Image default
Dance Reviews

ಮನೋಜ್ಞ ಭಂಗಿ-ಅಭಿನಯದ  ಸುನೇತ್ರಳ  ಆಹ್ಲಾದಕರ ನರ್ತನ

ರಂಗದ ಮೇಲೆ ನರ್ತಿಸಲಾರಂಭಿಸಿದ ನೃತ್ಯ ಕಲಾವಿದೆ ಸುನೇತ್ರಾ ಬಲ್ಲಾಳಳ  ಸುಲಲಿತ ಚೇತೋಹಾರಿ ನೃತ್ಯ ನೋಡಿದಾಗ ಇದು ಇವಳ ಪ್ರಥಮ ಪ್ರವೇಶದ ‘ರಂಗಪ್ರವೇಶ’ ಎನಿಸಲಿಲ್ಲ. ಪಳಗಿದ ಹೆಜ್ಜೆಗಳು, ಆತ್ಮವಿಶ್ವಾಸದ ಅಭಿವ್ಯಕ್ತಿ-ಮನಮೋಹಕ ಚಲನೆಗಳು. ಸುನೇತ್ರ ನಿರಾಯಾಸವಾಗಿ ವೇದಿಕೆಯ ಮೇಲೆ ಎರಡೂವರೆ ಗಂಟೆಗಳು ಲವಲವಿಕೆಯಿಂದ ನರ್ತಿಸಿ ಕಲಾರಸಿಕರ ಹೃದಯ ಸೂರೆಗೊಂಡಳು.

ಬೆಂಗಳೂರಿನ ಖ್ಯಾತ ‘ನಂದಿ ಭರತನಾಟ್ಯ ಕಲಾಶಾಲೆ’ಯ ಗುರು ಗೀತಾ ಲಕ್ಷ್ಮೀ ಅವರ ಸೊಗಸಾದ ನೃತ್ಯಶಿಕ್ಷಣದ ಎರಕದಲ್ಲಿ ರೂಪುಗೊಂಡ ಕಲಾಶಿಲ್ಪ ಸುನೇತ್ರಾ, ಶುಭಾರಂಭದ ಸಾಂಪ್ರದಾಯಕ ‘ಪುಷ್ಪಾಂಜಲಿ’ಯಲ್ಲಿ ನಾಟ್ಯಾಧಿಪತಿ ನಟರಾಜ, ರಂಗಭೂಮಿಗೆ, ಗುರು-ಹಿರಿಯರಿಗೆ ತನ್ನ ಅಂಗ ಶುದ್ಧ ನೃತ್ತಾರ್ಚನೆಯಿಂದ ವಿನಯದಿಂದ ನಮಿಸಿದಳು.

 ಅನಂತರ- ಆದಿವಂದಿತ ಗಣಪನಿಗೆ  ಭಕ್ತಿ ಭಾವದಿಂದ ಪೊಡಮೊಟ್ಟಳು. ಯಾವುದೇ ಶುಭಕಾರ್ಯದ ಮೊದಲು ನಿರ್ವಿಘ್ನಕಾರಕ ಗಣಪತಿಗೆ ಪೂಜೆ ಸಲ್ಲಿಸಿ ಮನಸಾ ಅವನ ವರವನ್ನು ಬೇಡುವುದು ಪದ್ಧತಿ. ಆದರೆ ಇದನ್ನು ಮರೆತ ರಾವಣ, ಮೊದಲು ಗಣೇಶವಂದನೆ ಮಾಡದೆ ತಂದುಕೊಂಡ ವಿಪತ್ತನ್ನು ದೃಶ್ಯಾತ್ಮಕವಾಗಿ ಚಿತ್ರಿಸಿ ಹೇಳುವ ಪುರಂದರದಾಸರು ರಚಿಸಿದ ‘ವಂದಿಸುವುದಾದಿಯಲಿ ಗಣನಾಥನ…’ (ನಾಟರಾಗ, ಖಂಡಛಾಪು ತಾಳ) ಕೃತಿಯನ್ನು ಕಲಾವಿದೆ ಸಮರ್ಥವಾಗಿ ನಿರೂಪಿಸಿದಳು. ಬಹುಶ್ರಮದಿಂದ ಶಿವನಿಂದ ಗಳಿಸಿದ ಆತ್ಮಲಿಂಗವನ್ನು ರಾವಣ ತನ್ನ ಅಹಂಕಾರದಿಂದ ಕಳೆದುಕೊಂಡ ಪ್ರಸಂಗವನ್ನು ಸುನೇತ್ರಾ ತನ್ನ ಸ್ಫುಟವಾದ ಆಂಗಿಕಾಭಿನಯದಿಂದ ಸೊಗಸಾಗಿ ಕಟ್ಟಿಕೊಟ್ಟಳು.

