Image default
Short Stories

ಯಥಾಪ್ರಕಾರ

ಬೆಳಗಾಗಲಿಲ್ಲ, ಆಗಲೇ ಎದುರು ಮನೆಯ ಕಡೆಯಿಂದ ಯಾರೋ ಬೊಬ್ಬೆ ಹೊಡೆಯುವುದು ಕೇಳುತ್ತದೆ. ಎಂದಿನ ಜೋರು ಗಲಭೆ ಎಬ್ಬಿಸಿ ಕೂಗಿಕೊಳ್ಳುವ ಮಾಯಕ್ಕನ ದನಿಯಲ್ಲ. ಅದೇ ಕಡೆಯಿಂದ ಬರುತ್ತಿದೆ, ಪ್ರಾಯದ ಹೆಣ್ಣು- ಗಂಡಿನ ದನಿ.

ಐದ್ಹತ್ತು ನಿಮಿಷಗಳಲ್ಲಿ ಸುತ್ತಮುತ್ತಲ ಮನೆಯ ಬಾಗಿಲುಗಳ ಬಾಯಿ ತೆರೆಯುವುದರ ಜೊತೆಗೆ ‘ಏನಾಯ್ತು? ಏನಾಯ್ತು?’ ಹಲವಾರು ಬಾಯಿಗಳು ದನಿ ಬಂದತ್ತ ಹಾರಿದವು. ಗದ್ದಲ ನಿದ್ದೆಯನ್ನು ಕುಲಕಿದಾಗ ಗಾಬರಿಯಾಗಿ ಎದ್ದು ಕುಳಿತಳು ಯುಮುನಾಬಾಯಿ. ಸುತ್ತ ಆತುರವಾಗಿ ಕತ್ತನ್ನು ಗರಗರ ತಿರುಗಿಸಿ ನೋಡಿ ಗಂಡ, ಮಕ್ಕಳು ಹಿಂದಿನ ರಾತ್ರಿ ಹೇಗೆ, ಎಲ್ಲಿ ಮಲಗಿದ್ದರೋ ಹಾಗೇ ಮಲಗಿರುವುದನ್ನು ಕಂಡು ಸಮಾಧಾನದ ಉಸಿರು ಚೆಲ್ಲಿ,  ಕಾರಣ ತಿಳಿಯದೆ ಬಡಿದುಕೊಳ್ಳುತ್ತಿರುವ ಎದೆಯನ್ನು ನೀವಿಕೊಂಡಳು. ಮತ್ತೆ ಮಲಗಿ ಬಲಗಡೆಯ ಮಗ್ಗುಲಾಗೆದ್ದು ಕೈ ಜೋಡಿಸಿ ಮುಂಬಾಗಿಲು ತೆರೆದಳು.

ಮಾಯಕ್ಕನ ಮನೆ ಮುಂದೆ ಹೊರೆ ಜನ. ಕೈಯಲ್ಲಿದ್ದ ಪೊರಕೆ, ನೀರಿನ ಬಕೇಟನ್ನು ಅಲ್ಲೇ ಕುಕ್ಕಿ ತಾನೂ ಗುಂಪಿನೊಳಗೆ ತೂರಿದಳು.

ನಿತ್ಯ ಬೆಳಗ್ಗೆ ಎದುರು ಬದುರು ಮನೆಯ ಬಾಗಿಲುಗಳು ಹೆಚ್ಚು ಕಡಿಮೆ ಒಟ್ಟಿಗೆ ತೆರೆಯುತ್ತವೆ. ಮೊದಲು ಎರಡು ಪೊರಕೆಗಳು ಹೊರಗೆ ತಲೆ ಹಾಕುತ್ತವೆ. ಹಿಂದೆ ಮಾಯಕ್ಕ, ಯಮುನಾಬಾಯಿ ಕಾಣಿಸಿಕೊಳ್ಳುತ್ತಾರೆ. ಎಲೆಯಡಿಕೆಯಿಂದ ಬಣ್ಣಗೆಟ್ಟಿದ್ದ ಕೆಂಪು ಹಲ್ಲುಗಳನ್ನು ಫಕ್ಕನೆ ಬಿಟ್ಟು ‘ಬೆಳಗಾತಲ್ಲ ಅಕ್ಕ’ ಎಂದು ಮಾಯಕ್ಕ ಬಾಗಿಲ ಮುಂದೆ ನೀರು ಸುರಿದು ಪೊರಕೆ ಬಡಿಯುತ್ತಾಳೆ. ಉತ್ತರವಾಗಿ ಯಮುನಾಬಾಯಿಯದು ‘ಹೂಂನ್ರೀ’ ತೆಳು ನಗೆ.

“ಸರಿ ಬುಡು…ಸುರುವಾತು ಇನ್ ಚಾಕ್ರಿಗೆ… ತಡಿ, ಒಲೆಗೊಂದೀಟ್ ಬೆಂಕಿ ಮುಟ್ಟಿಸ್ಟರ್ತೀನಿ’ ಎಂದು ಒಳನಡೆಯುತ್ತಾಳೆ ಮಾಯಕ್ಕ. ಯಾವಾಗಲೂ ಎಲ್ಲ ಮಾತೂ, ಕೆಲಸಗಳಿಗೂ ‘ತಡೀ’ ಎಂದೇ ಅವಳು ಮಾತನ್ನು ಆರಂಭಿಸುವುದು. ಆದರೆ ಯಮುನಾಬಾಯಿ ಅವಳಿಗಾಗಿ ಕಾಯುವುದಿಲ್ಲ. ಒಳಗೆ ಅವಳಿಗೆ ಬಂಡಿ ಕೆಲಸ ಕಾದಿರುತ್ತದೆ.

ದಿನಾ ಪೊರಕಾ-ಪೊರಕೀ ದರ್ಶಿಸುವ ಮಾಯಕ್ಕ-ಯಮುನಾಬಾಯಿಯ ಭೇಟಿ ಇಂದು ನಡೆಯಲಿಲ್ಲ. ಎಂದೂ ಮಲಗುವುದೇ ಇಲ್ಲವೆಂದು ಪದೇ ಪದೇ ಹೇಳುತ್ತಲೇ ಇರುತ್ತಿದ್ದ ಮಾಯಕ್ಕ ಇಂದು ಹಾಯಾಗಿ ಚಾಪೆಯ ಮೇಲೆ ಕಾಲು ಚಾಚಿ ಮಲಗಿದ್ದಾಳೆ. ಕಾಲ್ದೆಸೆಯಲ್ಲಿ ಮಗ, ತಲೆಯ ಬಳಿ ಮಗಳು.  ಇಬ್ಬರೂ ತಮ್ಮ ತಲೆಗಳನ್ನು ತಾಯಿಯ ಕಾಲು, ತಲೆಗಳಿಗೆ ಒರಳ ಮೇಲೆ ತೆಂಗಿನಕಾಯಿ ಒಡೆಯುವಂತೆ ಚಚ್ಚಿಕೊಳ್ಳುತ್ತಿದ್ದಾರೆ. ಒಂದಿಬ್ಬರು ತಡೆಯುತ್ತಿದ್ದಾರೆ.

