Image default
Short Stories

ಹೀಗೊಂದು ಸ್ವಗತ

ತಿಳಿಯಾಗಸದಲ್ಲಿ ಬಿಳಿ ಅರಳೆ ರಾಶಿಯಂತೆ ತೇಲುತ್ತಿದ್ದ ಮೋಡಗಳ ಅಂಬಾರಿಯನೇರಿ ಕನಸಿನ ಲೋಕದಲ್ಲಿ ಸ್ವಚ್ಛಂದ ವಿಹರಿಸುತ್ತಿದ್ದ ನನ್ನ ಕಣ್ಣುಗಳಲ್ಲಿ ಅಮಲು ತುಂಬಿತ್ತು. ತನು ಆಮೋದದಿಂದ ತೂಗುತ್ತಿತ್ತು. ಮನ ಉತ್ಸಾಹದಿಂದ ತುಂಬಿ ತುಳುಕುತ್ತಿತ್ತು. ಶ್ವೇತಾಶ್ವವೇರಿ ಖುರಪುಟಗಳ ಕರ್ಣಾನಂದ ಸದ್ದಿನೊಂದಿಗೆ ನನ್ನತ್ತ ಚಿಮ್ಮಿಬರುತ್ತಿದ್ದ ಆ ಸುಂದರ ರಾಜಕುಮಾರನನ್ನು ಕಂಡು ಪುಳಕಿತಳಾದೆ. ಬಂದ…ಬಂದ…ನನ್ನ ತೋಳ ಬಳಸಿ ಎತ್ತಿ ತನ್ನ ಕುದುರೆಗೇರಿಸಿ ಅಪ್ಪಿಕೊಂಡು ನಾಗಾಲೋಟದಲ್ಲಿ ಮುಗಿಲೋಳಿಯಲ್ಲಿ ಕರಗಿಹೋದಂತೆ……!! ಓಹ್…ಉಸಿರು ಬಿಗಿಯಾಯಿತು..ಅಗೋ….ಬಂದ ಬಂದ…ಬಂದೇಬಿಟ್ಟ …ಆದರೆ ನನ್ನನ್ನು ಉಜ್ಜಿಕೊಂಡು ಮುಂದೆ ತೇಲಿಹೋದ,ನನ್ನತ್ತ ಕಣ್ಣೆತ್ತಿಯೂ ನೋಡದೆ…ನಿರಾಸೆಯಾದರೂ  ದೃಷ್ಟಿ ಅತ್ತಲೇ  ಕೀಲಿಸಿದೆ. ಕಣ್ಣು ಕಿವುಚಿ ಚೂಪಾಗಿ ನೋಡಿದೆ….ಇಲ್ಲ…. ಬಿಳಿ ಕುದುರೆಯ ಆ ಸವಾರ ರಾಜಕುಮಾರನಿರಲಿ, ಕಡೆಗೊಬ್ಬ ಸಾಮಾನ್ಯ ಮನುಷ್ಯನೂ ಆಗಿರಲಿಲ್ಲ. ಉಸಿರಿಕ್ಕದ ಬರೀ ಒಂದು ಪುತ್ಥಳಿ  !  ಮಾನವಾಕಾರದ ಒಂದು ಅರಗಿನ ಪ್ರತಿಮೆಯೆಂದರೂ ಸರಿಯೇ…ಜೀವಸೆಲೆಯಿಲ್ಲದ ಕೇವಲ ಒಂದು ಆಕಾರವಾಗಿತ್ತಷ್ಟೇ.

                        ದೊಡ್ಡ ನಿಟ್ಟುಸಿರೊಂದು ನನ್ನ ನಾಭಿ ಸೀಳಿಕೊಂಡು ಹೊರಬಿತ್ತು.

