ಲಕ್ಷಣವಾದ ರೂಪು, ನೃತ್ಯಕ್ಕೆ ಹೇಳಿ ಮಾಡಿಸಿದ ಮೈ ಮಾಟ-ನಿಲುವು, ಬಹುಮುಖ ಪ್ರತಿಭೆ ಮೂರರ ಸಂಗಮ ನೃತ್ಯ ಕಲಾವಿದೆ ಕು. ಶ್ರೇಯಾಭಟ್. ಅಂತರರಾಷ್ಟ್ರೀಯ ಖ್ಯಾತಿಯ ‘ಶಾಂತಲಾ ಆರ್ಟ್ಸ್ ಅಕಾಡೆಮಿ’ಯ ಹಿರಿಯ ನಾಟ್ಯಗುರು, ನಟುವನ್ನಾರ್ ಮತ್ತು ನೃತ್ಯಸಂಯೋಜಕ ಪುಲಿಕೇಶೀ ಕಸ್ತೂರಿ ಅವರ ನುರಿತ ಗರಡಿಯಲ್ಲಿ ರೂಪುಗೊಂಡ ಈ ಪ್ರತಿಭಾವಂತ ಕಲಾವಿದೆ ಇತ್ತೀಚಿಗೆ ವಿದ್ಯುಕ್ತವಾಗಿ ‘ರಂಗಪ್ರವೇಶ’ ನೆರವೇರಿಸಿಕೊಂಡಳು. ಅಂದೇ ಅದೇ ವೇದಿಕೆಯ ಮೇಲೆ ಗುರುಗಳಿಂದ ಶ್ರೇಯಳಿಗೆ ‘ಶಾಂತಲಾ ನೃತ್ಯ ನಿಪುಣೆ’ ಎಂಬ ಬಿರುದು ಅಭಿದಾನವಾಯಿತು.
ಸಾತ್ವಿಕಾಭಿನಯದಿಂದ ಶೋಭಿಸಿದ ಶ್ರೇಯಳ ಅಭಿನಯಪ್ರಧಾನ ಕೃತಿಗಳು ರಸಿಕರ ಮೆಚ್ಚುಗೆಯನ್ನು ಪಡೆದವು. ನೃತ್ತಾಭಿನಯದಲ್ಲಿ ಮನಸೆಳೆದ ಅವಳ ಶಾಸ್ತ್ರೀಯ ಚೌಕಟ್ಟಿನಲ್ಲಿ ಅರಳಿದ ಅವಳ ಕಲಾಪ್ರಪೂರ್ಣ, ಮನೋಜ್ಞ ನೃತ್ಯಪ್ರಸ್ತುತಿ ಚೇತೋಹಾರಿಯಾಗಿತ್ತು.

ಮೂಲತಃ ಶಿರಸಿ ತಾಲ್ಲೂಕಿನವರಾದ ಶ್ರೀ ದಿನೇಶ್ ಭಟ್ ಮತ್ತು ಸಾಧನಾ ಭಟ್ ದಂಪತಿಗಳ ಮಗಳಾದ ಶ್ರೇಯಾ ಬಾಲ್ಯದಿಂದಲೂ ಚುರುಕು. ಓದಿನಲ್ಲಿ ಮತ್ತು ಕಲೆಗಳಲ್ಲಿ ಪುಟ್ಟಬಾಲೆ ತೋರಿಸಿದ ಆಸಕ್ತಿ-ಪ್ರತಿಭೆಯನ್ನು ಗುರುತಿಸಿದ ಹೆತ್ತವರು ಅವಳಿಗೆ ಅಂದಿನಿಂದ ಇಂದಿನವರೆಗೂ ನಿರಂತರ ಪ್ರೋತ್ಸಾಹ-ಬೆಂಬಲಗಳೊಡನೆ ಮಾರ್ಗದರ್ಶನ ನೀಡುತ್ತಲೇ ಬಂದಿದ್ದಾರೆ. ಭಾರತೀಯ ಸಂಸ್ಕೃತಿ-ಕಲೆಗಳ ಬಗ್ಗೆ ಅಪಾರ ಒಲವುಳ್ಳ ಮಗಳ ಸಮಗ್ರ ಬೆಳವಣಿಗೆಗೆ ಇಂಬಾಗಿದ್ದಾರೆ ಎಂದರೆ ಅತಿಶಯೋಕಿಯಲ್ಲ. ಅವಳ ಆರನೆಯ ವಯಸ್ಸಿಗೇ ಅವಳಾಸೆಯಂತೆ ಭರತನಾಟ್ಯ ಕಲಿಯಲು ಹಿರಿಯ ಗುರುಗಳಾದ ಖ್ಯಾತ ಪುಲಿಕೇಶೀ ಕಸ್ತೂರಿ ಅವರಲ್ಲಿ ನೃತ್ಯಾಭ್ಯಾಸಕ್ಕೆ ತೊಡಗಿಸಿದರು. ಅಪಾರ ಶ್ರದ್ಧೆ-ಪರಿಶ್ರಮದಿಂದ ಶ್ರೇಯಾ ಕಳೆದ ಹದಿನಾಲ್ಕು ವರ್ಷಗಳಿಂದ ಏಕಾಗ್ರಚಿತ್ತದಿಂದ ಒಬ್ಬರೇ ಗುರುವಿನ ಬಳಿ ನಾಟ್ಯ ತರಬೇತಿ ಪಡೆಯುತ್ತಿರುವುದು ನಿಜಕ್ಕೂ ವಿಶೇಷ.