‘ಅವ್ವಾ-ನಮ್ಮುನ್ಬಿಟ್ ಓಗಾಕೆ ನಿಂಗ್ ಎಂಗವ್ವ  ಮನಸ್ಬಂತು?’’

 “ಅವ್ವಾ ನೀ ಇಲ್ದೆ ನಾ ಎಂಗ್ ಬದುಕಿರ್ಲಿ? ನಾನೂ  ಸತ್ತೋಯ್ತೀನಿ…ಊಂ…’

ಯುಮುನಾಬಾಯಿ, ಸರಕ್ಕನೆ ಬಗ್ಗಿ ತಲೆ ಬಡಿದುಕೊಳ್ಳುತ್ತಿದ್ದ ನೀಲಳನ್ನು ಪಕ್ಕಕ್ಕೆ ಎಳೆದುಕೊಂಡು ಮೌನವಾಗಿ ಸಮಾಧಾನಪಡಿಸಿದಳು. ನೀಲಾ ಅವಳನ್ನು ತಬ್ಬಿಕೊಂಡು ತಕಪಕ ಹೊಯ್ದಾಡಿ, ಜೋರು ದನಿ ತೆಗೆದು ಅತ್ತಳು. ಗಂಭೀರ ವಾತಾವರಣದಲ್ಲಿ ದುಃಖಿಯಾಗಿದ್ದ ನೀಲಳನ್ನು ಸಂತೈಸಬೇಕೆಂದು ಯಮುನಾಬಾಯಿಗೆ ಅನ್ನಿಸುತ್ತಿದ್ದರೂ ಮನಸ್ಸಿನ ತುಂಬ ಆಶ್ಚರ್ಯ ಭರ್ತಿ! ಈ ಮಕ್ಕಳು ತಾಯಿಯನ್ನು ಇಷ್ಟು ಬಲವಾಗಿ ಪ್ರೀತಿಸುತ್ತಿದ್ದರೆಂದು ಅವಳಿಗೆ ಗೊತ್ತೇ ಇರಲಿಲ್ಲ.

ಅಡಿಗೆ ಶುರು ಮಾಡುವಷ್ಟರಲ್ಲಿಯೇ ಮಾಯಕ್ಕನ ಮೊದಲನೇ ಸುತ್ತಿನ ಸವಾರಿ ದಯಮಾಡಿಸುತ್ತಿತ್ತು.

’’ಎಂಥಾ ಮಾಡ್ತೀಯೆ ಅಕ್ಕ ಅಡಿಗೆ?’ -ಕೊಬ್ಬರಿ ತುರಿಯುವುದನ್ನು ಕಂಡು ‘ಹಾ ನಾನೂ ಚಟ್ನೀನೇ ಅರೀಬೇಕಂತ ಮಾಡೀನಿ…ತುಂಬ ಕಾಯಿ ಬೇಕಾಗ್ತಾವೇನು?…ಕಡಲೆ ಅರಿದ್ರೂ ನಡೀತದಲ್ಲೇನು?’’ –  ಹೀಗೇ ಮುಂದಕ್ಕೇನೇನೋ ಮಾತನಾಡುತ್ತಲೇ ಇರುತ್ತಾಳೆ ಮಾಯಕ್ಕ. ಅವಳ ಮಾತಿನ ಸೂಕ್ಷ್ಮ ಯುಮನಾಬಾಯಿಗೆ ಕೂಡಲೇ ತಟ್ಟುತ್ತದೆ. ಇಂಥ ಸಂದರ್ಭಗಳಲ್ಲಿ ಅವಳು ಆ ಬೀದಿಯ ಉಳಿದ ಹೆಂಗಸರಂತೆ ಮಾಯಕ್ಕನನ್ನು ಹೀನಾಯವಾಗಿ ಕಂಡು ಮುಖ ಸಿಂಡರಿಸುವುದಿಲ್ಲ. ಒಂದಿಷ್ಟು ಚಟ್ನಿಯನ್ನೋ ಅಥವಾ ಕೊಬ್ಬರಿ ಹೋಳನ್ನೋ ಅವಳ ಕೈಯಲ್ಲಿಟ್ಟು ಮಾತಾಡದೇ ಅವಳಿಗೂ ಮಾತಾಡಲು ಅವಕಾಶ ಕೊಡದೆ ಕೆಲಸದಲ್ಲಿ ಮೈಮರೆಸಿಕೊಳ್ಳುತ್ತಾಳೆ. ಆದರೆ ಮನಸ್ಸಿನ ತುಂಬ ಮಾಯಕ್ಕನ ದೈನ್ಯಾವಸ್ಥೆಯೇ ಆವರಿಸಿರುತ್ತದೆ.

ಬೆಳಗ್ಗೆ ಎದ್ದ ತತ್‍ಕ್ಷಣ ಮಾಯಕ್ಕ ಆ ಬೀದಿಯ ಎಲ್ಲ ಮನೆಗಳಿಗೂ ಎರಡೆರಡು ನಿಮಿಷವಾದರೂ ಹೋಗಿ ನಗುಮುಖ ತೋರಿಸುತ್ತ ‘ಬೆಳಗಾತು… ನಿಮ್ಗ ಕೆಲ್ಸ ಅದೇನೋ ಬರ್ತೀನಿ’ ಎಂದು ಕುಶಲ ಕೇಳುವುದು ಅಭ್ಯಾಸ. ಕಡೆಯಲ್ಲಿ ಯಮುನಾಬಾಯಿಯ ಮನೆಯಲ್ಲಿ ಬಂದು ಕೂರುವುದು. ಅದೂ ಇದೂ ಹರಟುವುದು. ಆಕೆಯನ್ನು ಕಂಡರೆ ಮಾಯಕ್ಕನಿಗೇನೋ ಒಂದು ಬಗೆಯ ಅಕ್ಕರೆ. ಮೃದುಮನಸ್ಸಿನ ಯಮುನಾಬಾಯಿಗೂ ಅಷ್ಟೇ.  ಮಾಯಕ್ಕನ ಮೇಲೆ ಅವ್ಯಕ್ತ ಮಮತೆ, ಕರುಣೆಯ ಜಿನುಗು.  ಮಾಯಕ್ಕ ತನ್ನ ಕತೆಯನ್ನು ಅವಳ ಮುಂದೆ ಕಡಿಮೆಯೆಂದರೆ ಹತ್ತು ಬಾರಿಯಾದರೂ ಹೇಳಿರಬೇಕು.