            ಕಲ್ಪನೆ ಹರಿಹರಿದು ಚಿಂದಿಯಾಗಿ, ಕನಸಿನ ಗೊಂಬೆ ಧಬಕ್ಕನೆ ಕುಸಿದು ಒಂದು ಸಣ್ಣ ಮಣ್ಣ ಕುಪ್ಪೆಯಾಗಿ ಎದುರಿಗೆ ಕುಂತು ಕಣ್ಣು ತಿವಿಯುತ್ತಿತ್ತು. ಭ್ರಮನಿರಸನ ಜಂಘಾಬಲವನ್ನೇ ಉಡುಗಿಸಿತ್ತು.  ಕನಸಿನ ಪೊರೆ ಕಳಚಿ ನಿಜದ ನೆಲಕ್ಕೆ ಜಾರಿದ್ದೆ. ಕನಸ ಕಿರೀಟ ತೊಡಿಸಿದ್ದ ಆ ರಾಜಕುಮಾರ ಅಂತರ್ಧಾನನಾಗಿ ಹೋಗಿದ್ದ!! ಜೊತೆಗೆ ಮನುಷ್ಯಾಕೃತಿಯ ಮನುಷ್ಯನೂ. ಕೇವಲ ಗಂಡನೆಂಬ ಒಂದು ವಸ್ತುವಾಗಿದ್ದ ಅವನು. ನಾನವನ ಹೆಂಡತಿಯಾಗಿದ್ದೆ. ಸಂತಸದಿ ಹಾಡು ಉಲಿವ ಹಕ್ಕಿಗೊರಳಿಗೆ ಮಾಂಗಲ್ಯವೆಂಬ ನೇಣು ಬಿಗಿದು ಉಸಿರಾಟ ನಿಲಿಸುವ ಪವಿತ್ರ ಬಂಧನವೇ  ಈ ಮದುವೆ!?… ಎಂಥ  ಜೋಡಿ ನಮ್ಮದು!…ನಾನು ಸುಂದರಿ. ಅವನು ಸುಂದರ. ಅಷ್ಟಾದರೆ ಸಾಕೇ? ಮನೋಭಾವ-ಲಹರಿಗಳು??….ಹೊಂದಾಣಿಕೆಯಾಗಬೇಡವೇ? ಊಹೂಂ… ನನಗೂ ಅವನಿಗೂ  ಅಜಗಜಾಂತರ.ನನಗೆ ಲೌಕಿಕ ಒಡನಾಟದಲ್ಲಿ ಒಲವು. ಮುಂದುವರಿವ ಧಾಷ್ಟೀಕ ಸ್ವಭಾವ. ನಾನು ಹೂಂ  ಎಂದಾದರೆ..ಅವನು ಉಹೂಂ…ನನಗೆ ಸುತ್ತ ಮುತ್ತ ಕುತೂಹಲದಿ ಸಂಚರಿಸುವ          ನವಿಲುಗಣ್ಣು…ಕಣ್ಣಳತೆ  ಹಿಗ್ಗಿಸಿ ಪ್ರಪಂಚ ನೋಡುವ ತವಕ..ಕಾತುರ…ಮಿತಿ ಮೀರಿದ ಉತ್ಸಾಹ..ಭಾವುಕತೆ ಉಕ್ಕಿ ಹರಿವ ಉನ್ಮಾದ..ಆಸೆಗೊಂದು ಹೆಸರೇ ನಾನು…ಕುತೂಹಲಕ್ಕೂ…ಎಲ್ಲದರಲ್ಲೂ ಆಸಕ್ತಿ. ಕಲ್ಲನ್ನೂ ಅಲ್ಲಾಡಿಸಿ  ಮಾತಾಡಿಸುವ ವಾಚಾಳಿತ್ವ.. ಮಾತು…ಮಾತು…ಮಾತು..ನಕ್ಕು-ನಗಿಸುವ ಹಂಬಲ, ಜಗದಗಲ ತೋಳ್ತೆರೆದು ಎಲ್ಲರೊಂದಿಗೆ ಬೆರೆಯುವಾಸೆ. ಆಸೆಗಳ ಪೋಣಿಸಿ ಬದುಕ ಕಟ್ಟುವಾಸೆ. ಹಳ್ಳ-ಕೊಳ್ಳಗಳ ಲೆಕ್ಕಿಸದೆ,ಯಾವ ಎಡರು ತೊಡರುಗಳಿಗೂ  ಹೆದರದೆ, ಎಗರೆಗರಿಕೊಂಡು ಮುನ್ನಡೆವ ಆತ್ಮವಿಶ್ವಾಸ -ಅಥವಾ ಭಂಡ, ಅಪರಿಮಿತ ಧೈರ್ಯ ಎನ್ನಬಹುದೇನೋ. ಯಾವುದೂ ಕಠಿಣವಲ್ಲ,ಪ್ರಯತ್ನಿಸಿದರೆ ಎಲ್ಲವೂ ಕೈಯಳತೆಯಲ್ಲಿಯೇ ಎಂಬ ಅತಿಯಾದ ನಂಬಿಕೆಯೋ ಅಥವಾ ಉಡಾಫೆಯೋ ನಾನರಿಯೆ. ನನ್ನ ಲೆಕ್ಕದಲ್ಲಿ ಇಲ್ಲ‘,’ಆಗಲ್ಲಎಂಬುದಕ್ಕೆ ಜಾಗವೇ   ಇಲ್ಲ…ಯಾವುದಕ್ಕೂ ಅಂಜದೆ ನಡೆ ಮುಂದೆ,ನಡೆ ಮುಂದೆ ಮುನ್ನುಗ್ಗು ಎಂಬ ಜಾಯಮಾನ…ನರ-ನಾಡಿಗಳಲ್ಲಿ ರಕ್ತ ಹರಿಯುವುದೋ ಇಲ್ಲವೋ ಗೊತ್ತಿಲ್ಲ, ಆದರೆ ಸದಾ ಧುಮುಗುಡುವ ಭಾವಸ್ರಾವ…ಭಾವದೋಕುಳಿ.

