Image default
Short Stories

ಮಾತನಾಡದ ತುಟಿಗಳು

ತುಂಡುಬಾಗಿಲ ಕೆಳಗೆ ಹಸಿರುಸೀರೆಯ ನೆರಿಗೆ ಕಂಡಾಗ ನನಗಾಗಿ ಯಾರೋ ಕಾಯುತ್ತಿದ್ದಾರೆ ಎನಿಸಿ, ಮುಂದಿದ್ದ ಬೆಲ್ಲನ್ನು ಒತ್ತಿದೆ. ಆಫೀಸ್ ಬಾಯ್ ಒಳಕ್ಕೆ ಬಂದ.

“ನಾನು ಆಗಿನಿಂದ ಫ್ರೀಯಾಗೇ ಇದ್ದೀನಿ, ಹೊರೆಗೆ ಯಾರೋ ಕಾಯ್ತಿರೋ ಹಾಗಿದೆ…ಒಳಗೆ ಕಳಿಸಬಾರದಿತ್ತೇ?” ಎಂದೆ, ದನಿಯಲ್ಲಿ ಸ್ವಲ್ಪ ಕೋಪ ತುಳುಕಿಸಿ. ಇಪ್ಪತ್ತು ನಿಮಿಷದಿಂದ ಯಾರೂ ವಿಸಿಟರ್ಸ್ ಇಲ್ಲ ಅಂದುಕೊಂಡು ಹಾಯಾಗಿ ಸಿಗರೇಟ್ ಸುಡುತ್ತಿದ್ದೆನಲ್ಲ…ಇವನು ತಿಳಿಸಿದ್ದರೆ ಹೊರೆಗೆ ಕಾಯುತ್ತಿರುವ ಎಲ್ಲರನ್ನೂ ಭೇಟಿ ಮಾಡಿ ಕಳುಹಿಸಬಹುದಿತ್ತು….ಪಾಪ, ಎಷ್ಟು ಜನರು ನಾಳೆ ಬರೋಣ ಅಂದುಕೊಂಡು ಹಿಂತಿರುಗಿದರೋ ಎನಿಸಿ ಆಫೀಸ್‍ಬಾಯ್ ಮೇಲೆ ಸಿಟ್ಟು ಸುರುಳಿಯಾಗಿ ಬಂತು.

ತುಂಡು ಬಾಗಿಲನ್ನು ಮೆಲ್ಲಗೆ ದೂಡಿ ಬಂದ ಆ ಹುಡುಗಿ “ನಮಸ್ಕಾರ ಸಾರ್” ಎಂದಳು ಮಿದುವಾಗಿ.

“ನಮಸ್ಕಾರ” ಎಂದವನ ದೃಷ್ಟಿ ಅವಳ ಬೆನ್ನ ಹಿಂದೆ ಕಚ್ಚಿಕೊಂಡಿತ್ತು.

ತುಂಡುಬಾಗಿಲ ಮಧ್ಯೆ ಶಿವತಾಂಡವ ನೃತ್ಯದಲ್ಲಿರುವಂತೆ ಮುದುಕರೊಬ್ಬರು ಕೈಗಳೆರಡನ್ನು ವಿಕಾರವಾಗಿ ಆಡಿಸುತ್ತ ಸೊಟ್ಟ ಕುಂಟುಹೆಜ್ಜೆ ಇಡುತ್ತ, ಮುಖದ ಒಂದು ಪಕ್ಕಕ್ಕೆ ಇಳಿಬಿದ್ದಿದ್ದ ಬಾಯನ್ನು ದನಿಯಿರದ ಮಾತುಗಳಲ್ಲಿ ಅಲುಗಿಸುತ್ತ ಮುಖದ ಮುಂದೆ ಕೈಗಳನ್ನು ಜೋಡಿಸಿದಾಗ ನನ್ನ ಮೈ ಒಂದು ಕ್ಷಣ ಮರಗಟ್ಟಿಹೋಯಿತು.

ಜೋಲಿ ಹೊಡೆಯುತ್ತಿದ್ದ ಮುದುಕರ ಬಳಿ ಧಡಾರನೆ ಧಾವಿಸಿ ಅವರನ್ನು ಹಿಡಿದುಕೊಂಡು, “ಮುದುಕರ ಕೈಯಲ್ಲಿ ನಡೆಯಕ್ಕಾಗಲ್ಲ ಅಂತ ಹೇಳಿದ್ರೆ ನಾನೇ ಅಲ್ಲಿ ಬಂದು ನೋಡ್ತಿರ್ಲಿಲ್ವೇ?” ಎಂದು ಆ ಹುಡುಗಿಯ ಕಡೆ ಹುಬ್ಬುಗೂಡಿಸಿದ ಆಕ್ಷೇಪಣೆ ನೋಟ ಬೀರಿ, ಮೆಲ್ಲನೆ ಮುದುಕರನ್ನು ವಿಸಿಟಿಂಗ್ ರೂಮಿನತ್ತ ನಡೆಸಿಕೊಂಡು ಹೋಗಿ ಸೋಫಾದ  ಮೇಲೆ  ಕೂಡಿಸಿದೆ.

ಹುಡುಗಿ ಕೈ ಜೋಡಿಸಿ ನಿಂತಿದ್ದಳು. ಹುಡುಗಿಯನ್ನೊಮ್ಮೆ ದಿಟ್ಟಿಸಿ ನೋಡಿ, ಮುದುಕರತ್ತ ನೋಟ ಹರಿಸಿದೆ. ಮುದುಕರ ಮುಖದ ಛಾಯೆ ಹುಡುಗಿಯಲ್ಲೂ ಪ್ರತಿರೂಪಗೊಂಡಿರುವುದರಿಂದ ಇವರು ತಂದೆ ಮಗಳಿರಬೇಕು ಎಂದು ಊಹಿಸಿದೆ. ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಆತನಿಗೆ ತುಂಬ ವಯಸ್ಸಾಗಿಲ್ಲ ಎನಿಸಿತು. ಬಕ್ಕ ತಲೆ, ಮುಖದ ತುಂಬ ಸುಕ್ಕಿನ ಗೆರೆಗಳು, ಬತ್ತಿಹೋದ ಕಣ್ಣುಗಳು, ಉದ್ದನೆಯ ಮೂಗು, ಸೊಟ್ಟಗಾದ ಬಾಯಿ, ತುಟಿಗಳು ಶಬ್ದ ಹೊರಡಿಸದೇ ಬರಿದೇ ಅಲುಗಾಡುತ್ತಿದ್ದವು. ಕೃಶವಾದ ಶರೀರದಿಂದ ಹೊರಬಿದ್ದ ಕೈಗಳೆರಡೂ ತಿರುಚಿಕೊಂಡು ನನ್ನ ಕಡೆ ಢಿಕ್ಕಿ ಹೊಡೆಯುತ್ತಿದ್ದವು. ಸೊಂಟದಡ್ಡಕ್ಕೆ ಸುತ್ತಿದ್ದ ಪಂಚೆ ಕಾವೀ ಬಣ್ಣಕ್ಕೆ ತಿರುಗಿತ್ತು. ಹರಕಲು ಷರಟು, ಕಣ್ಣಿನ ತುಂಬ ಹರಡಿ ನಿಂತಿದ್ದ ಯಾತನೆಯ ನೋಟ ನನ್ನೆದೆ ಇರಿಯಿತು. ನನ್ನರಿವಿಲ್ಲದೆ ನಿಟ್ಟುಸಿರು ಹೊರನುಗ್ಗಿ ಬಂದು, ಕುರ್ಚಿಯ ಬೆನ್ನಿಗೊರಗಿ ಕಣ್ಣು ಮುಚ್ಚಿದೆ.

ರೆಪ್ಪೆ ತಬ್ಬಿಕೊಂಡಿದ್ದರೂ ಒಳಗೆ ಅದೇ ಮುದುಕನ ವಿಕಾರ ಭಂಗಿ, ಯಾತನೆಯ ನೋಟ. ಸಂಜೆ ನನ್ನವಳಿಗೆ ಪ್ರಾಮಿಸ್ ಮಾಡಿದ ರೊಮ್ಯಾಂಟಿಕ್ ಫಿಲಮ್ಮು, ಅಶೋಕ ಹೋಟೆಲ್ಲು ಎಲ್ಲ ಮರೆತುಹೋದವು

 ಒಮ್ಮೆ ಕಣ್ತೆರೆದು ಎದುರಿಗಿದ್ದ ಅಸಹಾಯಕ ಮುಖ ನೋಡಿ ಫಕ್ಕನೆ ಮರಳಿ ಕಣ್ಣು ಮುಚ್ಚಿಕೊಂಡೆ. ದೇವರೇ ಎಂದೆಂದೂ ಈ ಕಣ್ಣು ಮತ್ತೆ ತೆರೆಯದೇ ಇರಲಿ ಎನ್ನಿಸಿಬಿಟ್ಟಿತು. ಕಣ್ಣುಬಿಟ್ಟರೆ ಪ್ರಪಂಚದ ವಿಕಾರವೆಲ್ಲ ಮುದ್ದೆಯಾಗಿ ಕುಳಿತಂತೆ ಅಸಹ್ಯ ರೂಪ. ಆದರೆ…ಎಷ್ಟು  ಹೊತ್ತು ನಾನು ಹೀಗೆಯೇ ಕುಳಿತೇನು ಎನಿಸಿತು.

