Image default
Dance Reviews

ರೇಖಾ-ಮನು ಜೋಡಿಯ ಸುಮನೋಹರ ನೃತ್ಯ ರಾಗಾರತಿ

ಅನೇಕ ಬಿಕ್ಕಟ್ಟಿನ ಸಂದರ್ಭಗಳು ಹೊಸ ಅನ್ವೇಷಣೆಗೆ, ಮಾರ್ಗಕ್ಕೆ ನಾಂದಿ ಹಾಕಿಕೊಟ್ಟ ಪರ್ವಕಾಲವಿದು.   ನಾವಿಂದು, ಯಾರೂ ನಿರೀಕ್ಷಿಸಿರದ, ಊಹಿಸಿರದ ‘ಕೊರೋನಾ’ ಎಂಬ ಬರಸಿಡಿಲಿನ ಆಘಾತದ ಒಂದು ಸಮಸ್ಯಾತ್ಮಕ ಕಾಲಘಟ್ಟದಲ್ಲಿದ್ದೇವೆ. ಎಷ್ಟುದಿನವೆಂದು ಕ್ರಿಯಾತ್ಮಕ ಚೇತನಗಳು ಕೈಕಟ್ಟಿ, ಕೈಚೆಲ್ಲಿ ಕುಳಿತಿರಲು ಸಾಧ್ಯ??. ಇಂಥ ನಿರಾಶಾದಾಯಕ, ಯಾಂತ್ರಿಕ ದಿನಗಳಲ್ಲಿ ನೃತ್ಯ ಕಲಾವಿದರು ಪ್ರಸ್ತುತ ಅಂತರ್ಜಾಲದ ಮಾಧ್ಯಮವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ. ಕಲಾವಿದರು ಮತ್ತು ಕಲಾರಸಿಕರಿಬ್ಬರಿಗೂ ಇದೀಗ ಕೊಂಚ ಸಮಾಧಾನ-ತೃಪ್ತಿ. ಪ್ರತಿದಿನ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂಗಳಲ್ಲಿ ಅನೇಕ ನೃತ್ಯ ಪ್ರದರ್ಶನಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದೆ.    

ಇತ್ತೀಚಿಗೆ ‘ಗುರು ಪೂರ್ಣಿಮೆ’ಯ ಶುಭ ಸಂದರ್ಭದಲ್ಲಿ ನೃತ್ಯ ಕಲಾವಿದೆ-ಗುರು ವಿ.ರೇಖಾ ಜಗದೀಶ್ ಮತ್ತು ಅವರ ಮಗ ಮನು ಅಂತರ್ಜಾಲ ಮಾಧ್ಯಮದಲ್ಲಿ ಅರ್ಪಿಸಿದ ‘ನೃತ್ಯವಲ್ಲರಿ’ ಅನುಪಮವಾಗಿತ್ತು. ಉತ್ಸಾಹಪೂರ್ಣ ನೃತ್ಯ ಕಲಾವಿದೆ-ಸಂಘಟಕಿ ಕಲಾವತಿ ತಮ್ಮ ‘ನಾಟ್ಯಕಲಾ ಕಲ್ಚುರಲ್ ಸೆಂಟರ್’ ಸಂಸ್ಥೆಯ ವತಿಯಿಂದ ನೂರಾರು ಚಿಗುರು ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸಿಕೊಡುತ್ತಿರುವ ಕಲಾ ಪ್ರೋತ್ಸಾಹಕಿ. ವೇದಿಕೆಯ ಕಾರ್ಯಕ್ರಮಗಳ ಜೊತೆಗೆ ಈಗ ಸಂದರ್ಭಕ್ಕೆ ತಕ್ಕಂತೆ ‘ಆನ್ಲೈನ್’ ನೃತ್ಯ ಪ್ರದರ್ಶನಗಳ ಪ್ರಸಾರಕ್ಕೆ ಅನುವು ಮಾಡಿಕೊಡುತ್ತಿರುವ ಕಲಾಜೀವಿ.