            ಅವನೋ  ಪ್ರಶಾಂತ ಸಮುದ್ರ. ಮೌನವೇ ಆಭರಣ. ಮುತ್ತುದುರುವಷ್ಟೇ ಮಾತು.. ಏಕಾಂತ ಪ್ರಿಯ…ಜನಜಂಗುಳಿಯಿಂದ ಯೋಜನ ದೂರ.ಕೈಯಲ್ಲೊಂದು ಪುಸ್ತಕವೋ ಪೇಪರ್ರೋ ಸಿಕ್ಕಿಬಿಟ್ಟರೆ ಅದೇ ಪ್ರಪಂಚ…ಅದರಲ್ಲೇ ನಿಮಗ್ನ..ಯಾವುದರ ಬಗ್ಗೆಯೂ ಅನವಶ್ಯಕ ಆಸಕ್ತಿಯಿಲ್ಲ..ಕುತೂಹಲವಿಲ್ಲ. ತಿರುಗಾಡುವ ಹಂಬಲವಿಲ್ಲ..ಯಾವುದರ ಬಗ್ಗೆಯೂ ಆಸೆ-ನಿರಾಸೆಗಳಿಲ್ಲ. ತಕರಾರುಗಳಿಲ್ಲ. ಇತರರ ನಿಂದಿಸುವವನಲ್ಲ.ಕೊಂಕು ಎತ್ತುವವನಲ್ಲ.ಯಾವ ಆಕ್ಷೇಪಣೆಯ ಸೊಲ್ಲಿಲ್ಲ. ದುಃಖ-ಹತಾಶೆಗೊಳ್ಳಲು ನಿರೀಕ್ಷೆಗಳೇ ಇಲ್ಲ. ಕುದುರೆಗೆ ಕಣ್ಣಪಟ್ಟಿ ಕಟ್ಟಿದಷ್ಟೇ ನೋಟ.       ತಾನಾಯಿತು,ತನ್ನ ಪಾಡಾಯಿತು ಎನ್ನುವ ನಿರಾಳ ಮನಸ್ಥಿತಿ. ಹೆರವರ ತಂಟೆಗೆ ಹೋಗುವವನಲ್ಲ.ಇಂಥದೇ ಸಾಧಿಸಬೇಕೆಂಬ ಹಟ-ಗುರಿಯಿಲ್ಲ. ಮುಂದೆ ಬಂದರೆ ಹಾಯುವವನಲ್ಲ..ಹಿಂದೆ ಬಂದರೆ ಒದೆಯುವವನಲ್ಲ. ಮನದಲ್ಲಿ ಯಾವ ಭಾವದೊರತೆಯೂ ಇಲ್ಲ. ಪ್ರೀತಿ- ಸಲ್ಲಾಪಗಳಿಲ್ಲ. ರÀಸಿಕತೆಯ ಸೆಲೆಯಿಲ್ಲ.ಚಂಚಲತೆಯ ಸುಳುಹಿಲ್ಲ. ಮುದ್ದು ಗೋವಿನ ತೆರದಿ ಮುಗ್ಧತನವೋ-ಮಖೇಡಿಯೋ ಎಂದು ನಿಂದಿಸುವ ಹಾಗೆಯೂ ಇಲ್ಲ. ಎಲ್ಲದರಲ್ಲೂ ಹಿಂದೆ….ಹಿಂದೆ ಸರಿಯುವ, ಆಮೆ ಚಿಪ್ಪಿನೊಳಗೆ ಹುದುಗಿಕೊಳ್ಳುವ ಹಿಂಜರಿಕೆ…ಬಚ್ಚಿಟ್ಟುಕೊಳ್ಳುವ ಸ್ವಭಾವ….ಅಥವಾ ನುಣುಚಿಕೊಳ್ಳುವ ಪಲಾಯನವಾದಿಯೋ ನಾನರಿಯೆ…ಅಂತೂ ಸದಾ ಎಲೆ ಮರೆಯ ಕಾಯಾಗಿಯೇ ಇರಬಯಸುವ ಜಾಯಮಾನ. ಇವನ ಈ ಎಲ್ಲನಡೆ, ಸ್ವಭಾವಗಳು, ಇವನ ಗುಣಗಳೋ? ಅವಗುಣಗಳೋ? ಸ್ತುತಿಯೋ, ನಿಂದನೆಯೋ ನನಗಂತೂ ಬಿಡಿಸಲಾಗದ ಒಗಟು.!!

