ಸೂರ್ಯ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಗುಡ್ಡದ ಮರೆಯಲ್ಲಿ ಅವನಿಗೆ ಗಡದ್ದು ನಿದ್ದೆ. ಅವನು ಅಕಳಿಸುವ ಹೊತ್ತೂ ಮಾಗಿರಲಿಲ್ಲ. ಇಡೀ ಸಂಪೊಳ್ಳಿಯ ಜಾನುವಾರುಗಳು, ಗೌಡಾದಿ ಶ್ರೀಮಂತರು, ಮೂಡಲ ಕೇರಿಯ ಜನಗೋಳು, ಹೊಲೇರ ಕೇರಿಯೋರು, ಹೊಲ ಮರ ಗಿಡಗಳು ಗೊರಕೆ ಹೊಡೆಯುತ್ತಿದ್ದ ಹೊತ್ತಿನಲ್ಲಿ ಗಿರೆಪ್ಪ ಕೆಂಡ ಕೆದರುತ್ತ ಮಣ್ಣಿನ ಒಲೆಯ ಮುಂದೆ ಕುಳಿತಿದ್ದ. ಊದುಗೊಳವೆ ಹಿಡಿದು ಪುಸಪುಸನೆ ಊದಿದ. ಕಟ್ಟಿಗೆ ಉರುಲು ಒಟ್ಟುಗೂಡಿಸಿ ಮತ್ತೆ ಊದಿದ. ಉರಿ ಮೆಲ್ಲನಾಡಿ ಪುರಲೆ ಹೊತ್ತಿಕೊಂಡಿತು. ಒಂದೆರಡು ಕಿಡಿಗಳು ಸಿಡಿದವು. ಅದರ ಬೆಳಕು ಅವನ ಮುಖದ ಮೇಲಾಡಿ ಅವನ ಎಣ್ಣೆಗೆಂಪು ಮೊಗ ನಿಗಿನಿಗಿ ಕೆಂಡದಂತೆ ಹೊಳೆಯಿತು.
ಗಿರೆಪ್ಪ ಒಡನೆಯೇ ಮೇಲೆದ್ದು ಮೆಟ್ಟಣಿಗಿಯ ಮೇಲಿದ್ದ ದೊಡ್ಡ ಸಿಲಾವಾರದ ಪಾತ್ರೆಯನ್ನೆತ್ತಿಕೊಂಡು ಅದರ ತುಂಬ ನೀರು ತುಂಬಿಸಿ ಒಲೆಯ ಮೇಲಿಟ್ಟು ಮತ್ತೆ ಕುಕ್ಕುರುಗಾಲಲ್ಲಿ ಮುದುಡಿಕೊಂಡು ಚಳಿಗೆ ಬೆಂಕಿ ಕಾಯಿಸುತ್ತ ಮುದ್ದೆಯಾಗಿ ಕುಳಿತ. ಅವನ ದೃಷ್ಟಿ ಮೆಲ್ಲನೆ ಪಕ್ಕಕ್ಕೆ ತೆವಳಿತು. ಚಳಿಗೆ ಬುಗುರಿಯಂತೆ ಸುತ್ತಿ ಮಲಗಿದ್ದ ಅಮರವ್ವನ ಮೈಮೇಲಿದ್ದ ಹೊದಿಕೆ ಅವಳ ಹೊರಳಾಟದಲ್ಲಿ ಅಸ್ತವ್ಯಸ್ತವಾಗಿ ದೂರದಲ್ಲಿ ಬಿದ್ದಿತ್ತು. ಅವಳ ಮುಖದ ತುಂಬ ಗುಂಗುರು ಕೂದಲು ಕವಿದುಕೊಂಡಿತ್ತು. ಒಲೆಯೊಳಗೆ ಒನೆದಾಡುತ್ತಿದ್ದ ಉರಿಯ ಬೆಳಕು ಅವಳ ಮುಖದ ಮೇಲೂ ಬಿದ್ದು ಚಂದ್ರಮನಂಥ ಮುಖ ಹೊಂಬಣ್ಣದಿಂದ ಹೊಳೆಯುತ್ತಿತ್ತು.
ಗಿರೆಪ್ಪ ಕ್ಷಣಕಾಲ ರೆಪ್ಪೆ ಹಾಕದೆ ಮಗಳನ್ನೇ ದಿಟ್ಟಿಸಿದವನು ತಟ್ಟನೆ ‘ಇದರವ್ವನ….. ತಾಯಿ ಕಣ್ಣು ನಾಯಿ ಕಣ್ಣು’ ಎಂದು ತನ್ನ ನೆಡು ನೋಟಕ್ಕೆ ತಾನೇ ಶಪಿಸಿಕೊಂಡು, ತನ್ನ ದೃಷ್ಟಿ ಅವಳಿಗೆ ತಾಗದಿರಲಿ ಎಂದು ಮಗಳಿಗೆ ದೃಷ್ಟಿ ನಿವಾಳಿಸಿ ನೆಟಿಕೆ ತೆಗೆದು ಒಲೆಯತ್ತ ಬಿಸಾಡಿದ ಮೇಲೆಯೇ ಅವನಿಗೆ ಕೊಂಚ ಸಮಾಧಾನವಾದದ್ದು.
ಹೌದು… ಅಮರವ್ವನಿಗೆ ಗಿರೆಪ್ಪನೇ ತಾಯಿ ತಂದೆ ಎಲ್ಲವೂ ಆಗಿ ಅವಳನ್ನು ತನ್ನ ಕಣ್ಣಂತೆ ಕಾಪಾಡುತ್ತಿದ್ದ. ತೆವಳುವ ಕಂದನನ್ನು ಗಂಡನ ಉಡಿಗೆ ಹಾಕಿ ಹಿರಿಬ್ಯಾನೆಯಿಂದ ಕಾಸ್ಯವ್ವ ತೀರಿಕೊಂಡಾಗ, ಇನ್ನು ಮುಂದೆ ಮಗುವಿಗೆ ತಾನೇ ತಾಯಿ ಎಂದು ಎದೆಗಟ್ಟಿ ಮಾಡಿಕೊಂಡಿದ್ದ ಗಿರೆಪ್ಪ. ಹಾಗೆ ಗಟ್ಟಿಗೊಳಿಸಿದ ಅವನ ಭಾವನೆ ಗೂಡು ಕಟ್ಟಿ ಬೆಳೆಯಿತು, ಬಲಿಯಿತು. ಮನೆಯೆಲ್ಲ ಹರಿದಾಡುತ್ತಿದ್ದ ಕೂಸು ತಂದೆಯ ಆದರದ ಲಾಲನೆ ಪಾಲನೆಯಲ್ಲಿ ಲಂಗ ಪೋಲಕ ತೊಡುವಷ್ಟು ಪುಷ್ಟವಾಗಿ ಅರಳಿತು. ಸಾಲದ್ದಕ್ಕೆ ಮಿಡಿ ಗಾತ್ರದ ಎದೆಯೂ ಉಬ್ಬಿ ಗಿರೆಪ್ಪನ ಹೃದಯ ಹೌಹಾರುವ ಹಾಗಾಯಿತು. ತಡಮಾಡದೇ ಅವನು ಬಂಕಸಾಳಿಯ ಜಾತ್ರೆಗೆ ಹೋದಾಗ ಮರೆಯದೆ ಒಂದು ನೂಲಿನ ಸೀರೆಯನ್ನು ಖರೀದಿಸಿ, ಮಗಳ ಕೈಲಿಟ್ಟು ಅದನ್ನು ಉಡಲು ತಿಳಿಸಿದ್ದ. 12ರ ಪೋರಿ ಅಮರವ್ವ ಸೀರೆ ಉಡಲು ಬಾರದೆ ಪರದಾಡುವುದನ್ನು ಕಂಡು ಗಿರೆಪ್ಪ ಓಡಿಹೋಗಿ ಮಗ್ಗುಲಮನಿ ಪಾರಕ್ಕನನ್ನು ಕರೆತಂದು ಹೀಗ್ಹೀಗೆ ಎಂದು ವಿವರಿಸಿದ್ದ. ಪಾರಕ್ಕನಿಗಷ್ಟೆ ಅಲ್ಲ ಅವನ ಸುತ್ತಮುತ್ತಲ ಮನೆಯವರಿಗೆಲ್ಲ ಗಿರೆಪ್ಪ ಮಗಳ ಮೇಲೆ ಇಟ್ಟಿರುವ ಅತೀವ ಪ್ರೀತಿ ಕಾಳಜಿಯನ್ನು ಕಂಡು ಅಚ್ಚರಿ. ಹೆಣ್ಣನ್ನೂ ನಾಚಿಸುವಂತೆ ನಾಜೂಕಾಗಿ ಮನೆಗೆಲಸ ನಿರ್ವಹಿಸಿ, ಅಡುಗೆ ಮಾಡಿ ಮಗಳ ಹೊಟ್ಟೆ ತಂಪುಗೊಳಿಸಿ ನಸುಕಿನಲ್ಲೇ ಹೊಲದ ಕಡೆ ನಡೆಯುತ್ತಿದ್ದ ಗಿರೆಪ್ಪನ ಅಸೀಮ ಚಟುವಟಿಕೆ, ಆಸಕ್ತಿ ಕಂಡು ಮೂಗಿನ ಮೇಲೆ ಬೆರಳು ಕೂಡಿಸುತ್ತಿದ್ದರು ಅ ಕೇರಿಯ ಮುಂದಿ.
ಕಣ್ಣು ಕಣ್ಣ ಕೂಡಿಸಿ ಒಲಿದು, ಹಿರಿಯರ ಬಳಿ ಹಟ ಹಿಡಿದು ಮದುವೆಯಾದ ಗಿರೆಪ್ಪ-ಕಾಸ್ಯವ್ವ ನೆಟ್ಟಗೆ ಸಂಸಾರ ಮಾಡಿದ್ದು ನಾಲ್ಕೇ ವರ್ಷಗಳು. ಯಾರು ಹೊಟ್ಟೆ ಉರಿದುಕೊಂಡರೋ ಅಥವಾ ಅವರ ಅನ್ಯೋನ್ಯ ದಾಂಪತ್ಯಕ್ಕೆ ದೃಷ್ಟಿ ಬಡಿಯಿತೋ ಅನ್ನುವ ಹಾಗೆ ಕಾಸ್ಯವ್ವ, ಗಂಡ ಮತ್ತು ಮಗಳನ್ನು ಪರದೇಶಿ ಮಾಡಿ ನಿರ್ದಯಳಾಗಿ ಹೊರಟೇ ಹೋದಳು ಮತ್ತೆ ಬಾರದ ತಾವಿಗೆ.
ಗಿರೆಪ್ಪ ಒಂದೇ ಸಮನೆ ಹೊಡೆದುಕೊಂಡ. ಕಾಸ್ಯವ್ವನ ಹೆಣವನ್ನು ಮಣ್ಣು ಮಾಡಲು ಬಿಡಲಾರದಂಗೆ ಅವನು ಅದನ್ನು ತಬ್ಬಿಕೊಂಡು– ‘ಕಾಸೀ’ ಎಂದು ಭೋರ್ಗರೆದು ಅತ್ತ. ಮಗುವನ್ನು ಹೆಣದ ಎದೆಯ ಮೇಲೆ ಹಾಕಿ,
‘’ನಿಮ್ಮವ್ವನ್ನ ಕರಿಯವ್ವ….. ಎಬ್ಬಿಸಿ ಮತ್ ನನ್ನ ಮನೀಗೆ ಕರ್ಕೊಂಬಾವ್ವ’ ಎಂದು ಗೋಗರೆದದ್ದು ಕಂಡು ಸುತ್ತಣ ಜನವೆಲ್ಲ ಕಣ್ಣು ಒದ್ದೆ ಮಾಡಿಕೊಂಡರು. ಗಿರೆಪ್ಪನನ್ನು ಕಾಸ್ಯವ್ವನಿಂದ ಅಗಲಿಸಲು ಬಲಪ್ರಯೊಗ ಮಾಡದೆ ಆಗ ಬೇರೆ ವಿಧಿಯೇ ಇರಲಿಲ್ಲ.
