ಗೇಟು ಕಿರ್ರೆಂದಿತು. ಕೈತೋಟದ ಚೆಂಗುಲಾಬಿಗಳ ಮಧ್ಯೆ ಕುರ್ಚಿ ಹಾಕಿಕೊಂಡು ಚಹ ಕುಡಿಯುತ್ತ ಕುಳಿತಿದ್ದವನು ಹೊರಳಿ ನೋಡಿದೆ.
ಗೇಟು ತೆರೆದು ಒಳಬಂದ ಕ್ಲಬ್ಬಿನ ಹುಡುಗ ರಿಜಿಸ್ಟರ್ ಹಿಡಿದುಕೊಂಡು ಮನೆಯ ಮುಂದಿನ ಮೆಟ್ಟಿಲುಗಳತ್ತ ಧಾವಿಸುತ್ತಿದ್ದಾನೆ. ಅವನ ಕೈ ಕರೆಗಂಟೆಯ ಗುಂಡಿಯ ಮೇಲೆ ಹೋಗುತ್ತಿದ್ದಂತೆ-
‘ಏಯ್ ಇಲ್ಲೇ ಬಾರೋ’ ಎಂದವನನ್ನು ನಾನು ಇದ್ದ ಜಾಗಕ್ಕೆ ಕರೆದೆ.
ಲಗುಬಗೆಯಿಂದ ಬಂದ ಹುಡುಗ ನನ್ನ ಮುಂದೆ ರಿಜಿಸ್ಟರ್ ಬಿಚ್ಚಿ ಹಿಡಿದ. ಚಹದ ಕಪ್ಪನ್ನು ಕೆಳಗಿರಿಸಿ ಅವನ ಕೈಲಿದ್ದ ರಿಜಿಸ್ಟರ್ ಇಸಿದುಕೊಂಡು ಅದರಲ್ಲಿ ಕಣ್ಣಾಡಿಸಿದೆ. ಸುರೇಂದ್ರನಾಥ್ ಮೆಹತಾ ಅವರಿಗೆ ಬೀಳ್ಕೂಡುಗೆಯ ಔತಣ ಮರುದಿನ ಸಂಜೆ ಕ್ಲಬ್ಬಿನಲ್ಲಿ ಏರ್ಪಾಟಾಗಿತ್ತು.
ಪ್ರತಿಬಾರಿ ಕ್ಲಬ್ಬಿನಿಂದ ಬರುವ ನೋಟಿಸುಗಳಿಗೆ ಯಾಂತ್ರಿಕವಾಗಿ ಸಹಿ ಗುದ್ದುವ ನನ್ನ ಕೈ ಇಂದು ಕೊಂಚ ತಡೆದಿತು. ಹೃದಯ ಭಾರವೆನಿಸಿ ಉಸಿರು ಭಾವುಕತೆಯಿಂದ ತೊಯ್ದಿತು. ಮೆಹತಾ ನಮ್ಮ ಕಾಲೋನಿಯಿಂದ ಹೊರಟುಹೋಗುವ ಅಪ್ರಿಯ ಸಂಗತಿ ಅಕ್ಷರವತ್ತಾಗಿ ವಾಸ್ತವತೆಯನ್ನು ಕೊರೆದಾಗ ಕೊಂಚ ವಿಚಲಿತನಾದೆ.
ಕ್ಲಬ್ಬಿನ ಹುಡುಗ ನನ್ನ ಮುಖವನ್ನು ವಿಚಿತ್ರವಾಗಿ ದಿಟ್ಟಿಸುತ್ತಿದ್ದಾನೆನಿಸಿ ‘ಕೊಡೋ ಪೆನ್ನು’ ಎಂದು ಅವನಿಂದ ಪೆನ್ನು ಇಸಿದುಕೊಂಡು ರಿಜಿಸ್ಟರ್‍ನಲ್ಲಿ ಸಹಿ ಹಾಕಿ ಅವನನ್ನು ಸಾಗುಹಾಕಿದೆ. ಆದರೆ ನನ್ನ ಮನಸ್ಸಿನಲ್ಲಿ ಬೇರು ಬಿಟ್ಟಿದ್ದ ಮೆಹತಾನನ್ನು ಮಾತ್ರ ಹೊರಗೆ ಕಳುಹಿಸಲು ನಾನು ಅಶಕ್ತನಾದೆ.
ಮೆಹತಾ ನನಗೆ ಮಾತ್ರವೇಕೆ ಇಡೀ ಕಾಲೋನಿಗೇ ಬೇಕಾದಂಥ ಜನಪ್ರಿಯ ವ್ಯಕ್ತಿ. ಕೆಳದರ್ಜೆಯ ನೌಕರನಿಂದ ಹಿಡಿದು ಫ್ಯಾಕ್ಟರಿಯ ಅತ್ಯಂತ ಹಿರಿಯ ಅಧಿಕಾರಿಯವರೆಗೂ ಅವನು ಎಲ್ಲರ ಪ್ರೀತ್ಯಾದರಗಳನ್ನು ಗಳಿಸಿದ್ದ.
ಆಕರ್ಷಕ ಗುಣಗಳನ್ನು ಹೊಂದಿದ್ದ ಮೆಹತಾ ವಿದ್ಯಾವಂತ, ಬುದ್ಧಿವಂತ. ಎಲ್ಲಕ್ಕಿಂತ ಹೆಚ್ಚಾಗಿ ಅವನು ಎಲ್ಲರಲ್ಲೂ ಸಮರಸವಾಗಿ ಬೆರೆಯಬಲ್ಲಂಥ ಸ್ನೇಹಶಾಲಿ. ಅವನು ಕೆಲವೇ ದಿನಗಳಲ್ಲಿ ನನ್ನ ಆತ್ಮೀಯ ಮಿತ್ರನಾಗಿಬಿಟ್ಟಿದ್ದ. ನನಗಿಂತ ಅವನು ಸ್ವಲ್ಪ ಮೇಲ್ದರ್ಜೆಯ ಅಧಿಕಾರಿಯಾಗಿದ್ದರೂ, ನನ್ನ ಅವನ ಸ್ನೇಹದ ನಡುವೆ ಯಾವುದೂ ಅಡ್ಡಿಯಾಗಿರಲಿಲ್ಲ.
