‘ಹರಿ-ಚೇತನ’ ಇದು ಇಬ್ಬರ ಹೆಸರುಗಳು. ಇವರು ಕಥಕ್ ನೃತ್ಯ ಜೋಡಿ ಎಂದೇ ಖ್ಯಾತ. ಗಂಡ-ಹೆಂಡತಿ ಅವಿಭಾಜ್ಯ ಅಂಗವಾಗಿ ನೃತ್ಯಪಯಣದಲ್ಲಿ ಸಪ್ತಪದಿ ತುಳಿದವರು. ಎರಡು ದಶಕಗಳಿಗೂ ಮಿಕ್ಕಿದ ಸಾಧನೆಯ ಹಾದಿ.
ಹರಿ ಒಬ್ಬ ಪ್ರತಿಭಾವಂತ ಅಂತರರಾಷ್ಟ್ರೀಯ ಕಥಕ್ ನರ್ತಕರು. ವಿಶ್ವದಾದ್ಯಂತ ಎಲ್ಲೆಡೆ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದವರು. ನೃತ್ಯಕ್ಕೆ ಹೇಳಿ ಮಾಡಿಸಿದ ಸಪೂರ-ನೀಳ ಶರೀರ. ಗಾಳಿಯಂತೆ ಚಲಿಸಬಲ್ಲ ವೇಗದ ಆಂಗಿಕಗಳು, ಭಾವ-ಭಂಗಿಗಳು. ನೃತ್ಯವನ್ನೇ ಆರಾಧಿಸಿದ ಜೀವ. ಕಠಿಣ ಅಭ್ಯಾಸದೊಡನೆ ಬದ್ಧತೆ-ಪರಿಶ್ರಮ ಬೆರೆತ ಮಹತ್ವಾಕಾಂಕ್ಷೆಯ ಗುರಿ.
ಮೂಲತಃ ಆಂಧ್ರದಲ್ಲಿ ಜನಿಸಿದರೂ ಬೆಂಗಳೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದವರು ಹರಿ. ತಂದೆ ಡಿ. ಸುಬ್ಬರಾಮ ರೆಡ್ಡಿ ವೃತ್ತಿಯಲ್ಲಿ ಎಂಜಿನಿಯರಾದರೂ, ಹವ್ಯಾಸೀ ರಂಗಭೂಮಿ ನಟ-ರಂಗಕರ್ಮಿ. ಆಧ್ಯಾತ್ಮಿಕ ಒಲವಿನ ತಾಯಿ ರಮಣಮ್ಮ .ತುಂಬು ಸಂಸಾರದಲ್ಲಿ ಜನಿಸಿದರೂ ಹರಿಯ ಬಾಲ್ಯದ ಒಲವು ನೃತ್ಯ ಕಲಿಕೆಯ ಹಂಬಲವನ್ನು ಈಡೇರಿಸಿಕೊಳ್ಳಲು ಹೆತ್ತವರು ಸಹಕರಿಸಿದರು.
