ಹೊರಗೆ ಯಾರೋ ತಮ್ಮ ಹೆಸರಿಟ್ಟು ಕರೆದಂತಾಯಿತು. ಮಾಧವರಾಯರು ಧಡಕ್ಕನೆ ಹಾಸಿಗೆಯಿಂದ ಮೇಲೆದ್ದವರೇ, “ಬಂದೆ… ಬಂದೆ” ಎನ್ನುತ್ತ ತಲೆ ಬಾಗಿಲಿನತ್ತ ಧಾವಿಸಿದರು.
“ಯಾರಪ್ಪ… ನಾನು ನೋಡ್ತೀನಿ, ನೀನು ಮಲ್ಕೋ…” ಎಂದು ಜಲಜಾ ಅರ್ಧದಲ್ಲೇ ತಂದೆಯನ್ನು ತಡೆದು, “ಇಂಥ ಬೆಳಗಿನ ಝಾವದಲ್ಲಿ ಬಂದೋರ್ಯಾರು? ಎಂದು ಅಚ್ಚರಿಯಿಂದಲೇ ಹೋಗಿ ಮುಂಬಾಗಿಲು ತೆರೆದಳು.
ಯಾರೂ ಕಾಣಲಿಲ್ಲ. ನಿದ್ದೆಯ ಮಂಪರಿನಲ್ಲಿದ್ದ ತನ್ನ ಕಣ್ಣುಗಳನ್ನು ಚೆನ್ನಾಗಿ ಉಜ್ಜಿ ನೋಡಿದಳು. ಯಾರೂ ಇಲ್ಲ! ಗೇಟಿನ ಬಾಗಿಲು ಹಾಕಿದ ಹಾಗೇ ಇದೆ! ಹೊರಗೆ ಬಂದು ಜಗುಲಿಯ ಮೇಲೆ ನಿಂತು ಅವಳು ಅತ್ತ ಇತ್ತ ಗೋಣಾಡಿಸಿ ನೋಡಿದಳು. ಯಾರ ಸುಳಿವೂ ಇಲ್ಲ! ಇನ್ನೂ ಬೆಳಕೇ ಹರಿದಿರಲಿಲ್ಲ. ಇಡೀ ವಾತಾವರಣವನ್ನು ಚಳಿ ಇಡುಗಿತ್ತು. ಗಿಡ-ಮರಗಳೂ ತೂಕಡಿಸುತ್ತಿದ್ದ ಹೊತ್ತು. ಜಲಜಾ ಮತ್ತೆ ಆಕಳಿಸುತ್ತ ಬಾಗಿಲು ಮುಚ್ಚಿಕೊಂಡು ಒಳಗೆ ಬಂದಳು.
“ಯಾರಮ್ಮ ಬಂದೋರು?” ಮಾಧವರಾಯರು ಇನ್ನೂ ಎಚ್ಚರವಾಗೇ ಇದ್ದರು.
“ಯಾರೂ ಇಲ್ಲಪ್ಪಾ” ಮುಸುಕಿನೊಳಗಿಂದಲೇ ಕ್ಷೀಣವಾಗಿ ಉತ್ತರಿಸಿದ ಜಲಜಾ ಮಗ್ಗುಲು ಹೊರಳಿದಳು.
“ಯಾರೋ ಬಾಗ್ಲು ತಟ್ಟಿದ ಹಾಗಾಯ್ತಲ್ಲಮ್ಮ… ಜೊತೆಗೆ ನನ್ನ ಹೆಸರು ಬೇರೆ ಹಿಡಿದು ಕರೆದಂಗಾಯ್ತು…”
ಪ್ರತಿಕ್ರಿಯೆ ಬರಲಿಲ್ಲ. ಚಳಿಯ ಕೊರೆತಕ್ಕೆ ಅವರು ಬುಗುರಿಯಂತೆ ಸುತ್ತಿಕೊಂಡು ಮುಸುಕೆಳೆದರು.
“ಮಾವಯ್ಯಾ ಕಾಫಿ” ದೊಡ್ಡ ಲೋಟದ ತುಂಬಾ ಹಬೆಯಾಡುವ ಕಾಫಿಯನ್ನು ತಂದಿತ್ತ ಕಡೆಯ ಸೊಸೆ ನಿರ್ಮಲೆಯನ್ನು ನೋಡಿ, ರಾಯರು “ಆಗ್ಲೇ ಬೆಳಕಾಗಿ ಹೋಯ್ತು?! ಒಳ್ಳೆ ನಿದ್ದೆ, ಎಚ್ಚರವೇ ಆಗಲಿಲ್ಲ” ಎಂದು ಸಂಕೋಚ ಪ್ರಕಟಿಸಲು ಎದ್ದು ಕೂತು, ಬಿಸಿಬಿಸಿ ಕಾಫಿ ಹೀರಿ ಲವಲವಿಕೆಯಿಂದ ಹಿತ್ತಲಿಗೆ ನಡೆದರು.
ರಾಯರ ಆಗಮನ ಕಂಡು ತುಂಗಾ-ಭದ್ರೆಯರು ಸಂತಸದಿಂದ ತಲೆ ಕುಣಿಸುತ್ತ ‘ಅಂಬಾ’ ಎಂದವು. ರಾಯರು ದನಗಳ ಮೈದಡವಿ ಮೇವು ಹಾಕಿ ಹೆಗಲ ಮೇಲೆ ಟವೆಲ್ ಎಸೆದುಕೊಂಡು ಬಚ್ಚಲು ಮನೆಯತ್ತ ನಡೆದರು.
“ಅಪ್ಪಾ… ಅಪ್ಪಾ… ಸ್ನಾನಕ್ಕಿಳಿದುಬಿಡಬೇಡ, ಇವತ್ತು ನಿನ್ನ ಹುಟ್ಟಿದ ಹಬ್ಬ ಮೆರೆತುಬಿಟ್ಟೆಯೇನು?” ಎನ್ನುತ್ತಲೇ ಅವರ ಹಿರಿಮಗಳು ಕಮಲಾ ಕೈಯಲ್ಲಿ ಹರಳೆಣ್ಣೆಯ ಬಟ್ಟಲು ಹಿಡಿದುಕೊಂಡು, ಗೋಡೆಯೊತ್ತಿಗೆ ಸ್ಟೂಲ್ ಹಾಕಿ, “ಇಲ್ಲಿ ಬಾ ಅಪ್ಪಾ, ಕೂತ್ಕೋ” ಎಂದು ಕೂರಿದಳು.
ಹರಳೆಣ್ಣೆಯ ಬಟ್ಟಲು ನೋಡುತ್ತಿದ್ದ ಹಾಗೆ ರಾಯರು ಮುಖ ಕಹಿ ಮಾಡಿ “ಅದೊಂದು ಮಾತ್ರ ಬೇಡ್ವೇ ತಾಯಿ” ಎನ್ನುತ್ತ ಅವಳಿಂದ ತಪ್ಪಿಸಿಕೊಂಡು ಬಚ್ಚಲು ಮನೆಯೊಳಗೆ ಓಡಲು ಪ್ರಯತ್ನಿಸಿದರು. ಇದನ್ನು ನಿರೀಕ್ಷಿಸಿದ್ದ ಅವರ ಎರಡನೆಯ ಮಗಳು ಜಾನಕಿ, ಓಡಿ ಹೋಗಿ ಅಪ್ಪನ ರಟ್ಟೆ ಹಿಡಿದು, “ಯಾವ ಮಕ್ಕಳ ಥರ ಹಟ ಮಾಡಬೇಡ” ಎಂದು ಬಲವಂತದಿಂದ ಹಿಡಿದೆಳೆದು ತಂದು ಸ್ಟೂಲಿನ ಮೇಲೆ ಕೂಡಿಸಿದಳು. ಹರಳೆಣ್ಣೆ ಎಂದರೆ ಆಗದ ರಾಯರು ಕೊಸರಾಡುತ್ತ ಒಲ್ಲದ ಮನಸ್ಸಿನಿಂದ ಕೂತುಕೊಂಡರು. ಅವರ ನೆತ್ತಿಯ ಮೇಲೆ ತಟಪಟ ಎಣ್ಣೆ ಒತ್ತುತ್ತಿದ್ದಳು ಕಮಲಾ. ಬೋಳುಮಂಡೆಯಿಂದ ಎಣ್ಣೆ ಮಂದವಾಗಿ ಹಣೆಯ ಮೇಲೆ ಎರಡು, ಮೂರು ಕಾಲುವೆಯಾಗಿ ಹರಿಯತೊಡಗಿತು.
