Image default
Dancer Profile

ಸರ್ವಕಲಾ ಸಂಪನ್ನೆ ನೃತ್ಯ ಕಲಾವಿದೆ ಮಾನಸ ಕಂಠಿ

ಬಹುಮುಖ ಪ್ರತಿಭೆಯ ಮಾನಸ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ. ಸರ್ವ ಕಲೆಯಲ್ಲೂ ಆಸಕ್ತಿ, ಪರಿಶ್ರಮ. ಸಾಧನೆಯ ಪಥದತ್ತ ಕ್ರಮಿಸುತ್ತಿರುವ ಈಕೆಗೆ ಕಲೋಪಾಸನೆಯೇ ಜೀವನದ ಪರಮ ಗಂತವ್ಯ. ಓದುವುದರಲೂ ಕಡಿಮೆಯೇನಿಲ್ಲ. ಬಿ.ಎಸ್ಸಿ ಪದವೀಧರೆ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಬಿ.ಇ. ಪದವಿಯನ್ನು ಉತ್ತಮಾಂಕಗಳಿಂದ ಗಳಿಸಿರುವ ಯಶಸ್ವೀ ಎಂಜಿನಿಯರ್ ಕೂಡ.

ವೇದಿಕೆಯ ಮೇಲೆ ಮೋಹಿನಿ-ಭಸ್ಮಾಸುರ ನೃತ್ಯರೂಪಕದಲ್ಲಿ ಮೋಹಿನಿಯಾಗಿ ಸುಮನೋಹರವಾಗಿ ನರ್ತಿಸುತ್ತ, ಶಿಲ್ಪ ಸದೃಶ ಭಾವ-ಭಂಗಿಗಳಲ್ಲಿ ಕಣ್ಮನ ತುಂಬುವ ಮಾನಸ ಥೇಟ್ ಮೋಹಿನಿಯೇ. ಸಪ್ರಮಾಣ ಮೋಹನಾಕಾರಾವುಳ್ಳ ಸುಂದರಿ ಕೂಡ. ರೂಪ-ಪ್ರತಿಭೆ ಮಿಳಿತವಾದ ಈ ಕಲಾವಿದೆ ಯಾವ ಪಾತ್ರಾಭಿನಯ, ನೃತ್ಯ ಪ್ರಸ್ತುತಿಯಲ್ಲೂ ಜೀವ ತುಂಬಿ ನರ್ತಿಸಬಲ್ಲ, ಪ್ರಬುದ್ಧ ಅಭಿನಯ ನೀಡುವ ಸಾಮರ್ಥ್ಯ ಉಳ್ಳವಳು.

ಸುಸಂಸ್ಕೃತ ಮನೆತನ. ತಂದೆ ತೀರ್ಥಹಳ್ಳಿಯವರು. ಕೋಣಂದೂರು ವೆಂಕಪ್ಪ ಪ್ರೊಫೆಸರ್ ಮತ್ತು ಸಾಹಿತಿಗಳು.  ತಾಯಿ- ನಳಿನಿ ವೆಂಕಪ್ಪ ಕೂಡ ಲೇಖಕಿ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಡಳಿತಾಧಿಕಾರಿಯಾಗಿದ್ದವರು. ಮಗಳ ಬದುಕಿನಲ್ಲಿ ಅವಳ ಬಾಲ್ಯದಿಂದಲೂ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮೌಲ್ಯಾಧಾರಿತ ಬದ್ಧತೆ, ಆಧ್ಯಾತ್ಮಿಕ ಚಿಂತನೆಗಳ ಪ್ರಾಮುಖ್ಯವನ್ನು  ಮನನಗೊಳಿಸಿ ಬೆಳೆಸಿದ ಚಿಂತಕಿ.

