Image default
Events

ರಸಾನುಭವ ನೀಡಿದ ‘ರಸಸಂಜೆ’ಯ ನೃತ್ಯ ನೈವೇದ್ಯ

ಬೆಂಗಳೂರಿನ ಖ್ಯಾತ ನೃತ್ಯ ಸಂಸ್ಥೆ ‘ವೆಂಕಟೇಶ ನಾಟ್ಯಮಂದಿರ’ ವನ್ನು ಕಳೆದ ಐವತ್ಮೂರು ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವವರು ಬದ್ಧತೆಯುಳ್ಳ ಹಿರಿಯ ನೃತ್ಯಗುರು ಶಾಂತಲಾ ಪ್ರಶಸ್ತಿ ವಿಜೇತೆ ವಿದುಷಿ. ರಾಧಾ ಶ್ರೀಧರ್. ಇವರು ಪ್ರತಿವರ್ಷ ತಪ್ಪದೆ ನಿರಂತರವಾಗಿ ಏರ್ಪಡಿಸುವ,  ನಗರದ ಕಲಾರಸಿಕರಿಗೆ ರಸದೌತಣ ನೀಡುವ ಸುಂದರ ಕಾರ್ಯಕ್ರಮವೆಂದರೆ ಮೂರುದಿನಗಳ ‘ರಸಸಂಜೆ’ ಕಾರ್ಯಕ್ರಮ. ಇದು ಹೆಸರಿಗೆ ಅನ್ವರ್ಥಕವಾಗಿ ಮೂರುದಿನಗಳ ನೃತ್ಯೋತ್ಸವ.  ಮರೆಯಲಾರದ ರಸಾನುಭವ ನೀಡುವ ನೃತ್ಯ ಕಲಾವಿದರಿಗೆ ವರದಾನವಾದ ಸುಂದರ ವೇದಿಕೆ.

ಸಾವಿರಾರು ಜನ ನೃತ್ಯ ಕಲಾವಿದೆಯರನ್ನು ರೂಪಿಸಿರುವ  ಖ್ಯಾತಿಯುಳ್ಳ ‘ವೆಂಕಟೇಶ ನಾಟ್ಯಮಂದಿರ’ವು ಇತ್ತೀಚಿಗೆ, ನಗರದ ಎ.ಡಿ.ಎ. ರಂಗಮಂದಿರದಲ್ಲಿ ಕಣ್ಮನ ತುಂಬುವ ಮನಮೋಹಕ ನೃತ್ಯ ಸರಣಿಯನ್ನು ಅರ್ಪಿಸಿದ್ದು ದಾಖಲಾರ್ಹ.

ಕಣ್ಮನ ತಣಿಸಿದ ಮೂವರು ಪ್ರಬುದ್ಧ ನರ್ತಕರ ವೈವಿಧ್ಯಪೂರ್ಣ ನರ್ತನ ವೈಭವ ಮೊದಲ ದಿನದ ವೈಶಿಷ್ಟ್ಯವಾಗಿತ್ತು. ಶಾಂಭವಿ ನೃತ್ಯ ಶಾಲೆಯ ಖ್ಯಾತ ನೃತ್ಯಪಟು-ಗುರು ವೈಜಯಂತಿ ಕಾಶಿ ಮತ್ತು ಶಿಷ್ಯರು, ಚಿತ್ಕಲ ನೃತ್ಯಶಾಲೆಯ ನಿರ್ದೇಶಕ ಪ್ರವೀಣ್ ಕುಮಾರ್ ಮತ್ತು ಖ್ಯಾತ ನೃತ್ಯ ಕಲಾವಿದೆ ಐಶ್ವರ್ಯ ನಿತ್ಯಾನಂದ ಅವರ ಹೃತ್ಪೂರ್ವಕ ನೃತ್ಯಾರ್ಚನೆ ‘ರಸಸಂಜೆ’ಯ ಯಶಸ್ಸಿಗೆ      ನೃತ್ಯದಾರತಿ ಬೆಳಗಿತೆಂದರೆ ಅತಿಶಯೋಕ್ತಿಯಲ್ಲ.

