Image default
Dancer Profile

ಉಭಯ ನೃತ್ಯಶೈಲಿಯ ಕಲಾವಿದೆ ಕಾವ್ಯಶ್ರೀ ನಾಗರಾಜ್

ಇಂದು ಅಂತರರಾಷ್ಟ್ರೀಯ ನೃತ್ಯ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಕಾವ್ಯಶ್ರೀ ನಾಗರಾಜ್ ಬಾಲ ಪ್ರತಿಭೆ. ಹುಟ್ಟಿನಿಂದ ಪ್ರತಿಭಾನ್ವಿತಳಾಗಿರುವ ಬಾಲೆ ಅದೃಷ್ಟವಂತಳು. ಹುಟ್ಟಿ ಬೆಳೆದದ್ದು ಚಿಕ್ಕಬಳ್ಳಾಪುರದಲ್ಲಿರುವ ನಂದಿ ಬೆಟ್ಟದಲ್ಲಿ . ತಂದೆ ಟಿ.ಎನ್. ನಾಗರಾಜ್ ನಂದೀ ಬೆಟ್ಟದ ಮೇಲಿರುವ ಯೋಗ ನಂದೀಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರು. ತಾತ ಕೂಡ ಬೆಟ್ಟದ ಕೆಳಗಿನ ಭೋಗ ನಂದೀಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿದ್ದವರು. ಸುತ್ತಣ ದೈವೀಕ ಪರಿಸರ, ದೇವಾಲಯದ ಶಿಲ್ಪ ಕೆತ್ತನೆ -ವಾಸ್ತುಶಿಲ್ಪಗಳ ಕಲಾತ್ಮಕ ನೋಟ,  ಸುಂದರ ಪ್ರಾಕೃತಿಕ ವಾತಾವರಣದ ಪ್ರಭಾವದಿಂದಲೋ ಏನೋ ಪುಟ್ಟ ಬಾಲಕಿ ಕಾವ್ಯಶ್ರೀಯಲ್ಲಿದ್ದ ಕಲಾಸಕ್ತಿ ಉದ್ದೀಪನಗೊಂಡಿತು. ತಂದೆ ನಾಗರಾಜ್ ಮತ್ತು  ತಾಯಿ ಭಾಗ್ಯಲಕ್ಷ್ಮೀ ಯವರ ತುಂಬು ಪ್ರೋತ್ಸಾಹ, ಸಹಕಾರದಿಂದ ಅವಳಿಂದು ವಿಶ್ವದ ಮಟ್ಟದಲ್ಲಿ ತನ್ನ ನೃತ್ಯ ಸಾಧನೆ ತೋರಲು ಸಾಧ್ಯವಾಗಿದೆ.  

ಕಾವ್ಯಶ್ರೀ ತನ್ನ ಐದನೆಯ ವಯಸ್ಸಿಗೇ ಲಯಬದ್ಧವಾಗಿ ಹೆಜ್ಜೆಗಳನ್ನಿಡುತ್ತ ನರ್ತಿಸತೊಡಗಿದ್ದು ಹೆತ್ತವರ ಗಮನಕ್ಕೆ ಬಂತು. ಅವಳಿಗೆ ಶಾಸ್ತ್ರೀಯ ಮಾರ್ಗದರ್ಶನ ದೊರೆಯುವಂತೆ ಮಾಡಿ, ಮಗಳನ್ನು ಬೆಂಗಳೂರಿನ ಭರತನಾಟ್ಯ ಗುರು ಸುಪರ್ಣಾ ವೆಂಕಟೇಶ್ ಅವರಲ್ಲಿ ನೃತ್ಯ ಕಲಿಯಲು ಸೇರಿಸಿದರು. ಮೊದಲೇ ಚೂಟಿಯಾಗಿದ್ದ ಕಾವ್ಯಶ್ರೀ, ಬಹುಬೇಗ ಆಸಕ್ತಿಯಿಂದ ತರಬೇತಿ ಪಡೆಯಲಾರಂಭಿಸಿ ಸುಮಾರು 15 ವರ್ಷಗಳ  ಕಲಿಕೆಯಲ್ಲಿ ಪ್ರಗತಿ ತೋರಿಸಿದಳು. ನಂದಿಯ ಭೋಗ ನಂದೀಶ್ವರ ದೇವಾಲಯದ ದೈವೀಕ ಪರಿಸರದಲ್ಲಿ ಬೃಹತ್ ಸಂಖ್ಯೆಯ ಕಲಾರಸಿಕರೆದುರು ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಿ, ಮೆಚ್ಚುಗೆ ಗಳಿಸಿದ್ದು ವಿಶೇಷ ಸಂಗತಿ.