ಮಾನಸ ಬಾಲಪ್ರತಿಭೆ. ಚಟುವಟಿಕೆಯ ಚಿಲುಮೆಯಾಗಿದ್ದವಳು ಸರಸ್ವತಿವಿದ್ಯಾಮಂದಿರ ಶಾಲೆಯಲ್ಲಿ ಓದುವಾಗ  ತರಗತಿಗೆ ಪ್ರಥಮ. ಭಗವದ್ಗೀತೆ, ಅಮರಕೋಶ,ಹಾಡುಗಾರಿಕೆ, ನೃತ್ಯ, ರಂಗೋಲಿ, ಚರ್ಚಾಸ್ಪರ್ಧೆ, ಎಲ್ಲದರಲ್ಲೂ ಮೊದಲು. ನಾಟಕಗಳಲ್ಲಿ ಪ್ರಮುಖ ಪಾತ್ರ ಮತ್ತು ಜಿಲ್ಲಾಮಟ್ಟದ ನೃತ್ಯ, ನಾಟಕ ಇತ್ಯಾದಿ ಎಲ್ಲ ಕಲಾಸ್ಪರ್ಧೆಗಳಲ್ಲಿ ಬಹುಮಾನಗಳು. ಜೊತೆಗೆ ಜಿಲ್ಲಾಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಬೆಳ್ಳಿ ಹಾಗೂ ಚಿನ್ನದ ಪದಕಗಳನ್ನು ಗಳಿಸಿದ ಅಗ್ಗಳಿಕೆ ಇವಳದು. ಎಸ್.ಎಸ್.ಎಲ್.ಸಿ. ಯಲ್ಲಿ ಡಿಸ್ಟಿಂಕ್ಷನ್ ಮತ್ತು ಕನ್ನಡ ಭಾಷೆಯಲ್ಲಿ ರಾಜ್ಯಕ್ಕೆ ಅತಿಹೆಚ್ಚು ಅಂಕಗಳನ್ನು ಪಡೆದ ವೈಶಿಷ್ಟ್ಯ.ಆನಂತರ ಬೆಂಗಳೂರಿನ ಆರ್.ವಿ.ಕಾಲೇಜಿನಿಂದ ಎಂಜಿನಿಯರ್ ಪದವಿ.

ಇವೆಲ್ಲಕ್ಕೂ ಕಳಶವಿಟ್ಟಂತೆ ನೃತ್ಯಕ್ಷೇತ್ರದಲ್ಲಿ ಬಾಲ್ಯದಿಂದಲೂ ಕಠಿಣಾಭ್ಯಾಸದ ತರಬೇತಿ. ಐದರ ಎಳವೆಯಲ್ಲೇ ಖ್ಯಾತ ನೃತ್ಯಗುರು ಶಾಂತಲಾ ಪ್ರಶಸ್ತಿ ವಿಜೇತೆ ಶ್ರೀಮತಿ ರಾಧಾ ಶ್ರೀಧರ್ ಅವರಲ್ಲಿ ನೃತ್ಯ ಕಲಿಕೆಗೆ ಸೇರ್ಪಡೆ. ಕರ್ನಾಟಕ ಸರ್ಕಾರದ  ಭರತನಾಟ್ಯ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣಳಾಗಿ ಅಂದಿನಿಂದ ಇಂದಿನವರೆಗೂ ಸತತ ಮೂರು ದಶಕಗಳಿಗೂ ಮಿಕ್ಕಿ ನೃತ್ಯೋಪಾಸನೆ ಮಾಡುತ್ತ ಬಂದಿರುವ ಬದ್ಧತೆಯ ಕಲಾವಿದೆ.

ತನ್ನದೇ ಆದ ನೃತ್ಯಸಂಸ್ಥೆ ‘ನಾಟ್ಯ ಸಂಪದ’ ಶಾಲೆಯಲ್ಲಿ ಕಳೆದ 25 ವರುಷಗಳಿಂದ ನಾಟ್ಯ ಶಿಕ್ಷಕಿಯಾಗಿ ಇದುವರೆಗೂ ನೂರಾರು ಕಲಾವಿದೆಯರನ್ನು ತಯಾರು ಮಾಡಿದ ಸಂತೃಪ್ತಿ-ಸಾರ್ಥಕ್ಯ ಭಾವ ಇವರದು.

ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ‘ರಂಗಪ್ರವೇಶ’ ಮಾಡಿದ ಮಾನಸ,  ಕಲಾರಸಿಕರೊಂದಿಗೆ ಮಾಧ್ಯಮಗಳ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿ ನಿರಂತರ ನೃತ್ಯ ಪ್ರದರ್ಶನ ನೀಡಲಾರಂಭಿಸಿದ್ದು ಅವಳ ಸಾಧನೆಯ ಮಜಲು. ಆನಂತರ ಭರತನಾಟ್ಯದಲ್ಲಿ ಪದ್ಮಭೂಷಣ ಡಾ.ಪದ್ಮಾ ಸುಬ್ರಹ್ಮಣ್ಯಂ ಅವರ ಮಾರ್ಗದರ್ಶನದಲ್ಲಿ ಶಾಸ್ತ್ರ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಳು.

ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಡಾ. ಮೀನಾಕ್ಷಿ ರವಿ ಅವರಿಂದ ಕಲಿತಿರುವುದಲ್ಲದೆ, ಗುರು ನಾಗರತ್ನ ಶಶಿಧರ್ ಅವರಲ್ಲಿ ವೀಣಾವಾದನದ ಅಭ್ಯಾಸ ಮಾಡಿರುವ ಪ್ರತಿಭಾವಂತೆ. ಭರತನಾಟ್ಯದೊಂದಿಗೆ ಗುರು ಮೈಸೂರು ನಾಗರಾಜ್ ಅವರಲ್ಲಿ ಕಥಕ್ ನೃತ್ಯಶೈಲಿಯಲ್ಲಿಯೂ ತರಬೇತು ಹೊಂದಿದ್ದಾಳೆ. ನೃತ್ಯಜ್ಞೆಯಾದ ಇವಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಪರೀಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ.

ಬಹುತೇಕ ಹೆಚ್ಚಾಗಿ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನೇ ನೀಡಿ ಗಮನ ಸೆಳೆದಿರುವ ಇವಳು, ಸಮೂಹ ನೃತ್ಯವಲ್ಲದೆ ತಾನು ನೃತ್ಯ ಕಲಿತ ಶಾಲೆ ‘ವೆಂಕಟೇಶ ನಾಟ್ಯ ಮಂಡಳಿ’ಯ ಎಲ್ಲ ನೃತ್ಯರೂಪಕಗಳು, ನೃತ್ಯ ನಾಟಕಗಳು, ಜಾನಪದ ನೃತ್ಯ, ಭಾವಗೀತೆಗಳಿಗೆ ಅಭಿನಯ ಮಾಡಿರುವುದು ಈಕೆಯವೈಶಿಷ್ಟ್ಯ. ದೂರದರ್ಶನದ ‘’ ಎ’’ ಗ್ರೇಡ್ ಕಲಾವಿದೆಯಾಗಿರುವ ಇವಳು ದೂರದರ್ಶನದಲ್ಲಿ ಅನೇಕ ವಿಶೇಷ ಸಮಾರಂಭಗಳಲ್ಲಿ ಏಕವ್ಯಕ್ತಿ ಮತ್ತು ಶಿಷ್ಯವೃಂದದೊಂದಿಗೆ ಕಾರ್ಯಕ್ರಮಗಳನ್ನು ನೀಡಿದ ಅಗ್ಗಳಿಕೆ ಇವಳದು. ಜೊತೆಗೆ ಉತ್ತಮ ವಾಕ್ಪಟುವಾದ ಮಾನಸ ಡಿ.ಡಿ.ಯ ಅನೇಕ ಕಾರ್ಯಕ್ರಮಗಳಿಗೆ ಮತ್ತು ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಸೇರಿದಂತೆ ಅನೇಕ ಸಮಾರಂಭಗಳಿಗೆ ನಿರೂಪಕಿಯಾಗಿಯೂ ಆಹ್ವಾನಿತಳಾಗಿದ್ದಾಳೆ.  

ಭಾರತಾದ್ಯಂತ ಅನೇಕ ನೃತ್ಯೋತ್ಸವಗಳಲ್ಲಿ ನರ್ತಿಸಿರುವ ಮಾನಸ, ಅಮೆರಿಕಾದಲ್ಲಿ ನಾಲ್ಕು ತಿಂಗಳು ಪ್ರವಾಸ ಮಾಡಿ ಅಲ್ಲಿನ ಇಪ್ಪತ್ತಕ್ಕೂ ಹೆಚ್ಚಿನ ರಾಜ್ಯಗಳಲ್ಲಿ -ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಟೆಕ್ಸಾಸ್, ಫ್ಲಾರಿಡಾ, ಪೆನ್ಸಿಲ್ವೇನಿಯಾ,ಅರಿಜೋನಾ, ಅಲಾಸ್ಕಾ, ವಾಶಿಂಗ್ಟನ್, ಮಿಷಿಗನ್, ನಿವಾಡ, ಒಹಾಯೋ, ನ್ಯೂಜರ್ಸಿ, ವರ್ಜಿನಿಯಾ, ಇಲಿನಾಯ್ಸ್, ನ್ಯೂಯಾರ್ಕ್, ಮೇರಿಲ್ಯಾಂಡ್, ಮಿಸ್ಸೋರಿ, ಕೆಂಟಕಿ,ಲೂಸಿಯಾನ, ನಾರ್ತ್ ಕೆರೋಲಿನಾ ಮುಂತಾದೆಡೆ ಅನೇಕ ನೃತ್ಯ ಪ್ರದರ್ಶನಗಳನ್ನಿತ್ತು ಅಲ್ಲಿನ ಕಲಾರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಹಾಗೆಯೇ ದುಬಾಯ್ ಮತ್ತು ಶಾರ್ಜಾಗಳಲ್ಲಿ ನಾಲ್ಕು ಬಾರಿ ಪ್ರವಾಸ ಮಾಡಿ ಕನ್ನಡದ ಪೆಂಪನ್ನು ಎತ್ತಿ ಹಿಡಿದಿದ್ದಾರೆ.