ಒಂದಿಬ್ಬರು ಗುಸುಪಿಸು ಮಾತಾಡಿಕೊಂಡರು.
‘ಯಾಕ್ ಹೊಡಕೋತ್ ಬಡಕೋತಿ….ಇವೆಲ್ಲ ನಮಗ್ ಗೊತೈತಿ….. ನಾಕ್ ದಿನ ಹ್ವಾದ್ರ ಇಂಥ ಏಸ್ ಕಾಸ್ಯವ್ವಗೋಳ್ ನಿನ್ ಮಗ್ಗುಲಾಗ ಬರ್ದಂಗ್ ಇರ್ತಾರ?’ ಎಂದು ಅಣಕವಾಡಿದರು.
ಗಿರೆಪ್ಪನನ್ನು ಸಮಾಧಾನಿಸುವಷ್ಟರಲ್ಲಿ ಕೆಲವರಿಗಂತೂ ಹಣೆಯಿಂದ ಬೆವರು ಕಾಲು ಮಟ್ಟ ಇಳಿದುಬಂದಿತ್ತು.
ಕುಸು ಕುಸು ಅಳುತ್ತ ಅವನು ಸಣ್ಣ ಕಂದಮ್ಮನನ್ನು ಎದೆಗವಚಿಕೊಂಡು ತನ್ನ ಮನೆಯತ್ತ ನಡೆದವನು ಮುಂದೆ ತನ್ನ ಮನೆಯ ಹೊಸ್ತಿಲನ್ನು ಯಾವ ಹೆಂಗಸರೂ ಒಳಮೆಟ್ಟದಂತೆ ತನ್ನ ಮನೆಯ ಬಾಗಿಲನ್ನು ಶಾಶ್ವತವಾಗಿ ಮುಚ್ಚಿಬಿಟ್ಟ. ಹಿರಿಯರು ಒಂದಿಬ್ಬರು ಅವನಿಗೆ ಬುದ್ಧಿ ಹೇಳಿ ನೋಡಿದರು. ಜಗ್ಗಲಿಲ್ಲ ಆಸಾಮಿ. ಗಿರೆಪ್ಪನ ಮಾಂಸಲ ಮೀನಖಂಡಗಳು ಉಬ್ಬಿ ನಿಂತಿದ್ದರೂ, ಅವನ ಭವಿಷ್ಯಕ್ಕೆ ಮುಸುಕಿದ ಕತ್ತಲೆಯ ನೆರಳೋ ಎನ್ನುವಂತೆ ಅವನ ಕಣ್ಣ ಕೆಳಗೆ ಕಪ್ಪು ಉಂಗುರಗಳು ನೇಯ್ದುಕೊಂಡಿದ್ದವು. ಕಣ್ಣುಗಳು ಗೂಳು ಬಿದ್ದಿದ್ದವು. ಅದರೆ ಅವನ ಎದೆಯ ಹಣತೆಯಲ್ಲಿ ಕಾಸ್ಯವ್ವ ತುಂಬಿಸಿ ಹೋಗಿದ್ದ ತೀರದ ತೈಲದಲ್ಲಿ ಅಮರವ್ವ ಆರದ ದೀಪವಾಗಿ ಬೆಳಗುತ್ತಿದ್ದಳು. ಅವನ ಮನೆ ತುಂಬ ಅದರದೇ ಬೆಳಕು. ಗಿರೆಪ್ಪ ಅಂದೇ ದೃಢವಾಗಿ ತೀರ್ಮಾನಿಸಿ ಬಿಟ್ಟ. ತನ್ನ ಮನ-ಮನೆಯನ್ನು ಬೆಳಗಲು ಇದೊಂದೇ ದೀಪ ಸಾಕು ಎಂದು ತನ್ನ ಹಸಿವನ್ನು ಇಂಗಿಸಿಕೊಂಡು ಮಗಳನ್ನು ಜ್ವಾಕೆ ಮಾಡುವತ್ತ ತನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದ.
ಉರಿ ಬಳುಕಾಡಿ, ಮಲಗಿದ್ದ ಅಮರವ್ವನ ಮೋರೆಯಲ್ಲಿ ಸಣ್ಣ ಕಿರುನಗು ಮಿನುಗಿದಂತೆ ಭಾಸವಾಗಿ ಗಿರೆಪ್ಪ ಅವಳನ್ನೇ ಪ್ರೀತಿಯಿಂದ ದಿಟ್ಟಿಸುತ್ತ ಹಾಗೇ ಎಷ್ಟೋ ಹೊತ್ತು ಕುಳಿತ.
ನೀರು ಕುದಿಯುತ್ತ ಮುಚ್ಚಳವನ್ನು ಕುಣಿಸಿ, ಉರಿ ಚರಪರ ಸದ್ದು ಮಾಡಿದಾಗಲೇ ಅವನಿಗೆ ಎಚ್ಚರ.
‘ಅಯ್ಯೋ ದೇವರೆ’ ಎಂದು ಅವನು ತನ್ನ ಮೈ ಮರೆವಿಗೆ ತಾನೇ ಬೆರಗುಗೊಳ್ಳುತ್ತ ಕಾದ ನೀರು ಇಳಿಸಿ, ಉಳ್ಳಾಗಡ್ಡೆಯ ಕತ್ತರಿಸಿದ ತುಂಡುಗಳನ್ನು ಬೇಯಲು ಹಾಕಿ, ಜೋಳದ ರೊಟ್ಟಿ ಬಡಿಯಲು ಕುಂತ.
ಅಮರವ್ವ ಏನೋ ಕನವರಿಸಿಕೊಂಡು “ಎಪ್ಪಾ” ಎಂದು ತೊದಲುತ್ತ ಹೊರಳಿದಳು.
ಗಿರೆಪ್ಪ ಧಡಕ್ಕನೆ ಮೇಲೆದ್ದ ಬಿಟ್ಟ ಕೆಲಸ ಬಿಟ್ಟ ಹಾಗೆ. ಅವಳತ್ತ ಚಿಮ್ಮಿ “ಸುಮ್ ಮಕ್ಕೋ” ಎಂದು ಅವಳ ತಲೆ ನೇವರಿಸಿ, ಸರಿದಿದ್ದ ಕೌದಿಯನ್ನು ಅವಳ ಮೈಗೆ ಸರಿಯಾಗಿ ಹೊಚ್ಚಿ, ಮತ್ತೆ ಬೆಂಕಿಯ ಮುಂದೆ ಹೋಗಿ ಕೂತ.
ಇನ್ನೊಮ್ಮೆ ಅವಳು ಕನವರಿಸುವಷ್ಟರಲ್ಲಿ ಗಿರೆಪ್ಪನ ಅಡುಗೆ, ನ್ಯಾರಿ ಮುಗಿದು, ಅವನು ಮುಖಕ್ಕೆ ಬಿಸಿ ನೀರು ಸುರಿದುಕೊಂಡು, ಹಲ್ಲು ತಿಕ್ಕಿ, ಹೆಗಲ ಮೇಲಿದ್ದ ಅರಿವೆಯನ್ನು ಮುಖಕ್ಕೊತ್ತಿಕೊಳ್ಳುತ್ತ ಅವಳ ಮಗ್ಗುಲಲ್ಲಿ ಬಂದು ಕೂತ.
“ಅಮ್ರೀ……ಓ ಅಮರವ್ವ…..” ಎಂದು ರಾಗವಾಗಿ ಅವಳ ಹೆಸರನ್ನು ಮೃದುವಾಗಿ ಉಸುರುತ್ತ ಮಗಳನ್ನು ಎಚ್ಚರಿಸತೊಡಗಿದ.
“ಬಿಸಿ ನೀರೈತಿ….. ಬ್ಯಾಗ ಮುಖ ತ್ವಳದು, ಹಲ್ಲು ತಿಕ್ಕೊಂಡು ಬಾವ್ವ, ರೊಟ್ಟಿ ಜುಣಕ ಹಚ್ಚಿಕೊಟ್ಟೇನು” ಎಂದು ಗಿರೆಪ್ಪ ಮಮತೆಯಿಂದ ಮಗಳ ಮುಂಗೂದಲಲ್ಲಿ ಬೆರಳಾಡಿಸುತ್ತ ನುಡಿದ.
“ಆಂ ….. ಊಂ…..” ಎಂದು ಧ್ವನಿಗರೆಯುತ್ತ ಮೈಮುರಿದು ಮೇಲೆದ್ದ ಅಮರವ್ವ ಕಣ್ಣು ಹೊಸಕಿ ನಿದ್ದೆಯ ಗುಂಗನ್ನು ಆರಿಸಿಕೊಂಡು ಹಿತ್ತಲಿಗೆ ಹೆಚ್ಚೆ ಹಾಕಿದಳು. ಮೋರೆಗೆ ನೀರೆರಚಿಕೊಂಡು ಲವಲವಿಕೆಯಿಂದ ಒಳ ಬಂದವಳು, ಮೂಗಿಗಿಡರಿದ ಸುವಾಸನೆಯನ್ನು ಹೀರಿಕೊಳ್ಳುತ್ತ ಮೂಗರಳಿಸಿ ಒಲೆಯ ಬಳಿ ಬಂದು ಕುಳಿತಳು. ಹಾಗೇ ತುಸು ನಾಚಿಕೆಯಿಂದ ಗೊಣಗಿದಳು.
“ನೀ ಯಾಕ್ ಮಾಡಾಕ ಹ್ವಾದಿಯಪ್ಪಾ….. ನಾ ಏಳ್ತಿದ್ದಿಲ್ಲೇನು?….. ದಿನಾ ನೀ ಹೀಂಗ ಮಾಡಕ ಹತ್ತಿ….. ನಾನೂ ಹೆಂಗ್ಸಲ್ಲೇನು? ನಾ ಯಾವಾಗಪ್ಪ ಕಲ್ಯೂದು ಕೆಲ್ಸ, ತುಸು ನೀ ಬಿಟ್ರಲ್ಲಾ?” ಎಂದು ಮುಖ ದುಮ್ಮಿಸಿ ತಾಟಿಗೆ ರೊಟ್ಟಿ ಹಾಕಿಕೊಂಡು, ರೊಟ್ಟಿ ಚೂರನ್ನು ಜುಣಕದಲ್ಲಿ ಅದ್ದಿ ಅದನ್ನು ತಂದೆಯ ಬಾಯಿಗಿಟ್ಟಾಗ ಗಿರೆಪ್ಪನ ಆಯಾಸವೆಲ್ಲ ಪರಿಹಾರವಾದಂತಾಯಿತು. ಅವನ ಮೊಗದಲ್ಲಿ ತೆಳು ಬೆಳುದಿಂಗಳು ಹರಡಿತು. ಮಗಳನ್ನು ಮುದ್ದು ಮಾಡಲು ಅವನು ಮುಂದಾದಾಗ, ಅವಳು ಹಿರಿಯ ಹೆಂಗಸಿನಂತೆ ಗಾಂಭೀರ್ಯ ನಟಿಸಿ-
“ಬಡಾನ್ ತಿನ್ನೇಳು….. ಹೊಲಕ ಹೊತ್ತಾಕೈತಿ…..” ಎಂದು ಅವನ ಬಾಯಲ್ಲಿ ಇನ್ನೊಂದು ರೊಟ್ಟಿ ಚೂರನ್ನು ತುರುಕಿದಳು. ಬಾಯ್ತುಂಬ ತುಂಬಿಕೊಂಡದ್ದನ್ನು ನುಂಗಲಾರದೆ ಗಿರೆಪ್ಪನ ಕಣ್ಣೊಳಗೆ ನೀರು ತುಂಬಿಕೊಂಡಿತು. ಅದರೊಳಗೆ ಅಮರವ್ವನ ಪ್ರತಿಬಿಂಬ ತೇಲಿತು.
