Image default
Dancer Profile

ಮನಾಕರ್ಷಿಸುವ ಕಥಕ್ ನೃತ್ಯಪ್ರತಿಭೆ ಶ್ರೇಯಾ.ಪಿ.ವತ್ಸ

ರಂಗದ ಮೇಲೆ ಕು. ಶ್ರೇಯಾ ವತ್ಸ ಪ್ರಸ್ತುತಪಡಿಸುವ ಕಲಾತ್ಮಕ ಕಥಕ್ ಶೈಲಿಯ ನೃತ್ಯ ನಯನ ಮನೋಹರ. ಅವಳು ತನ್ನ ‘ರಂಗಪ್ರವೇಶ-ಸಮರ್ಪಣೆ ’ ಯಲ್ಲಿ ನರ್ತಿಸಿದ ವೈವಿಧ್ಯಪೂರ್ಣ ಕೃತಿಗಳು, ಲಯೋನ್ನತ ಉಲ್ಲಾಸಪೂರ್ಣ ನೃತ್ಯ  ಕಲಾರಸಿಕರ ಮೆಚ್ಚುಗೆ ಗಳಿಸಿತು. ಅಂತರರಾಷ್ಟ್ರೀಯ ಖ್ಯಾತಿಯ ಗುರು ದಂಪತಿಗಳಾದ ನಿರುಪಮಾ  ಮತ್ತು ರಾಜೇಂದ್ರ ಅವರ ಉತ್ತಮ ಮಾರ್ಗದರ್ಶನದಲ್ಲಿ ಕಳೆದ ಹದಿಮೂರು ವರ್ಷಗಳಿಂದ ಬದ್ಧತೆಯಿಂದ ನೃತ್ಯ ಕಲಿಯುತ್ತಿರುವ ಶ್ರೇಯಾ, ಸಾಂಸ್ಕೃತಿಕ ಹಿನ್ನಲೆಯ ಸಂಸ್ಕಾರಯುತ ಕುಟುಂಬದಿಂದ ಬಂದವಳು. ‘ಗಮಕಗ್ರಾಮ’ವೆಂದೇ ಪ್ರಸಿದ್ಧವಾದ ಶಿವಮೊಗ್ಗದ ಹೊಸಹಳ್ಳಿಯವರಾದ ತಂದೆ ಪ್ರಸಾದ್ ಐ ಟಿ ಉದ್ಯೋಗಿ ಇಂಜಿನಿಯರ್, ಜೊತೆಗೆ ಸಂಗೀತ-ನೃತ್ಯಗಳಲ್ಲಿ ಆಸಕರೂ ಕೂಡ. ತಾಯಿ ಮೈಸೂರಿನ ವೀಣಾಪ್ರಸಾದ್ ಎನ್.ಜಿ.ಓ ಸಂಸ್ಥೆಯೊಂದರ  ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಸಂಗೀತ-ಸಾಹಿತ್ಯಾಭಿರುಚಿಯುಳ್ಳವರು. ಹೀಗಾಗಿ ತಂದೆ-ತಾಯಿಗಳಿಬ್ಬರೂ ಮಗಳಲ್ಲಿದ್ದ ನೃತ್ಯಪ್ರತಿಭೆಯನ್ನು ಗುರುತಿಸಿ ಹತ್ತನೆಯ ವಯಸ್ಸಿನಲ್ಲಿ ಅವಳನ್ನು ಕಥಕ್ ನೃತ್ಯ ಕಲಿಯಲು ಸೇರಿಸಿದರು.  

ಹಾಗೆ ನೋಡಿದರೆ ಶ್ರೇಯಾ ಬಾಲಪ್ರತಿಭೆ. ಚಿಕ್ಕಂದಿನಿಂದ ನಾಟಕ-ನೃತ್ಯದ ಬಗ್ಗೆ ಅತೀವ ಆಸಕ್ತಿ. ಮಗಳ ಕಲಾಸಕ್ತಿ ಕಂಡು ಹೆತ್ತವರು ಹನುಮಂತನಗರದ ‘ಬಿಂಬ’ ಅಭಿನಯ ಶಾಲೆಗೆ ಸೇರಿಸಿದರು. ಶ್ರೇಯಾ ಅಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡು, ಸೊಗಸಾದ ಅಭಿನಯ ಸಾಮರ್ಥ್ಯಕ್ಕಾಗಿ ಪ್ರಶಂಸೆ ಪಡೆದಳು. ಇದರಿಂದ ಪ್ರೇರಿತರಾಗಿಯೇ ಅವರು, ಮಗಳನ್ನು ಸುಪ್ರಸಿದ್ಧ ‘ಅಭಿನವ ಡಾನ್ಸ್ ಕಂಪೆನಿ’ ಗೆ ನೃತ್ಯ ಕಲಿಯಲು ಸೇರಿಸಿದ್ದು.

