Image default
Dancer Profile

ಪ್ರಯೋಗಶೀಲ ಕಥಕ್ ನೃತ್ಯಗಾರ್ತಿ ವೀಣಾ ಭಟ್

ಕಳೆದೊಂದು ದಶಕದಿಂದ ‘’ ನೃತ್ಯದರ್ಪಣ್ ’’-ಕಥಕ್ ನೃತ್ಯಶಾಲೆಯನ್ನು ಗುರುವಾಗಿ ಯಶಸ್ವಿಯಾಗಿ ನಡೆಸುತ್ತಿರುವ ಕಥಕ್ ನೃತ್ಯಗಾರ್ತಿ ವೀಣಾಭಟ್ ಪ್ರಯೋಗಶೀಲೆ. ಕೇವಲ ನೃತ್ಯ ಕಲಾವಿದೆಯಾಗಿ ಹೆಸರು ಮಾಡುವ ಇರಾದೆ ಇರದ ವೀಣಾ, ಹೊಸ ಪರಿಕಲ್ಪನೆಗಳಲ್ಲಿ ‘ಕಥಕ್ ‘ ನೃತ್ಯಪ್ರಸ್ತುತಿಯನ್ನು ಅರಳಿಸುವ, ಬೆಳೆಸುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿಕೊಂಡವರು. ಆನೇಕ ವರ್ಷಗಳು ಭರತನಾಟ್ಯವನ್ನು ಕಲಿತು, ನೃತ್ಯ ಕಾರ್ಯಕ್ರಮಗಳನ್ನು ನೀಡಿ, ಮದುವೆ-ಮಕ್ಕಳ ನಂತರ ‘ಕಥಕ್’ ಶೈಲಿಗೆ ಹೊರಳಿ, ಪ್ರಸ್ತುತ ಕಥಕ್ ಪಥದಲ್ಲಿ ಸಾಧನೆಯ ಕನಸು ಹೊತ್ತು ಕ್ರಮಿಸುತ್ತಿರುವವರು ವೀಣಾ.  

ಮೂಲತಃ ಮಲೆನಾಡಿನ ಮಂಚಿಕೇರಿಯವರಾದ ಚಂದ್ರಶೇಖರ ಹೆಗಡೆ ಮತ್ತು ರಾಜೇಶ್ವರಿ ಹೆಗಡೆಯವರ ಪುತ್ರಿ ವೀಣಾ ಬೆಳೆದದ್ದೆಲ್ಲ ಮುಂಬೈನಲ್ಲಿ. ತಂದೆ, ಮುಂಬೈ ಪೋರ್ಟ್ ಟ್ರಸ್ಟ್ ನಲ್ಲಿ ಆರ್ಥಿಕ ಸಲಹೆಗಾರರಾಗಿ ಸರಕಾರೀ ಹುದ್ದೆಯಲ್ಲಿದ್ದ ಕಾರಣ ವೀಣಳ ಬಾಲ್ಯ, ವಿದ್ಯಾಭ್ಯಾಸ ನಡೆದದ್ದು ಇಲ್ಲೇ. ಕಲೆಗೆ ತವರೂರಾದ ಮಂಚಿಕೇರಿಯಲ್ಲಿರುವ ಬಂಧು-ಬಾಂಧವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸಂಗೀತ-ನಾಟಕ, ವಾದನಗಳಲ್ಲಿ ಅಭಿರುಚಿಯುಳ್ಳವರು. ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ವೀಣಾರ ಮೇಲೆ ಸಹಜವಾಗಿ ಕಲಾಸಕ್ತಿ ಯ ವಾತಾವರಣ ಪ್ರಭಾವ ಬೀರಿತ್ತು. ಹೀಗಾಗಿ ನಾಲ್ಕರ ಎಳವೆಯಲ್ಲೇ ಮಗಳ ನೃತ್ಯಾಸಕ್ತಿಯನ್ನು  ಗಮನಿಸಿದ ತಾಯಿ ಗುರು ಕೃಷ್ಣ ಫಣಿಕ್ಕರ್ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಎಂಟು ವರ್ಷಗಳ ಕಾಲ ನಿಷ್ಠೆಯಿಂದ ನಾಟ್ಯಾಭ್ಯಾಸ. ಅನಂತರ ಖ್ಯಾತ ಗುರು ಡಾ. ದೀಪಕ್ ಮುಜುಂದಾರ್ ಅವರಲ್ಲಿ ಎರಡುವರ್ಷಗಳ ಕಾಲ ಕಲಿತು ಅನೇಕ ನೃತ್ಯಪ್ರದರ್ಶನಗಳನ್ನು ನೀಡತೊಡಗಿದರು. ಜೊತೆಗೆ ಸಮಕಾಲೀನ ನೃತ್ಯ ತರಬೇತಿಯನ್ನು ಬಾಲಿವುಡ್ ಖ್ಯಾತಿಯ ನೃತ್ಯಗುರು ಸರೋಜ ಖಾನ್ ಮತ್ತು ಕುಚಿಪುಡಿ ನೃತ್ಯಶೈಲಿ-ಜಾನಪದ ನೃತ್ಯದ ಬಗ್ಗೆಯೂ ಅನೇಕ ಕಾರ್ಯಾಗಾರಗಳಲ್ಲಿ ಅರಿವು ಪಡೆದುಕೊಂಡರು.