          ಶುಭಾರಂಭಕ್ಕೆ ಶಾಂಭವಿ ನೃತ್ಯಶಾಲೆಯ ವಿದ್ಯಾರ್ಥಿಗಳು ಅಣ್ಣಮಾಚಾರ್ಯರ ರಚನೆ- ‘ಅದಿವೋ ಅಲ್ಲದಿವೋ’-ತಿರುಮಲ ಮಹಿಮೆಯನ್ನು ತಮ್ಮ ಸೊಗಸಾದ ಅಭಿನಯ, ಅಂಗಶುದ್ಧ ನರ್ತನದಿಂದ ಭಕ್ತ್ಯಾತಿಶಯವನ್ನು ಮೆರೆದರು. ಭಕ್ತಿ- ತನ್ಮಯತೆಯಿಂದ ನರ್ತಿಸಿದ ಪ್ರತೀಕ್ಷಾ ಕಾಶಿ ಮತ್ತು ಅವರ ಸಂಗಡಿಗರ ನೃತ್ತ ನೈವೇದ್ಯ-ನೃತ್ಯದಾರತಿ  ದೈವಾರ್ಪಣೆಗೊಂಡಿತು. ನರ್ತಕರ ಸಾಮರಸ್ಯದ ಸಮಗ್ರ ರಮ್ಯನೋಟ, ಸುಂದರಾಭಿನಯದಲ್ಲಿ ಹೊರಹೊಮ್ಮಿದ ಉದಯೋನ್ಮುಖ ಕಲಾವಿದರ ಚೈತನ್ಯದ ಹೊಳಪು ಮನ ತಾಗಿತು. ರಸಸಂಜೆಯ ಯಶಸ್ಸಿಗೆ ಆದಿ ಪ್ರಾರ್ಥನೆಯಾಗಿ  ದೈವೀಕ ಆಯಾಮದಲ್ಲಿ ಅರ್ಪಿತಗೊಂಡ ವೆಂಕಟಾಧಿಪತಿಯ ಈ ಸುಂದರ ಆರಾಧನೆ ಅರ್ಥಪೂರ್ಣವಾಗಿತ್ತು.  

ಅನಂತರ- ಹೃದಯಸ್ಪರ್ಶಿ ರೂಪಕದಂತೆ, ವಿಷಯಾಧಾರಿತ ಕುಚಿಪುಡಿ ನೃತ್ಯ ಪ್ರಸ್ತುತಿ- ‘ಅಂತರಂಗ-ತರಂಗ’- ವೈಜಯಂತಿ ಕಾಶಿ ಮತ್ತು ಪ್ರತೀಕ್ಷಾ ಕಾಶಿ ಅವರ ಭೂಮಿತಾಯಿ ಮತ್ತು ಸಹನೆಯ ಪ್ರತಿಮೂರ್ತಿ ಸೀತಳ ಪಾತ್ರ ಕಲ್ಪನೆಯ ರೋಚಕತೆ, ಪರಿಣಾಮಕಾರಿ ದೃಶ್ಯ ಸುರಳಿಯನ್ನು ಕಣ್ಮುಂದೆ ಅನಾವರಣಗೊಳಿಸುತ್ತ ಬೇರೊಂದು ಲೋಕಕ್ಕೆ ಕರೆದೊಯ್ದಿತು. ನವ ಪರಿಕಲ್ಪನೆ-ಹೊಸ ಪ್ರಯೋಗದ ಸೊಗಸು ಕುತೂಹಲದಿಂದ ನೋಡಿಸಿಕೊಂಡು ಹೋದದ್ದು ಇದರ ವಿಶೇಷ. ಪ್ರಕೃತಿ ಬಾಂಧವ್ಯದ ಅವಿಭಾಜ್ಯ ರೂಪದ ತಾಯಿ-ಮಗಳ ನಿರ್ವ್ಯಾಜ ಅಂತಃಕರಣದ ಶುದ್ಧ ವಾತ್ಸಲ್ಯ,ಬೆಚ್ಚನೆಯ ಭಾವಗಳ  ಅಂತರಂಗ, ಬಿಡಿಸಲಾರದ ಬೆಸುಗೆಯ ವಿವಿಧ ಆಯಾಮಗಳು ವಿವಿಧ ರೂಪಕಗಳಲ್ಲಿ ಹೃದಯಸ್ಪರ್ಶಿಯಾಗಿ ಅರಳಿತು. ಭೂಮಿತಾಯಿ ಮತ್ತು ಸೀತಾದೇವಿಯ ಅವಿನಾಭಾವ ಸಂಬಂಧ ಆಳ-ಹರವುಗಳ ವಿಸ್ತಾರ ಪಡೆಯುತ್ತಾ ವಿವಿಧ ದೃಶ್ಯಾವಳಿಗಳಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು.

