Image default
Short Stories

ಕತ್ತಲೊಳಗಣ ಬೆಳಕು

ತಲೆ ಎತ್ತಿ ನೋಡಿದಾಗ ಆಗಸ ಕಪ್ಪು ಮುಕ್ಕಳಿಸುತ್ತಿತ್ತು. ಮದಗಜದಂಥ ಕರಾಳ ದೈತ್ಯ ಮೋಡಗಳ ಗರ್ಜನೆ. ಎದೆಯಲ್ಲೂ ಅಂಥದೇ ಹೆಪ್ಪುಗಟ್ಟಿದ ಆತಂಕ. ಒಬ್ಬಂಟಿ ಬಸ್ ನಿಲ್ದಾಣದಲ್ಲಿಳಿದಾಗ ಒಮ್ಮೆಲೆ ಅನಾಥಪ್ರಜ್ಞೆ ಆವರಿಸಿ ಎದೆ ಧಡಗುಟ್ಟತೊಡಗಿತು. ಎಂದೂ ತಾನು ಹೀಗೆ ಒಬ್ಬಳೇ ಬಸ್ಸು ಹತ್ತುವುದಿರಲಿ ಬೀದಿಗೂ ಇಳಿದವಳಲ್ಲ. ಕೈಯಲ್ಲಿ ಹೀಗೆ ಸೂಟ್‍ಕೇಸಿನ ಭಾರವನ್ನೂ ಹೊತ್ತವಳಲ್ಲ. ಹೊಸ ಷಹರಿಗೆ ಬಂದವಳಂತೆ ಸುತ್ತ ಕಣ್ಣರಳಿಸಿ ನೋಡುತ್ತ ಗೊತ್ತೂ ಗುರಿಯಿಲ್ಲದವಳಂತೆ ನೆಲದಲ್ಲಿ ಹೆಜ್ಜೆ ಕೀಲಿಸಿ ನಿಂತವಳಿಗೆ  `ಎಲ್ಲಿಗೋಗ್ಬೇಕ್ರವ್ವ?’ ಎಂದು ಕೇಳುತ್ತ ಆ ಓಬೀರಾಯನ ಕಾಲದ ಜಟಕಾದವನು ಅನಾಮತ್ತು ಅವಳ ಕೈಯಿಂದ ಪೆಟ್ಟಿಗೆಯನ್ನು ಎತ್ತಿಕೊಂಡು ಎರಡು ಮಾರು ದೂರದಲ್ಲಿದ್ದ ತನ್ನ ಕುದುರೆಗಾಡಿಯಲ್ಲಿರಿಸಿ `ಹತ್ರವ್ವ…ಎಲ್ಲೀಗೋಗೋಣ?’ ಎಂದು ತನ್ನ ಕೈಲಿದ್ದ ಛಾಟಿಯಿಂದ ಅಭ್ಯಾಸಬಲದಂತೆ ಒಮ್ಮೆ ಗಾಳಿಯಲ್ಲಿ ಛಬುಕು ಬೀಸಿ,  ಗಾಡಿಯ ಮುಂಭಾಗಕ್ಕೆ ಜಿಗಿದು ಚಿಮ್ಮಿಕೂತ. ಮೂಕಿ ಅಲುಗಾಡಿ ಬಡಕಲು ಕುದುರೆಯ ಕಿವಿ ನಿಮಿರಿ, ತಲೆಯಲ್ಲಾಡಿಸಿ ಬತ್ತಿದ ಸ್ವರದಿಂದ ಸಣ್ಣದಾಗಿ ಕೆನೆಯಿತು.

ಸುಮಿತ್ರ ನೆಲಕ್ಕೆ ಕಾಲು ಕೀಲಿಸಿ ನಿಂತಿದ್ದಳು. ಹೆಜ್ಜೆ ಎತ್ತಿ ಮುಂದಡಿಯಿಡಲು ಪ್ರಯತ್ನಿಸಿದರೂ ಪಾದಗಳು ಚಲಿಸಲಿಲ್ಲ. ತಾನೆಂದೂ ಇಂಥ ಗಾಡಿಯಲ್ಲಿ ಕುಳಿತವಳಲ್ಲ. ಬೆಂಗಳೂರಿನಿಂದ ಬರುವಾಗ ರೈಲ್ವೇಸ್ಟೇಷನ್‍ಗೆ ಕಂಪೆನಿಯ ಕಾರು ಬಂದಿರುತ್ತಿತ್ತು. ಅಥವಾ ಖುದ್ದು ಪತಿರಾಯ ರಾಮನಾಥನೇ ರಥದಂಥ ತನ್ನ ದೊಡ್ಡ ಕಾರನ್ನೇ ನಡೆಸಿಕೊಂಡು ಬಂದು ಜೊತೆಯಲ್ಲಿ ಕರೆತಂದ ಹನುಮನ ಕೈಲಿ ಲಗೇಜ್ ಒಳಗಿಡಿಸಿ, ಕಣ್ಣಲ್ಲೇ ಕಿರುನಗೆ ಬೀರಿ, `ವೆಲ್ ಕಂ ಸುಮಿ ಡಾರ್ಲಿಂಗ್’ ಎಂದು ಪಿಸುಗಟ್ಟಿದವನನ್ನು -`ಷ್…ಹನುಮ…’ ಎಂದು ಹಿಂದಿನ ಸೀಟಿನಲ್ಲಿ ಕೂತವನ ಕಡೆ ಗಮನ ಸೆಳೆದು ಸಣ್ಣ ದನಿಯಲ್ಲಿ ಗದರುತ್ತಿದ್ದಳಾಗ ಸುಮಿತ್ರ. ರಾಮನಾಥನಿಗೆ ಯಾವಾಗಲೂ ತಮಾಷೆಯೇ. `ಅಂತೂ ಬಂದ್ಯಲ್ಲ…ಸದ್ಯ ಬದುಕಿದ ಈ ಬಡಪಾಯಿ, ತಿಂಗಳಾಯ್ತಲ್ಲ ತಂಗೀ ಮದುವೇಂತ ತೌರುಮನೆಗೆ ಹೋದವಳು, ಗಂಡನ ಊಟೋಪಚಾರವಿರಲಿ, ಅವನ ವಿರಹ ವೇದನೆಯನ್ನಾದರೂ ಊಹಿಸ್ಕೊಂಡು ಕೊಂಚ ದಯ ತೋರಿಸಬಾರದಿತ್ತೇ?… ತಿಂಗಳುಗಟ್ಟಲೆ ಹೀಗೆ ಕೂತುಬಿಟ್ರೆ ನನ್ನ ಗತಿಯೇನು ಚಿನ್ನ ?…ನೀನಿಲ್ಲದಾಗ ನಾಲ್ಕು ಜನ ಬಂದಿದ್ರು ನಂಗೆ ಹೆಣ್ಣು ಕೊಡೋಕ್ಕೆ…ನಾನು ಸ್ವಲ್ಪ ಸಹನೆಯಿಂದ ಕಾದಿದ್ದಕ್ಕೆ ನೀನು ಬಚಾವಾದೆ ‘ ಎಂದು ಕಣ್ಣು ಮಿಟುಕಿಸಿದಾಗ ಸುಮಿತ್ರ ಮುಖ ಗಂಟಿಕ್ಕಿ ಗಂಡನನ್ನು ದುರುಗುಟ್ಟಿ ನೋಡಿದಳು.

` ಟೇಮಾಯ್ತು…..ಎಲ್ಲಿಗೋಗ್ಬೇಕು ಯೋಳ್ರವ್ವ ‘ ಜಟಕಾಸಾಬಿಯ ದನಿಗೆ ಬೆಚ್ಚಿಬಿದ್ದು ಸುಮಿತ್ರ ,ನೆನಪಿನ ಜೋಕಾಲಿಯಿಂದ ಧುಡುಮ್ಮನೆ ಕೆಳಗುರುಳಿದವಳಂತೆ ಕಕ್ಕಾಬಿಕ್ಕಿಯಾಗಿ  ಅವನನ್ನೇ ನೋಡುತ್ತ, ತನ್ನರಿವಿಲ್ಲದೆ `ಕಂಪೆನಿ ಕಾಲೋನಿ ಕಡೆ ನಡೆಯಪ್ಪ’ ಎಂದಳು ಕ್ಷೀಣ ಸ್ವರದಲ್ಲಿ. ಒಂದು ಕ್ಷಣ ಅವಳತ್ತ ವಿಚಿತ್ರವಾಗಿ ದಿಟ್ಟಿಸಿದವನು ಮುಖದಲ್ಲಿ ಕರುಣಾದ್ರ್ರ ಭಾವ ತುಳುಕಿಸುತ್ತ ಕುದುರೆಯ ಮೈ ತಟ್ಟಿದ. ಕತ್ತಲನ್ನು ಸೀಳಿಕೊಂಡು ಗಾಡಿ ಟುಕು ಟುಕು ಮುಂದೋಡತೊಡಗಿತು. ಸುಮಿತ್ರಳ ಮನಸ್ಸಿನ ಹೆಜ್ಜೆಗಳು  ಹಿಂದೆ ಜಗ್ಗತೊಡಗಿದ್ದವು.

