ಬಹುಮುಖ ಪ್ರತಿಭೆಯ ರೇಖಾ ಸತೀಶ್, ಬೆಂಗಳೂರಿನ ಕೆಲವೇ ಕೆಲವು ಕೂಚಿಪುಡಿ ನೃತ್ಯಗಾರ್ತಿಯರ ಸಾಲಿನಲ್ಲಿ ಖ್ಯಾತನಾಮರು. ಈ ಹಿರಿಯ ನೃತ್ಯ ಕಲಾವಿದೆ ದೇಶ-ವಿದೇಶಗಳಲ್ಲಿ ಸದಾ ನೃತ್ಯಪ್ರದರ್ಶನ ನೀಡುವುದರಲ್ಲಿ ನಿರತ ಉತ್ಸಾಹದ ಚಿಲುಮೆ. ಕಲಿಕೆಯ ವಿಷಯ ಬಂದಾಗ ಎಂದೂ ಬತ್ತದ ಹುಮ್ಮಸ್ಸು. ನೃತ್ಯ ಕಲಾವಿದರಾದವರು ಎಂದೂ ತಮ್ಮ ದೇಹಾರೋಗ್ಯ, ಲೀಲಾಜಾಲವಾಗಿ ಹೇಗೆ ಬೇಕೆಂದರೆ ಹಾಗೆ ಬಾಗುವ ಮೈಕಟ್ಟು, ಶರೀರ ಸಡಿಲತೆಯ ಕಡೆ ಆದ್ಯ ಗಮನ ನೀಡಬೇಕೆಂಬುದು ಅವರ ಬಲವಾದ ನಂಬಿಕೆ. ಅದರಂತೆ ಅವರಿಗೆ ಬುದ್ಧಿ ಬಂದಾಗಿನಿಂದ ಆಕೆ ಯೋಗಾಭ್ಯಾಸವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಉತ್ತಮ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತ, ಪ್ರತಿದಿನ ತಪ್ಪದೆ ನೃತ್ಯಾಭ್ಯಾಸ ಮಾಡುತ್ತಾ ತಮ್ಮ ಮನಸ್ಸನ್ನು ತಾಜಾವಾಗಿರಿಸಿಕೊಂಡಿರುವ ತೃಪ್ತಿ ಅವರದು.
ಇದೀಗ ಇವರ ನೃತ್ಯ ಸಾಧನೆಯ ಜೊತೆಗೆ ‘ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಕ್ಲಾಸಿಕ್ 2021 ‘ ಮತ್ತು ‘ ಮಿಸೆಸ್ ಇಂಡಿಯಾ ಕರ್ನಾಟಕ ಡ್ಯಾನ್ಸಿಂಗ್ ಕ್ವೀನ್ 2021’ ಎಂಬ ಎರಡು ಉನ್ನತ ಬಿರುದುಗಳು ಅವರ ಕೀರ್ತಿ ಮುಕುಟವೇರಿವೆ. ಮಿಸೆಸ್ ಇಂಡಿಯಾ ಕರ್ನಾಟಕ-ಇಂಡಿಯಾ ಏಷಿಯಾ ಪೆಸಿಫಿಕ್ ಇಂಟರ್ನ್ಯಾಷನಲ್ ಸೌತ್ ರಿಜನ್ ‘ಸಂಸ್ಥೆಯು ಪ್ರತಿಭಾನ್ವಿತ, ವಿವಾಹಿತ ಸುಂದರ ಯುವತಿ/ಮಹಿಳೆಯರಲ್ಲಿ ಆತ್ಮವಿಶ್ವಾಸ-ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸುತ್ತ ಬಂದಿದೆ. ಈ ಹಂತದಲ್ಲಿ ವಿಜೇತರಾದವರನ್ನು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು. ನೃತ್ಯಪಟು ರೇಖಾ ಸತೀಶ್ ಅವರಿಗೆ ‘ ಮಿಸೆಸ್ ಇಂಡಿಯಾ ಕರ್ನಾಟಕ ಡ್ಯಾನ್ಸಿಂಗ್ ಕ್ವೀನ್ 2021’ ಬಿರುದು ಲಭಿಸಿರುವುದು ಅವರ ಅಗ್ಗಳಿಕೆ.
