Image default
Dancer Profile

ಕೃಷಾಲ-ಕಥಕ್ ನೃತ್ಯಶಾಲೆ-ಅಂತರ್ಜಾಲದ ನೃತ್ಯ ತರಬೇತಿ

ವಿಶ್ವವ್ಯಾಪಿ ಹರಡಿರುವ ಕರೋನಾ ಜೀವಜಗತ್ತನ್ನು ಸ್ತಬ್ಧಗೊಳಿಸಿರುವ ವಿಷಮ ಸನ್ನಿವೇಶ. ದೈನಂದಿನ ಚಟುವಟಿಕೆಗಳು ಅಲ್ಲೋಲ ಕಲ್ಲೋಲವಾದ ಅಯೋಮಯ ಪರಿಸ್ಥಿತಿ. ಇದು ಎಲ್ಲ ಕ್ಷೇತ್ರದ ಜನರನ್ನೂ ಕಾಡಿರುವ-ಕಾಡುತ್ತಿರುವ ದೊಡ್ಡ ಪಿಡುಗಾಗಿದೆ. ಅದರಲ್ಲೂ ಕಲಾಪ್ರಪಂಚವಂತೂ ಇದರಿಂದ ವಿಚಲಿತಗೊಂಡಿರುವುದು ಸತ್ಯ. ಅದಕ್ಕೆ ಕಲಾವಿದರು ಕಂಡುಕೊಂಡ ಪರ್ಯಾಯ ಮಾರ್ಗ ಅಂತರ್ಜಾಲ ಮಾಧ್ಯಮ. ಆದರೆ ಎದುರಿಗೆ ಮುಖಾಮುಖಿ ನಿಂತು ಪ್ರಾತ್ಯಕ್ಷಿಕೆಯೊಂದಿಗೆ ನಾಟ್ಯ ತರಬೇತಿ ನೀಡುವ ಪರಿಣಾಮವೇ ಬೇರೆ. ಅದರೂ ಛಲ ಬಿಡದ ತ್ರಿವಿಕ್ರಮ ಕೆಲ ಸಾಹಸಿಗರು ಅವಿರತ ಅಂತರ್ಜಾಲದಲ್ಲೇ ನೃತ್ಯ ತರಬೇತಿ ನೀಡುತ್ತ, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಇಟ್ಟಿರುವ ಉದಾಹರಣೆಗಳು ಬಹಳಿಲ್ಲ. ಆದರೆ ಇಂಥ ಅವಿರತ ನಾಟ್ಯ ತರಬೇತಿ ನೀಡುತ್ತ ಬಂದಿರುವ ಅಪರೂಪದ ಕೆಲಶಾಲೆಗಳಲ್ಲಿ ಕಥಕ್ ನೃತ್ಯ ಕಲಾವಿದೆ-ಗುರು ಸಿಮ್ರನ್ ಗೊಧ್ವಾನಿ ನಿರ್ವಹಿಸುತ್ತಿರುವ ‘’ ಕೃಶಾಲಾ’’ ಕಥಕ್ ನೃತ್ಯಶಾಲೆಯೂ ಒಂದು.

ಸೃಜನಶೀಲ ಕಥಕ್ ನೃತ್ಯಕಲಾವಿದೆಯಾಗಿ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಿಮ್ರನ್ ಗೋಧ್ವಾನಿ ಅವರ ಕನಸಿನ ಕೂಸು ಈ ‘ಕೃಶಾಲಾ ಡ್ಯಾನ್ಸ್ ಥಿಯೇಟರ್’. ಉತ್ತಮ ಗುಣಮಟ್ಟದ ಶಿಕ್ಷಣ, ಬದ್ಧತೆಯ ತರಬೇತಿಗೆ ಹೆಸರಾಗಿರುವ ಈ ನೃತ್ಯಶಾಲೆ ಇಂದು ನೂರಾರು ನೃತ್ಯಾಕಾಂಕ್ಷಿಗಳನ್ನು ಉತ್ತಮ ಕಲಾವಿದೆಯರನ್ನಾಗಿ ರೂಪಿಸಿದೆ.