ಕಂಪೆನಿಯ ಹಿರಿಯ ಅಧಿಕಾರಿಯಾಗಿದ್ದ ರಾಮನಾಥನ ಒಡನಾಟದಲ್ಲಿ ಅವಳಿಗೆಂದೂ ಇಂಥ ಅಭದ್ರತಾ ಭಾವ ಕಾಡಿರಲಿಲ್ಲ. ಬಲು ಮುಚ್ಚಟೆಯಿಂದವಳನ್ನು ನೋಡಿಕೊಳ್ಳುತ್ತಿದ್ದ ಅವನು. ಕಂಪೆನಿ ನೀಡಿದ್ದ ದೊಡ್ಡ ಬಂಗಲೆಯಂಥ ಕ್ವಾಟರ್ಸ್. ಸುತ್ತ ವಿಶಾಲವಾದ ಗಾರ್ಡನ್…ಕಂಪೆನಿಯ ಕಾರಲ್ಲದೆ, ಅವರದೇ ಆದ ಸ್ವಂತ ಕಾರು ಬೇರೆ. ಕೆಲಸಕ್ಕೆ ಧಾರಾಳವಾಗಿ ಒದಗಿದ್ದ ಆಳು-ಕಾಳುಗಳು. ರಾಮನಾಥ ಸಂಜೆ ಆಫೀಸಿನಿಂದ ಹಿಂತಿರುಗಿ ಬರುವವರೆಗೂ ಸುಮಿತ್ರ ಮನೆಯಲ್ಲಿ ಒಬ್ಬಳೇ ಕಾಲ ಕಳೆಯಲು ಬೇಜಾರಾಗಿ, ಮಧ್ಯಾಹ್ನ ಲೇಡಿಸ್ ಕ್ಲಬ್ಬಿಗೆ ಹೋಗಿ ಹೌಸಿ, ಕಾರ್ಡ್ಸ್ ಆಡುತ್ತಿದ್ದಳು. ತಿಂಗಳಿಗೊಮ್ಮೆ ಕಾಲೋನಿಯ ಯಾರದಾದರೂ ಮನೆಯಲ್ಲಿ ಕಿಟ್ಟಿ ಪಾರ್ಟಿ….ಇಲ್ಲವಾದರೆ ಸುತ್ತ ಮುತ್ತ ಒಂದು ದಿನದ ಪ್ರವಾಸಗಳು ಇದ್ದೇ ಇರುತ್ತಿದ್ದುದರಿಂದ ಅವಳಿಗೆ ಕಾಲ ಕಳೆದುದೇ ಗೊತ್ತಾಗುತ್ತಿರಲಿಲ್ಲ. ಇದ್ದ ಒಬ್ಬನೇ ಕುಲಪುತ್ರ ಭರತ್ ಇದೇ ಕಾಲೋನಿಯ ಕಾನ್ವೆಂಟಿನಲ್ಲಿ ಓದು ಮುಗಿಸಿ ಇದೀಗ ಬೆಂಗಳೂರಿನಲ್ಲಿ ಅಜ್ಜಿಯ ಮನೆಯಲ್ಲಿದ್ದುಕೊಂಡು ಇಂಜಿನಿಯರಿಂಗ್ ಕಡೆಯ ವರ್ಷದಲ್ಲಿ ಓದುತ್ತಿದ್ದ. ಹೀಗಾಗಿ ಸುಮಿತ್ರಳಿಗೆ ಚಿಂತಿಸುವಂಥ ಯಾವ ತಲೆನೋವಾಗಲಿ, ಜವಾಬ್ದಾರಿಯಾಗಲೀ ಇರಲಿಲ್ಲ. ತನ್ನನ್ನು ತುಂಬ ಹಚ್ಚಿಕೊಂಡಿದ್ದ ಗಂಡನ ಒಡನಾಟದಲ್ಲಿ ಅವಳು ತುಂಬು ಸುಖಿ ಎಂದೇ ಹೇಳಬೇಕು. ಹವ್ಯಾಸಕ್ಕೆ ತೋಟಗಾರಿಕೆಯೂ ಇತ್ತು. ಮನೆಯ ಸುತ್ತ ಸುಂದರ ಉದ್ಯಾನವನ ನಿರ್ಮಿಸಿದ್ದಳು. ಪ್ರತಿ ವರ್ಷ ಗಾರ್ಡನ್ ಕಾಂಪಿಟೀಷನ್‍ನಲ್ಲಿ ಅವಳಿಗೆ ಫಸ್ಟ್ ಪ್ರೈಜ್ ಕಟ್ಟಿಟ್ಟ ಬುತ್ತಿ. ಪ್ರತಿ ಬಾರಿಯೂ ಹೊಸ ನಕ್ಷೆ ತಯಾರಿಸಿ ಗಿಡಗಳನ್ನು ಹಾಕಿಸುತ್ತಿದ್ದಳು. ಅವಳ ಸುಂದರ ತೋಟದಲ್ಲಿ ಎಲ್ಲ ಬಗೆಯ – ಬಣ್ಣ ಬಣ್ಣಗಳ ಗುಲಾಬಿ ಹೂಗಳು ಅರಳಿದ್ದವು, ವಿವಿಧ ಜಾತಿಯ ಕ್ರೋಟನ್ ಗಿಡಗಳ ಜೊತೆ ಮಲ್ಲಿಗೆಯ ನಾ ನಾ ಬಗೆಗಳೂ ಇದ್ದವು. ಆಲಂಕಾರಿಕ ಸಸ್ಯಗಳಿಗೂ ಅಲ್ಲಿ ಕಡಮೆಯಿರಲಿಲ್ಲ. ಸಿಮೆಂಟ್- ಮಣ್ಣಿನ ಕುಂಡಗಳು ಸಾಲು ಸಾಲು.  ಮನೆಯ ಹಿತ್ತಲಲ್ಲಿ ಸಣ್ಣ ತರಕಾರಿಯ ತೋಟ. ಹೀಗಾಗಿ ಅವರಿಗೆ ತರಕಾರಿ  ಹೊರಗೆ ಕೊಳ್ಳುವ ಪ್ರಮೇಯವೇ ಇರಲಿಲ್ಲ. ಕಲಾವಂತಿಕೆಯಲ್ಲಿ ನಿಪುಣೆಯಾದ ಸುಮಿತ್ರಳನ್ನು ಕಾಲೋನಿಗೆ ಕಾಲೋನಿಯೇ ಕೊಂಡಾಡುತ್ತಿತ್ತು. ಗಿಡಗಳ ಸಸಿಯನ್ನು ಪಡೆಯುವ ವಿಚಾರಕ್ಕೋ, ಬಟ್ಟೆ ಹೊಲಿಯುವ, ಕಸೂತಿ ಹಾಕುವ, ಸ್ವೆಟರ್ ಹೆಣೆಯುವ ವಿಚಾರಕ್ಕೋ ಕಡೆಗೆ ಅಡುಗೆ ಕಲಿಯಲೋ ಅಂತೂ ಜನ ಅವರ ಮನೆಗೆ ನಿತ್ಯ ಪ್ರವಾಹ. ಸರಸಿ, ಸ್ನೇಹ ಮಯಿಯಾದ ಅವಳ ಗೆಳೆತನ ಎಲ್ಲರಿಗೂ ಹಿತವಾಗಿದ್ದರಿಂದ ಆ ಕಾಲೋನಿಯಲ್ಲಿ ಅವಳ ಜನಪ್ರಿಯತೆ ಸಾಕಷ್ಟು ಬೆಳೆದಿತ್ತು. ಜನಾನುರಾಗಿ ಸುಮಿತ್ರಳಿಗೂ ಇದು ಬೇಕಿತ್ತು. ಸದಾ ಅವಳ ಮನೆಯ ಫೋನು ರಿಂಗುಣಿಸುತ್ತಿತ್ತು.

` ಅವ್ವಾ ಪೋನು ಬಡ್ಕೋತಾ ಐತೆ…ಏನ್ ಯೇಚ್ನೆ ಮಾಡ್ತಾ ಇವ್ರೀ?’ -ಹಿಂದಕ್ಕೆ ಬಾಗಿದ ಜಟಕಾ ಸಾಬಿ ಕೊಂಚ ಜೋರಾಗೇ ಅರಚಿದ ಅವಳ ಕಿವಿಗೆ ರಾಚುವಂತೆ.

ಭುಜಗಳನ್ನು ಬಡಕ್ಕನೆ ಕುಲುಕಿಸಿ ಎಚ್ಚರಗೊಂಡವಳು , ತಡಬಡಿಸಿ ವ್ಯಾನಿಟಿಬ್ಯಾಗಿನ ಜಿಪ್ ತೆರೆದು ಅದರೊಳಗಿನ ಮೂಲೆಗಳಲ್ಲಿ ಬೆರಳು ಅಲ್ಲಾಡಿಸಿ ತಡಕಾಡಿದಳು ಮೊಬೈಲಿಗಾಗಿ. ಹತ್ತು ಸಲ ಅರಚಿಕೊಂಡ ಫೋನು ಒಮ್ಮೆಲೆ ತೆಪ್ಪಗಾದಾಗ ಅವಳು ಪೆಚ್ಚಾಗಿ ಅವನ ಮುಖವನ್ನು ಪೆದ್ದು ಪೆದ್ದಾಗಿ ನೋಡಿ ತಲೆ ಕೆಳಗೆ ಹಾಕಿದಳು. ಅವನಿಗೋ ಒಂದೇ ನಗು. ಆದರೂ ` ಮಾತಾಡೋದಿದ್ರೆ, ಮತ್ ಮಾಡ್ತಾರೆ ಬುಡ್ರವ್ವ’ ಎಂದು ಸಮಾಧಾನಿಸುವಂತೆ ನುಡಿದ. ಅವಳ ಗಂಟಲ ತೇವ ಬತ್ತಿದಂತಾಗಿತ್ತು. ಏನೋ ಯೋಚಿಸುತ್ತ ಹೊರಗೆ ನೋಡಿದಳು.

