Image default
Short Stories

ಹೊದಿಕೆಗಳು

ನನಗಾಗ ಹದಿನೆಂಟು-ಇಪ್ಪತ್ತರ ಹರೆಯ. ಕನ್ನಡ ಎಂ.ಎ. ವಿದ್ಯಾರ್ಥಿ. ಅದಾಗಲೇ ವಿವಿಧ ಬಗೆಯ ಕಥೆಗಳನ್ನು ಬರೆಯುತ್ತಿದ್ದೆ. ಆ ಪೈಕಿ ನಾನು ಬರೆದ ಪ್ರಾಯೋಗಿಕ ಕಥೆ ಇದು- ಸುಮಾರು ನಲವತ್ತು ವರ್ಷಗಳಿಗೂ ಹಿಂದೆ ಬರೆದ ಈ ಕಥೆ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಓದಿ…ನಿಮ್ಮ ಅಭಿಪ್ರಾಯ ಹೇಳಿ.

ಮೆತ್ತನೆಯ ಇಡ್ಲಿಯನ್ನು ಬಡಿಸಿದ ನೀಳ ಕೈ ಬೆರಳುಗಳನ್ನೇ ದಿಟ್ಟಿಸಿದೆ. ಬಳೆ ತುಂಬಿದ ದುಂಡು ಕೈ. ಇಡ್ಲಿಗಿಂತ ಇವಳ ಹಸ್ತ ಇನ್ನೂ ಮೃದುವಾಗಿರಬಹುದೇ? ಹಿಸುಕಿ ನೋಡಲೇ ಎಂದುಕೊಳ್ಳು   ತ್ತಿದ್ದಂತೆ ಇನ್ನೊಂದು ಕೈ ಮುಂದೆ ಬಂದಿತ್ತು. ಬಳೆ ತೊಟ್ಟ ಕೈಗಳ ಸಾಲು. ತಲೆ ಎತ್ತಿ ನೋಡಿದೆ. ಅಬ್ಬಾ ಎಷ್ಟೊಂದು ಹುಡುಗಿಯರು! ಬುದ್ಧಿ ಇಲ್ಲದ ಚೆಲುವೆಯರು. ಇಡ್ಲಿ ಬಡಿಸುವ ಬದಲು ಅವರು ತಮ್ಮ ಕೈಗಳನ್ನೇ ನನಗೆ ಬಡಿಸಿದ್ದರೆ-

ಬುಡಕ್ಕನೆ ಬಿದ್ದ ಬಿಸಿನೀರು ಉಸಿರು ಕಟ್ಟಿಸುತ್ತದೆ. “ಊ್ಞ ಊ್ಞ” ಎಂದು ನೆನೆದ ತಲೆಯನ್ನು ಅಡ್ಡಡ್ಡಕ್ಕೆ ಅಲ್ಲಾಡಿಸುತ್ತ ತತ್‍ಕ್ಷಣ ಮೂಗನ್ನು ಹಿಂಡಿಕೊಳ್ಳುತ್ತ  ಎದ್ದುನಿಂತೆ. “ಡಬ್” ಎಂದು ಬೋಸಿ ತಲೆಗೆ ತಗುಲಿತು. “ಹಾ” ಎಂದು ಬೊಬ್ಬೆ ಹಾಕಿದೆ. ಅಮ್ಮ ಗಾಬರಿಯಾದಳು. ಒಂದು ತಂಬಿಗೆ ನೀರು ಹಾಕಿ ಇನ್ನೊಂದು ತಂಬಿಗೆ ನೀರು ಸುರಿಯುವುದರಲ್ಲಿ ದಡಕ್ಕನೆ ಎದ್ದಿದ್ದೆ.  ಬೋಸಿ ತಗುಲಿ ಅಮ್ಮನ ಮುಂಗೈ ಎರಡು ಬಳೆಗಳು ಚಟ್ಟಾಗಿದ್ದವು. ಅವಳ ಮುಖ ಪೆಚ್ಚಾಗಿತ್ತು. ಎರಡು ನಿಮಿಷ ಹಾಗೇ ನನ್ನನ್ನೇ ಗುದ್ದುವ ನೋಟದಲ್ಲಿ ನೋಡಿದಳು. ತೆರೆದ ಕಿಟಕಿಯಿಂದ ನುಗ್ಗಿದ ಕೊರೆಯುವ ಗಾಳಿ ನನ್ನ ಮೈಯನ್ನು ಸವರಿಹೋಯಿತು. ತೆಳ್ಳಗೆ ನಡುಗಿದೆ. ಚಳಿ ಕುಂಕುಳ ಸಂದಿಯಿಂದ ಕೆಳಗಿಳಿಯಿತು. ತುಂಡು ಪಂಚೆಯನ್ನು ಹಿಂಡಿಕೊಳ್ಳುತ್ತ ತಲೆ ಎತ್ತಿದೆ. ಅಮ್ಮ ಜೋಲು ಮುಖ ಹಾಕಿಕೊಂಡಿರೋದು ನೋಡಿ ಮುಕ್ಕಳಿಸಿ ಬರುತ್ತಿದ್ದ ನಗುವನ್ನು ತಡೆದು ‘’ಎರಡು ಬಳೆಗೋಸ್ಕರ ಯಾಕಮ್ಮ ಒದ್ದಾಡ್ತೀ? ಬೇಗ ನೀರು ಹಾಕು… ಆಮೇಲೆ ಬೇಕಾದರೆ ಇನ್ನೂರು ಬಳೆ ತೊಗೊಂಡ್ರಾಯ್ತು’’ ಅಂತ ಅನ್ನೋಣ ಎಂದು ನಾನು ಬಾಯಿ ಬಿಡುವಷ್ಟರಲ್ಲಿ ಅಮ್ಮನ ಬಾಯಿ ಅರಳಿತು. ಮಾತು ಕೋಪದ ಲೇಪನ ಪಡೆದಿತ್ತು.

 “ಥೂ ಹಾಳು ಕತ್ತೆ”- ದಿನ ನಿತ್ಯದ ಸಂಭೋದನೆ ನನ್ನನ್ನು ಅಚ್ಚರಿಯಲ್ಲಿ ತಳ್ಳಲಿಲ್ಲ.

‘’ಅಪಶಕುನ ಅಲ್ವೇ ತುಂಗಮ್ಮ?”ಅಮ್ಮ ಕಣ್ಣಿಗೆ ಸೆರಗಿನ ಕೊನೆಯನ್ನು ಒತ್ತುತ್ತ ಮೆಲ್ಲಗೆ ಅಂದು  ಹೊರಗೆ ಹೊರಟಾಗಲೇ ನನಗೆ ಸುತ್ತಲೂ ನಿಂತಿದ್ದ ಮುದಿ ಮುತ್ತೆದೆಯರತ್ತ ಗಮನ ಹರಿದಿದ್ದು. ಇವರೆಲ್ಲ ಯೌವನದಿಂದ ತುಳುಕುವ ಹುಡುಗಿಯರಾಗಿದ್ದಿದ್ದರೆ… “ಹಾಯ್” ಎಂದು ಎದೆ ನೀವಿಕೊಂಡೆ. ನಾಚಿಕೆ ಎನಿಸಿತು. ತತ್ ಕ್ಷಣ ತುಂಡುಪಂಚೆಯನ್ನು ಮಂಡಿಯವರೆಗೂ ಎಳೆದುಕೊಳ್ಳುವ ಪ್ರಯತ್ನ ಮಾಡುತ್ತ ನೋಡ್ತೀನಿ, ಎಲ್ಲ ತಲೆನರೆತ ಹೆಂಗಸರು.