ಪ್ರತಿದಿನವೂ ಗಿರೆಪ್ಪ, ಇದ್ದ ತುಂಡು ಭೂಮಿಯ ಸಾಗುವಳಿಯ ಕೆಲಸಕ್ಕೆ ಮಗಳು ಕಟ್ಟಿಕೊಡುತ್ತಿದ್ದ ಬುತ್ತಿ ಹೊತ್ತು ಹೊಲಕ್ಕೆ ನಡೆಯುತ್ತಿದ್ದ. ಮನೆ ಬಿಡುವಾಗ ಅವನು ಸಾರಿ ಸಾರಿ ಹೇಳುವುದನ್ನು ಮರೆಯುತ್ತಿರಲಿಲ್ಲ.
“ಜಾಕ್ವೆಯಾಗಿರು ಮಗಳೇ….ಜಳಕ ಮಾಡಿ ನ್ಯಾರಿ ತಿಂದು ಮನಿಯಾಗೇ ಇರು….. ಬ್ಯಾಸರಾದ್ರೆ ಪಾರಕ್ಕನ ಮಗಳ ಜೋಡಿ ಆಡ್ತಿರು….. ಜ್ವಾಕಿ….. ಬಾಗಲ ಅಗಳಿ ಹಾಕಿಕೊಂಡಿರು, ನಾ ಬರೋ ಮಟ್ಟು” ಎಂದು ಮನಃತೃಪ್ತಿಯಾಗುವವರೆಗೂ ಮಗಳಿಗೆ ಉಪದೇಶಿಸಿದ್ದರೂ ಅವನೆದೆಯಲ್ಲಿ ರೊಂಯ್ ರೊಂಯ್ ಆತಂಕ ಗುಮ್ಮುತ್ತಲೇ ಇರುತ್ತಿತ್ತು. ಅವನ ದೇಹ ಹೊಲದಲ್ಲಿ ಕೆಲಸ ಮಾಡುತ್ತಿದ್ದರೂ ಅವನ ಮನಸ್ಸು ಮಾತ್ರ ತನ್ನ ಮನೆಯತ್ತ – ಮಗಳತ್ತ ಹಾರಿ ಹೋಗಿರುತ್ತಿತ್ತು.
ದಿನದಿಂದ ದಿನಕ್ಕೆ ಅಮರವ್ವ ಸೊಂಪಾಗಿ ಬೆಳೆಯುತ್ತಿದ್ದಳು. ಸೀರೆಯ ಮರೆಯಿಂದ ಅವಳ ತುಂಬಿದ ಅಂಗಾಂಗ, ಉಬ್ಬು, ತಗ್ಗುಗಳು ನಿಸ್ಸಂಕೋಚವಾಗಿ ತಮ್ಮ ಅಸ್ತಿತ್ವವನ್ನು ಸಾದರಪಡಿಸುತ್ತ ನಿಂತಿದ್ದವು. ಅವಳ ನಿಂಬೆ ಬಣ್ಣದ ಹೊಳೆವ ಮುಖದಲ್ಲಿ ಚಂಚಲ ಕಣ್ಣುಗಳು, ತುಸು ಮೊಂಡಾದರೂ ಮೋಡಿ ಹಾಕುವ ಮಾಟವಾದ ಮೂಗು, ತುಂಬು ತುಟಿಗಳನ್ನು ನೆನೆದು ಗಿರೆಪ್ಪನ ಕೈಗಳು ತಟಸ್ಥವಾದವು. ಕೊಬ್ಬಿದ ಕೋಣದಂತಿದ್ದ ಮೂಲೆಮನಿಯ ಗುರ್ಯಾನ ಹದ್ದುಗಣ್ಣುಗಳು ಸದಾ ತಮ್ಮ ಮನಿಯ ಬಾಗಿಲಿಗೇ ತೂಗಿ ಬೀಳುವುದನ್ನು ಗಮನಿಸಿದ್ದ ಗಿರೆಪ್ಪನ ಪಿತೃಹೃದಯ ಆತಂಕದಿಂದ ದುಬದುಬನೆ ಬಡಿದುಕೊಂಡಿತು. ಆ ಪೋಲಿ ಪಡ್ಡೆಹುಡುಗ ತಮ್ಮ ಮನೆಯ ಮುಂದೆ ನಾಲ್ಕಾರು ಬಾರಿ ತಿರುಗಾಡಿ ತಮ್ಮ ಅಮ್ರಿಯ ಕಣ್ಣೊಳಗೆ ಕಣ್ಣು ಕೂಡಿಸಿ ಅವಳೆದೆಯಲ್ಲಿ ಗದ್ದಲ ಹೂಡಿಸಿದರೆ….. ನಾದಿದ್ದ ಹಿಟ್ಟಿನಂಥ ವಯಸ್ಸು ಅವಳದು….. ಅವನತ್ತ ಬಾಗಿದರೆ….. ಮುಂದಕ್ಕೆ ಕಲ್ಪಿಸಿಕೊಳ್ಳಲಾರದೆ ಗಿರೆಪ್ಪ, ತಟಕ್ಕನೆ ಮಾಡುತ್ತಿದ್ದ ಕೆಲಸವನ್ನು ಅಷ್ಟಕ್ಕೇ ಬಿಟ್ಟು ಮನೆಯತ್ತ ಧಾವಿಸಿ ಬಂದಿದ್ದ.
“ಅಮ್ರೀ….. ಓ ಅಮರವ್ವ” ದಡದಡನೆ ಬಾಗಿಲು ಬಡಿದ.
“ದೇವ್ರೆ ಸದ್ಯ ಬಾಗಿಲು ಗಟ್ಯಾಗಿರಲಿ…..” ಎಂದು ಮನದೊಳಗೇ ಗ್ರಾಮದೇವತೆ ದ್ಯಾಮವ್ವನಲ್ಲಿ ಮೊರೆಯಿಟ್ಟ.
“ಯಾಕಪ್ಪಾ ಇಷ್ಟ್ ಲಗೂನ ಬಂದೀ?” ಎಂದು ಬಾಗಿಲು ತೆರೆದ ಮಗಳು ಒಳಗೆ ಒಬ್ಬಳೇ ಇರಲಿ ದೇವರೇ ಎಂದು ಗಿರೆಪ್ಪ ಪ್ರಾರ್ಥಿಸಿದ.
ಸದ್ಯ!….. ಅವನು ಕಲ್ಪಿಸಿಕೊಂಡಿದ್ದ ಅನಾಹುತವೇನೂ ಸಂಭವಿಸಿರಲಿಲ್ಲ. ಅಮರವ್ವ ಒಪ್ಪವಾಗಿ ಸೀರೆಯುಟ್ಟು, ತಲೆಗೂದಲನ್ನು ವೈನಾಗಿ ಬಾಚಿ ಜಡೆ ಹೆಣೆದುಕೊಂಡಿದ್ದಳು. ಅವಳ ಹಣೆಯ ದುಂಡನೆಯ ಪುಡಿಗುಂಕುಮದ ಬೊಟ್ಟು ಗೆರೆ ಬಿಟ್ಟು ಕದಲಿರಲಿಲ್ಲ.
‘ಉಷ್…’ ಎಂದು ಗಿರೆಪ್ಪ ನೀಳ ಉಸಿರನ್ನು ಹೊರಹಾಕಿ ಕೌದಿ ಮೇಲೆ ಕುಳಿತು-
“ಒಂದು ಚೆರಿಗಿ ತಣ್ಣನ ನೀರು ತೊಗೊಂಬಾ” ಎಂದು ಮಗಳಿಂದ ನೀರು ಬೇಡಿ ಒಂದು ತಂಬಿಗೆ ನೀರು ಪೂರ್ತಿ ಖಾಲಿ ಮಾಡಿದಾಗ ಅವಳಿಗೆ ಆಶ್ಚರವೋ ಆಶ್ವರ್ಯ. ಇದೇಕೆ ಅಪ್ಪಾ ಹೀಗೆ ಬೆದರಿದ ದನದಂತೆ ಆಗಾಗ ಹುಚ್ಚೆದ್ದು ಮನೆಗೆ ಓಡೋಡಿ ಬರುತ್ತಾನೆ. ಕೊಡ ಕೊಡ ನೀರು ಬಸಿದುಕೊಳ್ಳುತ್ತಾನೆಂಬುದು ಅವಳ ಪಾಲಿಗೆ ಬಿಡಿಸಲಾಗದ ಒಗಟು.
ಗಿರೆಪ್ಪ ಬಾರದ ನಗುವನ್ನು ಮುಖದ ಮೇಲೆ ಎಳೆದುಕೊಂಡು, ಡರ್ರೆಂದು ತೇಗಿ ಮೇಲೆದ್ದು ಹಿತ್ತಲ ಕೊಟ್ಟಿಗೆಯತ್ತ ಹೆಜ್ಜೆಯಿಕ್ಕುತ್ತಾನೆ. ಅಮರವ್ವ ಕೊಟ್ಟಿಗೆಯನ್ನೆಲ್ಲ ಶುಭ್ರವಾಗಿ ಕಸಗುಡಿಸಿ ತೊಳೆದದ್ದರಿಂದ ಸೆಗಣಿ ಕಸಕಡ್ಡಿ ಅವನ ಕಾಲನ್ನು ಮುತ್ತಲಿಲ್ಲ.
ಗಿರೆಪ್ಪನ ಕಾಲ ಸಪ್ಪಳಕ್ಕೆ ಗೂಟಕ್ಕೆ ಬಿಗಿದಿದ್ದ ಜವಾರಿ ಆಕಳು ಅತ್ತಿತ್ತ ತಲೆಯಾಡಿಸಿ, ತನ್ನ ಕೊರಳ ಕಿರುಗೆಜ್ಜೆಯನ್ನು ಗಲ್‍ಗಲ್ಲೆನಿಸಿ ತನಗಾದ ಖುಷಿಯನ್ನು ಸಾರಿತು. ನಿಂತಲ್ಲಿ ನಿಲ್ಲಲಾರದೆ ಅದು ಚಡಪಡಿಸುತ್ತ ಹೆಜ್ಜೆಗಳನ್ನು ಅದಲು ಬದಲು ಮಾಡಿತು.
“ಯಮನವ್ವ” ಎನ್ನುತ್ತ ಗಿರೆಪ್ಪ ಹಸುವಿನ ಬಳಿಸಾರಿ ಅದರ ಕೊರಳ ಸುತ್ತ ಕೈ ಬಳಸಿ ಅಪ್ಪಿಕೊಂಡು ಅದರ ಗಂಗೆದೊಗಲನ್ನು ನೇವರಿಸಿದ. ಆಕಳು ಮಂತ್ರಮುಗ್ದವಾಗಿ ಕಣ್ಮುಚ್ಚಿ ಅವನ ತೋಳಪ್ಪುಗೆಯಲ್ಲಿ ಸುಖ ಅನುಭವಿಸಿತು. ಗಿರೆಪ್ಪನಿಗೂ ಅದೇ ಅನುಭವ.