            ಒಟ್ಟಿನಲ್ಲಿ ನಮ್ಮಿಬ್ಬರ ಮನೋಭಾವ -ಸ್ವಭಾವಗಳು ಭಿನ್ನ ಭಿನ್ನ. ನಾನು ಮೊದಲ ಬೆಂಚು…ಅವನು ಕಡೆಯ ಬೆಂಚು. ನಾನು ಮನ್ನುಗ್ಗಿದಷ್ಟೂ ಅವ ಹಿಂದಕ್ಕೆ ಜಗ್ಗುವವ. ಎತ್ತು ಏರಿಗೆ-ಎಮ್ಮೆ ನೀರಿಗೆ. ಅಂಥ ಈಡು ಜೋಡು ನಮ್ಮದು. ನಾನಂತೂ ಇವನ ಕೈ ಹಿಡಿದು ನಿರಾಸೆಯ ಹೊಂಡಕ್ಕೆ ಜಾರಿಬಿದ್ದಿದ್ದೆ…ಭಗ್ನ ಕನಸು..ಉರಿದುರಿದು ಬೂದಿ ರಾಶಿ…ಕನಸುಗಳ ಅಂತ್ಯಸಂಸ್ಕಾರ ಮಾಡಿದ್ದಾಗಿತ್ತು. ಸುತರಾಂ ಅವನು ನನಗೆ ಸರಿಜೋಡಿಯಲ್ಲ ಅಂತ ನನಗೆ ಅನಿಸಿರಬೇಕಾದರೆ,ಅವನಿಗೂ ಹಾಗೇ ಅನಿಸಿರಬಾರದೇಕೇ?…ಇಲ್ಲ..ಅದು ನನಗೆ ಬೇಡದ ವಿಷಯ.ನನಗದರ ಉಸಾಬರಿಯೇಕೆ? ನನ್ನ ಕಷ್ಟ-ದುಃಖಗಳನ್ನಷ್ಟೇ ಹೊರಸುರಿಯುವ ಇರಾದೆ ನನ್ನದು.  ನನ್ನ ಕನಸು-ನಿರೀಕ್ಷೆಗಳು ಬುಡಮೇಲಾಗಿದ್ದನ್ನಷ್ಟೇ ಉಸುರುವ  ತುಮುಲ ನನ್ನದು. ಪಿಸುಮಾತು-ಕಣ್ಣ    ಸನ್ನೆಗಳ ಮಜವೇ ಗೊತ್ತಿರದ ಆ ಗೊಮ್ಮಟಮೂರ್ತಿಯ ನಿರ್ಭಾವುಕತೆಯ ಬಗ್ಗೆ ನನ್ನ ತೀವ್ರ ಆಕ್ಷೇಪ ಅಷ್ಟೇ. ಈ ನನ್ನ ಸಣ್ಣ-ಪುಟ್ಟ ಆಸೆಗಳು ಅಂಥ ದುಬಾರಿಯವು ಅಂಥ ನನಗನಿಸುವುದಿಲ್ಲ. ಹಣೆಯ ಮೇಲೆ ತುಂಟಾಟವಾಡುವ ಮುಂಗುರುಳ ನೇವರಿಸುವ ಹುಡುಗಾಟ -ಹಂಬಲ, ಮುದ್ದಿಸುವ ಕನಿಷ್ಠ ಸೂಕ್ಷ್ಮ ಪ್ರಜ್ಞೆಯೂ ಬೇಡವೇ? ಹೊಸ ಸೀರೆಯಲ್ಲಿ ಮುದ್ದಾಗಿ ಕಾಣಿಸುವ ಚೆಲುವೆ ಹೆಂಡತಿಯ  ಕೆನ್ನೆ ಹಿಂಡಬೇಕೆಂಬ ಸುಪ್ತ ಬಯಕೆ, ಸಣ್ಣ ತವಕವೂ ಬೇಡವೇ? ವಯ್ಯಾರಿಯಾಗಿ ಬಳುಕುವ ಮಡದಿಯ ಕಣ್ಣಲ್ಲಿ ಕಣ್ಣು ಬೆರೆಸಿ ತುಂಟ ನೋಟ ಮಿನುಗಿಸುವ ರಸಿಕತೆಯೂ ಬೇಡವೇ?ಪ್ರೀತಿಯಿಂದ ಉಣಬಡಿಸುವ ರುಚಿಕಟ್ಟಾದ ಅವಳ ಅಡುಗೆಯ ಬಗ್ಗೆ ಎರಡು ಮೆಚ್ಚುಗೆಯ  ನಲ್ನುಡಿಗಳು ಬೇಡವೇ? ಏಕಾಂತದಿ ಒಂಟಿ ಸಿಕ್ಕ ಮನದಿನಿಯಳ ಸೊಂಟ ಬಳಸಿ  ಕಿವಿಯಲ್ಲಿ      ಪ್ರೀತಿ ಒಸರುವ ಮಾತುಗಳೆರಡ ಪಿಸುಗುಡಬಾರದೇ?ಅರಳಿದ ಘಮಗುಡುವ ಕುಸುಮದ ಪರಿಮಳ ಸೋಕಲೇಇಲ್ಲವೇ?ಜೇನ್ದುಂಬಿದ ರಸಗವಳ ಹೀರುವ ದುಂಬಿದಾಳಿ ಬರೀ ಕನಸೇ? ಹೌದು ಎಲ್ಲೋ ಕಾಡುವ ಅವ್ಯಕ್ತ ಅಪರಿಚಿತತೆ…ಮಗ್ಗುಲಲ್ಲಿದ್ದೂ ಯೋಜನ ದೂರವೆನಿಸುವ ಅಸಾಂಗತ್ಯ….ಛೇ….ಕತ್ತಲಲ್ಲಿ ಮುಖವಿಲ್ಲದ ಜೀವನ.