ನಂತರ- ‘ಮಾರ್ಗಂ’ ಪದ್ಧತಿಯ ಪ್ರಾರಂಭಿಕ ಲಯಪ್ರಧಾನ ಕೃತಿಗಳನಂತರ ಮೊದಲ ಬಾರಿಗೆ ಅಭಿನಯವನ್ನು ಪರಿಚಯಿಸುವ ‘ಶಬ್ದಂ’ ಕೃತಿಯನ್ನು ಸಾದರಪಡಿಸಲಾಗುವುದು. ಗುಣಗಾನ ಅಥವಾ ಸ್ತುತಿ ‘ಶಬ್ದ’ದ ಮೂಲ ಆಶಯ. ಮುರುಗನಿಗೆ ಸಂಬಂಧಿಸಿದ ಕಥಾನಕಗಳ ನಿರೂಪಣೆಯ ಮೂಲಕ ಅವನನ್ನು ವರ್ಣಿಸಿ ಹೊಗಳುವ, ಸುಂದರ ಸಂಚಾರಿಯ ಸನ್ನಿವೇಶವನ್ನು ಕಣ್ಮುಂದೆ ತಂದು ನಿಲ್ಲಿಸಿದ ಕಲಾವಿದೆಯ ಅಭಿನಯ ಪ್ರತಿಭೆ ಸುವ್ಯಕ್ತವಾಯಿತು. ಮಧುರೈ ಮುರಳೀಧರನ್ ರಚನೆಯ ರಾಗಮಾಲಿಕೆಯ ಈ ಕೃತಿಯ ನಾಯಕ ಮುರುಗ – ಕೃತಿಯ ಕೇಂದ್ರಬಿಂದು. ಇಂದ್ರನ ಮಗಳು ದೇವಯಾನಿಯನ್ನು ಮದುವೆಯಾದ ಮುರುಗ, ನಂತರ-ಕಾಡಿನಲ್ಲಿ ಬೇಟೆಗಾರನ ವೇಷದಲ್ಲಿ ತಿರುಗಾಡುತ್ತಿದ್ದಾಗ ಪರಮಸುಂದರಿ ವಲ್ಲಿಯನ್ನು ಕಂಡು ಮೋಹಿತನಾಗುತ್ತಾನೆ. ವೃದ್ಧನ ವೇಷದಲ್ಲಿ ಅವಳ ಬಳಿಸಾರಿ ಹಸಿವು-ಬಾಯಾರಿಕೆಗಳ ನಟನೆ ಮಾಡಿ, ಅವಳ ಕೈಹಿಡಿದೆಳೆದು ಅವಳ ಪ್ರೇಮಪರೀಕ್ಷೆಯನ್ನು ಹಲವು ಬಗೆಯಲ್ಲಿ  ಮಾಡಿ, ತನ್ನತ್ತ ಇರುವ ಅವಳ ಅಚಲ ನಿಷ್ಠೆಯನ್ನು ಕಂಡು ತನ್ನ ನಿಜರೂಪ ತೋರಿ ಅವಳನ್ನು ವರಿಸುವ ದೃಶ್ಯ ಮನಮೋಹಕವಾಗಿತ್ತು. ಇದನ್ನು ಆಗುಮಾಡಿದ್ದು ಕಲಾವಿದೆಯ ಭಾವಪೂರ್ಣ ಅಭಿನಯ, ಚಾರಿ-ಕರಣಗಳ ಸುಂದರ ನಿರೂಪಣೆ, ಪ್ರಫುಲ್ಲ ನೃತ್ತಾಮೋದಗಳ ವೈಖರಿ. ವಲ್ಲಿ ಮತ್ತು ಮುರುಗ ಎರಡೂ ಪಾತ್ರಗಳಲ್ಲಿ ವೈಶಿಷ್ಟ್ಯ ತೋರಿದ ಸುನೇತ್ರಳಿಗೆ ಪಾತ್ರಗಳ ಅಂತರಂಗದ ಸ್ಪಷ್ಟ ಅರಿವಿತ್ತು.