ಅಲ್ಲಿ ನಿಂತಿದ್ದವರ ಪೈಕಿ ಒಬ್ಬ ಹೆಂಗಸು “ಬಚ್ಚಲಿಗೆ ಇಳಿಯಪ್ಪ ನೀರು ಹಾಕ್ತೇನೆ”ಎಂದಿತು. ನನಗೆ ಕೋಪ ಸಿಡಿಯಿತು.

“ಇದ್ಯಾವುದು ಇದು ಮುದಿಗೊಡ್ಡು ಹೇಳದೆ ಕೇಳದೆ ಬಚ್ಚಲು ಮನೆಯಲ್ಲಿ ತೂರಿಕೊಂಡಿದೆ. ಒದ್ದು ಹೊರಗೆ ಹಾಕಬೇಕು… ನಡೀರೇ ಆಚೆಗೆ, ನಿಮಗೇನ್ರೇ ಇಲ್ಲಿ ಕೆಲಸ” ಎಂದು ಎದುರಿಗೆ ಕಿಮಿ ಕಿಮಿ ನೋಡುತ್ತ ನಿಂತಿದ್ದವರನ್ನು ತಳ್ಳೋ ನೋಟದಿಂದ ತಿವಿದೆ.  

“ಈ ಹಾಳು ಅಮ್ಮನಿಂದ್ಲೇ ಇಷ್ಟೆಲ್ಲ ಫಜೀತಿ”- ಅಂತ, ಹೊರಗೆ ಮುಸಿಮುಸಿ ಅಳುತ್ತಿರಬಹುದಾದ ಅಮ್ಮನನ್ನು ಶಪಿಸಿದೆ. ಮತ್ತೆ ಉಸಿರು ಕಟ್ಟಿಸುವ ಬಿಸಿನೀರು ಮೈಮೇಲೆ ಬಿದ್ದಾಗ ಹಿಂದಿನಂತೆ ರಾದ್ಧಾಂತವಾದೀತೆಂದು ತೆಪ್ಪನೆ ಜಲಸ್ತಂಭನ ವಿದ್ಯೆ ಸಾಧಿಸಿದವನ ಹಾಗೆ ಕುಕ್ಕರಿಸಿದ್ದೆ. ಅಂತೂ ಸ್ನಾನ ಅನ್ನೋ ಛಾಪ್ಟರ್ ಮುಗಿಯಿತು.

ಮುಂದಿನದಕ್ಕೆ ಸಿದ್ಧವಾದೆ. ಹಸೆಮಣೆಯ ಮೇಲೆ ನನ್ನ ಅಕ್ಕಪಕ್ಕ ಅಣ್ಣ ಅಮ್ಮ ಕೂತಿದ್ರೂ ನನ್ನದೇನೇ ಇದು ಮದುವೆ?!!…ಅಂತ ಇದ್ದಕ್ಕಿದ್ದ ಹಾಗೆ ಅನುಮಾನ ಬಂದಿತ್ತು.ಇದೇ ಹಸೇಮಣೆಯ ಮೇಲೆ ಎಷ್ಟೋ ದಂಪತಿಗಳನ್ನು ನೋಡಿದ್ದೆ ನಿಜ. ಅವರ ಮದುವೆ ಅನ್ನೊಂದು ಢಾಳಾಗಿ ಕಣ್ಣಿಗೆ ಎದ್ದು ಕಾಣುತ್ತಿತ್ತು. ನಾನೂ ಹಾಗೇ ಹಸೆಮಣೆಯ ಮೇಲೆ…..ಎಲ್ಲ ಕಲ್ಪಿಸಿಕೊಂಡು ಒಂದುನೂರು ಮದುವೆಯಲ್ಲೂ ನೂರುಸಲ ನಾನು ಹಸೆಮಣೆ ಏರಿದ್ದೆ. ಬರೀ ನೋಡೋ ಛಾನ್ಸ್ ಅಷ್ಟೇ ನನ್ನದೇನೋ? ಯಾಕೋ ನನ್ನ ಮದುವೆ ಆಗೋದೇ ಇಲ್ಲವೇನೋ ಅಂತ ಸಂಶಯ ಇಣುಕಿ, ಅದೇ ಬಲವಾಗಿತ್ತು.

ದೂರದ ಕುರ್ಚಿಯಲ್ಲಿ ಮೈಚೆಲ್ಲಿ, ನೆರಿಗೆ ಚಿಮ್ಮುತ್ತ ಕುಲುಕುಲು ನಗುತ್ತ ಓಡಾಡುತ್ತಿದ್ದ ಲಲನೆಯರನ್ನೆಲ್ಲ ಮನಸ್ಸಿನಲ್ಲೇ ಅದೆಷ್ಟು ಬಾರಿ ತಬ್ಬಿದ್ದೆ. ಅದಕ್ಕಾಗೇ ಯಾವ ಮದ್ವೇ ಅಂದ್ರೂ ನಾನು ತಪ್ಪಿಸಿಕೊಳ್ತಾನೇ ಇರ್ಲಿಲ್ಲ. ಸೊಗಸುಗಾರ ಪುಟ್ಟಸಾಮಿ ಥರ ಸಿಂಗರಿಸಿಕೊಂಡು ಕಣ್ಣಿಗೆ ಓವರ್ ಟೈಮ್  ಕೆಲಸಕೊಟ್ಟು ಚೆನ್ನಾಗೇ  ದುಡಿಸಿಕೊಳ್ಳುತ್ತಿದ್ದೆ. ಆದರೆ ಈಗ …….?

“ ಹೌ ಸ್ಯಾಡ್ ” ಎಂದು ಮನಸ್ಸಿನಲ್ಲೇ ಮರುಗಿದೆ. ಆ ಕೊನೆಯಲ್ಲಿ ಕುಳಿತ ಹುಡುಗನ ನೋಟ ಮಹಡಿಯ ಮೇಲೆ ನಿಂತಿದ್ದ ಹುಡುಗಿಯತ್ತಲೇ ನೆಟ್ಟಿರುವುದನ್ನು ಕಂಡು ರೇಗಿತು. ಹದ್ದಿನ ಕಣ್ಣು ಅವನದು. ಧಡಾರನೆ  ಎದ್ದು ಹೋಗಿ ಅವನ ತಲೆಗೊಂದು ಮಟುಕಿ, ಅವನನ್ನು ದೂಡಿ ನಾನು ಆ ಕುರ್ಚಿಯಲ್ಲಿ ಆರಾಮ ಭಂಗಿಯಲ್ಲಿ ಕೂತು ಸಿಗರೇಟು ಎಳೀತಾ ಮಹಡಿ ಕಡೆ ದೃಷ್ಟಿ ಕೀಲಿಸಬೇಕು ಎನ್ನಿಸುತ್ತೆ, ಎದ್ದು ಹೋಗಲೇ?

“ಕೈ ಹಿಡಿಯಪ್ಪ…….ತೊಗೋ? “- ಪುರೋಹಿತರ ಗೊಗ್ಗರು ಗಂಟಲು ನನ್ನನ್ನು  ಬಡಿದು ಎಚ್ಚರಗೊಳಿಸಿತು.