            ಇಲ್ಲಾ….ಇಲ್ಲ…ನನ್ನೆದೆಯಲ್ಲಿ ಭೋರ್ಗರೆವ ಕಡಲ ಮೊರೆತ ಅವನಿಗೆ ಕೇಳಿಸಲೇ ಇಲ್ಲ…ನನ್ನೆದೆಯ ಕಲರವದ ಸದ್ದುಗಳಿಗೆ ಅವನು ಕಿವುಡನಾಗಿದ್ದ..ನನ್ನ ಪುಟ್ಟ ಪುಟ್ಟ ಆಸೆಗಳನ್ನು ಅವನು ಗುರುತಿಸಲೇ ಇಲ್ಲ..ಪ್ರಯತ್ನವನ್ನೂ ಮಾಡಲಿಲ್ಲ.ನನ್ನ  ಬೇಕುಗಳು ಯಾವುವೆಂದೇ ಅವನಿಗೆ ತಿಳಿದಿರಲಿಲ್ಲ. ನನ್ನ ದನಿಗೆ ಪ್ರತಿಧ್ವನಿಯಾಗುವುದು ಅವನಿಗೆ ಬೇಡವಾಗಿತ್ತು. ಅಂಥ ಯಾವ ಸೂಕ್ಷ್ಮ ಭಾವನೆಗಳೂ ನನಗವನಲ್ಲಿ ಕಂಡಿರಲಿಲ್ಲ. ನನ್ನನ್ನಾಳುತ್ತಿದ್ದ ಭಾವತೀವ್ರತೆ , ಅವನ ನಿರ್ಭಾವುಕತೆಯ ಭರತದಲ್ಲಿ ಕೊಚ್ಚಿಹೋಗಿತ್ತು. ನನ್ನೊಳಗಿನ ಉಬ್ಬರವಿಳಿತ ನಿರಂತರ ಮೊರೆಯುತ್ತಲೇ ಇತ್ತು.  ನನ್ನ ಅಂತರಂಗದ ನಾದಕ್ಕೆ ಅನುರಣನಗೊಳ್ಳದ ಅವನು, ನನ್ನನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲೇ ಇಲ್ಲ.