ಇದ್ದಕ್ಕಿದ್ದ ಹಾಗೆ ಬುದ್ಧನ ಕತೆ ನೆನಪಾಯಿತು. ಸಿದ್ಧಾರ್ಥ ಜೀವನದ ಸಾವು-ನೋವುಗಳನ್ನು ಕಂಡು ಜೀವನ ವಿಮುಖನಾಗಿ ಬೋಧೀವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿದ್ದ. ನನ್ನ ಮನಸ್ಸು, ಸಿದ್ಧಾರ್ಥನ ಆಗಿನ ಮನಃಸ್ಥಿತಿಯಂತೆಯೇ ಆಗಿತ್ತು. ನನ್ನ ಡೈರೆಕ್ಟರ್ ಪದವಿ, ಹಣ, ಕಾರು, ಮನೆ, ಮಡದಿ, ಮಕ್ಕಳು, ಎಲ್ಲ ಅಧಿಕಾರ-ಸಂಪತ್ತೂ ಎತ್ತರೆತ್ತೆರಕ್ಕೆ ದೊಡ್ಡದಾಗಿ ತ್ರಿವಿಕ್ರಮನಂತೆ ದೈತ್ಯನಂತೆ ನನ್ನೆದುರು ಬೆಳೆದು ನಿಂತಾಗ ನಾನು ನಿಶ್ಚೇಷ್ಟಿತನಂತೆ ಬಿದ್ದೆ. ನಾಲಗೆ, ಗಂಟಲಲ್ಲಿ ಕಹಿರಸ ಉತ್ಪನ್ನವಾಗಿ, ಎದ್ದು ಹೋಗಿ ಉಗುಳಿ, ಬಾಯಿ ಮುಕ್ಕಳಿಸುವ ಎನಿಸಿದರೂ ಮೇಲೇಳದವನಾಗಿದ್ದೆ.

ಇನ್ನುಸ್ವಲ್ಪ ಹೊತ್ತು ನಾನು ಈ ಜುಗುಪ್ಸೆ ಸುರಿಸುವ ಮುದುಕನ ಎದುರಿಗೇ ನಿಂತಿದ್ದರೆ ಖಂಡಿತ ನಾನು ಈ ಪದವಿ, ಹೆಂಡ್ತಿ, ಮಕ್ಕಳು ಎಲ್ಲವನ್ನೂ ಮರೆತು ಜೀವನದ ಬಗ್ಗೆ ವೈರಾಗ್ಯ ತಾಳಿ ಸಿದ್ದಾರ್ಥನಂತೆ ಯಾವುದಾದರೂ ಮರ ಹುಡುಕಿಕೊಂಡು ಓಡಿಬಿಟ್ಟೇನು ಅನಿಸಿ, ಅವ್ಯಕ್ತ ಗಾಬರಿ, ಧಾವಂತ ಉಮ್ಮಳಿಸಿ ಬಂದು,  ಮೊದಲು ಈ ಮುದುಕನನ್ನು ನನ್ನ ಕಣ್ಣೆದುರಿನಿಂದ ತೊಲಗಿಸಬೇಕೆಂದು ನಿರ್ಧರಿಸಿ ಕಣ್ಣು ಬಿಚ್ಚಿದೆ.                                   

“ಏನು ಬೇಕಿತ್ತಮ್ಮ?…ಬೇಗ ಹೇಳು, ನಂಗೆ ಹೊತ್ತಾಯಿತು” ಎಂದೆ, ತಲೆ ಎತ್ತದೆಯೇ.

“ಸಾ…ರ್…ಸಾರ್…”

“ಹೇಳು ಪರವಾಗಿಲ್ಲ, ನನ್ನಿಂದ ಏನು ಸಹಾಯ ಆಗುತ್ತೋ ಅದನ್ನು ಮಾಡ್ತೀನಿ”

“ಸಾರ್…ಇವರು ನಮ್ಮ ತಂದೆ”

ನನ್ನ ದೃಷ್ಟಿ ಅಪ್ರಯತ್ನವಾಗಿ ಎದುರಿಗೆ ತೇಲಿ ಆತನ ಕಣ್ಣಿನಲ್ಲಿ ಸಂಗಮಗೊಂಡಿತು. ಮತ್ತೆ ಮೈ ತುಂಬ ಮುಳ್ಳುಗಳು! “ಹೂಂ…ಹೇಳು” ಎಂದೆ ಅವಸರವಾಗಿ.

“ಸಾರ್…ನಾವು ತುಂಬ ಬಡವರು”

ಆತನ ತುಟಿಗಳು ಮತ್ತೆ ಚಲಿಸಿ ವಿಚಿತ್ರ ಶಬ್ದಗಳನ್ನು ಹೊರಡಿಸಿ ಗೊರ ಗೊರ ಸದ್ದು ಮಾಡಿ,ತನ್ನ ಇಂಗಿತವನ್ನು ನನಗೆ  ತಲುಪಿಸುವಲ್ಲಿ ವಿಫಲವಾಗಿ ನನ್ನ ತಲೆಯನ್ನು  ಮತ್ತಷ್ಟು ಬಿಸಿ ಮಾಡಿತು.

“ನಮ್ಮ ತಂದೆಗೆ ಮೈ ಸರಿಯಾಗಿಲ್ಲ. ಬಾಯಿಗೆ ಲಕ್ವ ಹೊಡೆದಿದೆ. ಕೈಕಾಲುಗಳು ವಾಯುವಿನಿಂದ ಸೊಟ್ಟಗಾಗಿ ಊದಿಕೊಂಡಿವೆ. ಅಕ್ಕಂದಿರೆಲ್ಲ ಮದುವೆಯಾಗಿ ಹೊರಟುಹೋಗಿದ್ದಾರೆ. ಸಂಪಾದಿಸೋರೂ ಯಾರೂ ಇಲ್ಲ. ಇವರಿಗೆ ಔಷಧಿ ಕೂಡಿಸಕ್ಕೂ ಕೈಯಲ್ಲಿ ಒಂದು ಪೈಸಾ ಇಲ್ಲ…ದಯ ಮಾಡಿ ನಿಮ್ಮ ಕಂಪೆನಿಯಲ್ಲೊಂದು ನನಗೆ ಕೆಲಸ ಕೊಟ್ರೆ ಪುಣ್ಯ ಬರುತ್ತೆ ಸಾರ್”

ಅಸಹಾಯಕಳಾಗಿ ಮುಖದಲ್ಲಿ ದೈನ್ಯ ತುಂಬಿಕೊಂಡು ನಿಂತಿದ್ದ ಆ ಹುಡುಗಿಯನ್ನು ಕಂಡು ಕನಿಕರ ಉಕ್ಕಿಬಂತು. ಯಾವಾಗಲೂ ನನಗೆ ಹಾಗೆಯೇ. ಯಾರಾದರೂ ಕಷ್ಟದಲ್ಲಿದ್ದಾರೆ ಅಂದರೆ ನನ್ನ ಮನಸ್ಸು ದುರ್ಬಲಗೊಳ್ಳುತ್ತದೆ. ಕೈಲಾದ ಸಹಾಯ ಮಾಡುವ ಪರಿಪಾಠ. ಆದರೆ ಈಗ ಈ ಹುಡುಗಿ ಕೇಳ್ತಿರೋ ಸಹಾಯ ಮಾಡಲು ಅವಕಾಶವೇ ಇರಲಿಲ್ಲ. ನಮ್ಮ ಆಫೀಸಿನಲ್ಲಿ ಸದ್ಯ ಒಂದು ಕೆಲಸವೂ ಖಾಲಿ ಇರಲಿಲ್ಲ. ಹೋದ ತಿಂಗಳಷ್ಟೇ ನಮ್ಮ ಕಂಪೆನಿಗೆ ಗ್ಲಿಸರಿನ್ ಸಪ್ಲೈ ಮಾಡುತ್ತಿದ್ದ ವರದರಾಜುವಿನ ಕಡೆಯಿಂದ ಬಂದ ಹುಡುಗಿಗೆ ದಾಕ್ಷಿಣ್ಯದಿಂದ ಕೆಲಸ ಕೊಡಲೇಬೇಕಾಗಿ ಬಂದಿದ್ದರಿಂದ ತೊಗೊಂಡಾಗಿತ್ತು. ಅವಳೇ ಎಕ್ಸ್ಟ್ರಾ ಆಗಿರುವಾಗ ಈ  ಹುಡುಗೀನ ಹೇಗೆ ಸೇರಿಸಿಕೊಳ್ಳೋದು ಎಂಬ ಯೋಚನೆ ಕೊರೆಯಿತು. ಮನಸ್ಸು ಹೇಗಾದರೂ ಸಹಾಯ ಮಾಡಲೇಬೇಕು ಅಂತ ಹಟ ಹಿಡಿದಿತ್ತು.