ಅದೇ ದಾರಿ . ತಾನು ಕಳೆದ ಇಪ್ಪತ್ತೈದು ವರ್ಷಗಳಿಂದ ನೋಡುತ್ತಿದ್ದ ಡಾಂಬರು ಕಾಣದ, ಅಲ್ಲಲ್ಲಿ ಹುಳುಕು-ಗುಬ್ಬಳು ಬಂದ, ಹೊಟ್ಟೆಯೊಳಗಿನ ಅನ್ನ ರುಬ್ಬಿ ಮೇಲೆ ಉಮ್ಮಳಿಸಿ ಬರುವಂತೆ ಧಡಕ್ ಧಡಕ್ ಎತ್ತಿಹಾಕುತ್ತಿದ್ದ ಕೆಟ್ಟ ರಸ್ತೆಗಳು. ಓಲ್ಡ್ ಟೌನ್ ಮುಗಿದು ಬಡಾವಣೆಯತ್ತ ಸಾಗಿದ ಗಾಡಿ ಕಾಲೋನಿಯ ದೊಡ್ಡ ಗೇಟ್ ಪ್ರವೇಶಿಸಿತ್ತು. ಇದ್ದಕ್ಕಿದ್ದಂತೆ ಫ್ರೆಷ್ ಎನಿಸಿದ ಮನಸ್ಸಿಗೆ ಧೈರ್ಯ ತುಂಬುವಂತಿದ್ದ ನಿಯಾನ್ ಬೆಳಕಿನ ಸಾಲು ದೀಪಗಳು ಚೆಂದದಿಂದ ಅವಳನ್ನು ಬರಮಾಡಿಕೊಂಡವು. ಹೊಸದಾಗಿ ಟಾರ್ ಹಾಕಿದ ನೀಟಾದ , ಅಗಲವಾದ ರಸ್ತೆಯ ಮಗ್ಗುಲಿಗೆ ಸೆಕ್ಯೂರಿಟಿ ಕ್ವಾಟರ್. ರಸ್ತೆಯಲ್ಲಿ ಅಲ್ಲಲ್ಲಿ ಓಡಾಡುವ ವಾಹನಗಳು ಪರಿಚಿತ ನಗೆಯನ್ನು ಬೀರಿದಂತವಳಿಗೆ ಭಾಸ. ಹೋದ ಉಸಿರು ಮೇಲೆ ಬಂದಂತಾಯಿತು ಸುಮಿತ್ರಳಿಗೆ. ದನಿ ಕೊಂಚ ಕಸುವು ಪಡೆದುಕೊಂಡಿತ್ತು. ` ಅಲ್ಲೇ ಆ ಬೋರ್ಡ್ ಕಾಣತ್ತಲ್ಲಪ್ಪ, ಅದರ ಪಕ್ಕಕ್ಕೆ ತಿರುಗಿ ಮೊದಲನೇ   ಮನೆಯ ಹತ್ತಿರ ನಿಲ್ಲಿಸಪ್ಪ’ ಎಂದವಳು ಗಾಡಿಯವನಿಗೆ ಸೂಚನೆ ಕೊಡುತ್ತ ಕೊಂಚ ಮುಂದಕ್ಕೆ ಜರುಗಿಕೊಂಡಳು ಕತ್ತು ಹೊರ ಚಾಚಿ.

ಬೀದಿ ದೀಪದ ಬದಿ ಗಾಡಿಯನ್ನು ನಿಲ್ಲಿಸಿದವ- `ಅರೇ ಇಸ್ಕೀ, ಮನೆ ಒಳ್ಳೇ ಭೂತ್ ಬಂಗ್ಲಾ ಇದ್ದಂಗೈತೆ, ಒಂದ್ ದೀಪಾನೂ ಕಾಣಾಕಿಲ್ಲ, ಈ ಮನೆಯವರಿಗೇನಾಗೈತೆ, ಕತ್ಲು ತುಂಬ್ಕೊಂಡ ಕ್ವಾಟೆ ಇದ್ದಂಗೈತೆ’ – ಎಂದು ಗೊಣಗಿದಾಗ ಅವಳ ಮನಸ್ಸಿನೊಳಗೆ ಇಡುಗಿದ್ದ ಕತ್ತಲು ಅವಳ ಕಣ್ಣಾಳಕ್ಕೂ ಇಳಿದು ಒಂದು ಕ್ಷಣ ಕಪ್ಪು ಕಾವಳ ತುಂಬಿತು. ಸಾವರಿಸಿಕೊಂಡು ಜಟಕಾ ಇಳಿದವಳು ಒಮ್ಮೆಲೆ ಬಿಕ್ಕಳಿಸತೊಡಗಿದಳು. ತಟ್ಟನೆ ಗಾಬರಿಗೊಂಡ ಅವನು- ` ನಾನೇನಂದ್ನವ್ವಾ?’ ಎನ್ನುತ್ತ ಕುಳಿತಲ್ಲಿಂದ ಕೆಳಗೆ ಹಾರಿ ಅವಳಿದ್ದತ್ತ  ಸರ್ರನೆ ಸಾಗಿಬಂದ.

` ಏನಿಲ್ಲಪ್ಪ…ತೊಗೋ ನಿನ್ನ ಗಾಡಿ ಛಾರ್ಜು..’ ಎಂದು ನೂರು ರೂಪಾಯಿಯ ನೋಟನ್ನು ಅವನ ಕೈಗಿಟ್ಟು , ಅವನು ` ಚಿಲ್ಲರೆ ತಕ್ಕಳ್ರವ್ವಾ’ ಎಂದು ಕೂಗುತ್ತಿದ್ದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೆ ದಾಪುಗಾಲಿಕ್ಕಿದಳು ಮನೆಯ ಗೇಟಿನತ್ತ. ಒಂದರೆಚಣ ಅವಳ ಅಡಿ ಅಲ್ಲೇ ತಡೆಯಿತು. ಗೇಟಿನ ಚಿಲಕ ಹಿಡಿದು ಹಾಗೇ ನಿಂತು ಮನೆಯನ್ನೇ ದಿಟ್ಟಿಸಿ ನೋಡಿದಳು. ಹೌದು ಕತ್ತಲ ಕೂಪವೇ. ಅದರೊಳಗೆ ದೀಪ ಹಚ್ಚುವವರಾರಿದ್ದಾರೆ?!….ಗವ್ವೆನ್ನುವ ಅದರೊಳಗಿನ ಕತ್ತಲ ಪ್ರವಾಹ, ಫ್ಲಡ್ ಗೇಟು ಕಿತ್ತುಕೊಂಡು ಬಂದಂತೆ ರಭಸವಾಗಿ ತನ್ನತ್ತ ನುಗ್ಗಿ ಬಂದಂತೆ ಭಾಸವಾಗಿ, ಬೆದರಿ, ಹಿಮ್ಮೆಟ್ಟಿ ಹಿಂದೆ ತಿರುಗಿ ನೋಡಿದಳು. ಜಟಕಾ ಗಾಡಿ ಅಲ್ಲಿರಲಿಲ್ಲ. ಎದೆ ಧಸಕ್ಕೆಂದು ಕುಸಿಯುವಂತಾಯ್ತು.

ಅತೀವ ಭಯದಿಂದ. ಆಚೀಚೆ ನೋಡಿದಳು. ಪಕ್ಕದ ಮನೆ ಇನ್ನೂರು ಅಡಿಗಳಾಚೆ. ಕೂಗಿದರೂ ಕೇಳಿಸದ ದೂರ. ಹೌದು ಈಗ ಎಲ್ಲವೂ ದೂರ ದೂರವೇ ಎನಿಸಿ ಮನಸ್ಸು ಖಿನ್ನವಾಯಿತು. ತನ್ನ ಮನೆಯ ಈ ಗಾಢಾಂಧಕಾರವನ್ನು ತೊಲಗಿಸಿ ಬೆಳಗಬೇಕಾದ್ದು ತಾನೇ ಅಲ್ಲದೆ, ಇದಕ್ಕೆ ಇತರರ ಸಹಾಯ ನಿರೀಕ್ಷಿಸುವುದು ಅವಿವೇಕತನವೆಂಬುದು ಖಾತ್ರಿಯಾಗಿ , ಇದ್ದಬದ್ದ  ಧೈರ್ಯವನ್ನೆಲ್ಲ ಬರಸೆಳೆದುಕೊಂಡು ಅಶ್ವತ್ಥದ ಭಾರದ ಹೆಜ್ಜೆಗಳನ್ನು ಮುಂದೆ ಕಿತ್ತಿಡುತ್ತ ಮನೆಯ ಮುಂಬಾಗಿಲತ್ತ ನಡೆದವಳಿಗೆ ರಾತ್ರಿ ಹೊತ್ತು ನಿರ್ಭಿಡೆಯಾಗಿ ಓಡಾಡುವ ಹಾವುಗಳ ಬಗೆಗಿನ ಭಯದ ನೆನಪೂ ಮರೆತುಹೋಗಿತ್ತು. ಮನೆಯ ಬೀಗ ತೆಗೆದವಳು ಮೊದಲು ಮಾಡಿದ ಕೆಲಸವೆಂದರೆ ತಟ್ಟನೆ ಮನೆಯ ಎಲ್ಲ ಲೈಟ್‍ಗಳನ್ನೂ ಆನ್ ಮಾಡಿಬಿಟ್ಟದ್ದು. ಹಾಗೇ   ಸೋಫದಲ್ಲಿ ಕುಸಿದವಳಿಗೆ ಅದರ ಮೇಲೆ ಒಂದು ಮಣ ಧೂಳು ಕಂಡು ಕಿರಿಕಿರಿ ಎನಿಸಿ , ಅದನ್ನು ಕೊಡಹುವ ಯೋಚನೆಯನ್ನು ಬಿಟ್ಟು ಸೀದಾ ತಮ್ಮ ಬೆಡ್ ರೂಮಿಗೆ ಬಂದವಳಿಗೆ ಹೃದಯ ಸ್ತಂಭನವಾದಂತಾಯಿತು. ಒಡನೆಯೇ ದುಃಖ ಉಮ್ಮಳಿಸಿ ಬಂತು. ರಾಮನಾಥನಿಗೆ ಪ್ರಿಯವಾಗಿದ್ದ ಸಣ್ಣ ನೀಲಿ ಹೂಗಳ ಮಗ್ಗುಲು ಹಾಸಿಗೆ ಆ ಡಬಲ್ ಬೆಡ್ ಮೇಲೆ ಅವನ ನೆನಪನ್ನು ಅಳಿಸಿಹಾಕಿದಂತೆ ಚೂರೂ ಸುಕ್ಕುಗಾಣದೆ ಬಿಮ್ಮನೆ ತನ್ನನ್ನೇ ಕೆಕ್ಕರಿಸಿ ನೋಡುತ್ತಿರುವಂತೆನಿಸಿ ಮನದೊಳಗೆ ಅಪರಾಧೀಪ್ರಜ್ಞೆ ವಿಲಪಿಸಿತು. ಹೊಟ್ಟೆಯೊಳಗಿನ ಕರುಳೆಲ್ಲ ಕಡೆದಂಥ ಅನುಭವ. ಅರಿವಿಲ್ಲದೆ ಬಿಕ್ಕಳಿಕೆ ತೂರಿ ಬಂತು.