            ಹೀಗೆಂದು ಹೇಳಿಕೊಂಡರೆ ಯಾರು ನಂಬಿಯಾರುಲಕ್ಷಣವಾಗಿ ದೊಡ್ಡವರು ನಿಂತು ನೋಡಿ ಮಾಡಿದ ಮದುವೆ. ಜಾತಕಗಳು ಹೊಂದಿ ಬೆಸೆದ ಸಂಬಂಧ..ನೋಡಲು ಸ್ಪುರದ್ರೂಪಿ…ಓದಿನಲ್ಲಿ ಮಹಾಜಾಣ. ಎಲ್ಲಾ ತರಗತಿಗಳಲ್ಲೂ ರ್ಯಾಂಕು ಪಡೆದ ಬುದ್ಧಿವಂತ. ದೊಡ್ಡ ಸಂಸ್ಥೆಯಲ್ಲಿ ಎಂಜಿನಿಯರ್. ಕೈ ತುಂಬಾ ಸಂಬಳ. ಆಸ್ತಿ-ಪಾಸ್ತಿಗೂ ಕಡಮೆಯಿಲ್ಲ. ಇನ್ನೇನು ಅರೆ-ಕೊರೆ??ನೋಡುವವರ ಕಣ್ಣಿನಲ್ಲಿ ಅನುರೂಪನಾದ ಪತಿ. ಇಂಥವನನ್ನು ಪಡೆಯುವುದು ಪೂರ್ವ ಜನುಮದ ಸುಕೃತ.ಇವೆಲ್ಲಾ ಇವನ ಬಿರುದು-ಬಾವಲಿಗಳು.ಅದೇನೇ ಇರಲಿ,        ನನ್ನ ಅನುಭವದಲ್ಲಿ “ಭ್ರಮೆಗಳು ಕಳಚಿಕೊಳ್ಳುವುದಕ್ಕೆ ಮದುವೆ” ಎಂದು ಹೆಸರು. ನನ್ನ ಇಷ್ಟಾನಿಷ್ಟಗಳನ್ನು ಕೇಳುವವರಾರು? ದಾಂಪತ್ಯದಲೆಯಲ್ಲಿ ಮುಂದಮುಂದಕ್ಕೆ ತೇಲಿ ತೇಲಿಕೊಂಡು ಹೋಗುವ ಪಯಣ. ಜೊತೆ ಜೊತೆಯಾಗಿಯೋ,ಅಥವಾ ಹಿಂದೆ ಮುಂದೆಯೋ ನಡೆದುಕೊಂಡು ಹೋದರೂ ಅದು ಸಪ್ತಪದಿಯೇ.ದಿನ ದೂಡಿದರೆ ಸಾಕು, ಸುಖ ಸಂಸಾರ. ಮಕ್ಕಳು-ಮರಿಯಾಗಿಬಿಟ್ಟರಂತೂ ಸಾರ್ಥಕ ಬದುಕು. ಆದರೆ ನನ್ನ ಕಸಿವಿಸಿಯೇ ಬೇರೆ. ಹೃದಯವನ್ನು ದಂಬಸ್ಸು ಮಾಡುವ ಭಾವಲಹರಿಯ ಒತ್ತಡ ತಾಳಲಾರದೆ ಪಿತ್ತವೇರಿದವಳಂತಾಡುತ್ತಿದ್ದೆ. ದುರ್ಬೀನು ಹಿಡಿದು ಅವನ ಹೆಜ್ಜೆ ಹೆಜ್ಜೆಯನ್ನೂ ಜಾಲಿಸಿ ನೋಡುತ್ತೇನೆ. ಹೊಂದಿಕೆಯಾಗದ ಅವನ ಗುಣಗಳ ನೆನೆದು ನಾನೆಷ್ಟೇ ಕನಲಿದರೂ ಅವನ ಪ್ರತಿಕ್ರಿಯೆ ಮಾತ್ರ  ಸೊನ್ನೆ. ಘರ್ಜಿಸಿ ಜಗಳಕ್ಕೆ ನಿಂತರೂ,ಅವನು ತಣ್ಣಗೆ ಕೊರೆವ ಮಂಜುಗಡ್ಡೆ. ಬೇಕೆಂದೇ ಅವನನ್ನು ರೇಗಿಸಲು ಮಿತಿ ಮೀರಿ ನಡೆದುಕೊಂಡರೂ ಅವನು ಕೆರಳುವುದಿಲ್ಲ,ಕನಲುವುದಿಲ್ಲ. ನನ್ನ ಮನಸ್ಸಿಗೆ ಬಂದಂತೆ ಸ್ವೇಚ್ಛೆಯಾಗಿ ವರ್ತಿಸಿದರೂ ಗಮನಿಸದಂತಿರುವ ಅವನ ನಡೆ ಕಂಡು , ಕ್ಷಮಿಸಿದ ಅಂತ ನಾನು  ಭಾವಿಸಬೇಕು…ಜಡಭರತನಂತಿರುವ,ಸ್ಥಿತಪ್ರಜ್ಞತೆ ಪ್ರಕಟಿಸುವ ಅವನನ್ನು ಕಂಡಾಗ ವಿನಾಕಾರಣ ಕೆರಳುವಂತಾಗುವುದು.  ದಿನ ನಿತ್ಯದ ಸಂಸಾರ-ಗೃಹಕೃತ್ಯದಲ್ಲಿ ್ಲಯಾವುದೇ ರೀತಿಯಲ್ಲೂ  ಮನೆಯಾಕೆಯ ಮನವನ್ನು ನೋಯಿಸಲಿಚ್ಛಿಸದ, ಸಾಧುಪ್ರಾಣಿಯಂತಿರುವ ಅವನನ್ನು ಕಂಡಾಗ ಅವನ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುವುದೆಂದೇ  ಹೊಳೆಯುವುದಿಲ್ಲ. ಅವನನ್ನು ದ್ವೇಷಿಸಲು ಯಾವ ಪಿಳ್ಳೇನೆವಗಳೂ ದೊರೆಯದಾಗಿವೆ. ಮಧುಮಾಸದ ಆ ದಿನಗಳಲ್ಲಿ ನಾನು ಇವನ ಸಾಹಚರ್ಯದಲ್ಲಿ ಸಂತೋಷವಾಗಿದ್ದೇನೆಯೋ ಇಲ್ಲವೋ ಎಂಬುದೇ ನನಗಿನ್ನೂ ನಿಗೂಢ…ಯಕ್ಷ ಪ್ರಶ್ನೆ !!  ಎಲ್ಲವೂ ಸ್ವಗತ…ನನ್ನಂತರಂಗದ ಪಿಸುನುಡಿಗಳು…ಯಾರ ಕಿವಿಗಳನ್ನೂ ಮುಟ್ಟದ ಸದ್ದಿರದ ದನಿಗಳಾಗಿಯೇ ಉಳಿದುಬಿಟ್ಟಿವೆ. 