“ಯಮನವ್ವ, ನನ್ನ ತಾಯಿ, ಬಂಗಾರ” ಎಂದು ಗಿರೆಪ್ಪ ಅಕ್ಕರೆಯಿಂದ ಅದರ ಮೈದಡವಿ ಕರಿಕೆ ತಿನ್ನಿಸಿದ. ಯಮುನೆ ತನ್ನ ಮೂತಿಯನ್ನು ಅವನ ತೋಳಿಗೆ ತಿಕ್ಕಿ ತನ್ನ ಆತ್ಮೀಯತೆಯನ್ನು ವ್ಯಕ್ತಪಡಿಸಿತು. ಮತ್ತೆ ಗಿರೆಪ್ಪ ಅದರೊಡನೆ ಮುದ್ದು ಸಂಭಾಷಣೆಗೆ ತೊಡಗಿದ.
“ಎಪ್ಪಾ ಹೊಲಕ ಹೋಗಲ್ಲೇನು?” ಎಂದು ಅಮರವ್ವ ಎರಡು ಬಾರಿ ಕೂಗಿದರೂ ಅವನ ಕಿವಿಗೆ ತಾಗಲಿಲ್ಲ. “ಎಪ್ಪಾ…..” ಮೈ ಮುಟ್ಟಿ ಕದಲಿಸಿದಳು.
ಗಿರೆಪ್ಪ “ನಾ ಹೊಂಟ್ನವ್ವ” ಎನ್ನುತ್ತ ಎರಡು ಹೆಜ್ಜೆ ಮುಂದಿಟ್ಟವನು ಹಿಂತಿರುಗಿ,
“ಯಮನವ್ವನ ಜ್ವಾಕಿಯಾಗಿ ನೋಡ್ಕೋವ್ವ….. ಬಿಸ್ಲ ಝಳ ಹೆಚ್ಚಾದ್ರೆ ನೆಳ್ಳಾಗ ಕಟ್ಟು….. ಮೇವು-ನೀರು ನೆಪ್ ಮಾಡಿ ಹಾಕವ್ವ” ಎಂದು ಹೊರಟವನು ಮತ್ತೆ, “ಅಮರವ್ವ ಜ್ವಾಕ್ಯೆವ್ವ, ಅಗಳಿ ಹಾಕ್ಕಂಡಿರು….. ಬಾಗ್ಲಲ್ಲಿ ಹೊರಗ್ ದಾರಿ ನೋಡ್ಕೋತಾ ನಿಂದರ್‍ಬ್ಯಾಡ ಮಗಳೇ” ಎಂದು ಒತೊತ್ತಿ ಹೇಳುತ್ತ ಗಿರೆಪ್ಪ ಒಲ್ಲದ ಮನಸ್ಸಿನಿಂದ ಹೊಲದತ್ತ ಹೆಜ್ಜೆ ಒಗೆದ.
ಗಿರೆಪ್ಪನಿಗೆ ಅಮರವ್ವ ಮತ್ತು ಯಮುನೆ ಇಬ್ಬರೂ ಎರಡು ಕಣ್ಣುಗಳು. ತಾಯಿಯಿಲ್ಲದ ಅಮರವ್ವನನ್ನು ತನ್ನ ಪ್ರಾಣಪದಕದಂತೆ ಬೆಳೆಸಿದ ಹಾಗೇ, ಅವನು ತಬ್ಬಲಿ ಯಮುನೆಯನ್ನೂ ಜೋಪಾನವಾಗಿ ತನ್ನೆಲ್ಲ ಪ್ರೀತಿಯನ್ನೂ ಧಾರೆಯೆರೆದು, ಎಳೆಗರುವನ್ನು ಆಕಳು ಆಗುವವರೆಗೂ ಮುದ್ದಾಗಿ ಸಾಕಿದ್ದ. ಅದು ಹಸಿವಿಲ್ಲದ್ದಕ್ಕೋ, ಮೊಂಡುತನಕ್ಕೋ ಮೇವು ತಿನ್ನಲು ಕೊಸರಾಡಿದರೆ ಅವನದನ್ನು ಎಳೆಮಗುವನ್ನು ಲಾಲಿಸುವಂತೆ ಗಂಟೆಗಟ್ಟಲೆ ಅದರ ಮುಂದೆ ಕುಳಿತು ಮುದ್ದು ಮಾತುಗಳಲ್ಲಿ ಗೋಗರೆಯುತ್ತ ತಿನ್ನಿಸುತ್ತಾನೆ. ಯಮುನೆ ನೀರಿನ ಹ್ಯಾಳಕ್ಕೆ ಹೊರಟಾಗಲೂ ಅವನು ಅದರ ಬೆನ್ನಿನ ಬಂಟ.
ಯಮುನಯತ್ತಣಿಂದ ಅಮರವ್ವನತ್ತಣ ಅವನ ಯೋಚನೆ ಕವಲಾಯಿತು. ಮಗಳು ದಿನೇ ದಿನೇ ಗೊಂಡೇ ಹೂವಿನಂತೆ ಅರಳುತ್ತಿದ್ದಾಳೆ….. ಆದಷ್ಟು ಬೇಗ ಅವಳನ್ನು ಒಂದು ಒಳ್ಳೆಯ ಕಡೆ ಸೇರಿಸಬೇಕು ಎಂಬುದರ ಬಗ್ಗೆ ಚಿಂತಿಸಿತೊಡಗಿದ.
ಗಿರೆಪ್ಪನ ಆಸ್ತಿಯೆಂದರೆ ಹಿರೇಕರಿಂದ ಬಂದ ಒಂದು ತುಂಡು ಹೊಲ, ಎರಡಂಕಣದ ತಗ್ಗು ಮಾಡಿನ ಮನೆ, ಕಾಯಿಪಲ್ಲೆ ಬೆಳೆಯುವ ಒಂದಿಷ್ಟು ಹಿತ್ತಲು ಮತ್ತು ಯಮುನೆ ಅಷ್ಟೇ. ಹೀಗಾಗಿ ಅವನು ತನ್ನ ಅಂತಸ್ತಿಗೆ ತಕ್ಕನಾದ ಸಂಬಂಧದ ಕುರಿತು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ. ಯಾವುದಕ್ಕೂ ಬರುವ ವಾರ ಬಂಕಸಾಳಿಯ ಮಾರುಕೊಂಡೆಪ್ಪನ ಬಳಿ ಒಮ್ಮೆ ಈ ಬಗ್ಗೆ ವಿಚಾರಿಸುವುದು ಲೇಸೆಂಬ ತೀರ್ಮಾನಕ್ಕೆ ಬಂದು, ಹೊಲದ ಕೆಲಸ ತೀರಿಸಿ ತನ್ನ ಧಣಿ ಶಿವಲಿಂಗೇ ಗೌಡರ ಜಮೀನಿನಲ್ಲಿ ಕೆಲಸ ಮಾಡಲು ನಡೆದ.
ಮುಂದಿನ ವಾರದ ಹೊತ್ತಿಗೆ ಗಿರೆಪ್ಪನ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಅವನು ಮಾರುಕೊಂಡೆಪ್ಪನ ಬಳಿ ಚರ್ಚೆ ನಡೆಸುವ ಪ್ರಮೇಯವೇ ಬರದ ಹಾಗೆ ಅಮರವ್ವ ಅವನ ಅಲೋಚನೆಗಳನ್ನೆಲ್ಲ ಕಲಸು ಮೇಲೋಗರ ಮಾಡಿದ್ದಳು.
ಗಿರೆಪ್ಪನ ಭಯ ನಿಜವಾಗಿತ್ತು. ಮೂಲೆ ಮನೆ ಗುರ್ಯಾ ಅವಳ ಮೇಲೆ ಕಣ್ಣು ಹಾಕಿ ಹಕ್ಕಿಯನ್ನು ಹಾರಿಸಿಕೊಂಡು ಹೋಗುವ ಬದಲು ಅವನ ಚಿಗಪ್ಪನ ಮಗ ತಾನಪ್ಪ ಮುಖೇಡಳ್ಳಿಯಿಂದ ಬಂದವನು ಬಾಗಿಲಲ್ಲಿ ನಿಂತಿದ್ದ ಅಮರವ್ವನನ್ನು ಕಂಡು ಮನಸೋತ. ತಾನು ಮಾದುವೆಯಾದರೆ ಇವಳನ್ನೇ ಎಂದು ಪಟ್ಟು ಹಿಡಿದು ಕೂತ. ಆ ಸುದ್ದಿ ಗಿರೆಪ್ಪನವರೆಗೂ ಬಂತು. ಈಗ ಅವನಿಗೆ ಬೇರೆ ದಾರಿಯೇ ಇರಲಿಲ್ಲ. ಅಮರವ್ವನೂ ತಾನಪ್ಪನಿಗೆ ಮನಸ್ಸು ಕೊಟ್ಟಿದ್ದಾಳೆ ಎಂದು ತಿಳಿದ ಮೇಲೆ ಗಿರೆಪ್ಪ ಇನ್ನು ತಡ ಮಾಡಲಿಲ್ಲ. ತಾನಪ್ಪನ ಕುಲ ನೆಲೆ ಶೋಧಿಸಿ, ಶ್ರೀಮಂತ ಮನೆತನದ ಗುಣವಂತ ಅಡ್ಡಿಯಿಲ್ಲವೆನಿಸಿದಾಗ ತಿಂಗಳೊಳಗೆ ತನ್ನ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿಸಿ ಹಂದರ ಹಾಕಿಸಿ ವಾಲಗ ಊದಿಸಿಯೇ ಬಿಟ್ಟ.
ಗಂಡನ ಮನೆಗೆ ಹೊರಟು ನಿಂತ ಮಗಳು ಕಾಲಿಗೆರಗಿದಾಗ ಗಿರೆಪ್ಪನ ಎದೆದುಡಿ ಧಡಧಡನೆಂದಿತು. ನಿಜವಾಗಿಯೂ ಮಗಳನ್ನು ಬಿಟ್ಟು ಬದುಕಿರಲು ತನ್ನ ಕೈಲಿ ಸಾಧ್ಯವೇ ಎಂದು ನೆನೆದು ಕುಸಿಯುವಂತಾಯಿತು.
ಅವರವ್ವನಿಗೆ ತಾನು ಹುಟ್ಟಿ ಬೆಳೆದ ಮನೆ, ಪ್ರೀತಿಯ ತಂದೆ ಮತ್ತು ಯಮುನೆಯನ್ನು ತೊರೆದು ಹೊರಟು ನಿಂತಾಗ ದುಃಖವುಕ್ಕಿ ಬಂದು ಕಣ್ಣಲ್ಲಿ ನೀರಾಡಿದರೂ, ಬಗಲಲ್ಲಿ ನಿಂತಿದ್ದ ಕೆನೆಯೌವನದ ಗಂಡನ ಸಾಮೀಪ್ಯದ ಅಮಲು, ಸುಂದರ ಕನಸನ್ನು ಕಾಣಲು ತವಕಿಸುತ್ತಿತ್ತು.
ಬಿಕೋ ಎನ್ನುತ್ತಿದ್ದ ಮನೆಯನ್ನು ದಿಟ್ಟಿಸಲಾರದ ಗಿರೆಪ್ಪ ಕಂಠ ತುಂಬಿ ಬಂದು ಯಮುನೆಯನ್ನು ತಬ್ಬಿಕೊಂಡು ಎಳೆಮಗುವಿನಂತೆ ಗಳಗಳನೆ ಅತ್ತುಬಿಟ್ಟ.