ಸೀತಾ ಕಲ್ಯಾಣದ ಪ್ರಸಂಗದಿಂದ ಸಾಗುವ ಕಥಾವಳಿ, ಅರಣ್ಯವಾಸ, ರಾವಣನಿಂದ ಸೀತೆಯ ಅಪಹರಣ ಮುಂತಾದ ಎಲ್ಲ ಘಟನೆಗಳಿಗೂ ಸಾಕ್ಷೀಪ್ರಜ್ಞೆಯಾಗಿ ನಿಂತ ಭೂಮಿತಾಯಿ, ಮಗಳ ರಕ್ಷಾಕವಚವಾಗಿ, ಆತ್ಮವಿಶ್ವಾಸವನ್ನು ಬೆಳೆಸುವ ಶಕ್ತಿಯಾಗಿ ಝೇಂಕರಿಸುವ ಮನಮಿಡಿಯುವ ದೃಶ್ಯಗಳು ಪ್ರಬುದ್ಧ ನರ್ತಕಿ ವೈಜಯಂತಿ ಅವರ ಪಕ್ವಾಭಿನಯದಲ್ಲಿ ಮನಮುಟ್ಟಿತು. ಭೂತಾಯಿಯ ಸ್ವಗತ- ಕಥಾ ನಿರೂಪಣೆ-ಪ್ರತಿಕ್ರಿಯೆಗಳ ಭಾಷ್ಯದಲ್ಲಿ ಕುತೂಹಲ ಕೆರಳಿಸಿತು.

ಲಾಸ್ಯ ನೃತ್ತ ಮೇಳದಲ್ಲಿ ಮಿನುಗಿದ ಪ್ರತೀಕ್ಷಾಳ ಪ್ರತಿಭೆ, ಮನಮೋಹಕ ಆಂಗಿಕಾಭಿನಯ, ಚಲನೆಗಳಲ್ಲಿ ತಾಯಿಗೆ ಸರಿಸಾಟಿಯಾಗಿ ಎದ್ದುಕಂಡಿತು. ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದರೂ ಅಪವಾದ ಹೊತ್ತು ಕಾಡು ಸೇರಿದ ಸೀತಾ, ಲವ-ಕುಶರನ್ನು ಪಡೆದನಂತರವೂ ರಾಮನ ನಡವಳಿಕೆಯ ಬಗ್ಗೆ  ಅಸಮಾಧಾನ-ಮುನಿಸಿನಿಂದ  ಅವನಿಂದ ದೂರಾಗ ಬಯಸಿದಾಗ, ಲೋಕಧರ್ಮದಂತೆ ಭೂತಾಯಿ ನೊಂದ ಮಗಳಿಗೆ ಸಾಂತ್ವನ ಹೇಳಿ ಮುರಿದ ಸಂಸಾರವನ್ನು ಸರಿಪಡಿಸಲು ಪ್ರಯತ್ನಿಸುವ ಪರಿ ಮನ ಮಿಡಿಸುತ್ತದೆ. ತಾಯಿ ಎಷ್ಟೇ ತಡೆದರೂ ನೋವಿಗೆ ಪ್ರತೀಕವಾದ ಹೆಣ್ಣಾಗಿ ಸೀತಾ, ತಾಯಿಯ ಮಡಿಲು ಸೇರುವ ಮುಕ್ತಾಯದ ದೃಶ್ಯದ ನಾಟಕೀಯ ಸನ್ನಿವೇಶ ಹೃದಯಸ್ಪರ್ಶಿಯಾಗಿತ್ತು. ಕಲಾವಿದೆದ್ವಯರ ಉತ್ತಮಾಭಿನಯ, ನೃತ್ತ-ನರ್ತನಗಳ ಮೆರುಗಿನಿಂದ, ಅರ್ಥವತ್ತಾದ ಸಾಹಿತ್ಯ-ಪ್ರತಿ ಘಟನೆ ರೂಪಿತವಾದ ವಿಶಿಷ್ಟತೆಯಿಂದ ಈ ನೃತ್ಯರೂಪಕ ಚಿರಕಾಲ ನೆನಪಿನಲ್ಲುಳಿಯುವಂತ್ತಿತ್ತು.