ಸುಮನೋಹರವಾಗಿ ನೃತ್ಯಪ್ರಸ್ತುತಿ ನಡೆಸಿಕೊಟ್ಟ ತಾಯಿ ರೇಖಾ ಜಗದೀಶ್ ಮತ್ತು ಮಿಂಚಿನ ಬಾಲಪ್ರತಿಭೆ ಮನು ಇಬ್ಬರದೂ ಸಮಾನ ಪ್ರತಿಭೆ-ಬದ್ಧತೆಗಳ ವ್ಯಕ್ತ್ವಿತಗಳು. ನಿರಂತರ ಅಭ್ಯಾಸ ಇವರ ಮಂತ್ರ. ಹಿರಿಯ ನೃತ್ಯ ಗುರು ವಿದುಷಿ ರಾಧಾ ಶ್ರೀಧರ್ ಅವರಿಂದ ವಿದ್ಯೆ ಕಲಿತ ರೇಖಾ ನೃತ್ಯ ಕಲಾವಿದೆ ಮತ್ತು ಗುರುವಾಗಿ ಹೆಸರು ಮಾಡಿದವರು. `ಶ್ರೀ ಲಲಿತಾ ಕಲಾನಿಕೇತನ‘ ದ ಸಂಸ್ಥಾಪಕ ನಿರ್ದೇಶಕಿಯಾಗಿ ನೃತ್ಯಶಾಲೆಯನ್ನು ನಡೆಸುತ್ತ, ಕಳೆದ ಎರಡು ದಶಕಗಳಿಂದ ನೂರಾರು ನೃತ್ಯ ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ರೂಪಿಸಿದ ಹಿರಿಮೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಸಮಾಜಸೇವಾ ಚಟುವಟಿಕೆಗಳು ಮತ್ತು ಸಂಘಟನಾ ಚಾತುರ್ಯ ಗಮನಾರ್ಹವಾದ ಧನಾತ್ಮಕ ಅಂಶ.

          ಅವರಂತೆಯೇ ಅವರ ಪುತ್ರ ಮನು ಉತ್ತಮ ಕಲಾವಿದ. ವಯಸ್ಸು ಚಿಕ್ಕದಾದರೂ ಅವನ ಸಾಧನೆ-ಸಾಮರ್ಥ್ಯ ಹಿರಿದಾದುದು. ವಿಶ್ವದಾದ್ಯಂತ ಅಸಂಖ್ಯಾತ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಪಡೆದಿರುವುದಲ್ಲದೆ, ಎಲ್ಲ ನೃತ್ಯಸ್ಪರ್ಧೆಗಳಲ್ಲೂ ಪ್ರಥಮಸ್ಥಾನ ಗಳಿಸಿದ ಅಗ್ಗಳಿಕೆ. ಭರತನಾಟ್ಯ ಮತ್ತು ಕಥಕ್ ಎರಡೂ ನೃತ್ಯಶೈಲಿಗಳಲ್ಲೂ ‘ರಂಗಪ್ರವೇಶ’ ನೆರವೇರಿಸಿಕೊಂಡಿದ್ದು, ನೂರಾರು ಹೊಸಪ್ರಯೋಗಗಳಲ್ಲಿ ಭಾಗಿಯಾಗಿ ಬಹುಬೇಗ ಜನಪ್ರಿಯತೆಯನ್ನೂ ಗಳಿಸಿದ ಬೆರಗು ಮೂಡಿಸುವ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ.

ಅಂದು ಅವರ ನೃತ್ಯ ಕಾರ್ಯಕ್ರಮ- ‘ಪುಷ್ಪಾಂಜಲಿ’ ಯಿಂದ ಶುಭಾರಂಭ. ಆರ್. ಮುರಳೀಧರನ್ ಸರಸ್ವತಿ ರಾಗ-ಆದಿತಾಳದಲ್ಲಿ ರಚಿಸಿದ ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ ಸಲ್ಲಿಸುವ ಕೃತಜ್ಞತಾ ನಮನಾರ್ಪಣೆ. ಕೃತಿಯ ಮೆರುಗನ್ನು ಎತ್ತಿ ಹಿಡಿದ ಕಲಾವಿದರು ಅಂಗಶುದ್ಧಿಯ ಹರಿತವಾದ ನೃತ್ತಗಳಿಂದ ಆರಂಭಿಸಿ, ಮನಮೋಹಕ ಭಂಗಿಗಳಲ್ಲಿ ಕಲಾಶಿಲ್ಪದಂತೆ ವಿಜ್ರುಂಭಿಸಿದರು. ಅವರೀರ್ವರ ನಡುವಣ ಸಾಮರಸ್ಯ ನೃತ್ಯಕ್ಕೆ ಕಳೆಗೊಟ್ಟಿತು. ಆತ್ಮವಿಶ್ವಾಸದ ನಗುವನ್ನು ಪರಸ್ಪರ ವಿನಿಮಯಗೊಳಿಸಿಕೊಳ್ಳುತ್ತ ಲೀಲಾಜಾಲವಾಗಿ ಆಂಗಿಕಾಭಿನಯದ ಸೊಗಸಾದ ನೋಟವನ್ನು ಕಟ್ಟಿಕೊಟ್ಟರು. ಅನಂತರ ಊತುಕಾಡು ಸುಬ್ಬಯ್ಯರ್ ವಿರಚಿತ ನಾಟೈ ರಾಗದ  ‘ಪರಮಾನಂದ ಗಣಪತಿ’ಯನ್ನು ತಾಳಬದ್ಧ ಲಯಾತ್ಮಕ ಹೆಜ್ಜೆಗಳಿಂದ ಆನಂದಾಭಿನಯದಿಂದ ಸಾಕ್ಷಾತ್ಕಾರಗೊಳಿಸಿದರು. ಲವಲವಿಕೆಯೊಡನೆ ಮಿಳಿತವಾದ ಅವರ ಸಾಮರಸ್ಯದ ನೃತ್ಯದಲ್ಲಿ ತುಂಬು ಉತ್ಸಾಹ ಗಮನಾರ್ಹವಾಗಿತ್ತು.

