Image default
Dancer Profile

ಬದ್ಧತೆಯ ನಾಟ್ಯಗುರು ಪೂರ್ಣಿಮಾ ಮೋಹನ್ ರಾಮ್

ಭರತನಾಟ್ಯ ವಿದುಷಿ ಪೂರ್ಣಿಮಾ ಮೋಹನ್ ರಾಮ್ ಅವರ ದೃಷ್ಟಿಯಲ್ಲಿ  ಜೀವನದಲ್ಲಿ ಶಿಸ್ತು ಕಲಿಸುವ, ಸೃಜನಾತ್ಮಕತೆಯನ್ನು ಪ್ರೇರೇಪಿಸುವ ಒಂದು ಉತ್ತಮ ಮಾಧ್ಯಮ ನೃತ್ಯ. ವೇದಿಕೆಯ ಮೇಲೆ ನರ್ತಿಸುವುದಕ್ಕಿಂತ ನಾಟ್ಯಶಾಸ್ತ್ರದ ಅಂತರಾಳವನ್ನು ಅರಿಯುವ, ನೃತ್ಯದ ಬಗ್ಗೆ ಜ್ಞಾನವನ್ನು ಸಂಪಾದಿಸುವ ಉದ್ದೇಶದಿಂದ ತಾನು ನೃತ್ಯ ಕಲಿತೆ ಎನ್ನುವ ಪೂರ್ಣಿಮಾ ಉತ್ತಮ ಭರತನಾಟ್ಯ ಗುರು. ಅಂದಿನಿಂದ ಇಂದಿನವರೆಗೂ ನೃತ್ಯಪ್ರದರ್ಶನದಲ್ಲಿ ಆಸಕ್ತಿ ವಹಿಸುವುದಕ್ಕಿಂತ, ಮುಂದಿನ ಪರಂಪರೆಗೆ ತಲಸ್ಪರ್ಶಿಯಾಗಿ ಕಲಿತ ವಿದ್ಯೆಯನ್ನು ಧಾರೆಯೆರೆಯುವುದರಲ್ಲಿ ಸಾರ್ಥಕತೆ ಕಂಡವರು.

ಮೂಲತಃ ಮೈಸೂರಿನವರಾದ ಸತ್ಯನಾರಾಯಣ ಮತ್ತು ಲಲಿತಮ್ಮ ದಂಪತಿಗಳ ಮಗಳಾದ ಪೂರ್ಣಿಮಾಗೆ ನೃತ್ಯ ಬಾಲ್ಯದ ಆಕರ್ಷಣೆ. ಐದುವರ್ಷದ ಬಾಲೆ, ಪಕ್ಕದಮನೆಯಲ್ಲಿ ತಾಳದ ಮತ್ತು ಗೆಜ್ಜೆದನಿಯನ್ನು ಕೇಳಿ ಅಲ್ಲಿಗೆ ಓಡಿಹೋಗಿ ಪುಟ್ಟಮಕ್ಕಳು ಅಡವುಗಳನ್ನು ಅಭ್ಯಾಸ ಮಾಡುವ ದೃಶ್ಯವನ್ನು ಕಣ್ಣಿಗೆ ತುಂಬಿಕೊಳ್ಳುತ್ತಿದ್ದರಂತೆ. ಆಗಲೇ ನೃತ್ಯದ ಮಜಲುಗಳು ಹುಡುಗಿಯ ಅಂತರಂಗವನ್ನು ತಟ್ಟಿತ್ತು. ಮನೆಯಲ್ಲಿ ಸಂಗೀತದ ಬಗ್ಗೆ ಒಲವಿದ್ದ ವಾತಾವರಣ. ಸುಸಂಸ್ಕೃತ ಮನೆತನ. ಮಗಳ ಮನಸ್ಸನ್ನರಿತ ಹೆತ್ತವರು, ಅವಳಿಚ್ಛೆಯಂತೆ ನೆರೆಮನೆಯ ನಾಟ್ಯವಿದುಷಿ ಗಾಯತ್ರಿ ಹನಸೋಗೆಯವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಪೂರ್ಣಿಮಾ ಆಸಕ್ತಿಯಿಂದ ಅವರಲ್ಲಿ ನೃತ್ಯಾಭ್ಯಾಸ ಮಾಡಿದರು. ಅನಂತರ ಗುರು ಚಂದ್ರಮತಿಯವರಲ್ಲಿ ನಾಟ್ಯಶಿಕ್ಷಣ ಮುಂದುವರಿಯಿತು. ಸುಮಾರು ಐದಾರು ವರ್ಷಗಳ ಕಲಿಕೆಯನಂತರ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ  ಜಯಶೀಲರಾದರು ಪೂರ್ಣಿಮಾ.