` ಇಲ್ಲ…ಇದರಲ್ಲಿ ನನ್ನ ತಪ್ಪೇನಿಲ್ಲ….ರಾಮ್, ನೀವೇ ನನಗೆ ಮೋಸ ಮಾಡಿದಿರಿ…ಜೀವನ ಪೂರ್ತಿ ಸಂಗಾತಿಯಾಗಿ ಇರ್ತೀನಿ ಅಂತ ನಂಬಿಸಿ ಕೈಕೊಟ್ಟೋರು ನೀವೇ…ಈಗ ನನ್ನ ಗತಿ ಏನ್ರೀ…ನಡುನೀರಿನಲ್ಲಿ ಹೀಗೆ ಕೈ ಬಿಟ್ರಲ್ಲ’ ಎಂದು ಹೊಮ್ಮಿಬಂದ ದುಃಖದಾವೇಗದಲ್ಲಿ ಉಸಿರು ಸಿಕ್ಕಿಹಾಕಿಕೊಂಡಂತೆ ಬಿಕ್ಕಳಿಸತೊಡಗಿದಳು, ಕೊರಲು ಕುಸಿಯುವವರೆಗೂ.

ಒಂದು ಜಾಮದಲ್ಲಿ ಎಚ್ಚರವಾದಾಗ ಸುಮಿತ್ರಳಿಗೆ  ತಾನು ಹಾಗೇ ನೆಲದ ಮೇಲೆ  ಮರೆದೊರಗಿದ್ದು ತಿಳಿದು ಮೆಲ್ಲನೆ ಮೇಲೆದ್ದು ಕಿಟಕಿಯಿಂದಾಚೆ ನೋಡಿದಳು. ದೂರದ ಮಸೀದಿಯಿಂದ ಅಲ್ಲಾ ಕೂಗುವುದು ಕೇಳಿತು. ಮುಖ ತೊಳೆದು ಮುಂಬಾಗಿಲು ತೆರೆದು ಹೊರಗೆ ಬಂದವಳ ಕಣ್ಣನ್ನು ಉದಯ ಸೂರ್ಯನ ಉಷಾಕಿರಣಗಳು ಚುಚ್ಚಿದವು. ಸುತ್ತ ತಿಳಿ ಹಳದಿ ಬಣ್ಣದ ಬೆಳಕು. ತಾನು ಪ್ರೀತಿಯಿಂದ ಸಾಕಿ ಬೆಳೆಸಿದ ಗಿಡಗಳ ಯೋಗಕ್ಷೇಮ ವಿಚಾರಿಸಿಕೊಳ್ಳುವ ಆತುರ ಸ್ರವಿಸಿ, ಅವುಗಳಿರಬಹುದಾದ  ಸ್ಥಿತಿ ಊಹಿಸಿಕೊಂಡಾಗ ಅವಳ ಕರುಳು ಚುರುಕ್ಕೆಂದು ಪಾಪ ನೀರಿಲ್ಲದೆ ಅವು ಎಷ್ಟು ಸೊರಗಿಹೋಗಿವೆಯೋ ಎಂಬ ಕಕ್ಕುಲಾತಿಯಲ್ಲಿ ಹೂಗಿಡಗಳತ್ತ ದಾಪುಗಾಲಿಕ್ಕಿದಳು.

ಕಣ್ಣಿಗೆ ಬಿದ್ದ ದೃಶ್ಯ ಕಂಡು ಅವಳೆದೆ ಧಸಕ್ಕೆಂದಿತು. ಸೊಂಪಾಗಿ ಅರಳಿದ್ದ ಏಳು ಸುತ್ತಿನ ಮಲ್ಲಿಗೆ ಗಿಡವೇ ಕಾಣದಾಗಿತ್ತು!…. ಹೊಡೆದುಕೊಳ್ಳಲಾರಂಭಿಸಿದ ಹೃದಯವನ್ನು ಒತ್ತಿಕೊಳ್ಳುತ್ತ ಸರಸರನೆ ಸುತ್ತ ಕಣ್ಣು ಹರಿಸಿದವಳೆ  `ಅಯ್ಯೋ ದೇವರೇ..’ ಎಂದು ಕುಸಿದಳು. ಗುಲಾಬಿಯ ಗಿಡಗಳೆಲ್ಲ ಒಂದೂ ಗುರುತಿಲ್ಲದಂತೆ ಬುಡ ಸಮೇತ ಖಾಲಿಯಾಗಿದ್ದವು. ಕ್ರೋಟನ್ನಿನ ಒಂದಷ್ಟು ಗಿಡಗಳು ಮಾತ್ರ ಅವಳಿಗೆ ನಿಷ್ಠೆ ತೋರುವಂತೆ ತಾವಿದ್ದಲ್ಲಿಂದ ಕೊಂಚವೂ ಕದಲದೆ, ಅವಳ ಬರವನ್ನೇ ಕಾದೂ ಕಾದು ಅನ್ನ-ನೀರು ಬಿಟ್ಟು ಸತ್ಯಾಗ್ರಹ ಹೂಡಿ ಪ್ರಾಣ ಬಿಟ್ಟಂತೆ ಸೊರಗಿ, ಒಣಗಿ ಕಡ್ಡಿ ಕಾಷ್ಠವಾಗಿದ್ದವು. ಸುಮಿತ್ರಳಿಗೆ ಗಂಡನನ್ನು ಕಳೆದುಕೊಂಡಿದ್ದಕ್ಕಿಂತ ನೂರ್ಮಡಿ ದುಃಖ ಈಗ ಕಡೆದು ಬಂತು. ಮನೆಯಂಗಳವೆಲ್ಲ ಖಾಲಿ ಖಾಲಿಯಾಗಿದ್ದ ದೃಶ್ಯ ಕಂಡು ಉಸಿರು ನಿಂತಂತಾಯಿತು. ಹಚ್ಚನೆಯ ಹಸಿರಿನಿಂದ ಕಂಗೊಳಿಸುತ್ತಿದ್ದ ವನವೆಲ್ಲ ಬರಡಾಗಿ ಸ್ಮಶಾನ ಸದೃಶವಾಗಿ ಅವಳ ಕಣ್ಣಿಗೆ ಕಾಣತೊಡಗಿತು. ಹಿತ್ತಲಿನ ತರಕಾರಿ ಗಿಡಗಳ ಬಗ್ಗೆ ಅಂಥ ಅಕ್ಕರೆ, ನಿರೀಕ್ಷೆಯಿರದಿದ್ದರೂ, ಮರವಾಗಿ ಸೊಂಪಾಗಿ ಬೆಳೆದು ನಿಂತಿದ್ದ ಕರಿಬೇವಿನ ಗಿಡ ಚೌರ ಮಾಡಿಸಿಕೊಂಡಂತೆ ನುಣ್ಣಗೆ ಬೋಳಾಗಿತ್ತು. ಇನ್ನವುಗಳನ್ನು ನೋಡಲಾಗದೆ ದುಃಖಿಸುತ್ತ ಒಳಬಂದ ಅವಳಲ್ಲಿ ಅಯಾಚಿತ ಹುಸಿನಗೆಯೊಂದು  ಕೆನೆಗಟ್ಟಿತ್ತು. `ಛೇ…ಇದ್ಯಾವ ಬಗೆಯ ಮೋಹ ನನ್ನದು…ಶಾಶ್ವತವಾಗಿ ಜೊತೆಯಲ್ಲಿರುತ್ತಾನೆಂದು ಭ್ರಮಿಸಿದ್ದ   ಮನುಷ್ಯನೇ ನಶಿಸಿಹೋದ ಮೇಲೆ ಈ ಗಿಡಗಳದ್ಯಾವ ಲೆಕ್ಕ…ತನ್ನದು ಬರೀ ಭ್ರಾಂತು’ ಎಂದುಕೊಳ್ಳುತ್ತ ತಲೆಕೊಡವಿ, ಮುಂದೆ ಆಗಬೇಕಾದ ಕೆಲಸಗಳತ್ತ ಗಮನಕೊಟ್ಟಳು ಸುಮಿತ್ರ.