ಬೆಳಿಗ್ಗೆ ಏಳು ಗಂಟೆಗೆ ತಿಂಡಿ-ಕಾಫಿ ಮುಗಿಸಿಕೊಂಡು, ನಗುತ್ತ ಬಾಗಿಲಲ್ಲಿ ಕೈ ಬೀಸುವ ಶಾಲಿನಿಯಿಂದ ಬೀಳ್ಕೊಂಡರೆ, ಇನ್ನವಳನ್ನು ನಾನು ಕಾಣುತ್ತಿದ್ದುದು ರಾತ್ರಿ ಹತ್ತು ಗಂಟೆಗೇ. ಅಪ್ಪಿ ತಪ್ಪಿ ಏನಾದರೂ ಒಂದು ಸಂಜೆ ಆರಕ್ಕೆ ಮನೆಗೆ ಬಂದರೂ ಬಂದೇ-ಅದೂ ಮೆಹತಾ ಊರಿನಲ್ಲಿಲ್ಲದಾಗ.
ಫ್ಯಾಕ್ಟರಿಯಲ್ಲಿ ಬೆಳಗ್ಗೆ ಏಳುಗಂಟೆಗೆ ನಾವು ಭೇಟಿಯಾದರೆ ರಾತ್ರಿ ಹತ್ತರವರೆಗೂ ಜೊತೆಯಲ್ಲೇ ಇರುತ್ತಿದ್ದೆವು. ಕಾಫೀ-ಟೀ, ಊಟ ಎಲ್ಲವೂ ಒಟ್ಟಿಗೆಯೇ. ನಮ್ಮಿಬ್ಬರ ಛೇಂಬರ್‍ಗಳು ಬೇರೆ ಬೇರೆಯಾದರೂ ದೂರವಾಣಿಯ ಮೂಲಕ ನಮ್ಮ ಸಂಭಾಷಣೆ ಸಾಗುತ್ತಿತ್ತು. ಸಂಜೆ, ಫ್ಯಾಕ್ಟರಿ ಮುಗಿದ ನಂತರ ಆಫೀಸರ್ಸ್ ಕ್ಲಬ್ಬಿನ ಕಡೆ ನಮ್ಮ ಪಯಣ. ಅಲ್ಲಿ ಕಾರ್ಡ್ಸ್ ಆಡುತ್ತ ಕೂತರೆ ಗಮ್ ಹಾಕಿ ಅಂಟಿಸಿದಂತೆ ನಮ್ಮ ಮತ್ತು ಕುರ್ಚಿಯ ನಂಟು.
ಮೆಹತಾ ಟೇಬಲ್ ಟೆನ್ನಿಸ್, ಷಟಲ್ ಆಡಲೂ ಹೋಗುತ್ತಿದ್ದ, ಮಹಾ ಸೂಟಿ ಮನುಷ್ಯ, ತನ್ನ ಹಸನ್ಮುಖ, ಅರಳು ಹುರಿದಂಥ ಮಾತಿನ ಮೋಡಿಯಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ. ಒಂದು ದಿನ ಅವನು ಕ್ಲಬ್ಬಿಗೆ ಗೈರು ಹಾಜರಿಯಾದರೂ ಇಡೀ ವಾತಾವರಣ ಉಸಿರು ಹಿಸುಕಿದ ಗೊಂಬೆಯಂತಿರುತ್ತಿತ್ತು.
ಶಾಲಿನಿ ಪ್ರತಿದಿನ ಗೊಣಗಾಡುತ್ತಿದ್ದಳು.
‘ಮೆಹತಾ ನಿಮಗೆ ಎರಡನೇ ಹೆಂಡ್ತೀ ಕಣ್ರಿ… ನಿಜವಾಗ್ಲೂ ನೀವು ಅವನ್ಹತ್ರ ಕಳೆದಷ್ಟು ಹೊತ್ತು ನನ್ನ ಹತ್ರ ಇರಲ್ವಲ್ಲ… ಇದೆಂಥ ಗಂಡ-ಹೆಂಡ್ತೀ ಸಂಬಂಧಾರೀ ನಮ್ದು?’-ಎಂದು ವಿಸ್ಮಯ ನಟಿಸಿ ನಕ್ಕರೂ, ಅವಳ ತುಂಟಿಯಂಚು ವಿಷಾದ ಹೊರ ಹೊಮ್ಮಿಸುತ್ತಿತ್ತು.
ನಾನು ನಕ್ಕು ಅಲ್ಲಿಗೇ ಸುಮ್ಮನಾಗುತ್ತಿದ್ದೆ.
ಹೌದು ಮೆಹತಾ ನನ್ನ ಒಡನಾಡಿಯಾಗಿ ಬಿಟ್ಟಿದ್ದ. ವಾರಕ್ಕೊಮ್ಮೆ ಮೆಹತಾ ದಂಪತಿಗಳು ನಮ್ಮ ಮನೆಗೆ ಬರುತ್ತಿದ್ದರು. ಅಥವಾ ನಾವೇ ಅವರ ಮನೆಗೆ ಹೋಗುತ್ತಿದ್ದೆವು. ಅವನ ಹೆಂಡತಿ ರುಚಿಕಟ್ಟಾದ ತಿಂಡಿ, ಚಾಗಳಿಂದ ಅದ್ದೂರಿ ಉಪಚಾರ ಮಾಡುತ್ತಿದ್ದಳು. ಕೆಲವೊಮ್ಮೆ ಊಟವೂ ಅಲ್ಲೇ ಮುಗಿದು ಹೋಗುತ್ತಿತ್ತು. ಅವನು ಬಹಳ ಉದಾರಿ. ಕೊಡುಗೈ ಅವನದು. ಹಣ ಖರ್ಚು ಮಾಡಲು ಹಿಂದು ಮುಂದು ನೋಡುವ ಜಾಯಮಾನವಲ್ಲ ಅವನದು. ಬಂದವರಿಗೆ ಧಾರಾಳಾವಾಗಿ ತಿನ್ನಿಸುತ್ತಿದ್ದ, ಕುಡಿಸುತ್ತಿದ್ದ. ಬೇಡಿದ ಸಹಾಯವನ್ನು ಮಾಡುತ್ತಿದ್ದ. ಸಹಾಯ ಧನ, ಚಂದಾ ಕೇಳಲು ಬಂದವರಿಗೂ ತೃಪ್ತಿಯಾಗುವಷ್ಟು ಧನ ಸಹಾಯ ಮಾಡುತ್ತಿದ್ದನ್ನೂ ಕಂಡು ಶಾಲಿನಿ ಮೂಗಿನ ಮೇಲೆ ಬೆರಳಿಡುತ್ತಿದ್ದಳು.