ಉತ್ತಮ ನೃತ್ಯ ಸಂಯೋಜಕಿಯೂ ಆಗಿ ಹೆಸರು ಮಾಡಿರುವ ಮಾನಸ, ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್.ಎಸ್.ಮುಂತಾದ ಖ್ಯಾತಕವಿಗಳ ಗೀತೆಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಹಂಪಿ, ಪಟ್ಟದಕಲ್ಲು, ಕಿಂಕಿಣಿ, ರಸಸಂಜೆ, ಶಾಂತಲೋತ್ಸವ ಮುಂತಾದ ಅನೇಕ ಉತ್ಸವಗಳಲ್ಲದೆ ಅನೇಕ ರಾಜ್ಯೋತ್ಸವಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿದ ಗರಿಮೆ. ಸರ್ಕಾರದಿಂದ ರಷ್ಯನ್, ಥಾಯ್, ಜಪಾನ್, ಅಮೇರಿಕನ್ ಪ್ರತಿನಿಧಿಗಳಿಗಾಗಿ ನೃತ್ಯ ಕಾರ್ಯಕ್ರಮ ನೀಡಲು ಇವರಿಗೆ ಆಮಂತ್ರಣ. ಅಖಿಲ ಭಾರತ ಚೀಫ್ ವಿಪ್ಸ್ ಸಮ್ಮೇಳನದಲ್ಲಿ ಅತ್ಯುತ್ತಮ ಕಲಾವಿದೆ ಎಂಬ ಪ್ರಶಂಸೆ.

ಮಾನಸಳ ಪ್ರತಿಭೆ ಇಷ್ಟಕ್ಕೇ ಸೀಮಿತವಾಗಿಲ್ಲ. ಜಾಹೀರಾತುಗಳಲ್ಲಿ ಅಭಿನಯ ನೀಡಿರುವುದರೊಂದಿಗೆ ಅನೇಕ ಪ್ರತಿಷ್ಠಿತ ವಾಣಿಜ್ಯ ಜಾಹೀರಾತುಗಳ ಕಂಪೆನಿಗಳಿಗೆ ಹಾಡುಗಳ ರಚನೆ. ರೆಡ್ ಎಫ್.ಎಂ.93 .5 ನಲ್ಲಿ ರೇಡಿಯೋ ಜಾಕಿ, ಉದಯ ಟಿವಿ, ಜೀ ಟಿವಿ ಕನ್ನಡದಲ್ಲಿ ನಿರೂಪಕಿ ಮತ್ತು ಸ್ಕ್ರಿಪ್ಟ್ ರೈಟರ್ ಆಗಿ ಅನುಭವ ಗಳಿಕೆ. ಸುದ್ದಿ ಟಿವಿ ನ್ಯೂಸ್ ಚಾನಲ್ ನಲ್ಲಿ ಪ್ರೋಗ್ರಾಮ್ ಪ್ರೊಡ್ಯೂಸರ್ ಆಗಿ ಸೇವೆ.