ಫೋನ್ ಮಾಡಿ ಆಳುಗಳನ್ನು ಕರೆಸಿ ಮನೆಯ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿಸತೊಡಗಿದಳು. ನಡುನಡುವೆ ಗಂಡನಿಗೆ ಸಂಬಂಧಪಟ್ಟವುಗಳನ್ನು ಕಂಡಾಗ ಕರುಳು ಕಿತ್ತು ಬರುತ್ತಿತ್ತಾದರೂ ಅವಳು ಪ್ರಯತ್ನಪೂರ್ವಕ ತನ್ನನ್ನು ತಾನೇ ಸಮಾಧಾನಿಸಿಕೊಂಡಳು.

ಮೂರು ತಿಂಗಳುಗಳ ಹಿಂದೆ ಅವರು ಅನಾಮತ್ತು ಊರು ಬಿಡುವ ಹಾಗಾಗಿತ್ತು. ಇಂಥ ದುರ್ದೈವವನ್ನು ಯಾರು ತಾನೆ ನಿರೀಕ್ಷಿಸಿದ್ದರು?!….ಪ್ರತಿದಿನ ಸಂಜೆ ಸಣ್ಣಗೆ ಜ್ವರ ಬರಲಾರಂಭಿಸಿದ್ದೇ ಕಾರಣವಾಗಿ ಕೃಶನಾಗುತ್ತ ಬಂದ ರಾಮನಾಥನನ್ನು ಬೆಂಗಳೂರಿಗೆ ಕರೆದೊಯ್ದು ಒಳ್ಳೆಯ ಆಸ್ಪತ್ರೆಗೆ ತೋರಿಸಿದಾಗಲೇ ಆಘಾತದ ಸುದ್ದಿ ತಿಳಿದದ್ದು ಅವನ ಕರುಳಲ್ಲಿ ಕ್ಯಾನ್ಸರ್ ಎಂಬ ಭೂತ ಮನೆ ಮಾಡಿಕೊಂಡಿದೆಯೆಂದು. ಅದೂ ಮೂರನೇ ಸ್ಟೇಜಿನಲ್ಲಿದೆ ಎಂದು ತಿಳಿದಾಗ ಅವನು ಧರೆಗಿಳಿದುಹೋಗಿದ್ದ. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಅವನ ಮನೋವೇದನೆಯೇ ಅವನನ್ನು ಬಲಿತೆಗೆದುಕೊಂಡಿತ್ತು. ಎಲ್ಲವೂ ಕೇವಲ ಮೂರು ತಿಂಗಳಲ್ಲಿ ನಡೆದು ಹೋಗಿತ್ತು. ಬಿಟ್ಟ ಮನೆ ಬಿಟ್ಟ ಹಾಗೇ ಬಂದಿದ್ದರವರು. ಕಂಪೆನಿಯಿಂದ ರಜೆ, ಹಣ ಸಿಕ್ಕಿದ್ದರೂ ಏನೂ ಪ್ರಯೋಜನವಾಗಲಿಲ್ಲ. ರಾಮನಾಥ ತೀರಿಕೊಂಡು ಇಪ್ಪತ್ತು ದಿನಗಳಾಗಿದ್ದವು . ಅವರು ಮನೆ ಖಾಲಿ ಮಾಡಲೇಬೇಕಿತ್ತು. ಗಂಡನಿಲ್ಲದೆ ಸುಮಿತ್ರ ತಾನೆ ಅಲ್ಲಿದ್ದು ಏನು ಮಾಡುವುದಿತ್ತು. ಕಂಪೆನಿ ಕೊಡುವ ತುಂಬ ಕೆಳಗಿನ ಹುದ್ದೆಯಲ್ಲಿ ಅವಳು ಕೆಲಸ ಮಾಡುವ ವಿಚಾರವೇ  ಅವಳ ತಲೆಗೆ ಬರಲಿಲ್ಲ. ಗಂಡನಿಲ್ಲದ ಊರು ತನಗೂ ಬೇಡ ಎಂದು ತೀರ್ಮಾನಿಸಿ ಮನೆ ಖಾಲಿ ಮಾಡಲವಳು ಒಬ್ಬಳೇ ಇಲ್ಲಿಗೆ ಬರಬೇಕಾಯ್ತು. ಭರತನಿಗೆ ಫೈನಲ್ ಸೆಮಿಸ್ಟರ್ ಪರೀಕ್ಷೆ. ಅವನು ಅವಳೊಡನೆ ಬರುವ ಪ್ರಶ್ನೆಯೇ ಇರಲಿಲ್ಲವಾದ್ದರಿಂದ ಸುಮಿತ್ರ ಆ ನೋವಿನಲ್ಲೂ ಧೈರ್ಯ ಗುಡ್ಡೆ ಹಾಕಿಕೊಂಡು ಏಕಾಕಿ ಹೊರಟು ಬಂದಿದ್ದಳು.

ತಮ್ಮಷ್ಟೇ ಹಿರಿಯ ಹುದ್ದೆಯಲ್ಲಿದ್ದ ಪಕ್ಕದಮನೆಯ ಆಕೆ ತನ್ನನ್ನು ನೋಡಿಯೂ ನೋಡದಂತೆ ಬಾಗಿಲೊಳಗೆ ಸರಿದಾಗ,  ದಿನಕ್ಕೆ ಹತ್ತು ಬಾರಿ ಫೋನ್ ಮಾಡಿ ಮಾತಾಡುವ ಪರಿಪಾಟ ಇಟ್ಟುಕೊಂಡಿದ್ದಲ್ಲದೆ ಮನೆಗೂ ಹಲವು ಬಾರಿ ಬರುತ್ತಿದ್ದ ಆ ಹೆಂಗಸು, ಹೀಗೆ ಏಕಾಏಕಿ ಆಶ್ಚರ್ಯದ ನಡವಳಿಕೆ ತೋರಿದಾಗ ಸುಮಿತ್ರಳಿಗೆ ಷಾಕಾಯಿತು!…ಅಷ್ಟುದಿನದ ಗೆಳೆತನಕ್ಕೆ ಅಟ್ ಲೀಸ್ಟ್ ಒಂದು ಸಾಂತ್ವನದ ಮಾತು-ಸಮಾಧಾನದ ನುಡಿ….ಉಹೂಂ….ಮನಸ್ಸಿಗೆ ಪಿಚ್ಚೆನಿಸಿತು. ಎದುರುಮನೆಯಾತ ವಾಕ್ ಮುಗಿಸಿ ಮನೆಯತ್ತ ತೆರಳುತ್ತಿದ್ದವರು ಅವಳನ್ನು ನೋಡಿ `ಐ ಯಾಮ್ ಸಾರಿ….’ ಎಂದು ನುಡಿದು ಮುಂದೆ ಮಾತನಾಡಲು ತೋಚದೆ ತಲೆ ಬಗ್ಗಿಸಿಕೊಂಡು ತಮ್ಮ ಮನೆಯ ಗೇಟ್ ಒಳಗೆ ನುಗ್ಗಿ ಮಾಯವಾದರು. ಅದೇ ತಾನೆ ಪಾರ್ಕಿನಲ್ಲಿ ಹತ್ತು ರೌಂಡ್ ಹಾಕಿ ವಾಕಿನ ಶಾಸ್ತ್ರ ಮುಗಿಸಿ ತಮ್ಮ ಮನೆಯ ಮುಂದೆಯೇ ಪಾಸ್ ಆಗಬೇಕಿದ್ದ ಕಾಲೋನಿಯ ಮಹಿಳೆಯರ ದಂಡಿಗೇಕೆ ಅನವಶ್ಯಕ ಮುಜುಗರವುಂಟು ಮಾಡುವುದೆಂದು  ಸುಮಿತ್ರ ತಾನೇ ಒಳಗೆ ಸರಿದು ಕದವಿಕ್ಕಿಕೊಂಡಳು.

ಮನೆಯ ಹಿಂಬಾಗಿಲು ತೆರೆದಿದ್ದನ್ನು ಕಂಡ ಕೆಲಸದ ಕುರ್ಸಿಂಬಿ ಅಲ್ಲಿಂದಲೇ ಕೂಗಿದಳು. `ಅರೇ ಯಾವಾಗ ಬಂದ್ರವ್ವಾ?’ ಎಂದು ಮುಖವರಳಿಸಿ, ಹಿಂದಿನ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದುದನ್ನು ಅರ್ಧಕ್ಕೇ ಬಿಟ್ಟು , ಆತುರಾತುರವಾಗಿ ಕಾಂಪೌಂಡ್ ಜಂಪ್ ಮಾಡಿ `ಅವ್ವಾ…’ ಎನ್ನುತ್ತ ಹಿಂಬಾಗಿಲೊಳಗೆ ಪುಸಕ್ಕನೆ ಒಳನುಗ್ಗಿಬಂದಳು. ಅವಳ ಮುಖದಲ್ಲಿ ಆನಂದ ನೆರೆಯಾಗಿತ್ತು.