‘ದೊಡ್ಡ ಆಫೀಸರ್ರು… ಕೈ ತುಂಬ ಸಂಬ್ಳ ಬರುತ್ತೇಂತ ಅವ್ನು ಹೀಗೆ ದಂದರಾಳಾಗಿದ್ರೆ ಕಡೆಗೆ ಅವನ ಹೆಂಡ್ತಿ-ಮಕ್ಳ ಕೈಗೆ ಕರಟಾನೇ ಗತಿ ಕಣ್ರೀ’
‘ನಿನ್ನ ಮನೆಯ ಮುಂದೆ ಸಮಾಜ ಸೇವಾ ಧುರಂಧರಾ ಅಂತ ಬೋರ್ಡ್ ತೂಗಿ ಹಾಕ್ಕೊಳ್ಳೋ ’ ಎಂದು ನಾನೂ ಆಗಾಗ ರೇಗಿಸುತ್ತಿದ್ದುದುಂಟು. ಅವನು ತನ್ನ ಬೀದಿಯ ಜನಕ್ಕಷ್ಟೇ ಅಲ್ಲದೆ ಇಡೀ ಕಾಲೋನಿಗೆ ಅಗತ್ಯ ಬಿದ್ದ ಎಲ್ಲ ಸನ್ನಿವೇಶಗಳಲ್ಲೂ ನೆರವಾಗುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು.
ನನ್ನ ಮಾತಿಗೆ ತುಟಿ ಬಿಚ್ಚಿ ಮನಸ್ವೀ ನಗುತ್ತಿದ್ದ. ಇಂಥ ಜೀವದ ಗೆಳೆಯ ಈ ಊರನ್ನು ಬಿಟ್ಟು ಹೊರಟು ಹೋಗುತ್ತಿರುವಾಗ ನನ್ನ ಹೃದಯ ಚಟಪಡಿಸದೆ ಮತ್ತೇನು?
ಮುಂಬಯಿಯ ಭಾರೀ ಕಂಪೆನಿಯೊಂದರ ಉತ್ತಮ ಹುದ್ದೆಯೊಂದು, ಅವನನ್ನು ಕೈಬೀಸಿ ಕರೆದಿತ್ತು. ಕೈ ತುಂಬ ಸಂಬಳ, ಉನ್ನತ ಅಧಿಕಾರ, ಬಂಗಲೆ. ಮೆಹತಾ ಇಲ್ಲಿಯ ಕೆಲಸಕ್ಕೆ ರಾಜೀನಾಮೆಯಿತ್ತು ಮುಂಬಯಿಗೆ ಹೊರಟ್ಟಿದ್ದ. ಈ ಸುದ್ದಿ ಇಡೀ ಕಾಲೋನಿಯನ್ನೇ ಗರಬಡಿಸಿತ್ತು.
ಆ ದಿನ ಸಂಜೆ ಕ್ಲಬ್ಬಿನಲ್ಲಿ ಪಾರ್ಟಿ. ನಾನು, ಶಾಲಿನಿ ಮಕ್ಕಳು ಮುಂಚಿತವಾಗೇ ಹೋಗಿದ್ದೆವು. ಹೆಚ್ಚೂ ಕಡಿಮೆ ನಮ್ಮ ಫ್ಯಾಕ್ಟರಿಯಲ್ಲಿ ಎಲ್ಲ ಆಫೀಸರ್‍ಗಳೂ ಸಂಸಾರ ಸಮೇತ ಹಾಜರಿದ್ದರು. ಸಮಾರಂಭದ ಕೇಂದ್ರ ವ್ಯಕ್ತಿ ಮೆಹತಾ ಟ್ರಿಂ ಆಗಿ ನೀಲಿ ಸೂಟು-ಟೈ ಧರಿಸಿ ಎಲ್ಲರೂಡನೆ ನಗುತ್ತ ಮಾತನಾಡುತ್ತಿದ್ದ.
ಔಪಚಾರಿಕ ಭಾಷಣ. ಹಾರ-ಉಡುಗೊರೆ-ಬೀಳ್ಕೊಡುಗೆಯ ಕಾರ್ಯಕ್ರಮಗಳ ನಂತರ ಎರಡು ಸಿಹಿಯ ಊಟ, ಐಸ್‍ಕ್ರೀಂ-ಫ್ರೂಟ್ ಸಾಲಡ್‍ಗಳು. ನಾನು ಅವನಿಗೆ ಪ್ರತ್ಯೇಕವಾಗಿ ನನ್ನ ಸ್ನೇಹದ ದ್ಯೋತಕವಾಗಿ ನಮ್ಮ ಮೈಸೂರಿನ ಶ್ರೀಗಂಧದಲ್ಲಿ ಮಾಡಿದ ಭಗವದ್ಗೀತೆ ಬೋಧಿಸುವ ಶ್ರೀಕೃಷ್ಣ-ಅರ್ಜುನನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದೆ.
ನನ್ನ ಹೃದಯ ಭಾರವಾಗಿತ್ತು. ಕಣ್ಣುಗಳು, ಹೇಳಲಾರದ ಅನೇಕ ಭಾವನೆಗಳನ್ನು ಪ್ರತಿಬಿಂಬಿಸುತ್ತಿದ್ದವು. ಮೆಹತಾ, ಹೊರಡುವಾಗ ಬಿಗಿದಪ್ಪಿಕೊಂಡ. ಒಂದು ಕ್ಷಣ, ಅಪರೂಪದ ವ್ಯಕ್ತಿಯೊಬ್ಬನನ್ನು ಕಳೆದುಕೊಳ್ಳುತ್ತಿರುವ ದುಃಖದ ಅನುಭವ. ನಾನೂ ಶಾಲಿನಿ ಇಬ್ಬರೂ ರೈಲ್ವೆ ಸ್ಷೇಷನ್‍ವರೆಗೂ ಹೋಗಿ ಮೆಹತಾ ಕುಟುಂಬವನ್ನು ಬೀಳ್ಕೊಟ್ಟು ಬಂದೆವು..