ತೋಳು, ಬೆನ್ನಿಗೆ ಎಣ್ಣೆಯನ್ನು ತಿಕ್ಕತೊಡಗಿದಳು ಜಾನಕಿ. ರಾಯರು ಮಕ್ಕಳ ಕೈಯಲ್ಲಿ ಗೊಂಬೆಯಾಗಿದ್ದರು. ತಾತನ ಮೊಂಡಾಟ ಕಂಡು ಮೊಮ್ಮಕ್ಕಳಿಗೂ ಖುಷಿ. ನಾವೇನು ಕಡಿಮೆ ಎಂದು ಮೊಮ್ಮಕ್ಕಳು, “ತಾತಾ, ನಾವೂ ನಿಮಗೆ ಎಣ್ಣೆ ಹಚ್ತೀವಿ” ಅಂತ ಖುಷಿಯಿಂದ ಎಣ್ಣೆಯಲ್ಲಿ ಬೆರಳದ್ದದ್ದಿ ಅವರ ಪಾದ, ಬೆರಳುಗಳಿಗೆ ಹಚ್ಚತೊಡಗಿದವು.
ರಾಯರಿಗೆ ಒಂದು ಬಗೆಯ ಆನಂದ. ಮೆಲ್ಲನೆ ಅವರ ದೃಷ್ಟಿ ಎದುರು ಗೋಡೆಯ ಮೇಲಿದ್ದ ಹೆಂಡತಿಯ ಫೋಟೋದತ್ತ ಹರಿಯಿತು. ಬಟ್ಟಲು ಕಂಗಳು ಕಾಸಗಲದ ಕುಂಕುಮದ ಮೂಲಕ ತಮ್ಮೆಡೆ ಹಸನ್ಮುಖಳಾಗಿ ನೋಡುತ್ತಿದ್ದ ಸುಶೀಲಮ್ಮ ಅವರ ಹಳೆಯ ನೆನಪನ್ನು ಚಿಮ್ಮಿದರು.
ಒಂದು ಯುಗಾದಿಯ ಸಂದರ್ಭ. ರಾಯರಿಗೆ ಅಭ್ಯಂಜನ ಸ್ನಾನ ಮಾಡಿಸಲು ಸುಶೀಲಮ್ಮ, ಗಂಡನ ಮುಂದೆ ಬೊಗಸೆಯಲ್ಲಿ ಎಣ್ಣೆ ಹಿಡಿದು ನಿಂತಿದ್ದಾಗ, ಅವರು ಪುಟ್ಟಮಗುವಂತೆ ಇಡೀ ಮನೆಯೆಲ್ಲ ಆಟವಾಡಿಸಿ, ಕಡೆಗೂ ಆಕೆಯ ಕೈಗೆ ಸಿಕ್ಕಿಹಾಕಿಕೊಂಡಿದ್ದರು ಮಾತ್ರವಲ್ಲ, ಈ ದೃಶ್ಯವನ್ನು ತಮ್ಮ ಮಕ್ಕಳೆಲ್ಲ ಕುತೂಹಲದಿಂದ ನೋಡುತ್ತಿರುವುದನ್ನು ಕಂಡು ನಾಚಿಕೆಯಿಂದ ತೆಪ್ಪಗೆ ಮಡದಿಯ ಕೈಗೆ ತಮ್ಮ ತಲೆಯನ್ನು ಒಪ್ಪಿಸಿದ್ದರು. ಆಗ ಬೆಳೆದ ಮಕ್ಕಳೊಡನೆ ಸೊಸೆಯಂದಿರೂ ಮುಸಿಮುಸಿ ನಗುತ್ತ ಮರೆಯಾಗಿದ್ದರಲ್ಲವೇ?
ಹಳೆಯ ನೆನಪು ರಾಯರ ತುಟಿಯ ಮೇಲೆ ನಗೆ ತಂದು, ಕೆನ್ನೆಯನ್ನು ರಂಗಾಗಿಸಿತ್ತು.
ರಾಯರಿಗೆ ಈ ದಿನ ಎಂಬತ್ತನೇ ವರ್ಷದ ಹುಟ್ಟುಹಬ್ಬ. ಮಕ್ಕಳು, ಮೊಮ್ಮಕ್ಕಳೆಲ್ಲ ಸೇರಿ ಹುಟ್ಟಿದ ಹಬ್ಬವನ್ನು ವಿಜೃಂಭಣೆಯಾಗಿ ಆಚರಿಸುವುದೆಂದು ಈ ಮೊದಲೇ ತೀರ್ಮಾನಿಸಿದ್ದರು.
ಮಾಧವರಾಯರಿಗೆ ಮೂವರು ಹೆಣ್ಣು ಮಕ್ಕಳು, ನಾಲ್ಕು ಜನ ಗಂಡು ಮಕ್ಕಳು. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ರಾಯರದು ತುಂಬಿದ ಸಂಸಾರ, ಸುಖ ಸಂಸಾರ. ಕಳೆದೈದು ವರ್ಷಗಳ ಹಿಂದೆ ಅವರ ಮಡದಿ ಸುಶೀಲ ಮುತ್ತೈದೆ ಸಾವಿತ್ರಿಯಾಗಿ ಕಣ್ಣು ಮುಚ್ಚಿದ್ದೊಂದು ಬಿಟ್ಟರೆ ಅವರಿಗೆ ದುಃಖವೆಂಬುದೇ ಇರಲಿಲ್ಲ.
ಮಕ್ಕಳೆಲ್ಲರಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿಯಾಗಿದೆ. ಅವರೆಲ್ಲರೂ ಅನುಕೂಲವಾಗಿದ್ದಾರೆ. ಸ್ವಂತ ಬಿಜಿನೆಸ್, ಖಾಸಗಿ, ಸರಕಾರಿ ವಲಯಗಳಲ್ಲಿ ದೊಡ್ಡ ದೊಡ್ಡ ಉದ್ಯೋಗಗಳಲ್ಲಿ ನೆಲೆಗೊಂಡಿರುವ ಅವರ ಮಕ್ಕಳು, ಅಳಿಯಂದಿರೆಲ್ಲರೂ ಸುಖವಾಗಿದ್ದಾರೆ. ಸ್ವಂತ ಮನೆ, ಕಾರು ಗೀರು ಅಂತ ಆಸ್ತಿ ಮಾಡಿಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
ತೃಪ್ತಿಕರವಾಗಿ ವೃದ್ಧಾಪ್ಯ ಜೀವನ ನಡೆಸುತ್ತಿರುವ ರಾಯರು ತಾವು ಸ್ವಂತ ಕಟ್ಟಿದ, ಬಾಳಿದ ಮನೆಯಲ್ಲೇ ಕಡೇಮಗನ ಜೊತೆಯೇ ಇದ್ದಾರೆ. ಮಕ್ಕಳೆಲ್ಲ ಅವರನ್ನು ಆಗಾಗ ಬಂದು ನೋಡಿಕೊಂಡು ಹೋಗುತ್ತಾರೆ. ಈ ಸಲ ಎಲ್ಲರೂ ಸೇರಿ ಅವರ ಎಂಬತ್ತನೆಯ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದೆಂದು ಯೋಚಿಸಿದ್ದಾರೆ. ರಾಯರಿಗೂ ಅಷ್ಟೇ, ಈ ಒಂದು ಕಾರಣದಿಂದ ಮನೆ ಮಂದಿಯನ್ನೆಲ್ಲ ಒಟ್ಟಿಗೇ ಒಂದೇ ಕಡೆ ಕಾಣಬಹುದಲ್ಲ ಎಂಬ ಖುಷಿ. ಮೊದಲೇ ಚಟುವಟಿಕೆಯ ಸ್ವಭಾವದವರಾದ ರಾಯರು ಇಂದು ಇನ್ನೂ ಚೂಟಿಯಾಗಿ ಓಡಾಡುತ್ತಿದ್ದಾರೆ.