ಸದಾ ನೃತ್ಯಸಾಧನೆಯ ಬಗ್ಗೆಯೇ ಧ್ಯಾನಿಸುತ್ತಿದ್ದ ನೃತ್ಯಾರ್ಥಿಗೆ ಸದವಕಾಶಗಳು ತೆರೆದುಕೊಂಡವು. ಇಷ್ಟರಲ್ಲವಳು, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ನೃತ್ಯ ಪರೀಕ್ಷೆಯಲ್ಲಿ ಉತ್ತಮಾಂಕಗಳಿಂದ ಜಯಶೀಲಳಾದಳು. ಚಿಕ್ಕಬಳ್ಳಾಪುರದಲ್ಲಿ ಹೈಸ್ಕೂಲ್ ಮುಗಿಸಿ, ಬೆಂಗಳೂರಿನಲ್ಲಿ ಪಿಯೂಸಿ ವಿದ್ಯಾಭ್ಯಾಸದ ನಂತರ ನೃತ್ಯ ಸಂಯೋಜನೆಯಲ್ಲಿ ಬಿ.ಎ. ಪದವಿ ಪಡೆದು ಎಲ್ಲೆಡೆ ನೃತ್ಯ ಪ್ರದರ್ಶನಗಳನ್ನು ನೀಡಲಾರಂಭಿಸಿದಳು. ಬೆಂಗಳೂರು ವಿಶ್ವ ವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ‘ಚಿನ್ನದ ಪದಕ’ ಗಳಿಸಿದ್ದು ನಿಜಕ್ಕೂ ಕಾವ್ಯಶ್ರೀಯ ಅಗ್ಗಳಿಕೆ.

ಇಷ್ಟಕ್ಕೇ ಅವಳ ಆಸಕ್ತಿ ನಿಲ್ಲಲಿಲ್ಲ. ಗುರು ಮೈಸೂರು ಬಿ. ನಾಗರಾಜ್ ಅವರಲ್ಲಿ ಕಥಕ್ ನೃತ್ಯಾಭ್ಯಾಸಕ್ಕೆ ತೊಡಗಿದಳು. ಎಂಟುವರ್ಷಗಳ ಕಾಲ ಸತತ ಅಭ್ಯಾಸ. ಕಥಕ್ ಶೈಲಿಯಲ್ಲೂ ಅವಳ ಪ್ರತಿಭೆ ಪೂರ್ಣ ಪ್ರಮಾಣದಲ್ಲಿ ಪ್ರಫುಲ್ಲಿಸಿತು. ಕಥಕ್ ‘ರಂಗಪ್ರವೇಶ’ವೂ ನಡೆದು, ರಾಜ್ಯಾದ್ಯಂತ ಭರತನಾಟ್ಯದೊಂದಿಗೆ ಕಥಕ್ ನೃತ್ಯದ ಪ್ರದರ್ಶನ ನೀಡತೊಡಗಿದ್ದು ಅವಳ ವಿಶೇಷ. ಎರಡು ದಶಕಗಳಿಗೂ ಮೀರಿದ ನೃತ್ಯಾಭ್ಯಾಸ-ಕಲಿಕೆಗಳಿಂದ ಕಾವ್ಯ, ನೃತ್ತ-ಅಭಿನಯಗಳಲ್ಲಿ ಪ್ರಾವೀಣ್ಯ ತೋರಿದಳು.