ಎರಡು ದಿನ ನನಗೆ ಮಂಕು ಕವಿದಂತಿತ್ತು. ಫ್ಯಾಕ್ಟರಿ ಮುಗಿದೊಡನೆ ನೇರ ಮನೆಗೆ. ನನ್ನ ಕ್ಲಬ್ಬಿನ ಹವ್ಯಾಸ ತಾತ್ಕಾಲಿಕವಾಗಿ ನಿಲುಗಡೆ ಪಡೆದಿತ್ತು.
ಒಂದೆರೆಡು ವಾರಗಳಲ್ಲಿ ನನ್ನ ಸೆಕ್ಷನ್ ಬದಲಾಗಿತ್ತು. ಬಡ್ತಿ ಹೊಂದಿದ್ದೆ. ನನ್ನ ರ್ಯಾಂಕಿನ ಇನ್ನೊಂದಿಬ್ಬರು ನನ್ನ ಸ್ನೇಹವಲಯದೊಳಗೆ ಅಡಿಯಿರಿಸಲು ಯತ್ನ ನಡೆಸಿದರು. ಮತ್ತೆ ಕೆಲವೇ ದಿನಗಳಲ್ಲಿ ಕ್ಲಬ್ಬಿಗೆ ಹೆಣೆದುಕೊಂಡೆ.
ದಿನಗಳು ಯಾರ ಮುಲಾಜಿಗೂ ಕಾಯದೆ ತನ್ನ ಪಾಡಿಗೆ ತಾನು ಉರುಳುತ್ತಿದ್ದವು. ಬದಲಾದ ವಿಭಾಗದಲ್ಲಿ ನನಗೆ ತುಂಬ ಜವಾಬ್ದಾರಿಯುತ ಕೆಲಸವಿತ್ತು. ಮೊದಲಿನಂತೆ ನಿಯತವಾಗಿ ಕ್ಲಬ್ಬಿಗೆ ಹೋಗುವುದೂ ಕಷ್ಟವಾಗಿತ್ತು. ಸಂಜೆ ಏಳು-ಎಂಟು ಗಂಟೆಯಾದರೂ ಬಿಡುವಿರದ ಕೆಲಸ.
ನನ್ನ ತಲೆನೋವಿಗೆ ಸಮ ಹೆಗಲು ನೀಡಿದವನೆಂದರೆ ರಾಮಮೂರ್ತಿದೇಸಾಯಿ. ಅವರು ಸ್ಟೋರ್ಸ್ ಸೂಪರಿಂಟೆಂಡೆಂಟ್ ಆಗಿದ್ದ. ಇಡೀ ಸ್ಟೋರ್ಸಿನ ಜವಾಬ್ದಾರಿ ನನ್ನ ಅವನ ಹೆಗಲಿನ ಮೇಲಿತ್ತು. ಅವನಿಗೆ ಅಲ್ಲೇ ಹದಿನೈದು ವರ್ಷಗಳ ಅನುಭವವಿದ್ದುದರಿಂದ ಅವನು ಸಲೀಸಾಗಿ ಕೆಲಸ ನಿಭಾಯಿಸುತ್ತಿದ್ದ. ಮೇಲುಸ್ತುವಾರಿಕೆ ನನ್ನ ಕೆಲಸವಾಗಿತ್ತು.
ದೇಸಾಯಿ ಪ್ರಾಮಾಣಿಕ ವ್ಯಕ್ತಿ ಎನಿಸಿಕೊಂಡಿದ್ದ. ಸರಳ ನಡೆ ನುಡಿಯುವನು. ಮಿತ ಭಾಷಿ, ಸೌಮ್ಯ ಸ್ವಭಾವದ ದೇಸಾಯಿ ನನಗೆ ಅತ್ಯಲ್ಪ ಕಾಲದಲ್ಲೇ ಬಹು ಆಪ್ತನಾದ. ಫ್ಯಾಕ್ಟರಿಯಲ್ಲಿರುವಂತೆ, ಮನೆಯಲ್ಲೂ ನನಗೆ ಅವನು ಬಹು ಸಹಕಾರಿಯಾಗಿದ್ದ. ಎಷ್ಟೋ ಸಲ ಶಾಲಿನಿಗೆ ಷಾಪಿಂಗ್‍ಗೂ ಸಹಾಯ ಮಾಡುತ್ತಿದ್ದ. ನನ್ನ ಮಕ್ಕಳ ವಿದ್ಯಾಭ್ಯಾಸ, ಆಟ ಪಾಠಗಳಲ್ಲೂ ಆಸಕ್ತಿ ತೋರುತ್ತಿದ್ದ. ಅವನ ಹೆಂಡತಿ, ಶಾಲಿನಿಗೆ ಒಳ್ಳೆಯ ಗೆಳೆತಿಯಾಗಿ, ದಿನದ ಬಹು ಹೊತ್ತು ಆಕೆ ನಮ್ಮ ಮನೆಯಲ್ಲೇ ಕಳೆಯುತ್ತಿದ್ದಳು.
ನನ್ನ ಜೀವನದ ಪುಟಗಳು ನಯವಾಗಿ ಮೊಗಚಿಕೊಳ್ಳುತ್ತಿದ್ದವು.
ಆ ದಿನ ಬೆಳಗಿನ ಸುಮಾರು ಎಂಟೂವರೆ ಒಂಭತ್ತು ಗಂಟೆಯಿರಬಹುದು. ಎಂದಿನಂತೆ ನಾನು ಫೈಲುಗಳನ್ನು ಪರಿಶೀಲಿಸುವುದರಲ್ಲಿ ಮಗ್ನನಾಗಿದ್ದೆ. ಹಿಂದಿನ ದಿನ ರಜೆ ಹಾಕಿದ್ದೆನಾದ್ದರಿಂದ ಫೈಲುಗಳು ಕೋಟೆ ಕಟ್ಟಿದ್ದವು.