ಮಾಯಕ್ಕನದು ಹುಟ್ಟಿದಂದಿನಿಂದ ಕಷ್ಟದಲ್ಲೇ ಹೊರಳಾಡಿದ ಜೀವ. ಅನಾಥ ಜೀವನ. ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಕ್ರೂರ ಬೊಗಸೆಯಲ್ಲಿ ಮೈ ಬೆಳೆಸಬೇಕಾಯಿತು. ಸಮಾಧಾನ ಹೇಳಲು ಬೆನ್ನಿಗೆ ಬಿದ್ದವರಾರೂ ಇರಲಿಲ್ಲ. ವಯಸ್ಸಿಗೆ ಮೀರಿದ ದುಡಿತ. ಬೆಳೆಯುವ ವಯಸ್ಸಿನಿಂದ ಅರೆಹೊಟ್ಟೆಯಾದ ಕಾರಣ ಮಾಯಕ್ಕನ ದೇಹ ಇಂದಿಗೂ ಮುದುರಿಕೊಂಡೇ ಇದೆ. ತನ್ನ ಹೊರೆ ನೀಗಿಸಿಕೊಳ್ಳಲು ಮಲತಾಯಿ ಹದಿನೈದರ ಮಾಯಕ್ಕನನ್ನು ನಲವತ್ತರ ನಂಜಪ್ಪನಿಗೆ ಕಟ್ಟಿದಳು. ಗಂಡನ ಮನೆಗಿಂತ ತಾನು ಹಿಂದಿದ್ದ ಸ್ಥಳವೇ ಎಷ್ಟೋ ಮೇಲಾಗಿತ್ತು ಎನ್ನುವಾಗ- ‘ಆ ಸನಿ ನಂಗ್ಯಾಕಾರೋ ಲಗ್ಣ ಅಂತ ಮಾಡಾಕಿದಳೋ ’ ಎಂದು ನೆಟಿಕೆ ತೆಗೆಯುತ್ತಿದ್ದುದೂ ಉಂಟು ಮಾಯಕ್ಕ.

‘ಅವ್ಳು ಬಡಿಯೋ ಏಟ್ಗಳೇ ಸಾಯೋಗಂಟ ಇದ್ದಿದ್ರೂ ನಾ ಸಂತ್ವೋಷಪಡ್ತಿದ್ನಿ… ಆದ್ರೆ ಈಯಪ್ಪನ ಕಾಟ. ಮೈಯೆಲ್ಲ ಉಂಡೀ ಮಾಡಿ ತೊಳಸ್‍ಬಿಡ್ತಿದ್ದ…ನಾ ಬಾಯ್ ಬಡ್ಕಂಡ್ ಬೀದ್ಯಾಗ್ ಬಿದ್ರೂ ಬಿಡ್ತಿರ್ನಿಲ್ಲ…ಪಾಪ್ ಸೂಳೇಮಗ ಹಾಳಾಗ”.

ಮಾಯಾಕ್ಕನ ದಾಂಪತ್ಯ ವಿಚಾರ, ಗಂಡ-ಹೆಂಡತಿಯರ ಸಂಬಂಧ, ಅವನ ಕಾಮ-ಕ್ರೌರ್ಯಗಳನ್ನು ಕುರಿತು ಕೇಳುವಾಗ ಯುಮುನಾಬಾಯಿಗೆ ಬಾಯಿ ಅರಳುವ ಆಶ್ಚರ್ಯ. ಇವರ ಜೀವನವೆಲ್ಲ ಇಷ್ಟು ಸಣ್ಣವೃತ್ತದಲ್ಲೇ ಮುಗಿದುಹೋಗುತ್ತದೆಯೇ ಎಂಬ ಭಾರಿ ವಿಸ್ಮಯ!

ಮಾಯಕ್ಕನ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಅವಳ ಮೈ ತುಂಬ ಬರೆದಿತ್ತು. ಹಿಂದಿನದನ್ನು ಉಸುರುವಾಗ ಅವಳು ಗಾಯ-ಕಲೆಗಳನ್ನು ಮುಟ್ಟಿ ತೋರಿಸುತ್ತ ನೋವನ್ನನುಭವಿಸುತ್ತಿರುವಂತೆ ತನ್ನ ಕಣ್ಣಲ್ಲಿ ನೀರು ತುಂಬಿಸುತ್ತಾಳೆ. ನೋವಿಗಿಂತ, ಕ್ರೂರಬಾಳಿನ ಜುಗುಪ್ಸೆಯನ್ನು ಅವಳ ಕಣ್ಣೀರು ಹೊರಚೆಲ್ಲುತ್ತಿತ್ತು. ಅವಳ ಮಲತಾಯಿ, ಗಂಡ-ಮಕ್ಕಳು ಸೇರಿ ಅವಳ ಮನಸ್ಸನ್ನು ಹೊಸಕಿಬಿಟ್ಟಿದ್ದರು. ಜೀವನದಲ್ಲಿ ಸುಖ ಎಂದರೇನು ಎಂದು ಅವಳು ಕಂಡೇ ಇರಲಿಲ್ಲ. ಸಮಾಧಾನದ ಮಾತುಗಳೂ ಇಲ್ಲ. ಅಬ್ಬರ, ಬಡಿತ ಎರಡೇ ಅವಳಿಗೆ ಪರಿಚಿತ, ಬಳುವಳಿ.

ಮನೆ ಮನೆ ತಿರುಗುವ ತಾಯಿ ಎಲ್ಲಿ ತಮ್ಮ ಮನೆಯ ಕತೆಯನ್ನೆಲ್ಲ ಇದ್ದ ಹಾಗೆ ಹೇಳಿಕೊಂಡು ಬಿಟ್ಟಿದ್ದಾಳೋ ಎಂದು ಮಕ್ಕಳಿಗೆ ಅವಳ ಮೇಲೆ ಕೋಪ, ರೋಷ. ಇಬ್ಬರೂ ಸೇರಿ ತಾಯಿಯನ್ನು ಹಣ್ಣು ಮಾಡುತ್ತಾರೆ. ಆದರೂ ಮರುದಿನ ಏನಾದರೂ ಸಾಮಾನು ಕಡ ಕೇಳಲು ಅವಳು ಮನೆಯಿಂದ ಹೊರಗೆ ಹೊರಡಲೇಬೇಕಾಗುತ್ತದೆ. ಹೇಗಾದರೂ ಕುದುರಿಸಿ ಹನ್ನೆರಡರ ಹೊತ್ತಿಗೆ ಉಣ್ಣಲು ಏನಾದರೂ ಬೇಯಿಸಲೇ ಬೇಕಿತ್ತು. ಇಲ್ಲದಿದ್ದರೆ ಅವಳ ಎಲುಬುಗಳಿಂದ ನೆಟಿಕೆ ಹೊರಬರುತ್ತಿತ್ತು. ಪ್ರತಿದಿನ ಅವಳ ಮನೆಯ ವಿಚಿತ್ರ ಪರಿಯನ್ನು ಕಾಣುತ್ತ, ಮಾಯಕ್ಕನದು ಜೀವನವಿಡೀ ಮುಳ್ಳಿನ ಹಾಸಿಗೆಯಲ್ಲೇ ಹೊರಳಾಟವೆಂದು ಚಿಂತಿಸಿದಾಗ ಯಮುನಾಬಾಯಿಯ ಜೀವ ಹಿಂಡುತ್ತದೆ; ಅಸಹಾಯಕಳಾಗಿ ಪರಿತಪಿಸುತ್ತಾಳೆ.