ರಾಜಿ ನಾಯರ್ ಈಕೆಯ ಮೊದಲ ನೃತ್ಯಗುರು. ನಾಟ್ಯ ದಿಗ್ಗಜ ಪದ್ಮವಿಭೂಷಣ ಬಿರ್ಜು ಮಹಾರಾಜರ ಪ್ರಮುಖ ಶಿಷ್ಯ ಮುರಾರಿ ಶರಣ್ ಗುಪ್ತ ಅವರಲ್ಲಿ ಕಥಕ್ ನೃತ್ಯ ಮುಂದುವರಿಸಿದರು. ಇವರಲ್ಲಿ ಒಟ್ಟು ಹದಿನೆಂಟು ವರ್ಷಗಳ ನೃತ್ಯಾಭ್ಯಾಸ. ಪ್ರಯಾಗ್ ಸಂಗೀತ ಸಮಿತಿಯಿಂದ ಕಥಕ್ ನೃತ್ಯದಲ್ಲಿ `ಸಂಗೀತ್ ಪ್ರಭಾಕರ್‘ ಪದವಿ ಲಭ್ಯ.ಕಂಪ್ಯೂಟರ್ ವಿಜ್ಞಾನ ಪದವಿ ಪಡೆದನಂತರ ಸಿಮ್ರನ್ ಕಾರ್ಪೋರೇಟ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದರೂ ಅಕಸ್ಮಾತ್ ಭೇಟಿಯಾದ ಕಥಕ್ ನೃತ್ಯದ  ಮೇರು ಕಲಾವಿದ ಬಿರ್ಜು ಮಹಾರಾಜ್ ಅವರ ಪ್ರೇರಣೆಯಿಂದ ಸಿಮ್ರನ್ ತಮ್ಮ ಲಾಭದಾಯಕ ಹುದ್ದೆ ತ್ಯಜಿಸಿ 2006 ರಲ್ಲಿ `ಕೃಶಾಲಾ’ ಎಂಬ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿದರು.

`ಲಕ್ನೋ ಘರಾನಾ’ ಶೈಲಿಯಲ್ಲಿ ಕಲಾತ್ಮಕ ತುಮರಿ, ಗಜಲ್,ಗೀತ್ ಮತ್ತು ವೈವಿಧ್ಯ ಲಯವಿನ್ಯಾಸಗಳ ಮೂಲಕ ಸಾತ್ವಿಕಾಭಿನಯ ಮತ್ತು ಪದಗತಿ( ತತ್ಕಾರ್) ಯ ಕಲಾನೈಪುಣ್ಯವನ್ನು ಆಕೆಯ ನೃತ್ಯ ಪ್ರಸ್ತುತಿಗಳು ಪ್ರತಿಬಿಂಬಿಸುತ್ತವೆ. ಪ್ರಸ್ತುತ ಈಕೆ ಅಂತರ್ಜಾಲದ ತರಬೇತಿಗಳಲ್ಲಿ ನಿರತರಾಗಿದ್ದು, ಅವರ ಬಳಿ ಪುಟ್ಟಮಕ್ಕಳು ಬಹು ಉತ್ಸಾಹದಿಂದ ನೃತ್ಯ ಕಲಿಯುತ್ತಿರುವುದು ಆಸಕ್ತಿದಾಯಕ ಸಂಗತಿ.

‘’ಕೃಶಾಲ’’ದ ಇಡೀ ನೃತ್ಯಾಂಗಣ ನೂಪುರದ ದನಿಯಿಂದ ಝೇಂಕರಿಸುತ್ತ ಪುಟ್ಟವಿದ್ಯಾರ್ಥಿಗಳು ಉತ್ಸುಕತೆಯಿಂದ ತಮ್ಮ ಲಂಗದ ಚುಂಗುಗಳನ್ನು ನವಿರಾಗಿ ಕೈ ಬೆರಳುಗಳಲ್ಲಿ ಹಿಡಿದು ಒನಪಿನಿಂದ ತಲೆಯನ್ನು ಓರೆಯಾಗಿ ತಿರುಗಿಸಿ ಆಕರ್ಷವಾಗಿ ನರ್ತಿಸುವ ನೋಟವೇ ಒಂದು ಸೊಗಸು. ಪುಟಿವ ಕಾರಂಜಿಯಂತೆ ಲವಲವಿಕೆಯಿಂದ ಕುಣಿವ ಚಿಣ್ಣರನ್ನು ಗುರು ಸಿಮ್ರನ್ ಬಹು ಶ್ರದ್ಧೆಯಿಂದ ನುರಿತ ಕಲಾಶಿಲ್ಪವನ್ನಾಗಿ ರೂಪಿಸುತ್ತಿದ್ದಾರೆ. ಅವರೊಡನಾಟ-ನೃತ್ಯ ಸಾಂಗತ್ಯ ಅವರನ್ನು ತನ್ಮಯಗೊಳಿಸುವ ಕೈಂಕರ್ಯ.