“ಈಗ ಸದ್ಯಕ್ಕೆ ಯಾವ ಕೆಲ್ಸಾನೂ ಖಾಲಿ ಇಲ್ವಲ್ಲಮ್ಮ… ನಿನ್ನ ಅಡ್ರೆಸ್ ಕೊಟ್ಟಿರು ಖಾಲಿಯಾದಾಗ ತಿಳಿಸ್ತೀನಿ” ಎಂದು ಮಾಮೂಲಾಗಿ ಎಲ್ಲ ಅಭ್ಯರ್ಥಿಗಳಿಗೂ ಕಣ್ಣೊರೆಸುವ ಉತ್ತರ ಕೊಡುವಂತೆ ಕೊಟ್ಟು, ಜೇಬಿಗೆ ಕೈ ಹಾಕಿ ನೂರು   ರೂಪಾಯಿ ತೆಗೆದು ಅವಳ ಕೈಗಿಟ್ಟೆ. ಮುದುಕ ಅಳುಮೋರೆ ಮಾಡಿಕೊಂಡು ಹಾಗೇ ದೈನ್ಯವಾಗಿ ನನ್ನನ್ನು ದಿಟ್ಟಿಸುತ್ತಲೇ ಇದ್ದ. ಅವನ ಒಣಗಿದ ಕೈಕಾಲು ಚೂಪಾಗಿ ನನ್ನನ್ನು ತಿವಿಯುವಂತಿದ್ದವು.

“ನೋಡಮ್ಮ ಈ ಕಾಗದದ ಮೇಲೆ ನಿಮ್ಮ ತಂದೆಯ ಹೆಸರು , ವಯಸ್ಸು, ಖಾಯಿಲೆ ಎಲ್ಲ ಗುರುತು ಹಾಕ್ಕೊಡು. ನಮ್ಮ  ಕಂಪೆನಿಯವರು ಈ ಥರದ  ಕಷ್ಟಗಳ ಸಹಾಯಕ್ಕಾಗಿ ಸ್ವಲ್ಪ ಹಣ ಇಟ್ಟಿದ್ದಾರೆ. ಪ್ರತಿ ತಿಂಗಳೂ ಇವರ ಔಷಧಿ, ಹಣ್ಣಿಗಾಗಿ ಒಂದು ಸಾವಿರ ರೂಪಾಯಿ ಕೊಡಿಸಿಕೊಡ್ತೀನಿ… ನೀನು ಬಂದು ತೊಗೊಂಡ್ಹೋಗು. ಈ ಮುದುಕರನ್ನೇನು ಕರ್ಕೊಂಡು ಬರ್ಬೇಕಿಲ್ಲ…” ಎಂದವನು, ತತಕ್ಷಣ, “ಹಾ.. ಬರುವಾಗ ಹೇಗೆ ಬಂದ್ರಿ?” ಎಂದೆ.

ಹುಡುಗಿ, “ಮೆಲ್ಲಗೆ ಅವರನ್ನು ನಡೆಸ್ಕೊಂಡು ಬಂದೆ” ಎಂದು ಸಪ್ಪೆಯಾಗಿ ಉತ್ತರ ಕೊಟ್ಟಳು.

ನನ್ನ ಮೈ ಜುಂ ಎಂದಿತು. ಈ ಪ್ರಾಣಿ ಹೆಜ್ಜೆ ಹೇಗೆ ಇಟ್ಟಾನೆಂದು! ಈಗ ಆತ ನನ್ನೆದುರಿಗೆ ಕಷ್ಟದಿಂದ ಮೇಲೆದ್ದು ಕೈ, ಕಾಲುಗಳನ್ನು ತೂಗಿಸುತ್ತ ನಡೆಯುವುದನ್ನು ನೋಡಲಾರದೆ-

“ಬಾಮ್ಮ, ಹೇಗೂ ನಾನು ಮನೆಗೆ ಹೋಗೋ ಹೊತ್ತಾಗಿದೆ. ಕಾರಿನಲ್ಲೇ ಬಿಡ್ತೀನಿ” ಎಂದು ಮೇಲೆದ್ದು  ಆಫೀಸ್‍ಬಾಯ್  ಸಹಾಯದಿಂದ ಆತನನ್ನು ಕಾರಿನ ಹಿಂದಿನ ಸೀಟಿನಲ್ಲಿ ಕೂಡಿಸಿಕೊಂಡು ಹೊರಟೆ. ನಾನೇ ಡ್ರೈವ್ ಮಾಡಿ ಅಭ್ಯಾಸ, ಅದೇ ಹಿತವಾಗಿತ್ತು. ಆ ಹುಡುಗಿ ತೋರಿಸಿದ ಮಾರ್ಗದಲ್ಲೇ ಸುಮಾರು ಮೂರು ಮೈಲಿ ದಾಟಿ ಸಣ್ಣ ಸಂದಿಗೊಂದಿಗಳಲ್ಲಿ ಕಾರನ್ನು ನುಗ್ಗಿಸುವಾಗ ಅದಕ್ಕೆಲ್ಲಿ  ಜಖಂ ಆದೀತೋ ಎಂಬ ಆತಂಕದಿಂದ ಹುಷಾರಾಗಿ ಕಾರನ್ನು ನಡೆಸುತ್ತ ಸಣ್ಣ ಮನೆಯ ಬಾಗಿಲ ಮುಂದೆ ನಿಲ್ಲಿಸಿದೆ.

ಆತ ಜಾಗ ಖಾಲಿ ಮಾಡಿದಾಗ ನಿರಾಳ ಉಸಿರು ಚೆಲ್ಲಿ ಹುಡುಗಿಯತ್ತ ತಿರುಗಿ- “ಮುಂದಿನ ಸಲ ಬರುವಾಗ ಇವರನ್ನು ಕರೆತರಬೇಡ. ಅವರಿಗೆ ಕೈಲಾಗಲ್ಲ, ಸುಮ್ನೆ ತೊಂದ್ರೆ” ಎಂದೆ. ಹುಡುಗಿ ತಲೆಯಾಡಿಸಿದಳು. ಕಾರು ಭುರ್ರನೆ ಸಾಗಿತು.

ಮನೆಯಲ್ಲಿ ಅವಳು ನನ್ನ ದಾರಿಯನ್ನೇ ಕಾಯುತ್ತಿದ್ದಳು.  ಈ ದಿನ ಹೊರಗೆ ಹೋಗಲು ಮೂಡಿಲ್ಲವೆಂದು ಹೆಂಡತಿಗೆ ಹೇಳಿ, ಆ ತಂದೆ ಮಗಳ ವಿಷಯ ತಿಳಿಸಿದಾಗ ಅವಳು, “ಒಳ್ಳೇ ಕೆಲಸ ಮಾಡಿದಿರಿ ಬಿಡಿ… ಪಾಪ ಹೇಗೋ ಕಷ್ಟದಲ್ಲಿದ್ದವರಿಗಾದರೆ ಸಾಕು” ಎಂದಳು.

ಮೃದು ಹೃದಯದ ಅವಳ ಮನಸ್ಸನ್ನರಿತ ನಾನು ಮೆಚ್ಚುಗೆಯಿಂದ ಅವಳ ಬೆನ್ನು ಚಪ್ಪರಿಸಿದೆ.

ಪ್ರತಿದಿನ ನಗುಮುಖದಿಂದ ಬೀಳ್ಕೊಡುವ, ಸ್ವಾಗತಿಸುವ ನನ್ನವಳ ಸಹವಾಸದಿಂದ ತಿಂಗಳು ಉರುಳಿದ್ದೇ ತಿಳಿಯಲಿಲ್ಲ.

ಅಂದು ಕಾರನ್ನು ಪಾರ್ಕ್ ಮಾಡಿ ಮೆಟ್ಟಿಲು ಹತ್ತಿ ಬರುವಾಗ ವಿಸಿಟರ್ಸ್ ರೂಮಿನಲ್ಲಿ ಕುಳಿತಿದ್ದ ನನ್ನ ವೈರಾಗ್ಯ ಮೂಲದ ಮುದುಕ ಮೊದಲು ಕಣ್ಣಿಗೆ ಬಿದ್ದ. ನನ್ನ ಕೈಯಲ್ಲಿ ಆಡುತ್ತಿದ್ದ ಕಾರಿನ ಕೀ ಗೊಂಚಲು ತಟ್ಟನೆ ಕೆಳಬಿತ್ತು. ಹುಡುಗಿ ಕೈ ಮುಗಿದಳು. ನನ್ನ ಸಿಟ್ಟು ಭುಸುಗುಟ್ಟಿತು.