ಸ್ಟ್ರಿಂಗ್ ಡೋರ್ ತೆರೆಯಿತು. ಸೆಕ್ಯೂರಿಟಿ ಆಫೀಸರ್ ಒಳಬಂದು ಸೆಲ್ಯುಟ್ ಹೊಡೆದ.
‘ಏನು ವಿಷಯ? ಎನ್ನುವಂತೆ ತಲೆಯೆತ್ತಿ ನೋಡಿದೆ. ಅವನ ನುಡಿಗಳು ತಡವರಿಸಿದವು..
‘ಚೆಕಿಂಗ್‍ನಲ್ಲಿ ದೇಸಾಯಿ ಸಿಕ್ಕಿಬಿದ್ದಿದ್ದಾರೆ ಸಾರ್… ಒಂದು ಲೋಡ್‍ನಲ್ಲಿ ಎರಡು ಕೆ.ಜಿ. ಷೀಟ್ಸ್ ಹೆಚ್ಚಾಗಿತ್ತು’ ಎಂದ ಮಾತನ್ನು ಕಡಿಕಡಿದು.
ನನ್ನೆದೆಗೆ ದಿಮ್ಮಿ ಕುಟ್ಟಿದ ಹಾಗಾಯಿತು ಅವನನ್ನು ದಿಟ್ಟಿಸುತ್ತಿದ್ದ ನನ್ನ ಕಣ್ಣ ಆಳದಲ್ಲಿ ನರ ಹೊಸೆದ ನೋವು…ದಿಗ್ಭ್ರಮೆ.
‘ವಾಟ್’ ಅದೊಂದೇ ಪದ ನನ್ನ ಬಾಯಿಂದ ಹೊರ ನುಸುಳಿದ್ದು. ಒಳಗೆ ಉದ್ವೇಗ ಹಬೆಯಾಗಿತ್ತು.
ಎರಡು ನಿಮಿಷ ನಾನು ಹಾಗೇ ಸತ್ತವನಂತೆ ಕುಕ್ಕುರಿಸಿದ್ದೆ. ನಂಬಲೇ ಆಗದಂಥ ಕಹಿಸುದ್ದಿ. ಸಿಕ್ಕಿ ಹಾಕಿಕೊಂಡವನು ದೇಸಾಯಿಯೇ? ನನ್ನ ಮನಸ್ಸು ಈ ಸಂಗತಿಯನ್ನು ನಂಬಲು ರಚ್ಚೆ ಹಿಡಿದಿತ್ತು.
ಆಘಾತ ನನ್ನನ್ನು ತಿಕ್ಕಾಡುತ್ತಿತ್ತು.
‘ಚೆಕಿಂಗ್…ಅಪರಾಧಿ ದೇಸಾಯಿ – ವಿಷಯವನ್ನು ಮತ್ತೆ ಮತ್ತೆ ಮನದೊಳಗೆ ಹೊರಳಿಸಿಕೊಂಡು ಅಚ್ಚರಿಗೊಂಡೆ.
ಎದುರಿಗೆ ನಿಂತಿದ್ದ ಸೆಕ್ಯೂರಿಟಿ ಆಫೀಸರ್ ನನ್ನ ಮುಖ ಭಾವಗಳ ಗಣಿತಕ್ಕೆ ತೊಡಗಿದ್ದ. ತತ್ ಕ್ಷಣ ವಾಸ್ತವಕ್ಕೆ ಬಂದೆ.
‘ಸರಿ ನೀವಿನ್ನು ಹೊರಡಿ ನಾನು ವಿಚಾರಿಸ್ತೀನಿ’ ಎಂದೆ ಗಂಭೀರವಾಗಿ.
ಸ್ಟ್ರಿಂಗ್ ಡೋರ್ ಮತ್ತೆ ಕರ್ರೆಂದು ತೆರೆದು ಮುಚ್ಚಿಕೊಂಡೊಡನೆ ನನ್ನ ಮುಖ ಕಪ್ಪಿಟ್ಟು ಹೋಯಿತು. ಅಪರಾಧಿ ಭಾವ ನನ್ನನ್ನು ಕೊರೆಯತೊಡಗಿತ್ತು..
ಪ್ರಾಮಾಣಿಕ ಅಧಿಕಾರಿಯೆಂದು ಹೆಸರು ಗಳಿಸಿದ್ದ ನನ್ನ ಮೇಲೆ ಎಂ.ಡಿ.ಗೆ ಅಪಾರ ನಂಬಿಕೆ-ವಿಶ್ವಾಸ. ಅದಕ್ಕಾಗೇ ನನ್ನನ್ನವರು ಈ ಡಿವಿಷನ್‍ಗೆ ವರ್ಗಾಯಿಸಿದ್ದರು. ಫ್ಯಾಕ್ಟರಿಯ ಅಪಾರ ಹಣ ಈ ವಿಭಾಗದಲ್ಲಿ ಸೋರಿ ಹೋಗುತ್ತಿರುವುದು ಅವರ ಗಮನಕ್ಕೆ ಬಂದಿತ್ತು. ಬಿಗಿ ಕ್ರಮಕ್ಕಾಗಿ ನನಗೆ ಆದೇಶ ಕೊಡಲಾಗಿತ್ತು.
ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಬ್ಬಿಣ, ಷೀಟ್ಸ್, ಕೇಬಲ್ ವೈರು ಇನ್ನಿತರ, ಹೆಚ್ಚುವರಿಯಾದ ಕಡಿಮೆ ಗುಣಮಟ್ಟದ ವಸ್ತುಗಳನ್ನು ಹರಾಜು ಹಾಕುವ, ಮಾರಾಟ ಮಾಡುವ ಜವಾಬ್ದಾರಿ ಸ್ಟೋರ್ಸ್ ಅಧಿಕಾರಿಗೆ ಸೇರಿದ್ದಾಗಿತ್ತು.
ಆಳತೆ-ತೂಕ ಮಾಡಿ ಮಾರಾಟ ಮಾಡಿದ ದಾಸ್ತಾನನ್ನು ಗೇಟಿನಲ್ಲಿ ಸೆಕ್ಯೂರಿಟಿಯವರು ಬೇಕಾದರೆ ಚೆಕ್ ಮಾಡಲು ಅವರಿಗೆ ಅಧಿಕಾರವಿತ್ತು.
