Image default
Dancer Profile

ಪ್ರತಿಭಾ ಸಂಪನ್ನೆ ನೃತ್ಯಕಲಾವಿದೆ ಡಾ. ಸಿಂಧೂ ಪುರೋಹಿತ್

ಸದಾ ಹಸನ್ಮುಖದ ಲವಲವಿಕೆಯ ಹುಡುಗಿ ಸಿಂಧೂ ಪುರೋಹಿತ್ ಪ್ರತಿಭಾವಂತೆ. ಆಯುರ್ವೇದ ವೈದ್ಯಕೀಯ ವಿದ್ಯಾಭ್ಯಾಸ ಮಾಡಿರುವ ವೈದ್ಯೆ, ಸೊಗಸಾಗಿ ನೃತ್ಯ ಮಾಡಬಲ್ಲಳು, ಅಷ್ಟೇ ಚೆನ್ನಾಗಿ ನಾಟಕಗಳಲ್ಲಿ ಅಭಿನಯಿಸಬಲ್ಲಳು, ಕರ್ನಾಟಕ ಸಂಗೀತ ಹಾಡಬಲ್ಲಳು ಮತ್ತು ಗಿಟಾರ್ ಕೂಡ ನುಡಿಸಲು ಕಲಿತಿರುವ ಬಹುಮುಖ ಪ್ರತಿಭೆ ಈಕೆ.

ಧಾರವಾಡದ ಕೃಷ್ಣ ಪುರೋಹಿತ್ ಮತ್ತು ರಾಜೇಶ್ವರಿ ದಂಪತಿಗಳ ಪುತ್ರಿ. ಅಕ್ಕ ಶ್ವೇತಾ ಭರತನಾಟ್ಯ ಕಲಿಯುತ್ತಿದ್ದುದೇ ಸಿಂಧೂಗೆ ನೃತ್ಯ ಕಲಿಯಲು ಸ್ಫೂರ್ತಿ. ಎಂಟುವರ್ಷಕ್ಕೆ ಕಾಲಿಗೆ ಗೆಜ್ಜೆಕಟ್ಟಿದಳು. ಮೊದಲಗುರು ಮೀರಾ ಈಶ್ವರ್ ಅವರಲ್ಲಿ ಪ್ರಾಥಮಿಕ ನಾಟ್ಯಾಭ್ಯಾಸ. ಮನವಿಟ್ಟು ಪರಿಶ್ರಮದಿಂದ ಕಲಿತಳು. ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳ ಗಳಿಕೆ. ಜೊತೆಜೊತೆಯಲ್ಲಿ ಕರ್ನಾಟಕ ಸಂಗೀತ ಕಲಿಕೆ. ಅದರಲ್ಲೂ ಜ್ಯೂನಿಯರ್ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳ ಗಳಿಕೆ.

ಮುಂದೆ ಹಿರಿಯಗುರು ವೆಂಕಟೇಶ ನಾಟ್ಯಮಂದಿರದ ವಿದುಷಿ. ರಾಧಾ ಶ್ರೀಧರ್ ಅವರಲ್ಲಿ ಹೆಚ್ಚಿನ ನೈಪುಣ್ಯ ಗಳಿಕೆ. ವಿದ್ವತ್ ಪರೀಕ್ಷೆಯಲ್ಲಿ ಹೆಮ್ಮೆಯ ಸ್ಥಾನ ಪಡೆದು ವಿದುಷಿಯಾಗಿ, ತಾನು ಕಲಿತ ನೃತ್ಯಶಾಲೆಯಲ್ಲಿ ಶಿಕ್ಷಕಿಯಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾಳೆ ಸಿಂಧೂ. ಒಂದೇ ಗುರುವಿನ ವಿಶೇಷ ಗರಡಿಯಲ್ಲಿ ತಯಾರಾದ ಅಕ್ಕ-ತಂಗಿಯರು ಜೊತೆಜೊತೆಯಾಗಿ ನೀಡಿದ ನೃತ್ಯ ಪ್ರದರ್ಶನಗಳು ಅನೇಕಾನೇಕ. ಹಾಗೆಯೇ ಸಿಂಧೂ ಏಕವ್ಯಕ್ತಿ ಪ್ರದರ್ಶನಗಳನ್ನೂ ನೀಡಿ ಕಲಾರಸಿಕರ ಗಮನ ಸೆಳೆದಿದ್ದಾಳೆ.

