ಗಾಯನ ಪಿ. ಶೆಟ್ಟಿ ರಂಗಪ್ರವೇಶ
ಸಂಗೀತ ಮತ್ತು ನೃತ್ಯದಲ್ಲಿ ಅಪರಿಮಿತ ಆಸಕ್ತಿಯುಳ್ಳ ಯುವಕಲಾವಿದೆ ಗಾಯನ ಪಿ. ಶೆಟ್ಟಿ ಅಭಿಜಾತ ಕಲಾವಿದೆ.. ಬೆಂಗಳೂರಿನ ‘ನಂದಿ ಭರತನಾಟ್ಯ ನೃತ್ಯಶಾಲೆ’ ಯ ನಾಟ್ಯಕಲಾ ಭೂಷಣಂ ಬಿರುದಾಂಕಿತೆ ನೃತ್ಯಗುರು ಗೀತಾ ಲಕ್ಷ್ಮೀ ಅವರ ಸಮರ್ಥ ತರಬೇತಿಯಲ್ಲಿ ರೂಪುಗೊಂಡ ಕಲಾಶಿಲ್ಪ ಈಕೆ. ನಾಲ್ಕುವರ್ಷದ ಬಾಲೆ ಕಾಲಿಗೆ ಕಟ್ಟಿದ ಗೆಜ್ಜೆಯ ಸದ್ದು ನಿಲ್ಲದಂತೆ ಸತತ ಹದಿನಾಲ್ಕು ವರ್ಷಗಳ ಕಾಲ ನಾಟ್ಯಶಿಕ್ಷಣವ್ತನ್ನು ಪಡೆದುಕೊಂಡ ವೈಶಿಷ್ಟ್ಯ ಗಾಯನಳದು. ಇದೀಗ ಅವಳು ಕಲಿತ ವಿದ್ಯೆಯನ್ನು ರಂಗದ ಮೇಲೆ ಪ್ರದರ್ಶಿಸಲು ಕಾಲ ಕೂಡಿಬಂದಿದೆ. ಇದೇ ಫೆಬ್ರವರಿ ತಿಂಗಳ ಗುರುವಾರ ಸಂಜೆ 5 ಗಂಟೆಗೆ ಜೆ.ಸಿ.ರಸ್ತೆಯ ಎ.ಡಿ.ಎ. ರಂಗಮಂದಿರದಲ್ಲಿ ಗಾಯನ ತನ್ನ ಕಲಾಪ್ರದರ್ಶನ ಮಾಡಲಿದ್ದಾಳೆ. ಅವಳ ನೃತ್ಯಸಿರಿಯನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಸುಸ್ವಾಗತ.
ಮಂಗಳೂರಿನ ಪ್ರಕಾಶ್ ಶೆಟ್ಟಿ ಮತ್ತು ಶಶಿಕಲಾ ಪಿ. ಶೆಟ್ಟಿ ಅವರ ಮಗಳು ಗಾಯನ ಬಾಲಪ್ರತಿಭೆ. ನೃತ್ಯ ಅವಳ ಬಾಲ್ಯದ ಒಲವು. ಪ್ರತಿಭೆ-ರೂಪ-ಪರಿಶ್ರಮ ಸಂಗಮಿಸಿದ ಇವಳಿಗೆ ಗುರುಗಳಾಗಿ ದೊರೆತವರು ಪಂದನಲ್ಲೂರು ಪರಂಪರೆಯ ಭರತನಾಟ್ಯ ವಿದುಷಿ ಗೀತಾ ಲಕ್ಷ್ಮೀ ಅವರು. ನಾಲ್ಕನೆಯ ವಯಸ್ಸಿಗೇ ನೃತ್ಯ ಕಲಿಕೆ ಆರಂಭ. ಜೊತೆ ಜೊತೆಯಲ್ಲಿ ಓದಿನಲ್ಲೂ ಚುರುಕಾಗಿದ್ದ ಗಾಯನ ಪ್ರತಿ ತರಗತಿಯಲ್ಲೂ ಉತ್ತಮಾಂಕ ಗಳಿಸಿ ತೇರ್ಗಡೆ. ಸೇಂಟ್ ಫ್ರಾನ್ಸಿಸ್ ಗ್ಸೇವಿಯರ್ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಓದಿದ ಇವಳು ಶಾಲೆಯ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲೂ ಭಾಗಿ. ಹತ್ತನೆಯ ತರಗತಿ ಐ ಸಿ ಎಸ್ ಸಿ. ಯಲ್ಲಿ ಶೇ 94 ಅಂಕ ತೆಗೆದು ಡಿಸ್ಟಿಂಕ್ಷನ್ ಪಡೆದು ಪಾಸಾದ ಹಿರಿಮೆ. ಎಲ್ಲ ನೃತ್ಯ ಕಾರ್ಯಕ್ರಮ ಮತ್ತು ಸ್ಪರ್ಧೆಗಳಲ್ಲಿ ಬಹುಮಾನಗಳ ಗಳಿಕೆ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ‘ಡಿಸ್ಟಿಂಕ್ಷನ್’ ಪಡೆದು ತೇರ್ಗಡೆಯಾದ ವಿಶೇಷತೆ. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿರುವ ಗಾಯನ, ಸರ್ಕಾರ ನಡೆಸುವ ಜ್ಯೂನಿಯರ್ ಸಂಗೀತ ಪರೀಕ್ಷೆಯಲ್ಲೂ ಗರಿಷ್ಠ ಅಂಕ ಪಡೆದಿದ್ದಾಳೆ.
