Image default
Dancer Profile

ನಾಟ್ಯ-ಯೋಗ ಸಂಗಮ ಯಾಮಿನೀ ಮುತ್ತಣ್ಣ

          ಸುಮನೋಹರ ನೃತ್ಯಕ್ಕೆ ಹದವಾಗಿ ಯೋಗದ ಸತ್ವವನ್ನು ಬೆರೆಸಿ ರಂಗದ ಮೇಲೆ ಹೃನ್ಮನ ತಣಿಸುವ ನೃತ್ಯಗಾರ್ತಿ ಯಾಮಿನೀ ಮುತ್ತಣ್ಣ . ಹಾವಿನಂತೆ ಶರೀರವನ್ನು ಬೇಕಾದಂತೆ  ಬಾಗಿಸಬಲ್ಲ, ಅದರಲ್ಲಿ ನರ್ತನದ ಸೊಗಸನ್ನು ಹೊಮ್ಮಿಸಬಲ್ಲ ಈ ಅಭಿನಯ ತಜ್ಞೆ, ಮೂಲತಃ ಕೊಡಗಿನ ಬೆಡಗಿ. ಹುಟ್ಟಿನಿಂದ ಬಂದ ಶಿಸ್ತು, ಪರಿಶ್ರಮಗಳ ದಿನಚರಿಗೆ ಕಾರಣ ಮಿಲಿಟರಿ ಅಧಿಕಾರಿಯಾಗಿದ್ದ ತಂದೆ ರಾಜ್ ಮಾಚಯ್ಯ , ಹಾಗೂ ಕಲಾಭಿರುಚಿಗೆ ಬೀಜಾಂಕುರ ಹಾಕಿದವರು ಕಥಕ್ ನೃತ್ಯಗಾರ್ತಿಯಾಗಿದ್ದ ತಾಯಿ ಸುಂದರಿ ಮಾಚಯ್ಯ . ಪರ್ವತಾರೋಹಣ ಹವ್ಯಾಸವಿಟ್ಟುಕೊಂಡಿದ್ದ ಆಕೆಯಿಂದ ಕ್ರೀಡಾಸಕ್ತಿಯನ್ನು ಮೈಗೂಡಿಸಿಕೊಂಡ ಯಾಮಿನಿಯಲ್ಲಿ ನಾಲ್ಕು ವರ್ಷದ ಸಣ್ಣವಯಸ್ಸಿನಲ್ಲೇ ನೃತ್ಯದ ಬಗ್ಗೆ ಒಲವು ಮೂಡಿತ್ತು. ತಾಯಿಯೇ ಅವರ ಮೊದಲ ನೃತ್ಯಗುರು.

ಕೆಲಸದ ನಿಮಿತ್ತ ಊರಿಂದ ಊರಿಗೆ ವರ್ಗವಾಗುತ್ತಿದ್ದ ತಂದೆ ಹೋದೆಡೆಯಲೆಲ್ಲ ಗುರುಗಳು ಬದಲಾಗುತ್ತ, ಮುಂದೆ ಯಾಮಿನಿಯ ಭರತನಾಟ್ಯದ  ಗಂಭೀರಾಭ್ಯಾಸ ನಡೆದದ್ದು ಮೈಸೂರಿನ ಖ್ಯಾತ ನೃತ್ಯಗುರು ಡಾ. ವಸುಂಧರಾ ದೊರೆಸ್ವಾಮಿ ಅವರ ಗರಡಿಯಲ್ಲಿ. ಜೊತೆ ಜೊತೆಯಲ್ಲಿ ಯೋಗದ ಬಗ್ಗೆ ಅಪಾರ ಆಸಕ್ತಿಯಿದ್ದ ಕಾರಣ ವಿಶ್ವವಿಖ್ಯಾತ ಯೋಗಾಚಾರ್ಯ ಡಾ. ಬಿ.ಎನ್.ಎಸ್. ಅಯ್ಯಂಗಾರರಲ್ಲಿ ಯೋಗಾಭ್ಯಾಸ ಕಲಿಕೆ. ಹೀಗಾಗಿ ಯಾಮಿನಿಯವರಲ್ಲಿ ಭರತನಾಟ್ಯ ಹಾಗೂ ಯೋಗ ಎರಡೂ ಸಂಗಮಿಸಿ, ಇಂದವರು ಎರಡೂ ವಿಷಯಗಳನ್ನು ಸಮರಸವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅವರ ನೃತ್ಯಪ್ರತಿಭೆಯೊಂದಿಗೆ ಸಮನ್ವಯವಾಗಿ ಬೆರೆತ ಯೋಗ ಅವರ ನೃತ್ಯ ವಿಕಸನಕ್ಕೆ ಸಾಕಷ್ಟು ಕೊಡುಗೆ ನೀಡಿದೆ.