ಒಂಭತ್ತು ವರ್ಷದ ಅವರ ಮಗಳು ಆರೋಹಿ ಕೂಡ ತಾಯಿಯ ಗರಡಿಯಲ್ಲಿ ಕಥಕ್ ಕಲಿಯುತ್ತಿದ್ದಾಳೆ. ಪ್ರತಿದಿನವೂ ಆನಂದದಿಂದ ನೃತ್ಯ ಕಲಿಯುವ ಆರೋಹಿಗೆ ಹೊಸ ತುಕಡಾ, ಪಾದಭೇದಗಳ ವೈವಿಧ್ಯ, ಚಕ್ಕರ್ ಗಳನ್ನು ಕಲಿಯುವುದರಲ್ಲಿ ಅಮಿತಾನಂದ. ‘ಕೃಶಾಲ’ದ ಎಲ್ಲ ನೃತ್ಯ ಕಾರ್ಯಕ್ರಮ, ವಾರ್ಷಿಕೋತ್ಸವಗಳಲ್ಲಿ ತಪ್ಪದೆ ಭಾಗವಹಿಸುವ ಆರೋಹಿ ತಾಯಿಯೊಡನೆಯೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಚಂದೀಘಡದ ಪ್ರಾಚೀನ ಕಲಾಕೇಂದ್ರದ ಮೊದಲ ಹಂತದ ‘ನೃತ್ಯಭೂಷಣ ‘ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಇವಳೊಂದಿಗೆ ಪುಟ್ಟ ವಯಸ್ಸಿನ ಅನೈಕಾ, ಅಂಕಿತಾ ಮತ್ತು ಸಂಜೀವಿನಿ, ಗುರು ಸಿಮ್ರನ್ ಅವರ ಬಳಿ ಬಹು ಶ್ರದ್ಧೆಯಿಂದ ಕಥಕ್ ನೃತ್ಯಾಭ್ಯಾಸ ಮಾಡುತ್ತಿರುವ ಉದಯೋನ್ಮುಖ ವಿದ್ಯಾರ್ಥಿಗಳು.

ನಾಲ್ಕನೆಯ ತರಗತಿ ಓದುತ್ತಿರುವ ಒಂಭತ್ತೂವರೆ ವರ್ಷದ ಅನೈಕಾ ಡೊಮಿನಿಕ್ , ನಾಲ್ಕೂವರೆ ವರ್ಷದ ಮಗುವಾಗಿದ್ದಾಗಿನಿಂದ ಗುರು ಸಿಮ್ರನ್ ಅವರ ಬಳಿ ಕಥಕ್ ನೃತ್ಯವನ್ನು ಆಸಕ್ತಿಯಿಂದ ಕಲಿಯುತ್ತಿದ್ದಾಳೆ. ಈಗಾಗಲೇ ಕಥಕ್ ಎಲಿಮೆಂಟ್ಸ್ ಪರೀಕ್ಷೆಗಳಲ್ಲಿ ಒಂದು ಮತ್ತು ಎರಡನೆಯ ಹಂತಗಳನ್ನು, ನೃತ್ಯಭೂಷಣ ಮೊದಲ ಪರೀಕ್ಷೆಯನ್ನು ಚಂದೀಘರದ ಪ್ರಾಚೀನ ಕಲಾಕೇಂದ್ರದಿಂದ ಯಶಸ್ವಿಯಾಗಿ ಪೂರೈಸಿದ್ದಾಳೆ. ಗುರುಪೂರ್ಣಿಮೆ, ಮಹಾ ಶಿವರಾತ್ರಿ ಮುಂತಾದ ಹಬ್ಬಗಳ ಪ್ರಯುಕ್ತ ದೇವಾಲಯಗಳಲ್ಲಿ ನೃತ್ಯಸೇವೆ ಮಾಡಿರುವುದಲ್ಲದೆ ವಿವಿಧ ಶಾಲಾ ವಾರ್ಷಿಕೋತ್ಸವಗಳಲ್ಲಿ ಏಕವ್ಯಕ್ತಿ ಪ್ರದರ್ಶನ ಮತ್ತು ಸಮೂಹ ನೃತ್ಯಗಳಲ್ಲಿ ಭಾಗವಹಿಸಿದ್ದಾಳೆ.