ಎಲ್ಲ ಬಗೆಯ ನೃತ್ಯಗಳೂ ಕಾವ್ಯಳ ಆಸಕ್ತಿಯನ್ನು ಕೆರಳಿಸಿದವು. ಪರಿಶ್ರಮಿಸಿ ಆ ದಿಸೆಯಲ್ಲಿ ಸಾಗಿದವಳು, ಖ್ಯಾತ ಕಥಕ್ ನೃತ್ಯಗುರು ಡಾ. ಮಾಯಾರಾವ್ ಅವರ ಬಳಿ ನೃತ್ಯ ನಾಟಕ-ರೂಪಕಗಳಿಗೆ, ನೃತ್ಯ ಸಂಯೋಜಿಸುವ ಕುರಿತು ತರಬೇತಿಗೊಂಡದ್ದಲ್ಲದೆ, ಕಲರಿಪಯಟ್ಟು, ಮಾರ್ಷಿಯಲ್ ಆರ್ಟ್ಸ್ ಮತ್ತು ಛಾವ್ ನೃತ್ಯಶೈಲಿಗಳನ್ನೂ ಕಲಿತಳು. ಅದರೊಂದಿಗೆ, ಗುರು ಮಧು ನಟರಾಜರಿಂದ ಸಮಕಾಲೀನ ನೃತ್ಯವನ್ನೂ ಕಲಿತಳು. ಭಾರತೀಯ ಜಾನಪದ ನೃತ್ಯದೊಂದಿಗೆ, ಬೇರೆ ಬೇರೆ ದೇಶಗಳ ಸಾಂಪ್ರದಾಯಕ  ಜಾನಪದ ನೃತ್ಯಗಳನ್ನೂ ಕಲಿತು ದೇಶಾದ್ಯಂತ ಮಾತ್ರವಲ್ಲದೆ,  ವಿಶ್ವದಾದ್ಯಂತ ನೃತ್ಯ ಪ್ರದರ್ಶನ ಕೊಡತೊಡಗಿದ್ದು ಕಾವ್ಯಶ್ರೀಯ ಹಿರಿಮೆ. ತನ್ನ ನೃತ್ಯದಲ್ಲಿ ಸಾಂದರ್ಭಿಕವಾಗಿ ಒಡಿಸ್ಸಿ, ಮೋಹಿನಿಯಾಟ್ಟಂ, ಯಕ್ಷಗಾನ ಮತ್ತು ಮಣಿಪುರಿ ನೃತ್ಯ ಶೈಲಿಗಳನ್ನೂ ಅಳವಡಿಸಿಕೊಂಡದ್ದು ಅವಳ ವಿಶೇಷ.

ಕಾವ್ಯ, ಕರ್ನಾಟಕದ ಅನೇಕ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವುದಲ್ಲದೆ, ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ, ವಿಶಿಷ್ಟ ಹಬ್ಬ, ಆರಾಧನೆ-ಮಹೋತ್ಸವಗಳ ವಿವಿಧ ಸಂದರ್ಭಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದಳು. ಮೈಸೂರು ದಸರಾ, ಕಿತ್ತೂರು, ಲಕ್ಕುಂಡಿ, ಹಂಪಿ, ಇಕ್ಕೇರಿ ಮುಂತಾದ ಅನೇಕಾನೇಕ ಪ್ರಮುಖ ನೃತ್ಯೋತ್ಸವಗಳಲ್ಲಿ ನರ್ತಿಸಿದ ಹೆಮ್ಮೆ ಇವಳದು. ಬೆಂಗಳೂರು ಸೇರಿದಂತೆ  ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲದೆ, ಆಂಧ್ರ, ತಮಿಳು ನಾಡಿನ ಅನೇಕ ಪ್ರಮುಖ ದೇವಾಲಯಗಳು, ರಾಷ್ಟ್ರೀಯ ಮಟ್ಟದಲ್ಲಿ-ದೆಹಲಿ, ಚೆನ್ನೈ, ಗುಜರಾತ್, ರಾಜಾಸ್ಥಾನ್, ಕೊನಾರ್ಕ್, ಮೇಘಾಲಯ , ಶಿಲ್ಲಾಂಗ್  ಮತ್ತು ಮುಂಬೈಗಳಲ್ಲೂ ಅನೇಕ ವೇದಿಕೆಗಳ ಮೇಲೆ ನೃತ್ಯ ಪ್ರದರ್ಶನ ನೀಡಿದ್ದಾಳೆ.