ತಂಜಾವೂರು ಶಿವಶಂಕರ ಐಯ್ಯರ್ ರಚಿಸಿದ ‘ಶಿವಸ್ತುತಿ’-(ರಾಗ-ರೇವತಿ, ಆದಿತಾಳ) ಶಿವನ ಮಹಿಮೆ-ಮಹತ್ವಗಳನ್ನು ಹಲವು ಘಟನೆಗಳ ಮೂಲಕ ಬಣ್ಣಿಸುವ ಸುಂದರ ಕೃತಿ. ಶಿವನನ್ನು ಶಕ್ತಿಯಿಂದ ಒಲಿಸಿಕೊಳ್ಳಲು ಅಳವಲ್ಲ, ಭಕ್ತಿಯಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ಮನಗಾಣಿಸುವ ರಾವಣ ಕೈಲಾಸವನ್ನೆತ್ತಿ ಗುಡುಗಾಡಿಸಿ, ತನ್ನ ಶಕ್ತಿ ಪ್ರದರ್ಶನದ ವೈಫಲ್ಯ ಅರಿತು ಕಡೆಗೆ ತನ್ನ ಹೊಟ್ಟೆಯನ್ನು ಬಗೆದು ಕರುಳುಗಳಿಂದ ಸಾಮವೇದ ನುಡಿಸಿ ಶಿವನ ಕೃಪೆಗೆ ಪಾತ್ರವಾದ ದೃಶ್ಯವನ್ನು ಸುನೇತ್ರಾ, ತನ್ನ ಪರಿಣಾಮಕಾರಿಯಾದ ಅಭಿನಯದಿಂದ ನೋಡುಗರಿಗೆ ಕಟ್ಟಿಕೊಟ್ಟಳು. ಮುಂದೆ ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯ ವರ ಪ್ರಸಾದವಿತ್ತ ಶಿವ, ಸೊಕ್ಕಿ ಹರಿದ ಗಂಗೆಯ ರಭಸ-ಸೊಕ್ಕನ್ನು ಮುರಿಯಲು ಅವಳನ್ನು ತನ್ನ ಜಟಾಜೂಟದಲ್ಲಿ ಬಂಧಿಸಿ ತನ್ನ ಮಹಿಮೆ ಮೆರೆದ ಸನ್ನಿವೇಶವೂ ಸೊಗಸಾಗಿ ಮೂಡಿಬಂತು.

ರಾವಣ ತನ್ನ ಕರುಳುಗಳಿಂದ ವೀಣೆ ನುಡಿಸಿದ ನಾದ ಝೇಂಕಾರ ಮತ್ತು ಗಂಗೆ ಮೆರೆಮೀರಿ ಹರಿದ ಜುಳು ಜುಳು ನಿನಾದ ಮುಂತಾದ ಸಂದರ್ಭಗಳನ್ನು ಪರಿಣಾಮಕಾರಿಯಾಗಿಸಿದ ವೀಣಾಗಾನ- ಶಂಕರರಾಮನ್, ರಿದಂಪ್ಯಾಡ್ ವಿ. ಅರುಣ್ ಕುಮಾರ್ ಮತ್ತು ಮಧುಸೂದನ್ ಅವರ ವಯೊಲಿನ್ ವಾದನ ಉತ್ತಮ ಸಾಂಗತ್ಯ ನೀಡಿತ್ತು. ಕಲಾವಿದೆ ತಾನು ನೃತ್ಯ ಮಾಡುವ ಕೃತಿಗೆ ತಕ್ಕಂತೆ ಶಿವಸ್ತುತಿಗೆ ಹಣೆಯಲ್ಲಿ ವಿಭೂತಿ-ಕೊರಳಲ್ಲಿ ರುದ್ರಾಕ್ಷಿ ಧರಿಸಿದ್ದು, ವೇಷಭೂಷಣ-ಪ್ರಸಾಧನ ಮಾರ್ಪಡಿಸಿಕೊಳ್ಳುವುದು ರಂಗಪ್ರವೇಶಗಳಲ್ಲಿ ಪಾಲಿಸುವ ಸಾಮಾನ್ಯ ಸಂಗತಿ.