`ಚೆನ್ನಾಗಿದ್ಯಾ ಕುರ್ಸಿಂಬಿ?’ ಎಂದು ನೋವಿನ ನಗೆಯೊಂದಿಗೆ ತುಟಿ ಅರಳಿಸಿದ ಸುಮಿತ್ರಳ ಮಾತಿನ ಮೇಲೆ ಮಾತು ಅದುಮಿ , `ಅಯ್ಯೋ ಬುಡಿಯವ್ವ, ನಮ್ಮ ಚೆನ್ನಾ ಚಾರ ಕಟ್ಕೊಂಡೇನಾಗ್ಬೇಕು, ಮೊದ್ಲು ನೀವು ಸೆಂದಾಕ್ಕಿದ್ದೀರಾ ಯೋಳಿ….ಅಯ್ಯೋ ಇದು ನಂದೂ ಒಂದು ಪ್ರಸ್ನೇನಾ…ನಾನೊಬ್ಬ ಮೂಳಿ…ಅವ್ವಾ, ಎಷ್ಟು ತೆಗೆದು ಓಗಿದ್ದೀರವ್ವ ನೀವು….   ನನಗಂತೂ ಒಟ್ಟೆ ಉರೀತದೆ ಕಣವ್ವ….ಯಾವಾಗ್ಲೂ ನಿಮ್ದೇ ಗ್ಯಾನ…ನಂಗೊಂದ್ ಮಾತ್ ಯೋಳ್ದೆ ಓಗ್ಬಿಟ್ರಿ, ಸಾನೆ ಬೋಜಾರ್ ಆಗೋಗಿತ್ರಾ’ ಎಂದು ತನ್ನ ಎಲೆ ಅಡಿಕೆ ತುಂಬಿದ  ಕಟವಾಯಿಂದ ಸೋರುತ್ತಿದ್ದ ಕವಳದ ರಸವನ್ನು ತನ್ನ ಮುಂಗೈಯಿಂದ ಒರೆಸಿಕೊಳ್ಳುತ್ತ, ತನ್ನ  ಮುಖದಲ್ಲಿನ ಸರ್ವ ಮಾಂಸಖಂಡಗಳನ್ನೂ ಬಿರಿದು ಮುಗ್ಧಳಾಗಿ ನಕ್ಕಳು. ಸುಮಿತ್ರಳ ಎದೆಗೆ ಹಾಲು ಸುರಿದಷ್ಟು ತಂಪಾಯಿತು.

` ಕಾಪಿ ಆತ್ರಾ?…’ ಅವಳ ಪ್ರಶ್ನೆಯಿಂದ ಕಾಫಿ ಕುಡಿದಷ್ಟೇ ತೃಪ್ತಿಯುಂಟಾಯಿತು ಸುಮಿತ್ರಳಿಗೆ.

`ಹೂಂ ಆಯ್ತು ಕಣೆ ಕುರ್ಸಿಂಬಿ…ಸರಿ ನಿನ್ನ ಕೆಲಸ ನೋಡು ಹೋಗು ಮತ್ತೆ,  ಆಮೇಲೆ ಆ ಮನೆಯವರು ಬಯ್ದುಕೊಂಡಾರು…’ ಎಂದು ಅವಳನ್ನು ಹೊರಡಿಸಲು ಪ್ರಯತ್ನಿಸಿದರೆ, ಕುರ್ಸಿಂಬಿ ಕದಲದೆ- `ಅವ್ವಾ ಊಟ?’ ಎಂದು ಅಲ್ಲೇ ನಿಂತಾಗ, ಸುಮಿತ್ರ `ಆಯ್ತಾಯ್ತು ನಡಿಯೇ’ ಎಂದವಳನ್ನು ಬಲವಂತವಾಗಿ ಹೊರಗೆ ಕಳಿಸಿ ಬಾಗಿಲು ಹಾಕಿಕೊಂಡಳಾದರೂ ಅವಳ ಅವ್ಯಾಜ ಅಂತಃಕರಣ ಕಂಡು ಕಂಠ ಉಬ್ಬಿಬಂತು.

ಹೌದು ಸುಮಿತ್ರ ಈಗ ಊಟ ಮಾಡಲೇಬೇಕಿತ್ತು. ಸೂರ್ಯ ನಡುನೆತ್ತಿಯಲ್ಲಿ ಸುಡುತ್ತಿದ್ದ. ಹೊಟ್ಟೆಯಲ್ಲಿ ಹಸಿವಿನ ದಾವಾಗ್ನಿ. ದುಃಖದಿಂದ ಹೊಟ್ಟೆ ತುಂಬುವುದೇ…ಒಲೆ ಹಚ್ಚಿ ಡಬ್ಬದಲ್ಲಿದ್ದ ಅಕ್ಕಿಯನ್ನು ಚೆನ್ನಾಗಿ ಆರಿಸಿ ಕುಕ್ಕರಿಗಿಟ್ಟಳು. ಜೊತೆಗಿಷ್ಟು ಸಾರು ಮಾಡಿಕೊಂಡಳು. ದಿನಾ ತರಕಾರಿ ಇಲ್ಲದೆ ತುತ್ತೆತ್ತದ ಅವಳಿಗಿಂದು ತರಕಾರಿಯ ನೆನಪೂ ಬರಲಿಲ್ಲ.

ಮರುದಿನ ಬೆಳಗ್ಗೆ ಬೇಗ ರೆಡಿಯಾಗಿ ಆಫೀಸಿಗೆ ಹೋಗಿ ಅಲ್ಲಿ ರೆಡಿ ಮಾಡಿಟ್ಟಿದ್ದ ಪೇಪರ್ಸ್‍ಗಳಿಗೆಲ್ಲ ಸಹಿ ಹಾಕಿ , ಇನ್ನೂ ಮಾಡಬೇಕಾದ ಇತರ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬರುವ ದಾರಿಯಲ್ಲಿ ಅವಳ ಆಪ್ತೆ ಶಾರದಮ್ಮನ ಮನೆ, ಹೋಗಿ ಮಾತನಾಡಿಸಿಕೊಂಡು ಬರಲೇ ಎಂಬ ಬಗ್ಗೆ ಮನಸ್ಸು ಡೋಲಾಯಮಾನವಾದರೂ ಕಡೆಯ ವಿದಾಯವೊದನ್ನು  ಹೇಳಿಬಂದುಬಿಡಲೇ ಎಂದು ಮನಸ್ಸು ವಾಲಾಡಿತು. ಅದೇ ಸಮಯಕ್ಕೆ ಸರಿಯಾಗಿ ಕಸ ಸುರಿಯಲು ಹೊರಬಂದ ಶಾರದಮ್ಮ ಇವಳನ್ನು ಕಂಡು ಮುಖ ಒಂಥರ ಮಾಡಿ ಹಿಮ್ಮೆಟ್ಟಿದವರಂತೆ ಕಂಡುಬಂದರೂ, ಆಕೆ ವಿಧಿಯಿಲ್ಲದೆ  ಒಣನಗೆ ಬೀರಿ `ಯಾವಾಗ ಬಂದ್ರೀ ಊರಿಗೆ?’  ಎಂದರು ಸಪ್ಪಗೆ. ಸುಮಿತ್ರಳಿಗೆ ಅಚ್ಚರಿಯಾಯಿತು.  ಸಪ್ಪಗಾಗಬೇಕಾದವಳು ತಾನು…ಇದೆಂಥ ವಿಚಿತ್ರ! ಎನಿಸಿದರೂ, `ನಿನ್ನೆ..” ಎಂದಳು ನೋವು, ಉದಾಸೀನ ಬೆರೆತ ಸಣ್ಣದನಿಯಲ್ಲಿ.

ಪ್ರತಿಯೊಂದು ಹಬ್ಬ-ಹುಣ್ಣಿಮೆಗೂ ` ನಮ್ಮ ಜನದ ಒಳ್ಳೆ ಮುತ್ತೈದೆಯರೇ ಸಿಗೋದು ಕಷ್ಟ ಸುಮಿತ್ರಮ್ಮ, ಖಂಡಿತಾ ನೀವು ನಮ್ಮ ಮನೆಗೆ ಅರಿಶಿನ ಕುಂಕುಮಕ್ಕೆ ಬರಬೇಕು’ ಎಂದು ಯವಾಗಲೂ ಒತ್ತಾಯ ಮಾಡಿ ಆಹ್ವಾನಿಸುತ್ತಿದ್ದ ಆಕೆ, ಇಂದು ಅಪರೂಪಕ್ಕೆ , ತಿಂಗಳುಗಳ ಮೇಲೆ ಸಿಕ್ಕ ತನ್ನ ಬಗ್ಗೆ ಅಂಥ ಆತ್ಮೀಯತೆ ತೋರದಿದ್ದುದನ್ನು ಕಂಡು ಸುಮಿತ್ರಳ ಮನಸ್ಸು ಕರಕ್ಕೆಂದಿತು. ತುಟಿಗಳು ಮೆತ್ತಿಕೊಂಡಂತಾಗಿದ್ದರೂ ಔಪಚಾರಿಕ ಒಂದೆರಡು ಮಾತುಗಳನ್ನಾಡಿದಾಗ ಆಕೆ, ಯಾಕೋ ತನ್ನ ದೃಷ್ಟಿಯನ್ನು ತಪ್ಪಿಸುತ್ತಿದ್ದಾರೆನಿಸಿ  ಮನಸ್ಸು ಇನ್ನಷ್ಟು ಮುದುಡಿಕೊಂಡಿತು. ಇನ್ನೊಂದು ಕ್ಷಣವೂ ಇಲ್ಲಿ ನಿಲ್ಲಬಾರದೆಂದು ಮನ ಪ್ರತಿಭಟಿಸುತ್ತಿದ್ದರೂ, ಅವಮಾನವಾದಂತಾಗಿ ಅವ್ಯಕ್ತ ಹಟ ಹುಟ್ಟಿ ಒಂದಡಿ ಮುಂದಿಟ್ಟು ಅವರು ಕೇಳಲಿ ಬಿಡಲಿ ಎಂದು ನಿರ್ಧರಿಸಿ ನಿರ್ಭಾವದಿಂದ ಹೇಳಿದಳು –          ` ನಾನು ಬೆಂಗಳೂರಿಗೆ ಹೊರಟು ಹೋಗ್ತಿದ್ದೀನಿ ಶಾರದಮ್ಮ ಒನ್ಸ್ ಫರ್ ಆಲ್, ಎಲ್ಲಾ ಸೆಟಲ್ ಮಾಡ್ಕೊಂಡು’.ಉಭಾ ಶುಭಾ ಎನ್ನಲಿಲ್ಲ ಆಕೆ. ಮೌನ ಅಸಹನೀಯವೆನಿಸಿ ಮತ್ತೆ ಸುಮಿತ್ರ- `ನಿಮ್ಮ ದೊಡ್ಡ ಮಗಳು ಅಂಕಿತಾ ಹೆರಿಗೆಗೆ ಬಂದಿದ್ಳಲ್ಲ, ಎಂಥಾ ಮಗೂ?’ ಎಂದು ನಾಚಿಕೆ ಬಿಟ್ಟು ಕುತೂಹಲ ವ್ಯಕ್ತಪಡಿಸಿದಾಗ, ಆಕೆಯ ಮುಖ ಇಂಗು ತಿಂದ ಮಂಗನಂತಾಯ್ತು. `ಗಂಡು’ ಎಂದರು ಸಪ್ಪಗೆ. ` ಯಾವುದೋ ಒಂದು…ತಾಯಿ ಮಗು ಹುಷಾರಾಗಿದ್ದಾರಲ್ಲಾ?’ ಎಂದಾಗ ಆಕೆ ಬಾಯಿ ಮಾತಿಗೂ ಅವಳನ್ನು ಮನೆಯೊಳಗೆ ಕರೆಯಲಿಲ್ಲ.