 ಇಂದು ನುರಿತ ನರ್ತಕಿಯಾಗಿ ಹೊರ ಹೊಮ್ಮಿರುವ ಶ್ರೇಯಾ ಅಂತರರಾಷ್ಟ್ರೀಯ ಮಟ್ಟದಲ್ಲೂ ತನ್ನ ಪ್ರತಿಭೆಯನ್ನು ಪಸರಿಸಿದ್ದಾಳೆ. ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನೂ ನೀಡಿ ಗಮನ ಸೆಳೆದ ವಿಶೇಷತೆ ಶ್ರೇಯಾಳದು. ‘ಅಭಿನವ ಡಾನ್ಸ್ ಕಂಪೆನಿ’ ಯ ಭಾಗವಾಗಿರುವ ಇವಳು ತನ್ನ ನೃತ್ಯಶಾಲೆಯ ಎಲ್ಲ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲೂ  ಭಾಗಿಯಾಗಿದ್ದಾಳೆ. ಆಳ್ವಾಸ್ ನುಡಿಸಿರಿ,ಇಂಟರ್ನ್ಯಾಷನಲ್ ಸೈನ್ಸ್ ಕಾನ್ಫರೆನ್ಸ್ , ಜಲಪಾತ ಉತ್ಸವ, ಗಣೇಶೋತ್ಸವ, ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಮತ್ತು ಆರ್ಟ್ ಫೆಸ್ಟಿವಲ್ , ದೆಹಲಿಯಲ್ಲಿ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯದ ಹತ್ತನೆಯ ವಾರ್ಷಿಕೋತ್ಸವ ಮುಂತಾದ ಅನೇಕ ಪ್ರಮುಖ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ್ದಾಳೆ. ಯುವ ಅಭಿನವದ ಭಾಗವಾಗಿ, ನೃತ್ಯೋಲ್ಲಾಸ ಮತ್ತಿತರ ಅನೇಕ ಕಾರ್ಪೊರೇಟ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾಳೆ.  ದೇಶಾದ್ಯಂತವಲ್ಲದೆ, ಲಂಡನ್ನಿನ ಭಾರತೀಯ ವಿದ್ಯಾ ಭವನ, ಮತ್ತು ಅಮೆರಿಕಾದಲ್ಲಿ ನಡೆದ ‘ನಾವಿಕ’ ಸಮ್ಮೇಳನದಲ್ಲೂ  ನರ್ತಿಸಿದ ಹೆಮ್ಮೆ ಅವಳದು.

ವಿಶ್ವ ಮಟ್ಟದಲ್ಲಿ, ತನ್ನ ಅಪರೂಪದ-ವಿಶಿಷ್ಟ ನೃತ್ಯರೂಪಕಗಳು, ಕಣ್ಮನ ಸೆಳೆವ ಆಕರ್ಷಕ ನೃತ್ಯವಿನ್ಯಾಸ-ಪ್ರತಿಭಾವಂತ ಕಲಾವಿದರ ಬೆರಗು ಹುಟ್ಟಿಸುವ ನೃತ್ಯವೈಖರಿಗೆ ಹೆಸರಾದ ‘ಅಭಿನವ ಡಾನ್ಸ್ ಕಂಪೆನಿ’ ಯ ರಾಮ ಕಥಾ ವಿಸ್ಮಯ, ಕೃಷ್ಣಾ, ಅಭಿಮನ್ಯು, ಶಕುಂತಲಾ, ರಾಸ್, ಮದನಾಂಜಲಿ, ತದ್ಭಾರತಂ, ಸಿಲ್ವರ್ ಟು  ಸಿಲಿಕಾನ್ ಮತ್ತು ಪದ್ಮಶಾಲಿ ಮುಂತಾದ ನೃತ್ಯರೂಪಕಗಳಲ್ಲಿ ಪಾಲ್ಗೊಂಡ ಅದೃಷ್ಟ ಶ್ರೇಯಾಳದು.