 “ಆ..ಹಾಂ ” ಎನ್ನುತ್ತ ಮೈ ಒಂದು ಸಲ ಝೂಡಿಸಿ ಕೈ ಬಟ್ಟಲಾಗಿ ಮಾಡಿ ಮುಂದೆ ನೀಡಿದೆ.

“ನನ್ನ ತೊಡೆ ಮೇಲ್ಯಾಕೆ ಕೈ ಚಾಚುತ್ತೀಯಪ್ಪಾ……ಅಲ್ಲಿ ….ಎದುರಿಗೇ’’ ಅಂದರು ಅಣ್ಣ. ಕೈ ಒಳಗೆ ಬಿದ್ದ ನೀರನ್ನು ಆ ಪುರೋಹಿತನ ಮುಖಕ್ಕೆ  ಎರಚೋಣ ಅನ್ನಿಸಿತ್ತು. ಕತ್ತಿನಿಂದ ಕೆಳಗೆ ನುಗ್ಗುತ್ತಿದ್ದ ಹೊಸ  ಜನಿವಾರವನ್ನು ಕೆಳಗೆ ಹೋಗಗೊಡವೆ ಅಲ್ಲೇ ನೇಣು ಹಾಕಿಕೊಂಡು ಸತ್ತಾದರೂ ಹೋಗಬಾರದೆ ನಾನು ಅಂತ ಪಿಟಿ ಪಿಟಿಸಿದೆ.

“ಹುಡುಗ ಯಾಕೋ ಬೇಸರ ಮಾಡಿಕೊಳ್ತಾನೆ…….ಎಲ್ಲ ಚುಟುಕದ್ರಲ್ಲೇ ಮುಗಿಸಿಬಿಡ್ತೀನಿ ರಾಯ್ರೇ”-ಪುರೋಹಿತರ ಅನುಕಂಪದ ನುಡಿ.

ಕಾಶೀಯಾತ್ರೆಗೆ ಹೊರಗೆ ಕಾಲಿಟ್ಟಾಗಲೇ ಕಣ್ಣಿನ ಬಲ್ಪು ನೂರು ಕ್ಯಾಂಡಲ್‍ನಷ್ಟು ಪ್ರಜ್ವಲಿಸಿದ್ದು! ಮಲ್ಲಿಗೆ ಮುಡಿದ ಆ ನೀಲಿ ಧಾವಣಿ ಹುಡುಗಿ ಒಂದು ಸಲ ಕಂಡವಳು ಮರೆಯಾದಳು. ದರಿದ್ರದವರು  ಯಾರೋ ಅಡ್ಡಾದರು.

“ ಆ ಹಾಳಾದ ಹುಡುಗೀಗಾದ್ರೂ ಬುದ್ಧಿ ಬೇಡವೇ? ಬಂದು ಎದುರಿಗೆ ನಿಲ್ಲಬೇಕು ಅಂತ’’  ಅಂದ ಹಾಗೆ ಇವಳು ನೆನ್ನೇನೆ ಏಕೆ ಕಾಣಿಸಲಿಲ್ಲ, ಏನು ಬಂದಿತ್ತು ಅಂಥಾ ರೋಗ”

ಮನಸ್ಸಿನಲ್ಲೇ ಸಿಡುಕಿಕೊಂಡು ಗುಂಪಿನಲ್ಲಿ ಸ್ವಲ್ಪ ಕಾಣುತ್ತಿದ್ದ ಅವಳತ್ತ ದೃಷ್ಟಿ ನುಗ್ಗಿಸಿದೆ.

ಕಾಲು ಹಿಡಿದು ಯಾರೋ ಜರ್ರನೆ ಎಳೆದಂತಾಯಿತು. ಎಲಾ ಯಾರಿವರು!?… ಗುರುತು ಹತ್ತಲಿಲ್ಲ. ಬೆಳ್ಳಿ ತಂಬಿಗೆಯಿಂದ ನೀರು ಸುರಿದು ಕಾಲು ತೊಳೆಯುತ್ತಿದ್ದಾರೆ… ಹಾಗ್ಯಾಕೆ ಮಾಡುತ್ತಾರೆ? ಹುಡುಗಿಯ  ತಂದೆ ತಾಯಿಗಳು ಹೀಗೆ ಮಾಡೋದು ಪದ್ಧತಿ. ಬಹುಶಃ ಅವರೇ ಇರಬೇಕು. ಅವರನ್ನು ಝೂಡಿಸಿ ಅತ್ತ ದೂಡಿ  ಆ ನೀಲಿ ಧಾವಣಿಯ  ಹುಡುಗಿ ಬಂದು ಮೆತ್ತನೆ ತನ್ನ ಹಸ್ತಗಳಲ್ಲಿ ನನ್ನ ಕಾಲನ್ನು ಸವರಿ ಹಾಲಿನಲ್ಲಿ ತೊಳೆದರೆ ಎಂಥ ಸುಖಾನುಭವ……ಯಾರು ಏನು ಬೇಕಾದ್ರೂ ಅಂದುಕೊಳ್ಳಲಿ “ ಐ ಡೋಂಟ್ ಕೇರ್ ‘’ ಅಂದುಕೊಂಡು ಎದುರಿಗೆ ಬಂದು ನಿಂತ ಅವಳನ್ನು ನಾಚಿಕೆಯಿಲ್ಲದೆ ನೋಡಿದೆ.

 “ಅಬ್ಬಾ ಎಷ್ಟು ಚೆನ್ನಾಗಿದ್ದಾಳೆ! ಹೆಣ್ಣಿನ ಕಡೆಯವಳೇ ಇರಬೇಕು, ನಮ್ಮ ಕಡೆಯಾಗಿದ್ರೆ ಇಷ್ಟು ದಿನ ನನ್ನ ಕಣ್ಣಿಂದ  ಹೇಗೆ ತಪ್ಪಿಸಿಕೊಂಡಿರುತ್ತಿದ್ದಳು. ? ಅಂದಹಾಗೆ ಈ ಹಾಳು ಮೂದೇವಿ ಬೀಗರಿಗೆ, ಅವರು ಹೆಣ್ಣು ತೋರಿಸೋ ದಿನಾನೇ ಈ ಹುಡುಗೀನ ನಮ್ಮನೆಗೆ  ಕರ್ಕೊಂಡು ಬರಕ್ಕೆ ಏನು ಧಾಡಿಯಾಗಿತ್ತು?

ಎಂಥ ಮೋಸ! ತಮ್ಮ ಕಡೆ ಇಂಥ ಚೆಂದುಳ್ಳಿ ಹೆಣ್ಣು ಇರುವುದನ್ನು ತಿಳಿಸೇ ಇಲ್ಲವಲ್ಲ… ಅವತ್ತೇ ಕರ್ಕೊಂಡು ಬರಕ್ಕೇನಾಗಿತ್ತು ಇವರಿಗೆ ಧಾಡಿ- ಅಂತ ಬೀಗರ ಮೇಲೆ ಕೋಪನುಗ್ಗಿ ಬಂತು.