ಮಾಧವರಾಯರ ಪ್ರಾಣಸ್ನೇಹಿತ ಅನಂತಯ್ಯ, ವಯಸ್ಸಿನಲ್ಲಿ ಅವನು ಅವರಿಗಿಂತ ಕೊಂಚ ಕಿರಿಯನಾದರೂ ಆತ್ಮೀಯ ದಿನನಿತ್ಯ ಇಬ್ಬರೂ ಕಲೆತು ಗಂಟೆಗಟ್ಟಲೆ ಮಾತನಾಡುವುದು ಅವರಿಬ್ಬರ ಹವ್ಯಾಸ. ಇಂದಿನ ಸಮಾರಂಭಕ್ಕೆ ಅನಂತಯ್ಯನಿಗೂ ಕರೆಹೋಗಿದೆ. ಆದರವನು ಮಗಳ ಮನೆಗೆ ಅರ್ಜೆಂಟ್ ಕೆಲಸದ ಕಾರಣ ನೆರೆಯೂರಿಗೆ ಹೋಗಿದ್ದ. ಹುಟ್ಟಿದಹಬ್ಬದ ಔತಣಕ್ಕೆ ಖಂಡಿತ ಬರುತ್ತೇನೆಂದು ರಾಯರಿಗೆ ಆಶ್ವಾಸನೆ ಕೊಟ್ಟೇ ಹೋಗಿದ್ದ.
ನಿನ್ನೆ ರಾತ್ರಿಯೆಲ್ಲ ರಾಯರಿಗೆ ಅದೆಂಥದೋ ಮುದ! ತಾವು ಮರುದಿನ ಎದುರುಗೊಳ್ಳಬಹುದಾದ ಸುಖದ ಕ್ಷಣಗಳನ್ನು ನೆನೆಯುತ್ತ ರಾತ್ರಿ ಅವರಿಗೆ ನಿದ್ದೆ ಹತ್ತಿದಾಗ ನಡುರಾತ್ರಿ ಕಳೆದಿರಬೇಕು. ಈ ಸಂತಸದಲ್ಲಿ ಭಾಗಿಯಾಗಲು ಮಡದಿಯಿಲ್ಲವಲ್ಲ ಎಂಬ ಕೊರಗೊಂದು ಮಾತ್ರ ಒಳಗೊಳಗೇ ಕೊರೆಯುತ್ತಿತ್ತು. ಆದರೂ ಮನೆ ತುಂಬ ಸಡಗರದಿಂದ ಓಡಾಡುತ್ತಿದ್ದ ಮಕ್ಕಳು, ಮೊಮ್ಮಕ್ಕಳ ನಡುವೆ ಅವರು ವಿರಾಮವಾಗಿ ಕೂತು ಚಿಂತಿಸುವಂತಿರಲಿಲ್ಲ. ಹಾಸಿಗೆಗೆ ಮೈ ಕೊಟ್ಟಾಗಲೇ ನೆನಪುಗಳೆಲ್ಲ ಒಮ್ಮೆಲೇ ದಾಳಿಯಿಡುವುವು.
ಎಲ್ಲರೂ ಬಂದಾಗಿದೆ. ಎರಡನೆಯ ಮಗ ಮತ್ತು ಅವನ ಕುಟುಂಬ ಮಾತ್ರ ರಜ ಸಿಗದೇ ಇರುವ ಕಾರಣದಿಂದ ಮುಂಚಿತವಾಗಿ ಬರಲಾಗದೇ ಮರುದಿನ ಬೆಳಗ್ಗೆ ಬರುವ ಕಾರ್ಯಕ್ರಮವಿತ್ತು. ರಾಯರ ಮನಸ್ಸು ಅವನನ್ನು ಹಿಂಭಾಲಿಸಿ ಹೋಗಿತ್ತು. ಯಾರು ಬಾಗಿಲು ತಟ್ಟಿದರೂ, ತುಸು ಗೇಟು ಶಬ್ದವಾದರೂ ಎಚ್ಚರಿಕೆ… ಊರಿಗೆ ಬಂದವನು, ಮನೆಗೆ ಬಾರದೇ ಹೋಗುತ್ತಾನೆಯೇ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವರು.
ಆದರೆ… ಬೆಳಗಿನ ಝಾವ… ಇನ್ನೂ ಕತ್ತಲು ಸರಿಯಾಗಿ ಝಾಡಿಸಿರಲಿಲ್ಲ ಅಷ್ಟು ಹೊತ್ತಿಗೆ ಯಾವ ರೈಲು… ಬಸ್ಸು!… ಅವನಾದರೆ ತಮ್ಮ ಹೆಸರು ಹಿಡಿದು ಕರೆದಾನೆಯೇ?!… ಇಲ್ಲ… ಯಾರೋ ತಮ್ಮ ಹೆಸರು ಹಿಡಿದು ಸ್ಪಷ್ಟವಾಗಿ ಕರೆದಂತಾಯಿತಲ್ಲಾ! ಯಾರವರು?… ಎಚ್ಚರಾಗುವವರೆಗೂ ಅದೇ ಗುಂಗು!
“ಅಪ್ಪಾ, ನೀರು ಕಾದಿದೆ… ಏಳಪ್ಪ, ಎರಡು ತಂಬಿಗೆ ನೀರು ಹಾಕ್ತೀನಿ ಎಂದು ಮಗಳು ಎಚ್ಚರಿಸಿದಾಗಲೇ ರಾಯರು ಬಾಹ್ಯ ಪರಿವೆಗೆ ಬಂದದ್ದು.
ಅಳಿದ ಹೆಂಡತಿಯ ಫೋಟೋ ದಿಟ್ಟಿಸುತ್ತ ಮಂಜಾದ ಕಣ್ಣನ್ನು ಒತ್ತಿಕೊಂಡು “ನಾನು ರೆಡಿ ಕಣಮ್ಮ” ಎಂದೆದ್ದರು ಮೈ ಝಾಡಿಸಿ.
“ತಾತ, ಎರೆದುಕೊಳ್ಳಕ್ಕೇನೂ ಹಟ ಮಾಡಲ್ಲ ತಾನೇ?” ಎಂದ ಮೊಮ್ಮಗನ ಕಿವಿ ಹಿಂಡಿ- “ಆ, ನೀನೂ ನನ್ನ ರೇಗಿಸೋ ಹಂಗೆ ಆಗ್ಬಿಟ್ಯೇನೋ ತುಂಟಾ ಎಂದು ಹುಸಿಗೋಪ ತೋರಿ ನಗುತ್ತ ಬಚ್ಚಲುಮನೆಯತ್ತ ಹೆಜ್ಜೆ ಹಾಕಿದರು.
ಬಚ್ಚಲುಮನೆಯಿಂದ ತೂರಿ ಬರುತ್ತಿದ್ದ ಅವರ ಕಂಚಿನ ಕಂಠದ ಮತ್ರೋಚ್ಛಾರ-ಶ್ಲೋಕಗಳು ಇಡೀ ಮನೆಯನ್ನು ತುಂಬಿ ಒಂದು ಬಗೆಯ ಉತ್ಸಾಹಪೂರ್ಣ ವಾತಾವರಣವನ್ನು ಹರಡಿತ್ತು.