ಯಮುನಾಬಾಯಿಯ  ಗಂಡ ಕೆಲಸದ ಮೇಲೆ ನಾಲ್ಕಾರು ದಿನ ಟೂರ್ ಹೊರಟಾಗ ಅವಳಿಗೆ ಮಾಯಕ್ಕನ ಸಹಾಯ ಬೇಕೇ ಬೇಕು. ರಾತ್ರಿ ಮಲಗಲು ಬರುತ್ತಾಳೆ, ಮಾಯಕ್ಕ.  ಸುತ್ತಲೂ ಮಕ್ಕಳನ್ನು ಕೂಡಿಸಿಕೊಂಡು ಅವಳು ನಗೆಸಾರದ ಕತೆಗಳನ್ನು ಹೇಳಲು ತೊಡಗಿದರೆ, ಬಿಟ್ಟ ಕೆಲಸ ಬಿಟ್ಟಂತೆ ಕೂತು ಮುಸುಮುಸು ನಗುವ ಯಮುನಾಬಾಯಿಗೆ, ನಗು ತುಳುಕಿಸುತ್ತಿರುವ ಮಾಯಕ್ಕನ ಡಿಂಬದಲ್ಲಿ ದುಃಖದ ಲಾವಾರಸ ಕುದಿಯುತ್ತಿದೆ ಎಂಬ ಅರಿವುಂಟು.

ಮಕ್ಕಳಿಬ್ಬರೂ ಲಬೊಲಬೊ ಬಾಯಿ ಬಡಿದುಕೊಂಡರು. ಬುಡಬುಡನೆ ಹೊರಳಾಡಿದರು. ಅವ್ವಾ…ಅವ್ವಾ’ ಎಂದರಚಿಕೊಂಡರು. ಹೆಣವನ್ನು ಎತ್ತಿದರು. ಹೆಣವನ್ನೇ ದಿಟ್ಟಿಸುತ್ತ, ಮರಗಟ್ಟಿ ಕುಳಿತಿದ್ದ ಯಮುನಾಬಾಯಿಯ ಕಣ್ಣಿಂದ ನೀರು ಮೆಲ್ಲನೆ ತೊಟ್ಟಿಕ್ಕುತ್ತಿತ್ತು. ಕೆಂಪಗೆ ಊದಿಕೊಂಡ ನೀಲಾ, ರಾಮಯ್ಯನ  ಕಣ್ಣುಗಳಿಂದ ದಬದಬ ನೀರು ಸುರಿಯುತ್ತಿತ್ತು. ಕಣ್ಣೀರು, ಕೂಗು, ರಂಪಾಟಗಳಿಂದ ತಾಯಿಯ ಋಣವನ್ನು ತೀರಿಸಿಬಿಟ್ಟೆವೆಂಬಂತೆ ಅವಳ ಮಕ್ಕಳು ದುಃಖಪ್ರದರ್ಶನ ಮಾಡುತ್ತಿರುವುದನ್ನು ಕಂಡು ಯಮುನಾಬಾಯಿಯ ಬಾಯಿ ಬಂಧಿಸಿತ್ತು. ‘ಇದು ಕೇವಲ ಸಾಂಪ್ರದಾಯಕ… ಕೃತಕ… ಖಂಡಿತ ಭಾವನೆಯ ವ್ಯಾಪಾರವಲ್ಲ..ಬರೀ  ಭಾವೋದ್ವೇಗ… ಸಾವು ತೆರೆಯುವ ಮಾಮಾಲೀ ನಾಟಕ’ ಎಂದವಳಿಗೆ ಮನವರಿಕೆಯಾಗತೊಡಗಿತು. ನಾಲ್ಕು ಜನರ ಹೆಗಲ ಮೇಲಿದ್ದ ಹೆಣ ಗೇಟು ದಾಟುವಾಗ ನೀಲಾ, ರಾಮಯ್ಯ ವಿಕಾರವಾಗಿ ಕಿರುಚಿ ಬೊಬ್ಬಿರಿದು ನೆಲಕ್ಕೆ ಬಿದ್ದರು.

ಯಮುನಾಬಾಯಿಯ ನೆನಪಲ್ಲಿ ಇನ್ನೊಂದು ಹೆಣ ಮೆಟ್ಟಿಲಿಳಿಯಿತು.

 ಅಂದು-ನಂಜಪ್ಪನ ಹೆಣವನ್ನು ಮಧ್ಯದಲ್ಲಿಟ್ಟುಕೊಂಡು ಮಾಯಾಕ್ಕ ಹಾಗೂ ಮಕ್ಕಳು ಗೋಳಿಡುತ್ತಿದ್ದರು. ‘ಅಯ್ಯೋ ಸಿವನೇ , ನನ್ ಕುಂಕ್ಮ ಅಳಿಸಾಕ್ ಬಿಟ್ಯಾ? ಇವರದ್ ಬದ್ಲು ನನ್ನ ಪಿರ್ಯಾಣನಾದ್ರೂ ತೊಗೊಂಡೋಗ್ಬಾರ್ದಿತ್ತಾ?’

 ಮಾಯಕ್ಕನ ದುಃಖಕ್ಕೆ ಈಡಾಗುವಂತೆ ಮಕ್ಕಳ ರೋದನ ಎಲ್ಲರ ಮನೆಯ ಕದ ತಟ್ಟಿತ್ತು. ಯಮುನಾಬಾಯಿ ಮೂಕಸಾಕ್ಷಿಯಾಗಿ ದಿಟ್ಟಿಸುತ್ತಿದ್ದಳು. ‘ಅಪ್ಪಾ ನಮ್ಜೊತೆ ನಿಂಗಿರೋದು ಸಾಕಾಯ್ತೇನಪ್ಪೋ’-ರಾಮಯ್ಯ ಎದೆ ಎದೆ ಬಡಿದುಕೊಂಡರೆ, ನೀಲಾ ಮೂಲೆಯಲ್ಲಿ ಮುದುರಿ ಬಿದ್ದಿದ್ದ ಕಂಬಳಿಯ ಕುಪ್ಪೆ ಕಂಡು ‘ಎತ್ಲಾಗ್ ತಿರುಗಿದ್ರೂ ನಿನ್ ನೆಪ್ಪೇ ಬರ್ತದಲ್ಲಪ್ಪೋಯ್ ಎಂದು ಬಾಯಿ ಹುಯ್ದುಕೊಂಡಳು.