ಮುಂದಿನ ಪ್ರಸ್ತುತಿ ನೃತ್ಯ ಕಲಾವಿದ ಪ್ರವೀಣ್ ಕುಮಾರ್ ಅವರ ವಿವಿಧ ಕೀರ್ತನೆಗಳ ಮನಮೋಹಕ ನಿರೂಪಣೆಯಿಂದ, ಸಾತ್ವಿಕಾಭಿನಯದ ಆನಂದಾನುಭೂತಿ ನೀಡಿತು. ಸುಬ್ರಹ್ಮಣ್ಯಸ್ವಾಮಿಯ ಕೀರ್ತನೆ-‘ ಸ್ಕಂಧ ವಾ ವಾ..’-ನವಿಲುವಾಹನನ ಮಹಿಮೆ-ವೈಶಿಷ್ಟ್ಯಗಳನ್ನು ಸಾದರಪಡಿಸಿದ ಭಕ್ತ್ಯಾತಿಶಯದ, ಆರ್ದ್ರಭಾವದ ಸಾಂದ್ರತೆಯ ಅಭಿವ್ಯಕ್ತಿ ರಸಾನುಭವ ನೀಡಿದರೆ, ಅಂಗಶುದ್ಧ ನರ್ತನ ಕಣ್ಮನ ಸೂರೆಗೊಂಡಿತು. ಹರಿತವಾದ ನೃತ್ತಗಳು, ಮೆರುಗಿನ ಭಾವ-ಭಂಗಿಗಳು, ಅಂತ್ಯದಲ್ಲಿ ಪ್ರದರ್ಶಿತವಾದ ಕಾವಡಿ ಹೊತ್ತ ಸುಂದರ ಹೆಜ್ಜೆಗಳ ನರ್ತನ ಸೊಗಸು ಬೀರಿದವು.

ಮುಂದೆ-ತ್ಯಾಗರಾಜರ ಪಂಚಕೀರ್ತನೆಗಳಲ್ಲಿ ಒಂದಾದ ‘ಸಮಯಾನಿಧಿ…’ ಶ್ರೀಕೃಷ್ಣನ ಲೀಲಾ ವಿನೋದಗಳನ್ನು ಬಹು ಸೊಗಸಾದ, ಸೌಮ್ಯಾಭಿನಯದ ಸೊಗಡಿನಲ್ಲಿ, ಕಣ್ಣಿಗೆ ಹಿತವೆನಿಸುವ ಅಂಗಶುದ್ಧದ ಮೆರಗು ಹೊಮ್ಮಿಸುತ್ತ, ಅಚ್ಚುಕಟ್ಟಿನ ಚೌಕಟ್ಟಿನಲ್ಲಿ ಪ್ರಸ್ತುತಿಗೊಳಿಸಿದರು.