ನೃತ್ತ-ನೃತ್ಯ-ಅಭಿನಯಗಳಲ್ಲಿ ಪರಿಣತಿಯನ್ನು ನಿರೀಕ್ಷಿಸುವ ಪ್ರಮುಖ ಹಂತ ‘ವರ್ಣ’ ಸುನೇತ್ರ ಪ್ರಸ್ತುತಪಡಿಸಿದ್ದು ಮಧುರೈ ಮುರುಳೀಧರನ್ ಸಿಂಹೇಂದ್ರ ಮಧ್ಯಮ ರಾಗದಲ್ಲಿ ರಚಿಸಿದ ಭಕ್ತಿರಸಪ್ರಧಾನ ‘ವರ್ಣ’. ಮಲಯಧ್ವಜ ರಾಜನ ಮಗಳು ಮೀನಾಕ್ಷಿ ನಟರಾಜನ ಪ್ರಿಯ ಪತ್ನಿ. ದೇವಿಯ ಜನನದ ಐತಿಹ್ಯ, ಗುಣವಿಶೇಷಗಳು -ಮಹಿಮೆಗಳನ್ನು, ಮಹಿಷಾಸುರ ಮರ್ಧಿನಿಯ ಶಕ್ತಿಯನ್ನು ಬಗೆಬಗೆಯಾಗಿ ಬಣ್ಣಿಸುವ ಸತ್ವಯುತವಾದ ಕೃತಿ.  ದುರ್ಗಾಮಾತೆಯ ಸಮಗ್ರ ಕಥೆಯನ್ನು ಸುನೇತ್ರ, ತನ್ನ ಮನಮೋಹಕ ಅಭಿನಯ-ನಿರೂಪಣೆಯ ಮೂಲಕ ಎಳೆಎಳೆಯಾಗಿ ಅನಾವರಣಗೊಳಿಸಿದಳು. ನಡುನಡುವೆ ಕಲಾವಿದೆಯ ನೃತ್ಯ ವ್ಯಾಕರಣದ ಪರೀಕ್ಷೆಯಂತೆ ಕ್ಲಿಷ್ಟಕರವಾದ ಚಾರಿಗಳು, ಕರಣಗಳು ವಿಜ್ರುಂಭಿಸಿದವು. ಜೊತೆಯಲ್ಲಿ ವಿವಿಧ ವಿನ್ಯಾಸದ ನವಭಂಗಿಗಳು ಶೋಭಿಸಿದವು. ಗುರು ಗೀತಾಲಕ್ಷ್ಮಿ ಅವರ ಸ್ಫುಟವಾದ-ಸುಲಲಿತ  ನಟುವಾಂಗದ ಲಯಗತಿ ಕಲಾವಿದೆಗೆ ಉತ್ತಮ ಪ್ರೇರಣೆ-ಸ್ಫೂರ್ತಿ ನೀಡಿದವು. ಮೃದಂಗದ ಕೊನ್ನಕೋಲ್ ಗಳಿಗೆ ಸರಿಮಿಗಿಲಾಗಿ ಕಲಾವಿದೆ ತನ್ನ ನೃತ್ತ ಪ್ರತಿಭೆ ಪ್ರದರ್ಶಿಸಿದಳು. ಜತಿಗಳಲ್ಲೂ ಒನಪು-ವಯ್ಯಾರದ ಮಿನುಗು ಹೊಳೆಯಿತು. ಮಹಿಷಾಸುರನನ್ನು ವಧಿಸುವ ಸನ್ನಿವೇಶದಲ್ಲಿ ಪೌರುಷಾಭಿನಯ, ರೌದ್ರಭಾವಗಳ, ರಭಸದ ಹೆಜ್ಜೆಗಳ ಚಲನೆ ಮೆಚ್ಚುಗೆ ಪಡೆಯಿತು.