ಈಗ ನಾನು ಈ ಅಧಿಕಾರವನ್ನು ವಹಿಸಿಕೊಂಡಂದಿನಿಂದ, ನಾನು ಈ ಜವಾಬ್ದಾರಿಯನ್ನು ನನ್ನ ಆಪ್ತ ದೇಸಾಯಿಗೆ ವಹಿಸಿದ್ದೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದ ಸಂಗತಿ ನನ್ನನ್ನು ದಂಗು ಬಡಿಸಿತ್ತು.
ತತ್ ಕ್ಷಣ ಸ್ಟಾಟ್ ಇನ್‍ಸ್ಟೆಕ್ಷನ್ನಿಗೆ ನನ್ನ ಸೆಕ್ರೆಟರಿಯ ಜೊತೆಗೆ ಹೊರಟೆ. ಯಾವುದು ಆಗದಿರಲಿ ಎಂದು ದೇವರಲ್ಲಿ ಸಾವಿರ ಬಾರಿ ಪ್ರಾರ್ಥಿಸಿದ್ದೆನೋ ಅದೇ ಅನಾಹುತ ಜರುಗಿತ್ತು.
ದೇಸಾಯಿ, ತೂಕ ಮಾಡಿ ಲೋಡ್ ಮಾಡಿ ಕಳಿಸಿದ್ದ ಷೀಟ್ಸ್ ಗಳು ಸರ್ಟಿಫೈ ಮಾಡಿದ್ದಕ್ಕಿಂತ ಎರಡು ಕೆ. ಜಿ. ಹೆಚ್ಚಾಗಿದ್ದುದನ್ನು ಸೆಕ್ಯೂರಿಟಿಯವರು ಕಂಡು ಹಿಡಿದಿದ್ದರು.
ಮೂಲೆಯಲ್ಲಿ ಮುದುರಿ ನಿಂತಿದ್ದ ದೇಸಾಯಿ ನನ್ನನ್ನು ಕಾಣುತ್ತಲೇ ಹಿಡಿಯಾಗಿ ಹೋದ. ಮುಖ ಪಿಡಿಚಿಯಾಯಿತು. ಕಣ್ಣ ತುಂಬ ನೀರು ತುಂಬಿಕೊಂಡಿತು. ನಾನಿಂಥ ಸನ್ನಿವೇಶವನ್ನು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ..
ಅವನಿಗೆ ಮುಖಗೊಡಲಾರದೆ ನೇರವಾಗಿ ನನ್ನ ಛೇಂಬರಿಗೆ ಬಂದು ಕುಳಿತೆ. ಎರಡು ಮೂರು ಲೋಟ ಐಸ್ ವಾಟರ್ ಕುಡಿದರೂ ಹೊಟ್ಟೆಯುರಿ ಶಮನವಾಗಲಿಲ್ಲ.
ಇಡೀ ಫ್ಯಾಕ್ಟರಿಯ ಸಮುದಾಯದ ದೃಷ್ಟಿಯಲ್ಲಿ ದೇಸಾಯಿಯ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳುತ್ತ ಅವನಿಗಿಂತ ಹೆಚ್ಚು ನಾನೇ ನಡುಗಿ ಹೋದೆ. ಜೊತೆಗೆ ನನ್ನ ಅವನ ನಡುವಿನ ಸುಸಂಬಂಧದ ಬಗ್ಗೆ ಬಿಚ್ಚಿಕೊಳ್ಳಬಹುದಾದ ಊಹಾಪೋಹಗಳಿಗೆ ಒದ್ದೆಯಾದೆ.
ಈ ಫ್ಯಾಕ್ಟರಿಗೆ ಸೇರಿದ ನಂತರ ನನ್ನ ಹೃದಯ ತಲ್ಲಣಿಸುತ್ತಿರುವುದು ಇದು ಎರಡನೇ ಬಾರಿ. ನನ್ನ ಆತ್ಮೀಯ ಮಿತ್ರ ಮೆಹತಾ ನನ್ನನ್ನಗಲಿದುದರ ಗಾಯ ಮಾಯುವಷ್ಟರಲ್ಲೇ ನನ್ನ ನಂಬಿಕೆಯ ಕೋಟೆಯೊಳಗೆ ನೆಲೆಯೂರುತ್ತಿದ್ದ ದೇಸಾಯಿಯಿಂದ ವಂಚನೆ … ಮೋಸ… ನಂಬಿಕೆ ದ್ರೋಹ.
ಉಸಿರು ಉಬ್ಬಿ ಇಳಿಯಿತು.
ನನ್ನ ಅಂತರಾತ್ಮ ಅವನನ್ನು ಅಪರಾಧಿ ಎಂದು ಒಪ್ಪಲು ನಿರಾಕರಿಸುತ್ತಿದ್ದರೂ ಅವನು ಖೆಡ್ಡಕ್ಕೆ ಬಿದ್ದ ಮಿಕವೆಂಬುದು ಜಗಜ್ಜಾಹೀರಾಗಿತ್ತು.
ಆ ದಿನ ಪೂರಾ ನನ್ನ ಕೆಲಸ ಕುಡುಕನ ನಡಿಗೆಯ ರೀತಿ ಅಡ್ಡಾದಿಡ್ಡಿ. ಕುಳಿತ ರಿವಾಲ್ವಿಂಗ್ ಮೆತ್ತೆಯ ಕುರ್ಚಿ ಮುಳ್ಳಿನ ಸಿಂಬಿಯಂತೆ ಚುಚ್ಚಿ, ಸಿಡಿಯುತ್ತಿದ್ದ ತಲೆಯನ್ನೊತ್ತಿಕೊಳ್ಳುತ್ತ ಮನೆಗೆ ಬಂದುಬಿಟ್ಟೆ.
ನನ್ನ ದುಗುಡಗೊಂಡ ಮುಖ, ಕೆಂಡದ ಕಣ್ಣುಗಳನ್ನು ಕಂಡು ಶಾಲಿನಿ ಗಾಬರಿಯಾದಳು. ವಿಷಯ ತಿಳಿದ ಮೇಲಂತೂ ‘ಇದೇನ್ರೀ ಹೀಗಂತೀರಾ..’ ಎಂದು ಧೊಪ್ಪನೆ ಸೋಫದಲ್ಲಿ ಕುಸಿದಳು.