ಕನಕದಾಸರ ಕೃತಿಯ ಪ್ರಸ್ತುತಿಯಲ್ಲಿ  ‘ಬಾರೋ ಕೃಷ್ಣಯ್ಯ’ ಎಂದು ಮುಗ್ಧಭಕ್ತಿಯ ತನ್ಮಯತೆಯಲ್ಲಿ ಭಕ್ತನೊಬ್ಬ  ತನ್ನ ಆರಾಧ್ಯದೈವ ಶ್ರೀಕೃಷ್ಣನ ಸಾಕ್ಷಾತ್ಕಾರಕ್ಕಾಗಿ ನಾನಾ ರೀತಿಯಲ್ಲಿ ಮನದಣಿಯೆ ಭಾವುಕತೆಯಿಂದ ಸ್ತುತಿಸುತ್ತ ಕೃಷ್ಣನ ದರ್ಶನಕ್ಕಾಗಿ ಹಾತೊರೆದಿದ್ದಾನೆ.

ಅಭಿನಯ ಪ್ರಧಾನ ಈ ಕೃತಿಯ ಜೀವಾಳ ಪರಿಣಾಮಕಾರಿ ಅಭಿನಯ. ಶ್ರೀಕೃಷ್ಣನನ್ನು ಬರಮಾಡಿಕೊಳ್ಳುವ ಉತ್ಸಾಹ-ಅಭಿಲಾಷೆ-ಕಾತರತೆಯ ತೀವ್ರತೆಯನ್ನು ಪ್ರತಿಬಿಂಬಿಸಿದ ಪ್ರವೀಣರ ಪಕ್ವಾಭಿನಯ ಗಮನ ಸೆಳೆಯಿತು.  ಜೊತೆಗೆ ನಿರಾಯಾಸದ, ಆತ್ಮವಿಶ್ವಾಸ ಚೆಲ್ಲುವ ಖಚಿತ ಜತಿಗಳ ದೃಢತೆಯಲ್ಲಿ, ಪಾದಭೇದಗಳ ಸೌಂದರ್ಯದಲ್ಲಿ, ರಂಗದ ಹಾಸು-ಬೀಸಿನಲ್ಲಿ ಚಿಗರೆಯ  ಹಾರುನಡಿಗೆಯ ಚಲನಶೀಲತೆಯ  ತಮ್ಮ ಸೋಪಜ್ಞ ಶೈಲಿಯಲ್ಲಿ ಪ್ರವೀಣ್ ಕಲಾರಸಿಕರ ಹೃದಯಗಳನ್ನು ಗೆದ್ದುಕೊಂಡರು. ಮನೋವೀಣೆಯ ತಂತಿಗಳನ್ನು ಮೀಟುವಂತೆ ಅತ್ಯಂತ ಭಾವಪೂರ್ಣವಾಗಿ ಹಾಡಿದ ರಸಜ್ಞ ರಘುರಾಮ್ ಅವರ ಗಾಯನ, ಪ್ರಸ್ತುತ ನರ್ತನಕ್ಕೆ ಸುವರ್ಣ ಪ್ರಭಾವಳಿ ನೀಡಿತ್ತು.    

ಮನಮೋಹಕ ನರ್ತನಕ್ಕೆ ಇನ್ನೊಂದು ಹೆಸರು ಐಶ್ವರ್ಯ ನಿತ್ಯಾನಂದ. ರಾಧಾ ಶ್ರೀಧರ್ ಅವರ ಹಿರಿಯ ಶಿಷ್ಯೆ, ಹೃದಯಂಗಮ ನರ್ತನ ಲಾಸ್ಯ- ಹೃದಯ ತಾಗುವ ರಮ್ಯ ಅಭಿನಯ, ಚೇತೋಹಾರಿ ನೃತ್ತಾಮೋದ ನೀಡುವ ಪ್ರಬುದ್ಧ ಕಲಾವಿದೆ ಈಕೆ. ಕಲಾವಿದೆ ತನ್ನ ಮನೋಭಾವದ ಪ್ರತಿಬಿಂಬದಂತೆ ಪ್ರಸ್ತುತಿಗೆ ಭಾವಸಾಂದ್ರತೆಯ ಸೂಕ್ತ ಕೃತಿಗಳನ್ನೇ ಆಯ್ದುಕೊಂಡಿದ್ದು ವಿಶೇಷ.

