ಕೆಲವರಿಗೆ ಕಲೆ ದೈವದತ್ತ ವರ. ಹುಟ್ಟಿನಿಂದ ಬಂದ ಪ್ರತಿಭೆಯನ್ನು ಬೆಳೆಸಿಕೊಂಡು ಬರುವ ಪ್ರಯತ್ನ -ಅಭ್ಯಾಸ-ಸಾಧನೆಗೈಯುವುದು ವೈಯಕ್ತಿಕ ಪರಿಶ್ರಮ. ಈ ನಿಟ್ಟಿನಲ್ಲಿ ಕಾರುಣ್ಯಳ ವಯಸ್ಸು ಸಣ್ಣದಾದರೂ ಇಡುತ್ತಿರುವ ಹೆಜ್ಜೆ ದಾಂಗುಡಿ. ನೂರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮುನ್ನಡೆಯುತ್ತಿರುವ ಈ ಉದಯೋನ್ಮುಖ ಕಲಾವಿದೆಗೆ ನೃತ್ಯ ಬಾಲ್ಯದೊಲವು.
ಬೆಂಗಳೂರಿನ ಗಿರೀಶ್ ಪ್ರಭಾಕರ್ ಮತ್ತು ಶ್ರೀರಂಜಿನಿ ಅವರ ಪುತ್ರಿ ಕಾರುಣ್ಯ. ಮಗಳ ತಪ್ಪು ಹೆಜ್ಜೆ-ಆಂಗಿಕಗಳಲ್ಲೇ ಅವಳಲ್ಲಿ ಹುದುಗಿದ್ದ ವಿಶೇಷಾಸಕ್ತಿಯನ್ನು ಗುರುತಿಸಿದ ಹೆತ್ತವರು ಬಹು ಆಸ್ಥೆಯಿಂದ ಅವಳ ಎಂಟನೆಯ ವಯಸ್ಸಿಗೆ ಉತ್ತಮ ನೃತ್ಯಗುರುಗಳ ಮಾರ್ಗದರ್ಶನದಲ್ಲಿ ನೃತ್ಯ ಕಲಿಯಲು ಸೇರ್ಪಡೆಗೊಳಿಸಿದರು. ‘ನಾಟ್ಯ ಸುಕೃತ’ -ಖ್ಯಾತಿಯ ಹೇಮಾ ಪ್ರಭಾತ್ ಅವರಲ್ಲಿ ಕಳೆದ ಒಂಭತ್ತು ವರ್ಷಗಳಿಂದ ಆಸಕ್ತಿ-ಬದ್ಧತೆಗಳಿಂದ ಕಾರುಣ್ಯ, ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಜೊತೆಗೆ ವಿದುಷಿ. ಲಲಿತಾ ರಾಜೇಶ್ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ.
ಓದಿನಲ್ಲೂ ಮುಂದಿರುವ ಕಾರುಣ್ಯ ಬಹುಮುಖ ಆಸಕ್ತಿ ಉಳ್ಳವಳು. ಆರ್.ಎನ್.ಎಸ್. ಶಾಲೆಯಲ್ಲಿ ನೃತ್ಯ-ನಾಟಕ- ಸಂಗೀತ-ಕಲೆ, ವಿಜ್ಞಾನ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತಪ್ಪದೆ ಭಾಗವಹಿಸುತ್ತ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡ ಹೆಮ್ಮೆ ಅವಳದು. ಅದೇ ಕಾಲೇಜಿನಲ್ಲಿ ಈಗ ಎರಡನೆಯ ಪಿಯೂಸಿ ಓದುತ್ತಿರುವ ಇವಳು, ಕಾಲೇಜಿನಲ್ಲೂ ತನ್ನ ಪಠ್ಯೇತರ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಾ, ನಿರೂಪಣೆಯ ಕಲೆಯನ್ನೂ ಮೈಗೂಡಿಸಿಕೊಂಡಿರುವ ಇವಳು, ಶಾಲೆಯಲ್ಲಿ ಸಂಸ್ಕೃತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ, ಅಂತರ್ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳು, ಅಥ್ಲೆಟಿಕ್, ಬ್ಯಾಸ್ಕೆಟ್ ಬಾಲ್, ಥ್ರೋ ಬಾಲ್, ಕರಾಟೆ (ಸ್ಕೂಲ್ ಆಫ್ ಇಂಡಿಯನ್ ಕರಾಟೆ -ಆರೆಂಜ್ -2 ಬೆಲ್ಟ್ ವಿಜೇತೆ) ಸ್ಪರ್ಧೆಗಳಲ್ಲಿ ಶಾಲೆಯ ಪ್ರತಿನಿಧಿಯಾಗಿ ಭಾಗವಹಿಸಿ ಎಲ್ಲೆಡೆ ಬಹುಮಾನಗಳನ್ನು ಪಡೆದ ಅಗ್ಗಳಿಕೆ ಇವಳದು.