 “ನೀವ್ಯಾಕೆ ಕರ್ಕೊಂಡು ಬರ್ಲಿಲ್ಲ ಇವಳ್ನ?” ಅಂತ ಜೋರಾಗಿ ದಬಾಯಿಸೇ ಬಿಡೋಣ ಅಂತ ಎದ್ದುನಿಂತೆ. ಹೇಗೂ ಇದು ನನ್ನ ಮದುವೆ ತಾನೇ, ಎಲ್ಲ ಅಳಿಯಂದಿರು ಮದುವೆ ಮನೆಯಲ್ಲಿ ಜೋರು ನಡೆಸಿದ್ರೆ ನಡದೇ ನಡೆಯುತ್ತೆ…… ನಾನೂ ಕೇಳ್ತೀನಿ. ಆಗ ಅವರು ಬಂದು ಕಾಲಿಗೆ ಬೀಳಬಹುದು. ಆಗ ನಾನೇನು ಹೇಳಲಿ? ಈಗಲಾದರೂ ಈ ಹುಡುಗಿಯನ್ನು ತಂದು ನಿಲ್ಲಿಸಿ ಪರವಾಗಿಲ್ಲ ಎನ್ನಲೇ?

ಆ ಹುಡುಗಿ ಕಿಲಕಿಲನೆ ನಕ್ಕಳು. ನನ್ನ ಮೈ ಮೇಲೆ ಕಚಗುಳಿಯ ಹರಿದಾಟ. ಓಡಿಹೋಗಿ ಅವಳನ್ನು ಬಳಸಿಕೊಂಡು “ಎಷ್ಟು ಮುದ್ದಾಗಿ ನಗ್ತೀಯೇ ಹುಡುಗಿ” ಎಂದು ಅವಳ ಹೂಗೆನ್ನೆಗೆ ತುಟಿ ಒತ್ತಿದರೆ ಹೇಗೆ?

ಫೋಟೋ ಫ್ಲ್ಯಾಷ್ ಬೆಳಕು ಕಣ್ಣನ್ನು ಚುಚ್ಚಿತು. ಸುತ್ತಲೂ ಕಬ್ಬಿಣದ ಸರಳುಗಳಂತೆ ನಿಂತ ಜನ. ಅವರನ್ನೆಲ್ಲ ಹಿಂದೀ ಸಿನಿಮಾ ಹೀರೋವಿನಂತೆ “ಡಿಷುಂ ಡಿಷುಂ” ಎಂದು ಪೆಟ್ಟುಗಳನ್ನು ಕೊಟ್ಟು ಅವಳನ್ನು ಎಗರಿಸಿಕೊಂಡು  ಕುದುರೆ ಹತ್ತಿ ನಾಗಾಲೋಟ ಕಿತ್ತಿದರೆ.ಹೇಗೆ ….?

 ಕೈ ಎತ್ತಲು ಪ್ರಯತ್ನಿಸಿದರೆ ಆಗಲಿಲ್ಲ. ತೋಳಿನಲ್ಲಿ ತೂಗಾಡುತ್ತಿದ್ದ ಜೋಳಿಗೆ, ಕೈಯಲ್ಲಿದ್ದ ಕುಸುರಿಗೆಲಸ ಮಾಡಿದ ಬೀಸಣಿಗೆ, ತೆಂಗಿನಕಾಯಿ, ಬೆತ್ತ ಭಾರವಾಯಿತು.

ಅಂತರಪಟ ಕೊಲೆಪಾತಕನಂತೆ ಮುಂದಿನ ನೋಟ ಮರೆಮಾಡಿ ಮೈಹರಡಿ ನಿಂತಿತ್ತು.     “ಈ ಹಾಳಾದವಳು ನೆನ್ನೆಯಿಂದ ಎಲ್ಲಿ ತಲೆ ಮರೆಸಿಕೊಂಡಿದ್ದಳು?” ಎಂದು ಮೈ ಉರಿಯುತ್ತಿತ್ತು.

ಈಗಲೂ ಏನಾಯಿತು ಅವಳನ್ನು ಎಳೆದು ತಂದು ಪಕ್ಕಕ್ಕೆ ನಿಲ್ಲಿಸಿಕೊಂಡರಾಯಿತು ಅಂದುಕೊಂಡೆ. ಅಂತರಪಟದ ಕೆಳಗಿನಿಂದ ಗೋರಂಟಿ ಬಳೆದ ಎರಡು ಕಾಲುಗಳು ಕಾಣಿಸಿದವು. ಈ ಕಾಲಿನ ದೇಹವನ್ನು, ಮುಖವನ್ನು ನೋಡುವ ಆಸೆ ಎದ್ದು ಕುಣಿಯಿತು. ಅದರ ಮುಖ ಹೇಗಿರಬಹುದು? ನೆನಪಿಗೆ ಬರಲಿಲ್ಲ. ತಾನೇ ಅಲ್ಲವೇ ಈ ಹುಡುಗಿಯನ್ನು ನೋಡಿ ಒಪ್ಪಿಗೆ ತಿಳಿಸಿದ್ದು. ಅರೇ ಈ ದರಿದ್ರ ಹುಡುಗೀ ಮುಖ ಯಾಕೆ ನೆನಪಿಗೇ ಬರ್ತಿಲ್ವಲ್ಲಪ್ಪ …! ಹೇಗಿದ್ದಾಳು?… ತಲೆ ಕೆರೆದುಕೊಂಡೆ. ಥೂ ಅವತ್ತೇ ಚೆನ್ನಾಗಿ ತುಂಬ ಹೊತ್ತು ಇವಳನ್ನು ನೋಡಿದ್ರೆ ಜ್ಞಾಪ್ಕ ಇರ್ತಿತ್ತು. ಎಲ್ಲೋ ಹತ್ತು ನಿಮಿಷ…. ಗಾಂಧೀಬಜಾರ್ ಸರ್ಕಲ್‍ನಲ್ಲಿ ಬಸ್ ಕಾಯುವ ಹುಡುಗಿಯರನ್ನು ಕಂಡಷ್ಟು  ಹೊತ್ತು. ಅಷ್ಟೇ..ಅವರಿಗೂ ಇವಳಿಗೂ ಏನು ವ್ಯತ್ಯಾಸ? ಅವರು ಬಸ್ ಹಿಡಿದು ಹೋದರು. ಇವಳು ರಂಗು ಹಚ್ಚಿಕೊಂಡು ಎದುರುನಿಂತಿದ್ದಾಳೆ. ಯಾಕೋ ಬೇಸರ ಬಡಿಯಿತು. ಇವಳನ್ನೂ ಬಸ್ ಹತ್ತಿಸಿಯೇ   ಬಿಡಬೇಕಿತ್ತು ಅಥವಾ ಮುಂದಿನ ಸ್ಪಾಪ್‍ಗಾದ್ರೂ ಕಳುಹಿಸಿಬಿಡಬೇಕಿತ್ತು; …ಅಥವಾ ತಾನಾದ್ರೂ ಬೇರೆ ಸರ್ಕಲ್ ಹುಡುಕಿಕೊಂಡು ಹೋಗಿದ್ರೆ ಸೊಗಸಿತ್ತು….

ಮನಸ್ಸು ಒಂದೇ ಸಮನೆ ಲಾಗಾ ಹಾಕುತ್ತಿತ್ತು. ಥತ್ ಇದರ ಮುಖ ಹೇಗಿದೆ? “ಪರ್” ಅಂತ ಎದುರಿಗಿದ್ದ ಬಟ್ಟೆ ಹರಿದು ಅವಳ ಮುಖ ತಿನ್ನೋ ಹಾಗೆ, ಎಂದೆಂದೂ  ಮರೆಯದ ಹಾಗೆ, ಸದಾ ನೆನಪಿನಲ್ಲೇ ಕುಕ್ಕರಿಸೋ ಹಾಗೆ ದಿಟ್ಟಿಸಲೇ? ಅಂತೂ ಯಾರೋ ಒಬ್ಬಳನ್ನು ಮದುವೆಯಾಗಲೇಬೇಕು. ಸರಿ, ಯಾರಾದರೇನಂತೆ? ಎಲ್ಲಾ ಹುಡುಗಿಯರ ಹಾಗೆ ಇವಳಿಗೂ ಮೂಗು, ಕಣ್ಣು, ಬಾಯಿ ಇರಲೇಬೇಕು, ಇದರ ಬಗ್ಗೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ?”