ಬಾಲ್ಯದಿಂದಲೂ ಚಟುವಟಿಕೆಯ ಚಿಲುಮೆಯಾದ ಸಿಂಧು, ಕಾರ್ಮಲ್ ಶಾಲೆಯಲ್ಲಿ ನಾಟಕಾಭಿನಯ, ನೃತ್ಯ ಪ್ರದರ್ಶನ, ಸಂಗೀತ, ಪ್ರಬಂಧ ರಚನೆ, ಚರ್ಚಾಸ್ಪರ್ಧೆ ಮುಂತಾದ ಅನೇಕ ಕ್ರೀಡಾಪ್ರಕಾರಗಳಲ್ಲಿ ಹೋಲ್ ಸೇಲ್ ಬಹುಮಾನಗಳನ್ನು ಪಡೆಯುತ್ತಿದ್ದ ಅದೃಷ್ಟವಂತೆ. ಅಂತರಶಾಲೆ, ಕಾಲೇಜುಗಳ ನೃತ್ಯಸ್ಪರ್ಧೆಯಲ್ಲೂ ಬಹುಮಾನ ಖಚಿತವಾಗಿರುತ್ತಿತ್ತು. ಓದಿನಲ್ಲೂ ಚುರುಕು.

ಮುಂದೆ ಜೈನ್ ಕಾಲೇಜಿನಲ್ಲಿ ಪಿಯೂಸಿ ಓದಿ, ಕಾಲಭೈರವೇಶ್ವರ  ಆಯುರ್ವೇದಿಕ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದುಕೊಂಡು ಪ್ರಸ್ತುತ ಆಯುರ್ವೇದಿಕ್ ಮೆಡಿಸನ್ ಮತ್ತು ಸರ್ಜರಿಯಲ್ಲಿ ಇಂಟರ್ಮಶಿಪ್ ಮಾಡುತ್ತಿದ್ದಾಳೆ. ಜನರಿಗೆ ವೈದ್ಯಕೀಯ ಸೇವೆ ನೀಡುತ್ತ ಸೇವಾ ಮನೋಭಾವ ಹೊಂದಿರುವ ಈ ಕಲಾವಿದೆ, ನೃತ್ಯ ಸಾಧನೆಯಲ್ಲೂ ಪ್ರಗತಿ ಸಾಧಿಸುವ ನಿಟ್ಟಿನಲ್ಲಿದ್ದಾಳೆ.

‘ಪುರೋಹಿತ್ ಸಹೋದರಿ’ಯರೆಂದೇ ಗುರುತಿಸಿಕೊಂಡಿರುವ ಕಲಾವಿದೆದ್ವಯರು ಒಟ್ಟೊಟ್ಟಿಗೆ ಅನೇಕ ಪ್ರದರ್ಶನಗಳನ್ನು ನೀಡಿದ್ದರೂ ಸಿಂಧೂ ಏಕವ್ಯಕ್ತಿ ಪ್ರದರ್ಶನದಲ್ಲೂ ಹಿರಿಮೆ ಸಾಧಿಸಿದ್ದಾಳೆ. ನೃತ್ತಾಭಿನಯದಲ್ಲಿ ಗಮನ ಸೆಳೆಯುವ ಪ್ರತಿಭಾನ್ವಿತೆ ನಾಡಿನ ಎಲ್ಲ ಪ್ರಮುಖ ದೇವಾಲಯಗಳಲ್ಲಿ ನರ್ತಿಸಿದ್ದಾಳೆ.  ರಾಜ್ಯ ಸರ್ಕಾರದ ಸ್ಕಾಲರ್ಷಿಪ್ ಪಡೆದ ವಿಶೇಷ ಅವಳದು. ದೂರದರ್ಶನದ ‘ಬಿ’ಗ್ರೇಡ್ ಕಲಾವಿದೆಯಾಗಿರುವ ಇವಳು ನರ್ತಿಸಿರುವ  ‘ಕೋಳೂರು ಕೊಡಗೂಸು’ ನೃತ್ಯರೂಪಕ ಚಂದನದಲ್ಲಿ ಪ್ರಸಾರವಾಗಿದೆ. ಅಲ್ಲದೆ ಸಿಂಧೂ, ವೆಂಕಟೇಶ ನಾಟ್ಯ ಮಂದಿರದ ಎಲ್ಲ ನೃತ್ಯರೂಪಕಗಳಲ್ಲಿ ಪ್ರಧಾನ ಪಾತ್ರದಲ್ಲಿ ಭಾಗವಹಿಸಿದ್ದಾಳೆ. ಅವುಗಳಲ್ಲಿ ಮುಖ್ಯವಾದುವು- ಗೋದಾದೇವಿ, ಶ್ರೀನಿವಾಸ ಕಲ್ಯಾಣ, ಹನುಮದ್ವಿಲಾಸ, ಅಮೃತ ಮಥನ, ದೀಪಲಕ್ಷ್ಮಿ, ಗೀತ ಗೋವಿಂದ ಮುಂತಾದವು.