ರಂಗದ ಮೇಲೆ ಬಿರುಗಾಳಿಯಂತೆ ರಂಗಾಕ್ರಮಣ ಮಾಡುವ, ಲವಲವಿಕೆಯಿಂದ ನರ್ತಿಸುವ  ಶ್ರೇಯಾಗೆ ಉತ್ತಮ ಲಯಜ್ಞಾನವಿದ್ದು,  ನೃತ್ಯದ ಎಲ್ಲ ಆಯಾಮಗಳನ್ನೂ ಅಳವಡಿಸಿಕೊಳ್ಳ ಬಯಸುವ ಉತ್ಸಾಹಿ. ಹಲವು ಕೃತಿಗಳಿಗೆ ತಾನೇ ಸ್ವಂತವಾಗಿ ಸಂಗೀತ ಸಂಯೋಜಿಸಿ, ನೃತ್ಯ ಸಂಯೋಜಿಸಿದ ಅಸ್ಮಿತೆಯನ್ನೂ ತೋರಿದ್ದಾಳೆ.  ಹಿರಿಯ ನೃತ್ಯಜ್ಞರಾದ ಪಂಡಿತ್ ಬಿರ್ಜು ಮಹಾರಾಜ್, ಡಾ. ಮಾಯಾರಾವ್, ಕುಮುದಿನಿ ಲಕಿಯಾ ಮತ್ತು ಅದಿತಿ ಮಂಗಳದಾಸ್ ಮುಂತಾದವರ ಕಾರ್ಯಾಗಾರಗಳಿಂದ ಬಹಳಷ್ಟು ಕಲಿತಿದ್ದಾಳೆ. ಸೂಕ್ಷ್ಮಗ್ರಾಹಿಯಾದ ಶ್ರೇಯಾ ಹೆಚ್ಚಿನ ಕಲಿಕೆಗೆ ‘ಕರಣ’ ಗಳ ವಿನ್ಯಾಸಾತ್ಮಕ ತರಬೇತಿಯನ್ನು ನಿರುಪಮಾ ಅವರಿಂದ ಪಡೆದಿರುವುದು ವಿಶೇಷ.

 ಶ್ರೇಯಾ ಉತ್ತಮ ನಿರೂಪಕಳೂ ಹೌದು. ಅನೇಕ ಕಾರ್ಯಕ್ರಮಗಳಲ್ಲಿ ನಿರರ್ಗಳವಾಗಿ-ಸ್ಫುಟವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಅಗ್ಗಳಿಕೆ ಅವಳದು. ಓದಿನಲ್ಲೂ ಬುದ್ಧಿವಂತೆ. ಅರಬಿಂದೋ ಮೆಮೋರಿಯಲ್ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿನಿಯಾಗಿ ಹೆಸರು ಪಡೆದು, ಕ್ರೈಸ್ಟ್ ಕಾಲೇಜಿನಿಂದ ಬಿಎಸ್ಸಿ ಪದವೀಧರೆಯಾಗಿ, ಅನಂತರ  ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಜೈನ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿಯನ್ನು ಗಳಿಸಿಕೊಂಡಿದ್ದಾಳೆ.

ವಿದ್ಯಾವಂತೆಯಾದ ಶ್ರೆಯಾಳನ್ನು ಅನೇಕ ಉತ್ತಮ ಉದ್ಯೋಗಗಳು ಕೈ ಬೀಸಿ ಕರೆದರೂ, ವಿಪುಲ ಅವಕಾಶಗಳಿದ್ದರೂ ಅವಳಿಗೆ ನೃತ್ಯಾರಾಧಾನೆಯೊಂದೇ ಗುರಿಯಾಗಿದ್ದು, ನೃತ್ಯ ಸಾಧನೆಯ ಮಜಲುಗಳ ವಿನಮ್ರ ಪಯಣ ಅವಳದು. ಸಾಗರದಷ್ಟಿರುವ ಕಲಿಕೆಯ ಹಾದಿಯಲ್ಲಿ ಇಂದೂ ಕಠಿಣ ನೃತ್ಯಾಭ್ಯಾಸ , ಗುರುಗಳಿಂದ ಶಿಕ್ಷಣ-ಮಾರ್ಗದರ್ಶನ ಪಡೆಯುವುದರಲ್ಲೇ ನಿರತಳು . ಪ್ರಸ್ತುತ- ಅಭಿನವ ಡಾನ್ಸ್ ಕಂಪೆನಿಯಲ್ಲಿ ನೃತ್ಯಶಿಕ್ಷಕಿಯಾಗಿ ಕಿರಿಯರಿಗೆ ನಾಟ್ಯಶಿಕ್ಷಣ ನೀಡುವುದರಲ್ಲಿ ಆನಂದ ಕಾಣುತ್ತಿದ್ದು, ತಂದೆ-ತಾಯಿ ಮತ್ತು ತಮ್ಮ ಪ್ರಣವ್ (ಎರಡನೇ ವರ್ಷದ ಪಿ.ಯೂಸಿ.) ಜೊತೆಗಿನ ಸುಖೀ ಕುಟುಂಬ ಇವಳದು.

                                          **********************    

Related posts

ಕೂಚಿಪುಡಿ ನೃತ್ಯ ಪ್ರವೀಣೆ ರೇಖಾ ಸತೀಶ್

YK Sandhya Sharma

ಅನುಪಮ ಸಾಧಕಿ ಭರತನಾಟ್ಯ ಕಲಾವಿದೆ ಕೌಸಲ್ಯ ನಿವಾಸ್

YK Sandhya Sharma

ಮೋಹಕ ಒಡಿಸ್ಸಿ ನರ್ತಕಿ ಕರಿಷ್ಮಾ ಅಹುಜಾ

YK Sandhya Sharma

Leave a Comment

This site uses Akismet to reduce spam. Learn how your comment data is processed.