ಆಂಗ್ಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಯಾಮಿನೀ, ತಮ್ಮ 35 ವರುಷಗಳ ಸಮೃದ್ಧ ನೃತ್ಯ ಸಾಧಕ ಬದುಕಿನಲ್ಲಿ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದ್ದಾರೆ. ದೂರದರ್ಶನದ `ಟಾಪ್ ಗ್ರೇಡ್ ‘ ಕಲಾವಿದೆಯಾಗಿರುವ ಇವರು ಐ.ಸಿ.ಸಿ,ಆರ್ ಪ್ರತಿಷ್ಠಿತ ವೇದಿಕೆಯಲ್ಲಿ ಮಾನ್ಯತೆ ಪಡೆದವರೂ ಆಗಿದ್ದಾರೆ. ನಗರದ ಇಂದಿರಾನಗರದಲ್ಲಿ ತಮ್ಮದೇ ಆದ ನೃತ್ಯಸಂಸ್ಥೆ ` ಕಲಾಸಿಂಚನಂ ಯೋಗಸ್ಥಳ ಏನ್ಷಿಯಂಟ್ ಆರ್ಟ್ಸ್ ಟ್ರಸ್ಟ್’ (ಖ್ಯಾತ್) ನ ಕಲಾತ್ಮಕ ನಿರ್ದೇಶಕಿಯಾಗಿ ನೂರಾರು ಮಕ್ಕಳಿಗೆ ನೃತ್ಯಶಿಕ್ಷಣ ನೀಡುತ್ತಿರುವುದಲ್ಲದೆ, ಪ್ರಪಂಚಾದಾದ್ಯಂತ ಅನೇಕ ನೃತ್ಯವಿದ್ಯಾರ್ಥಿಗಳನ್ನು ಹೊಂದಿದ್ದಾರೆ.

ಬದ್ಧತೆಗೆ ಹೆಸರಾದ ಆಚಾರ್ಯ ಯಾಮಿನಿಯವರು, ತಮ್ಮ ಸಂಸ್ಥೆಯಲ್ಲಿ ನೃತ್ಯದೊಂದಿಗೆ ಹಠಯೋಗವನ್ನೂ ಕಲಿಸುವ ಯಾಮಿನೀ. ಉತ್ತಮ ದೈಹಿಕ ದೃಢತೆ, ಸಾಮರ್ಥ್ಯ ಕಾಪಾಡಿಕೊಂಡು ಬಂದಿದ್ದು, ಕಲರಿಪಯಟು (ಸಮರಕಲೆ) ವಿದ್ಯೆಯಲ್ಲೂ ಪರಿಣತರಾಗಿದ್ದು, ಅದನ್ನು ತಮ್ಮ ಕೆಲ ನೃತ್ಯ ಸಂಯೋಜನೆಗಳಲ್ಲಿ ಬಳಸಿಕೊಂಡಿದ್ದಾರೆ.  ಮುಖ್ಯವಾಗಿ `ಮಾರ್ಗಂ ‘ ಸಂಪ್ರದಾಯದಲ್ಲಿ ಭರತನಾಟ್ಯ ಕಲಿಸುವ ತಾವು, ನೃತ್ಯದಲ್ಲಿ ಯೋಗ ಬೆರೆಸದಿದ್ದರೂ,ಕರಣಗಳ ಪರಿಪೂರ್ಣತೆಯಲ್ಲಿ ಆಸನಗಳಂತೆ ಕಾಣುವ ಹಲವು ಭಂಗಿಗಳಲ್ಲಿ ಯೋಗದ ಹೊಳಪು ಇರುತ್ತವೆ ಎಂಬುದು ಇವರ ಅಭಿಪ್ರಾಯ. ತಮ್ಮ ಮೂರು ಖ್ಯಾತ ನೃತ್ಯ ನಿರ್ಮಾಣಗಳಾದ  ಮಾನಸ್, ಸಿದ್ಧಿ ಮತ್ತು ನವಗ್ರಹ ನೃತ್ಯ ಸಂಯೋಜನೆಗಳ ಸಂಚಾರಿ ಭಾಗಗಳಲ್ಲಿ ಕಥಾ ನಿರೂಪಣೆಗೆ ಮಾತ್ರ ಯೋಗವನ್ನು ಬಳಸಲಾಗಿದೆ ಎನ್ನುವರು.