ಸುಕೃತಿ ನಾಟ್ಯಾಲಯ’ ನಡೆಸುವ ಭರತನಾಟ್ಯದ ‘ಪ್ರಾರಂಭಿಕ’, ‘ಪ್ರವೇಶಿಕ ಪೂರ್ಣ’ ಪರೀಕ್ಷೆಗಳ ಜೊತೆಗೆ ಕರ್ನಾಟಕ ಸರ್ಕಾರ ನಡೆಸುವ ಜ್ಯುನಿಯರ್ ನೃತ್ಯಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾಳೆ. ಮುಂಬೈನ ಅಖಿಲ ಭಾರತ ಗಂಧರ್ವ ವಿದ್ಯಾಲಯ ನಡೆಸುವ ‘ಮಧ್ಯಮ’ 1 ಮತ್ತು 2 ಹಂತಗಳನ್ನು ಮುಗಿಸಿದ್ದಾಳೆ.
ವಿದ್ಯಾರ್ಥಿ ದೆಸೆಯಲ್ಲಿ ಹನುಮಂತನಗರದ ‘ಬಿಂಬ’ ಸಂಸ್ಥೆಯಲ್ಲಿ ಬೊಂಬೆಯಾಟ, ನಾಟಕ, ಮೂಕಾಭಿನಯ ಮತ್ತು ಜಾನಪದ ನೃತ್ಯಗಳನ್ನು ಕಲಿತು ಹಲವೆಡೆ ತನ್ನ ಪ್ರತಿಭಾ ಪ್ರದರ್ಶನ ನೀಡಿದ್ದಾಳೆ. ‘ಗೋಪಿನಾಥ ದಾಸ ನ್ಯಾಸ’ ಆಯೋಜಿಸಿದ ‘ನವನೀತ ಚೋರ’ ಕಥಾಕೀರ್ತನ ಮಾಡಿ ತನ್ನ ಹರಿಕಥೆಯ ಪ್ರತಿಭೆಯನ್ನೂ ಪ್ರಕಟಗೊಳಿಸಿರುವ ವಿಶೇಷ ಇವಳದು. ಗರ್ಭ ಮತ್ತು ಭಾಂಗ್ರ ನೃತ್ಯ ಶೈಲಿಯನ್ನೂ ಅಭ್ಯಾಸ ಮಾಡಿ ಪ್ರದರ್ಶನ ನೀಡಿರುವ ಇವಳು, ಕಲರಿಪಯಟು ಮತ್ತು ಕಾನ್ಟೆಂಪೋರರಿ ನೃತ್ಯಗಳ ಪರಿಚಯವನ್ನೂ ಹೊಂದಿದ್ದು, ಮೈಸೂರಿನಲ್ಲಿ ನಡೆದ ಮಕ್ಕಳ ದಸರಾ, ದಸರಾ ವಸ್ತುಪ್ರದರ್ಶನದಲ್ಲಿ ನೃತ್ಯ, ಸಂಭ್ರಮ ಸೌರಭ, ಅದಮ್ಯ ಚೇತನ ಸೇವಾ ಉತ್ಸವ, ಗಣೇಶೋತ್ಸವ ಮುಂತಾದ ಸಾಲು ಸಾಲು ನೃತ್ಯ ಪ್ರದರ್ಶನಗಳನ್ನು ನೀಡಿದ ಸಂತಸ ಇವಳದಾಗಿದೆ.