ಎಂದಿನಂತೆ ಕತ್ತಲು ಒಡೆದು ಬೆಳಕು ಚಿಮ್ಮುವ ಮುನ್ನವೇ ಎಸರಿಟ್ಟು ಒಲೆಯ ಮುಂದೆ ಕೂತಾಗ ಗಿರೆಪ್ಪನ ಕಣ್ಣುಗಳು ಮಗಳ ನೆನಪಿನಿಂದ ಮಂಜಾದವು. ಮೊದಲೂ ಅವನೇ ಈ ಕೆಲಸವನ್ನು ಮಾಡುತ್ತಿದ್ದರೂ ಅಂದಿಗೂ ಇಂದಿಗೂ ಎಷ್ಟು ಅಂತರ!?…..
ತುತ್ತು ಅವನ ಗಂಟಲಲ್ಲಿ ಇಳಿಯದಾಯಿತು.
ಈಗ ಅವನು ಮಗಳ ಮೇಲಿದ್ದ ಪ್ರೀತಿ ಭಾರವನ್ನೆಲ್ಲ ಯಮುನೆಗೆ ವರ್ಗಾಯಿಸಿ, ಕನವರಿಸುತ್ತ ಒಮ್ಮೊಮ್ಮೆ ಅದನ್ನು ‘ಅಮ್ರೀ’ ಎಂದೇ ಕರೆದು ಬಿಡುತ್ತಿದ್ದ.
ಸಂಪೊಳ್ಳಿಯಿಂದ ಮುಖೇಡಳ್ಳಿಗೆ ಇಪ್ಪತ್ತೈದು ಮೈಲಿಗಳ ದೂರ. ತಾನು ಮದುವೆಯಾದ ಎರಡು ಮೂರು ವರ್ಷಕ್ಕೆ ತೌರಿಗೆ ಎರಡು ಬಾರಿ ಬಂದಿದ್ದ ಅಮರವ್ವ, ಸರಿಯಾಗಿ ನಾಕು ದಿನವೂ ತೌರಲ್ಲಿ ನಿಲ್ಲದೆ,
‘ಹಿರ್ಯಾನ್ ಊಟಕ್ಕೆ ತರಾಸ್ ಆಕ್ಸೈತಿ’ ಎಂದು ಬಂದಂತೆಯೇ ಹಿಂತಿರುಗಿದ್ದಳು.
ಗಿರೆಪ್ಪನಿಗೆ ಕರಳು ಚುರುಕ್ಕೆನಿಸಿದರೂ ಮಗಳನ್ನು ಒತ್ತಾಯ ಮಾಡಿ ನಿಲ್ಲಿಸಿಕೊಳ್ಳಲಿಲ್ಲ.
“ಅವರ ವ್ಯಾಳ್ಯ, ಮನ್ಸು ಹೆಂಗೋ….. ಹೂಂ….. ಲಗೂನ ಹೊರಡ ಮತ್ತ” ಎನ್ನುತ್ತ ತಂದೆ, ಸಿಕ್ಕ ಅವಕಾಶದಲ್ಲೇ ಬುಟ್ಟಿಗೆ ಪೇರುಕಾಯಿ, ಬಳುವಲಕಾಯಿ, ನೀರಳದ ಹಣ್ಣು-ಕಾಯಿಪಲ್ಲೆಗಳು, ಬೆಂಡು ಬತ್ತಾಸುಗಳನ್ನು ತುಂಬಿಸಿ ಮೇಲೆ ಒಂದು ಹೊಸ ಸೀರೆ-ಕುಬುಸದ ಕಣವಿರಿಸಿ ಗಾಡಿ ಕಟ್ಟಿಸಿ ಮಗಳನ್ನು ಕಳಿಸಿಕೊಟ್ಟಿದ್ದ.
ನಾಲ್ಕಾರು ವರ್ಷಗಳಲ್ಲಿ ಅಮರವ್ವನ ಮನೆಯ ತುಂಬಾ ಮಕ್ಕಳು ನಲಿದಾಡಿದಾಗ ಗಿರೆಪ್ಪನೂ ಖುಷಿಯಿಂದ ಮೊಮ್ಮಕ್ಕಳೊಡನೆ ಕುಣಿದಾಡಿದ್ದುಂಟು. ಆದರೆ ಎಂದೂ ಅವನು ಒಂದೆರಡು ದಿನಗಳಿಗಿಂತ ಹೆಚ್ಚು ಮಗಳ ಮನೆಯಲ್ಲಿ ನಿಲ್ಲುವಂತಿರಲಿಲ್ಲ. ತನ್ನ ಮನೆಯಲ್ಲಿ ಯಮುನೆ ಒಬ್ಬಳೇ. ದಿನೇ ದಿನೇ ಬಾಡುತ್ತಿರುವ ಅವಳ ಮತ್ತು ಕೈ ತೋಟದ ಆರೈಕೆಯ ಚಿಂತೆಯಿಂದ ಗಿರೆಪ್ಪ ಸಂಪೊಳ್ಳಿಗೆ ಓಡಿ ಬರುತ್ತಿದ್ದ.
ಈ ಬಾರಿ ಮಳೆಯೇ ಕಾಣದ ಅವನ ಜಮೀನೆಲ್ಲ ಒಣಗಿ ಬೆಂಡಾಗಿತ್ತು. ಅವನು ದುಡಿಯುತ್ತಿದ್ದ ಧಣಿಯ ಭೂಮಿ ಕೂಡ ತೇವ ಕಾಣದೆ ಒಣಗಿ ಬಿರುಕು ಬಿಟ್ಟಿತ್ತು.
ಈಗ ಕೆಲಸವೇನಿಲ್ಲ ಎಂದು ಗೌಡರು ತಾರಮ್ಮಯ್ಯ ಆಡಿಸಿದಾಗ ಗಿರೆಪ್ಪನಂತೆ ಅವನ ಜಮೀನಿನಲ್ಲಿ ಸಾಗುವಳಿ ನಡೆಸಿದ್ದ ಸಣ್ಣ ರೈತರುಗಳೆಲ್ಲ ನಿರಾಸೆಯ ಅಲಾಪವೆಳೆಯುತ್ತ ಅಲ್ಲಿಂದ ತಮ್ಮ ತಮ್ಮ ಮನೆಗಳತ್ತ ಹೊರಳಿದಾಗ ಗಿರೆಪ್ಪನ ಗಂಟಲು ಬತ್ತಿಹೋಗಿತ್ತು. ತುಟಿಗಳು ಮೆತ್ತಿಕೊಂಡು ತೊಲೆಗಾಲನ್ನು ಒತ್ತಾಯವಾಗಿ ಕಿತ್ತಿಡುತ್ತ ಪ್ರಯಾಸದಿಂದ ಅವನು ತನ್ನ ಮನೆ ಬಾಗಿಲಿಗೆ ಬಂದಾಗ, ಇಬ್ಬದಿಯ ಹೂವಿನ ಗಿಡಗಳೂ ಮೂಳೆಯ ಚಕ್ಕಳವಾಗಿ ಒಣಗಿ ನಿಂತದ್ದು ಕಣ್ಣಿಗೆ ಬಿದ್ದು ಕರುಳು ಹಿಂಡಿತ್ತು. ಅವನರಿವಿಲ್ಲದೆ ನಿಟ್ಟಿಸಿರೊಂದು ಹೊರಬಿತ್ತು. ಅವನ ಶೂನ್ಯದೃಷ್ಟಿ ಅಪ್ರಯತ್ನವಾಗಿ ಕಾಯಿಪಲ್ಯಗಳ ಗಿಡಗಳತ್ತ ಹರಿದಾಗ ಕಣ್ಣಿಗೆ ಕಾವು ಬಡಿದಂತಾಯಿತ್ತು….. ಲೋಚಗುಟ್ಟಿದ ಅವನ ಧ್ವನಿಗೆ ಬಲವಿರಲಿಲ್ಲ….. ಉಸ್ ಎಂದು ಅವನು ಒಳಗೆ ಬಂದು ಕೂತಾಗಲೇ ಯಮುನೆಯ ನೆನೆಪು. ತಕ್ಷಣ ಅವನು ಪುಟ್ಟಕ್ಕನೆ, ಮೇಲೆದ್ದು ಕೊಟ್ಟಿಗೆಯೊಳಗೆ ನುಗ್ಗಿದ.
ವಿಗ್ರಹದಂತೆ ಅಲುಗಾಡದೇ ನಿಂತಿದ್ದ ಬಡಕಲು ಮೈ ಯಮುನೆ ತನ್ನ ಕಣ್ಣಿನಿಂದ ಹರಿಯುತ್ತಿದ್ದ ನೀರನ್ನೇ ಚಪ್ಪರಿಸುತ್ತಿದ್ದ ದೃಶ್ಯ ಕಂಡು ಗಿರೆಪ್ಪ- “ಯಮನವ್ವ” ಎಂದು ಉದ್ವಿಗ್ನವಾಗಿ ಉಸುರುತ್ತ ಅದರ ಬಳಿ ಸಾರಿದವನು ಅಸಹಾಯಕನಾಗಿ ಧ್ವನಿಗರೆದು ಅದನ್ನು ತಬ್ಬಿಕೊಂಡು ಕುಳಿತ ಗಂಟೆಗಟ್ಟಲೆ.
ಮುಂದಿನ ದಿನಗಳನ್ನು ಕುರಿತು ಯೋಚಿಸುತ್ತ ಹೋದಂತೆ ಅವನ ತಲೆ ಉಬ್ಬೆಯಾಯಿತು. ಭರವಸೆ ಬತ್ತಿದ ಅವನ ನಿಸ್ತೇಜ ಕಣ್ಣುಗಳು ನಿರಾಸೆಯಿಂದ ಆಗಸದತ್ತ ಶೂನ್ಯ ನೋಟವನ್ನು ತೇಲಿಸಿದವು.
ರಾಗ ದ್ವೇಷಗಳಲ್ಲಿದ್ದ, ಸ್ಥಿತಿಪ್ರಜ್ಞಾ ವಿರಾಗಿಣಿಯಂತೆ ಶ್ವೇತ ಪತ್ತಲ ತೊಟ್ಟ ಆಕಾಶ ಔದಾಸೀನ್ಯದ ಶುಷ್ಕ ಮುಖ ಮುದ್ರೆ ತಳೆದಿತ್ತು. ಬಂಜೆ ಮೋಡಗಳ ನಿರಾಸೆ ಹರವು ಕಣ್ಣು ಹರಿಸಿದಷ್ಟೂ… ನೀರಿದ್ದರೆ ಅದು ಗಿರೆಪ್ಪನ ಕಣ್ಣುಗಳಲ್ಲಷ್ಟೇ. ಜೊಲ್ಲಿದ್ದರೆ ಅದು ಯಮುನೆಯ ಕಟ್ಟವಾಯಿಯಲ್ಲಷ್ಟೇ. ಬಿಸುಸುಯ್ದು ಮೇಲೆದ್ದ ಗಿರೆಪ್ಪ. ಅವನ ಕಾಲುಗಳು ತೊಲೆ ಕಟ್ಟಿದಷ್ಟು ಭಾರವಾಗಿದ್ದವು.
ರಾತ್ರಿಯೆಲ್ಲ ಹೊರಳಾಡುತ್ತಿದ್ದ ಗಿರೆಪ್ಪನ್ನ ಎದೆ ಹೊಟ್ಟೆಯಲ್ಲಿ ಒಂದು ನಮೂನೆಯ ಸುಸ್ತು, ಸಂಕಟ. ಈ ಬಗೆಯ ಹೋರಾಟ ಆರಂಭವಾಗಿ ತಿಂಗಳೊಪ್ಪತ್ತು ಕಳೆದಿರಬೇಕು.