“ನಾನು ಅವತ್ತೇ ಹೇಳ್ಳಿಲ್ವೇನಮ್ಮ, ಮುಂದಿನ ಸಾರಿ ನಿಮ್ತಂದೇನಾ ಕರ್ಕೊಂಡು ಬರಬೇಡ ಅಂತ?…ನಾನೆಷ್ಟು ಅವರನ್ನು ನೋಡೋದು ತಪ್ಪಿಸ್ಕೋಣಾಂದ್ರೂ ಮತ್ತೆ ಮತ್ತೆ ನನ್ನೆದುರಿಗೆ ತಂದು ನಿಲ್ಲಿಸ್ತೀಯಾ. ನಿಂಗೇನು ಒಂದು ಸಲ ಹೇಳೋದರೆ ಗೊತ್ತಾಗಲ್ಲ” ಎಂದು ತುಸು ಜೋರಾಗೇ ಗದರಿದೆ. ಆದಷ್ಟು ಬೇಗ ಪೀಡೆಯನ್ನು ತೊಲಗಿಸೋಣವೆಂದು   ಕ್ಯಾಷಿಯರನನ್ನು ಕರೆದು ಆ ಹುಡುಗಿಗೆ ಸಂದಾಯವಾಗಬೇಕಿದ್ದ ದುಡ್ಡು ಕೊಡಲು ಹೇಳಿ ಜಾಗ ಖಾಲಿ ಮಾಡಿದೆ.

ಬಿಡುವಿನ ವೇಳೆಯಲ್ಲಿ ಹೊರಗೆ ಬಂದಾಗ ಅದೇ ದರಿದ್ರ ಮುಖ! ನನ್ನ ಮುಖ ಕೋಪದಿಂದ ಕುದಿಯಿತು. ಹುಡುಗಿಗಾಗಿ ದೃಷ್ಟಿ ತಡಕಾಡಿಸಿದೆ. ಅವಳು ನಾಪತ್ತೆ. ಆಫೀಸ್ ಬಾಯನ್ನು ಕರೆದೆ.

“ಸಾರ್, ನೀವು ಬೈದದ್ದಕ್ಕೆ ಆ ಹುಡ್ಗಿ ಕೋಪಿಸ್ಕೊಂಡು ದುಡ್ಡು ತೊಗೊಂಡು ಹೊರಟುಹೋದ್ಳು.” ಅಂದಾಗ, ಅವನತ್ತ ನೋಟು ಚಾಚಿ, “ಆತನನ್ನು ಮನೆಗೆ ತಲುಪಿಸಿ ಬಾ ಮತ್ತು ಆತನಿಗೆ ಮುಂದಿನ ಸಲ ಬರಕೂಡದು ಅಂತ  ಸ್ಟ್ರಿಕ್ ಆಗಿ ಹೇಳು” ಎಂದು ಜೋರಾಗಿ  ದನಿಯೇರಿಸಿ ನುಡಿದು, ಆ ವ್ಯಕ್ತಿಯ ಎದುರಲ್ಲಿ ನಿಂತು, “ಮುಂದಿನ ಸಲ ನೀವು ಬರಕೂಡದು” ಎಂದು ಗಡುಸಾಗಿ ಹೇಳಿದೆ.

ಇಷ್ಟಾದರೂ, ಯಥಾಪ್ರಕಾರ ಮುಂದಿನ ತಿಂಗಳು ಆತ ಹಾಜರ್-ಮಗನೊಂದಿಗೆ!

“ವಯಸ್ಸಾಗಿರೋದು ನಿಮಗೆ ದಂಡಕ್ಕೆ…ಬೇಕಂತ ಮಾಡ್ತೀರಾ? ಪ್ರತಿ ಸಲ ಕಾರಿನಲ್ಲೇ ಬಿಡ್ಲಿ ಅಂತಾನಾ?” ಎಂದು ಕೂಗಾಡಿ ಅವನ ಮುಂದೆ ಐವತ್ತು ರೂಪಾಯಿ ಬಿಸಾಡಿ ದಾಪುಗಾಲು ಹಾಕಿದೆ.

ಹತ್ತು ನಿಮಿಷದ ನಂತರ ಆಫೀಸ್ ಬಾಯ್ ಒಳಗೆ ಬಂದವನು, “ಸಾರ್…ಅವರಿಬ್ಬರೂ ನಡದೇ ಹೋಗ್ತಿದ್ದಾರೆ. ನೀವು ಆಟೋಗೆ ಕೊಟ್ಟ ದುಡ್ಡನ್ನು ಹಾಗೇ ಇಟ್ಕೊಂಡ ಆ ಹುಡುಗ” ಎಂದ.

“ಹಾಳಾಗಿ ಹೋಗಲಿ…ಆ ದರಿದ್ರದವರ ವಿಷಯ ನಂಗೆ ಬೇಡ” ಎಂದು ಬಡಿದುಕೊಳ್ಳುತ್ತಿದ್ದ ಫೋನನ್ನು ರಿಸೀವ್ ಮಾಡುವತ್ತ ಗಮನಹರಿಸಿದೆ.

ತಿಂಗಳು ಕಳೆದಿತ್ತು. ಆ ದಿನ ವಿಸಿಟರ್ಸನ್ನು ಮಾತನಾಡಿಸುತ್ತ ಕೂತಿದ್ದೆ. ಆ ಹುಡುಗ ತಟ್ಟನೆ ಒಳಗೆ ಬಂದ. ಅವನ ಹಿಂದೆ ನೋಡಿ, ನಾನು ಕುರ್ಚಿಯಿಂದ  ಹಾರಿ, “ಯೂ ಗೆಟ್ ಔಟ್” ಎಂದ ಅಬ್ಬರಿಸಿದೆ.

ಆತನನ್ನು ಕತ್ತು ಹಿಡಿದು ತಳ್ಳಿಸೋಣವೆನಿಸಿತ್ತು. ಹುಡುಗ ಪರಾರಿಯಾದ…ಆತನ ಕಣ್ಣಿಂದ ಝಿಲ್ಲನೆ ತಪತಪನೆ ನೀರು! ಮೂಕ ಹಸುವಿನ ನೋಟ! ನನ್ನ ಕೋಪ ಕರಗಿತು. ಆತನ ಕಣ್ಣಿನಿಂದ ನೀರು ಹರಿಯುತ್ತಲೇ ಇತ್ತು.

“ಏನಾಗಿದೆ ಹೇಳಿ? ಎಂದೆ ಉದ್ವಿಗ್ನನಾಗಿ. ಆತ ಮೂಕತುಟಿಗಳನ್ನು ಸುಮ್ಮನೆ ಆಡಿಸಿದ. ನನ್ನ ನರಗಳನ್ನುತಿರುಚಿ ಕಿತ್ತ ಹಾಗಾಯಿತು…ಮೂಕನೊಡನೆ ಹೇಗೆ ಸಂಭಾಷಿಸುವುದು? ಝಗ್ಗನೆ ಏನೋ ಹೊಳೆದು-“ನಿಮಗೆ ಓದು ಬರುತ್ಯೇ?” ಎಂದೆ. ತಲೆಯಾಡಿಸಿದರು. ಒಂದು ಪೇಪರ್ರು, ಪೆನ್ನು ತಳ್ಳಿದೆ. ಅದರಲ್ಲಿ ಅವರು ಮೂಡಿಸಿದ ವಿಚಿತ್ರ ಅಕ್ಷರಗಳು ಯಾವ ಭಾಷೆಯೋ ಅರ್ಥವಾಗಲಿಲ್ಲ. ನಾನು ಹತಾಶನಾಗಿ ಕುಳಿತೆ.

ಎರಡು ಮೂರು ತಿಂಗಳುಗಳು ಉರುಳಿದರೂ ಕಡ್ಡಿಯಾಗೇ ಇದ್ದ ಆತನ ಕೈಕಾಲುಗಳು, ಕಂಪೆನಿಯ ಹಣ ಅವರಿಗಾಗಿ ಉಪಯೋಗವಾಗುತ್ತಿಲ್ಲವೆಂಬುದನ್ನು ಸಾರಿ ಹೇಳಿತು. ಒಂದೇ ಸಮನೆ ಆತ ಹರಿಸುತ್ತಿದ್ದ ಕಣ್ಣ ಹನಿಯನ್ನು ಕಂಡು ನನಗೆ ಅವರ ಮನದುಮ್ಮಳ , ಸಮಸ್ಯೆ ಸ್ಪಷ್ಟವಾಗದೆ ತಾಳ್ಮೆ ತೆಳ್ಳಗಾಯಿತು.

“ಏನ್ತಾಗಿದೆ ನಿಮಗೇ? ನಾವು ಕೊಡ್ತಿರೋ ದುಡ್ಡಿಂದ ಔಷಧಿ-ಹಣ್ಣುಗಳನ್ನು ತೊಗೋತಿಲ್ವೇ?… ಯಾಕಿನ್ನೂ  ಹೀಗೆ ಒಣಕ್ಕೊಂಡಿದ್ದೀರಾ?”

ಆತ ಸುಮ್ಮನೆ ತಲೆಯಾಡಿಸಿ ಕೈ ಬೈರಳಿನಿಂದ ಏನೋ ಸನ್ನೆ ಮಾಡಿದರು. ಅದೇನೆಂದು ನನಗೆ ತಿಳಿಯಲಿಲ್ಲ.

“ಹಾಗಾದ್ರೆ ನಾವು ಕೊಟ್ಟ ದುಡ್ಡೆಲ್ಲ ಏನಾಗುತ್ತೆ?” ಈ ಬಾರಿ ನನ್ನ ದನಿ ಕರ್ಕಶವಾಗಿತ್ತು.