ಹಿಂದೆ ಮೈಮೇಲಿನ ಗಾಯದ ಗುರುತುಗಳನ್ನು ತೋರಿಸುತ್ತ ಮಾಯಕ್ಕ ಒಮ್ಮೊಮ್ಮೆ ಯಮುನಾಬಾಯಿಯ ಬಾಗಿಲಿಗೆ ಓಡಿಬರುತ್ತಿದ್ದಳು. ಕಣ್ಣಿಂದ ನೀರು ತೊಟ್ಟಿಕ್ಕಿಸುತ್ತ ನೆಟಿಕೆ ಲಟಲಟಾಯಿಸುತ್ತ ದಿನಾ ಒಂದೇ ರೀತಿಯ ವರದಿ. ಅಳೋದು, ಕರೆಯೋದು, ತನ್ನನ್ನು ಗೋಳಾಡಿಸುವ ಈ ಹಾಳು ಗಂಡ ಸತ್ತಾದರೂ ಹೋಗಬಾರದೇ ಎಂದು ದೇವರಲ್ಲಿ ಮಾಯಕ್ಕನ ತಪ್ಪದ ಮೊರೆ.

ನಂಜಪ್ಪನ ಹೆಣದ ಮೇಲೆ ಪ್ರೀತಿಯ ಪ್ರವಾಹ ನುಗ್ಗಿಸಿದಂತೆ ಮಾಯಕ್ಕ ಮತ್ತು ಮಕ್ಕಳು ಕಣೀರ ಕೋಡಿ ಹರಿಸಿದ್ದರು.

 ನಂಜಪ್ಪ ಸತ್ತದ್ದನ್ನು ಕಂಡು ಇನ್ನಾದರೂ ಮಾಯಕ್ಕನ ಮೈಮೇಲಿನ ಗಾಯಗಳು ಮಾಯುತ್ತವೆ ಎಂಬ ಯಮುನಾಬಾಯಿಯ ಎಣಿಕೆ ಸುಳ್ಳಾಯಿತು. ಮಾಯಕ್ಕನ ಮೈಮೇಲೆ ಹೊಸ ಹೊಸ ಬರೆ, ಗುರುತುಗಳು ಏಳುತ್ತಿದ್ದವು, ಮಾಯುತ್ತಿದ್ದವು. ಬೀದಿಯ ಜನಗಳಿಗೆಲ್ಲ ಇದೊಂದು ಅರ್ಥವಾಗದ ಸಂಸಾರ. ರಾಮಯ್ಯನಿಗೆ ಆಫೀಸಿನಲ್ಲಿ ಸಣ್ಣ ಗುಮಾಸ್ತೆಯ ಕೆಲಸ. ಬಂದ ದುಡ್ಡನ್ನೆಲ್ಲ ಉಡಾಯಿಸಿ ಮೋಜು ಮಾಡುವ ಗೆಳೆಯರನ್ನು ಕಂಡಾಗ ಅವನಿಗೆ ಹೆತ್ತವರ ಮೇಲೆ ಕೋಪ ನೆಗೆಯುತ್ತದೆ.

 ‘ನಾ ಸಂಪಾದ್ಸಿದ್ನೆಲ್ಲ ನಿಮ್ಗೇ ಮಡಗ್ತೀನಂತ ಬರ್ಕೊಟ್ಟಿವ್ನಾ?’ ಎಂದು ಸಿಟ್ಟಾಗಿ ಒಮ್ಮೊಮ್ಮೆ ಸಂಬಳವನ್ನೆಲ್ಲ ಹೊರಗೇ ಖರ್ಚು ಮಾಡಿ ಬಿಡುತ್ತಾನೆ. ಆದರೆ ಊಟದ  ಹೊತ್ತಿಗೆ ಅವನು ಬಂದಾಗ ಮಾತ್ರ ತಾಯಿ ತಟ್ಟೆ ತುಂಬ ಏನಾದರೂ ಇಕ್ಕಲೇಬೇಕು. ಇಲ್ಲದಿದ್ದರೆ ಅವಳ ಮುಡಿ ಸೆಳೆದು ಈಡಾಡಿ ಬಿಡುತ್ತಾನೆ. ತಂದೆಗೂ ನಾಲ್ಕಾರು ಬಾರಿ ಬೆನ್ನಿಗೆ ಕೈ ತಾಗಿಸಿದ್ದ. ಮನೆಯ ಬಡತನ, ಮದುವೆಯಾಗಿ ಸುಖಪಡದೇ ಇರುವಂಥ ಪರಿಸ್ಥಿತಿ, ದುಡಿತ ಅವನ ಪಿತ್ತವನ್ನು ಕೆರಳಿಸಿ ಹುಚ್ಚನನ್ನಾಗಿಸಿ ತನ್ನೆಲ್ಲ ಕಷ್ಟಕ್ಕೂ ತಂದೆ- ತಾಯಿಯರೇ ಹೊಣೆ ಎಂಬ ಕೋಪ. ನೀಲಾ ಮಾತ್ರ ಅಣ್ಣನ ಕೋಪದ ವೇಳೆಯಲ್ಲಿ ಹೊರಗೆ ಜಾರಿದ್ದು ಅವನು ಖುಷಿಯಾಗಿರುವಾಗ ಪೈಸಾ ಗಿಟ್ಟಿಸುತ್ತಾಳೆ. ಬರುಬರುತ್ತ ತಂದೆ ತಾಯಿಯ ಮೇಲೆ ದಿನಕ್ಕೆ ನಾಲ್ಕು ಚಾಡಿಮಾತು ಹೇಳಿದಾಗಲೇ ಅಣ್ಣನಿಂದ ತಂಗಿಗೆ ಶಹಭಾಸ್‍ಗಿರಿ, ಬಹುಮಾನ.

ಮನೆಯವರನ್ನೆಲ್ಲ ನಡುಗಿಸಿಟ್ಟಿದ್ದರೂ ರಾಮಯ್ಯನಿಗೆ ಸಂಪಾದಿಸುವವನೆಂದು ಅತಿ ಉಪಚಾರ, ಗೌರವ. ಅವನ ಪಾಲಿಗೆ ದೊಡ್ಡ ಮುದ್ದೆ, ಕಾಫಿ, ಮನೆಯಲ್ಲಿದ್ದ ಒಂದೇ ಹಾಸಿಗೆಯನ್ನು ಅವನಿಗೆ ಹಾಸಿಕೊಟ್ಟು ಉಳಿದ ಮೂವರು ಚಾಪೆಯ ಮೇಲೆ ಮಲಗುತ್ತಿದ್ದರು. ಇಕ್ಕಟ್ಟು ಜಾಗ, ಸೀರೆಯನ್ನು ಎರಡು ಮಡಿಕೆಯಾಗಿ ಮಡಿಸಿದರೆ ಸಾಕು ತಾಯಿ  ಮಗಳಿಗೆ ಹೊದಿಕೆಯಾಗುತ್ತಿತ್ತು. ಚಳಿಗಾಲದ ದಿನಗಳಲ್ಲಿ ನೀಲಾಳಿಗೆ ಅಣ್ಣ ಹೊದ್ದುಕೊಳ್ಳುವ ದಪ್ಪ ಕಂಬಳಿಯಲ್ಲಿ ನುಸುಳುವ ಆಸೆ. ಮಧ್ಯರಾತ್ರಿಯ ಹೊತ್ತಿಗೆ ಚಾಪೆಯ ಒತ್ತುವಿಕೆ ಅತಿಯಾಯಿತೆನಿಸಿ ಮೆಲ್ಲಗೆ ಹಾಸಿಗೆಯ ಅಂಚಿಗೆ ಮೈ ಸರಿಸಿದವಳು ಸ್ವಲ್ಪ ಹೊತ್ತಿನಲ್ಲಿ ಅರ್ಧ ಹಾಸಿಗೆಗೆ ಜರುಗಿರುತ್ತಿದ್ದಳು. ಚಳಿಯ ಕೊರೆತದಿಂದಲೋ, ತಂಗಿಯ ಮೇಲಿನ ಕರುಣೆಯಿಂದಲೋ ರಾಮಯ್ಯ ಅವಳನ್ನು ಮುಸುಕಿನಲ್ಲಿ ಸೇರಿಸಿಕೊಂಡು ಅಪ್ಪಿ ಬೆಚ್ಚಗಾಗುತ್ತಿದ್ದ.

