇ…ಅವರು ಒಂದು ಮಾತು ಹೇಳಿದ್ರೆ ವರ್ಗ ಮಾಡ್ತಾ ಇರಲಿಲ್ಲ…’

            -ಎಂದಾತ ಅನುಕಂಪದಿಂದ ಲೊಚಗುಟ್ಟಿದಾಗ ಸುಷ್ಮಳ ಕಿವಿಯ ತುಂಬ ಲೊಚಗುಟ್ಟಿದ ಆ   ಶಬ್ದವೇ ರಿಂಗಣಗುಣಿಸುತ್ತ ಅಲೆಅಲೆಯಾಗದು ಮೈತುಂಬ ಹಬ್ಬುತ್ತ, ಕೋಣೆಯ ತಾರಸಿ-ಗೋಡೆಗಳಿಗಪ್ಪಳಿಸುತ್ತ, ಮೆದುಳನ್ನು ಹಿಂಡಿ ಹಿಪ್ಪೆ ಮಾಡುವಷ್ಟು ಜೋರಾಗಿ ಆರ್ಭಟದ ದನಿಯಾಗಿ, ಗಹಗಹಿಕೆಯ ನಗುವಾಗಿ ಅವಳ ಸುತ್ತ ಸುಳಿಯನ್ನು ಭರಭರನೆ ನೇಯತೊಡಗಿತು.     

                                       *******************               

Related posts

ಗುದ್ದು

YK Sandhya Sharma

Video-Short story by Y.K.Sandhya Sharma

YK Sandhya Sharma

ಕಿರುಗುಟ್ಟುವ ದನಿಗಳು

YK Sandhya Sharma

Leave a Comment

This site uses Akismet to reduce spam. Learn how your comment data is processed.