ರಾಯರು ತಾವು ಮಡಿಯುಟ್ಟು, ಮೊಮ್ಮಕ್ಕಳಿಗೆಲ್ಲ ಮಡಿಯುಡಿಸಿ ಪೂಜೆಗೆ ಸಿದ್ಧರಾಗುವಷ್ಟರಲ್ಲಿ ಅವರ ಎರಡನೆಯ ಮಗ ಹಾಗೂ ಅವನ ಹೆಂಡತಿ-ಮಕ್ಕಳು ಬಂದಿಳಿದರು. ರಾಯರಿಗಂತೂ ಸ್ವರ್ಗಕ್ಕೆ ಎರಡೇ ಗೇಣು. ಮುಖ ಮೊರದಗಲ! ಛೇ… ವಯಸ್ಸು ಬೆಳೆದ ಹಾಗೆ ತಾವು ಭಾವುಕರಾಗುತ್ತಿದ್ದೇವೆಯೇ?… ಹೂಂ… ಒಳ್ಳೆ ಅಂಟು… ನಂಟು… ಎಂದು ನಿಟ್ಟುಸಿರುಬಿಡುತ್ತ ಅವರು ತಮ್ಮ ಮನಸ್ಸನ್ನು ದೇವರಪೂಜೆಯಲ್ಲಿ ಕೇಂದ್ರೀಕರಿಸಲು ಪ್ರಯತ್ನಿಸಿದರು.
ಮನೆಮಂದಿಯನ್ನೆಲ್ಲ ಕರೆದು ತೀರ್ಥ-ಪ್ರಸಾದ ಕೊಟ್ಟರು. ಖಂಡಿತ ತಪ್ಪಿಸುವುದಿಲ್ಲ ಎಂದಿದ್ದ ಅನಂತನೇಕೆ ಇನ್ನೂ ಬರಲಿಲ್ಲ…?! ಅವನೆಂದೂ ಹೀಗೆ ಮಾಡಿದವನಲ್ಲ!
ರಾಯರು ಪೂಜೆ ಮುಗಿಸಿ ಹೊರಬಂದು ಜಗುಲಿಯಲ್ಲಿ ಕುಳಿತಾಗ ಮನೆಯ ಮುಂದೆ ವಿವಿಧ ವಿನ್ಯಾಸದ ರಂಗವಲ್ಲಿ ನಗುತ್ತಿತ್ತು. ಅವರು ಏನೋ ನೆನೆಸಿಕೊಂಡು ತಟ್ಟನೆ ಮೇಲೆದ್ದು, ಹಿತ್ತಲಿಗೆ ನಡೆದು ಕೈಗೆ ನಿಲುಕುವಷ್ಟು ಎತ್ತರದಲ್ಲಿದ್ದ ಕೊಂಬೆಗಳಿಂದ ಮಾವಿನ ಚಿಗುರೆಲೆಗಳನ್ನು ಕೊಯ್ದು ತಂದು ವರಾಂಡದಲ್ಲಿ ಕೂತು ತೋರಣ ಹೆಣೆಯತೊಡಗಿದರು. ಮೊಮ್ಮಕ್ಕಳು ಅವರನ್ನು ಮುಕುರಿಕೊಂಡು, “ನಾವೂ ದಾರಕ್ಕೆ ಎಲೇನ ಪೊಣಿಸ್ತೀವಿ ತಾತಾ” ಎಂದು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದರು.
ರಾಯರು ಮೊಮ್ಮಕ್ಕಳೊಂದಿಗೆ ಆಟವಾಡುತ್ತ, ಸರಸವಾಗಿ ಮಾತನಾಡುತ್ತ ತಳಿರು ತೋರಣಗಳನ್ನು ಮುಂಬಾಗಿಲು, ನಡುಮನೆ ಬಾಗಿಲು ಮತ್ತು ದೇವರ ಮನೆಯ ಬಾಗಿಲುಗಳಿಗೆ ತೂಗಿಬಿಟ್ಟರು.
ಮಡದಿಯ ಫೋಟೋಗೆ ಮಲ್ಲಿಗೆ ಹಾರ ಹಾಕಿ, ಈ ದಿನ ಹೆಂಡತಿಯ ಹೆಸರಿನಲ್ಲಿ ಮುತ್ತೈದೆಯರಿಗೆ ಹೂವೀಳ್ಯ ಮಾಡಿಸಲು ಹಿರಿಯಮಗಳಿಗೆ ಈಗಾಗಲೇ ಸೂಚನೆ ಇತ್ತಿದ್ದರು.
ಮನೆಯಲ್ಲಾಗಲೇ ಒಂದು ಬಗೆಯ ಹಬ್ಬದ ವಾತಾವರಣ ನೆಲೆಸಿತ್ತು. ಅತ್ತೆಯ ಮನೆಯಿಂದ ಬಂದಿದ್ದ ಹೆಣ್ಣುಮಕ್ಕಳು ಸೊಸೆಯಂದಿರೊಡಗೂಡಿ ಆಗಲೇ ಅಡುಗೆಮನೆಯಿಂದ ಘಮಘಮ ಪಾಕ ಪರಿಮಳ ಹಬ್ಬಿಸಿದ್ದರು. ಗಂಡು ಮಕ್ಕಳು, ಅಳಿಯಂದಿರು ತರಾತುರಿಯಿಂದ ಓಡಾಡುತ್ತಿದ್ದರು.
ಮಕ್ಕಳಿಗೆಲ್ಲ ಒಂದೊಂದು ಕೆಲಸ ಹಚ್ಚಿ ರಾಯರು ತಲೆಬಾಗಿಲಲ್ಲಿ ಕುಳಿತು ಯಾರದೋ ದಾರಿ ನೋಡುವಂತಿತ್ತು.
“ಯಾರಿಗಪ್ಪಾ ಕಾಯ್ತಿದ್ದೀ? ಬೆಳಗ್ಗಿಂದ್ಲೂ ಹೀಗೆ ನಡುಮನೆಗೂ ಮುಂಬಾಗಿಲಿಗೂ ಹತ್ತು ಸಲ ಓಡಾಡ್ತಿದ್ದೀ?” ಎನ್ನುತ್ತ ಅವರ ಹಿರೇಮಗ ರಾಯರ ಮಗ್ಗುಲಿಗೆ ಬಂದು ಕೂತ.
“ಏನು ಯೋಚ್ನೆ ಮಾಡ್ತಿದ್ದೀರಾ?” ಅವರ ಮೂರನೇ ಅಳಿಯ ಜಗುಲಿಯೇರಿ ಕೂತು ಪ್ರಶ್ನಿಸಿದಾಗ- “ಅಂಥದ್ದೇನಿಲ್ಲ… ನಮ್ಮ ಅನಂತೂ ಇನ್ನೂ ಯಾಕೋ ಬರ್ಲಿಲ್ವಲ್ಲಾಂತ ಅವನ ದಾರಿ ನೋಡ್ತಿದ್ದೆ ಅಷ್ಟೇ”-ಎಂದವರು ಲಘುವಾಗಿ ನಕ್ಕಂತೆ ಕಂಡರೂ ಅವರ ಮುಖಭಾವ ಗಂಭೀರವಾಗೇ ಇತ್ತು.
“ಬರ್ತಾರೆ ಬಿಡಪ್ಪ… ಒಳಗೆದ್ದು ಬಾ, ಊಟದ ಹೊತ್ತಾಯ್ತು” ಎಂದು ಮಗ ತಂದೆಯನ್ನು ಮೇಲೆಬ್ಬಿಸಿದ.
ಊಟಕ್ಕೆ ಮುಂಚೆ ರಾಯರು ಮಕ್ಕಳು-ಮೊಮ್ಮಕ್ಕಳು ಎಲ್ಲರನ್ನೂ ಕರೆದು ಸುತ್ತ ಕೂಡಿಸಿಕೊಂಡು ಪೆಟ್ಟಿಗೆ ತೆರೆದು ಅವರಿಗೆಲ್ಲ ಒಂದೊಂದು ಉಡುಗೊರೆಗಳನ್ನಿತ್ತರು.