ನಾಡಿನ ಅನೇಕ ದೇವಾಲಯಗಳಲ್ಲಿ ಮತ್ತು ಅಂಗಾಳ ಪರಮೇಶ್ವರಿ, ಮುತ್ಯಾಲಮ್ಮ ಪುಣ್ಯ ಸನ್ನಿಧಿಯಲ್ಲಿ, ರೋಟರಿ ಹಿರಿಯ ನಾಗರಿಕರ ಸಂಸ್ಥೆ ಮತ್ತು ಅಜಂತಾ ಕಲ್ಚುರಲ್ ಸೊಸೈಟಿ ಮುಂತಾದ ವಿವಿಧ ವೇದಿಕೆಗಳಲ್ಲಿ ತನ್ನ ಕಲಾಪ್ರದರ್ಶನ ಮಾಡಿರುವ ಗಾಯನ, ತಂಜಾವೂರು ಬೃಹನ್ನಾಟ್ಯಾಂಜಲಿ ನೃತ್ಯೋತ್ಸವದಲ್ಲೂ ನರ್ತಿಸಿದ ಭಾಗ್ಯಶಾಲಿ. ಚಿದಂಬರ ಪುಣ್ಯಕ್ಷೇತ್ರದಲ್ಲಿ ಇತರ ಹತ್ತು ಸಾವಿರ ಕಲಾವಿದೆಯರೊಡನೆ ನರ್ತಿಸಿದ್ದಕ್ಕಾಗಿ ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ನಲ್ಲಿ ಸೇರ್ಪಡೆಯಾದ ಗರಿಮೆ ಹೊಂದಿದ್ದಾಳೆ. ‘ನಂದಿ ಭರತನಾಟ್ಯ ನೃತ್ಯಶಾಲೆ’ಯ ಪ್ರತಿವರ್ಷದ ವಾರ್ಷಿಕೋತ್ಸವ ಸಮಾರಂಭಗಳಲ್ಲದೆ, ಶಾಲೆಯ ರಜತ ಮಹೊತ್ಸವ ಮತ್ತಿತರ ಉಳಿದ ಎಲ್ಲ ನೃತ್ಯ ಪ್ರದರ್ಶನ- ರೂಪಕಗಳಲ್ಲಿ ಪಾತ್ರ ನಿರ್ವಹಿಸಿದ ಸಂತೃಪ್ತಿ ಇವಳದು.
ಪ್ರಸ್ತುತ ಸೇಂಟ್ ಜೋಸೆಫ್ ಬಾಯ್ಸ್ ಸ್ಕೂಲಿನಲ್ಲಿ ದ್ವಿತೀಯ ವರ್ಷದ ಪಿಯೂಸಿ ಓದುತ್ತಿರುವ ಈ ಉದಯೋನ್ಮುಖ ಕಲಾವಿದೆ ಗಾಯನಳ ನೃತ್ಯಸಾಧನೆಗೆ ಆಧಾರವಾಗಿರುವವರು ಅವಳ ತಾಯ್ತಂದೆಗಳು ಮತ್ತು ಸೋದರ ಪ್ರಜ್ವಲ ಪಿ. ಶೆಟ್ಟಿ. ಪರಿಶ್ರಮದ ನೃತ್ಯಾಭ್ಯಾಸ -ಬದ್ಧತೆ ಮತ್ತು ಕಲಿಕಾಸಕ್ತಿ ಕೂಡ ಅವಳ ನೃತ್ಯಪಯಣಕ್ಕೆ ಸಹಾಯಕವಾಗಿವೆ.