ವಿಶ್ವದಾದ್ಯಂತ ಅನೇಕಾನೇಕ  ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಖ್ಯಾತರಾಗಿರುವ ಅಂತರರಾಷ್ಟ್ರೀಯ ನೃತ್ಯ ಕಲಾವಿದೆಯಾಗಿರುವ  ಯಾಮಿನೀ ಅವರಿಗೆ ಅಸಂಖ್ಯ ಪ್ರಶಸ್ತಿ ಗೌರವಗಳೂ ಸಂದಿವೆ. ಅವುಗಳಲ್ಲಿ ಪ್ರಮುಖವಾದುವು -ಚೆನ್ನೈನ `ನಾಟ್ಯ ಕಲಾವಿಪಂಚಿ ಸಭೆ’ ಯಿಂದ ದತ್ತವಾದ `ನಾಟ್ಯಕಲಾ ವಿಪಂಚಿ’ ಪ್ರಶಸ್ತಿ, ಮುಂಬೈನ ಕಲಾಕಾರ್ ಸಮ್ಮೇಳನದ `ಶೃಂಗಾರಮಣಿ’, ಸಿ.ಎನ್.ಬಿ.ಸಿ.ಟಿವಿ 9 ವಾಹಿನಿಯಿಂದ `ಸಾರ್ಥಕ ನಾರಿ’ ಮುಂತಾದವು.

ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದಿಂದ ಸಾಂಸ್ಕೃತಿಕ ರಾಯಭಾರಿಯಾಗಿ ನೇಮಕಗೊಂಡಿರುವ ಯಾಮಿನೀ, ಅಮೇರಿಕಾದ ನ್ಯೂಜರ್ಸಿ,ವಾಶಿಂಗ್ಟನ್ ಡಿ.ಸಿ., ಲಾಸ್ ಏಂಜಲಿಸ್ , ಯುನೈಟೆಡ್ ಕಿಂಗ್ಡಮ್, ಫಿಜಿ, ಮಲೇಶಿಯಾ ಮತ್ತು ಆಸ್ಟ್ರೇಲಿಯಾ ದೇಶಗಳಾದ್ಯಂತ ನೃತ್ಯ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿದ್ದಾರೆ. ಲಂಡನ್ನಿನ ಭಾರತೀಯ ವಿದ್ಯಾಭವನ ಹಾಗೂ ಮೌಂಟ್ ಬ್ಯಾರ್ಟನ್ ಹಾಲ್ ನಲ್ಲಿ, ಇಂಡೋ ಅಮೇರಿಕನ್ ಕೌನ್ಸಿಲ್ ಸಾಂಸ್ಕೃತಿಕ ವಿನಿಮಯ ಯೋಜನೆಯಡಿಯೂ ಸಾಕಷ್ಟು ನೃತ್ಯ ಕಾರ್ಯಕ್ರಮಗಳನ್ನು, ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ತ್ರೀಯ ನೃತ್ಯೋತ್ಸವ, ಕಾರ್ಪೋರೇಟ್ ಸಮ್ಮೇಳನ, ಪ್ರಾಡಕ್ಟ್ ಗಳ ಲಾಂಚ್ ಗಳಲ್ಲಿ , ಜಾಹಿರಾತು ಸಿನಿಮಾಗಳಲ್ಲಿ ಭಾಗವಹಿಸಿರುವ ಅಗ್ಗಳಿಕೆ ಇವರದು.

ನವದೆಹಲಿಯ ಯುವಜನ ಸಂಸ್ಕೃತಿ ಸಚಿವಾಲಯದಿಂದ ಶಾಲಾ-ಕಾಲೇಜುಗಳಲ್ಲಿ ಸಂಸ್ಕೃತಿ ಪ್ರಸಾರ ಕಾರ್ಯಕ್ಕಾಗಿ ನೃತ್ಯ ಕಾರ್ಯಕ್ರಮಗಳು ಮತ್ತು  ಕಾರ್ಯಾಗಾರಗಳನ್ನು ನಡೆಸಲು ಆಹ್ವಾನ ಪಡೆದ ಹೆಮ್ಮೆ ಇವರದು. ಪ್ರತಿವರ್ಷ ತಮ್ಮ ಸಂಸ್ಥೆಯವತಿಯಿಂದ ಕಲಿಕೆಯ ವಿಸ್ತೃತತೆಗೆ ತಾಳ, ನವರಸ ಅಭಿನಯ ಮತ್ತು ಸಿದ್ಧಿ ಎಂಬ ವಿಶೇಷ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದ್ದು ನೃತ್ಯಾಕಾಂಕ್ಷಿಗಳಿಗೆ ಸೂಕ್ತ ತರಬೇತಿ ನೀಡುತ್ತಿದ್ದಾರೆ. ಇವಲ್ಲದೆ ಮೈಸೂರಿನ ದಸರಾ, ಆಂಧ್ರದ ಕಾಳಹಸ್ತಿಯಲ್ಲಿ ನಡೆದ  ಬ್ರಹ್ಮೋತ್ಸವ ಮತ್ತು ತಮಿಳುನಾಡಿನ ಮಹಾಬಲಿಪುರ ಹಾಗೂ ನೂಪುರ, ಕಿಂಕಿಣಿ  ಪ್ರತಿಷ್ಟಿತ ಉತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ.