ಆತ ಹೆದರಿದಂತೆ ಕಂಡಿತು. ಮುಖ ಮುದ್ದೆ ಮಾಡಿಕೊಂಡು ಪಿಟಿಪಿಟಿಸಿದ.

“ನಿಮ್ಮ ಮಗ, ಮಗಳು ಬಂದು ದುಡ್ಡು ತೊಗೊಂಡ್ಹೋದ್ರಲ್ಲ, ನಿಮಗೆ ಕೊಡ್ಲಿಲ್ವಾ?’

 “ಇಲ್ಲ” ಎನ್ನುವಂತೆ ಆತ ತಲೆಯಾಡಿಸಿದಾಗ ನನಗೆ ಆಶ್ಚರ್ಯ ಬಡಿಯಿತು. ಸ್ವಂತ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೇ ಹೀಗೆ ಮೋಸ ಮಾಡುತ್ತಾರೆಯೇ? ಹಾಗಾದರೆ ಪ್ರತಿ ತಿಂಗಳು ತಮ್ಮ ಆಫೀಸಿನಿಂದ ಸಂದಾಯವಾಗುತ್ತಿರುವ ಹಣ ಹೀಗೆ ವ್ಯರ್ಥ ಪೋಲಾಗುತ್ತಿದೆಯೇ?!!

ಯೋಚನೆಗಳ ಗುಯ್ಗುಡುವಿಕೆಯಲ್ಲಿ ನನ್ನ ಮೆದುಳು ಒಂದು ನಿಮಿಷ ಗಿರಗಿಟಲೆಯಾಡಿತು. ಇನ್ನೂ ಅದೇ ತಾನೇ ತಾರುಣ್ಯದ ಹೊಸಿಲಿನಲ್ಲಿದ್ದ ಹುಡುಗಿಯ ಮುಖ, ಚಡ್ಡಿ ಧರಿಸಿ ಬರುತ್ತಿದ್ದ ಮುಗ್ಧ ಹುಡುಗನ ಮುಖ ಈ ಕಲ್ಪನೆಯನ್ನು ಜಾಳುಜಾಳಾಗಿಸಿದವು.

ಸರ್ರನೆ ಆತನ ಮುಖ ನೋಡಿದೆ. ಮೂಳೆಯ ಹಂದರವಾಗಿದ್ದ ಆತ ಸುಳ್ಳನಂತೆ ಕಾಣಬರಲಿಲ್ಲ. ಸ್ವಲ್ಪ ಹೊತ್ತಿನ ಮುನ್ನ ಆತನೊಡನೆ ಸಣ್ಣತನದಿಂದ ವರ್ತಿಸಿದ್ದಕ್ಕೆ ಪಶ್ಚಾತ್ತಾಪವಾಯಿತು. ತಾನು ಎಷ್ಟು ಹೇಳಿದರೂ ಪ್ರತಿಬಾರಿಯೂ ಆತ ಬರುತ್ತಲೇ ಇರುವನಲ್ಲ. ಆತನ ಆಲೋಚನೆಯ ದಿಕ್ಕನ್ನು ಕುರಿತು ಯೋಚಿಸಿದೆ. ತಾನು ಬರದೇ ಇದ್ದರೆ ದುಡ್ಡು ಸಿಗುವುದಿಲ್ಲವೆಂಬ ಆತಂಕಕ್ಕೆ ಆತ ತಾನೇ ಬಂದು ಇಸಿದುಕೊಂಡು ಹೋಗುತ್ತಿರಬಹುದೇ? ಆದರೂ ಹಣ ಅವನ ಕೈಗೆ ಔಷಧಿಯಾಗಿ ದಕ್ಕುತ್ತಿಲ್ಲ. ವ್ಯರ್ಥ ಪ್ರಯತ್ನವೆಂದು ಗೊತ್ತಿದ್ದರೂ ಈ ಸಲವಾದರೂ ದುಡ್ಡು ಸಿಗಬಹುದೆಂಬ ಆಶಾಕಿರಣ ಹೊತ್ತು ಬರುತ್ತಿದ್ದನಾತ ಎಂದು ಗೊತ್ತಾಯಿತು. ಈ ಬಾರಿಯಾದರೂ ಮಕ್ಕಳ ವಂಚನೆ ಬೆಳಕಿಗೆ ಬಂತಲ್ಲ ಎಂಬ ಅವ್ಯಕ್ತ ಸಮಾಧಾನ ನನಗೆ .

ಒಂದೇಸಮನೆ ಅಳುತ್ತಿದ್ದ  ಆತನನ್ನು ಸಮಾಧಾನಪಡಿಸುವ ಬಗೆ ತಿಳಿಯದೆ ತಲೆ ಬಗ್ಗಿಸಿ ಯೋಚಿಸುತ್ತಿರುವನಂತೆ ನಟಿಸಿದೆ. ಈಗ ನನ್ನ ಸಮಸ್ಯೆ ಅಂದರೆ, ಈತನಿಗೆ ದುಡ್ಡು ನೇರವಾಗಿ ತಲಪುವಂತೆ ಮಾಡುವುದು ಹೇಗೆಂಬುದು. ನಾವೇ ಆ ದುಡ್ಡಿಗೆ ಹಣ್ಣು, ಔಷಧಿ ಟಾನಿಕ್ಕು ತಂದುಕೊಡೋಣವೆಂದರೆ ಅದಕ್ಕೊಬ್ಬ ಆಳು ಇಡಬೇಕಾಗುತ್ತೆ. ಇದೆಲ್ಲ ಕಂಪೆನಿಯ ವ್ಯವಹಾರದ ಮಿತಿ ಮೀರಿದ್ದು. ಈಗಲೇ ಗುಡ್ಡೆ ಕೆಲಸ ಬಿದ್ದಿರುವಾಗ ಯಾರು ಹೊಸ ಚಿಂತೆ ಹಚ್ಚಿಕೊಳ್ಳುವರೆಂದು ಆ ವಿಷಯ ಬಿಟ್ಟೆ. ಇನ್ಯಾರಾದಾರೂ ಈತನಿಗೆ ನಂಬಿಕಸ್ಥರು ಇದ್ದರೆ ಅವರಿಗೆ ತಲಪಿಸಬಹುದೆಂದುಕೊಂಡು ಆತನತ್ತ ತಿರುಗಿದೆ.

“ಮಗ, ಮಗಳನ್ನು ಬಿಟ್ರೆ ನಿಮಗೆ ನಂಬಿಕೆಯಾಗಿರೋ ಬೇರೆ ಯಾರಾದ್ರೂ ಇದ್ದಾರೆಯೇ?”

ಆತ ಮೆಲ್ಲಗೆ ಪೇಪರಿನ ಮೇಲೆ ಏನೋ ಕೊರೆದ. ನೋಡಿದೆ. ‘ಹೆಂಡತಿ’ ಎಂದಿತ್ತು.

ಅಯ್ಯೋ, ನನಗಿದು ಮೊದಲೇ ಯಾಕೆ ಹೊಳೀಲಿಲ್ಲ? ಎಂದುಕೊಂಡೆ. ‘ಹೆಂಡತಿ’ ಎಂಬ ಮೂರಕ್ಷರ ನೆನಪಿಗೆ ಬಂದೊಡನೆ ನನ್ನವಳು ಮನದೊಳಗೆ ಅವತರಿಸಿದಳು. ಬೆಳಿಗ್ಗೆ ನಾನು ಆಫೀಸಿಗೆ ಹೊರಡುವವರೆಗೂ ನನ್ನ ಹಿಂದೆ ಮುಂದೆಯೇ ಸುತ್ತಾಡುತ್ತ, ಕಾಫಿ, ತಿಂಡಿ ಎದುರಿಗೆ ಇಟ್ಟು, ಕೈಯಲ್ಲಿ ಕೋಟು ಹಿಡಿದು ಸಿದ್ಧವಾಗಿ ನಿಂತು ಕಾರು ಮರೆಯಾಗುವವರೆಗೂ ಬಾಗಿಲಲ್ಲೇ ನಿಂತು ನಿಟ್ಟಿಸುವಾಕೆ. ಸಂಜೆ ಮತ್ತೆ ನನ್ನ ಒಡನಾಟಕ್ಕಾಗಿ ಹಂಬಲಿಸುವವಳು. ಸೀತೆ, ದ್ರೌಪದಿ, ತಾರಾ, ಮಂಡೋದರಿ…ಶ್ರೇಷ್ಠ ಪತಿವ್ರತೆಯರ ಸಾಲೇ ನೆನಪನ್ನು ಗುದ್ದಿತು. ನಿಜವಾಗ್ಲೂ ಗಂಡಸಿಗೆ ಮಕ್ಕಳಿಗಿಂತ ಜೀವನಪೂರ ಕಷ್ಟ ಸುಖದಲ್ಲಿ ಬಾಗಿಯಾಗುವ ಆತ್ಮೀಯ ಜೀವವೆಂದರೆ ಅದು ಹೆಂಡತಿಯೊಂದೇ ಎಂಬ ನಗ್ನ ಸತ್ಯ ಢಾಳಾಗಿ ಹೊಳೆಯಿತು.