“ಇದೇನು ಮಾವಯ್ಯ… ಈ ಸಂದರ್ಭದಲ್ಲಿ ನಾವು ನಿಮಗೆ ಪ್ರೆಸೆಂಟ್ ಕೊಡಬೇಕು, ಅದು ಬಿಟ್ಟು ನೀವೇ…” ಎಂದು ನಾಚಿಕೊಂಡರು ಸೊಸೆಯಂದಿರು.
“ನನಗೆ ವಯಸ್ಸಾಯ್ತು… ಇನ್ನೇನು ಬೇಕಮ್ಮ?… ನೀವು ಬಾಳಿ ಬದುಕೋರು… ನೀವುಗಳೆಲ್ಲ ಚೆನ್ನಾಗಿ ಆನಂದವಾಗಿರಬೇಕು” ಎನ್ನುತ್ತ, ತಮಗೆ ನಮಸ್ಕರಿಸಿದ ಎಲ್ಲರ ತಲೆಗಳನ್ನೂ ನೇವರಿಸಿ ಆಶೀರ್ವಾದ ಮಾಡಿ ಉಡುಗೊರೆಗಳನ್ನಿತ್ತರು ಮಾಧವರಾಯರು.
ಹೆಣ್ಣಮಕ್ಕಳು, ಸೊಸೆಯಂದಿರಿಗೆ ಮದುವೆಯ ಸಮಯದಲ್ಲಿ ರಾಯರು ತಕ್ಕಮಟ್ಟಿಗೆ ಒಡವೆಗಳನ್ನು ಹಾಕಿದ್ದರೂ, ಈಗ ಹೆಂಡತಿಯ ಅಳಿದುಳಿದ ಎಲ್ಲಾ ಆಭರಣಗಳನ್ನೂ ಹಂಚಿ, ಸಂತೋಷದಿಂದ ಮಿನುಗುವ ಅವರ ಕಣ್ಣುಗಳಲ್ಲಿ ತಮ್ಮ ಪ್ರತಿಬಿಂಬ ಕಾಣುತ್ತ ನಕ್ಕರು.
ಆದರೆ ಗೆಳೆಯನಿಗಾಗಿ ತಂದಿದ್ದ ಉಡುಗೊರೆ ಮಾತ್ರ ಹಾಗೇ ಅವರ ಕೈಯಲ್ಲಿ ಉಳಿದಿತ್ತು.
“ಅನಂತು ಬರಲಿಲ್ಲವೇಕೆ?… ಅವನು ಬಂದೇ ಬರುತ್ತೇನೆಂದಿದ್ದನಲ್ಲ!”
“ಬಾಪ್ಪ, ಎಲ್ಲಾ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡು ಬಿಡೋಣ” ಫೋಟೋನೂ ಆಯ್ತು. ಆದರೆ ರಾಯರ ಮನಸ್ಸಿಗೇನೋ ಅರೆಕೊರೆ.
ಅಗ್ರದ ಬಾಳೆಲೆಯಲ್ಲಿ ಬಡಿಸಿದ್ದ ಖಾದ್ಯಗಳನ್ನೆಲ್ಲ ಒಮ್ಮೆ ದಿಟ್ಟಿಸಿ ನೋಡಿದರು. ಸಿಹಿ-ಖಾರದ ವಿವಿಧ ಬಗೆಯ ತಿನಿಸುಗಳು, ತಮಗೆ ಅತ್ಯಂತ ಪ್ರಿಯವಾದ ಬೇಳೆ ಹೋಳಿಗೆಯಿಂದ ಹಿಡಿದು ಕಾಯಿ-ಸಾಸಿವೆ ಚಿತ್ರಾನ್ನದವರೆಗೂ ಹೆಂಗಳೆಯರು ಮುತುವರ್ಜಿಯಿಂದ ತಯಾರಿಸಿದ್ದಾರೆ.
ಊಟದ ಹೊತ್ತಿಗಾದರೂ ಬಂದಾನು ಎಂದವರು ಅನಂತಯ್ಯನಿಗಾಗಿ ತಮ್ಮ ಪಕ್ಕದಲ್ಲೇ ಒಂದು ಎಲೆಯನ್ನು ಕಾದಿರಿಸಿದ್ದರು. ಆದರೆ ಅದು ಕಡೆಯವರೆಗೂ ಹಾಗೇ ಉಳಿದಿತ್ತು.
“ಅಪ್ಪಾ ಇನ್ನೊಂದು ಹೋಳಿಗೆ”-ಮಗಳು ಒತ್ತಾಯ ಮಾಡಿ ಬಡಿಸುತ್ತಿದ್ದಳು. ರಾಯರು ಢರ್ರೆಂದು ತೇಗಿ, ಮಗಳ ಪ್ರೀತಿಗೆ ಪ್ರತಿಯಾಗಿ ಅವಳತ್ತ ಪ್ರೀತಿನೋಟ ಹರಿಸಿ-“ರಾತ್ರಿಗಿಟ್ಟಿರು, ಖಂಡಿತ ತಿನ್ತೀನಿ” ಎಂದು ಮೇಲೆದ್ದರು.
“ಅಪ್ಪಾ, ಸ್ವಲ್ಪ ಹೊತ್ತು ಮಲ್ಕೊಂಡು ವಿಶ್ರಾಂತಿ ತೊಗೋಪ್ಪ… ಬೆಳಗ್ಗಿಂದ ತುಂಬಾ ದಣಿದಿದ್ದೀಯಾ”-ಕಿರಿಮಗ ಅವರ ಮಂಚದ ಮೇಲಿದ್ದ ಮಗ್ಗುಲು ಹಾಸಿಗೆಯನ್ನು ಚೆನ್ನಾಗಿ ಕೊಡವಿ ಅಣಿಮಾಡಿದ.
“ಅಯ್ಯೊ ದಿನಾ ಇದ್ದದ್ದೇ ಬಿಡಪ್ಪ ಅದು… ಅಪರೂಪವಾಗಿ ನೀವೆಲ್ಲ ಒಟ್ಟಿಗೆ ಸೇರಿದ್ದೀರಿ… ಹಾಯಾಗಿ ಒಂದು ಸ್ವಲ್ಪ ಹೊತ್ತು ಹರಟೋಣ ಬನ್ನಿ”
ರಾಯರು ಲವಲವಿಕೆಯಿಂದ ನಡುಮನೆಯುದ್ದಗಲಕ್ಕೂ ಜಮಖಾನೆ ಹಾಸಿ, “ಬನ್ರೋ ಪುಟಾಣಿಗಳ”-ಎಂದು ತಾವು ಅದರ ಮೇಲೆ ಕೂತು ಮೊಮ್ಮಕ್ಕಳನ್ನು ತಮ್ಮ ಸುತ್ತ ಕೂರಿಸಿಕೊಂಡರು.
ಸೊಸೆ, ಮೈಸೂರು ಚಿಗುರೆಲೆ ತಾಂಬೂಲದ ತಟ್ಟೆಯನ್ನು ಮಧ್ಯೆ ತಂದಿಟ್ಟಳು. ರಾಯರು ಅದಕ್ಕಾಗಿಯೇ ಕಾದಿದ್ದವರಂತೆ ಒಂದಾದ ಮೇಲೆ ಒಂದರಂತೆ ಏಳೆಂಟು ಎಲೆಗಳನ್ನು, ಸುಣ್ಣ ಹದವಾಗಿ ಸವರಿಕೊಂಡು ಮೆಲ್ಲುತ್ತ ತಮ್ಮಲ್ಲಿ ತಾವೇ ಏನೋ ನೆನೆದು ನಗತೊಡಗಿದರು.