ಹೀಗೆ ಹತ್ತು ಹಲವು ತಿಂಗಳುಗಳು ಉರುಳಿದರೂ ತಂದೆ ತಾಯಿಯರಿಗೆ ಇದು ತಿಳಿದಿಲ್ಲವೆಂದೇ ಅವರಿಬ್ಬರ ಭಾವನೆ. ನಂಜಪ್ಪನೇನೋ ಉಂಡು ಮಲಗಿದನೆಂದರೆ ಬೆಳಗಾಗುವವರೆಗೂ ತೊಲೆಯಂತೆ ಬಿದ್ದಲ್ಲೇ ಬಿದ್ದಿರುತ್ತಿದ್ದ. ಆದರೆ ಮಾಯಕ್ಕನ ಕಣ್ಣುಗಳಾದರೋ ಬೆಳಕಿನಲ್ಲಾಗಲಿ, ಕತ್ತಲಿನಲ್ಲಾಗಲೀ, ಸದಾ ಬಿಚ್ಚೇ ಇರುತ್ತಿತ್ತು. ನಿದ್ರಿಸಲು ಪ್ರಯತ್ನಿಸಿದರೂ ಇಂದಿನ, ಹಿಂದಿನ ಗಾಯದ ನೆನೆಪುಗಳೇ. ಬೆಚ್ಚಿ ಬೆಚ್ಚಿ ಬೀಳುತ್ತಾಳೆ. ಜೊತೆಗೆ ಮಗ-ಮಗಳ ಸಂಬಂಧ ಈ ರೀತಿ ತಿರುಗಿದ್ದನ್ನು ಕಂಡು ಅವಳ ಹೃದಯ ರಿವ್ವನೆ ಹಾರಿತು. ಇನ್ನೇನು ಗತಿ? ಎಂದು ಕಂಗಾಲಾಗಿ ಯಾರಲ್ಲೂ ಹೇಳಿಕೊಳ್ಳಲಾರದೆ, ಅವರಿಗೆ ಬುದ್ಧಿ ಹೇಳಲಾರದೆ ಒಳಗೇ ಕುದ್ದು ಕುದ್ದು ಮೆತ್ತಗಾದಳು.

 ‘ಯಾರಿಗಾದ್ರೂ ಏಳಿದೇಂದ್ರೆ ನಿನ್ನ ಮುಗುಸ್ಬುಡ್ತೀನಿ’-ರಾಮಯ್ಯ ಬೆದರಿಸಿದಾಗ ಮಾಯಕ್ಕ ಸಾವು ಮುಕ್ಕರಿಸಿದಂತೆ ಗರ ಬಡಿದು ಮಂಕಾದಳು. ಜೊತೆಗೆ ಅವಳು ಆಚೀಚೆ ಕದಲದಂತೆ ನೀಲಳ ಬಲವಾದ ಕಾವಲು. ತನ್ನ ಮಕ್ಕಳ ಕ್ರೌರ್ಯ, ಅನೈತಿಕ ಸಂಬಂಧವನ್ನು ದುಃಖ ಧುಮ್ಮಿಕ್ಕಿ ಎಲ್ಲಿ ಎಲ್ಲರ ಬಳಿಯೂ ತೋಡಿಕೊಂಡು ಬಿಡುತ್ತಾಳೋ ಎಂದು ತಾಯಿಯ ಪ್ರಾಮಾಣಿಕ ಮುಗ್ಧ ನಡವಳಿಕೆಯ ಬಗ್ಗೆ ನೀಲಳಿಗೆ ರೋಷ, ಗುಮಾನಿ.

ದಿನಗಳು ಉರುಳುತ್ತಿದ್ದರೂ ಈ ಪಾಪಿ ಸಂಗತಿಯನ್ನು ಯಮುನಾಬಾಯಿಯ ಬಳಿ ಉಸುರಲು ಹೇಸಿ, ಮಾಯಕ್ಕನ ನಾಲಗೆ ಸಂಕೋಚದಿಂದ ಒಳಗೇ ಮುಚ್ಚಿಟ್ಟುಕೊಂಡಿತ್ತು. ಇದಕ್ಕೆ ಮಕ್ಕಳ ಬೆದರಿಕೆಯ ಝಳವೂ ಕಾರಣವಿರಬಹುದು. ನಂಜಪ್ಪ ಸತ್ತ ಮೇಲೆ ಇಬ್ಬರಿಗೆ ಪಾಲಾಗುತ್ತಿದ್ದ ಏಟುಗಳು ಮಾಯಕ್ಕಳೊಬ್ಬಳ ಪಾಲಾಯಿತು.

‘ಅವನೊಬ್ಬ ದರಿದ್ರದೋನು ತೊಲಗಿದ, ಕಾಟ ಕಳೀತೂಂದ್ರೆ, ನೀ ಇದ್ದೀಯಲ್ಲ ಪ್ರಾಣ ತಿನ್ನಾಕೆ’- ರಾಮಯ್ಯ ಗುಡುಗಿ ಮನೆ ಬಿಟ್ಟಾಗ, ನೀಲಾ ಮನೆಯಲ್ಲಿಲ್ಲದಿರುವುದನ್ನು ಖಾತ್ರಿಪಡಿಸಿಕೊಂಡು ಯಮುನಾ ಬಾಯಿಯಲ್ಲಿಗೆ ಮೆಲ್ಲನೆ ಅಂಜುತ್ತ ಬರುತ್ತಿದ್ದಳು ಮಾಯಕ್ಕ.

ಮಾಯಕ್ಕನ ಹೆಣ ಮುಂದೆ ಮುಂದೆ ಹೊರಟಾಗ ನೀಲಾ ಅದರ ಹಿಂದೆಯೇ ಓಡಿ ಓಡುತ್ತ ಎಡವಿಬಿದ್ದಳು. ಅವಳ ಸೀರೆಯ ಅಂಚು ಹರಿದು, ಹೆಬ್ಬೆರಳು ತರಚಿ ರಕ್ತ ಕಾಣಿಸಿಕೊಂಡಿತ್ತು. ಯಮುನಾಬಾಯಿ ಅವಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.