ಅಂದಹಾಗೆ ಆ ನೀಲಿ ಧಾವಣಿ ಹುಡುಗೀಗೆ ಎಷ್ಟು ಜಂಭ?… ಕಾಣಿಸಿಕೊಂಡ್ರೆ ನಾನೇನು ತಿಂದು ಹಾಕ್ತೇನೆಯೇ?… ನಾನು ಕಾಣದ ಅಪರೂಪದ ವಸ್ತುವೇ ಇದು! ರೂಪಾ, ಲೀನಾ, ನಿಶಾ, ಸಿಗ್ಮಾ ಇನ್ನೂ ಯಾರ್ಯಾರೋ ನನ್ನ ಜೊತೆ ತಿರುಗಾಡದವರ್ಯಾರು? ಅವರಲ್ಲೇ ಯಾರನ್ನು ಕರೆದಿದ್ರೂ ಅವರು ಒಂದು ಸಂತೋಷವಾಗಿ ನನ್ನ ಪಕ್ಕ……….ಯಾಕೆ ನನ್ನ ತೊಡೇ ಮೇಲೇನೇ ಬಂದು ಕೂತ್ಕೊತಿದ್ರು…….ಈ ನೀಲಿ ಧಾವಣಿಗೆ ಮಾತ್ರ ಮಹಾ ಕೊಬ್ಬು……. ಮಧೂನ ಮದುವೆಯಾಗೇ ಬಿಡೋಣ ಅಂದುಕೊಂಡಿದ್ದಾಗ ಆ ಲೀನಾ ಬಂದು ನನ್ನ ಸ್ನೇಹ ಮಾಡಿದ್ದು. ಆಗ್ಯಾಕೋ ಮಧು ಮುಖ ಕಂಡರೆ ಓಕರಿಕೆ ಬಂದು ಲೀನಾಳೇ ನನ್ನ ಎಂದೆಂದಿನ ಮಡದಿ ಅಂತ ತೀರ್ಮಾನ ಮಾಡಿಬಿಟ್ಟಿದ್ದೆ. ಆದರೆ ಆ ಹಾಳು ಸುಂದರಿ ರೂಪ, ನನ್ನನ್ನು ಸೆರೆ ಹಿಡಿದೇ ಇದ್ದಿದ್ರೆ ನಾನು ಏನಾಗುತ್ತಿದ್ದೆನೋ?…ಅಷ್ಟರಲ್ಲಿ ಸಿಗ್ಮಾ, ಅವಳಿಂದ ಶಿಲ್ಪ-ರಾಧಿಕ ಹೀಗೆ ನನ್ನ ವರ್ಗ ಎಲ್ಲಿಂದ ಎಲ್ಲೆಲ್ಲಿಗೋ …….? ಆದರೆ ಅಪ್ಪಿತಪ್ಪಿ ಒಮ್ಮೊಮ್ಮೆ ನಾನು  ಯೋಚಿಸುತ್ತಾ ಕೂತರೆ ನನ್ನ ಎದೆ ಒಡೆಯುತ್ತಿತ್ತು. ಹೌದು,  ನಾನು ಯಾರನ್ನು ಪ್ರೀತಿಸುತ್ತೇನೆ?!…ಬಡ್ಡಿಮಗಂದು ನನ್ನ ಮನಸ್ಸು ನನಗೇ ಅಗೋಚರ!!… ಒಬ್ಬರನ್ನು ನಾನು ಮನಸಾರೆ ಪ್ರೀತಿಸ್ತೀನಿ ಅಂತ ಮನವರಿಕೆಯಾಗುವುದರಲ್ಲಿ ಪ್ರೇಮ ಏರುವುದರ ಬದಲು ಇಳಿಮುಖ…. ಓ ನಾನು ಇವಳನ್ನಲ್ಲ ಪ್ರೀತಿಸೋದು…..ಅವಳನ್ನ… ಬೆಟ್ಟು ಬೇರೆ ಕಡೆ ತಿರುಗುತ್ತದೆ. ನನ್ನ ಹೆಂಡತಿಯಾಗೋಳು ಯಾರು ಅಂತ ನನಗೇ ತಿಳಿಯದೆ ಅದೆಷ್ಟು ಸಾರಿ ಚೀಟಿ ಹಾಕಿ ನೋಡಿರಲಿಲ್ಲ?…

 ಪಕ್ಕದಲ್ಲಿ ಕುಳಿತಿರುವ ಹುಡುಗಿಯನ್ನು ನೋಡಿದ ಮೇಲೆ….ಅರೇ ನನ್ನ ಹೆಂಡ್ತಿ ಇವಳೇ  ಹಾಗಾದ್ರೆ…ಓಹ್  ನನ್ನದೇ ಮದುವೆ ಇದು ಎಂದು ಖಾತ್ರಿ… ಈ ಹುಡುಗಿಯನ್ನು  ನಾನೇ  ಒಪ್ಪಿಕೊಂಡೆ ಅಂತ ಅಮ್ಮ ಹೇಳುವುದರಿಂದ, ಅದನ್ನು ಒಪ್ಪಲೇ ಬೇಕು.

ಹಾಲಿನುದ್ದಕ್ಕೂ ಕಣ್ಣು ಹಾಸಿದೆ. ಮಂಟಪದ ಒತ್ತಿಗೆ ಕುಳಿತಿದ್ದ ಕೆಂಪು ಸೀರೆಯ  ಜೋಡಿ ಜಡೆ ಚೆಲುವೆ ಇವಳ ಜಾಗದಲ್ಲಿ ಇದ್ದಿದ್ದರೆ, ಎಷ್ಟು ಮಜಾವಾಗಿರ್ತೀತ್ತು ಎಂದು ಹಲುಬಿದೆ. ಹೃದಯ ಮುಟ್ಟಿ ನೋಡಿಕೊಂಡೆ. ಗಡಿಯಾರದಂತೆ ಸೆಕೆಂಡು,  ಮಿನಿಟ್ಟು, ಅವರ್ ಹ್ಯಾಂಡ್ ಎಲ್ಲ ಬೊಮ್ಮಡಿ ಹಾಕುತ್ತಿತ್ತು. ಸಂಶಯವೇ ಇಲ್ಲ. ನಿಜವಾಗ್ಲೂ ನಾನು ಆ ಹುಡುಗಿಯನ್ನು ತುಂಬ ಪ್ರೀತಿಸುತ್ತೇನೆ. ಒಳಗೊಂದು ಹೊರಗೊಂದು ಏಕೆ,  ಹೇಳೇಬಿಡಬೇಕು. ಪಕ್ಕಕ್ಕೆ ಇವಳ ಕಿವಿಯ ಹತ್ತಿರ ಬಗ್ಗಿ ಪಿಸುಗುಟ್ಟಿ  ಜಾಗ ತೆರವು ಮಾಡಿಸಬೇಕು.

