‘ಜಾನಾಮಿ ಜಾನಕಿ’ – ವೀಣಾ ಶೇಷಾದ್ರಿ ಏಕವ್ಯಕ್ತಿ ಪ್ರದರ್ಶನ
ಬೆಂಗಳೂರಿನ ‘ಕಲಾ ಸಂಪದ’ ಫೈನ್ ಆರ್ಟ್ಸ್ ಕೇಂದ್ರವು ಅರ್ಪಿಸುವ ‘ಜಾನಾಮಿ ಜಾನಕಿ’- ಒಂದು ಅಪರೂಪದ ಏಕವ್ಯಕ್ತಿ ಪ್ರದರ್ಶನ. ಇತಿಹಾಸ-ಪುರಾಣಗಳಲ್ಲಿ ನಾವು ಕಂಡ ಮೃದು-ಸೂಕ್ಷ್ಮ ಸ್ವಭಾವದ, ಸಹನಾಮೂರ್ತಿ, ದುರ್ಬಲವೆಂದು ಕಂಡುಬರುವ ನಾಜೂಕಿನ ವ್ಯಕ್ತಿತ್ವವಲ್ಲ ಇಲ್ಲಿಯ ಸೀತೆಯದು. ಅನ್ಯಾಯವನ್ನು ಪ್ರತಿಭಟಿಸುವ, ತನ್ನ ಆತ್ಮಾಭಿಮಾನಕ್ಕೆ ಧಕ್ಕೆ ಬಂದಾಗ ಸಿಡಿದೇಳುವ, ಜ್ವಾಲಾಮುಖಿಯಾಗಬಲ್ಲ ಸಶಕ್ತ ಪಾತ್ರವಾಗಿ ಪ್ರಜ್ವಲಿಸುವ ಸೀತೆಯ ಬೇರೊಂದು ಮಜಲನ್ನು ‘ಜಾನಾಮಿ ಜಾನಕಿ’ ಸುಪರಿಚಯಿಸುತ್ತದೆ. ಇಂದು ಹೆಣ್ಣು ಸಮಾನತೆ ಬಯಸುವುದಕ್ಕಿಂತ ಗೌರವ -ಸ್ವಾಭಿಮಾನಗಳ ಪ್ರತೀಕವಾಗಿ ‘ಸ್ತ್ರೀ ಶಕ್ತಿ’ಯನ್ನು ಮೆರೆಯುವ ಘನಸ್ತರವನ್ನು ಸಂಕೇತಿಸುವ ಈ ಜಾನಕಿಯ ನಿರಂತರ ಪಯಣ ಹೃದಯಸ್ಪರ್ಶಿಯಾಗಿದೆ.
ರಾಮಾಯಣ ಕಥಾನಕದ ವಿವಿಧ ಸಂದರ್ಭಗಳಲ್ಲಿ, ವಿವಿಧ ವ್ಯಕ್ತಿಗಳಿಗೆ ಅವರವರ ಮಟ್ಟಕ್ಕೆ ಗೋಚರಿಸುವ ಸೀತಾಮಾತೆಯ ಅನನ್ಯ ಚಿತ್ರಣವನ್ನು ಮನಮುಟ್ಟುವಂತೆ, ಹರಿತವಾದ ಸಂಸ್ಕೃತ ಭಾಷೆಯ ಸಂಭಾಷಣೆ-ಶ್ಲೋಕಗಳ ಮೂಲಕ ದೃಶ್ಯಾತ್ಮಕವಾಗಿ ಮುಂದಿಡುವ ನೂತನ ಪ್ರಯೋಗ ಇದಾಗಿದೆ. ಪ್ರಜ್ವಲ ಸೀತೆಯ ಪಾತ್ರದ ಮೂಲಕ ಸ್ತ್ರೀಶಕ್ತಿಯನ್ನು ಚೈತನ್ಯಪೂರ್ಣವಾಗಿ ಸಾದರಪಡಿಸುವವರು ಹಿರಿಯ ನೃತ್ಯ ಕಲಾವಿದೆ-ನಾಟ್ಯಗುರು ವೀಣಾ ಸಿ. ಶೇಷಾದ್ರಿ. ಪ್ರಸ್ತುತಿಯ ಪರಿಕಲ್ಪನೆ-ನಿರ್ದೇಶನ ಶ್ರೀ ಕೆ. ಸುಚೇಂದ್ರ ಪ್ರಸಾದ್ ಅವರದು. ಸಂಗೀತ-ಡಾ. ದೀಪಕ್ ಪರಮಶಿವನ್. ಇದೇ ತಿಂಗಳ 8 ನೇ ತಾ. ಬುಧವಾರ ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಸಂಜೆ 6.30 ಕ್ಕೆ ಪ್ರದರ್ಶನ. ಪ್ರವೇಶ ಉಚಿತ.