ಹತ್ತುವರ್ಷದ ಅಂಕಿತಾ ಪ್ರಭಾಕರ್, ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದು, ಕಳೆದ ಐದುವರ್ಷಗಳಿಂದ ‘ಕ್ರುಶಾಲ’ದಲ್ಲಿ ಕಥಕ್ ನೃತ್ಯ ಕಲಿಯುತ್ತಿರುವ ಆಸಕ್ತ ವಿದ್ಯಾರ್ಥಿನಿ. ತನ್ನ ಆರುವರ್ಷಕ್ಕೇ ವೇದಿಕೆಯ ಮೇಲೆ ನರ್ತಿಸುವ ಅವಕಾಶ ಅವಳಿಗೆ ದೊರೆಯಿತು. ವಿವಿಧ ನೃತ್ಯೋತ್ಸವಗಳಲ್ಲಿ ಗುರುಗಳ ತಂಡದೊಡನೆ ಮತ್ತು ಏಕವ್ಯಕ್ತಿಯಾಗಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ದುಬೈನಲ್ಲಿ ‘ಸ್ಮಾರ್ಕ್’ ಅಂತರರಾಷ್ಟ್ರೀಯ ನೃತ್ಯೋತ್ಸವದಲ್ಲಿ, ನಟರಾಜ, ನೃತ್ಯಾಂಜಲಿ ಮತ್ತು ನೃತ್ಯಶಕ್ತಿ ಶಾಸ್ತ್ರೀಯ ನೃತ್ಯಹಬ್ಬಗಳಲ್ಲಿ ಭಾಗವಹಿಸಿದ್ದಾಳೆ. ಚಂದೀಘರದ ಪ್ರಾಚೀನ ಕಲಾಕೆಂದ್ರದಿಂದ ‘ಪ್ರಾರಂಭಿಕ’        (1-2 ಹಂತಗಳು) ಮತ್ತು ನೃತ್ಯಭೂಷಣ ಮೊದಲ ಮತ್ತು ಎರಡನೆಯ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ್ದಾಳೆ.

ಹತ್ತುವರ್ಷದ, 5 ನೆಯ ತರಗತಿಯಲ್ಲಿ ಓದುತ್ತಿರುವ ಸಂಜೀವಿನಿ ಕಂಕಣಿ ತನ್ನ ಐದನೆಯ ವಯಸ್ಸಿನಲ್ಲೇ ಕಥಕ್ ಕಲಿಯಲಾರಂಭಿಸಿದಳು. ತಿರುವಣ್ಣಾಮಲೈ ಮುಂತಾದ ತಮಿಳುನಾಡಿನ ಕೆಲವು ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಸಂಜೀವಿನಿ, ದುಬೈನಲ್ಲಿ ನಡೆದ ‘ಸ್ಮಾರ್ಕ್’ ಅಂತರರಾಷ್ಟ್ರೀಯ ನೃತ್ಯೋತ್ಸವದಲ್ಲಿ ಕೂಡ ಭಾಗವಹಿಸಿದ್ದಾಳೆ. ಜೊತೆಗೆ ಗುರುಗಳ ತಂಡದೊಡನೆ ಅನೇಕ ಸಮೂಹ ನೃತ್ಯಗಳು ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ ಏಕವ್ಯಕ್ತಿಯಾಗಿ ನರ್ತಿಸಿದ್ದಾಳೆ. ತನ್ನ ಉಳಿದ ಸಹ ಅಭ್ಯಾಸಿಗಳೊಡನೆ ಅನೇಕ ಅಂತರ್ಜಾಲದ ಕಾರ್ಯಕ್ರಮಗಳಲ್ಲಿ ನರ್ತಿಸಿದ ಅನುಭವ ಇವಳಿಗಿದೆ.

ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿರುವ ಈ ಮಕ್ಕಳು ‘ಆನ್ಲೈನ್’ ತರಗತಿಯ ಧನಾತ್ಮಕ ಅಂಶಗಳನ್ನು ಗುರುತಿಸಿ ಸಂತೋಷಪಡುತ್ತಾರೆ. ಬೆಂಗಳೂರಿನ ಈ ವಾಹನ ದಟ್ಟಣೆಯ ಈ ಸಮಸ್ಯೆಯ ದಿನಗಳಲ್ಲಿ ಒಂದು ಕಡೆಯಿಂದ ಇನ್ನೊದು ಮೂಲೆಗೆ ಸಂಚರಿಸಿ, ನೃತ್ಯಶಾಲೆಯಲ್ಲಿ ಮುಖತಃ ಕಲಿಯುವುದಕ್ಕಿಂತ ಈ ಅಂತರ್ಜಾಲದ ಮಾಧ್ಯಮದಲ್ಲಿ ಕಲಿಯುವುದು ಸಲೀಸು ಎನ್ನುತ್ತಾರೆ. ಬೆಳಗ್ಗೆ ಬೇಗನೆದ್ದು ರೆಡಿಯಾಗಿ ಗಂಟೆಗಟ್ಟಲೆ ಪ್ರಯಾಣ ಮಾಡಿ ನೃತ್ಯಶಾಲೆಗೆ ಹೋಗುವ ಗಡಿಬಿಡಿಯಿಲ್ಲ, ಮನೆಯಲ್ಲೇ ಕಲಿಯುವ ಅನುಕೂಲವಿದೆ ಎಂದು ‘ಆನ್ಲೈನ್’ ತರಗತಿಗಳನ್ನು ಸ್ವಾಗತಿಸುತ್ತಾರೆ. ಕಳೆದೊಂದು ವರ್ಷದಿಂದ ಈ ಮಾಧ್ಯಮಕ್ಕೆ ಒಗ್ಗಿಕೊಂಡಿರುವ ಈ ಮಕ್ಕಳು ನಿರಂತರ ಗುರುಮುಖೇನ ಕಲಿಯುತ್ತಲೇ ಇದ್ದಾರೆ. ಅಂತರ್ಜಾಲದ ಅನೇಕ ನೆಟ್ ಸಮಸ್ಯೆಗಳ ನಡುವೆಯೂ ಈ ಮಕ್ಕಳ ಆಸಕ್ತಿ ಕುಗ್ಗದೆ ಉತ್ಸಾಹ ಉಳಿಸಿಕೊಂಡಿರುವ ಬಗ್ಗೆ ಹರ್ಷಿಸುವ ಸಿಮ್ರನ್, ಈ ಪುಟ್ಟ ಶಿಷ್ಯರ ಬದ್ಧತೆ, ಆಸಕ್ತಿ ಮತ್ತು ಪ್ರಾಮಾಣಿಕತೆಗಳನ್ನು ಶ್ಲಾಘಿಸುತ್ತಾರೆ. ಇದು ಒಂದು ಬಗೆಯ ಶಿಸ್ತು ಬೆಳೆಸಿದೆ ಹಾಗೂ ಅವರ ಪರಿಶ್ರಮದ ದ್ಯೋತಕವಾಗಿದೆ ಎಂದು ಅವರು ಸಮಾಧಾನ-ತೃಪ್ತಿ ವ್ಯಕ್ತಪಡಿಸುತ್ತಾರೆ.   

                                *******************

Related posts

ಸಂಗೀತ-ಸಾಹಿತ್ಯ-ನೃತ್ಯ ಸಂಗಮ ರಮ್ಯಾ ಸೂರಜ್

YK Sandhya Sharma

ಕೂಚಿಪುಡಿ ನೃತ್ಯ ಪ್ರವೀಣೆ ರೇಖಾ ಸತೀಶ್

YK Sandhya Sharma

ಚೈತನ್ಯದ ಚಿಲುಮೆ-ನೃತ್ಯ ಕಲಾವಿದೆ ಸ್ನೇಹಾ ಭಾಗವತ್

YK Sandhya Sharma

Leave a Comment

This site uses Akismet to reduce spam. Learn how your comment data is processed.