 “ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾಂ”

ಈ ಹಾಳು ಗೊಡ್ಡು  ಹೊಟ್ಟೆ ಬ್ರಾಹ್ಮಣನಿಗೆ ಸೂಕ್ಷ್ಮ ತಿಳಿಯೋದೆ ಇಲ್ವಲ್ಲ. ಸುಮ್ಮನೆ ಮಂತ್ರ ಒದರ್ತಾ  ಇದ್ದಾನೆ. ಯಾರಿಗೆ ಕಟ್ಟಬೇಕು ಅಂತ ಹೇಳಲೇ  ಇಲ್ವಲ್ಲ! ಅವನಿಗೆ ನನ್ನ ಥರ ಒದ್ದಾಟದ ಛಾನ್ಸಸ್ಸೇ ಬಂದಿಲ್ಲಾಂತ ಕಾಣುತ್ತೆ. ಇಲ್ಲದಿದ್ರೆ “ನಿಂಗೆ ಇಷ್ಟ ಬಂದವರಿಗೆ ಎದ್ದು ಹೋಗಿ ಕಟ್ಟು ಬಿಟ್ಟು ಬಾಪ್ಪ”ಅಂತ ಇದ್ದ… ‘ಸ್ವಯಂವಧು’ ಪದ್ಧತಿಯಾದರೂ ಇದ್ದಿದ್ರೆ ಚೆನ್ನಿರುತ್ತಿತ್ತು………ಈ ಅವಿವೇಕಿ ಬೀಗರಿಗಾದ್ರೂ ಸ್ವಲ್ಪ ಜ್ಞಾನ ಬೇಡ್ವ?… ಬೇಗ ಆ ಕೆಂಪು ಸೀರೆ ಹುಡುಗಿಯನ್ನು  ಅವಳ ಸೋದರ ಮಾವ ಕರ್ಕೊಂಡು ಬರ್ಬಾರದೇ?…ಥತ್ ಈ ದನಗಳಿಗೆ ಏನೂ ತಿಳಿಯಲ್ಲ….ಮುಹೂರ್ತ ಮೀರಿ ಹೋಗ್ತಾ ಇದೆ….ಗ್ರಹಚಾರ ಈ ಮುದುಕ ನನ್ನ ಕೈಯಿಂದ ನನ್ನ ಪಕ್ಕ ಕುಳಿತಿರೋ ಈ ಹೆಣ್ಣಿಗೆ ತಾಳಿ ಕಟ್ಟಿಸೇ ಬಿಡಾನೇನೋ …..ನೋ….ಅವನ್ಯಾವೋನು ಕಟ್ಟಿಸಕ್ಕೆ?….. ನಾ ಕಟ್ಟಲ್ಲ ಅಂದ್ರೆ …. “ಏಕೆ” ಅಂತ ಎಗರಿ ಬೀಳ್ತಾನೇನೋ….ಹೌದು, ಆಗ ನಾನು ಏನು ಹೇಳಲಿ??…. ಅಯ್ಯೋ, ಈ ಮದುವೆ  ಏನಾದ್ರೂ ಆಗಿ ನಿಂತು ಬಿಡಬಾರದೇ ….ಯಾರ್ಯಾರ್ದೋ  ಮದುವೆಗಳೆಲ್ಲ ಏನೇನೋ ಕಾರಣ ಬಂದು ನಿಂತು ಹೋಗಿದೆ ಅಂತ ಕೇಳಿದ್ದೀನಿ…..ಇದೂ ಹಾಗೇ ಆಗಬಾರ್ದೇ…? ನಂಬದಿದ್ದ  ದೇವರುಗಳನ್ನೆಲ್ಲ ಕೇಳಿಕೊಂಡೆ. ಯಾರಿಗೆ ಬೇಕು ಈ ದರಿದ್ರದ ಮದುವೆ?… ಯಾರಾದ್ರೂ ತಪ್ಪಿಸಬಾರದೇ ಎಂದು ಸತ್ತ  ನೋಟದಲ್ಲಿ ಹಾಲಿನ ತುಂಬ ನೆರೆದಿದ್ದ ಜನಗಳನ್ನು ದೀನನಾಗಿ ನೋಡಿದೆ.

ಬಾಗಿಲ ಹತ್ತಿರ ಅಂಚೆ ಪೇದೆ ನಿಂತಿದ್ದ. ಓ….ಟೆಲಿಗ್ರಾಂ…..ಅಲ್ಲೇ ಇದ್ದವರ್ಯಾರೋ ಇಸ್ಕೊಂಡ್ರು…..ಪಿಸು ಪಿಸು ಮಾತು ….ಹೆಣ್ಣಿನ ಕಡೆ ಕುಳಿತಿದ್ದ ಜನಗಳಲ್ಲಿ ಕೋಲಾಹಲ… ಏನಾಯಿತು?….ಏನಾಯಿತು? -ಕುತೂಹಲದ ದನಿಗಳು. ‘ಹೋ’ ಎಂದು ಗೋಳು

ಅಳು…. ಜನ ಚೆದುರಿದರು. ಅಲ್ಲಲ್ಲಿ ಸಣ್ಣಗುಂಪು.

 “ಅವರು ಸತ್ತು ಹೋದ್ರಂತೆ… ಅನ್ಯಾಯವಾಗಿ ಮದುವೆ ನಿಂತುಹೋಯಿತು”-ಯಾರದೋ ದನಿ. ಕೆಲವರು ಬಾಗಿಲ ಕಡೆ ಹೊರಟರು. ಅವರ ಅಳುವನ್ನೆಲ್ಲ ಹೊಟ್ಟೆತುಂಬ ತುಂಬಿಕೊಂಡೆ. ಸಂತೋಷದಿಂದ ಹೊಟ್ಟೆ ಮುಂದೆ ಬಂತು.

“ಯಾವೋನೋ ಅವನು ಅನ್ಯಾಯ ಅನ್ನೋದು, ಇದು ಶುದ್ಧ ನ್ಯಾಯವಾಗೇ ಇದೆ… …..ಹೂಂ…….ಬೇಗ……ಬೇಗ ಆ ನೀಲಿ ಧಾವಣೀನೋ, ಅಥ್ವಾ ಆ ಕೆಂಪು ಸೀರೆ ಹುಡುಗೀನೋ ಹಸೆಗೆ ಕರ್ಕೊಂಡು ಬನ್ನಿ…….ವಾಲಗ, ವಾಲಗ ಅಂತ ಪುರೋಹಿತರೇ ಬೇಗ ಕೂಗಿ…..ಪಕ್ಕದ ಹುಡುಗೀಗೆ ಸೂತಕ ದೂರ ಕಳಿಸಿ …..ಓ ಬಂದಳಾ ಆ ಹುಡುಗಿ…..ನಾನು ತಾಳಿ ಕಟ್ಟಕ್ಕೆ ಸಿದ್ಧವಾಗಿದ್ದೇನೆ ಎಂದು ಮನಸ್ಸಿನಲ್ಲೇ ಅಂದುಕೊಂಡು, ಲಗುಬಗೆಯಿಂದ ಓರಣವಾಗಿ ಕುಳಿತೆ.