ತಮ್ಮ ಐದನೆಯ ವಯಸ್ಸಿಗೇ ಹರಿ ಕಾಲಿಗೆ ಗೆಜ್ಜೆ ಕಟ್ಟಿದರು. ಭರತನಾಟ್ಯದ ಹೆಜ್ಜೆಗಳಲ್ಲಿ ನಾದ ಹೊಮ್ಮಿಸಿದರು. ನಾಟ್ಯಗುರು ಭರಣಿ ಧರಣ್ ಅವರಲ್ಲಿ ನೃತ್ಯಶಿಕ್ಷಣವನ್ನು ಆಸಕ್ತಿಯಿಂದ ಪಡೆದುಕೊಂಡು ಅಭ್ಯಾಸ ನಿರತರಾದರು. ಹನ್ನೊಂದು ವರ್ಷಕ್ಕೆ ಹೆಚ್.ಎಂ. ಪರಮೇಶ್ ಅವರಲ್ಲಿ ನೃತ್ಯಶಿಕ್ಷಣ ಮುಂದುವರಿಸಿ ಕರ್ನಾಟಕ ಸರ್ಕಾರದ ಜ್ಯೂನಿಯರ್ ನೃತ್ಯಪರೀಕ್ಷೆಯಲ್ಲಿ ಜಯಶೀಲರಾದರು. ಅಲ್ಲಿಂದ ಮುಂದೆ ಹರಿ ಅನೇಕಾನೇಕ ಗುರುಗಳ ಗರಡಿಯಲ್ಲಿ ನಾಟ್ಯ ತರಬೇತಿ ಪಡೆಯುತ್ತಾ ಮುಂದೆ ಸಾಗಿದ್ದು ಇತಿಹಾಸ. ಖ್ಯಾತ ಗುರು ರಾಧಾ ಶ್ರೀಧರ್, ಪದ್ಮಿನಿ ರಾವ್, ಶ್ಯಾಮಲಾ ಮುರಳೀಕೃಷ್ಣ, ಅಂಜನಾ ಆನಂದ್, ಭಾರತಿ ವಿಠಲ್ ಮತ್ತು ಕಿರಣ್ ಸುಬ್ರಹ್ಮಣ್ಯವರೆಗೆ ಗುರುಗಳ ಗರಡಿಯಲ್ಲಿ ನೃತ್ಯದ ಹೊಸ ಆಯಾಮಗಳಿಗೆ ತೆರೆದುಕೊಂಡದ್ದು ಅವರ ವಿಶೇಷ.
ಚಿಕ್ಕಂದಿನಿಂದ ನಾಟಕಾಭಿನಯದಲ್ಲೂ ಆಸಕ್ತಿಯುಳ್ಳ ಹರಿ, ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದೂ ಉಂಟು. ಬೆಂಗಳೂರಿನ ಶಾಂತಿನಿಕೇತನ್, ಸೇಕ್ರೆಡ್ ಹಾರ್ಟ್ ಬಾಯ್ಸ್ ಸ್ಕೂಲ್ ಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಕ್ರೈಸ್ಟ್ ಕಾಲೇಜಿನಿಂದ ಬಿ.ಎಸ್ಸಿ. ಪದವೀಧರರಾದರು. ವಿದ್ಯಾಭ್ಯಾಸದ ಜೊತೆಜೊತೆಗೆ ನಾಟ್ಯಾಭ್ಯಾಸವೂ ನಿರಂತರ ನಡೆದಿತ್ತು. ಭರತನಾಟ್ಯ ಶೈಲಿಯಿಂದ ಅವರ ಆಸಕ್ತಿ-ಒಲವುಗಳು ಕಥಕ್ ನೃತ್ಯಶೈಲಿಯತ್ತ ಹೊರಳಿತ್ತು. ಪದವಿಯ ತರಗತಿಯಲ್ಲಿ ಓದುತ್ತಿದ್ದಾಗಲೇ ‘ನಾಟ್ಯ ಇನ್ಸ್ಟಿಟ್ಯುಟ್‘ ನಲ್ಲಿ ಖ್ಯಾತ ಕಥಕ್ ನೃತ್ಯಗುರು ಮಾಯಾರಾವ್ ಮತ್ತು ಚಿತ್ರ ವೇಣುಗೋಪಾಲ್ ಬಳಿ ಕಥಕ್ ನೃತ್ಯ ಕಲಿಕೆಗೆ ಆರಂಭಿಸಿದರು. ಅಲ್ಲಿಂದ ಮುಂದೆ- ವೈಭವಿ ಜೋಶಿಪುರ್, ಗೀತಾಂಜಲಿ ಲಾಲ್ ಮತ್ತು ಅಂತಿಮವಾಗಿ ಕುಮುದಿನಿ ಲಕಿಯಾ ಅವರ ಬಳಿಯೂ ಕಲಿತರು. ಜೊತೆಗೆ ನೃತ್ಯಸಂಯೋಜನೆಯೂ ರೂಢಿಸಿಕೊಂಡರು. ಇಷ್ಟರಲ್ಲಿ ಕಥಕ್ ನಲ್ಲಿ ‘ಬಿ.ಎ.’ ಪದವಿಯನ್ನೂ ಪಡೆದುಕೊಂಡರು.