ಇಷ್ಟರಲ್ಲಾಗಲೇ ಶಾಲೆ ಮತ್ತು ಕಾಲೇಜಿನ ಸಭೆ-ಸಮಾರಂಭಗಳಲ್ಲಿ ತಪ್ಪದೆ ನೃತ್ಯ ಮಾಡುತ್ತಿದ್ದ ಪೂರ್ಣಿಮಾ, ಅಂತರ್ಶಾಲೆಯ, ಕಾಲೇಜಿನ ನೃತ್ಯಸ್ಪರ್ಧೆಗಳಲ್ಲದೆ, ರಾಜ್ಯಮಟ್ಟದ ಸ್ಪರ್ಧೆಗಳಲ್ಲೂ  ಬಹುಮಾನಗಳನ್ನು ಗಳಿಸುತ್ತಿದ್ದರು.

ನೃತ್ಯ ಕಲಿಕೆಯಲ್ಲಿ ಅತೀವ ಶ್ರದ್ಧೆ ಬೆಳೆದು, ಅಂದು ಮೈಸೂರಿನಲ್ಲಿ ಖ್ಯಾತ ನೃತ್ಯಕೋವಿದೆ ಎನಿಸಿಕೊಂಡಿದ್ದ ವಿದುಷಿ ನಂದಿನಿ ಈಶ್ವರ್ ಅವರಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ‘ವಿದ್ವತ್’ ಪರೀಕ್ಷೆಯಲ್ಲೂ ತೇರ್ಗಡೆಯಾದರು. ವಿದ್ಯುಕ್ತ ‘ರಂಗಪ್ರವೇಶ’ವೂ ನಡೆದು, ಕಲಾರಸಿಕರ ಗಮನ ಸೆಳೆದರು ಪೂರ್ಣಿಮಾ. ಹಲವು ನೃತ್ಯಪ್ರದರ್ಶನಗಳನ್ನು ನೀಡುತ್ತ, ತಾವು ಕಲಿಯುತ್ತಿದ್ದ  ನೃತ್ಯಶಾಲೆಯವತಿಯಿಂದ ನಡೆದ ಅನೇಕ ನೃತ್ಯರೂಪಕಗಳಲ್ಲಿ ಭಾಗವಹಿಸಿ ಅನುಭವ ಗಳಿಸತೊಡಗಿದರು. ಈ ಮಧ್ಯೆ ‘ಸಿರಿಕಲ್ಚರ್’ ವಿಷಯದಲ್ಲಿ ಬಿ.ಎಸ್ಸಿ. ಪದವೀಧರೆಯಾದರು.

ಸ್ನಾತಕೋತ್ತರ ಪದವಿ ಪಡೆಯುವ ಆಶಯ ಹೊಂದಿದ್ದ ಈ ಘಟ್ಟದಲ್ಲಿ ಪೂರ್ಣಿಮಾಗೆ ವಿವಾಹಬಂಧ ಕೂಡಿಬಂದು ಬೆಂಗಳೂರು ಸೇರಬೇಕಾಯಿತು. ಮದುವೆಯನಂತರ, ಕಲಿತ ನೃತ್ಯವಿದ್ಯೆಯ ಸೆಳೆತ ಹೆಚ್ಚಾಗಿ ಬೆಂಗಳೂರಿನಲ್ಲಿ ತಮ್ಮದೇ ಆದ ‘’ರಸಾನಂದ ‘’ ನೃತ್ಯಶಾಲೆಯನ್ನು ತೆರೆದು ನಾಟ್ಯಶಿಕ್ಷಣ ನೀಡುವ ಕಾಯಕಕ್ಕೆ ತೊಡಗಿದರು. ಇಂದು ಇವರು, ನೂರಾರು ನೃತ್ಯಾಕಾಂಕ್ಷಿಗಳಿಗೆ ಬದ್ಧತೆಯಿಂದ ಭರತನಾಟ್ಯ ಕಲಿಸುವ ಉತ್ತಮಗುರುವೆಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ. ಸ್ವತಃ ನೃತ್ಯಪ್ರದರ್ಶನ ನೀಡುವುದಕ್ಕಿಂತ ಆಸಕ್ತಿಯಿದ್ದವರಿಗೆ ಶಿಕ್ಷಣ ನೀಡುವುದರಲ್ಲಿ ಹೆಚ್ಚಿನ ಸಂತೋಷ ಕಾಣುವ ಮನೋಭಾವ ಅವರದು. ಚೆನ್ನಾಗಿ ನೃತ್ಯ ಕಲಿಸುವ ಗುಣ ಅವರಿಗೆ ಒಲಿದಿದೆ ಎಂದರೆ ಅತಿಶಯೋಕ್ತಿಯಲ್ಲ. ತಮ್ಮ ಶಿಷ್ಯರು ಇಂದು ನೂರಾರು ಜನ ಅನೇಕ ಪ್ರತಿಷ್ಟಿತ ವೇದಿಕೆಗಳ ಮೇಲೆ ನರ್ತಿಸುವುದನ್ನು ನೋಡಿದಾಗ ಉಂಟಾಗುವ ಸಾರ್ಥಕ್ಯ ಭಾವ ಬಣ್ಣಿಸಲಸದಳ ಎನ್ನುತ್ತಾರವರು.