ಶ್ರೀ ಸ್ವಾತಿ ತಿರುನಾಳರ ರಚನೆ ‘ಪನ್ನಗೇಂದ್ರಶಯನ ಶ್ರೀ ಪದ್ಮನಾಭ’ ನನ್ನು ಕುರಿತ ‘ಭಕ್ತಿಪದಂ’ ಐಶ್ವರ್ಯಳ ಮೋಹಕಾಭಿನಯದ ಭಕ್ತಿಲಹರಿಯಲ್ಲಿ ಚೈತನ್ಯಪೂರ್ಣವಾಗಿ ಮೂಡಿಬಂತು. ಹಾವಿನ ಹಾಸಿಗೆಯ ಮೇಲೆ ಮಲಗಿರುವ ಸ್ವಾಮಿಯೇ ನನ್ನನ್ನು ಉದ್ಧರಿಸೆಂದು ಪರಮ ಭಕ್ತಿಯ ಮೂರ್ತಿಯಾಗಿ ಆರ್ದ್ರತೆಯಿಂದ ಬೇಡುವ ವಿನೀತ ಭಕ್ತೆ, ಹೃದಯ ಕರಗುವಂಥ  ಭಾವಸಾವ್ರ ಅಭಿವ್ಯಕ್ತಿಸಿದಳು. ನೃತ್ತಾಭಿನಯಗಳೆರೆಡರಲ್ಲೂ ಸಮಾನ ಪ್ರಭುತ್ವ ಹೊಂದಿರುವ ಉತ್ತಮ ಕಲಾವಿದೆ, ಹಸನ್ಮುಖದ ವರ್ಚಸ್ಸಿನಲ್ಲಿ ನರ್ತನವೇ ಅವಳಾಗಿಬಿಡುವ ವಿಸ್ಮಯ ತೋರಿದಳು. ನಿರಾಯಾಸದ ಆಕಾಶಚಾರಿ, ಮಂಡಿ ಅಡವು, ಭ್ರಮರಿಗಳು, ಕ್ಲಿಷ್ಟ ನೃತ್ತಾವಳಿಯ ವೈಶಿಷ್ಟ್ಯ ಪ್ರಕಟವಾಯಿತು.

ಭಾವನಿಮೀಲಿತ ಅಭಿನಯಕ್ಕೆ ಕನ್ನಡಿ ಹಿಡಿದ ಮೀರಾ ಭಜನ್ –‘ಪದ ಗುಂಗುರು ಬಾಂದು  ಮೀರಾ ನಾಚೆ…’ ಎಂದು ಶ್ರೀಕೃಷ್ಣನ ಪ್ರತಿಮೆಯನ್ನು ಎದೆಗಪ್ಪಿಕೊಂಡು ಮೈಮರೆತು ಹಾಡುವ, ನರ್ತಿಸುವ ಅನುಪಮ ಕೃತಿಯನ್ನು ಕಾಣುವ ಸುಯೋಗ ರಸಿಕರಿಗಂದು ‘ ರಸಸಂಜೆ’ ಒದಗಿಸಿತ್ತು. ತನ್ನ ಇಡೀ ಬದುಕನ್ನು ಶ್ರೀಕೃಷ್ಣನಿಗೆ ಅರ್ಪಿಸಿದ್ದ ಮಹಾಭಕ್ತೆ ಮೀರಳಾಗಿ ಐಶ್ವರ್ಯ, ಪರಕಾಯ ಪ್ರವೇಶ ಮಾಡಿ ತನ್ಮಯತೆಯಿಂದ ನರ್ತಿಸಿದ್ದು ಅಪಾರ ಮೆಚ್ಚುಗೆ ಪಡೆಯಿತು.

                              **************            

                                                                               

Related posts

Sri Lalitha Kalanikethana

YK Sandhya Sharma

‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ಹೊಸ ರಂಗಪ್ರಯೋಗ

YK Sandhya Sharma

Space-Kathak Saar

YK Sandhya Sharma

Leave a Comment

This site uses Akismet to reduce spam. Learn how your comment data is processed.