ನನಗೂ ಕೂಡ ಆಶ್ಚರ್ಯದ ಉದ್ಗಾರವನ್ನು ಹೊರಡಿಸುವುದನ್ನು ಬಿಟ್ಟರೆ ಬೇರೆ ಮಾರ್ಗ ಹೊಳೆದಿರಲಿಲ್ಲ.
ವಿಪರ್ಯಾಸವೆಂದರೆ, ದೇಸಾಯಿಯ ಅಪರಾಧ ಪ್ರಕರಣದ ಎನ್‍ಕ್ವೈರಿ ಆಫೀಸರ್ ಆಗಿ ನಾನೇ ನೇಮಕಗೊಂಡಿದ್ದೆ. ಈ ಪ್ರಕರಣದ ಸರಿಯಾದ ವಿಚಾರಣೆ ನಡೆಸಲು ಮೇಲಿನವರ ಆದೇಶ ನನ್ನ ನೆತ್ತಿಯನ್ನು ಕುಕ್ಕುತ್ತಿತ್ತು. ಸ್ನೇಹ-ಆತ್ಮೀಯತೆಯ ತಂತು ಒಂದೆಡೆ ಜಗ್ಗಿದರೆ, ಇನ್ನೊಂದೆಡೆ ಕರ್ತವ್ಯ – ಪ್ರಾಮಾಣಿಕತೆಗಳು ಸುತ್ತಿಗೆ ಪೆಟ್ಟು ಹಾಕುತ್ತಿದ್ದವು.
ಹಿಂದಿನ ಎಲ್ಲ ರೆಕಾರ್ಡುಗಳನ್ನೂ ಚೆನ್ನಾಗಿ ಪರಿಶೀಲಿಸಿ ನೋಡಿದೆ. ಸ್ಟಾಕ್ ತೆಗೆದುಕೊಂಡ ರಿಜಿಸ್ಟರಿಗೂ, ಮಾರಾಟ ಮಾಡಿದ ಲೆಕ್ಕಗಳಿಗೂ ಕೊಂಚವೂ ತಾಳೆಯಾಗುತ್ತಿರಲಿಲ್ಲ. ಲಕ್ಷಾಂತರ ರೂಪಾಯಿಗಳು ಖೋತಾ ಆಗಿದ್ದು ಸ್ಪಷ್ಟವಾಗಿ ಕಂಡು ಬರುತ್ತಿತ್ತು. ಆದ್ದರಿಂದ ನಾನು ತೆಗೆದುಕೊಂಡ ಬಿಗಿ ಕ್ರಮ – ಬಂದೋಬಸ್ತಿನ ಫಲವಾಗಿ ಅಪರಾಧಿಯೊಬ್ಬ ಬೋನಿಗೆ ಬಿದ್ದಿದ್ದ.
ಅಪರಾಧಿಯ ವಿಚಾರಣೆ ಪ್ರಾರಂಭವಾಯಿತು.
ದೇಸಾಯಿಗೆ ನನ್ನೆದುರು ನಿಂತಾಗ ಭೂಮಿ ಬಾಯಿ ಬಿಡಬಾರದೆ ಎನಿಸಿರಬೇಕು. ನೆಲಕ್ಕೆ ‘ಢೀ’ ಕೊಡುವಂತೆ ಅವನು ತಲೆಯನ್ನು ಕೆಳಗೆ ಹಾಕಿ ನಿಂತಿದ್ದ.
ಹತ್ತು ಪ್ರಶ್ನೆಗಳಿಗೆ ಒಂದು ಪದ ಉತ್ತರ ಕೊಡಲು ಅವನು ಹೆಣಗಾಡಿದ.
ಟನ್ ಗಟ್ಟಲೆ ಲೋಡಿನಲ್ಲಿ ಅಂಥ ಗಮನಾರ್ಹ ಪ್ರಮಾಣವಲ್ಲದ ಎರಡು ಕೆ.ಜಿ. ತೂಕದಷ್ಟು ಷೀಟ್ಸ್ ಹೆಚ್ಚಾಗಿದ್ದುದು ಮೇಲ್ನೋಟಕ್ಕೆ ಅವನ ನಿರ್ಲಕ್ಷ್ಯವನ್ನು ಸಾರುತ್ತಿತ್ತು. ಆದರೆ ಅದನ್ನವನು ಒಪ್ಪಿಕೊಂಡು ‘ತಪ್ಪೋಪ್ಪಿಗೆ’ ಪತ್ರ ಬರೆದುಕೊಟ್ಟಿದ್ದರೆ ಅವನ ಭವಿಷ್ಯವೇ ಬದಲಾಗಿ ಬಿಡುತ್ತಿತ್ತು.
ಆದರೆ, ದೇಸಾಯಿ ಹೆದರಿ ಕಂಗಾಲಾಗಿದ್ದರೂ-‘ನಾನೆಲ್ಲ ಸರಿಯಾಗೇ ತೂಕ ಹಾಕಿ ಕಳಿಸಿದ್ದೆ’-ಎಂಬ ಒಂದೇ ವಾದಕ್ಕೆ ಜೋತು ಬಿದ್ದದ್ದು ನನ್ನ ಸಹ ಅಧಿಕಾರಿಗಳನ್ನು ಕೆರಳಿಸಿರಬೇಕು.
‘ಇದು ಇವನ ಹಳೇ ಅಭ್ಯಾಸ… ಎಷ್ಟು ವರ್ಷಗಳಿಂದ ಇವರಿಂದ ನಮ್ಮ ಫ್ಯಾಕ್ಟರಿಗೆ ನಷ್ಟವಾಗಿದೆ… ಇವನನ್ನು ಮಾತ್ರ ಬಿಡೋದು ಬೇಡ… ಇವನ್ಮೇಲೆ ಕೇಸ್ ಛಾರ್ಜ್ ಮಾಡ್ಲೇಬೇಕು.’- ಎಂದು ಅವರ ಹಟ.