 ಯಾರೋ ಆ ಸತ್ತ ಸುದ್ದಿ ಟೆಲಿಗ್ರಾ ತಂದು ನನ್ನ ತೊಡೆಯ ಮೇಲಿಟ್ಟರು. “ಥೂ ಶುದ್ಧ ಅವಿವೇಕಿಗಳು…..ಶುಭಕಾರ್ಯಕ್ಕೆ ಕೂತಿರೋ ವರನ ಕೈಗೆ ಇಂಥ ಅಮಂಗಳದ ಪತ್ರ ಕೊಡೋದೆ!.. “ಬ್ರೂಟ್ಸ್” ಎಂದು ಅವರನ್ನು ಬೈಯುತ್ತ ಟೆಲಿಗ್ರಾಂ ಓದಿದೆ. ತಟ್ಟನೆ ಐಸ್‍ಬಾಕ್ಸ್ ನಲ್ಲಿ ಎಡವಿ ಬಿದ್ದ ಹಾಗಾಯಿತು.

‘ ವಿಷ್ ಯೂ ಹ್ಯಾಪಿ ಮ್ಯಾರೇಜ್ ‘

ಕುಸಿದ ಕೊರಳನ್ನು ಕಷ್ಟದಿಂದ ಎತ್ತಿ ನೋಡಿದೆ. ಒಂದು ಅಳುಮುಖವೂ ಕಾಣಲಿಲ್ಲ… ಸಡಗರ, ಓಡಾಟ… ಎದುರಿಗೆ ನೇಣಿನ ಹಗ್ಗದಂತೆ ತಾಳಿ ಓಲಾಡುತ್ತಿದೆ. ಕೂತಲ್ಲೇ ಕರಗತೊಡಗಿದೆ.

 ಹಾಳಾದ ಯಮಧರ್ಮರಾಯನಿಗೆ ಯಾರಿಗಾದ್ರೂ “ಬುಲಾವ್” ಕಳಿಸಬೇಕು ಅನ್ನೋ ಕರ್ತವ್ಯಪ್ರಜ್ಞೆ ಬೇಡವೇ?.. ಹೂಂ….ಈ ರೀತಿ ಎಲ್ಲರೂ ತಮ್ಮ ತಮ್ಮ ಕರ್ತವ್ಯ ಮರೆಯುತ್ತಿರುವುದರಿಂದಲೇ ನನ್ನಂಥವರಿಗೆ ಪ್ರಾಣಸಂಕಟ ಅಂತ ಒದ್ದಾಡಿದೆ. ಆದರೂ ನಾನು ಆಶಾವಾದಿ. ಮುಂಬಾಗಿಲಿಗೆ ನನ್ನ ಹದ್ದು ಕಣ್ಣುಗಳನ್ನು ತೂಗುಹಾಕಿದೆ.

ಹಾ… ಎಷ್ಟೊಂದು ಟೆಲಿಗ್ರಾಂಗಳನ್ನು ಹೊತ್ತು ತರುತ್ತಿದ್ದಾನೆ. ಆ ಹುಡುಗ!… ನನ್ನ ಕಣ್ಣು ಹೂವಾಯಿತು. ಆ್ಞ…. ವೇದಜ್ಜಿಗೆ ತುಂಬ ಸೀರಿಯಸ್, ಬದುಕೋ ಭರವಸೆ ಇಲ್ಲ, ಆದಷ್ಟು ಬೇಗ ಈ ಶುಭಕಾರ್ಯ ನಡೆದು ಹೋಗಲಿ ಅಂತ ಅಮ್ಮ ಅವಸರಿಸಿದ್ದು ನೆನಪಾಯ್ತು…ಹೋ…ಪಾಪ ವೇದಜ್ಜಿ ಹೊರಟು ಹೋಗಿರಬೇಕು. ಕೈಯಲ್ಲಿರುವ ಟೆಲಿಗ್ರಾಂ ಕೂಡ ಅಳುತ್ತಿರುವಂತೆ ಕಂಡಿತು. ಓ……ಅಮ್ಮ ನಿಜವಾಗ್ಲೂ ದೊಡ್ಡ ಜ್ಞಾನೀನೇ….. ಈಗ ವೇದಜ್ಜಿ ಸಾಯೋದು ನಿಂಗೆ ಬೆಳಗ್ಗೇನೇ ಗೊತ್ತಾಯಿತಲ್ಲ! …..ಅಪಶಕುನ ಅಂತ ಅಜ್ಜಿಗಾಗಿ ಅಡ್ವಾನ್ಸಾಗೇ ಅತ್ತು ಬಿಟ್ಯಲ್ಲ…!

“ಅಯ್ಯೋ ಅಜ್ಜಿ ಹೊರಟು ಹೋದ್ಯಾ …ಏನು ಮಾಡ್ಲೀ? ನಾನು ನಿಂಗೋಸ್ಕರ ಅಳೋಣ ಅಂದ್ರೆ ಟೈಮೇ ಇಲ್ಲ. ಕೆಂಪು ಸೀರೆ ಹುಡುಗಿ ಆಗ್ಲೇ ಕತ್ತು ಒಡ್ಡುತ್ತಿದ್ದಾಳೆ.ಆದರೂ ನಿನಗೆ ಮೊದ್ಲು “ಥ್ಯಾಂಕ್ಸ್” ಹೇಳೋದನ್ನ ಮರೆಯಕ್ಕೆ ಆಗುತ್ತಾ ಅಜ್ಜಿ…? ನೀನು ಇವಳನ್ನು ನಂಗೆ ಮದುವೆ ಮಾಡಿಸ್ತಿರೋದಕ್ಕೆ “ಮೆನಿ ಥ್ಯಾಂಕ್ಸ್ ಅಜ್ಜಿ” ಎಂದು ಹೊಟ್ಟೆಯಲ್ಲೇ ಅಳು, ಥ್ಯಾಂಕ್ಸ್ ಎಲ್ಲಾ ಮುಗಿಸಿ ಟೆಲಿಗ್ರಾಂ ಒಡೆದೆ. ಹೋ…….ಮೋಸ!