ಅಷ್ಟು ಹೊತ್ತಿಗೆ ಸರಿಯಾಗಿ ಮಗುವನ್ನೆತ್ತಿಕೊಂಡು ಮನೆಯಿಂದ ಹೊರಬಂದ ಅಂಕಿತಾ `ಅಮ್ಮಾ ಮನೆಯೊಳಗೆ ಒಂದೇ ಸೆಕೆ’ ಎನ್ನುತ್ತ ಅಂಗಳಕ್ಕೆ ಬಂದವಳು -`ಅರೇ ಆಂಟಿ ಯಾವಾಗ್ಬಂದ್ರೀ….’ ಎಂದು ಮುಖವರಳಿಸಿ ಸುಮಿತ್ರಳ ಸಮೀಪಕ್ಕೆ ಬಂದವಳನ್ನು ಶಾರದಮ್ಮ ಮುಖ ಗಂಟಿಕ್ಕಿ ಜೋರಾಗಿ ಗದರಿದರು: `ಹಸೀ ಬಾಣಂತಿ ಹೀಗೆ ಹೊರಗೆ ಬರೋದೇನೇ, ನಿನಗೆ ಒಂದೂ ಗೊತ್ತಾಗಲ್ವಾ….ಹೋಗು, ಮಗೂಗೆ ಥಂಡಿಯಾಗತ್ತೆ ಒಳಗ್ಹೋಗು’ ಎನ್ನುತ್ತ, ಮಗುವನ್ನು ಅವಳು ಮುಟ್ಟುಗಿಟ್ಟು ಬಿಟ್ಟಾಳೆಂದು ಗಾಬರಿಯಾಗಿ, ಮಗಳನ್ನು ಹೆಚ್ಚೂ ಕಡಮೆ ಒಳ ದಬ್ಬುವಂತೆಯೇ ಕೈ ಮುಂದೆ ಮಾಡಿ ಮಗಳು ಒಳಹೋಗುವಂತೆ ಮಾಡುವಲ್ಲಿ ಸಫಲರಾದರು.

ಸುಮಿತ್ರ ಅವರ ವರ್ತನೆ ಕಂಡು ದಂಗಾದಳು. ಅವಳ ಮುಖ ಪೆಚ್ಚಾಯಿತು. ಆಕೆಯ ಆಂತರ್ಯ ಸ್ಪಷ್ಟವಾಗಿ ಮನಸ್ಸು ಕಹಿಯಾಯಿತು. ಗಂಡನನ್ನು ಕಳೆದುಕೊಂಡು ಇನ್ನೂ ಇಪ್ಪತ್ತು ದಿನಗಳಾಗಿಲ್ಲ, ವರ್ಷದ ತನಕ ವಿಧವೆಯರ ಮುಖ ನೋಡುವುದು ವಜ್ರ್ಯ , ಅಂಥವಳು ತಮಗೆ ದರ್ಶನ ಕೊಟ್ಟುಬಿಟ್ಟಳಲ್ಲ ಎಂಬ ಬೇಸರ-ಜುಗುಪ್ಸೆಯ ಭಾವಗಳು ಆಕೆಯ ಮೊಗದಲ್ಲಿ ಒಡೆದು ಕಾಣುತ್ತಿತ್ತು. ಸಾಲದ್ದಕ್ಕೆ ಇದೇ ತಾನೆ ವಿಧವೆಯಾದವಳು ಹಸುಗೂಸು-ಬಾಣಂತಿಯನ್ನು ಮುಟ್ಟಿಬಿಟ್ಟರೇ ಇನ್ನೇನು ಗತಿ ಎಂಬ ಅಸಾಧ್ಯ ಗಾಬರಿ ಅವರ ಮುಖದಲ್ಲಿ ಮನೆ ಮಾಡಿದ್ದನ್ನು ಗಮನಿಸಿದ  ಸುಮಿತ್ರ ಕ್ರುದ್ಧಳಾಗಿ ಜೋರು ನಿಟ್ಟುಸಿರನ್ನುಗಿಯುತ್ತ, ಅಲ್ಲಿಂದ ಹಿಂತಿರುಗಿ ನೋಡದೆ ದೆವ್ವ ಬಂದವಳಂತೆ ಒಂದೇ ಸಮನೆ ರಭಸದ ಹೆಜ್ಜೆಗಳನ್ನಿಕ್ಕುತ್ತ ಮನೆಕಡೆ ಸಾಗಿದಳು.

ನೆತ್ತಿಯ ಕೆಂಡ ಸೂರ್ಯನ ಉರಿ ತಾಳಲಾರದೆ , ತಲೆಯ ಮೇಲೆ ಸೆರಗು ಎಳೆದುಕೊಂಡವಳ ಎದೆಯಲ್ಲಿ ಸುಳಿಗಟ್ಟಿದ ವ್ಯಂಗ್ಯದ ನಗು ಮೇಲೇರಿ ಬಂತು: `ಇಂಥ ಕಡು  ಬೇಸಿಗೆಯಲ್ಲೂ ಥಂಡಿಯೆಂಬ ಸೋಗೇ?!!’….ಎಂಬುದನ್ನು ನೆನೆದಾಗ ಅವಳ ಮೊಗ ಕ್ರೋಧದಿಂದ ಕೆಂಪಾದರೂ ಮರುಕ್ಷಣ ಹತಾಶೆಯಿಂದ ಮ್ಲಾನವಾಯಿತು. ಈಗ ತನ್ನ ಮುಖ ದರ್ಶನವೇ ಅಪಶಕುನ ಎಂಬ ಲೆಕ್ಕಾಚಾರದಲ್ಲಿರುವ ಆಕೆ, ಇಷ್ಟುದಿನದ ತಮ್ಮ ನಡುವಿನ ಗೆಳೆತನವನ್ನು ಕಿಂಚಿತ್ತೂ ನೆನೆಯದೆ ಸಮಾಧಿ ಕಟ್ಟಿದ ಪರಿಗೆ ಅವಳ ಹೃದಯ ಘಾಸಿಗೊಂಡಿತ್ತು. ಇನ್ನೇನು ಊರು ಬಿಡಲಿರುವ ತನ್ನನ್ನು ಒಳಗೆ ಕರೆದು ಸತ್ಕರಿಸುವ ಸಂಸ್ಕ್ರುತಿಯನ್ನು  ಪಾಲಿಸುತ್ತಾರೆಂದು ನಿರೀಕ್ಷಿಸುವವರು ಕಡು ಮೂರ್ಖರೇ ಸರಿ, ಎಂದುಕೊಳ್ಳುತ್ತ  ತನ್ನ ಆರ್ಥಹೀನ ಭಾವನೆಗಳಿಗೆ ಛೀಮಾರಿ ಹಾಕಿಕೊಳ್ಳುತ್ತ ದಾರಿಗುಂಟ ಸಾಗಿದವಳು  ನೋವಿನಿಂದ ಮುಲುಗುಟ್ಟಿದಳು. ಅಯಾಚಿತವಾಗಿ ಕಣ್ಣು ತೇವಗೊಂಡಿತು. ಇನ್ನು ಯಾರನ್ನು ಮಾತನಾಡಿಸಲೂ  ಮನ ರೋಸಿ ಹೋಗಿ ಆದಷ್ಟು ಬೇಗ ಈ ಊರಿನಿಂದ ತೊಲಗಿಹೋಗಬೇಕೆನಿಸಿ ಅವಳ ಅಂತರಂಗ   ಕುದಿಯತೊಡಗಿತು.