ದೂರದರ್ಶನ ಮತ್ತು ಐ.ಸಿ.ಸಿ.ಆರ್. ನ ಮಾನ್ಯತೆ, ಇಂಟರ್ನ್ಯಾಷನಲ್ ಡ್ಯಾನ್ಸ್ ಕೌನ್ಸಿಲ್ ಸದಸ್ಯತ್ವ ಹೊಂದಿರುವ ಕಲಾವಿದರಾದ ಹರಿ, ಮಾಯಾರಾವ್ ಅವರ ತಂಡದೊಡನೆ ದೇಶಾದ್ಯಂತ ಸಂಚರಿಸಿ, ಅಮೀರ್ ಖುಸ್ರು,ಹೊಯ್ಸಳ ವೈಭವ, ಅರ್ಜುನ ಜೋಗಿ, ಡ್ಯಾನ್ಸಸ್ ಆಫ್ ಇಂಡಿಯಾ ಮುಂತಾದ ನೃತ್ಯರೂಪಕಗಳನ್ನು ಪ್ರದರ್ಶಿಸಿದರು. ಅನಂತರ- ಮಧು ನಟರಾಜ್ ಅವರ ‘ಸ್ಟೆಂ ಡ್ಯಾನ್ಸ್ ಕಂಪೆನಿ’ಯಲ್ಲಿ ಕಾನ್ಟೆಂಪೋರರಿ ಡ್ಯಾನ್ಸ್ ಯುಗ್ಮ, ಕಿನೋಟೋಗ್ರಫಿ ಮತ್ತು ಅನೇಕ ಕಾರ್ಪೋರೆಟ್ ಶೋಗಳಲ್ಲಿ ಭಾಗವಹಿಸಿದರು. ಐ.ಸಿ.ಸಿ.ಆರ್.ನಿಂದ ಭಾರತದ ರಾಯಭಾರಿಯಾಗಿ ಹರಿ ನೆದರ್ಲ್ಯಾಂಡ್ ಗೆ ನಿಯೋಜಿತರಾಗಿದ್ದು ಅವರ ಅಗ್ಗಳಿಕೆ.
ಫ್ರೀಲಾನ್ಸ್ ಡ್ಯಾನ್ಸರ್ ಆಗಿ ಹೆಸರು ಮಾಡಿ ಕ್ರಿಯಾಶೀಲರಾಗಿದ್ದ ಹರಿ, ಉಷಾ ವೆಂಕಟೇಶ್ವರನ್ ಅವರ ಅನೇಕ ನೃತ್ಯನಿರ್ಮಾಣಗಳಲ್ಲಿ ಪಾಲ್ಗೊಂಡರು. ಮುಂದೆ ರಶ್ಮೀ ಹೆಗಡೆ ಅವರೊಡನೆ ಯಕ್ಷಗಾನ ಪ್ರದರ್ಶನ ನೀಡಿದರು. ನ್ಯಾಷನಲ್ ಗೇಮ್ಸ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ನರ್ತಿಸಿದ್ದು ವಿಶೇಷ. ಅನಂತರ ಖ್ಯಾತ ಗುರುಗಳಾದ ಪುಲಿಕೇಶೀ ಕಸ್ತೂರಿ, ಸುಮನಾ ರಂಜಾಳ್ಕರ್ ಮತ್ತು ನಿರುಪಮಾ ರಾಜೇಂದ್ರ ಹಾಗೂ ಅನೇಕ ಖ್ಯಾತ ನೃತ್ಯ ತಂಡಗಳಲ್ಲಿ ನರ್ತಿಸಿ ಅಪಾರ ಅನುಭವ ಗಳಿಸಿದರು.