ಹಿಂದೊಂದು ದಿನ-

ಯಮುನಾಬಾಯಿ ಕೆಲಸವನ್ನೆಲ್ಲ ಮುಗಿಸಿ, ಮಕ್ಕಳು ಬರುವವರೆಗೂ ಮಾಯಕ್ಕನ ಮನೆಗಾದರೂ ಹೋಗಿ ಬರೋಣ ವೆಂದುಕೊಂಡು ಎದುರು ಮನೆಯ ಗೇಟನ್ನು ತೆರೆದಳು. ಇದ್ದಕ್ಕಿದ್ದ ಹಾಗೆ ಮಾಯಕ್ಕನ ಕಿಟ್ಟನೆ ಕಿರುಚಿದ ದನಿ. ಯಮುನಾಬಾಯಿಗಾಗಿಯೇ ಬಾಗಿಲು ತೆರೆದಂತೆ ಬಾಗಿಲು ಹೋಳಾಯಿತು. ಮಾಯಕ್ಕ ಬಿರುಗಾಳಿಯಂತೆ ಹೊರಗೋಡಿ ಬಂದಳು. ಬಾಯಿ ಬಿರುಕಿಸಿ ಅಪ್ರತಿಭಳಾದ ಯುಮುನಾಬಾಯಿ ಮಾಯಕ್ಕನ ಅವಸ್ಥೆಯನ್ನು ಕಂಡು ಒಳಗೆ ನಡೆದಿರಬಹುದಾದ ಘಟನೆಯನ್ನು ತತ್‍ಕ್ಷಣ ಊಹಿಸಿದಳು.

 ಮಾಯಕ್ಕ ಸೀರೆಯನ್ನು ಹಾಗ್ಹಾಗೇ ಅಡ್ಡಾದಿಡ್ಡಿ ಸುತ್ತಿದ್ದಾಳೆ. ಅರ್ಧ ಮೈ ತೆರೆದಿದೆ. ಎದೆಯ ಮೇಲೆ ಕುಬುಸವಿಲ್ಲ. ತೊಡೆಯ ಮೇಲಿಂದ, ಸೊಂಟ, ಎದೆಯ ಮೇಲೆ ಹಾಗೇ ಉಂಡೆಯಾಗಿ ಸೀರೆಯ ಕುಪ್ಪೆ ಅವುಚಿಕೊಂಡು ಏಟು ತಪ್ಪಿಸಿಕೊಳ್ಳಲು ಹೊರನುಗ್ಗಿ ಬಂದಿದ್ದಳು. ಉಸಿರಾಟ ತಿದಿ, ಮೈಯಲ್ಲಿ ಎದ್ದು ತೋರುವ ನಡುಕ.  ಯಮುನಾಬಾಯಿಯನ್ನು ಕಂಡದ್ದೇ ತಡ ಮಾಯಕ್ಕ  ಕಣ್ತುಂಬ ನೀರು ತುಂಬಿಸಿಕೊಂಡು ಬಿಕ್ಕಳಿಸಿದಳು. ಉಗ್ಗು ಉಗ್ಗು ಮಾತು.

 ‘ನೋಡ್ರಿ ಯಮುನಕ್ಕ, ನನ್ನ ಶಾಲೀ ತೆಗೆದಿಟ್ಕೊಂಡು ಅದೇಗೆ ಒರಕ್ಕೋಗ್ತೀಯೋ ಓಗು ನೋಡೋಣ ಅಂತಾಳಲ್ಲ… ಹಗ್ಗದ ಮ್ಯಾಗಿರೋದನ್ನ ಎಳ್ಕೋಳಕ್ಕೆ  ಹ್ವಾದ್ರೆ ಹುಲಿಯಂಗೆ ಮೇಲೆ ಹಾರಿ ಬಿದಿರು ತೆಗ್ದು ಬಡಿದು ಬಿಟ್ಳು, ನೋಡಕ್ಕ, ಹೀಗ್ಯಾರಾರೂ ಮಗ್ಳು ಹೆತ್ತವ್ವನ್ನೇ ಬಡೀತಾರಾ? ಅವಳಿಗೆ ನಾ ತಾಯಲ್ಲಂತೆ…ಪಿಚಾಚಿಯಂತೆ…’ ಕಂಠ ಬಡಕಲಾಗಿ, ಮುಖ ದುಃಖದ ಕಡಲಾಗಿತ್ತು. ಕೈಗಳು ಜೋತ ಮೊಲೆಯನ್ನು ಮುಚ್ಚುವ ಪ್ರಯತ್ನದಲ್ಲಿ ತೊಡಗಿದ್ದವು.

ಯಮುನಾಬಾಯಿ ನೊಂದುಕೊಂಡು ಮೌನವಾಗಿ ಮನೆಯ ಕಡೆ ಸಾಗಿದಾಗ ಮಾಯಕ್ಕ ಓಡುತ್ತ ಅವಳನ್ನು  ಹಿಂಬಾಲಿಸಿದಳು.

 ‘ಯಮುನಕ್ಕ… ನಾ ಇವತ್ ಎಂಗ್ ಮನೆಗೋಗ್ಲೀ?….ನಂಗ್ ಭಯ… ಅವನ್ ಬರತ್ಲೂ ಇಬ್ರೂ ಸೇರ್ಕೊಂಡ್ ನನ್ನ ಚಟ್ಣಿ ಅರೆದು ಬಿಟ್ತಾರೆ… ನಾ ಎಂಗೋಗ್ಲೆ? ‘

ಭಯದ ಗುಹೆಗಳಂತೆ ಅವಳ ಕಂಗಳು ಅರಳಿದವು. ಆಳವಾದವು, ಮುಖ ಮೊಗ್ಗಾಯಿತು. ಭೋರೆಂದು ಅತ್ತಳು. ಅಸಹಾಯಕತೆಯ  ಝಳದಿಂದ ಯಮುನಾಬಾಯಿಯ ಗಂಟಲು ಕಟ್ಟಿತ್ತು.