ಮುಂದೆ ಪ್ರಸ್ತುತವಾದದ್ದು-ಪುರಂದರದಾಸರ ‘ಕಡೆಗೋಲ ತಾರೆನ್ನ ಚಿನ್ನವೇ’ ( ರಾಗ-ಯಮನ್ ಕಲ್ಯಾಣಿ) ಕೃಷ್ಣನ ಲೀಲಾವಿನೋದಗಳನ್ನು ಬಿಚ್ಚಿಡುವ ಒಂದು ಸರಸ ಕೃತಿ. ತಾಯಿ ಯಶೋದೆ- ಮೊಸರು ಕಡೆಯಬೇಕಿದೆ, ಕಡಗೋಲನ್ನು ಕೊಡಪ್ಪ ಎಂದು ತನ್ನ ಮಗ ತುಂಟಕೃಷ್ಣನನ್ನು ವಿಧವಿಧವಾಗಿ ಪುಸಲಾಯಿಸುವ ಮನಮೋಹಕ ಗೀತೆ. ತಾಯಿ ಮತ್ತು ಮಗನಾಗಿ ಸುನೇತ್ರ, ತನ್ನ ರಮ್ಯಾಭಿನಯದಿಂದ ಸುಂದರ ನಾಟಕೀಯ ಸನ್ನಿವೇಶವನ್ನು ಸಾಕ್ಷಾತ್ಕರಿಸಿದಳು. ಭಾರತೀ ವೇಣುಗೋಪಾಲರ ಭಾವಪೂರ್ಣ ದನಿಯಲ್ಲಿ, ನಿತೀಶ್ ಅಮ್ಮಣ್ಣಯ್ಯ ಅವರ ಕೊಳಲ ಗಂಧರ್ವ ಗಾನದಲ್ಲಿ ಮನನೀಯವಾಗಿ ಈ ವಾತ್ಸಲ್ಯದ ರೂಪಕ ಬಿಚ್ಚಿಕೊಂಡಿತು.

ಅನಂತರ- ಮೈಸೂರು ವಾಸುದೇವಾಚಾರ್ಯರ ‘ಮಾಮವತುಶ್ರೀ ಸರಸ್ವತಿ’ ಹಿಂದೋಳ ರಾಗದ ರಮಣೀಯ ಕೃತಿ ಸಾದರಗೊಂಡಿತು. ಸುಶ್ರಾವ್ಯ ವೀಣಾನಿನಾದದಲ್ಲಿ ಆರಂಭಗೊಂಡ ವರ್ಚಸ್ವೀ ನಾಟ್ಯ ಕಣ್ಮನ ಸೂರೆಗೊಂಡಿತು. ಕುಣಿಸುವ ಲಯದ ಬಾಲ ಮುರಳೀಕೃಷ್ಣ ಕೃತ ‘ತಿಲ್ಲಾನ’ – ನವಿರೇಳಿಸುವ ಜತಿಗಳ ಸಂಚಾರ, ರಂಗಾಕ್ರಮಣದ ಸುಂದರನೋಟ ನೀಡಿದ ಸುನೇತ್ರಳ ಉತ್ಸಾಹ ಪುಟಿದ ನೃತ್ಯಾವಳಿ ಸಂಪನ್ನಗೊಂಡಿತು.

*********************

Related posts

Venkatesha Natya Mandira-Rasasanje-2022

YK Sandhya Sharma

ದೇದೀಪ್ಯಮಾನ ದೀಪ್ತಿಯ ಸುಮನೋಹರ ನರ್ತನ

YK Sandhya Sharma

Sri Raksha Hegde- Rangapravesha Review

YK Sandhya Sharma

Leave a Comment

This site uses Akismet to reduce spam. Learn how your comment data is processed.