ವಿಶ್ವದಾದ್ಯಂತ ಸಾವಿರಾರು ನೃತ್ಯ ಪ್ರದರ್ಶನಗಳನ್ನು ನೀಡಿದ ಹರಿ, ಈಗ ಎರಡು ದಶಕಗಳ ಕೆಳಗೆ ತಮ್ಮದೇ ಆದ ‘ನೂಪುರ್ ಪರ್ಫಾರ್ಮಿಂಗ್ ಆರ್ಟ್ ಸೆಂಟರ್’ ನೃತ್ಯಶಾಲೆ ಸ್ಥಾಪಿಸಿ ನೂರಾರು ನೃತ್ಯಾಕಾಂಕ್ಷಿಗಳಿಗೆ ಶಿಕ್ಷಣ ನೀಡುತ್ತ ಬಂದಿದ್ದಾರೆ. ಸಣ್ಣ ಜಿಲ್ಲೆಗಳಿಂದ ಹಿಡಿದು ರಾಜ್ಯ, ದೇಶಾದ್ಯಂತ ಎಲ್ಲ ಪ್ರದೇಶಗಳಿಂದಲೂ ಅನೇಕ ನೃತ್ಯ ಕಲಾವಿದರನ್ನು ಆಹ್ವಾನಿಸಿ, ಎಲ್ಲ ಬಗೆಯ ಶೈಲಿಗಳ ನರ್ತಕರಿಗೂ ವೇದಿಕೆ ಒದಗಿಸಿ ನೃತ್ಯಾಭಿವೃದ್ಧಿಯ ಚಟುವಟಿಕೆ ನಡೆಸಿದ್ದು ಇವರ ಹಿರಿಮೆ. ಶಿಷ್ಯೆಯಾಗಿ ಇವರಲ್ಲಿ ನೃತ್ಯ ಕಲಿತ ಚೇತನ್ ‘ನೂಪುರ್’ ಪ್ರದರ್ಶಕ ತಂಡದಲ್ಲಿ ಹರಿಯೊಡನೆ ಅವರ ಅವಿಭಾಜ್ಯ ಅಂಗವಾಗಿ ಸಾವಿರಾರು ಪ್ರದರ್ಶನಗಳಲ್ಲಿ ಜೊತೆಯಾದರಷ್ಟೇ ಅಲ್ಲ, ಅವರ ಜೀವನ ಸಂಗಾತಿಯೂ ಆಗಿ ಅವರ ಯಶಸ್ಸಿನ ಭಾಗವಾದರು.
ಅಲ್ಲಿಂದ ನೃತ್ಯ ದಂಪತಿಗಳದು ದಾಪುಗಾಲು. ಭಾರತದ ಎಲ್ಲ ದೇವಾಲಯಗಳು, ಸಭಾಗಳು, ನೃತ್ಯೋತ್ಸವಗಳು, ನಾಟ್ಯಪ್ರದರ್ಶನಗಳಲ್ಲಿ ಬಿಡುವಿರದ ನೃತ್ಯ ಸೇವೆ. ನೆದರ್ಲ್ಯಾಂಡ್ ಮತ್ತು ಅಮೇರಿಕಾದಲ್ಲಿ ಇವರ ಸಂಸ್ಥೆಯ ಎರಡು ಶಾಖೆಗಳಿದ್ದು ಅವುಗಳನ್ನು ಅವರ ಹಿರಿಯ ಶಿಷ್ಯೆಯರು ನಿರ್ವಹಿಸುತ್ತಿದ್ದಾರೆ. ಕಳೆದ ಐದುವರ್ಷಗಳಿಂದ ಕೊರ್ಜೋ ಥಿಯೇಟರಿನ ರೆಸಿಡೆಂಟ್ ಆರ್ಟಿಸ್ಟ್ ಆಗಿ ಕಾರ್ಯನಿರತರಾಗಿದ್ದಾರೆ.