ಮೃಗಶಿರದಿಂದ ಹಾತೊರೆದಿದ್ದ ಮಳೆಹನಿಗಳು ತುಟಿಯೂ ಒದ್ದೆ ಮಾಡದೆ ಹಾಗೇ ಹಾರಿಹೋಗಿದ್ದವು. ಅಂದಿನಿಂದ ಇಂದಿನವರೆಗೆ ಆರೇಳು ತಿಂಗಳುಗಳಾಗಿವೆ. ಭಾರವಾದ ಮೋಡಗಳೇ ಪತ್ತೆ ಇಲ್ಲ. ಬಾಣಂತಿ ಮೊಗದಂತೆ ಬಿಳುಚಿಕೊಂಡ ಪಾರದರ್ಶಕ ಸೆರಗು….. ನೋಟ ಹಾಸಿದಷ್ಟು ತುಂಬಿಕೊಳ್ಳುವ ಬರೀ ಒಣನೆಲ ಬಯಲು….. ಮೈಲುಗಟ್ಟಲೆ, ಕುರುಚಲು ಗಿಡವೂ ಕಾಣದ ಬಟಾಬಯಲು….. ಕೆಂಡದಗಳುಗಳಂತೆ ಕುಣಿಯುವ ಎರೇಮಣ್ಣು.
ಧಣಿಯ ಬಳಿ ಕಾಡಿ ಬೇಡಿ ತಂದ ಕಾಳುಗಳೂ ತೀರುತ್ತ ಬಂದಾಗ ಗಿರೆಪ್ಪನ ಹೃದಯ ಭೀತಿಯಿಂದ ಹೌಹಾರಿತು. ಬಿರು ಬಿಸಿಲಿಗೆ ಮೈ ಬಿಚ್ಚಿ ಮಲಗಿದ್ದ ತನ್ನ ಹೊಲದ ಹಸಿರು ಕನಸು ಕಾಣುತ್ತ, ಬಾನನ್ನು ವ್ಯರ್ಥವಾಗಿ ನಿರುಕಿಸುತ್ತ ಕುಳಿತ ಅವನ ಕಣ್ಣುಗುಡ್ಡೆಗಳಲ್ಲಿ ಹೊಪ್ಪಳಿಕೆಗಳು ಬಂದವು.
ದಿನವೆಲ್ಲ ಹುಬ್ಬಿಗೆ ಕೈ-ಹಚ್ಚಿ ಆಕಾಶದತ್ತ ನೋಡುವುದೇ ದೊಡ್ಡ ಕಸುಬಾಯಿತು ಸಂಪೊಳ್ಳಿಯ ಮಂದಿಗೆಲ್ಲ. ಸುತ್ತಮುತ್ತ ಯಾವ ಹಳ್ಳಿಯ ಎತ್ತ ಹೋದರೂ ಅದೇ ಮಾತು-ನಿಟ್ಟುಸಿರು. ಈ ಜನಕ್ಕೆ ಬೇರೆ ಮಾತೇ ಬಾರದೇನೋ ಎನ್ನುವ ಹಾಗೆ ಮಾತು ಎಲ್ಲೆಂದಲ್ಲಿ ಪ್ರಾರಂಭವಾದರೂ ಅದು ಮುಕ್ತಾಯವಾಗುವುದು ಅದೇ ಪರಿಧಿಯೊಳಗೆ…ಅದೇ ಬಲೆ…ಅದೇ ಎಳೆಗಳು..
ಇದರಿಂದ ಗಿರೆಪ್ಪನಿಗೆ ತಲೆ ಚಿಟ್ಟು ಹಿಡಿದು ಹೋಗಿ ಸದಾ ಮನೆಯೊಳಗೇ ಯುಮುನೆಯ ಮೈನೇವರಿಸುತ್ತ ಬೊಂಬೆಯಂತೆ ಕುಳಿತಿರುತ್ತಿದ್ದ.
ಯುಮುನೆಯನ್ನೇ ದಿಟ್ಟಿಸಿ ನೋಡುತ್ತಿದ್ದವನ ಕಣ್ಣೊಳಗೆ ನೀರುಕ್ಕುತ್ತಿತ್ತು. ಅತ್ತೆಯ ಮನೆಯ ಸೊಸೆಯಂತೆ ಆಡಲಾರದೆ ಅನುಭವಿಸಲಾರದೆ ಒಳಗೇ ನೋಯುತ್ತ, ಬೇಯುತ್ತ ಕುಗ್ಗಿಹೋಗಿರುವ ಯಮುನೆ ದಿನೇದಿನೇ ಮೂಳೆಯ ಹಂದರವಾಗುತ್ತಿದ್ದಾಳೆ. ತನ್ನ ಹಸಿವು-ಬಾಯಾರಿಕೆ, ದುಃಖಗಳನ್ನು ಆರ್ಭಟಿಸಿ ಪ್ರದರ್ಶಿಸಲಿಚ್ಛಿಸದ ಯಮುನೆ ಮಹಾಸಾಧ್ವಿಯಂತೆ ಕೊಟ್ಟಿಗೆಯ ಮರೆಯಲ್ಲೇ ನವೆಯುತ್ತಿರುವುದನ್ನು ಕಂಡು ಗಿರೆಪ್ಪ ನೋವಿನಿಂದ ಬಿಕ್ಕಳಿಸಿದ.
ಹಸಿರು ಸತ್ತ ಹಿತ್ತಿಲು. ತೇವ ಕಾಣದ ಕೊಡ – ಬಾರ್ಡಿಗಳು ಬೋರಲು ಬಿದ್ದ ಮಡಿಕೆ- ಕುಡಿಕೆಗಳು, ತಣ್ಣಗಾದ ಒಲೆಯ ಪ್ರೇತದೃಶ್ಯವನ್ನು ದಿನದಿನವೂ ಕಾಣುತ್ತಿದ್ದ ಗಿರೆಪ್ಪನ ಹೃದಯ ಭಗ್ಗೆಂದು ಉರಿಯಿತು, ನೋವಿನಿಂದ- ಹಸಿವಿನಿಂದ.
ಇಡೀ ಸಂಪೊಳ್ಳಿಯೇ ವಿಷಾದದ ಭಿತ್ತಿಚಿತ್ರದಂತೆ ಸ್ತಬ್ಧಗೊಂಡಿತ್ತು.
ನಿಲ್ಲಲು ಶಕ್ತಿಯಿಲ್ಲದೆ ಯಮುನೆ ಕುಸಿದು ಒರಗಿದ್ದಳು. ಈ ಘೋರ ದೃಶ್ಯವನ್ನು ನೋಡಲಾರದೆ ಗಿರೆಪ್ಪ ಅಲ್ಲಿಂದೆದ್ದು ಮುಂಬಾಗಿಲಿಗೆ ಬಂದರೆ ಯಾರೋ ಹೊಯ್ಕೊಳ್ಳೋದು ಕೇಳಿಸಿತು. ರಾಗಣ್ಣಿ ಬಂದು ಜನಗಳನ್ನು ಗುಡ್ಡೆ ಹಾಕಿಕೊಂಡು ಹೇಳುತ್ತಿದ್ದ.
“ಸಂಗಪ್ಪನ ಮನ್ಯಾಗಿನ ಇದ್ ಬದ್ ಸಾಮಾನೆಲ್ಲ ಬ್ಯಾಂಕ್‍ನೋರು ಬಂದ ಜಪ್ತ್ ಮಾಡ್ಕೊಂಡು ಹೋಗ್ಯಾರ ಸಾಲ ಹಿಂದಕ ಕೊಡ್ಲಿಲ್ಲಾಂತ….. ಅದಕ್ಕೆ ಅವನ ಹೆಂಡ್ರು-ಮಕ್ಳು ಜಗ್ಯಾಡ್ತಿದ್ರು….. ಸಂಗಪ್ಪ ಅವರ ಕಾಲಿಗೆ ಬೀಳ್ತಿದ್ದ…..”
ಎಲ್ಲರೂ ಸಂಗಪ್ಪನ ಮನೆಯತ್ತ ದುಬದುಬನೆ ಓಡಿದರು, ಗಿರೆಪ್ಪನೊಬ್ಬನ ಹೊರತಾಗಿ. ನಿಂತಲ್ಲೇ ಅವನು ಕಲ್ಲಾಗಿ ಬೇರುಬಿಟ್ಟಿದ್ದ .
ಸಂಪೊಳ್ಳಿಯ ಸುತ್ತಮುತ್ತಲ ಎಂಟ್ಹತ್ತು ಹಳ್ಳಿಗಳಿಗೆ ಮಾರಿಯಂತೆ ಬಂದೆರಗಿದ್ದ ಬರ, ನೆಲ ಗಿಡಗಳನ್ನು ಮಾತ್ರವಲ್ಲದೆ ಜನಗಳ ಮೈಯ ನೀರನ್ನೂ ಒಣಗಿಸಹತ್ತಿತ್ತು. ಗುಂಡಿ-ಕೆರೆ ಬಾವಿಗಳೆಲ್ಲ ಬತ್ತಿ, ನೆಲವೆಲ್ಲಾ ಅಳುದ್ದ ಬಿರುಕಿ, ನಿಂತಲ್ಲಿ ಜನ-ದನ ಕುಸಿಯುವಂಥ ದಾರುಣ ಅವಸ್ಥೆಯನ್ನು ತಳೆದಿತ್ತು ಸಂಪೊಳ್ಳಿ. ಕಂಡೂ ಕೇಳದ ನೆಂಟರಿಷ್ಟರನ್ನು ಹುಡುಕಿಕೊಂಡು ಹೊರಟರು ಎಷ್ಟೋ ಮಂದಿ. ಸುತ್ತಮುತ್ತ ಕೆಲಸ ಸಿಗದಾಗ ಉದ್ಯೋಗವನ್ನರಸಿ ಹೊರಟವರದೇ ಇನ್ನೊಂದು ತಂಡ. ಗಿರೆಪ್ಪನಿಗೆ ಮಗಳ ನೆನಪಾದರೂ ಕದಲಲಿಲ್ಲ ಅವನು. ಆದರೆ ಯಮುನೆಯ ದಾರುಣ ಸ್ಥಿತಿ ಅವನ ಕರುಳನ್ನು ಹಿಂಡಿತು. ಮನೆಯಲ್ಲಿ ಒಂದು ಹಿಡಿ ಮೇವಿಲ್ಲ. ಕರಿಕೆ ಮೇವಿನ ಹುಡಿಯಿಲ್ಲದ ಶುಭ್ರ ಕೊಟ್ಟಿಗೆ. ಹನಿ ಜಿನುಗಿಲ್ಲದ ಬಾರ್ಡಿಗಳು, ಮಂಕಾಗಿ ಸೊರಗಿ ನಿಂತ ಯಮುನೆ.