 “ಮುಂದಿನದು ಇರಬೇಕು, ನನಗ್ಯಾಕೆ ಇಂಥ ಅವಸರ” ಎಂದುಕೊಂಡು ಇನ್ನೊಂದು ಟೆಲಿಗ್ರಾಂ ಒಡೆದೆ. ಅಯ್ಯೋ ಅದೂ ಇಲ್ಲ……. ಥತ್ ಈ ದರಿದ್ರ ಮುದುಕಿಗೆ ಇನ್ನೂ ಜೀವನ ಮೇಲೆ ಎಷ್ಟು ಚಪಲ! ಎಂದಿದ್ರೂ ಹೋಗೋದೇ… ಇವತ್ತೇ ಸಾಯಕ್ಕೆ ಅವಳಿಗೇನು ಕೇಡು…. ಇನ್ನೊಬ್ರಿಗೆ ಉಪಕಾರ ಮಾಡಬೇಕು ಅನ್ನೋ ಬುದ್ಧಿ ಈ ಹಾಳು ಜನಗಳಿಗೆ ಇಲ್ವಲ್ಲ……ಓ ಯಾಕೋ ಈ ಟೆಲಿಗ್ರಾಂ ತುಂಬ ಭಾರವಾಗಿದೆ. ಅಂತೂ ನನ್ನ ನಿರೀಕ್ಷೆ ಸಫಲ. ಕಣ್ಣೀರು ತುಂಬಿಸಿ ಪಾರ್ಸಲ್ ಮಾಡಿದ್ದಾರೆ. ಈ ಪಕ್ಕದ ಹೆಣ್ಣಿನ ಸೋದರತ್ತೆಗೆ ಕೋಮಾ ಬಂದು ಮೂರು ದಿನ ಆಯ್ತು. ಗಳಿಗೆ ಎಣಿಸ್ತಿದ್ದೆ. ಅಂತ ಹೇಳಿದ್ದಾಗೆ ಜ್ಞಾಪಕ,  ಪಾಪ…ಪಾಸ್ ಪೋರ್ಟು ತೆಗೆದುಕೊಂಡು ಹೊರಟೇ ಬಿಟ್ಟಿದೆ. ನಿಜವಾಗ್ಲೂ ತುಂಬ ಪ್ರಾಮಾಣಿಕ ವ್ಯಕ್ತಿ… ಇಂತಹ ವ್ಯಕ್ತಿಗಳಿಗೆ ನ್ಯಾಯವಾಗಿ ನೋಡಿದರೆ “ಪದ್ಮಶ್ರೀ” ಕೊಡಬೇಕು.. ಛೇ….ನಮ್ಮ ವೇದಜ್ಜಿ ಅಂತೂ ತೀರ ಸ್ವಾರ್ಥಿ ಅಂದ್ರೇ ಈಕೇನೂ ಹಾಗೇ ಇರಬೇಕೇ? ಇಂಥವರು ಇರುವುದರಿಂದಲೇ ದೇಶದಲ್ಲಿ ಮಳೆ-ಬೆಳೆ ಆಗ್ತಿರೋದು……ಈ ಕೆಂಪುಸೀರೆ ಹುಡುಗಿ ಜೊತೆ ನನ್ನ ಮದುವೆ ಆದ ಮೇಲೆ ಖಂಡಿತ ನಿಮಗಾಗಿ ನಾನು ಒಂದು ಸ್ಮಾರಕ ಕಟ್ಟಿಸ್ತೇನೆ ಅಂತ ಪಕ್ಕದವಳ ಸತ್ತ  ಸೋದರತ್ತೆಗೆ ಮನಸ್ಸಿನಲ್ಲೇ ಪ್ರಾಮಿಸ್ ಮಾಡಿ ಮೆಲ್ಲಗೆ ಟೆಲಿಗ್ರಾಂ ತೆಗೆದೆ…. ಗ್ರೀಟಿಂಗ್ಸ್!! ತಲೆಯಲ್ಲಿರುವ ಮೆದುಳೆಲ್ಲ ಒಟ್ಟಿಗೆ ಹೊರಕ್ಕೆ ಸಿಡಿದ ಅನುಭವ.

 “ಏನಾದ್ರೂ ಹಾಳಾಗೋಗಲಿ…….ನನಗೇನಾಗಬೇಕಿದೆ? ಯಾರಿಗೋ ಒಬ್ಬರಿಗೆ” ಎಂದುಕೊಂಡು ಪಕ್ಕದಲ್ಲಿ ನೀಡಿದ ಕೊರಳಿಗೇ ತಾಳಿ ಬಿಗಿದುಬಿಟ್ಟೆ.

ರಾತ್ರಿ ತಲೆ ಸಿಡಿಯುತ್ತಿತ್ತು. ರೂಮಿಗೆ ಹೋಗಿ ಬಿದ್ದುಕೊಂಡೆ. ಚಳಿ…ಸಾಯಿಸೋ ಚಳಿ….. “ದರಿದ್ರ ಜನ” ಎಂದು ಏನೇನೋ ಬಯ್ಯುತ್ತ ತಿರುಗುತ್ತಿದ್ದ ಫ್ಯಾನ್ ಆರಿಸಿ ರಗ್ಗು ಹೊದ್ದು ಮಲಗಿದೆ. ಯಾಕೋ ಈ ಹೊದಿಕೆ ಬೆಚ್ಚಗೆನಿಸಲಿಲ್ಲ. ಹೊದ್ದುಕೊಂಡ ಐದು ನಿಮಿಷ ತೃಪ್ತಿಕೊಟ್ಟದ್ದು ಯಾಕೋ ಪ್ರಯೋಜನವಿಲ್ಲವೆನಿಸಿ ಅದನ್ನು ಝಾಡಿಸಿ ಬಿಸಾಕಿ ಇನ್ನೊಂದು ಹೊದಿಕೆ ಎಳೆದು ಸುತ್ತಿಕೊಂಡೆ. ಬಿಸಿ ಅನುಭವ… ಕೆಲವೇ ಕ್ಷಣ.. ಮತ್ತೆ ಮಂಜು. ಎತ್ತಿ ಬಿಸಾಡಿದೆ. ಮತ್ತೆ ಬಿಸಿ ಸ್ಪರ್ಶ, ತಣವು… ಹೊಸ ಹೊಸ ರಗ್ಗುಗಳ ಬಯಕೆ. ಎಲ್ಲವನ್ನೂ ಬರಸೆಳೆದು ಒಟ್ಟಾಗಿ ಹೊದ್ದುಕೊಂಡರೆ…..ಸರಿಯೆನಿಸಲಿಲ್ಲ. ನನಗಾಗಿ ಮೊನ್ನೆ ತಾನೇ ಕೊಂಡು ತಂದಿದ್ದ ಹೊಸ ರಗ್ಗನ್ನೇ ಮೈತುಂಬ ಹೊದ್ದು ಮುಸುಕೆಳೆದು ಚಕ್ರಾಕಾರದಲ್ಲಿ ಮುದುಡಿಕೊಂಡೆ. ನಿದ್ದೆ ಮಂಪರು… ಜಗ್ಗನೆ ಎಚ್ಚರ. ಹೆಂಡತಿ ತೆಕ್ಕೆಗೆ ಬಂದಿದ್ದಾಳೆ!.. ಮೆತ್ತನೆ ಮೈ. ಓಹ್ ಇವಳು ನನ್ನ ಹೆಂಡತಿ! ತಾಳಿ ಕಟ್ಟಿ, ನಾನು ಕೈ ಹಿಡಿದವಳು. ದಿನಾ ಕಾಡಿಸುತ್ತಿದ್ದ ಚೆಲುವೆಯರಲ್ಲಿ ಯಾವೋಳೂ ಈಗ ನೆನಪಿಗೆ ಬರಲಿಲ್ಲ.

ಈ ಮುಖ, ಈ ಮೈ ನನ್ನದು…ಆವೇಶದಿಂದ ಅವಳನ್ನು ಬರಸೆಳೆದು  ತಬ್ಬಿದೆ, ಮುದ್ದಿಸಿದೆ. ಸುತ್ತಲಿನ ದಟ್ಟ ಕತ್ತಲೆಯಲ್ಲಿ ಅವಳ ಸುಂದರ ಮೈಮಾಟ-ಭಾಮವಾಗಿದ್ದ  ದೇಹ ಒಂದೇ ಕಾಣಿಸಿದ್ದು. ಹುಚ್ಚನಂತೆ ಉನ್ಮತ್ತನಾಗಿ ಅವಳನ್ನು ಅಪ್ಪಿ ಪ್ರೀತಿಸತೊಡಗುತ್ತೇನೆ.  

                                                *****

Related posts

ಮಹಿಳಾ ವಿಮೋಚನೆ

YK Sandhya Sharma

ಚಿತ್ರವಿಲ್ಲದ ಚೌಕಟ್ಟು

YK Sandhya Sharma

ಹೀಗೊಂದು ಸ್ವಗತ

YK Sandhya Sharma

Leave a Comment

This site uses Akismet to reduce spam. Learn how your comment data is processed.