ಬೆಂಗಳೂರಿನಲ್ಲಿ ನೆಲೆಸಿರುವ ಕೂಚಿಪುಡಿ ನೃತ್ಯಗಾರ್ತಿ ರೇಖಾ ಸತೀಶ್, ತಮ್ಮ ಮೂರು ದಶಕಗಳ ನೃತ್ಯಾನುಭಾವದಿಂದ ‘’ ನೃತ್ಯಾಂಕುರ ‘’ ಎಂಬ ತಮ್ಮದೇ ಆದ ನೃತ್ಯಶಾಲೆಯಲ್ಲಿ ನೃತ್ಯ ವಿದ್ಯಾರ್ಥಿಗಳಿಗೆ ಕೂಚಿಪುಡಿ ನೃತ್ಯಶೈಲಿಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ನೃತ್ಯ ಪರೀಕ್ಷೆಗಳನ್ನು ಪಾಸು ಮಾಡುವುದಕ್ಕಿಂತ ಮಕ್ಕಳು ನಿಷ್ಠೆಯಿಂದ ನೃತ್ಯವನ್ನು ಮನವಿಟ್ಟು ಕಲಿಯುವ ಬದ್ಧತೆ ಮುಖ್ಯ ಎಂಬ ಅಭಿಪ್ರಾಯ ಅವರದು. ಆ ನಿಟ್ಟಿನಲ್ಲಿ ಅವರ ಪ್ರಯತ್ನ ಅನವರತ. ನೃತ್ಯ ಕಲಿಸುವುದಕ್ಕಿಂಥ ರೇಖಾಗೆ ನೃತ್ಯ ಪ್ರಸ್ತುತಿಪಡಿಸುವ, ತಮ್ಮ ಕಲಾಪ್ರತಿಭೆ ಮೆರೆದು ವಿಶಿಷ್ಟ ಸಾಧನೆ ಮಾಡುವ ಕನಸು ಅವರದು.
ಬೆಂಗಳೂರಿಗರಾದ ರೇಖಾ ನೃತ್ಯ ಕಲಿಯಲು ಪ್ರಾರಂಭಿಸಿದ್ದು ತಮ್ಮ 5 ನೇ ವರ್ಷಕ್ಕೆ. ತಾಯಿ ಸುಶೀಲಾ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ. ತಾತಾ, ಸಂಗೀತ ಮತ್ತು ದೊಡ್ಡ ಹರಿಕಥಾವಿದ್ವಾಂಸರು. ಮನೆಯಲ್ಲಿ ಉತ್ತಮ ಸಂಸ್ಕಾರದ ಹಿನ್ನಲೆಯಿದ್ದುದರಿಂದ ರೇಖಾಗೆ ಸಂಗೀತ-ನೃತ್ಯದತ್ತ ಅಪಾರ ಒಲವು ಹುಟ್ಟಿನಿಂದಲೇ ಬಂದಿತ್ತು. ತಂದೆ ನಂಜುಂಡೇಶ್ವರ ಅವರಿಗೆ ಎಲ್.ಐ.ಸಿ ಯಲ್ಲಿ ಉದ್ಯೋಗವಾದ್ದರಿಂದ ಮೂರುವರ್ಷಕ್ಕೊಮ್ಮೆ ವರ್ಗವಾಗುವ ಕೆಲಸ. ಹೀಗಾಗಿ ರೇಖಾ ನೃತ್ಯಾಭ್ಯಾಸ ಬೇರೆ ಬೇರೆ ಊರಿನಲ್ಲಿ ನಡೆಯಿತು.