ಆತನ ಕೆಮ್ಮಿನ ಸದ್ದಿನಿಂದ ಎಚ್ಚೆತ್ತೆ. ಸದ್ಯ ಈತನಿಗೆ ನಂಬಿಕೆಯಾದ ಪ್ರಾಣಿ ಒಂದಾದರೂ ಇದೆಯಲ್ಲ ಎಂದು ನಿರಾಳ ಉಸಿರು ಎಸೆದು, “ಸರಿ, ಮುಂದಿನ ತಿಂಗಳಿನಿಂದ ನಿಮ್ಮ ಹೆಂಡ್ತೀನ ಕಳ್ಸಿ…ನೀವು ಬರ್ಬೇಡಿ. ನನ್ನ ಪರ್ಸನಲ್ ಕಾಣಿಕೆ ಐದುನೂರು ರೂಪಾಯಿ ಸೇರಿಸಿ ಕೊಡ್ತೀನಿ” ಎಂದು ಆತನನ್ನು ಆಫೀಸ್ ಬಾಯ್ ಜೊತೆ ಮಾಡಿ ಮನೆಗೆ ಕಳುಹಿಸಿಕೊಟ್ಟೆ.

                                                      *    *     *

ಬೆಳಗ್ಗೆ ಎದ್ದು, ಕಾಫೀ ಕುಡಿದು ಬ್ರಷ್ ಹಿಡಿದು ಬಚ್ಚಲು ಮನೆಗೆ ಹೋಗುವ ಮುನ್ನ ಪೇಪರ್ ಓದಿದರೆ ಸಮಾಧಾನ. ಟೀಪಾಯಿಯ ಮೇಲೆ ಇಂದಿನ ಪೇಪರ್ ಕಾಣಿಸಿತು. ಮುಖಪುಟದಲ್ಲಿ ದೊಡ್ಡ ಪೋಟೋ ಅಚ್ಚಾಗಿತ್ತು. ಸರ್ರನೆ ಪೇಪರ್ ಕೈಗೆ ತೆಗೆದುಕೊಂಡೆ. ಭಾರಿ ಕಳ್ಳ ಸಾಗಾಣಿಕೆದಾರರನ್ನು ಹಿಡಿದು ಹಾಕಿದ ಸುದ್ದಿ. ಇವತ್ತು ಎಲ್ಲ ನ್ಯೂಸ್ ಕಾಲಂಗಳಲ್ಲೂ ಕಳ್ಳ ಸಾಗಾಣಿಕೆದಾರರದೇ ದಶಾವತಾರ. ಆಸಕ್ತಿ ಕುದುರಿತು. ಪಾತಾಳಗರಡಿ ಹಾಕಿ ಭ್ರಷ್ಟಾಚಾರ, ರಾಜಕೀಯ ಗುಪ್ತ ಸಂಬಂಧ, ಸಮಾಚಾರಗಳನ್ನೆಲ್ಲ ತನಿಖಾ ವರದಿಗಾರರು ಹೊರಗೆಳೆದು ಹಾಕಿದ್ದರು. ಓದುತ್ತ ಹೋದ ಹಾಗೆ ಅದರ ಒಳಪದರಗಳೆಲ್ಲ ಬಿಚ್ಚಿಕೊಳ್ಳುತ್ತ ಹೋಯಿತು. ಜುಗುಪ್ಸೆ ಒಸರಿತು… “ಛೇ” ಎಂದುಕೊಂಡು ನಿಟ್ಟುಸಿರುಬಿಟ್ಟೆ.

ಭ್ರಷ್ಟ ವ್ಯವಸ್ಥೆಯ ಜಾಲ, ರಾಜಕಾರಣಿಗಳ ಐಶಾರಾಮಿ ಜೀವನ, ಮೌಲ್ಯಗಳನ್ನೇ ಮರೆತ ದೊಡ್ದಮಂದಿಯ ಕಪ್ಪುಹಣದ ದಂಧೆ, ರೈಡ್ ಗಳ ಬಗ್ಗೆ ಓದುತ್ತ ಮನಸ್ಸು ವಾಕರಿಸಿತ್ತು…..  ನಿಜವಾಗ್ಲೂ ಇವರೆಲ್ಲ ಭೂಲೋಕದ ಇಂದ್ರರೇ. ರಂಭೆ, ಊರ್ವಶಿ, ಕಲ್ಪವೃಕ್ಷ, ಅಮೃತ ಯಾವುದಕ್ಕೆ ಕಡಮೆ ಇದೆ ಅಂದುಕೊಂಡೆ. ಪುಟ ತಿರುವಿದರೆ, ಇನ್ನೊಂದು ಪುಟದಲ್ಲಿ ಆಧಾರ್ ಕಾರ್ಡ್ ಮಾಡಿಸಲು ದೊಡ್ಡ ಕ್ಯೂ. ಅದರ ಕೆಳಗೆ ಕಣ್ಣೋಡಿಸಿದೆ. ‘ ಅನಾಮತ್ತು ಬೆಲೆ ಏರಿಕೆ, ಅಗತ್ಯ ವಸ್ತುಗಳ ಅಭಾವ, ಪರದಾಟ.’… ಇದ್ದಕ್ಕಿದ್ದ ಹಾಗೆ ಮಾಯವಾಗಿಬಿಡುವ ಪದಾರ್ಥಗಳ ಮಧ್ಯವರ್ತಿಗಳ ಹಾವಳಿಯ ಬಗ್ಗೆ, ಹೀಗೆ ಏನೇನೋ ಸಮಸ್ಯೆಗಳು… ಆಲೋಚನೆಗಳು ಕೊಂಡಿ ಕೊಂಡಿಯಾದವು. 

ಯೋಚಿಸುತ್ತ ಹೋದಂತೆ ನಾಶವಾಗುತ್ತಿರುವ ಜೀವನ ಮೌಲ್ಯಗಳು, ಸತ್ಯ, ಧರ್ಮ, ನ್ಯಾಯ, ಕರ್ತವ್ಯ, ಪ್ರಾಮಾಣಿಕತೆಗಳು ದಿನೇ ದಿನೇ ನಶಿಸುತ್ತಿರುವ ಬಗ್ಗೆ ಹೃದಯ ವಿಲಪಿಸಿತು. ಫಕ್ಕನೆ ಲಕ್ವ ಹೊಡೆದ ಆತ, ಆತನ ಮಕ್ಕಳು ನೆನಪಿಗೆ ಬಂದರು. ಪ್ರಾಮಾಣಿಕತೆ ಅನ್ನುವುದು ಎಲ್ಲಕ್ಕಿಂತ ಮೊದಲು ಸೋರಿಹೋಗುತ್ತಿರುವ ವಸ್ತು ಅಂದುಕೊಂಡೆ.

ಬೇಸಿಗೆ ಮಧ್ಯಾಹ್ನದ ಉರಿಬಿಸಿಲು ತಾಳಲಾರದೆ ಫ್ಲಾಸ್ಕಿನಲ್ಲಿಟ್ಟಿದ್ದ ಐಸ್ ತುಂಡುಗಳನ್ನು ನೀರಿಗೆ ಹಾಕಿಕೊಂಡು ಗಟಗಟನೆ ಕುಡಿದೆ. ಕಾಲನ್ನು ನಿಡಿದಾಗಿ ಚಾಚಿ ತುಟಿಗಳ ನಡುವೆ ಸಿಗರೇಟು ಚುಚ್ಚಿ ಲೈಟರನ್ನು ತಗುಲಿಸಿ ಒಂದು ದಮ್ಮು ಎಳೆದಿದ್ದೆ. ಅಷ್ಟರಲ್ಲಿ ತುಂಡುಬಾಗಿಲಿನ ಹಿಂದೆ ಹಸಿರುಸೀರೆಯ ನೆರಿಗೆ ಗೊಂಚಲು ನೆನಪು ಕೆರೆಯಿತು.

ನಾಲ್ಕಾರು ತಿಂಗಳುಗಳ ಹಿಂದಕ್ಕೆ ಮನಸ್ಸು ಓಡಿತು. ಅಂದು ಕೋಪಿಸಿಕೊಂಡು ಹೋದ ಹುಡುಗಿ ಇಂದು ಮತ್ತೆ ಬಂದಿದ್ದಾಳೆ. ಈಗ ಕರೆದು ದಬಾಯಿಸುವ ಆಸೆಯಾಯಿತು. ಬಾಗಿಲ ಕೆಳಗೆ ದೃಷ್ಟಿ ತೂರಿಸಿದೆ. ಕಾಲಿನ ಎರಡನೇ ಬೆರಳಲ್ಲಿದ್ದ ಕಾಲುಂಗರ ಹುಬ್ಬುಗಳನ್ನು ಗಂಟು ಹಾಕಿಸಿತು.