ಇದು ಕೇವಲ ಗಿರೆಪ್ಪನ ಮನೆಯ ದೃಶ್ಯ ಮಾತ್ರವಲ್ಲ. ಇಡೀ ಸಂಪೊಳ್ಳಿಯನ್ನು ಕಂಗೆಡಿಸಿದ್ದ ಕ್ಷಾಮದ ಭೀಕರ ಚಿತ್ರವಾಗಿತ್ತು. ದಿನೇ ದಿನೇ ಸಾಯುತ್ತಿದ್ದ ಜಾನುವಾರುಗಳ ಲೆಕ್ಕವಿಟ್ಟವರಿಲ್ಲ. ನೀರು, ಮೇವಿಲ್ಲದೆ ಸಾಯುತ್ತಿದ್ದ ದನಗಳು, ಕಣ್ಮರೆಯಾಗಾದರೂ ಸಾಯಲೆಂಬ ಕರುಣೆಯುಳ್ಳ ಮಂದಿ ಅವುಗಳನ್ನು ದೂರದೂರಗಳ ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದುದೂ ಉಂಟು. ಆದರೆ ತುಂಡಾದ ದನಗಳು ತರುತ್ತಿದ್ದ ಹಣ ಮಾತ್ರ ಅವರಿಗೆ ನಾಲ್ಕು ದಿನದ ರೊಟ್ಟಿಗೂ ಸಾಲುತ್ತಿರಲಿಲ್ಲ.
ಕರುಳು ಕೊಯ್ಯುವ ಪ್ರತಿದಿನದ ಈ ನೋಟ ಗಿರೆಪ್ಪನ ಹೃದಯವನ್ನು ತಲ್ಲಣಗೊಳಿಸುತ್ತಿತ್ತು. ತನ್ನ ಒಲವಿನ ಯಮುನೆಯನ್ನು ಆ ಸ್ಥಿತಿಯಲ್ಲಿ ಕಲ್ಪಿಸಿಕೊಂಡವನ ಕಣ್ತುಂಬಿ ಬಂದು, ತನ್ನ ಹೀನ ಆಲೋಚನೆಗೆ ಹೇಸಿ ತಲೆ ಕೊಡವುತ್ತಿದ್ದ. ಆದರೆ ರಾತ್ರಿಯಿಡೀ ಅದೇ ಯೋಚನೆಗಳು ಕುಣಿದು ಅವನು ಕಡೆಗೊಂದು ತೀರ್ಮಾನಕ್ಕೆ ಬಂದಿದ್ದ.
ಹೊತ್ತು ಹುಟ್ಟುವ ಮುನ್ನವೇ ಯಮುನೆಯನ್ನು ಊರ ಹೊರಗೆ ಬಹುದೂರ ನಡೆಸಿಕೊಂಡು ಹೊರಟ ಗಿರೆಪ್ಪ. ನಡೆದಷ್ಟೂ ಬರೀ ಬಯಲೇ. ಒಣಗಿದ ಗಂಟಲನ್ನು ಒದ್ದೆ ಮಾಡಿಕೊಳ್ಳಲೂ ಅವನ ಬಾಯಲ್ಲಿ ಜೊಲ್ಲಿರಲಿಲ್ಲ. ಕಾಲು ಕುಸಿಯುತ್ತಿತ್ತು. ಮುಗ್ಧ ಯಮುನೆ ಮಂದಗತಿಯಲ್ಲಿ ಹೆಜ್ಜೆ ಎಳೆಯುತ್ತಿದ್ದಳು. ಮೈಲುಗಟ್ಟಲೆ ನಡೆದ ಮೇಲೆ ಕೆಲವು ಕಲ್ಲುಬಂಡೆ-ಮರಡಿಯಂಥ ಪ್ರದೇಶ ಸಿಕ್ಕಿತು. ಯಮುನೆಯನ್ನು ಅಲ್ಲಿ ಬಿಟ್ಟ ಗಿರೆಪ್ಪ ಅದರ ಹಣೆಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು, ಚಿಮ್ಮುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತ- “ನನ್ನ ತೆಪ್ಪಾತು ಯಮನವ್ವಾ” ಎಂದು ಅಳಲು ವ್ಯಕ್ತಪಡಿಸಿ ಹಿಂತಿರುಗಿ ಸಹ ನೋಡದೆ ಸಂಪೊಳ್ಳಿಯತ್ತ ಓಟಕಿತ್ತ.
ಮನೆಯತ್ತ ಓಡೋಡಿ ಬರುತ್ತಿದ್ದವನ ವೇಗ ಅರ್ಧದಾರಿಯ ಹೊತ್ತಿಗೆ ತಗ್ಗಿತು. ದನಗಳ ದೊಡ್ಡ ಹಿಂಡು ರಸ್ತೆಗಡ್ಡವಾಯಿತು. ಬದಿಗೆ ಸರಿದು ಏದುಸಿರು ಬಿಡುತ್ತ ನಿಂತ ಗಿರೆಪ್ಪ, ಹಿಂಡಿನ ಹಿಂದೆ ಬರುತ್ತಿದ್ದ ಹೊಸಬನತ್ತ ಕಕ್ಕಾಬಿಕ್ಕಿಯಾಗಿ ದಿಟ್ಟಿಸಿದ. ಪಟಾಪಟ್ಟಿ ಬಣ್ಣದ ಲುಂಗಿ, ಕುರುಚಲ ಗಡ್ಡ, ಪಿಳಿಚುಗಣ್ಣಿನ ಆಸಾಮಿಯ ಕೈಲೊಂದು ಸಣ್ಣ ರೆಂಬೆಯ ಕೋಲು. ಸಾವಿನ ಭೀತಿಯಿಲ್ಲದೆ ಸ್ಥಿತಪ್ರಜ್ಞತೆಯಿಂದ ಮುಂದೆ ಸಾಗುತ್ತಿದ್ದ ಬಡಕಲು ದನಗಳ ನಡುವೆ ತನ್ನ ಯಮುನೆಯನ್ನು ಕಂಡ ಹಾಗಾಗಿ ಉಸಿರು ಬಿಗಿಹಿಡಿದು ನಿಂತ ಗಿರೆಪ್ಪ.
ಮನೆಗೆ ಬಂದು ಎಷ್ಟು ಹೊತ್ತಾದರೂ ಅವನಿಗೆ ದಮ್ಮು ನಿಲ್ಲಲಿಲ್ಲ. ಹೊಟ್ಟೆಯಲ್ಲಿ ಏನೋ ಸಂಕಟ, ನೆಲದಲ್ಲಿ ಬಿದ್ದು ಹೊರಳಾಡಿದ. ಮೈಯೆಲ್ಲಾ ಕೊಳ್ಳಿ ನೆಟ್ಟ ಉರಿ. ತಾನು ಮಾಡಿದ ಕಟುಕ ಕೃತ್ಯಕ್ಕಾಗಿ ಅವನ ಹೃದಯ-ಕರುಳು ಹಿಂಡಿ ಹಿಪ್ಪೆಯಾಗಿತ್ತು.
“ಯಮನವ್ವಾ” ಎಂದು ಕನವರಿಸುತ್ತ ಬಿಕ್ಕಳಿಸಿ ತನ್ನ ತಲೆಗೂದಲನ್ನು ಕಿತ್ತುಕೊಂಡು ಅಳತೊಡಗಿದ.
ಸ್ವಲ್ಪ ಹೊತ್ತು ಕಣ್ಣು ತೂಗಿದ ಹಾಗಾಯಿತು. “ಯಮನವ್ವ” ಎಂದು ಕನವರಿಸಿದ್ದಕ್ಕೆ ಉತ್ತರವಾಗಿ ಹೊರಗಿನಿಂದ ‘ಅಂಬಾ’ ಎಂಬ ಧ್ವನಿ ಕೇಳಿ ಬುಡಕ್ಕನೆ ಅಚ್ಚರಿಯಿಂದ ಹೊರಳೆದ್ದು ಕೂತ. ಕದ ತೆಗೆದು ಅವನು ಆಚೆಗೋಡಿ ಬಂದರೆ ಎದುರಿಗೆ ಯಮುನೆ!… ಅದು ತೆವಳು ನಡಿಗೆಯಲ್ಲಿ ಕಾಲೆಳೆಯುತ್ತ ಬಂದು ಅವನ ಮುಂಗೈ ನೆಕ್ಕಿತು.
ಯಮುನೆಯ ಮೂಕಪ್ರೀತಿಗೆ ಗರಬಡಿದು ನಿಂತ ಕ್ಷಣಕಾಲ. ಉಸಿರುಗಟ್ಟಿ ನಿಂತವನು ಕೆಳಗೆ ಕುಸಿದ.
ಅಂದು ಕುಸಿದು ನೆಲಕ್ಕೆ ಬಿದ್ದವನು ಮತ್ತೆ ಮೇಲೇಳದ ಹಾಗೆ ಹಾಸಿಗೆ ಹತ್ತಿದ ಗಿರೆಪ್ಪ. ತಂದೆಯ ಜಡ್ಡಿನ ಸುದ್ದಿ ತಿಳಿದ ಅಮರವ್ವ ಗಂಡನೊಂದಿಗೆ ಸಂಪೊಳ್ಳಿಗೆ ಧಾವಿಸಿ ಬಂದಳು. ಇಂಥ ದುರ್ಬರ ಪರಿಸ್ಥಿತಿಯಲ್ಲೂ ಅಪ್ಪಾ ತನಗೆ ಹೇಳಿ ಕಳಿಸಲಿಲ್ಲವೆಂದು ಮುನಿಸಿನಿಂದ ಕೂಗಾಡಿದಳು. ತಾನಪ್ಪ, ಮಾವನ ಯೋಗಕ್ಷೇಮವನ್ನು ಔಪಚಾರಿಕವಾಗಿ ವಿಚಾರಿಸಿ ಎರಡು ಮಾತಾಡಿದವನು ದಿನವೆರಡರಲ್ಲಿ ಹೊರಟುಬಿಟ್ಟ.
ಅಮರವ್ವ ತಾನು ಜೊತೆಯಲ್ಲಿ ತಂದಿದ್ದ ಆಹಾರ ಪದಾರ್ಥಗಳನ್ನು, ಕಾಳುಗಳನ್ನು ಮಡಿಕೆಯಲ್ಲಿ ತುಂಬಿಸಿಟ್ಟಳು. ಜಿಗಟು ಹಾಕಿ ನಾದಿ, ಹಿಟ್ಟನ್ನು ಕಲೆಸಿ ರೊಟ್ಟಿ ಮಾಡಿ ತಂದೆಗೆ ಉಣಬಡಿಸಿ ಅದನ್ನೇ ಸ್ವಲ್ಪ ಯಮುನೆಗೂ ತಿನ್ನಿಸಿದಳು. ತಿನ್ನುವುದೇ ಮರೆತು ಹೋಗಿದ್ದ ಯಮುನೆಗೆ ಆಂಟಿಕೊಂಡ ಬಾಯನ್ನಗಲಿಸಿ ನುಂಗುವುದು ಸ್ಪಲ್ಪ ತ್ರಾಸದಾಯಕವಾಯಿತು.
“ಯಪ್ಪಾ….. ನೀನು ನಮ್ಮೂರಿಗೆ ಯಾಕ್ ಬರದಂಗ್ ಹ್ವಾದಿ….. ಅಲ್ಲಿ ಇಲ್ಲಿಗಿಂತ ಎಷ್ಟೋ ಛಲೋ….. ಮೇವು ನಮ್ಮನೇಲೈತಿ….. ಅಲ್ಲಿಗ್ ಹೋಗೋಣ್ ನಡಿ” ಎಂದು ಒತ್ತಾಯ ಹಾಕಿದಳು ಅಮರವ್ವ.
ಗಿರೆಪ್ಪ ಮೌನವಾಗಿದ್ದ. ಮತ್ತವಳು, ಅವನನ್ನು ಒತ್ತಾಯಪಡಿಸಲಿಲ್ಲ, ವಾರದೊಳಗೇ ಹೊರಟು ನಿಂತಳು.