ದೇಶಾದ್ಯಂತ ನೀಡಿದ ಅನೇಕ ನೃತ್ಯ ಪ್ರದರ್ಶನಗಳಲ್ಲಿ ಪ್ರಮುಖವಾದುವು- ಕರ್ನಾಟಕ ಕಲ್ಚುರಲ್ ಅಸೋಸಿಯೇಶನ್ ಮುಂಬೈ, ಕನ್ನಡ ಸಾಹಿತ್ಯ ಸಮ್ಮೇಳನ- ಬೆಂಗಳೂರು, ಗುಡಿಯ ಸಂಭ್ರಮ, ನಾದ ಈರಾಜನ-ತಿರುಪತಿ, ಕರೂರು ನಾಟ್ಯಾಂಜಲಿ ಉತ್ಸವ, ಬೇಲೂರು ಉತ್ಸವ , ಕದಂಬೋತ್ಸವ, ರಸಸಂಜೆ, ಉಡುಪಿ ಸಪ್ತೋತ್ಸವ, ಉಜ್ಜಯಿನಿಯ ಕುಂಭಮೇಳ,  ನವರಾತ್ರಿ ಉತ್ಸವ, ಪಾಂಡಿಚೇರಿಯಲ್ಲಿ ಪುದುಚೆರಿ ನಾಟ್ಯಾಂಜಲಿ, ನೃತ್ಯೋದಯ-ಚೆನ್ನೈ, ನಿತ್ಯ ಅಖಂಡ ನೃತ್ಯ- ನವ ದೆಹಲಿ ಮುಂತಾದವು.

ಅರುಣೋದಯ ಕಲ್ಪವೃಕ್ಷ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಪಡೆದಿರುವ ಸಿಂಧೂ ಗಿಟಾರ್ ಕಲಿಯುತ್ತಿದ್ದು ಹಲವು  ಕಾರ್ಯಕ್ರಮಗಳನ್ನು, ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ್ದು ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾಳೆ. ದೃಶ್ಯ ಮತ್ತು ಜ್ಯೋತಿಮೇಘ ರಂಗತಂಡಗಳ ನಾಟಕಗಳಲ್ಲಿ ಅಭಿನಯಿಸಿದ್ದು, ನಟನೆ ಇನ್ನೊಂದು ಹವ್ಯಾಸವಾಗಿ ಮುಂದುವರೆದಿದೆ. ಪ್ರಸ್ತುತ ತಲಘಟ್ಟಪುರದಲ್ಲಿ ತಮ್ಮದೇ ಆದ ‘ಸ್ವರಾಟ್ ನಾಟ್ಯ ನಿನಾದ’ ನೃತ್ಯಸಂಸ್ಥೆಯಲ್ಲಿ ನೃತ್ಯಾಕಾಂಕ್ಷಿಗಳಿಗೆ ನೃತ್ಯ ಹೇಳಿಕೊಡುವ ಕಾಯಕದಲ್ಲಿ ಧನ್ಯತೆ ಕಂಡುಕೊಂಡಿದ್ದು, ನೃತ್ಯ ತಮ್ಮ ಬದುಕಿನ ಅವಿಭಾಜ್ಯ ಅಂಗವೆಂಬುದು ಇವಳ ಅಚಲ ನಂಬಿಕೆ.

Related posts

ಪರಿಪೂರ್ಣ ನೃತ್ಯಗುರು ರಾಧಾ ಶ್ರೀಧರ್

YK Sandhya Sharma

ತ್ರಿಶೈಲಿಯ ಮೋಹಕ ನರ್ತಕಿ ಮಾಯಾ ಧನಂಜಯ್

YK Sandhya Sharma

ಭರತನಾಟ್ಯ ಪ್ರವೀಣೆ ದೀಪಾ ಭಟ್

YK Sandhya Sharma

Leave a Comment

This site uses Akismet to reduce spam. Learn how your comment data is processed.