ಮಾನಸಾಳ ಕಾರ್ಯಕ್ಷೇತ್ರ ಇನ್ನೂ ವಿಪುಲ. ಪ್ರಖ್ಯಾತ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯಾಗ್ರಫಿ ಸಂಸ್ಥೆಯಿಂದ ಇಂಟೀರಿಯರ್ ಡಿಸೈನಿಂಗ್ ನಲ್ಲಿ ಡಿಪ್ಲೊಮಾ ಮತ್ತು ಕೊರಿಯಾಗ್ರಫಿಯಲ್ಲೂ ಡಿಪ್ಲೊಮಾ ಮಾಡಿರುವ ಹಿರಿಮೆ ಇವಳದು. ತನ್ನ ‘ನಾಟ್ಯ ಸಂಪದ’ ಶಾಲೆಯ ಹಿರಿಯ ವಿದ್ಯಾರ್ಥಿಗಳ ಒಂದು ‘ಕೋರ್ ಟೀಮ್’ ನೊಂದಿಗೆ ಅನೇಕ ಯುವಜನೋತ್ಸವ ಮತ್ತು ಕಾರ್ಪೋರೆಟ್ ಕಾರ್ಯಕ್ರಮಗಳನ್ನೂ ನೀಡುತ್ತ ಬಂದಿದ್ದಾರೆ. ಗುರು ರಾಧಾ ಶ್ರೀಧರ್ ನಿರ್ಮಿತ ಎಲ್ಲ ನೃತ್ಯರೂಪಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ನರ್ತನದಲ್ಲಿ ಭಾಗವಹಿಸಿರುವ ಇವರು ಗುರುಗಳಿಂದ ‘ನೃತ್ಯ ಕಲೋಪಾಸಕಿ’ ಪ್ರಶಸ್ತಿಯನ್ನು ಪಡೆದ ಅದೃಷ್ಟವಂತೆ.

 ಕೆಲಕಾಲ ಪೇಟಿಎಂ. ಸಂಸ್ಥೆಯಲ್ಲಿ ರೀಜನಲ್ ಮೇನೇಜರ್ ಆಗಿ ಯಶಸ್ವೀ ಉದ್ಯೋಗಿಯಾಗಿಯೂ ಸೇವೆ ಸಲ್ಲಿಸಿರುವ ಮಾನಸ, ಅಲ್ಲಿ ಪೇ ಟಿ ಎಂ ಸೂಪರ್ ಸ್ಟಾರ್ ಹಾಗೂ ಬೆಸ್ಟ್ ರೀಜನಲ್ ಮೇನೇಜರ್ ಪ್ರಶಸ್ತಿಗಳನ್ನು ಗಳಿಸಿದ ವೈಶಿಷ್ಟ್ಯಇವಳದು. ಆಧ್ಯಾತ್ಮಿಕ ಚಿಂತಕಿಯಾದ ಈಕೆ, ಯೋಗ ಶಿಕ್ಷಕಿಯರ ತರಬೇತಿ, ಭಗವದ್ಗೀತ ಪ್ರವಚನ ಕೋರ್ಸ್, ಕುಂಡಲಿನಿ ಚಕ್ರ ಧಾರಣ ಶಿಕ್ಷಕಿಯ ತರಬೇತಿ ಪಡೆದಿದ್ದಾರೆ. ಈ ಎಲ್ಲ ವಿಶಿಷ್ಟ ಹಿನ್ನಲೆಯುಳ್ಳ ಮಾನಸ, ತಮ್ಮ  ನೃತ್ಯಶಾಲೆಯ ವಿದ್ಯಾರ್ಥಿನಿಯರ ಸರ್ವಾಂಗೀಣ ಬೆಳವಣಿಗೆಗೆ ಸಹಾಯಕವಾಗುವ ವಿವಿಧ ಆಯಾಮಗಳ ಶಿಕ್ಷಣವನ್ನೂ ನೀಡುತ್ತ ಬಂದಿರುವುದು ನಿಜಕ್ಕೂ ವಿಶೇಷವೇ ಸರಿ.

                                            ***********************

Related posts

ಉದಯೋನ್ಮುಖ ಕಥಕ್ ನೃತ್ಯ ಕಲಾವಿದೆ ಶ್ರುತಿ ಗುಪ್ತ

YK Sandhya Sharma

ಚೈತನ್ಯಪೂರ್ಣ ನೃತ್ಯಗಾರ್ತಿ ಚೈತ್ರಾ ಸತ್ಯನಾರಾಯಣ

YK Sandhya Sharma

ಉದಯೋನ್ಮುಖ ಕಥಕ್ ನೃತ್ಯಕಲಾವಿದೆ ಆರೋಹಿ ಗೋಧ್ವಾನಿ

YK Sandhya Sharma

Leave a Comment

This site uses Akismet to reduce spam. Learn how your comment data is processed.