ಬಹುಮುಖ ಪ್ರತಿಭೆಯ ಶ್ರೇಯಾಗೆ, ಸಂಗೀತ-ವಾದನ-ನೃತ್ಯ ಮುಂತಾದ ಕಲಾಪ್ರಕಾರಗಳಲ್ಲಿ ಅಪರಿಮಿತ ಆಸಕ್ತಿ,ಗುರಿ ಸಾಧಿಸುವ ಸಮರ್ಪಣಾ ಭಾವ, ಬದ್ಧತೆಯ ಕಲಿಕೆ. ಶಾಲಾ-ಕಾಲೇಜುಗಳಲ್ಲಿ ಭರತನಾಟ್ಯದ ಎಲ್ಲ ನೃತ್ಯ ಪ್ರದರ್ಶನ, ಅಂತರಶಾಲೆ-ಕಾಲೇಜು ಸ್ಪರ್ಧೆಗಳಲ್ಲಿ ಭಾಗಿ, ಬಹುಮಾನಗಳನ್ನೂ ಪಡೆದ ಕಲಾನಿಪುಣೆ. ಜೊತೆಗೆ ಗುರು ಮಂದಾಕಿನಿ ಬಹದ್ದೂರ್ ಅವರ ಮಾರ್ಗದರ್ಶನದಲ್ಲಿ ಕಥಕ್ ನೃತ್ಯವನ್ನೂ ಕಲಿಯುತ್ತಿದ್ದಾಳೆ. ಸಂಗೀತದಲ್ಲೂ ಪರಿಶ್ರಮ. ವಿದುಷಿ. ಬಿ. ಸತ್ಯಭಾಮ ಅವರಲ್ಲಿ ವೀಣಾ ವಾದನ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಕರ್ನಾಟಕ ಸರ್ಕಾರ ನಡೆಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣಾವಾದನದ ಜ್ಯೂನಿಯರ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರುವ ಹಿರಿಮೆ ಇವಳದು. ಜೊತೆಗೆ ಭರತನಾಟ್ಯ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳೊಂದಿಗೆ ಜಯಶಾಲಿ. ಪುಣೆ ವಿಶ್ವವಿದ್ಯಾಲಯದಿಂದ ಶಾಸ್ತ್ರೀಯ ನೃತ್ಯದಲ್ಲಿ ‘ವಿಶಾರದ’ ಪರೀಕ್ಷೆಯನ್ನೂ ಅತ್ತ್ಯುನ್ನತ ದರ್ಜೆಯಲ್ಲಿ ಪೂರ್ಣಗೊಳಿಸಿದ ವೈಶಿಷ್ಟ್ಯ.
ಈಗಾಗಲೇ ನಾಡಿನಾದ್ಯಂತ ಅನೇಕ ವೇದಿಕೆಗಳ ಮೇಲೆ, ನೃತ್ಯೋತ್ಸವಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ನೃತ್ಯ ಪ್ರದರ್ಶನಗಳನ್ನು ನೀಡಿರುವ ಶ್ರೇಯಾ, ಶಾಂತಲಾ ಆರ್ಟ್ಸ್ ಅಕಾಡೆಮಿಯ ವಿವಿಧ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಳೆ. ಅವುಗಳಲ್ಲಿ ಪರಿವರ್ತನ, ದಶಾವತಾರ, ಆಳ್ವಾರ್ ದರ್ಶನಂ, ಸಮುದ್ರ ಮಂಥನ ಮುಂತಾದವು ಗಮನಾರ್ಹ ನೃತ್ಯರೂಪಕಗಳು. ಏಕವ್ಯಕ್ತಿ ಪ್ರದರ್ಶನಗಳಲ್ಲೂ ‘ಸೈ’ಎನಿಸಿಕೊಂಡ ಈಕೆ, ‘ಗೆಜ್ಜೆ ಪೂಜೆ’ (ರಂಗಪ್ರವೇಶದ ಪೂರ್ವ) ಏಕವ್ಯಕ್ತಿ ಪ್ರದರ್ಶನವನ್ನು ಕಳೆದವರ್ಷ ಯಶಸ್ವಿಯಾಗಿ ಪೂರೈಸಿದ್ದಾಳೆ.