            ಅವನು ನನ್ನ ದನಿಗೆ ಪ್ರತಿಧ್ವನಿ ನೀಡಲಿ ಬಿಡಲಿ,ನನ್ನ ಸುಪ್ತ ಭಾವನೆಗಳಿಗೆ ಬೆಲೆ ಕೊಡಲಿ  ಕೊಡದಿರಲಿ, ನಾನು ಮಾತ್ರ ನನ್ನ ಕನಸಿನರಮನೆಯ ದೊಡ್ಡ ನಿಲುವುಗನ್ನಡಿಗಳ ಮುಂದೆ ನಿಂತು ಅನವರತ ಸಂಭಾಷಿಸುತ್ತಲೇ ಇದ್ದೇನೆ. ನನ್ನ ಸ್ವಗತ ಆಲಾಪವನ್ನದು ತಾಳ್ಮೆಗೆಡದೆ ಆಲಿಸುತ್ತಲೇ ಇದೆ. ನನ್ನ ಜೀವನದುದ್ದಕ್ಕೂ ನನ್ನ ಬಿಂಬವನ್ನು ನಿಷ್ಠೆಯಿಂದ   ಪ್ರತಿಬಿಂಬಿಸುತ್ತಲೇ ಇದೆ. ಎಂದಿನಂತೆ ಇಂದೂ ನಾನು, ನನ್ನ ಕಪ್ಪನೆಯ ನೀಳ ಕೇಶರಾಶಿಯ ಸೊಬಗನ್ನು ಆಸ್ವಾದಿಸುತ್ತ ನನ್ನ ಆಪ್ತಗೆಳತಿಯ ಮುಂದೆ ನಿಂತಿರುವೆ. ಆಕರ್ಷಕವಾಗಿ ಗುಳಿ ಬೀಳುವ ನನ್ನ ಸೇಬುಗೆನ್ನೆಯ ಚೆಲುವನ್ನು ಬೊಗಸೆಗಣ್ಣುಗಳಿಂದ ಮೆಚ್ಚುಗೆಯ ನೋಟದಿಂದ  ವೀಕ್ಷಿಸುತ್ತಿರುವೆ. ಮಾದಕ ತುಟಿಗಳಂಚಲ್ಲಿ ಕಿರುನಗು…ಬಳುಕುವ ಮೈಮಾಟ-ಅಂಗಾಂಗ ಸೌಂದರ್ಯ ಎಷ್ಟು ನೋಡಿದರೂ ಮನ ತಣಿಯದು. ಮುಖದಲ್ಲಿ ಉಲ್ಲಾಸ ಕಾರಂಜಿ!! ರಂಗಾದ ಮೊಗ…..ಹಿಂದಿನಿಂದ ಅನಾಮತ್ತು ಬಂದು ಬಿಗಿದಪ್ಪಬಹುದಾದ ಇನಿಯನ ಪ್ರೀತಿಮಳೆಗೆ ನಾಚಿ ನೀರಾದೆ.

            “ಅಜ್ಜೀ, ಎಷ್ಟು ಸಲ ಕರೆಯೋದು ನಿನ್ನ, ತಾತನಿಗೆÀ ಈಗ ಊಟ ಹಾಕ್ತೀಯೋ ಅಥವಾ  ಗಂಟೆಗಟ್ಟಲೆ ಆ  ಕಿಟಕಿಯ ಹತ್ತಿರ ಹಾಗೇ ಯೋಚನೆ ಮಾಡ್ತಾ ನಿಂತುಕೊಂಡಿರ್ತೀಯೋ ಹೇಳು ? ”   –ಎಂದು ಕಾಲೇಜಿಗೆ ಹೊರಟಿದ್ದ ಹದಿನೆಂಟರ ಯುವಕ ಬಾಗಿಲ ಚಿಲಕ ಸದ್ದು ಮಾಡಿ ಜೋರಾಗಿ ಕೂಗಿ ಹೇಳುತ್ತಿದ್ದ.

            ಕನಸಿನ ಕನ್ನಡಿಯ ಮುಂದೆ ತನ್ಮಯಳಾಗಿ ನಿಂತಿದ್ದವಳಿಗೆ ಇನ್ನೂ ಅದೇ ಗುಂಗು…ಭಾವದೋಕುಳಿಯ ರಂಗು…

            “ಅಜ್ಜೀ…”

            ಅಬ್ಬರದ ದನಿಗೆ ಮೈಯಲುಗಿ ರಸಭಂಗವಾಯ್ತು….ಕದಲಿ ತಟ್ಟನೆ ಹಿಂತಿರುಗಿ ನೋಡಿದೆ, ಸಿಡುಕು ಮೋರೆಯಿಂದ -“ಯಾರು ಈ ಹುಡುಗ?!” ಎನ್ನುವಂತೆ ಅವನನ್ನೇ ಹರಿದು ತಿನ್ನುವಂತೆ ನೋಡಿದೆ.

            ಹುಡುಗ ಕದಲದೇ ಹಾಗೇ ನಿಂತಿದ್ದ, ಅಜ್ಜಿಯ ಪರವಶತೆಯ ಭಾವವರಿಯದೆ.