ಫ್ಯಾಕ್ಟರಿಯ ಆಸ್ತಿ ನಷ್ಟಕ್ಕೆ ಕಾರಣನಾಗಿದ್ದ ದೇಸಾಯಿ ಕೊನೆಯಲ್ಲಿ ತಪ್ಪಿತಸ್ಥನೆಂದು ತೀರ್ಮಾನವಾಯಿತು.
ನನ್ನ ಮನಸ್ಸಿನ ಮೂಲೆಯಲ್ಲೆಲ್ಲೋ ಕಿರುಮಿಡಿತವೊಂದು ಅನುಕಂಪದಿಂದ ಒಸರುತ್ತಿತ್ತು. ಆದರೆ ನಾನು ನಿಸ್ಸಹಾಯಕನಾಗಿದ್ದೆ.
ದೇಸಾಯಿಯ ಅವನತಿಗೆ, ರಾಶಿಗಟ್ಟಲೆ ಷೀಟ್ಸ್ ತೂಗುವಾಗಿನ ಅವನ ಸಣ್ಣ ಅಲಕ್ಷ್ಯ ಕಾರಣವೋ ಅಥವಾ ಇವನ ಪ್ರಾಮಾಣಿಕತೆ ತೊಡಕಾಗಿ ಕಂಡ ಮತ್ತಾರದಾದರೂ ಸಂಚು ಕಾರಣವೋ ನನಗೆ ಸ್ಪಷ್ಟವಾಗಲಿಲ್ಲ.
ದೇಸಾಯಿ ತನ್ನ ಅಪರಾಧದಿಂದ ಕೆಲಸ ಕಳೆದುಕೊಳ್ಳುವುದರೊಡನೆ ಫ್ಯಾಕ್ಟರಿಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳಿಂದಲೂ ವಂಚಿತನಾದ ದುರ್ಭಾಗಿಯಾದ. ಹಿಂದಿನ ಎಲ್ಲ ನಷ್ಟಗಳಿಗೂ ಅವನನ್ನೇ ಹೊಣೆಯನ್ನಾಗಿ ಮಾಡಿತ್ತು, ಅವನ ಈ ಒಂದು ಸಣ್ಣ ತಪ್ಪು. ಕಾರಣ ಇದೇ ವಿಭಾಗದಲ್ಲಿ ಹಣ ಲೂಟಿ ಹೊಡೆದ ಹಕ್ಕಿ ಹಾರಿಹೋಗಿತ್ತು!… ತೆವಳುತ್ತಿದ್ದ ಆಮೆಯಂತಿದ್ದ ದೇಸಾಯಿ ಸಿಕ್ಕಿ ಬಿದ್ದಿದ್ದ.
ಕೋತಿ ಮೊಸರನ್ನವನ್ನು ತಿಂದು ಮೇಕೆಯ ಮೂತಿಗೆ ಬಳಿದ ಕಥೆ ನನ್ನೆದೆಯುದ್ದಕ್ಕೂ ವ್ಯಾಪಿಸಿತ್ತು.
ದೇಸಾಯಿ ಹನಿದುಂಬಿದ ಕಣ್ಣುಗಳಿಂದ ತನ್ನ ಕುಟುಂಬದೊಡನೆ ಈ ಊರು ಬಿಡುವಾಗ ಶಾಲಿನಿ ಜೋರಾಗಿ ಅತ್ತುಬಿಟ್ಟಿದ್ದಳು. ನನ್ನ ಕಣ್ಣ ಹನಿ ಕಲ್ಲಾಗಿ ಹೆಬ್ಬಂಡೆಯಂತೆ ನನ್ನ ಭಾವಗುಹ್ವರ ಛಿದ್ರ ಚೂರಾಗುವಂತೆ ರಪ್ಪನೆ ಅಪ್ಪಳಿಸಿತ್ತು.
ಇಂದು ನನ್ನ ಹೃದಯದ ಎರಡು ಕವಾಟಗಳೂ ಖಾಲಿಯಾಗಿದ್ದವು, ಅದರಲ್ಲಿ ಮನೆಮಾಡಿಕೊಂಡಿದ್ದ ಮೆಹತಾ ಮತ್ತು ದೇಸಾಯಿ ಇಬ್ಬರೂ ಅದನ್ನು ತೆರವಾಗಿಸಿ ದೂರ ಸಾಗಿದ್ದರು.
ದೇಸಾಯಿಯ ದೌರ್ಭಾಗ್ಯಕ್ಕೆ, ನನ್ನ ಹೃದಯ ಸ್ಪೋಟಿಸುವ ಆಘಾತಕ್ಕೆ ಕಾರಣ ಬೇರಾರೂ ಆಗಿರದೆ, ಹಾರಿಹೋದ ಹಕ್ಕಿ ನನ್ನ ಆತ್ಮೀಯ ಮೆಹತನೇ ಆಗಿದ್ದ.
***
2 comments
ಕತೆಯಲ್ಲಿ ಹೊಸತನವಿಲ್ಲದಿದ್ದರೂ ಬಿರುಸಿನ ಓಟವಿದೆ.
ಎರಡು ಕೆ ಜಿ ಶೀಟ್ಸ್ ತೂಕದಲ್ಲಿ ವ್ಯತ್ಯಾಸ ಬಂದಿದ್ದು, ಕತೆಯಲ್ಲಿ ಮುಖ್ಯವಾದ ಸಂಗತಿ. ಅದ್ಯಾವ ಮೆಟೀರಿಯಲ್? ಸಾವಿರಾರು ಟನ್ ವಹಿವಾಟಲ್ಲಿ ಅಷ್ಟೊಂದು ದೊಡ್ಡ ನಷ್ಟವನ್ನು ತಂದದ್ದು? ಕಬ್ಬಿಣವಾಗಿದ್ದರೆ ಆ ವ್ಯತ್ಯಾಸ ತೀರಾ ನಗಣ್ಯ.
ಕತೆಗೆ ತಿರುವು ತಂದಿರುವ ಘಟನೆಯಲ್ಲಿ ನೈಜತೆಯಿಲ್ಲದಿರುವದರಿಂದ ಬಳಲಿದೆ.
ಧನ್ಯವಾದಗಳು.