ವಿದ್ಯಾಭ್ಯಾಸದಲ್ಲೂ ವೀಣಾ ಚುರುಕು. ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಎಂ.ಎಸ್ಸಿ. (ಅನಾಲಿಟಿಕಲ್ ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ, ಜೊತೆಗೆ ಬಿ.ಎಡ್.- ಬ್ಯಾಚುರಲ್ ಎಜುಕೇಶನ್ ಮತ್ತು ಬಯೋ ಇನ್ಫರ್ಮ್ಯಾಟಿಕ್ಸ್ -ಡಾಟಾ ಬೇಸ್ ಮ್ಯಾನೆಜ್ಮೆಂಟ್ ಡಿಪ್ಲೊಮಾ ಪಡೆದರು. ಶಿಕ್ಷಕಿಯಾಗುವ ಆಸೆ ನೆರವೇರಿದ್ದು ಮದುವೆಯಾಗಿ ಬೆಂಗಳೂರು ಸೇರಿದನಂತರ. ನಗರದ ವಿವಿಧ ಶಾಲಾ- ಕಾಲೇಜುಗಳಲ್ಲಿ ಸುಮಾರು ಒಂಭತ್ತು ವರ್ಷಗಳ ಕಾಲ ಶಿಕ್ಷಕಿಯಾಗಿ ಉದ್ಯೋಗ. ಆನಂತರ ವೀಣಾರ ಆಸಕ್ತಿ ಕಥಕ್ ನೃತ್ಯ ಕಲಿಕೆಯ ಬಗ್ಗೆ ಹೊರಳಿದ್ದು ಆಕಸ್ಮಿಕ. ಸುಮಾರು ಮೂವತ್ನಾಲ್ಕು ವರ್ಷ ದಾಟಿತ್ತು. ಮಗಳು ಕಥಕ್ ನೃತ್ಯವನ್ನು ಕಲಿಯುವುದನ್ನು ಕಂಡು ತಾವೂ ‘ಕಥಕ್ ‘ ಕಲಿಯುವ ಉಮೇದು ಬಂದಿತ್ತು. ಗುರು ರುಮೆಲಾ ಮುಖ್ಯೋಪಾಧ್ಯಾಯ ಅವರ ಬಳಿ ಕಥಕ್ ಕಲಿಯಲಾರಂಭ. ಸತತ 12 ವರ್ಷಗಳು ಆಸಕ್ತಿ-ಬದ್ಧತೆಯ ಕಲಿಕೆ. ಜೊತೆಗೆ ಮುಂಬೈ ಕಾಯ್ಕಿಣಿ ಸಹೋದರಿಯರಿಂದಲೂ ಶಿಕ್ಷಣ ಪಡೆದರು. ಪ್ರಯಾಗ ಸಂಗೀತ ಸಮಿತಿಯಿಂದ ಕಥಕ್ ನಲ್ಲಿ ಬಿ.ಎ.ಡಿಗ್ರಿ ಲಭ್ಯ. ಮುಂದೆ, ಪ್ರಖ್ಯಾತ ಕಥಕ್ ಗುರುಗಳಾದ ಶೀಲಾ ಮೆಹ್ತಾ, ಡಾ. ಪೂರ್ಣಿಮಾ ಪಾಂಡೆ, ಜಯಂತ್ ಕಸ್ತೂರ್, ಪಂಡಿತ್ ಬಿರ್ಜು ಮಹಾರಾಜ್ ಮುಂತಾದವರ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಪ್ರಸ್ತುತ ಕಥಕ್ ಎಂ.ಎ. ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ. ತಮ್ಮದೇ ಆದ ‘ನೃತ್ಯ ದರ್ಪಣ್’ ಶಾಲೆ ಆರಂಭಿಸಿ ನೂರಾರು ಮಕ್ಕಳಿಗೆ ನಾಟ್ಯಶಿಕ್ಷಣ ನೀಡುತ್ತಿದ್ದಾರೆ. ನೃತ್ಯ ಸಂಯೋಜನೆ ಮಾಡುವುದರಲ್ಲಿ ವಿಶೇಷ ಪ್ರೀತಿ. ಅನೇಕ ಉತ್ಸವ-ಶಾಲಾ ವಾರ್ಷಿಕ ನೃತ್ಯ ಕಾರ್ಯಕ್ರಮಗಳಿಗೆ ನೃತ್ಯಸಂಯೋಜನೆ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.