“ಯಾಕ್ ತಾತಾ?!… ಊಟವಾದ ಮೇಲೆ ಎಲೆ ಹಾಕ್ಕೋಬೇಕು… ಎಲೆ ಹಾಕ್ಕೊಂಡ್ಮೇಲೆ ನಗಬೇಕಾ?… ಆಮೇಲೆ…”
ಪುಟಾಣಿಯ ತಲೆ ಸವರುತ್ತ ರಾಯರು, ಕಟವಾಯಿಯಿಂದ ಸೋರುತ್ತಿದ್ದ ತಾಂಬೂಲದ ರಸವನ್ನು ಒಳಗೆ ಹೀರಿಕೊಂಡು- “ಅವತ್ತು… ನಮ್ಮ ಮೊದಲ ರಾತ್ರಿಯ ದಿನ, ಹೀಗೇ ಒಂದು ಹತ್ತಿಪ್ಪತ್ತು ಎಲೆ ಚೆನ್ನಾಗಿ ಮೆದ್ದಿದ್ದಕ್ಕೆ, ‘ನೀವು ಹೋದ ಜನ್ಮದಲ್ಲಿ ಮೇಕೆ ಆಗಿದ್ರೇನ್ರೀ?” ಅಂತ ನಿಮ್ಮಜ್ಜಿ ಕೈಲಿ ಬೈಸಿಕೊಂಡಿದ್ದೆ”- ಎಂದು ಮತ್ತೆ ನೆನೆದು ಜೋರಾಗಿ ನಗತೊಡಗಿದರು. ಅವರ ಕಣ್ಣುಗಳು ಗೋಡೆಯ ಮೇಲಿದ್ದ ಮಡದಿಯ ಫೋಟೋದೊಳಗೆ ಕೀಲಿಸಿದ್ದವು.
ಐದು ವರ್ಷದ ಮೊಮ್ಮಗಳು ಮುಗ್ಧವಾಗಿ ಕಣ್ಣುಗಳನ್ನರಳಿಸಿ, “ಮೊದಲ ರಾತ್ರಿ ಅಂದ್ರೇನು ತಾತಾ?” ಎಂಧು ಕೇಳಿದಳು.
ತತ್‍ಕ್ಷಣ ಹನ್ನೊಂದು ವರ್ಷದ ಮೊಮ್ಮಗ ತನ್ನ ಪಾಂಡಿತ್ಯ ಪ್ರದರ್ಶನ ಮಾಡುತ್ತ, “ಅಷ್ಟೂ ಗೊತ್ತಿಲ್ವೇನೇ ಮೊದ್ದುಮಣಿ, ನೀನು ಹುಟ್ಟಿದ ದಿನದ ರಾತ್ರೀನೇ ಕಣೆ ನಿನ್ನ ಮೊದಲರಾತ್ರಿ”- ಎಂದ ಪಾರಂಗತನಂತೆ ಬೀಗುತ್ತ.
ಥಟ್ಟನೆ ಇನ್ನೊಬ್ಬ ಮೊಮ್ಮಗ-“ಅಂದ್ರೆ ಕಡೇ ರಾತ್ರೀನೂ ಇರತ್ತಾ ತಾತಾ?” ಎಂದು ಕೇಳಿದಾಗ ರಾಯರು ನಸುನಕ್ಕು, “ಹೂಂ ಮತ್ತೆ… ಮೊದಲಿದ್ದ ಮೇಲೆ ಕಡೇದೂ ಇರಬೇಡವೇ?” ಎನ್ನುತ್ತಿದ್ದ ಹಾಗೆ, ಹಿರೀಮಗ ದನಿಯೇರಿಸಿ ಮಕ್ಕಳನ್ನು ಗದರಿದ:
“ಎದ್ದು ಹೋಗಿ ಆಡ್ಕೊಳ್ರೋ… ಇದೇನು ತಾತನ್ನ ಒಂಚೂರು ರೆಸ್ಟೂ ತೊಗೊಳಕ್ಕೆ ಬಿಡದೆ ಕಾಡ್ತಿದ್ದೀರಾ?”
ಮಕ್ಕಳೆಲ್ಲ, “ತಾತಾ ಚಾಕೊಲೇಟ್, ಚಾಕೊಲೇಟ್” ಎಂದು ರಾಯರನ್ನು ಘೇರಾವ್ ಮಾಡಿ ಚಾಕೊಲೇಟ್ ಇಸ್ಕೊಂಡು ಪುತಪುತನೆ ಹೊರಗೋಡಿದವು.
ಈಗ ರಾಯರ ಸುತ್ತಲೂ ಹೆಣ್ಣುಮಕ್ಕಳು, ಗಂಡುಮಕ್ಕಳು, ಸೊಸೆಯಂದಿರು, ಅಳಿಯಂದಿರು ಆವರಿಸಿದರು.
ರಾಯರ ಮೊಗದಲ್ಲಿ ಆನಂದ-ತೃಪ್ತಿ ಎದ್ದು ಕಾಣುತ್ತಿತ್ತು. ಮಕ್ಕಳನ್ನೆಲ್ಲ ಬಿಡುವಾಗಿ ವಿಚಾರಿಸಿಕೊಂಡರು.
“ಅಂತೂ ಎಲ್ರೂ ನಿಮ್ಮ ನಿಮ್ಮ ಜೀವನದಲ್ಲಿ ಚೆನ್ನಾಗಿ ಸೆಟ್ಲ್ ಆಗಿರೋದನ್ನು ಕಂಡು ನಂಗೆ ತುಂಬ ನಿಶ್ಚಿಂತೆ ಕಣ್ರಪ್ಪ… ಎಲ್ಲರೂ ಒಳ್ಳೇ ಕೆಲಸದಲ್ಲಿದ್ದೀರಾ… ಮನೆಗಳನ್ನೂ ಕಟ್ಟಿದ್ದೀರಾ… ಆದರೂ… ನಾನು, ನಿಮ್ಮಮ್ಮ ಸಂಸಾರ ಮಾಡಿದ ಈ ಮನೆ, ಹೊಲ-ಗದ್ದೆ, ತೋಟಗಳನ್ನೆಲ್ಲ ನಿಮಗೆ ಸಮಾನವಾಗಿ ಹಂಚಿಬಿಡೋಣಾಂತ ನಿರ್ಧರಿಸಿದ್ದೇನೆ”
ರಾಯರ ಮಾತನ್ನು ಹಿರಿಯ ಮಗ ಅರ್ಧದಲ್ಲೇ ತಡೆಯುತ್ತ, “ಇದೇನು ಮಾತೂಂತ ಆಡ್ತಿದ್ದೀಯಾ ಅಪ್ಪಾ?… ನಮಗೆ ನಿನಗಿಂತ ಈ ಆಸ್ತಿ ಹೆಚ್ಚೇ?… ನೀವು ಕೊಟ್ಟಿರೋ ಪ್ರೀತಿ-ವಾತ್ಸಲ್ಯ, ವಿದ್ಯಾಭ್ಯಾಸ-ಹರಕೆಗಳಿಗಿಂತ, ನಮಗಿನ್ನೇನೂ ಬೇಡ… ನಿಮ್ಮ ಹೆಸರು ಶಾಶ್ವತವಾಗಿರೋ ಹಾಗೇ ನಿಮ್ಮ ಆಸ್ತೀನೆಲ್ಲಾ ಸೇರಿಸಿ ಒಂದು ‘ಟ್ರಸ್ಟ್’ ಮಾಡಿದರಾಯ್ತು… ನಿನ್ನ-ಅಮ್ಮನ ಪ್ರೀತಿ ಆಶ್ರಯದಲ್ಲಿ ನಾಲ್ಕಾರು ಜನ ಚೆನ್ನಾಗಿ ಬಾಳಲಿ ಅಪ್ಪಾ” ಎಂದ ಅವನ ಧ್ವನಿ ಕೃತಜ್ಞತೆಯಿಂದ ಗದ್ಗದವಾಗಿತ್ತು.
ರಾಯರ ಸಂತೋಷಕ್ಕಿಂದು ಎಣೆಯೇ ಇಲ್ಲ!