ಅಮೆರಿಕಾದ ವಿವಿಧ ರಾಜ್ಯ ಮತ್ತು ಪ್ರದೇಶಗಳಲ್ಲಿ ಇದುವರೆಗೂ ಸುಮಾರು ನಲವತ್ತು  ನೃತ್ಯ ಕಾರ್ಯಕ್ರಮಗಳನ್ನು ನೀಡಿರುವ ಕಾವ್ಯಶ್ರೀ, ಜೊತೆಗೆ ಯು.ಎ.ಇ., ಸಿಂಗಾಪುರ್, ಬೆಹರಿನ್, ದುಬೈ, ಅಬುದಾಬಿ, ನೇಪಾಳ, ಕೆನಡಾದಲ್ಲೂ ನೃತ್ಯ ಪ್ರದರ್ಶಿಸಿದ್ದಾಳೆ. ಪ್ರಸ್ತುತ ಕೆನಡಾದ ಹ್ಯಾಲಿಫ್ಯಾಕ್ಸ್ ನಲ್ಲಿ ನೆಲೆಸಿರುವ ಕಾವ್ಯ ತನ್ನದೇ ಆದ   ‘’ಕಾವ್ಯಶ್ರೀ ಆರ್ಟ್ ಫೌಂಡೆಶನ್’’ ಎಂಬ ನೃತ್ಯಶಾಲೆ ತೆರೆದು ನೂರಾರು ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ ನೀಡುತ್ತಿದ್ದಾಳೆ. ಅಂಧ ನೃತ್ಯ ಕಲಾವಿದರೊಡನೆ ನೃತ್ಯ ಮಾಡಿರುವ ಇವಳು, ಹಿರಿಯ ನಾಗರಿಕರಿಗೂ ನೃತ್ಯ ಕಲಿಸುತ್ತಿರುವುದು ವಿಶೇಷ.

ಹ್ಯಾಲಿಫ್ಯಾಕ್ಸ್ ನಲ್ಲಿ ನೃತ್ಯಕ್ಕೆ ಕಡಿಮೆ ಅವಕಾಶವಿದ್ದರೂ ಕಾವ್ಯಶ್ರೀಯವರು ಭರವಸೆಯನ್ನು ಎಂದಿಗೂ ಕಳೆದುಕೊಂಡಿಲ್ಲ. ತಮ್ಮ ವಿದ್ಯಾರ್ಥಿಗಳನ್ನು ಸೇರಿಸಿ ಕನ್ನಡ ರಾಜ್ಯೋತ್ಸವಕ್ಕೆ ನೃತ್ಯ ಸಂಯೋಜನೆ ಮಾಡಿ ಕನ್ನಡದ ಬಾವುಟವನ್ನು ಮುಗಿಲಲ್ಲಿ ಹಾರಿಸಿ ಸಂತೋಷಪಟ್ಟಿದ್ದಾರೆ. ಆನಂದಮಯ ಈ ಜಗ ಹೃದಯ ಎಂಬ ಹಾಡಿಗೆ ಬರಿಗಾಲಲ್ಲಿ ಹಿಮದಲ್ಲಿ ನೃತ್ಯ ಮಾಡಿ ಜನರಿಂದ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚಿಗೆ ರಾಮನವಮಿ ಪ್ರಯುಕ್ತ ತಮ್ಮ ಇಂಡೋ-ಕೆನಡಾ ವಿದ್ಯಾರ್ಥಿಗಳನ್ನು ಸೇರಿಸಿ ಕಥಕ್ ನೃತ್ಯವನ್ನು ಸಹ ಆಯೋಜನೆ ಮಾಡಿದ್ದಾರೆ.