ಮಂಚಿಕೇರಿ,ಉ.ಕ.ಜಿಲ್ಲೆ, ಕೊಯಮತ್ತೂರು, ಮಧುರೈ ಮುಂತಾದ ಕಡೆಗಳಲ್ಲಿ ಅನೇಕ ಅಂತರರಾಷ್ಟ್ರೀಯ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡ ಹೆಮ್ಮೆ. ‘ಟ್ಯಾಲೆಂಟ್ ಆಫ್ ದಿ ಇಯರ್’ ಪ್ರಶಸ್ತಿ ಗಳಿಸಿದ ವೀಣಾ, ಯುನೆಸ್ಕೋ ಸಿಐಡಿ ಸದಸ್ಯೆ ಕೂಡ. ಸಾಮಾಜಿಕ ಕಳಕಳಿಯುಳ್ಳ ಇವರು, ಕೆರೆಗಳ ಅಭಿವೃದ್ಧಿ, ಅಂಧರ ಕ್ಷೇಮಾಭಿವೃದ್ಧಿ, ಕೊಡಗು ಮತ್ತು ಕೇರಳದ ಸಂತ್ರಸ್ತರ ನೆರವು, ನೃತ್ಯ ಚಿಕಿತ್ಸಕ ಕಾರ್ಯಕ್ರಮಗಳನ್ನು ಆಯೋಜಿಸಿರುವರಲ್ಲದೆ, ಅನೇಕ ಉದಯೋನ್ಮುಖ ಕಲಾವಿದರ ಗ್ರಾಮೀಣ ಪ್ರತಿಭೆಗಳ ಪ್ರಕಾಶಕ್ಕೆ ವೇದಿಕೆಗಳನ್ನು ಕಲ್ಪಿಸಿದ್ದಾರೆ. ಮಂಚಿಕೇರಿಯಲ್ಲಿ ಒಂದು ‘ಆರ್ಟ್ ವಿಲೇಜ್’ ನಿರ್ಮಿಸುವ ಯೋಜನೆಯಿದೆ. ವ್ಯಾಲಿಶಾಲೆಯ ‘ಗೂಂಜ್’ ಮತ್ತು ಶ್ರೀ ರವಿಶಂಕರ್ ಆಶ್ರಮದ ‘’ಆಲಾಪ್’’ ಕಾರ್ಯಕ್ರಮಗಳಿಗೆ ಸಂಪನ್ಮೂಲವ್ಯಕ್ತಿಯಾಗಿರುವುದಲ್ಲದೆ, ಅನಿಕೇತನ, ಮಂತ್ರಾಲೋಚನೆ,ದ್ವಂದ್ವ, ಮುಂತಾದ ಕಾರ್ಯಕ್ರಮಗಳನ್ನು ಪರಿಕಲ್ಪಿಸಿರುವ ವೀಣಾ ಅವರ ಜನಪ್ರಿಯ ಕಾರ್ಯಕ್ರಮ ನೃತ್ಯನುಡಿ, ಮೌನದಿಂದ ನೃತ್ಯಕ್ಕೆ ಮತ್ತು ಸಾಸಿವೆ ತೆರೆದಿಟ್ಟ ಸತ್ಯ ಮುಂತಾದವು ಮೆಚ್ಚುಗೆ ಗಳಿಸಿವೆ.

ಪತಿ ರಾಮಚಂದ್ರ ಭಟ್ ಎಂಜಿನಿಯರ್, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

ಹಿರಿಮಗಳು ರುಚಿಕಾ ಭಟ್ ಫ್ಯಾಶನ್ ಡಿಸೈನಿಂಗ್ ನಲ್ಲಿ ಪದವೀಧರೆ, ಸದ್ಯ ಬರ್ಮಿಂಗ್ ಹ್ಯಾಂನಲ್ಲಿ ಮಾಸ್ಟರ್ಸ್ ಮಾಡುತ್ತಿದ್ದಾಳೆ. ಕಿರಿಮಗಳು ನಿಖಿತಾಭಟ್ ನೇತ್ರಶಾಸ್ತ್ರದಲ್ಲಿ ವಿಶೇಷ ಅಧ್ಯಯನ ಮಾಡುತ್ತಿದ್ದಾಳೆ.

Related posts

ಅನುಪಮ ಸಾಧಕಿ ಭರತನಾಟ್ಯ ಕಲಾವಿದೆ ಕೌಸಲ್ಯ ನಿವಾಸ್

YK Sandhya Sharma

ನಾಟ್ಯ ಕಲಾತಪಸ್ವಿ ಕಿರಣ್ ಸುಬ್ರಹ್ಮಣ್ಯಂ

YK Sandhya Sharma

ನಾಟ್ಯ-ನಟನಾ ನಿಪುಣ ಪ್ರಶಾಂತ್ ಗೋಪಾಲ್ ಶಾಸ್ತ್ರೀ

YK Sandhya Sharma

Leave a Comment

This site uses Akismet to reduce spam. Learn how your comment data is processed.