ಮುಂದೆ- ತಂಜಾವೂರು ಶಂಕರಯ್ಯರ್ ರೇವತಿ ರಾಗದಲ್ಲಿ ರಚಿಸಿದ ‘ನಟೇಶ ಕೌತ್ವಂ’ -ಅಭಿನಯಪ್ರಧಾನವಾಗಿ, ಮುದ ನೀಡುವ ನೃತ್ತಗಳಿಂದೊಡಗೂಡಿ ಬಹು ಅಚ್ಚುಕಟ್ಟಾಗಿ ಅಭಿವ್ಯಕ್ತವಾಯಿತು. ಮನುವಿನ ದ್ರವೀಕೃತ ಚಲನೆಗಳು, ರೇಖಾ ಅವರ ಪಕ್ವಾಭಿನಯದ ಸೊಗಡು ಸುವ್ಯಕ್ತಗೊಂಡವು. ಅರ್ಧನಾರೀಶ್ವರನ ರೂಪ, ಗುಣ-ವಿಶೇಷತೆಗಳು, ಹರ ಸಾಕ್ಷಾತ್ಕಾರದಲ್ಲಿ, ಭಗೀರಥ ತಪಸ್ಸು, ಗಂಗಾವತರಣದ ಸುಂದರ ಸಂಚಾರಿ ಪರಿಣಾಮಕಾರಿಯಾಗಿ ಮೂಡಿಬಂತು. ‘ಮಹಾದೇವ ಶಿವ ಶಂಭೋ’ಎಂಬ ಭಕ್ತಿ ಆರಾಧನೆಯ ಸ್ತುತಿಯಲ್ಲಿ ತಾದಾತ್ಮ್ಯ ಭಾವ ಸಂಗಮಿಸಿತ್ತು. ಇಬ್ಬರೂ ಕಲಾವಿದರೂ ಭಾವಸಮ್ಮಿಲಿತ ಅಭಿನಯದಲ್ಲಿ ರಸಿಕರ ಮನವನ್ನು ಸ್ಪರ್ಶಿಸಿದರು. ಕೃತಿಯ ಪ್ರತಿಯೊಂದು ಸಾಲಿಗೂ ಅರ್ಥಪೂರ್ಣ ಭಂಗಿ, ಆಂಗಿಕಾಭಿನಯ, ಬಿಲ್ಲಿನಂತೆ ಬಾಗುವ ಶರೀರದ ಸಡಿಲತೆಯನ್ನು ಬಿಂಬಿಸುತ್ತ ಹುರುಪಿನಿನಿಂದ ನರ್ತಿಸಿದರು. ಅಂದು- ತಾದಾತ್ಮ್ಯ ಭಾವದಿಂದ ಕಲಾವಿದರು ಸದಾಶಿವನಿಗೆ ಭಕ್ತ್ಯಾರ್ಪಣೆ ಮಾಡಿ ತಮ್ಮ ‘ನೃತ್ಯಪ್ರೀತಿ’ಯನ್ನು ಸಮರ್ಥವಾಗಿ-ಪ್ರಫುಲ್ಲವಾಗಿ ಮೆರೆದರು.  

Related posts

ಅದ್ಭುತ ರಸಾನುಭವದ ‘’ಏಕ’’ಮೇವಾದ್ವಿತೀಯ ನರ್ತನ

YK Sandhya Sharma

ರಸಾನುಭವ ನೀಡಿದ ಆಹ್ಲಾದಕರ ಮೃಣಾಲಿಯ ನರ್ತನ

YK Sandhya Sharma

ಅಚ್ಚುಕಟ್ಟಾಗಿ ಮೂಡಿಬಂದ ಸಿರಿಯ ನೃತ್ಯದೈಸಿರಿ

YK Sandhya Sharma

Leave a Comment

This site uses Akismet to reduce spam. Learn how your comment data is processed.