ಅನೇಕ ಖ್ಯಾತ ನೃತ್ಯಜ್ಞರ ಕಾರ್ಯಾಗಾರಗಳಲ್ಲಿ ಅಭಿನಯ, ನಟುವಾಂಗ, ಪ್ರಸಾಧನ, ರಂಗಸಜ್ಜಿಕೆ, ಬೆಳಕಿನ ವಿನ್ಯಾಸ ಮತ್ತು ಮೈಮ್ ಮುಂತಾದ ವಿವಿಧ ವಿಷಯಗಳ  ಬಗ್ಗೆ  ಹೆಚ್ಚಿನ ಆಸಕ್ತಿಯಿಂದ ಕಲಿತಿರುವುದು ನಿಜಕ್ಕೂ ಕಾವ್ಯಶ್ರೀಯ ಆಸಕ್ತಿ-ಬದ್ಧತೆಗೆ ಹಿಡಿದ ಕನ್ನಡಿ. ಬಹುಮುಖ ಪ್ರತಿಭೆಯ ಕಾವ್ಯಶ್ರೀಯನ್ನರಸಿ ಬಂದಿರುವ ಅನೇಕ ಪ್ರಶಸ್ತಿಗಳಲ್ಲಿ ಮುಖ್ಯವಾದವು-ನೃತ್ಯಶ್ರೀ, ನವಪಲ್ಲವಿ, ಮಹಿಳಾ ರತ್ನ, ಕರ್ನಾಟಕ ಶಿರೋಮಣಿ, ನಾಟ್ಯ ಮಯೂರಿ, ಶ್ರೀವಾರಿ ಕಲ್ಪಶ್ರೀ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಇನ್ನೂ ಮುಂತಾದವು.

ಕಾವ್ಯಶ್ರೀಯ ನೃತ್ಯ ಸಾಧನೆಗೆ ಬೆಂಬಲವಾಗಿರುವ, ಕೆನಡಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಉದ್ಯೋಗದಲ್ಲಿರುವ ಪತಿ ಶ್ರವಣ್ ಮತ್ತು ಎರಡೂವರೆ ವರ್ಷದ ಮಗ ಶೌರ್ಯನಿಂದ ಒಡಗೂಡಿದ ಸುಂದರ ಕುಟುಂಬ ಈಕೆಯದು.  

                            ***********************************

Related posts

‘ಕರ್ನಾಟಕ ಡಾನ್ಸಿಂಗ್ ಕ್ವೀನ್ 2021 ’- ಕೂಚಿಪುಡಿ ನೃತ್ಯ ಕಲಾವಿದೆ ರೇಖಾ ಸತೀಶ್

YK Sandhya Sharma

ಉಭಯ ಶೈಲಿಯ ನೃತ್ಯತಜ್ಞೆ ಡಾ.ಸುಪರ್ಣಾ ವೆಂಕಟೇಶ್

YK Sandhya Sharma

ಬಹುಮುಖ ಪ್ರತಿಭೆಯ ಭರತನಾಟ್ಯ ಕಲಾವಿದೆ ಜಿ.ಶ್ರುತಿ

YK Sandhya Sharma

Leave a Comment

This site uses Akismet to reduce spam. Learn how your comment data is processed.