ಯೋಚಿಸುತ್ತಿರುವಷ್ಟರಲ್ಲಿ ಬಾಗಿಲು ತೆರೆಯಿತು. ಮಧ್ಯ ವಯಸ್ಸು ದಾಟಿದ ದೊಡ್ಡ ಕುಂಕುಮದ ಮುತ್ತೈದೆ!  ಆತನ ಹೆಸರು ಹೇಳಿ ತಾನು ಆತನ ಪತ್ನಿ ಎಂದು ತಿಳಿಸಿದಳು. ಲಕ್ಷಣವಾದ ಹೆಂಗಸು. ಆ ವಿಶಾಲವಾದ ಹಣೆಗೆ ದೊಡ್ಡ ಕುಂಕುಮ ಶೋಭೆ ನೀಡಿತ್ತು. ಹಸಿರು ಬಳೆಗಳ ಗುಂಪು ದನಿ ಮಾಡುತ್ತಿತ್ತು. 

ಒಂದು ಕ್ಷಣ ಆಕೆಯ ಹಣೆ ಬಯಲಾಗಿ ಕಾಲ ಬೆರಳುಗಳು ಬೋಳಾದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡೆ. ಒಡನೆಯೇ, ಛೆ…ಎಂದು ನನ್ನ ಹೀನ ಆಲೋಚನೆಗೆ ಹೇಸಿ, ನಾನೇಕೆ ಹೀಗಾದೆ ಎಂದು ಅಚ್ಚರಿಗೊಂಡೆ. ಆಕೆ ನೂರು ಕಾಲ ಮುತ್ತೈದೆಯಾಗಿರಲಿ, ನನಗಾದ ನಷ್ಟವೇನು? ನಮ್ಮ ಕಂಪೆನಿಗೆ ಕೇವಲ ಸಾವಿರ ರೂಪಾಯಿ ಯಾವ ಲೆಕ್ಕ ಎಂದುಕೊಂಡವನು ತಡೆಮಾಡದೆ ಆಕೆಯನ್ನು ಗುಮಾಸ್ತೆಯ ಬಳಿ ಕಳುಹಿಸಿದೆ. ಎಷ್ಟೋ ಹೊತ್ತು ನನ್ನ ಮನಸ್ಸು ಆಕೆಯ, ಅವಳ ಮಕ್ಕಳ ಭವಿಷ್ಯ ಕುರಿತು ಚಿಂತಿಸುತ್ತಿತ್ತು.

ಪ್ರತಿ ತಿಂಗಳ ಮೊದಲ ವಾರದಲ್ಲಿ ನನಗೆ ತುಂಡು ಬಾಗಿಲ ಕೆಳಗೆ ಆ ಕಾಲುಂಗುರದ ಕಾಲು ಕಾಣುತ್ತದೆ. ಒಳಗೆ ಬಂದೊಡನೆ ದುಂಡು ಕುಂಕುಮದ ಮುಖ. ಮೊದಲೆರಡು ತಿಂಗಳು, “ಹೇಗಿದ್ದಾರೆ ನಿಮ್ಮ ಯಜಮಾನರು?” ಎಂದು ವಿಚಾರಿಸುತ್ತಿದ್ದೆ. ಈ ನಡುವೆ ನನ್ನ ಕೆಲಸದ ಭರಾಟೆಯಲ್ಲಿ ಅದೂ ಬಿಟ್ಟಿದ್ದೆ.

ಈಚೆಗೆ ಒಂದೆರಡು ವರ್ಷಗಳಿಂದ ಇನ್ನೂ ಕೆಲವು ಬಡರೋಗಿಗಳಿಗೆ, ಔಷಧಿ-ಚಿಕಿತ್ಸೆಗೆ ನೆರವು ನೀಡುವ ಯೋಜನೆಯನ್ನು ವಿಸ್ತರಿಸಿದ್ದೆ. ದಿನಗಳೆದಂತೆ ನಮ್ಮಲ್ಲಿ ಬರುವ ಜನರು ಹೆಚ್ಚಾದರೂ ನನಗೇಕೋ ನಾನಂದು ಕಂಡ ಆ ಮುದುಕನ ನೆನಪೇ ಒತ್ತರಿಸಿ ಬರುತ್ತಿತ್ತು. ಈಗಾಗಲೇ ನಾನು ಆತನಿಗೆ ಸಹಾಯ ಮಾಡಲಾರಂಭಿಸಿ ಎರಡು ಮೂರು ವರ್ಷಗಳೇ ಕಳೆದಿರಬೇಕು. ಆ ಮುತ್ತೈದೆ ಪ್ರತಿ ಬಾರಿ ಬಂದು ನನ್ನ ಎದುರಿಗೆ ನಿಲ್ಲುವಾಗ ನನ್ನ ಕಣ್ಣು ಆಕೆಯ ಹಣೆ ನೋಡಿ ಅವ್ಯಕ್ತ ಸಮಾಧಾನ ತಾಳುತ್ತೇನೆ. ಪರವಾಗಿಲ್ಲ ನಾನು ಮಾಡುತ್ತಿರುವ ಉಪಕಾರ ಸಾರ್ಥಕವಾಗುತ್ತಿದೆಯೆಂಬ ತೃಪ್ತಭಾವ.

ಒಂದು ಸಂಜೆ- ಕಾರು ತೆಗೆದು ರಸ್ತೆಯ ಮೇಲೆ ಭುರ್ರನೆ ಓಡಿಸುವಾಗ ಇದ್ದಕ್ಕಿದ್ದ ಹಾಗೆ ಆತನ ನೆನಪಾಯಿತು. ಆತನನ್ನು ನೋಡಬೇಕೆನಿಸಿತು. ಈಗ ಕೊಂಚ ಮೈಕೈ ತುಂಬಿಕೊಂಡಿರಬಹುದೇ?…ಆತನ ಆರೋಗ್ಯ ಸುಧಾರಿಸಿದ್ದರೆ ಅಷ್ಟೇ ಸಾಕು…ದೇವರು ಆ ಕುಟುಂಬವನ್ನು ಚೆನ್ನಾಗಿಟ್ಟಿರಲಿ ಎಂದು ಹಾರೈಸುತ್ತ,  ಹಿಂದೆ ಆ ಹುಡುಗಿ ತೋರಿಸಿದ್ದ  ಬೀದಿಗಳನ್ನು ಜ್ಞಾಪಿಸಿಕೊಂಡು ಕಾರನ್ನು ಆತ್ತ ನಡೆಸುತ್ತ, ಸ್ವಲ್ಪ ದೂರ ಹೋಗಿ ಸಣ್ಣ ಮನೆಯ ಬಾಗಿಲ ಮುಂದೆ ನಿಲ್ಲಿಸಿದೆ. ಬಾಗಿಲು ಮುಚ್ಚಿತ್ತು. ಕಾರಿನಿಂದಿಳಿದು ಕಾರನ್ನು ಒರಗಿ ಸುಮ್ಮನೆ ನಿಂತುಕೊಂಡೆ. ಪಕ್ಕದ ಮನೆಯಾಕೆ ಹೊರಗೆ ಹಣಕು ಹಾಕಿ ನೋಡಿದಳು.

“ಈಗ ಹ್ಯಾಗಿದ್ದಾರೆ ಆ ಮುದುಕರು?” ಎಂದು ಕೇಳಿದೆ.

“ಅಯ್ಯೋ ಅವರು ಹೋಗಾಗಲೇ ವರ್ಷದ ಮೇಲಾಯ್ತಲ್ಲ!” ಎಂದು ಆಕೆ ಅನ್ನುವುದಕ್ಕೂ ಎದುರಿನ ಬಾಗಿಲು ತೆರೆದು ಮುದುಕನ ಆ ಮುತ್ತೈದೆ ವಿಧವೆಯ ವೇಷದಲ್ಲಿ ಹೊರೆಗೆ ಬರುವುದಕ್ಕೂ ಸರಿಯಾಯಿತು.

 ಆತ ನಂಬಿದ್ದ ಪ್ರಾಮಾಣಿಕ ಪತ್ನಿಯ ಮುಖ ನೋಡಿ ದಂಗಾಗಿ  ನಿಂತೆ! ಲಕ್ಷಣವಾದ ಮುಖದಲ್ಲಿ ತುಂಬು ಚಂದಿರನಂತಿದ್ದ ಕೆಂಪು ಕುಂಕುಮ ಮಾಯವಾಗಿ ಬಟಾ ಬಯಲಾಗಿದ್ದ ವಿಶಾಲ ಹಣೆ ಬಿಕೋ ಎನ್ನುತ್ತಿತ್ತು. ಎದೆ ಝಲ್ಲೆಂದಿತು!..

ಅರ್ಧಾಂಗಿ ಎನಿಸಿಕೊಂಡವಳೂ ಕೂಡ ಹಣಕ್ಕಾಗಿ ಹೀಗೆ ನಾಟಕವಾಡಬಹುದೇ? ಮನಸ್ಸು ಗೊಂದಲದ ಗೂಡಾಯಿತು. ಅಚ್ಚರಿ ತುಳುಕಿಸುತ್ತ ನಿಧಾನವಾಗಿ ಕಾರಿನ ಬಾಗಿಲು ತೆಗೆದು ಒಳಗೆ ಕುಳಿತು ಸ್ಟಾರ್ಟ್ ಮಾಡಿದೆ. ತಿಂಗಳ ಮೊದಲ ವಾರದ ಮುತ್ತೈದೆ ನನ್ನನ್ನು ಕಂಡವಳೇ ತನ್ನ ಗುಟ್ಟು ಬಯಲಾಗಿದ್ದಕ್ಕೆ ನಾಚಿ ಒಳಗೆ ಓಡಿದಳು. ಆ ನಿಮಿಷಕ್ಕೆ ನನಗೆ ಅವಳ ಮೇಲೆ ಅಸಾಧ್ಯ ಸಿಟ್ಟು ಉಕ್ಕೇರಿತು.