ಸುಮಿತ್ರ ಅಲ್ಲಿದ್ದ ಎರಡು ದಿನಗಳಲ್ಲಿ ನಾಲ್ಕಾರು ಫೋನುಗಳು ಹರಿದುಬಂದವೇ ಹೊರತು ಯಾರೂ ಅವಳನ್ನು ಮುಖತಃ ಭೇಟಿ ಮಾಡಿ ಸಾಂತ್ವನ ಹೇಳಲು ಬಂದಿರಲಿಲ್ಲ. ಅದನ್ನವಳು ನಿರೀಕ್ಷಿಸಿಯೂ ಇರಲಿಲ್ಲ. ಮನಸ್ಸು ಕ್ರುದ್ಧವಾಗಿತ್ತು. ಜನಗಳನ್ನು ಭೇಟಿ ಮಾಡಲೇ ಒಲ್ಲದಾಗಿತ್ತು. ತೀವ್ರ ರೋಸಿಕೆಯ ಭಾವ ಬಲಿತು ದುಃಖ ಹೆಪ್ಪುಗಟ್ಟಿತ್ತು. ತನ್ನಿಂದ ಹಾಗೂ ತನ್ನ ಗಂಡನಿಂದ ಉಪಕೃತರಾದವರಾರೂ ಮುಖ ತೋರಿಸದೇ ಹೋದಾಗ ಖಿನ್ನತೆ ಸಹಜವಾಗಿ ಅವಳನ್ನಾವರಿಸಿತ್ತು. ನಿಜ, ಇನ್ನು ತನ್ನಿಂದ್ಯಾರಿಗೆ ಪ್ರಯೋಜನವಿದೆ ಎಂಬುದನ್ನು ಕುರಿತು ಮತ್ತೆ ಮತ್ತೆ ಚಿಂತಿಸಿ ವ್ಯರ್ಥ ವ್ಯಾಕುಲಗೊಂಡಳು. ನಿಟ್ಟುಸಿರು ಮಾಲೆ ಹೊರಗುಕ್ಕಿತು.

ಮೂರನೆಯ ದಿನ ಚುಮು ಚುಮು ಬೆಳಗ್ಗೆಯೇ ಸುಮಿತ್ರ ತಮ್ಮ ಮನೆಯ ಸಾಮಾನು-ಸರಂಜಾಮುಗಳನ್ನೆಲ್ಲ ಒಂದು ಲಾರಿ ಮಾಡಿ ಬೆಂಗಳೂರಿಗೆ ರವಾನಿಸಲು ಏರ್ಪಾಡು ಮಾಡಿ ರೈಲ್ವೇ ಸ್ಟೇಷನ್ ಗೆ ಬಂದವಳು, ತಾನು ಇಷ್ಟು ದಿನ ಬಾಳಿ ಬದುಕಿದ ಊರಿಗೆ ಅಂತಿಮ ನಮಸ್ಕಾರ ಸಲ್ಲಿಸಿ, ಒಳಗೆ ಹಾಲಾಹಲವಾಗಿ ತಳಮಳಿಸುತ್ತಿದ್ದ ತನ್ನ ಭಾವನೆಗಳನ್ನು ಸುಧಾರಿಸುವ ಪ್ರಯತ್ನ ಮಾಡುತ್ತ ದುಃಖತಪ್ತಳಾಗಿ ಒಂದೆಡೆ ನಿಂತಿದ್ದವಳಿಗೆ ದೂರದಲ್ಯಾರೋ ಓಡಿ ಬರುತ್ತಿರುವುದು ಕಂಡಿತ್ತು.

ಮಾಸಿದ ಹರಕಲು ಸೀರೆ ಸುತ್ತಿಕೊಂಡ, ಕೆದರಿದ ತಲೆಯ ಕುರ್ಸಿಂಬಿ ತನ್ನತ್ತಲೇ ಧಡಬಡ ಓಡಿ ಬರುತ್ತಿದ್ದಳು. `ಅವ್ವಾರೇ…..ಒಂಟೇ ಬುಟ್ರಾ ?….’ ಅವಳ ಗದ್ಗದ ಕಂಠದ ಸ್ವರ ಕೇಳಿ ಸುಮಿತ್ರ ಅವಾಕ್ಕಾದಳು. ಅವಳ ಅಂತರಂಗ ಕದಡಿತು. ಕಕ್ಕುಲತೆಯಿಂದ ಕುರ್ಸಿಂಬಿಯ ಕೈಹಿಡಿದುಕೊಂಡು ` ಇದೇನೇ ಹೀಗೆ ಹುಚ್ಚಿ ಹಾಗೆ ಅಳ್ತೀ ಕುರ್ಸಿಂಬಿ, ನೋಡಿದೋರು ಏನಂದುಕೊಂಡಾರು ,ಕಣ್ಣೊರೆಸ್ಕೋ’ ಎನ್ನುತ್ತ   ತನ್ನ ವ್ಯಾನಿಟಿಬ್ಯಾಗ್‍ನಿಂದ ಕರ್ಚೀಫ್ ತೆಗೆದು ಅವಳ ಕಣ್ಣೊರೆಸಿ, ಮಿದುವಾಗಿ ಅವಳ ಬಡಕಲು ಕೆನ್ನೆ ತಟ್ಟಿ ಸಮಾಧಾನಿಸಿದಳು.

ಕುರ್ಸಿಂಬಿ ಬಲು ಹಿಂಜರಿಕೆಯಿಂದ ಮೆಲ್ಲಗೆ  ತನ್ನ ಬಗಲಿನಲ್ಲಿ ಸುತ್ತಿಟ್ಟುಕೊಂಡಿದ್ದ ನಾಲ್ಕು ಚಪಾತಿ-ಪುಂಡಿ ಪಲ್ಲೆಯ ಪ್ಲಾಸ್ಟಿಕ್ ಕವರನ್ನು ಅವಳತ್ತ ಚಾಚಿ `ದಾರ್ಯಾಗ ತಿನ್ರವ್ವ..’ ಎಂದು ಅಂಗಲಾಚುವ ದನಿಯಲ್ಲಿ ಬೇಡಿದಳು. ಅವಳ ನಿರ್ವ್ಯಾಜ  ಅಂತಃಕರಣ ಕಂಡು ಮೂಕವಿಸ್ಮಿತಳಾಗಿ ನಿಂತ ಸುಮಿತ್ರಳ ಕಣ್ಣಂಚಿನಿಂದ ನೀರು ಫಳಕ್ಕನೆ ತುಳುಕಿತು. ಅವಳ ಕೈಗಳು ಕುರ್ಸಿಂಬಿಯ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದವು.

Related posts

ಬೆಳಕಿಂಡಿ

YK Sandhya Sharma

ಧರ್ಮ

YK Sandhya Sharma

ಪ್ರಾಮಾಣಿಕತೆ

YK Sandhya Sharma

2 comments

ಎಸ್.ದ್ವಾರಕಾನಾಥ್ April 18, 2020 at 10:48 pm

ತನ್ನ ಗಂಡನನ್ನು ಕಳೆದುಕೊಂಡು ತನ್ನ ಮನೆಯ ಪರಿಸ್ಥಿತಿ ಮತ್ತು ತನ್ನ ಸ್ಥಿತಿಯನ್ನು ನೆನೆಸಿಕೊಂಡು ದುಃಖದಲ್ಲಿದ್ದ ಸುಮಿತ್ರಳನ್ನು ಕಂಡಾಗ ಅಲ್ಲಿನ ನೆರೆಹೊರೆಯವರು ನಡೆದುಕೊಂಡ ರೀತಿ ಮತ್ತು ತಾತ್ಸಾರ ಭಾವನೆಯಿಂದ ಮನನೊಂದಿದ್ದ ಸುಮಿತ್ರಳ ಜೊತೆ ಕೆಲಸದಾಕೆ ಕುರ್ಸಿಂಬಿ ತೋರಿಸಿದ ಪ್ರೀತಿ ಅಕ್ಕರೆ ಮೆಚ್ಚುವಂಥದ್ದು. ಸುಮಿತ್ರ ಬೆಂಗಳೂರಿಗೆ ಹೋಗುತ್ತಿದ್ದಾಗ ಓಡಿಬಂದು ನಾಲ್ಕು ಚಪಾತಿ ಮತ್ತು ಪುಂಡಿ ಪಲ್ಯ ಕೊಟ್ಟು ದಾರಿಯಲ್ಲಿ ತಿಂದ್ಕೊಂಡು ಹೋಗಿ ಎಂದು ಹೇಳಿದ್ದನ್ನು ನೋಡಿದರೆ ಇವಳ ಅಂತಃಕರಣಕ್ಕೆ ನಮಿಸಲೇಬೇಕು. ಕಥೆ ಚೆನ್ನಾಗಿದೆ.

Reply
YK Sandhya Sharma April 19, 2020 at 10:36 am

ನಿಮ್ಮ ಸುಂದರ ವಿಶ್ಲೇಷಣೆಯ ವಿಮರ್ಶೆಗೆ ಅನಂತ ಧನ್ಯವಾದಗಳು. ಇದನ್ನೇ ನೀವು ಮುಖಪುಸ್ತಕದಲ್ಲಿ ಬರೆದರೆ ಉಳಿದ ಓದುಗರಿಗೂ ಉಪಯುಕ್ತವಾಗುತ್ತದೆ. ದಯವಿಟ್ಟು ಉಳಿದ ಕಥೆಗಳಿಗೂ ಪ್ರತಿಕ್ರಿಯಿಸಿ.

Reply

Leave a Comment

This site uses Akismet to reduce spam. Learn how your comment data is processed.