ಭಾರತಾದ್ಯಂತ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಕೆನಡಾ, ನೆದರ್ಲ್ಯಾಂಡ್ಸ್, ಜರ್ಮನಿ,ಯುಕೆ, ಇಂಡೋನೇಶಿಯಾ, ಫ್ರಾನ್ಸ್, ಸ್ವಿರ್ಜಲ್ಯಾಂಡ್, ಸಿಂಗಾಪುರ್, ಥಾಯ್ಲ್ಯಾಂಡ್, ಸೌದಿ ಅರೇಬಿಯಾ, ಶ್ರೀಲಂಕಾ,ಮಿಡಲ್ ಈಸ್ಟ್ ಮುಂತಾದ ಇನ್ನೂ ನೂರಾರು ಸ್ಥಳಗಳಲ್ಲಿ ನಿರಂತರ ನೃತ್ಯ ಕಾರ್ಯಕ್ರಮ ನೀಡಿದ ಅಗ್ಗಳಿಕೆ ಇವರದು. ಇವರ ಸುಮನೋಹರ ನೃತ್ಯದ ಬಗ್ಗೆ ವಿಮರ್ಶಕರ ಅಸಂಖ್ಯಾತ ಮೆಚ್ಚುಗೆಯ ಬರಹಗಳು ಪ್ರಕಟವಾಗಿವೆ. ನಗರದ ಎಲ್ಲ ಕಾರ್ಪೊರೇಟ್ ಸಂಸ್ಥೆಗಳಲ್ಲದೆ, ಕೊಲೊಂಬೋ ವಿಶ್ವವಿದ್ಯಾಲಯ, ಜರ್ಮನಿ, ಫ್ರಾನ್ಸ್ ಮತ್ತು ಸ್ವಿರ್ಜಲ್ಯಾಂಡ್ ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ, ಉಪನ್ಯಾಸಗಳನ್ನು ನಡೆಸಿಕೊಟ್ಟಿದ್ದಾರೆ. ಇಡೀ ವಿಶ್ವಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡುತ್ತ ಹೆಸರುವಾಸಿಯಾಗಿರುವ ಇವರು ಮಲೇಶಿಯಾ ರಾಜರ ಸಮ್ಮುಖ ನರ್ತನ ಮಾಡಿರುವ ವಿಶೇಷ ಇವರದು. ಸೌದಿ ಅರೇಬಿಯಾದಲ್ಲಿ ಅಧಿಕೃತವಾಗಿ ನೃತ್ಯಪ್ರದರ್ಶನ ನೀಡಿದ ಮೊದಲ ಜೋಡಿ ಎಂಬ ವೈಶಿಷ್ಟ್ಯ.
ಇವರ ಸಾಧನೆಯನ್ನು ಗಮನಿಸಿ ಅನೇಕ ಸಂಸ್ಥೆಗಳು ಇವರನ್ನು ಗೌರವಿಸಿವೆ. ಅವುಗಳಲ್ಲಿ ಪ್ರಮುಖವಾದವು- ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ , ಆಂಧ್ರ ಪ್ರದೇಶದ ನೃತ್ಯ ಕೌಮುದಿ, , ರಸರಂಜಿನಿ ಮತ್ತು ನೃತ್ಯಲಕ್ಷಣ ಅಕಾಡೆಮಿ ಮತ್ತು ಬೆಂಗಳೂರು ಕ್ಲಬ್ ಫಾರ್ ಕಥಕ್ಕಳಿ ಆರ್ಟ್ಸ್ ಸಂಸ್ಥೆಗಳ ಪ್ರಶಸ್ತಿಗಳು ಲಭಿಸಿವೆ.
ಈ ಕಥಕ್ ದಂಪತಿಗಳ ಹನ್ನೊಂದು ವರ್ಷದ ಮಗಳು ಶ್ರೀ ಜಾಹ್ನವಿ ಕೂಡ ಕಥಕ್, ಕಾಂಟೆಂಪೊರರಿ ಮತ್ತು ರಷ್ಯನ್ ನೃತ್ಯಗಳನ್ನು ಕಲಿಯುತ್ತಿದ್ದು, ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ. ನಗರದ ಹೊರವಲಯದಲ್ಲಿ, ಹಿಂದಿನ ಗುರುಕುಲ ಪದ್ಧತಿಯ ಮಾದರಿಯಲ್ಲಿ, ಕಥಕ್ ನೃತ್ಯಶಿಕ್ಷಣವನ್ನು ಬದ್ಧತೆಯಿಂದ ಧಾರೆ ಎರೆಯುವ ‘ಕಥಕ್ ಗ್ರಾಮ’ವನ್ನು ನಿರ್ಮಿಸುವ ಹಿರಿದಾದ ಕನಸು ಇವರದು.
******************************************