ಈಗಾಗಲೇ ಕಾರುಣ್ಯ, ಮೈಸೂರಿನ ಚಾಮುಂಡೇಶ್ವರಿ, ನಿಮಿಷಾಂಬ, ಸಪ್ತ ಮಾತೃಕ ಚೌಡೇಶ್ವರಿ, ಹರಿದಾಸ ಪೀಠ, ರಾಮೋಹಳ್ಳಿಯ ಶ್ರೀನಿವಾಸ ಸಾಲಿಗ್ರಾಮ ಮುಂತಾದ ಅನೇಕಾನೇಕ ದೇವಾಲಯಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದು, ನಾಡಿನ ವಿವಿಧ ಭಾಗಗಳಲ್ಲಿ ನಡೆದ ‘ಪ್ರಭಾತ್ ಕಲಾವಿದರು’ ಸಂಸ್ಥೆಯ ಕಿಂದರಿ ಜೋಗಿ, ಕರುನಾಡ ವೈಭವ, ಹರಿ ಸರ್ವೋತ್ತಮ ಮತ್ತು ಶ್ರೀರಾಮ ಪ್ರತೀಕ್ಷಾ ಮುಂತಾದ ನೃತ್ಯನಾಟಕ-ರೂಪಕಗಳಲ್ಲಿ ಭಾಗವಹಿಸಿದ ತೃಪ್ತಿ ಅವಳದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದ ‘ಚಿಗುರು’ ಕಾರ್ಯಕ್ರಮದಲ್ಲಿ ಯಶಸ್ವೀ ಪಾಲ್ಗೊಳ್ಳುವಿಕೆ. ಸುಕೃತಿ ನಾಟ್ಯಾಲಯದ ವಾರ್ಷಿಕೋತ್ಸವವಲ್ಲದೆ ಶಾಲೆಯ ಎಲ್ಲ ನೃತ್ಯೋತ್ಸವ ಕಾರ್ಯಕ್ರಮಗಳು, 92.7 ಬಿಗ್ ಎಫ್ ಎಂ ವಾಹಿನಿಯಲ್ಲಿ ನವರಾತ್ರಿ ಸಂದರ್ಭದಲ್ಲಿ ಮಕ್ಕಳ ಮಹಾಭಾರತದಲ್ಲಿ ಭಾಗವಹಿಸಿ, ಜೊತೆಗೆ ಧ್ವನಿದಾನದ ಕೆಲಸವನ್ನೂ ಪೂರೈಸಿದ್ದಾಳೆ.
ರಾಜ್ಯಾದ್ಯಂತ ವಿವಿಧ ವೇದಿಕೆಗಳಲ್ಲಿ ಕಾರುಣ್ಯ ಏಕವ್ಯಕ್ತಿ ನೃತ್ಯ ಪ್ರದರ್ಶನಗಳನ್ನೂ ನೀಡಿ ರಸಿಕರ ಮೆಚ್ಚುಗೆ ಪಡೆದಿದ್ದಾಳೆ. ಗುರು ಪ್ರಶಾಂತ್ ಶಾಸ್ತ್ರಿ ಅವರ ನಿರ್ದೇಶನದಲ್ಲಿ ತಮಿಳು ನಾಡಿನ ಚಿದಂಬರಂ ದೇವಾಲಯ, ಮೈಲಾಡು ತೊರೈನ ಮಯೂರ ನಾಟ್ಯಾಂಜಲಿ ಉತ್ಸವಗಳಲ್ಲಿ ಭಾಗಿ. ಅನೇಕ ಟಿವಿ ವಾಹಿನಿಗಳಲ್ಲಿ ನರ್ತಿಸಿರುವುದಲ್ಲದೆ, ಆನ್ಲೈನ್ ನೃತ್ಯ ಕಾರ್ಯಕ್ರಮಗಳಲ್ಲೂ ತನ್ನ ಪ್ರತಿಭಾ ಪ್ರದರ್ಶನ ನೀಡಿದ ಹಿರಿಮೆ ಇವಳದು. ಪ್ರಾಣಿಕ್ ಹೀಲಿಂಗ್ ಮತ್ತು ಧ್ಯಾನ ಕ್ರಿಯೆಯನ್ನು ಅಭ್ಯಾಸ ಮಾಡುತ್ತಿರುವ ಇವಳು ಇದರಲ್ಲಿ ಮೂರನೆಯ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾಳೆ. ಎಂಟನೆಯ ತರಗತಿಯಲ್ಲಿ ಓದುತ್ತಿರುವ, ಸಂಗೀತಾಭ್ಯಾಸ ಮಾಡುತ್ತಿರುವ ಇವಳ ತಂಗಿ ಶರಣ್ಯ ಕೂಡ ಅಕ್ಕನಂತೆ ಪ್ರತಿಭಾವಂತೆ.
*******************