ಸಂಜೆ ಮೊಮ್ಮಕ್ಕಳೆಲ್ಲ ನಡುಮನೆಯಲ್ಲಿ ದುಂಡುಮೇಜಿನ ಮೇಲೆ ಒಂದು ದೊಡ್ಡ ಕೇಕ್ ಇರಿಸಿ, ಅದರ ಮಏಲೆ ಬಣ್ಣಬಣ್ಣದ ಸಣ್ಣದಾದ ಎಂಟು ಮೋಂಬತ್ತಿಗಳನ್ನು ಹಚ್ಚಿ ತಾತನಿಗೆ “ಹ್ಯಾಪಿ ಬರ್ತ್‍ಡೇ” ಶುಭಾಶಯವನ್ನು ರಾಗವಾಗಿ ಹೇಳಿ, “ಕ್ಯಾಂಡಲ್ಸ್ ಊದಿ ತಾತಾ” ಎಂದು ಕೇಳಿಕೊಂಡರು.
“ಏ ಇದೆಲ್ಲ ಏನ್ರೋ?”- ಜಾನಕಿ ಗದರಲು ಹೊರಟಾಗ ರಾಯರು,
“ಮಕ್ಕಳ ಸಂತೋಷಕ್ಕೆ ಅಡ್ಡಿ ಮಾಡಬೇಡಮ್ಮ… ಅವರಿಷ್ಟದ ಹಾಗೆ ನಡೀಲಿ, ಆಮೇಲೆ ನೀವೆಲ್ಲ ಬೇಕಾದ್ರೆ ಆರತಿ ಎತ್ತಿ ನಾ ಕೂತ್ಕೋತೀನಿ”-ಎಂದಾಗ ಎಲ್ಲಾ ಜೋರಾಗಿ ನಗತೊಡಗಿದರು.
ರಾಯರು ಮಕ್ಕಳೊಡನೆ ಮಕ್ಕಳ ಹಾಗೆ ಬೆಲೂನ್ ಊದುತ್ತ, ಹಾಡುತ್ತ, ಆಡುತ್ತ ನಲಿದರು. ಆನಂತರ ಆರತಿಯನ್ನೂ ಮಾಡಿಸಿಕೊಂಡರು.
ರಾತ್ರಿ ಮರೆಯದೆ ಅವರು ಬೇಳೆಹೋಳಿಗೆ ಹಾಕಿಸಿಕೊಂಡು ತಿಂದರು. “ಅಪ್ಪಾ, ಬಾಪ್ಪ ನಿನ್ನ ಒಂದ್ಸಲ ಚೆಕ್‍ಅಪ್ ಮಾಡಿಬಿಡ್ತೀನಿ”- ಎಂದು ಎರಡನೇ ಮಗ ಡಾಕ್ಟರ್, ಸ್ಟೆತಾಸ್ಕೋಪ್ ಹಾಕಿಕೊಂಡು ಅವರನ್ನು ಸಮೀಪಿಸಿದಾಗ, “ಯಾಕೋ ಎರಡು ಹೋಳಿಗೆ ಜಾಸ್ತಿ ಹಾಕಿಸಿಕೊಂಡು ಹೊಡೆದೆ ಅಂತ ಆಗ್ಲೇ ನಿನ್ನ ಕಣ್ಣು ನನ್ಮೇಲೆ ಬಿದ್ದುಬಿಡ್ತಾ?… ಅದಕ್ಕೂ ಪಡೆದು ಬಂದಿರಬೇಕು ಗೊತ್ತಾ!… ನಾನು ನಿನ್ನ ವಯಸ್ನಲ್ಲಿ ಬಾಜಿ ಕಟ್ಕೊಂಡು ಹದಿನೈದು ಹೋಳಿಗೆ ತಿನ್ತಿದ್ದೆ ಕಣೋ… ಹುಟ್ಟಿದಾರಭ್ಯ ನಾನು ಜ್ವರ-ತಲೆನೋವೂಂತ ಮಲಗಿದವನೇ ಅಲ್ಲ. ಇನ್ನು ಗುಳಿಗೆ, ಇಂಜೆಕ್ಷನ್ನು, ಡಾಕ್ಟ್ರು ಅಂತ ಯಾರು ಕಂಡಿದ್ರು?… ನಾವು ಹಳೇಕಾಲದೋರು ಗುಂಡುಕಲ್ಲಿನ ಹಾಗಿದ್ದೀವಿ ತಿಳ್ಕೋ”- ಎಂದು ರಾಯರು ತಮ್ಮ ಎದೆ ತಟ್ಟಿಕೊಂಡು ಹೆಮ್ಮೆಯಿಂದ ಬೀಗಿದರು.
ತತ್‍ಕ್ಷಣ ರಾಯರೇ ಮಗನ ಭುಜ ತಟ್ಟುತ್ತ- “ಯಾಕೋ ಪೆಚ್ಚಾದೆ?… ನಿನ್ನ ಸೇವೆ ನಾನು ತೊಗೊಳ್ಳಿಲ್ಲ ಅಂತ ಬೇಜಾರಾಯ್ತಾ?”- ಎಂದಾಗ,
ಥಟ್ಟನೆ ಅವನು- “ಅಯ್ಯೋ ಬಿಡ್ತು ಅನ್ನಪ್ಪಾ… ನೀನಿಷ್ಟು ಆರೋಗ್ಯವಾಗಿರೋಕ್ಕಿಂತ ಇನ್ನೇನು ಬೇಕಪ್ಪ ನಮಗೆ?” ಎಂದು ತನ್ನ ಕೊರಳಲ್ಲಿ ಮಲಗಿದ್ದ ಸ್ಟೆತಾಸ್ಕೋಪನ್ನು ಮಡಿಸಿಟ್ಟ.
“ರಾತ್ರಿ ಹತ್ತಾಯ್ತು, ಇನ್ನು ನೀವು ಮಲಗೀ ಮಾವಯ್ಯ” ಎಂದ ಅಳಿಯನ ಮಾತು ಕಿವಿಯ ಮೇಲೆ ಬಿತ್ತೋ ಇಲ್ಲವೋ ಎನ್ನುವ ಹಾಗೆ ಅವರು ಕದಲದೆ ತದೇಕಚಿತ್ತರಾಗಿ ಹೆಂಡತಿಯ ಭಾವಚಿತ್ರವನ್ನೇ ದಿಟ್ಟಿಸುತ್ತಿದ್ದರು.
“ವಯಸ್ಸಿನಲ್ಲಿದ್ದಾಗ ನಾವು ಭವಿಷ್ಯವನ್ನು ಕುರಿತು ಯೋಚ್ನೆ ಮಾಡ್ತೀವಿ, ಅದೆಷ್ಟು ಕನಸುಗಳನ್ನು ಹೆಣೀತೀವಿ… ಆದ್ರೆ ಮುಪ್ಪಿನಲ್ಲಿ ನೆನಪೊಂದೇ ಉಳಿಯೋದು… ಹಿಂದಾದುದನ್ನು ನೆನೆಸ್ಕೊಳ್ಳೋದು ಬಿಟ್ರೆ ಮತ್ತೇನು ಉಳಿದಿರತ್ತೆ?”
ಅವರ ಧ್ವನಿಯಲ್ಲಿ ವಿಷಾದಕ್ಕಿಂತ ವೇದಾಂತದ ಲೇಪನವಿತ್ತು.
ಏಕೋ ಇದ್ದಕ್ಕಿದ್ದ ಹಾಗೆ ಮನೆಯನ್ನು ಮೌನ ಆವರಿಸಿಕೊಂಡ ಹಾಗಾಗಿ ರಾಯರೇ ಆ ಮೌನವನ್ನು ಒಡೆದು-“ಅರೇ ಇವತ್ಯಾಕೋ ಅನಂತೂ ಬರ್ಲೇ ಇಲ್ಲ…! ಅವನು ಇವತ್ತು ಬಂದೇ ಬರ್ತಾನೆ ಅಂತ ನಿರೀಕ್ಷೆ ಮಾಡಿದ್ದೆ… ಬರ್ತಾನೆ ಅನ್ನಿಸಿತ್ತು”
ಎಂದವರೇ ಹೆಬ್ಬಾಗಿಲತ್ತ ನೋಡಿ, ಗೂಡಿನಲ್ಲಿ ಅವನಿಗಾಗೆಂದೇ ತೆಗೆದಿರಿಸಿದ್ದ ಜೋಡಿ ಪಂಚೆಯತ್ತ ದೃಷ್ಟಿ ಉಯ್ಯಾಲೆಯಾಡಿಸಿ-
“ನಾನಿನ್ನು ಮಲಗ್ತೀನಿ… ಅವನು ಬಂದ್ರೆ ಎಬ್ಬಿಸಿ” ಎನ್ನುತ್ತ ರಾಯರು ಮಲಗಲು ಹೊರಟರು.