 ‘ನಾ ಓಗಾದಿಲ್ಲ…ಓಗಾದಿಲ್ಲ ….ಎಲ್ಲಾರೋಗಿ ಜೀವಾ ತಕ್ಕೋತೀನಕ್ಕ, ಮನೇಗೋದ್ರೂ ಅಷ್ಟೇ ಅವ್ರು  ಪ್ರಾಣ ತೆಗೀತಾರೆ…ನಾ  ಏನ್ ಮಾಡ್ಲಕ್ಕ?’ ಅವಳ ದನಿ ಬಡಕಲಾಗಿ ಕಮರಿತು. ಸರಿಯಾಗಿ ಉಂಡಿರದ ಕೃಶದೇಹ, ಮೈ ತುಂಬ ನೆರಿಗೆಗಳ ಹುರಿಗಳಿಂದ ಬಂಧಿತವಾಗಿ ಸೆರೆಮನೆಗೆಂಬಂತೆ ಮೆಲ್ಲನೆ ಕಾಲು ಎಳೆಯಿತು. ಯಮುನಾಬಾಯಿಯ ಕಣ್ಣಲ್ಲಿ ಫಳಕ್ಕನೆ ನೀರು ಚಿಮ್ಮಿತು. ಮಾಯಕ್ಕನ ದೈನ್ಯಾವಸ್ಥೆ, ದುಃಖಿತ ಮುದುರು ಮುಖ- ಮೈಗಳನ್ನು ಕಂಡಾಗ ಅನುಕಂಪ ಉಕ್ಕಿ ಬರುವುದರೊಡನೆ ತನಗೇ ಏಟು ಕಾದಿರುವಷ್ಟು ಭಯದ ತಲ್ಲಣ.

ಸಂಜೆಯಾಯಿತು, ರಾತ್ರಿಯಾಯಿತು, ಎದುರು ಮನೆಯಿಂದ ಕಿರುಚಾಟ, ಬಡಿತ, ಬೈಗಳು, ರೋದನ.

ಬೆಳಗ್ಗೆ ಬಾಗಿಲಿಗೆ ನೀರು ಹಾಕಲು ಬಂದಿದ್ದ ಮಾಯಕ್ಕ ಯಾರೋ ಎನ್ನುವಂತಾಗಿದ್ದಳು. ಅವಳ ಮಕ್ಕಳ ಕ್ರೌರ್ಯ, ರಾಕ್ಷಸೀ ಪ್ರವೃತ್ತಿ ಹೆತ್ತ ತಾಯಿ ಎಂಬ ವಾತ್ಸಲ್ಯಭಾವ ಕಿಂಚಿತ್ತೂ ಇಲ್ಲದ್ದನ್ನು ಕಂಡು ಯುಮುನಾಬಾಯಿಗೆ ಮತ್ತೆ ಮತ್ತೆ ಅಚ್ಚರಿ ಕಬಳಿಸಿ ಬರುತ್ತದೆ.

 ಅನಾದಿ ಕಾಲದಿಂದಲೂ ‘ಮಾತೃದೇವೋ ಭವ’ ಇತ್ಯಾದಿ ಪವಿತ್ರ ಅನುಪಮ ಸಂಬಂಧವೆಂದು ಸಾರಿಕೊಂಡು ಬಂದ ಈ ಅನ್ಯೋನ್ಯ ಬಂಧ ಅರ್ಥಹೀನವಾಗಿ ಹೀನ ಸುಳಿಯ ಕವಲುಗಳಲ್ಲಿ ಸೋರಿ ಹೋಗುತ್ತಿರುವಂತೆ ಅವಳಿಗೆ ದಿಗ್ಭ್ರಮೆ. ಎಂದು ಖಾಯಿಲೆಯಿಂದ ಮಲಗಿರದಿದ್ದ ಮಾಯಕ್ಕನಿಗೆ ಸಾವು ಖಂಡಿತ ಬಂದಿತೆಂದರೆ ಖಂಡಿತ ದೇವನಿಗೇ ಅವಳ ಮೇಲೆ ಕರುಣೆಯುಕ್ಕಿ ಬಂದಿರಬೇಕೆಂದುಕೊಂಡಳು. ಆತ್ಮೀಯ ಮಾಯಕ್ಕನ ಮರಣದ ಬಗ್ಗೆ ದುಃಖವೆನಿಸಿದರೂ ಏನೋ ಅವ್ಯಕ್ತ ಸಮಾಧಾನ. ‘ದೇವರು ಕರುಣಾಮಯಿ’ ಎಂಬ ನಿಟ್ಟುಸಿರು.

ಮಾಯಕ್ಕನ ಹೆಣ ಸಾಗಿದ ದಿಕ್ಕಿನತ್ತ ಶೂನ್ಯನೋಟ ಬೆರೆಸಿ ಒಳಬಂದ ಯಮುನಾಬಾಯಿ ಮನೆಯ ಕೆಲಸಗಳತ್ತ ಗಮನಕೊಟ್ಟಳು.

ಮೌನ ಗಿಜಿಗುಡುತ್ತಿದ್ದ ಆ ರಾತ್ರಿಯಲ್ಲಿ ನಿದ್ದೆ ಬಾರದೆ ಹೊರಳಾಡುತ್ತಿದ್ದ ಅವಳು ಕಿವಿಯನ್ನು ಹರವಾಗಿ ಎದುರು ಮನೆಯ ಕಡೆ ತೆರೆದಾಗ ನಿಶ್ಶಬ್ದ, ನಿಷ್ಪಂದ…ಎಂದಿನ ಗದ್ದಲ ಕಿವಿಯನ್ನು ಕುಲಕದಿದ್ದಾಗ ಮಾಯಕ್ಕ ಸತ್ತಿರುವುದು ಅವಳಿಗೆ ಖಾತ್ರಿಯಾಗತೊಡಗಿತು. ಬೆಳಗಿನ ದೃಶ್ಯಗಳೆಲ್ಲ ಕಣ್ಮುಂದೆ ಹೊರಳಿದಂತಾಗಿ ಮೆಲ್ಲನೆದ್ದು ಕಿಟಕಿಯ ಬಳಿ ಬಂದು ನಿಂತು ಎದುರು ಮನೆಯತ್ತ ದೃಷ್ಟಿ ಹಾಯಿಸಿದಳು.

ಸದ್ದಿಲ್ಲದ ಕತ್ತಲೆಗೂಡು…  ‘ಪಾಪ, ಹುಡುಗ್ರು ತಾಯಿಯನ್ನು ನೆನೆಸಿಕೊಳ್ತಾ ಪಶ್ಚಾತ್ತಾಪದಿಂದ ದುಃಖಿಸ್ತಿರಬಹುದು’ ಎಂದು ಲೊಚಗುಟ್ಟಿಕೊಳ್ಳುತ್ತ ಹಾಸಿಗೆಗೆ ಬಂದ ಯಮುನಾಬಾಯಿಗೆ ಎದುರು ಮನೆಯ ಕತ್ತಲಾಳದೊಳಗೆ  ಬಿಸಿ ದೇಹಗಳೆರಡು ಪರಸ್ಪರ ಬೆಸೆದುಕೊಂಡು ಹೊರಳಾಡುತ್ತಿರುವುದು ಅರಿವಾಗಲಿಲ್ಲ.

***

Related posts

ಉದ್ಧಾರ

YK Sandhya Sharma

ಮಹಿಳಾ ವಿಮೋಚನೆ

YK Sandhya Sharma

ಬರಸಿಡಿಲು

YK Sandhya Sharma

Leave a Comment

This site uses Akismet to reduce spam. Learn how your comment data is processed.