“ಆತಗ, ಮಕ್ಕಳಿಗ ತ್ರಾಸಾಕ್ತೈತಿ”
ಗಿರೆಪ್ಪ ಮೌನವಾಗಿ ಮಗಳನ್ನೇ ದಿಟ್ಟಿಸಿ ನೋಡಿದ. ಅವಳ ಮುಖದ ತುಂಬಾ ಗಂಡ- ಮಕ್ಕಳ ಚಿಂತೆಯೇ ತುಂಬಿತ್ತು.
ಗಿರೆಪ್ಪ ಬಹಳ ಕಷ್ಟಪಟ್ಟು ನುಡಿದ; “ಅಮರವ್ವ ನೀನೊಂದು ಕೆಲ್ಸ ಮಾಡ್ತೀ?”
“ಯಂತದದು ಹೇಳಪ್ಪ, ಯಾಕಾಗವಲ್ದು?” ಅವಳು ತಂದೆಯ ಮಗ್ಗುಲಿಗೆ ಬಂದು ಕುಳಿತಳು.
“ನನ್ ಉಸಾಬರಿ ನಿಂಗ್ ಬ್ಯಾಡವ್ವ… ಆದ್ರ ನಿನ್ನ ತಂಗಿ ಯಮನವ್ವ ಆಕಿನ್ನೊಂದೀಟ್ ನೋಡ….. ಆಕೀನ ನಿನ್ ಮಡ್ಲ್ಯಾಗ್ ಹಾಕೀನಿ….. ಆಕೀನ ಜ್ವಾಪಾನ ಮಾಡೋದ ನಿನಗಾ ಬಿಟ್ಟೀನಿ…. ಆಕಿ ದುಃಖ ನೋಡ್ತಾ ನಾ ಬದಕೋ ಹಾಂಗಿಲ್ಲವ್ವ” ಎಂದ ಕುಸಿಗೊರಳಲ್ಲಿ.
“ಹಾಂಗ ಆಗ್ಲ್ಯಪ್ಪ” ಎಂದು ಅಮರವ್ವ ಆಳಿನ ಕೈಲಿ ಯಮುನೆಯನ್ನು ಹೊಡೆಸಿಕೊಂಡು ತನ್ನೂರಿಗೆ ಹೊರಡಲು ಪ್ರಯತ್ನಿಸಿದಳು. ಆದರೆ ಯಮುನೆ ತಾನು ಹುಟ್ಟಿದ ಮನೆಯಿಂದ ಇಂಚೂ ಕದಲಲಿಲ್ಲ. ಬಲಾತ್ಕಾರ ವ್ಯರ್ಥವಾಯಿತು. ಆ ಕೊಟ್ಟಿಗೆಯನ್ನು ತೊರೆಯಲು ಯಮುನೆ ಪ್ರತಿಭಟಿಸಿದಳು. ಮೊಂಡು ಹಿಡಿದು “ಅಂಬಾ” ಎಂದು ಒರಲುತ್ತ ನೆಲಕ್ಕೆ ಕಾಲೊತ್ತಿ ಹಿಡಿದಳು.
ಯಮುನೆ ಜಗ್ಯಾಡಿತು, ಕೂಗಾಡಿತು.. ಮೂಗುದಾರ ಹಿಡಿಯಲು ಬಂದ ಆಳನ್ನು ಕಾಯ್ದು ಹಿಮ್ಮೆಟ್ಟೆಸಿತು.
ಅಮರವ್ವನ ಪ್ರಯಾಣ ಮತ್ತೊಂದು ದಿನ ಮುಂದಕ್ಕೆ ಹೋಯಿತು. ಮರುದಿನವೂ ಯಮುನೆ ಸಡಿಲವಾಗಲಿಲ್ಲ. ಹಿಡಿಯಲು ಬಂದ ಅಮರವ್ವನನ್ನೇ ಫೂತ್ಕರಿಸಿ ಗುಮ್ಮಲು ಮುಂದಾಯಿತು. ಗಿರೆಪ್ಪನೂ ಅದಕ್ಕೆ ಎಷ್ಟೋ ಒಲಿಸಿ ಹೇಳಿದ. ಯಮುನೆ ಬಿಗಿಯಾಗಿ ಕುಳಿತುಬಿಟ್ಟಿದ್ದಳು.
ಇನ್ನೊಂದು ದಿನ ಪ್ರಯಾಣವನ್ನು ಮುಂದೂಡಲು ಮಗಳಿಗೆ ತಿಳಿಸಿದ ಗಿರೆಪ್ಪ. ಆದರೆ ಅಮರವ್ವ ಅದಕ್ಕೊಪ್ಪದೆ ಗಾಡಿ ಕಟ್ಟಿಸಲು ಏರ್ಪಾಡು ಮಾಡಿ ಯಮುನೆಯ ಕಾಲುಗಳನ್ನು ಹಗ್ಗದಿಂದ ಬಿಗಿಸಿ ಬಲವಂತವಾಗಿ ಅದನ್ನೆತ್ತಿ ಗಾಡಿಯೊಳಗೆ ಮಲಗಿಸಿ ತಾನು ಹಿಂದುಗಡೆ ಕುಳಿತು ಮುಖೇಡಳ್ಳಿಗೆ ಹೊರಟಳು.
ದಾರಿಯುದ್ದಕ್ಕೂ ಚಡಪಡಿಸುತ್ತಿದ್ದ ಯಮುನೆಯ ಕಣ್ಣಿನಿಂದ ಒಂದೇ ಸಮನೆ ನೀರು ಇಳಿಯುತ್ತಿತ್ತು. ಅಮರವ್ವ ಅದರ ಮೈದಡವಿ ಅದರ ಬಾಯ ಬಳಿ ತುಸು ಮೇವು ಹಿಡಿದಳು. ಅದರೆ ಯಮುನೆ ಸಿಟ್ಟುಗೊಂಡಿದ್ದಳು. ಕಣ್ಣೀರು ಬಿಟ್ಟರೆ ಅವಳಿಂದ ಬೇರೆ ಸೊಲ್ಲೇ ಇಲ್ಲ. ದೂರ ಸಾಗುತ್ತಿದ್ದ ಸಂಪೊಳ್ಳಿಯನ್ನು ಕೊರಳೆತ್ತಿ ದಿಟ್ಟಿಸುತ್ತ ನಿಟ್ಟುಸಿರಿಟ್ಟಿತೇ ಹೊರತು ಮೇವನ್ನು ಮೂಸಲಿಲ್ಲ. ಬಹಳ ದೂರದವರೆಗೆ ಮಂಕಾಗಿ ಒರಗಿದ್ದ ಯುಮುನೆಯ ಒಡಲು ಅವ್ಯಕ್ತ ವ್ಯಥೆಯಿಂದ ಏರಿಳಿಯುತ್ತಿತ್ತು.
ಎಳೆಬಿಸಿಲಿನಲ್ಲಿ ಹೊರಟ ಗಾಡಿ ಅಮರವ್ವನ ಹಳ್ಳಿ ತಲುಪಿದಾಗ ಹೊತ್ತು ಚುರುಕು ಮುಟ್ಟಿಸುತ್ತಿತ್ತು. ಅಮರವ್ವನ ಮೊಗದಲ್ಲಿ ಗೆಲುವಿನ ನಗೆ-ಸಂತಸದ ಓಕುಳಿ. ಒಂದು ಬಗೆಯ ಧಾವಂತದಿಂದ ಗಾಡಿಯಿಂದ ಅವಳು ಕೆಳ ಜಿಗಿದವಳೇ ಮನೆಯೊಳಗಿದ್ದ ಹೆಣ್ಣು ಮಕ್ಕಳನ್ನೆಲ್ಲ ಕೂಗಿ ಹೇಳಿದಳು.
“ಆರ್ತಿ ಮಾಡಕ ಕಳಸದ ತಂಬಿಗಿ, ಆರ್ತೀ ನೀರು ಲಗೂ ತಯಾರ್ ಮಾಡ್ರವ್ವ….. ಮನೀಗ್ ಭಾಗ್ಯಲಕ್ಷ್ಮಿ ಬಂದಾಳ….ಹೂಂ ಲಗೂನ” ಎನ್ನುತ್ತ ಸಂಭ್ರಮಿಸಿ, ತಾನೇ ಒಳಗೆ ಹೋಗಿ ಕಳಸದ ತಂಬಿಗೆ ಮತ್ತು ಒಂದು ತಾಟಿನಲ್ಲಿ ಅರಿಶಿನ ಕುಂಕುಮ, ಆರತಿ, ಕೆಂಪುನೀರು ಎಲ್ಲವನ್ನೂ ತಂದಳು. ಅವಳ ಧ್ವನಿ ಕೇಳಿ ಅವಳ ಮಕ್ಕಳೊಡನೆ ಅಕ್ಕಪಕ್ಕದವರೂ ಕುತೂಹಲದಿಂದ ಹೊರಗುಕ್ಕಿ ಬಂದರು.
ಗಾಡಿ ಹೊಡೆಯುತ್ತಿದ್ದ ಅಳು ಲಗುಬಗೆಯಿಂದ ಯಮುನೆಯ ಕಾಲುಗಳನ್ನು ಬಂಧಿಸಿದ್ದ ಕಟ್ಟುಗಳನ್ನು ಸಡಿಲಿಸಿ ‘ಉಯ್ಯಾ’ ಎಂದು ರಪ್ ಹಾಕಿ ಅದರ ಮೈ ಚಪ್ಪರಿಸಿ ಎಬ್ಬಿಸಲು ಪ್ರಯತ್ನಿಸಿದ. ಅದರೆ ಯಮುನೆ ಮಿಸುಕಾಡಲಿಲ್ಲ!
‘ಯಮನಿ ಏಳವ್ವ’ ಎನ್ನುತ್ತ ಅಮರವ್ವ ಮೃದುವಾಗಿ ಅದರ ಮೈ ತಟ್ಟಿ ಎಬ್ಬಿಸಲು ನೋಡಿದಳು. ಇನ್ನೂ ಯಮುನೆಯ ಹಟ –ಮುನಿಸು ಕರಗಿಲ್ಲವೆಂದು ಭಾವಿಸಿದ ಅವಳ ಮೊಗದಲ್ಲಿ ಕಿರುನಗೆ ತೇಲಿತು.
ಮುತ್ತೈದೆಯರು ಭಾಗ್ಯಲಕ್ಷ್ಮಿಯನ್ನು ಬರಮಾಡಿಕೊಳ್ಳಲು ಆರತಿ ಹಿಡಿದು ಸಿದ್ಧರಾಗಿ ನಿಂತಿದ್ದರು.
ಆಳು ಮತ್ತೊಮ್ಮೆ ಯಮುನೆಯನ್ನು ಹಿಡಿದಲುಗಿಸಿದವನೆ ‘ಯವ್ವಾ’ ಎಂದು ಹುಬ್ಬು ಹಿಂಡಿ ಅಮರವ್ವನತ್ತ ತಿರುಗಿದ.
ಅಮರವ್ವನಿಗೆ ಆಶ್ವರ್ಯ, ಗಾಬರಿ! ಯಮುನೆಯನ್ನು ಎಬ್ಬಿಸಲು ಮುಂದಾದ ಅವಳ ಕೈ ತಡೆಯಿತು
ಯಮುನೆ ಕಣ್ಮುಚ್ಚಿ ನಿಶ್ಚಲವಾಗಿ ಒರಗಿದ್ದಳು. ಅವಳ ಮೈ ಕೊರಡಾಗಿ ಹೋಗಿತ್ತು.
***
2 comments
Very heart touching story
Thank you So much Nagaveni avare. Pl. read my all stories.