ಮೊದಲಗುರು ಪದ್ಮಿನಿ ರಾವ್ ಬಳಿ ಮೂರು ವರ್ಷಗಳು ಭರತನಾಟ್ಯ ಕಲಿಕೆ. ಅನಂತರ ಗುರು ಜಯ ಕಮಲಾ ಪಾಂಡ್ಯನ್ ಬಳಿ ಐದುವರ್ಷಗಳ ಕಾಲ ವಳವೂರು ಶೈಲಿಯಲ್ಲಿ ಭರತನಾಟ್ಯ ಶಿಕ್ಷಣ ಮುಂದುವರಿಸಿದರು. ನಂತರ ಕೂಚಿಪುಡಿ ಶೈಲಿ ರೇಖಾರನ್ನು ಆಕರ್ಷಿಸಿ, ಮುಂದೆ ಗುರು ಲಕ್ಷ್ಮಿ ರಾಜಾಮಣಿ ಬಳಿ ಕೂಚಿಪುಡಿ ನೃತ್ಯ ಕಲಿತು ‘ರಂಗಪ್ರವೇಶ’ ವನ್ನೂ ಮಾಡಿದರು. ಮುಂದೆ ಚೆನ್ನೈಗೆ ಹೋಗಿ ‘ಕೂಚಿಪುಡಿ ಆರ್ಟ್ ಅಕಾಡೆಮಿ’ಯ ಪ್ರಖ್ಯಾತ ನಾಟ್ಯಗುರು ವೆಂಪಟಿ ಚಿನ್ನಸತ್ಯಂ ಬಳಿ ಹೆಚ್ಚಿನ ಶಿಕ್ಷಣ ಪಡೆದರು. ತಮ್ಮ 15 ನೆಯ ವಯಸ್ಸಿನಲ್ಲೇ ಸಿ.ಸಿ.ಆರ್.ಟಿ. ಸ್ಕಾಲರ್ಷಿಪ್ ಕೂಡ ಪಡೆದರು. ಒಂದು ದಶಕಗಳಿಗೂ ಹೆಚ್ಚಿನ ಕಾಲ ರೇಖಾ, ಬೆಂಗಳೂರಿನಲ್ಲಿ ಪ್ರಖ್ಯಾತ ಕೂಚಿಪುಡಿ ಕಲಾವಿದೆ ಮಂಜುಭಾರ್ಗವಿ ಅವರಲ್ಲಿ ಕಲಿತರು. ಜೊತೆಗೆ ಆಕೆಯ ಹಿರಿಯ ವಿದ್ಯಾರ್ಥಿನಿಯಾಗಿ ಅವರ ನೃತ್ಯಶಾಲೆಯಲ್ಲಿ ಶಿಕ್ಷಕಿಯಾಗಿ ಅನೇಕರಿಗೆ ನೃತ್ಯಶಿಕ್ಷಣ ನೀಡುತ್ತ ಅನುಭವ ಗಳಿಸಿದರು.
ಎಂ.ಎ. ಪದವೀಧರೆಯಾಗಿ, ಮಾನವ ಸಂಪನ್ಮೂಲ ವಿಷಯದಲ್ಲಿ ಡಿಪ್ಲೊಮಾ ಮಾಡಿ ಅನಂತರ ದೊಡ್ಡ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಕೆಲವು ವರ್ಷಗಳ ಕಾಲ ಹೆಚ್.ಆರ್.ಆಗಿ ಉತ್ತಮ ಉದ್ಯೋಗ ಹೊಂದಿದ್ದರೂ, ನೃತ್ಯದ ಒಲುಮೆಯಿಂದ ರೇಖಾ ಉದ್ಯೋಗ ತ್ಯಜಿಸಿ, ಸಂಪೂರ್ಣ ನೃತ್ಯಕ್ಕಾಗಿ ತಮ್ಮ ಭವಿಷ್ಯವನ್ನು ಆರ್ಪಿಸಿಕೊಂಡರು. ಜಾಹೀರಾತುಗಳಿಗೆ ಮಾಡೆಲ್ ಆಗಿಯೂ ಕೆಲಸ ಮಾಡುವುದು ಇವರ ಇನ್ನೊಂದು ಹವ್ಯಾಸ. ಜೊತೆಗೆ ಯೋಗ ಶಿಕ್ಷಣವನ್ನೂ ನೀಡುವ ಕೈಂಕರ್ಯ.