ಕಾರಿನ ವೇಗ ಹೆಚ್ಚಾಗಿ ರಸ್ತೆಯ ಮೇಲೆ ಆಗಾಗ ನಿಗಾ ತಪ್ಪುತ್ತಿತ್ತು. ಎಂಥಾ ನಾಚಿಕೆಗೆಟ್ಟ ಹೆಂಗಸು! ವೇಷ ಕಟ್ಟಿ ಮೋಸ ಮಾಡಿ ಇದುವರೆಗೂ ನಮ್ಮ ಕಂಪೆನಿಯ ಹಣವನ್ನು ತಿನ್ನುತ್ತಿದ್ದಳಲ್ಲ…ಅಬ್ಬಾ.. ಈ ಲೋಕದಲ್ಲಿ ಎಂತೆಂಥ ಜನಗಳು ಇರುತ್ತಾರೆ!..ಅವಳೇನಾದರೂ ಎದುರಿಗೆ ಬಂದರೆ ನಾಲ್ಕು ಕಪಾಳಕ್ಕೆ ತೀಡಿ ಮುಖ ಮುರಿಯುವಷ್ಟು ಕೋಪ ಏರಿತ್ತು.

ಮೊದಲ ದಿನ ನಾನಾತನನ್ನು ಕಂಡಾಗ ಆತ ನಿಂತಿದ್ದ ಕರುಣಾಜನಕ ಭಂಗಿ ಕಣ್ಣೆದುರಿಗೆ ಕುಣಿಯುತಿತ್ತು. ಅವನ ಸುತ್ತಲೂ ಕರುಣೆಯಿರದ ಅವನ ಸಂಸಾರದ ಹೆಂಡತಿ-ಮಕ್ಕಳ ಚಿತ್ರ ಕಣ್ಣು ತಿವಿಯಿತು. ಸುಳ್ಳು ಹೇಳಿ, ಅದೂ ವಿಧವೆಯಾದ ವರುಷದಲ್ಲೇ ಮುತ್ತೈದೆಯ ನಾಟಕ ಆಡುವ ಆ ಹೆಂಗಸಿನ ಬಗ್ಗೆ ಮನಸ್ಸು ವ್ಯಗ್ರವಾಯಿತು…ತಾಯಿಯಂತೆ ಮಕ್ಕಳು…ಕೋಪ, ನಿರಾಶೆಯಲ್ಲಿ ಹೊಯ್ದಾಡಿತು ತಪ್ತ ಮನಸ್ಸು.

ವಿಧವೆ, ತಿಂಗಳ ಮುತ್ತೈದೆಯಾಗುವ ಅವಶ್ಯಕತೆ ತಾನೆ ಆಕೆಗೆ ಏನಿದ್ದಿರಬಹುದು? ಎಂದು ಎಡೆಬಿಡದೆ ಚಿಂತಿಸತೊಡಗಿದೆ.

ಸಿಟ್ಟಿನ ಕಾವು ಸ್ವಲ್ಪ ಸ್ವಲ್ಪವೇ ಕರಗುತ್ತಿತ್ತು. ಮನೆಯ ಮುಂದೆ ಕಾರು ನಿಲ್ಲಿಸಿ ಹಾಗೇ ಕುಳಿತಿದ್ದೆ. ದೀರ್ಘವಾಗಿ ಯೋಚಿಸುತ್ತ ಹೋದಂತೆ ಅವಳ ಅನಿವಾರ್ಯತೆ ಧುತ್ತನೆ ಮುಖಾಮುಖಿಯಾಗಿ ದೈನ್ಯ ನೋಟದಿಂದ ಬೇಡಿದಂತೆ ಭಾಸ. ಹೀಗೆ ಮಾಡದೆ ಆಕೆಗೆ ಗತ್ಯಂತರವೇ ಇರಲಿಲ್ಲವೇನೋ ಎನಿಸಿತು. ಅವಳು ತುಂಬಿಸಬೇಕಾದ ಹೊಟ್ಟೆಗಳನ್ನು ಕುರಿತು ನೆನೆಯುತ್ತ ಹೋದೆ. ಓದಿದವರಿಗೇ ಕೆಲಸ ಸಿಗುವುದು ಕಷ್ಟವಾಗಿರುವ ಈಗಿನ ಪರಿಸ್ಥಿತಿಯಲ್ಲಿ ಈಕೆಗೆಲ್ಲಿ ಕೆಲಸ ಹುಟ್ಟಬೇಕು? ಅವಳ ಸಂಸಾರ ಮುಂದೆ ಹೇಗೆ ಹೆಜ್ಜೆ ಇಡಬೇಕು? ಸಂಸಾರ ಉದ್ಧಾರವಾಗಬೇಕೆನ್ನುವ ಬಯಕೆ ಇರುವುದು ಅಸಹಜವಲ್ಲ….ಆಕೆಯ ಮನಸ್ಸಿನಲ್ಲಾಗುತ್ತಿರಬಹುದಾದ ವಿಪ್ಲವ ನನ್ನೆದೆಯನ್ನು ಕದಡಿತು. ಬಡವರಾದರೇನು ಕನಸುಗಳಿರಬಾರದೇ?… ಕನಸು-ಬಯಕೆ ಎಲ್ಲರ ಹಕ್ಕು.. ಅವಳ ಮಕ್ಕಳ ಅಸಹಾಯಕತೆ, ಆಕೆಯ ಮೊಗದಲ್ಲಿ ನೆರೆದಿದ್ದ ನೈರಾಶ್ಯದ ಮಡು, ಹರಿದಾಡುತ್ತಿದ್ದ ಮ್ಲಾನತೆಯ ತೀವ್ರತೆ ತಟ್ಟಿ ಮನಸ್ಸು ಕದಲಿತು…ಅವಳೇನು ಖುಷಿಯಿಂದ  ಈ ರೀತಿ ವೇಷ ಕಟ್ಟುತ್ತಿಲ್ಲವೆಂದೆನಿಸಿ, ಅದರ ಅನಿವಾರ್ಯತೆ ಅರಿವಾಗಿ ಹೃದಯ ಒದ್ದೆಯಾಯಿತು.

ಅವಳ ಸಂಸಾರಕ್ಕೆ ಹೇಗಾದರೂ ಮಾಡಿ ನೆರವಾಗಲೇಬೇಕೆಂದು ತೀರ್ಮಾನಕ್ಕೆ ಬಂದಿದ್ದೆ. ಆದರೆ ನಿಜ ಸಂಗತಿ ತಿಳಿದ ಮೇಲಂತೂ ಮೊದಲಿನಂತೆ ಸಹಾಯ ಮಾಡುವುದು ಕಂಪನಿಯಿಂದಂತೂ ಸಾಧ್ಯವಿಲ್ಲವೆಂದು ನನಗೆ ಗೊತ್ತಿತ್ತು.

 ಮನಸ್ಸಿಗೇನೋ ಇದ್ದಕ್ಕಿದ್ದ ಹಾಗೆ ಹೊಳೆಯಿತು. ನನ್ನವಳು ಅಡಿಗೆ ಕೆಲಸಕ್ಕೆ ಒಬ್ಬಾಕೆಯನ್ನು ಇಟ್ಕೊಳ್ಳೋಣ ಎಂದಿದ್ದು. ಹೌದು, ಯಾಕಾಗಬಾರದು? ನಮಗೂ ಸಹಾಯ. ಅವಳಿಗೂ ಒಂದು ರೀತಿ ಸಂಪಾದನೆ. ಒಳ್ಳೆಯ ಸಂಬಳವೇ ಕೊಟ್ಟರಾಯಿತು. ಆಕೆಯ ಮಗ ಅಥವಾ ಮಗಳನ್ನು ಸಣ್ಣ ಪುಟ್ಟ ಕೆಲಸಕ್ಕೆ ಇಟ್ಟುಕೊಂಡು ಹಣ ಸಹಾಯ ಮಾಡಬೇಕು ಎಂದು ನಿರ್ಧರಿಸಿದವನೇ ನಾಳೆಯೇ ಆಕೆಗೇ ಹೇಳಿ ಕಳುಹಿಸಬೇಕು ಅಂದುಕೊಂಡೆ..

                                                        *******************

Related posts

ನಂಟು

YK Sandhya Sharma

Skit- Kamlu Maga Foreign Returned

YK Sandhya Sharma

ನಾನಿನ್ನು ದೇವಿಯಾಗಿರಲಾರೆ

YK Sandhya Sharma

Leave a Comment

This site uses Akismet to reduce spam. Learn how your comment data is processed.