ಉಳಿದವರು ಬಹಳ ಹೊತ್ತು ಉತ್ಸಾಹದಿಂದ ಹರಟುತ್ತಲೇ ಇದ್ದರು.
ರಾತ್ರಿ ಸುಮಾರು ಹನ್ನೊಂದೂವರೆಯಿರಬಹುದು. ನಡುಮನೆಯಲ್ಲಿ ನಡೆಯುತ್ತಿದ್ದ ಹರಟೆ-ನಗು-ಮಾತು ಕಥೆಗಳೆಲ್ಲ ಅವ್ಯಾಹತವಾಗಿ ಸಾಗಿಯೇ ಇತ್ತು.
ರಾಯರು ಕೊಠಡಿಯಿಂದಲೇ, “ಬಂದೇ… ಬಂದೆ ಕಣೋ” ಎಂದು ತುಸು ಜೋರಾಗಿಯೇ ಕೂಗಿದ್ದು ಕೇಳಿತು.
ಎಲ್ಲರೂ ಪರಸ್ಪರ ಮುಖ ನೋಡಿಕೊಂಡರು. ಬೆಳಗ್ಗಿಂದಲೂ ಅವರು ಈ ರೀತಿ ಉತ್ತರಿಸಿದ್ದು ಎಷ್ಟನೇ ಸಲವೋ. ಇದು ಅಭ್ಯಾಸವಾಗಿ ಹೋಗಿದ್ದ ಹೆಣ್ಣುಮಕ್ಕಳು ಮುಸಿಮುಸಿ ನಕ್ಕರು.
ಜಲಜಾ ಮೇಲೆದ್ದು ಹೋಗಿ ಕೊಠಡಿಯೊಳಗೆ ಬಗ್ಗಿ ನೋಡಿದಳು. ರಾಯರು ಸೊಂಪಾಗಿ ನಿದ್ರಿಸುತ್ತಿದ್ದರು.
ಅವಳ ಮುಖದಲ್ಲಿ ಹುಸಿನಗೆ ಮೂಡಿತ್ತು- “ಅಪ್ಪನಿಗೆ ಬೆಳಗ್ಗಿಂದ್ಲೂ ಇದೇ ಕನವರಿಕೆಯಾಗಿ ಹೋಯ್ತು… ಯಾರು ಬರ್ತಾರೆ ಇಷ್ಟು ಹೊತ್ನಲ್ಲಿ?!”
ಅವಳ ಮಾತು ಮುಗಿಯುವುದರಲ್ಲಿ ಥಟ್ಟನೆ ಕರೆಂಟ್ ಹೋಯ್ತು. ಜೋರಾಗಿ ಬೀಸುತ್ತಿದ್ದ ಗಾಳಿಗೆ ಕಿಟಕಿಯ ಬಾಗಿಲುಗಳು ಧಡಧಡನೆ ಬಡಿದುಕೊಂಡವು. ಎಲ್ಲರೂ ಒಂದು ಘಳಿಗೆ ಮೌನವಾದರು.
ಇದ್ದಕ್ಕಿದ್ದ ಹಾಗೆ ಕತ್ತಲಾವರಿಸಿದ್ದಕ್ಕೆ ಭೀತಿಗೊಂಡ ಜಾನಕಿ “ಅಯ್ಯೋ” ಎಂದು ಚೀರಿ ಲೊಚಗುಟ್ಟಿದಳು. ಅಷ್ಟರಲ್ಲಿ ತಟ್ಟನೆ ಕರೆಂಟ್ ಬಂದು ದೀಪಗಳೆಲ್ಲ ಹೊತ್ತಿಕೊಂಡವು.
“ಅಪ್ಪನಿಗೆ ಗಾಢನಿದ್ರೆ ಅಂತ ಕಾಣುತ್ತೆ” ಎಂದು ರಾಯರ ಕೊಠಡಿಯೊಳಗೆ ಹಣಕು ಹಾಕಿ ನೋಡಿದ ಕಮಲಾ ತಂದೆಯ ತಟಸ್ತ ಭಂಗಿಯನ್ನು ಕಂಡು, ಗಾಬರಿಯಿಂದ “ಅಪ್ಪಾ” ಎಂದು ಕಿರುಚಿಕೊಂಡಳು.
ಬೆಳಗಿನಿಂದ ನಿರೀಕ್ಷಿಸುತ್ತಿದ್ದ ಅತಿಥಿಯನ್ನು ರಾಯರು ಹಾರ್ದಿಕವಾಗಿ ಬರಮಾಡಿಕೊಂಡು ಅವರೊಡನೆ ಸಂತೃಪ್ತಿಯಿಂದ ನಿರ್ಗಮಿಸಿದ್ದರು.
2 comments
ಹುಟ್ಟು ಹಬ್ಬ ಕಥೆ ಸಹಜತೆಯಿಂದೊಡಗೂಡಿದೆ. ಸಾವಿಗೆ ಯಾವುದೇ ಭೇದಭಾವವಿಲ್ಲ ಎಂಬುದು ಒಂದೆಡೆಯಾದರೆ, ತುಂಬುಜೀವನ ನಡೆಸಿದ್ದ ರಾಯರಿಗೆ ತಮ್ಮ ಕರ್ತವ್ಯವನ್ನು ನಿಭಾಯಿಸಿದ ಸಂತೃಪ್ತಿ ಇದೆ. ಮಕ್ಕಳು, ಮೊಮ್ಮಕ್ಕಳ ಎದುರಿಗೇ ಜೀವ ತ್ಯಜಿಸಿದ ಪುಣ್ಯ ಅವರದು.
ಇನ್ನು ಸಾವು ಸಾಂಕೇತಿಕವಾಗಿ ಅವರನ್ನು ಎಚ್ಚರಿಸಿಯೂ ಇದೆ. ಗೆಳೆಯ ಬರುವೆನೆಂದವ ಬರಲಿಲ್ಲ.. ಆದರೂ ಯಾರೋ ಕರೆದಂತೆ ಭಾಸವಾಗಿದೆ… ದಿನದ ಕೊನೆಯಲ್ಲಿ ಕೂಡ ಹಾಗೇ ಆಗಿದ್ದು ಅವರು ಕೊನೆಯುಸಿರೆಳೆದಿದ್ದಾರೆ…
ಲೇಖಕಿಯ ಶೈಲಿ ಛಂದ. ಕಥೆಯ ಒಂದು ಎಳೆಯನ್ನು ಸುಂದರವಾಗಿ ಬಿಡಿಸಿದ್ದಾರೆ. ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲ. ಸರಳವಾದ ಕೌಟುಂಬಿಕ ಕಥೆ.
ಕಥೆ ನಿಮಗೆ ಮೆಚ್ಚುಗೆಯಾದುದಕ್ಕೆ ತುಂಬು ಮನದ ಧನ್ಯವಾದಗಳು ಗೆಳತಿ ಮಾಲತಿ ಅವರೇ. ನಿಮ್ಮ ವಿಮರ್ಶೆ ತೂಕವುಳ್ಳದ್ದಾಗಿದೆ. ಖುಷಿಯಾಯಿತು. ಬಿಡುವು ಮಾಡಿಕೊಂಡು ನೀವು ನನ್ನ ಎಲ್ಲ ಕಥೆಗಳ ಬಗ್ಗೆಯೂ ಎಫ್ ಬಿ ಯಲ್ಲಿ ಬರೆದರೆ ಉಳಿದವರೂ ನೋಡಿಯಾರು ಎಂದು ನನ್ನ ಆಶಯ. ವಂದನೆಗಳು.