ಪ್ರಸಿದ್ಧ ನಾಟ್ಯಗುರುಗಳಿಂದ ಶಿಕ್ಷಣ ಪಡೆದ ರೇಖಾ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಕೂಚಿಪುಡಿ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಐ.ಸಿ.ಸಿ.ಆರ್ ಎಂಪ್ಯಾನೆಲ್ದ್ ಆರ್ಟಿಸ್ಟ್ ಆಗಿರುವ ಇವರು, ಇದುವರೆಗೂ ಸಾವಿರದ ಐನೂರಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತ ಸಾಧನೆಯ ಪಥದಲ್ಲಿ ಸಾಗುತ್ತಿದ್ದಾರೆ. ಬೆಂಗಳೂರು ದೂರದರ್ಶನದ ಮಾನ್ಯತೆ ಪಡೆದ ಕಲಾವಿದೆಯಾಗಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿದರು. ಜೊತೆಯೇ ದಕ್ಷಿಣ ಕೇಂದ್ರ ವಲಯದ ಸ್ಪರ್ಧೆಯಲ್ಲೂ ಬಹುಮಾನ ಲಭಿಸಿದ್ದು ಇವರ ಹೆಗ್ಗಳಿಕೆ. ಬಿಡುಗಡೆಗೊಂಡಿರುವ ‘ತೆನೆ’ ತೆಲುಗು ಭಾಷೆಯ ಕ್ಲಾಸಿಕ್ ಅಲ್ಬಮ್ ನಲ್ಲಿ ಅಭಿನಯಿಸಿರುವ ರೇಖಾ, ನೃತ್ಯ ಸಂಯೋಜನೆಯನ್ನೂ ಮಾಡಿದ್ದಾರೆ.
ಖಜುರಹೋ, ತಂಜಾವೂರು, ಹಂಪಿ, ಮೈಸೂರು ದಸರಾ, ಕೊಲ್ಕತ್ತಾ, ಭಿಲಾಯಿ, ಕಟಕ್, ಚೆನ್ನೈ, ಸೂರ್ಯ ಫೆಸ್ಟಿವಲ್, ಉದಯ್ ಶಂಕರ್ ಫೆಸ್ಟಿವಲ್ ಮುಂತಾದ ಪ್ರತಿಷ್ಟಿತ ಉತ್ಸವಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ ವಿಶೇಷತೆ ಇವರದು. ಹಾಂಕಾಂಗ್, ಮಲೇಶಿಯಾ, ಸಿಂಗಾಪೂರ್, ಬಹರೆನ್, ಮುಂತಾದೆಡೆಯೂ ಪ್ರದರ್ಶನಗಳನ್ನಿತ್ತಿದ್ದಾರೆ. ‘ಸ್ಪಿಕ್ ಮೆಕೆ’ಯಲ್ಲಿ ಮಾನ್ಯತೆ ಪಡೆದ ಕಲಾವಿದೆಯಾಗಿ ಹಲವೆಡೆ ಸೋದಾಹರಣ ಉಪನ್ಯಾಸ, ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ವಿದ್ವತ್ತಿಗೆ ತಕ್ಕಂತೆ, ನೃತ್ಯ ಶಿರೋಮಣಿ ರಾಷ್ಟ್ರೀಯ ಪ್ರಶಸ್ತಿ, ಲಾಸ್ಯ ಭಾರತಿ, ರಂಗಶ್ರೀ ಪುರಸ್ಕಾರ,ನಾಟ್ಯ ಪ್ರಾಜ್ಞ, ನೃತ್ಯ ವಿಲಾಸಿನಿ, ನೃತ್ಯ ಕೌಮುದಿ, ಸತ್ಯಭಾಮ ಮತ್ತು ಇತ್ತೀಚಿಗೆ ವಸುಂಧರಾ ಪರ್ಫಾರ್ಮಿಂಗ್ ಆರ್ಟ್ಸ್ ಅವಾರ್ಡ್ ಮುಂತಾದ ಅನೇಕಾನೇಕ ಪ್ರಶಸ್ತಿಗಳು ಇವರ ಕೀರ್ತಿ ಮುಕುಟವನ್ನು ಅಲಂಕರಿಸಿವೆ.
ಇವರೆಲ್ಲ ನೃತ್ಯಸಾಧನೆಗೆ ಇಂಬಾಗಿರುವ ಪತಿ ಸತೀಶ್ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಆಟಗಾರರು, ಇವರು ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಎರಡನೆಯ ವರ್ಷದ ಪಿ.ಯೂ.ಸಿ ಓದುತ್ತಿರುವ ಮಗಳು ಹದಿನಾರರ ಹರೆಯದ ಸ್ನೇಹಾ, ಸಂಗೀತ ಕಲಿಯುತ್ತಿದ್ದಾಳೆ.
*****