ಇಂದಿವರ ಅನೇಕ ಶಿಷ್ಯರು ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಪಾಸಾಗಿ, ಅನೇಕರು ರಂಗಪ್ರವೇಶಗಳನ್ನೂ ಮಾಡಿದ್ದಾರೆ. ತಮ್ಮದೇ ಆದ ಸ್ವಂತಶಾಲೆಯನ್ನು ತೆರೆದು ನಾಟ್ಯಶಿಕ್ಷಕರಾಗಲು ತಯಾರಿ ನಡೆಸಿದ್ದಾರೆ. ಎರಡುವರ್ಷಕ್ಕೊಮ್ಮೆ ಪೂರ್ಣಿಮಾ ತಮ್ಮ ಶಾಲೆಯ ನೃತ್ಯೋತ್ಸವ ಕಾರ್ಯಕ್ರಮ ನಡೆಸುತ್ತಾರೆ. ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ, ಪ್ರತಿಷ್ಟಿತ ವೇದಿಕೆ-ಸಮಾರಂಭಗಳಲ್ಲಿ ನೃತ್ಯಪ್ರದರ್ಶನಗಳನ್ನು ನೀದಿದ್ದಾರೆ.  ಉತ್ತಮ ನೃತ್ಯ ಸಂಯೋಜಕರಾಗಿರುವ ಪೂರ್ಣಿಮಾ ತಮ್ಮದೇ ಪರಿಕಲ್ಪನೆಯ ಅನೇಕ ನೃತ್ಯರೂಪಕಗಳನ್ನು ನಿರ್ಮಿಸಿ, ಪ್ರದರ್ಶಿಸಿದ್ದಾರೆ. ಅವುಗಳೆಂದರೆ- ದಶಾವತಾರ, ಅಷ್ಟಲಕ್ಷ್ಮಿ, ಪಂಚಭೂತಂ, ಕಿಂದರಜೋಗಿ, ರಾಮಾಯಣ, ನವರಸಪಾಂಚಾಲಿ,ಪಂಚತಂತ್ರ ಮುಂತಾದವು. ಉತ್ತಮ ನಟುವನ್ನಾರ್ ಆದ ಇವರು ಇತರರ ನೃತ್ಯ ಪ್ರದರ್ಶನಗಳಲ್ಲೂ ನಟುವಾಂಗ ಕಾರ್ಯ ನಿರ್ವಹಿಸಿದ್ದಾರೆ.

ಹೆಚ್.ಎ.ಎಲ್.ನಲ್ಲಿ ಉನ್ನತ ಹುದ್ದೆಯಲ್ಲಿರುವ ಪತಿ ಎ. ಮೋಹನ್ ರಾಮ್, ಎಂಜಿನಿಯರ್ ಪದವಿ ಪಡೆದು, ಅಮೆರಿಕೆಯಲ್ಲಿ ಎಂ.ಎಸ್. ಮಾಡುತ್ತಿರುವ ಹಿರಿಮಗಳು ನೇಹಾ ಮತ್ತು ಸಿ.ಎ. ಓದುತ್ತಿರುವ ಕಿರಿಮಗಳು ನೇತ್ರಾ ಇವರ ಸುಖಸಂಸಾರದ ಸದಸ್ಯರು. ಇಬ್ಬರು ಹೆಣ್ಣುಮಕ್ಕಳೂ ಸಂಗೀತ ಮತ್ತು ನೃತ್ಯವನ್ನು ಅಭ್ಯಾಸ ಮಾಡಿದ್ದಾರೆ.

                                             

Related posts

ಒಡಿಸ್ಸಿ ನೃತ್ಯಸಾಧಕ ದೇವಶಿಶ್ ಪಟ್ನಾಯಕ್

YK Sandhya Sharma

ಕಥಕ್ ನೃತ್ಯ ಸಾಧಕ ಹರಿ

YK Sandhya Sharma

ಬಹುಮುಖ ಪ್ರತಿಭೆಯ ನೃತ್ಯಜ್ಞೆ ಡಾ. ಜಯಲಕ್ಷ್ಮೀ ಜಿತೇಂದ್ರ

YK Sandhya Sharma

Leave a Comment

This site uses Akismet to reduce spam. Learn how your comment data is processed.