            ಸುಂದರ ಸ್ವಪ್ನಲೋಕದ ಕನಸಿನ ಅಂಬಾರಿಯಲ್ಲಿ ನಿರುಮ್ಮಳ ಸಂಚರಿಸುತ್ತಿದ್ದವಳು, ಹಟಾತ್ತನೆ ಬಂದೆರಗಿದ ದನಿಗೆ ಬೆಚ್ಚಿ ಬಿದ್ದೆಇನ್ನೂ ಕಲ್ಪನೆಯ ಗುಂಗು ಹರಿದಿರಲಿಲ್ಲ. ಅಪ್ರಯತ್ನವಾಗಿ   ನನ್ನ ನೋಟ ಕನ್ನಡಿಯಲ್ಲಿನ ಸುಂದರ ಪ್ರತಿಬಿಂಬದತ್ತ ಮೆಲ್ಲನೆ ಹೊರಳಿ ಒಮ್ಮೆಲೆ ಗಾಬರಿಗೊಂಡೆ. ಅಲೆಅಲೆಯಾಗಿ ನನ್ನ ತಲೆಯ ತುಂಬಾ ದಟ್ಟವಾಗಿ ತುಂಬಿಕೊಂಡಿದ್ದ ಕಪ್ಪು ಕೇಶರಾಶಿಯಿದ್ದ  ಜಾಗದಲ್ಲಿ ಒರಟು ಹುಲ್ಲಿನಂಥ ನರೆತ ಕೂದಲ ಸಣ್ಣ ಗಂಟು. ಜೋಲು ಬಿದ್ದಕೆನ್ನೆಗಳಲ್ಲಿ ಸುಕ್ಕು…ಕಣ್ಣ ಕುಳಿಯ ಸುತ್ತ ಕಪ್ಪು ಉಂಗುರಗಳು. ಬಾಗಿದ ಬೆನ್ನು…ಓಹ್….ನನ್ನ ಕಣ್ಣನ್ನೇ ನಾನು ನಂಬದಾದೆ.!!ಯಾರೀಕೆ???

            “ಅಜ್ಜೀ, ನಿಂಗೇ ಹೇಳ್ತಿರೋದು, ನಾ ಬರ್ತೀನಿ, ಬಾಗಿಲು ಹಾಕ್ಕೋ”-ಮೊಮ್ಮಗ ಕಾಲೇಜಿಗೆ ಹೊರಟಿದ್ದವನು ಮತ್ತೊಮ್ಮೆ ಜೋರಾಗಿ ಕೂಗಿ ನನ್ನನ್ನೆಚ್ಚರಿಸಿದ.

            ನಾನು ಧರೆಗುರುಳಿದ್ದೆ.

ಥಟ್ಟನೆ ಬಾಹ್ಯಜಗತ್ತಿಗೆ ಬಂದವಳು, ನನ್ನ ರಾಗರಂಜಿತ ಮೊಗವನ್ನು ಮೊಮ್ಮಗ ಗಮನಿಸಿದನೇನೋ ಎಂದುಕೊಂಡು ನಸು ನಾಚಿ,ಮುಖ ಓರೆ ಮಾಡಿದೆನಾದರೂ ಉಪವಾಸ ಕುಳಿತ ಗಂಡನ ನೆನೆದು ಮನಸ್ಸು ಕಲಕಿತು.  ಕಕ್ಕುಲತೆಯಿಂದ ಕುಗ್ಗಿದ ದನಿಯಲ್ಲಿ–

“ಅಯ್ಯೋ, ಗಂಟೆ ಎಷ್ಟಾಯ್ತೋ ಮರಿ, ನಿಮ್ಮಜ್ಜನಿಗೆ  ಊಟ ಹಾಕೋದೇ ಮರೆತುಹೋಯಿತು. ಪಾಪ ಹಸಿದುಕೊಂಡೇ ಇದ್ದಾರೇನೋ…ಅವರಾದ್ರೂ ಒಂದ್ಮಾತು ನನ್ನ ಕೂಗಬಾರದಿತ್ತೇ?….. ಛೇ..ಎಂಥಾ ಕೆಲಸವಾಯ್ತು….”-ಎಂದು ವಿಷಾದದಿಂದ ಒದ್ದುಕೊಳ್ಳುತ್ತ,  ಯಜಮಾನರನ್ನು  ಊಟಕ್ಕೆಬ್ಬಿಸಲು ನಾನು ತರಾತುರಿಯಿಂದ ಅವರ ರೂಮಿನತ್ತ ಸಾಗಿದೆ.

Related posts

Skit- Kamlu Maga Foreign Returned

YK Sandhya Sharma

ಮಗು ಕಳೆದಿದೆ

YK Sandhya Sharma

ಪ್ರಾಪ್ತಿ

YK Sandhya Sharma

Leave a Comment

This site uses Akismet to reduce spam. Learn how your comment data is processed.