ಅಷ್ಟಾಂಗ ಯೋಗವಿನ್ಯಾಸ ಗುರು ಯಾಮಿನಿಯವರು ನೃತ್ಯ ಸಂಯೋಜಿಸಿದ ಪ್ರಧಾನ ಸೋಲೋ ಕೃತಿಗಳೆಂದರೆ-ಸೈರಂಧ್ರಿ, ಕೃಷ್ಣ ಲೀಲಾಮೃತ, ಶಿವಲೀಲಾ ಮುಂತಾದವು. ಯಾಮಿನಿ ಅವರು ` ದಿ  ಪವರ್ ಆಫ್ ಯೋಗ’ ಎಂಬ ಕೃತಿಯನ್ನು ರಚಿಸಿ ಲೇಖಕಿಯೂ  ಎನಿಸಿಕೊಂಡಿದ್ದು, ಅದೀಗ ಚೀನೀ ಭಾಷೆಗೆ ಅನುವಾದಗೊಳ್ಳುತ್ತಿರುವುದು ವಿಶೇಷ. ದೂರದರ್ಶನದಲ್ಲಿ ಇವರು ‘ಯೋಗ ಚಿಕಿತ್ಸೆ’ ಯ ಬಗ್ಗೆ ಇಪ್ಪತ್ತಾರು ಎಪಿಸೋಡುಗಳುಗಳನ್ನು ನಡೆಸಿಕೊಟ್ಟಿದ್ದು ಅವು ಭಾರತೀಯ ವಿವಿಧ ಭಾಷೆಗಳಲ್ಲಿ ಪ್ರಸಾರವಾಗಿರುವುದು ಇವರ ಹಿರಿಮೆ .

ಪತಿ ಮುತ್ತಣ್ಣ ಸಾಫ್ಟ್ ವೇರ್ ಕನ್ಸಲ್ಟೆಂಟ್ ಆಗಿದ್ದು ಕಲಾಪ್ರೇಮಿಯಾಗಿದ್ದಾರೆ. ಮಗ ಋತ್ವಿಕ್ ಅಯ್ಯಪ್ಪ ಮಲ್ಟಿ ಮೀಡಿಯಾ ಕಮ್ಯುನಿಕೇಷನ್ಸ್ ಮತ್ತು ಮಗಳು ಮಾನ್ಯ ಮುತ್ತಣ್ಣ ಎನ್ವೈರ್ನಮೆಂಟಲ್ ಎಕಾನಾಮಿಕ್ಸ್ ಅಧ್ಯಯನದಲ್ಲಿ ತೊಡಗಿದ್ದಾರೆ.

*****

Related posts

ಉಭಯ ನೃತ್ಯಶೈಲಿಯ ಕಲಾವಿದೆ ಕಾವ್ಯಶ್ರೀ ನಾಗರಾಜ್

YK Sandhya Sharma

ಅನುಪಮ ಬಾಲಪ್ರತಿಭೆ ಕಾರುಣ್ಯ ಜಿ. ವಸಿಷ್ಠ

YK Sandhya Sharma

ಪ್ರತಿಭಾವಂತ ಕಲಾಪ್ರಪೂರ್ಣೆ ಸುಷ್ಮಾ ಕೆ.ರಾವ್

YK Sandhya Sharma

2 comments

Dr.RadhikaRanjini June 10, 2021 at 2:10 am

ಯಾಮಿನಿ ಮೇಡಂ ಅಭಿನಂದನೆಗಳು ಪರಿಚಯ ಚೆನ್ನಾಗಿ ಮೂಡಿ ಬಂದಿದೆ. ‌ ‌ ನವಗ್ರಹ ಗಳ‌‌‌ ನಿಮ್ಮ ಕಾರ್ಯಕ್ರಮ ಕ್ಕೆ ಬಂದಿದ್ದೆ ಮೇಡಂ. ಸೂಪರ್ ಮೇಡಂ. ‌‌ಸಂಧ್ಯಾ ಮೇಡಂ ನೃತ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ,ಸೂಪರ್ ಮೇಡಂ.

Reply
YK Sandhya Sharma June 13, 2021 at 8:08 pm

ಅಪಾರ ಧನ್ಯವಾದಗಳು ರಾಧಿಕಾ.

Reply

Leave a Comment

This site uses Akismet to reduce spam. Learn how your comment data is processed.