ಶ್ರೇಯಾ ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾಳೆ. ವಿಶ್ವ ನೃತ್ಯ ದಿನಾಚರಣೆಯ ಉತ್ಸವ, ನವರಾತ್ರಿ, ಶಿವರಾತ್ರಿ, ಗಣೇಶೋತ್ಸವಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿ ರುವುದಲ್ಲದೆ, ಚೆನ್ನೈ- ಕನ್ನಡ ರಾಜ್ಯೋತ್ಸವ, ಬೃಹದೇಶ್ವರ ದೇವಸ್ಥಾನ ತಂಜಾವೂರು, ಕಂಪ್ಲಿಯ ಮಹಿಷಾಸುರ ಮರ್ಧಿನಿ ದೇವಾಲಯ, ಮತ್ತು ಬೆಂಗಳೂರು ಅಂತರರಾಷ್ಟ್ರೀಯ ನೃತ್ಯೋತ್ಸವ ಮುಂತಾದ ಬಹು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾಳೆ..
ಕಲಾಚತುರೆಯಾದ ಶ್ರೇಯಾ ಓದಿನಲ್ಲೂ ಮಹಾ ಜಾಣೆ. ಎಲ್ಲ ತರಗತಿಗಳಲ್ಲೂ ಉದ್ದಕ್ಕೂ ರ್ಯಾಂಕ್ ಪಡೆದ ಧೀಶಕ್ತಿ ಪ್ರದರ್ಶಿಸಿದಾಕೆ. ಎಸ್‌ಎಸ್‌ಎಲ್‌ಸಿಯಲ್ಲಿ ಕರ್ನಾಟಕ ರಾಜ್ಯಕ್ಕೆ 5 ನೇ ರಾಂಕ್, 2ನೇ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 12 ನೇ ರಾಂಕ್ ಮತ್ತು ಸಿ.ಎ. ಫೌಂಡೆಶನ್ ಪರೀಕ್ಷೆಯಲ್ಲಿ ಅಖಿಲಭಾರತ ಮಟ್ಟದಲ್ಲಿ 36 ನೇ ಸ್ಥಾನವನ್ನು ಪಡೆದುಕೊಂಡ ಗರಿಮೆ. ಪ್ರಸ್ತುತ ಈಕೆ, ಐಸಿಎಐನಿಂದ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಮತ್ತು ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿಯಿಂದ ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ) ಪೂರ್ಣಗೊಳಿಸಲು ತನ್ನ ಅಧ್ಯಯನವನ್ನು ಮುಂದುವರಿಸುತ್ತಿದ್ದಾಳೆ.
ಅತ್ಯುತ್ತಮ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಭೆಗಾಗಿ ಶ್ರೇಯಾ, ಅನೇಕ ಪುರಸ್ಕಾರಗಳನ್ನು ಪಡೆದಿದ್ದಾಳೆ. ಅವುಗಳಲ್ಲಿ ಪ್ರಮುಖವಾದವುಗಳು; -‘ಹವ್ಯಕ ಪಲ್ಲವ’ , ‘ಡಿವಿಜಿ ಪ್ರಶಸ್ತಿ ,‘ಸ್ಪಿರಿಟ್ ಆಫ್ ವಿದ್ಯಾಮಂದಿರ್’ – ಎಸ್.ಎಸ್.ಎಲ್.ಸಿ. ಬೋರ್ಡ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ಹೆಗ್ಗಳಿಕೆಗೆ ಎಚ್‌ಆರ್‌ಡಿ ಸಚಿವಾಲಯದಿಂದ ಪ್ರಮಾಣಪತ್ರ ಮತ್ತು ನಗದು ಪ್ರಶಸ್ತಿ ಮುಂತಾದ ಇನ್ನೂ ಅನೇಕಾನೇಕ ಪುರಸ್ಕಾರಗಳ ಜೊತೆ, ರಾಷ್ಟ್ರೀಯ ಮಟ್ಟದ ಅಬಾಕಸ್ ( ಎಲ್ಲಾ 13 ಹಂತಗಳಲ್ಲೂ ಯಶಸ್ವಿ) ಚಾಂಪಿಯನ್‌ಶಿಪ್‌ನಲ್ಲಿ ಅನೇಕ ಬಹುಮಾನಗಳ ಸುರಿಮಳೆ. ಸರ್ವಾಂಗೀಣ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಈ ಯುವ ಪ್ರತಿಭೆ ಭರವಸೆಯ ಕಲಾವಿದೆಯಾಗಿದ್ದಾಳೆ.